Saturday, 14th December 2024

ಕರ್ನಾಟಕವೆಂಬ ಜನಪ್ರತಿನಿಧಿಗಳ ಸ್ವರ್ಗ

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

ಅಲ್ಪತೃಪ್ತ ಮತದಾರರನ್ನು ಹೊಂದಿರುವ ಕರ್ನಾಟಕವು ಜನಪ್ರತಿನಿಽಗಳಿಗೆ ಸ್ವರ್ಗಸಮಾನವಾಗಿಬಿಟ್ಟಿದೆ. ನಮ್ಮ ಸಂಸದರು ತಂತಮ್ಮ ಕ್ಷೇತ್ರ/ರಾಜ್ಯಕ್ಕಿಂತಲೂ ತಮ್ಮ ಪಕ್ಷವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಭಾವಿಸುತ್ತಿರುವುದೇ ಅಭಿವೃದ್ಧಿಯಲ್ಲಿ ರಾಜ್ಯ ಹಿಂದುಳಿದಿರುವುದಕ್ಕೆ ಕಾರಣ ಎನ್ನಬಹುದು.

ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ಮುಗಿದು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದೇವೆ. ಗೆದ್ದವರು ಈ ಸಲವಾ ದರೂ ಸಂಸತ್ತಿನಲ್ಲಿ ನಮ್ಮ ಧ್ವನಿಯಾಗುತ್ತಾರೆ ಎನ್ನುವ ನಂಬಿಕೆಯಲ್ಲಿ ನಾವಿದ್ದೇವೆ. ಇಷ್ಟು ವರ್ಷಗಳ ಕಾಲ, ನಮ್ಮಿಂದ ಗೆದ್ದು ದೆಹಲಿಗೆ ಹೋದ ಸಂಸದರು ನಮ್ಮ ದನಿಯಾಗಿ ಕೆಲಸ ಮಾಡಿದ್ದಾರೆಯೇ ಅಥವಾ ಸಂಸದರಾಗಿ ತಮ್ಮ ಕ್ಷೇತ್ರದ ಅಥವಾ ಕರುನಾಡಿನ ಕುರಿತಾದ ಕರ್ತವ್ಯವನ್ನು
ಸಮರ್ಪಕವಾಗಿ ನಿಭಾಯಿಸಿದ್ದಾರೆಯೇ ಎಂದು ಕೇಳಿದರೆ, ‘ಪಕ್ಷಾತೀತರಾಗಿ ಯಾರೂ ರಾಜ್ಯದ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಲಿಲ್ಲ’ ಅಂತ ಬೇಸರದಿಂದಲೇ ಹೇಳಬೇಕಾಗುತ್ತದೆ.

ಕರ್ನಾಟಕದ ಮತದಾರ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಅಥವಾ ಬಿಜೆಪಿಗೆ ಸ್ವಾಭಾವಿಕವಾಗಿ ತನ್ನ ಆಯ್ಕೆಯನ್ನು ಸೀಮಿತಗೊಳಿಸಿ ಕೊಂಡಿರು ತ್ತಾನೆ (ಮೊದಲು ಜನತಾ ಪರಿವಾರವೂ ಕರ್ನಾಟಕದ ಮತದಾರನಿಗೆ ಒಂದು ಪ್ರಮುಖ ಆಯ್ಕೆ ಆಗಿರುತ್ತಿತ್ತು). ಈ ಎರಡೂ ಪಕ್ಷಗಳ ರಾಜ್ಯ ಘಟಕಗಳ ಈ ಸಲದ ಪ್ರಚಾರ ಮತ್ತು ಪ್ರಣಾಳಿಕೆ ಯನ್ನು ನೋಡಿದಾಗ, ಈ ಸಲವೂ ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಪರವಾದ ಯಾವ ವಿಷಯಗಳೂ ಕರ್ನಾಟಕ ದಲ್ಲಿ ಚುನಾವಣೆಯ ಚರ್ಚಾವಿಷಯ ಆಗದೆ ಇರುವುದು ಮತದಾರನಿಗೆ ಒಂದು ರೀತಿಯ ಸಖೇದಾಶ್ಚರ್ಯವನ್ನು ಉಂಟುಮಾಡಿದೆ ಅಂತ ಹೇಳಬಹುದು.

‘ಮೋದಿಯವರ ಸಾಧನೆಯನ್ನು ಗುರುತಿಸಿ ಮತ್ತೊಮ್ಮೆ ಅವರನ್ನು ಪ್ರಧಾನಮಂತ್ರಿ ಮಾಡಬೇಕಿದೆ. ಹಾಗಾಗಿ ಬಿಜೆಪಿಯ ಅಭ್ಯರ್ಥಿಗಳೆಲ್ಲರನ್ನು ಮೋದಿಜಿ ಅಂತ ತಿಳಿದು ಅವರಿಗೆ ಮತನೀಡಿ’ ಅಂತ ಬಿಜೆಪಿಯವರು ಹೇಳಿದರೆ, ರಾಜ್ಯ ಸರಕಾರದ ಗ್ಯಾರಂಟಿಗಳನ್ನು ನೋಡಿ ಲೋಕಸಭೆಯ ಅಭ್ಯರ್ಥಿಗೆ ಮತ ನೀಡಲು ಕಾಂಗ್ರೆಸ್ ಪಕ್ಷ ಒತ್ತಾಸೆ ಮಾಡಿತು. ಅವರವರ ಕ್ಷೇತ್ರಗಳ ಅಗತ್ಯಗಳು ಮತ್ತು ಒಟ್ಟಾರೆಯಾಗಿ ಕರ್ನಾಟಕ ರಾಜ್ಯದ ಆದ್ಯತಾ ವಲಯಗಳನ್ನು ಯಾರೂ ಸ್ಪರ್ಶಿಸಲೇ ಇಲ್ಲ.

‘ನೀವು ನಮಗೆ ಮತ ನೀಡಿದರೆ ರಾಜ್ಯದ ಈ ಎಲ್ಲಾ ಅತ್ಯಗತ್ಯ ಯೋಜನೆಗಳಿಗಾಗಿ ಕೆಲಸ ಮಾಡಿ ನಮ್ಮ ಅವಧಿಯಲ್ಲಿ ಪೂರೈಸುತ್ತೇವೆ’ ಎಂದು ಯಾವ
ಪಕ್ಷವೂ ಅಥವಾ ಯಾವ ಅಭ್ಯರ್ಥಿಯೂ ತಮ್ಮ ಪ್ರಚಾರಗಳಲ್ಲಿ ಭರವಸೆ ನೀಡಿ ಸಿಕ್ಕಿಹಾಕಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಎಲ್ಲಾ ಪಕ್ಷಗಳು ಪ್ರಚಾರ ಕಾಲದಲ್ಲಿ ತಮ್ಮ ರಾಷ್ಟ್ರೀಯ ಪ್ರಣಾಳಿಕೆಯನ್ನು ಬುದ್ಧಿವಂತಿಕೆಯಿಂದ ಉಲ್ಲೇಖಿಸಿದವೇ ವಿನಾ, ನಮ್ಮ ರಾಜ್ಯಕ್ಕೆ ಒಂದು ಅಐಐIಖ, ಇನ್ನೊಂದು ಐಐS, ಮತ್ತೊಂದು ಐಐI, ಹೊಸ ರೈಲುಮಾರ್ಗಗಳು, ರೈಲುಮಾರ್ಗಗಳ ಸಂಪೂರ್ಣ ವಿದ್ಯುದೀಕರಣ, ಇನ್ನೂ ಉತ್ತಮ ಮತ್ತು ಸುಸಜ್ಜಿತ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ, ನದಿನೀರಿನ ನ್ಯಾಯಯುತ ಹಂಚಿಕೆಗೆ ಸಮಗ್ರವಾದ ಕಾನೂನು, ಪಕ್ಕದ ರಾಜ್ಯಗಳ ಜತೆಗೆ ಗಡಿಯನ್ನು ನಿರ್ಣಯಿಸುವ ಮಾರ್ಗದರ್ಶಿ ಸೂತ್ರ ಮತ್ತು ಹೊಸ ವಿಮಾನ ನಿಲ್ದಾಣಗಳು ಮುಂತಾದ ಅಗತ್ಯಗಳ ಕುರಿತು ಕರ್ನಾಟಕದ ಅಭ್ಯರ್ಥಿಗಳು ಯಾರೂ ಮಾತನ್ನೇ ಆಡಲಿಲ್ಲ.

ನಮ್ಮ ರಾಜ್ಯದ ಲೋಕಸಭಾ ಅಭ್ಯರ್ಥಿಗಳಿಗೆ, ಕೇಂದ್ರ ಸರಕಾರದಿಂದ ಅವರವರ ಕ್ಷೇತ್ರಕ್ಕೆ ಮತ್ತು ರಾಜ್ಯಕ್ಕೆ ಜರೂರಾಗಿ ಆಗಬೇಕಾದ ಕೆಲಸಗಳು ಯಾವುವು? ಅನ್ವಯವಾಗುವ ಯೋಜನೆಗಳು ಎಷ್ಟು? ಎನ್ನುವ ಕಲ್ಪನೆಯೇ ಇಲ್ಲವೆಂದರೂ ತಪ್ಪಾಗಲಿಕ್ಕಿಲ್ಲವೇನೋ! ಇಲ್ಲದಿದ್ದರೆ, ಅಭ್ಯರ್ಥಿಗಳು ತಮ್ಮ ಪ್ರಚಾರದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪ ಮಾಡಬೇಕಿತ್ತು ತಾನೆ? ೨೮ಕ್ಕೆ ೨೮ ಅಭ್ಯರ್ಥಿಗಳೂ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುತ್ತೇವೆ ಎನ್ನುವ ಹಾರಿಕೆಯ ತನ್ನಾಡಿದ್ದಾರೆಯೇ ಹೊರತು, ಸ್ಥಳೀಯವಾಗಿ ಪ್ರಸ್ತುತವಾಗುವ ಯಾವ ಸ್ಪಷ್ಟ ಮತ್ತು ನಿರ್ದಿಷ್ಟ ಭರವಸೆಯನ್ನೂ ನೀಡಲಿಲ್ಲ.

ಕೆಲಸಗಳ ಮೌಲ್ಯಮಾಪನವನ್ನೇ ಮಾಡದೆ ೬-೮ ಬಾರಿ ಒಬ್ಬನನ್ನೇ ಆರಿಸಿ ಕಳಿಸುವಷ್ಟು ಮುಗ್ಧರಾದ, ಅಲ್ಪತೃಪ್ತರಾದ ಮತ್ತು ಅಸಂಘಟಿತರಾದ ಮತದಾರರನ್ನು ಹೊಂದಿರುವ ಕರ್ನಾಟಕ ರಾಜ್ಯ ಜನಪ್ರತಿನಿಧಿಗಳಿಗೆ ಸ್ವರ್ಗಸಮಾನವಾಗಿದೆ. ಮತದಾರರಾಗಿ ತಮ್ಮ ಪ್ರತಿನಿಧಿಗಳ ಮೌಲ್ಯಾಂಕನ ಮಾಡದಿರುವುದು, ಅವರ ಉತ್ತರದಾಯಿತ್ವವನ್ನು ಪ್ರಶ್ನಿಸದಿರುವುದು ಮತ್ತು ಕೇಂದ್ರ ಸರಕಾರದ ಸಹಯೋಗದ ಕೆಲಸಗಳನ್ನು ಕಾಲಮಿತಿಯೊಳಗೆ ಸಾಧಿಸಲು ಒಟ್ಟಾಗಿ ಹೋರಾಟ ಮಾಡುವಂತೆ ಅವರನ್ನು ಅಗ್ರಹಿಸದಿರುವುದು ಇವುಗಳೇ ರಾಜ್ಯದ ಈಗಿನ ಪರಿಸ್ಥಿತಿಗೆ ಮೂಲಕಾರಣವಾಗಿವೆ ಎನ್ನಬಹುದೇನೋ.

ಐತಿಹಾಸಿಕವಾಗಿ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಪಟ್ಟಿಯನ್ನು ವಿಶ್ಲೇಷಣೆ ಮಾಡಿ ನೋಡಿದರೆ, ಇದಕ್ಕೆ ಮೂಲಕಾರಣ ದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಽಸಿರುವ ಸಂಸದರುಗಳ ಅದಕ್ಷತೆ ಎನ್ನುವುದು ನಮಗೆ ನಿಚ್ಚಳವಾಗಿ ಕಾಣುತ್ತದೆ (ಈ ಮಾತಿಗೆ ಅಪವಾದವೆಂಬಂತೆ ಉತ್ತಮವಾಗಿ ಕೆಲಸ ಮಾಡಿದ
ಕೆಲವರಾದರೂ ಸಂಸದರೂ ಇದ್ದಾರೆ ಎನ್ನುವುದು ಬೇರೆ ಮಾತು).

ಎರಡೂ ರಾಷ್ಟ್ರೀಯ ಪಕ್ಷಗಳ ಸಂಸದರು ತಂತಮ್ಮ ಕ್ಷೇತ್ರ ಅಥವಾ ರಾಜ್ಯಕ್ಕಿಂತಲೂ ತಮ್ಮ ಪಕ್ಷವನ್ನು ಹೆಚ್ಚು ಪ್ರತಿನಿಧಿಸುತ್ತಿರುವುದೇ ಕರ್ನಾಟಕ ರಾಜ್ಯವು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು. ಹೋರಾಟ ಮಾಡಿದರೆ, ಸಂಸತ್ತಿನಲ್ಲಿ ರಾಜ್ಯದ ವಿಚಾರಗಳನ್ನು ಮಂಡಿಸಿ ದನಿಯೆತ್ತಿ ಮಾತಾಡಿದರೆ, ತಮ್ಮ ಸರಕಾರ ಮತ್ತು ಪಕ್ಷದ ಹೈಕಮಾಂಡ್ ತಮ್ಮ ಮೇಲೆ ಮುನಿಸಿಕೊಳ್ಳಬಹುದು, ಅದರಿಂದಾಗಿ ತಮ್ಮ ವೈಯಕ್ತಿಕ ರಾಜಕೀಯ ಭವಿಷ್ಯ ಮೊಟಕಾಗಬಹುದು ಎಂಬ ಆತಂಕ ಇವರಿಗೆ ಇದ್ದ ಹಾಗೆ ಕಾಣುತ್ತದೆ.

ಪ್ರತಿನಿಧಿಗಳಿಗೆ ರಾಷ್ಟ್ರ ಸರ್ವಪ್ರಥಮ, ಆಮೇಲೆ ತಾವು ಪ್ರತಿನಿಧಿಸುತ್ತಿರುವ ರಾಜ್ಯ, ನಂತರ ಅವರ ಕ್ಷೇತ್ರ ಮತ್ತು ಮತದಾರ, ಆಮೇಲೆ ಪಕ್ಷ- ಇದು ಸರ್ವತ್ರ ಒಪ್ಪಬೇಕಾದ ಸೂತ್ರ; ಆದರೆ ಕರ್ನಾಟಕದಲ್ಲಿ ಮಾತ್ರ ವಾಸ್ತವ ಈ ಸೂತ್ರದ ವಿರುದ್ಧವೇ ಇದೆ. ಉತ್ತರದ ರಾಜ್ಯಗಳನ್ನು ಬಿಡಿ. ನಮ್ಮ ಅಕ್ಕಪಕ್ಕದ
ಆಂಧ್ರಪ್ರದೇಶ ಅಥವಾ ತಮಿಳುನಾಡಿನಲ್ಲಿರುವ ರೈಲುಮಾರ್ಗದ ಉದ್ದ ಮತ್ತು ಹಾಲಿ ಇರುವ ಮಾರ್ಗಗಳ ವಿದ್ಯುದೀಕರಣಕ್ಕೆ ಹೋಲಿಸಿದಾಗ, ಕರ್ನಾಟಕದ್ದು ಬಹಳ ಕಡಿಮೆ. ಒಟ್ಟು ರಾಷ್ಟ್ರೀಯ ಹೆದ್ದಾರಿಯ ಉದ್ದದ ಪ್ರಮಾಣವೂ ಅಷ್ಟೇ. ವಾಸ್ತವವಾಗಿ ದೇಶದ ಸರಾಸರಿಗೆ ಹೋಲಿಸಿದರೂ ಅಥವಾ ಇನ್ನಾವುದೇ ರಾಜ್ಯಗಳಿಗೆ ಹೋಲಿಸಿದರೂ ನಮ್ಮ ರಾಜ್ಯದ ಸ್ಥಿತಿ ಉತ್ತಮವಾಗಿಲ್ಲ.

ಒಟ್ಟಾರೆ ಅಭಿವೃದ್ಧಿಯ ವೇಗ ಮತ್ತು ಪ್ರಮಾಣದಲ್ಲಿ ಸದಾಕಾಲ ಕರ್ನಾಟಕದ ಕಡೆಗಣನೆ ಆಗುತ್ತಿರುವುದನ್ನು ಸರಕಾರಿ ಅಂಕಿ-ಅಂಶಗಳೇ ತೋರಿಸು ತ್ತಿರುವಾಗ, ಇದಕ್ಕೆಲ್ಲಾ ಕಾರಣವೇನೆಂದು ಸ್ವಾತಂತ್ರ್ಯ ಬಂದು ೭೦ ವರ್ಷಗಳ ಮೇಲಾದರೂ ನಾವು ಹುಡುಕಬೇಕಾಗಿದೆ ಮತ್ತು ಪ್ರಶ್ನಿಸುವ ರೂಢಿಮಾಡಿ ಕೊಳ್ಳಬೇಕಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿವೆ. ಅವು ಬಹಳ ಕಾಲ ಕೇಂದ್ರದ ಸಮ್ಮಿಶ್ರ ಸರಕಾರವನ್ನು ಉಳಿಸುವ ಅಥವಾ ಉರುಳಿಸುವ ಶಕ್ತಿಯನ್ನು ಹೊಂದಿದ್ದರಿಂದ, ತಮ್ಮ ರಾಜ್ಯಕ್ಕೆ ಹೆಚ್ಚಿನ ಸಂಪನ್ಮೂಲ ದಕ್ಕುವಂತಾಗಲು ಚೌಕಾಸಿ ಮಾಡಲು ಸಾಧ್ಯವಾಯಿತು ಎನ್ನುವುದನ್ನು ಸ್ವಲ್ಪಮಟ್ಟಿಗೆ ಒಪ್ಪಬಹುದಾದರೂ, ಅಲ್ಲಿಯ ಸಂಸದರ ಕಾರ್ಯವೈಖರಿಯನ್ನು ಸಹ ಮೆಚ್ಚಲೇಬೇಕು.

ಕರ್ನಾಟಕದ ಸಂಸದರ ಮುಂದೆ ಈ ಸಲ ಅನೇಕ ಸವಾಲುಗಳಿವೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ನೀರಾವರಿ, ವಿದ್ಯುತ್ ಸೇರಿದಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ದಕ್ಕಿಸಿಕೊಳ್ಳುವತ್ತ ಅವರು ಒಟ್ಟಾಗಿ ದುಡಿಯಬೇಕಾದ ಅನಿವಾರ್ಯತೆ ಇದೆ. ಮೇಕೆದಾಟು, ಕೃಷ್ಣಾ, ಕಳಸಾ ಬಂಡೂರಿ ಯೋಜನೆಯಂಥ ವಿಷಯಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನೆರೆ, ಬರ ಮೊದಲಾದ ಸಂಕಷ್ಟಗಳ ಸಮಯದಲ್ಲಿ ಮಾಡಲಾಗುವ ಕೇಂದ್ರದ ನೆರವು ಹಂಚಿಕೆಯಲ್ಲಿ ತಾರತಮ್ಯವಾಗದಂತೆ ರಾಜ್ಯದ ಹಿತವನ್ನು ಕಾಪಾಡಬೇಕಾಗಿದೆ. ಮುಂದಿನ ದಿನಗಳಲ್ಲಿ
ಕನ್ನಡಿಗರ ಒಗ್ಗಟ್ಟು ಮತ್ತು ಏಳಿಗೆಗೆ ಕಂಟಕಪ್ರಾಯವಾಗಬಹುದಾದ, ಉತ್ತರ ಮತ್ತು ದಕ್ಷಿಣ ಎಂದು ರಾಜ್ಯವನ್ನು ಒಡೆಯುವಂಥ ಕ್ರಮಗಳನ್ನು ಆರಂಭದಿಂದಲೇ ವಿರೋಧಿಸಬೇಕಾಗಿದೆ.

ಒಟ್ಟಾರೆಯಾಗಿ, ರಾಜ್ಯದ ಏಳಿಗೆಗಾಗಿ ತಮ್ಮದೇ ಪಕ್ಷದ ಸರಕಾರ ಅಥವಾ ಹೈಕಮಾಂಡುಗಳನ್ನು ಒಪ್ಪಿಸುವ, ಆಗದಿದ್ದರೆ ಎದುರುಹಾಕಿಕೊಳ್ಳುವ ಽರತೆಯನ್ನು ನಮ್ಮೆಲ್ಲಾ ಸಂಸದರು ಪ್ರದರ್ಶಿಸಲೇಬೇಕಾಗಿದೆ. ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂಬಂತೆ ಭಾರತದ ಸ್ವರೂಪವನ್ನು ಒಕ್ಕೂಟವಾಗಿಯೇ ಉಳಿಸಿಕೊಂಡು ಸಂಸದರು ರಾಜ್ಯಗಳಿಗೆ ಹೆಚ್ಚೆಚ್ಚು ಸ್ವಾಯತ್ತತೆ ಕೊಡಿಸುವ ಬಗ್ಗೆ ಸತತವಾಗಿ ಮತ್ತು ಸಮಷ್ಟಿಯಿಂದ ದುಡಿಯಬೇಕಾಗಿದೆ. ಸಂಸದರಾಗಿದ್ದವರು ಲೋಕಸಭೆಯ ಕಲಾಪಗಳಲ್ಲಿ ತಪ್ಪದೇ ಭಾಗವಹಿಸುವುದು, ಸ್ವಲ್ಪ ಅಂತ ಅನ್ನಿಸಿದರೂ ಸಂಸದರ ನಿಧಿ ಯನ್ನು ಸರಿಯಾಗಿ ಬಳಸಿಕೊಳ್ಳುವುದು, ಅಲ್ಲಿ ಪ್ರಶ್ನೆಗಳನ್ನು ಕೇಳುವ ಪ್ರಯತ್ನ ಮಾಡುವುದು ಇವೆಲ್ಲಾ ಒಂದೆಡೆಯಾದರೆ, ನಮ್ಮ ನಾಡಿನ ಸಮಸ್ಯೆಗಳ ವಿಷಯಕ್ಕೆ ಬಂದಾಗ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಪಕ್ಷಾತೀತವಾಗಿ ನಿಲ್ಲುವ ಪರಿಪಾಠವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ.

ರಾಜ್ಯದ ಹಿತ ಕಾಪಾಡುವುದಕ್ಕಾಗಿ ೨೮ ಸಂಸದರೂ ಒಟ್ಟಿಗಿದ್ದೇವೆ ಎನ್ನುವ ಸಂದೇಶವನ್ನು ಕೇಂದ್ರಕ್ಕೆ ಸತತವಾಗಿ ನೀಡಬೇಕಾಗಿರುವುದು ಅತ್ಯಗತ್ಯ. ಹಾಗಂತ ಇವೆಲ್ಲವೂ ಒಬ್ಬೊಬ್ಬ ಸಂಸದ ಮಾಡುವ ಕಾರ್ಯಗಳಲ್ಲ. ನಮ್ಮ ರಾಜ್ಯದ ಸಂಸದರೆಲ್ಲಾ ಪಕ್ಷಾತೀತವಾಗಿ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಈ ಸಲವಂತೂ ಕರ್ನಾಟಕದಲ್ಲಿ ಬಹಳಷ್ಟು ಹೊಸ ಮುಖಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಿದೆ; ಇವರ ಅನುಭವದ ಕೊರತೆಯಿಂದ ರಾಜ್ಯಕ್ಕೆ ಮಾರಕವಾಗದಂತೆ ಹಿರಿಯ ಸಂಸದರು ನೋಡಿಕೊಳ್ಳಬೇಕಾದ ಅಗತ್ಯವಿದೆ.

ತಾವು ಕೇಳಿದಷ್ಟು ಅನುದಾನವು ಕೇಂದ್ರದಿಂದ ಸಿಗಲಿಲ್ಲ ಎನ್ನುವ ಕಾರಣಕ್ಕೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ದೇಶವನ್ನೇ ಭಾಗಮಾಡುವ ಮಾತನ್ನಾಡುವ, ಪೂರ್ತಿ ಸರಕಾರವೇ ದೆಹಲಿಗೆ ಹೋಗಿ ಮುಷ್ಕರ ಹೂಡುವ ಮತ್ತು ನ್ಯಾಯಾಲಯದ ಮೊರೆಹೋಗುವ ಪರಿಪಾಠದಿಂದಾಗಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹದಗೆಡುವುದಲ್ಲದೆ ಬೇರಾವ ಸಾಧನೆಯೂ ಸಿದ್ಧಿಸುವುದಿಲ್ಲ. ಸಾಂವಿಧಾನಿಕ ಮಾನ್ಯತೆ ಇಲ್ಲದಿದ್ದರೂ ನಮ್ಮ ೨೮ ಸಂಸದರನ್ನೊಳಗೊಂಡ ಒಂದು ಸಮನ್ವಯ ಸಮಿತಿಯನ್ನು ಮುಖ್ಯಮಂತ್ರಿಗಳು ತಮ್ಮ ಸಂಚಾಲಕತ್ವದಲ್ಲಿ ರಚಿಸಲು ಯಾರ ಅಪ್ಪಣೆಯೂ ಬೇಕಾಗಿಲ್ಲ.

ಕಾರಣ, ರಾಜ್ಯದ ಆಗುಹೋಗುಗಳ ಮುಖ್ಯ ಜವಾಬ್ದಾರಿ ಇರುವುದು ಮುಖ್ಯಮಂತ್ರಿಗಳಿಗೇ ಅಲ್ಲವೇ? ಹೀಗೆ ಮಾಡುವುದರಿಂದ ನಿರ್ದಿಷ್ಟವಾದ ಮತ್ತು
ಕಾಲಮಿತಿಯ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಹಾಗೂ ಸಂಸದರು ಒಟ್ಟಾಗಿ ಕುಳಿತು ರೂಪಿಸಿ, ಕಾಲಕಾಲಕ್ಕೆ ಅವುಗಳ ಪ್ರಗತಿ ಪರಿಶೀಲನೆಯನ್ನು ಸ್ವತಃ ಮುಖ್ಯಮಂತ್ರಿಗಳೇ ಮಾಡಬಹುದಾಗಿದೆ. ಈ ತರಹದ ಸಂಘಟನಾತ್ಮಕ ಮತ್ತು ಸೃಜನಾತ್ಮಕ ಪ್ರಯತ್ನಗಳಾಗದೆ, ಬರೇ ‘ನೀನಾ- ನಾನಾ’ ಎನ್ನುವ ಹಠಮಾರಿತನವನ್ನು ನಮ್ಮ ರಾಜ್ಯ ಸರಕಾರ ಪ್ರದರ್ಶಿಸುತ್ತಿದ್ದರೆ ನಮ್ಮ ರಾಜ್ಯದ ಪರಿಸ್ಥಿತಿ ಹೀಗೆಯೇ ಮುಂದುವರಿಯುತ್ತದೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ಇನ್ನು ಇದರಲ್ಲಿ ಅಸಂಘಟಿತ ಮತದಾರರಾದ ನಮ್ಮ ತಪ್ಪೂ ಇದೆ ಎನ್ನಿ. ಪ್ರತಿ ಕ್ಷೇತ್ರಕ್ಕೂ ಪಕ್ಷಾತೀತವಾದ ಮತದಾರ ವೇದಿಕೆಗಳನ್ನು ಸಂಘಟಿಸುವ ಮೂಲಕ, ನಮ್ಮ ಕ್ಷೇತ್ರಕ್ಕೆ ಯಾವೆಲ್ಲಾ ಕೆಲಸಗಳ ಅಗತ್ಯವಿದೆ ಮತ್ತು ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ಕೆಲಸಗಳಾವುವು ಎಂದು ಪಟ್ಟಿಮಾಡಿ, ಎಲ್ಲಾ ಅಭ್ಯರ್ಥಿಗಳಿಗೆ ಮತದಾನಕ್ಕೆ ಮುಂಚೆಯೇ ನೀಡುವ ಹಾಗೂ ಕ್ಷೇತ್ರದ ಬೇಡಿಕೆಗಳಿಗೆ ಅವರನ್ನು ಬದ್ಧರನ್ನಾಗಿಸುವ ಪರಿಸ್ಥಿತಿಯನ್ನು ನಾವು ನಿರ್ಮಾಣ
ಮಾಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಗೆದ್ದು ಬಂದ ಹೊಸ ಸಂಸದರಲ್ಲಿ, ‘ನೀವು ಕ್ಷೇತ್ರದ ಯಾವ ಯಾವ ಕೆಲಸ ಮಾಡಲು ಯೋಚಿಸುತ್ತಿದ್ದೀರಿ?’ ಎಂದು ಈಗಲೂ ಪ್ರಶ್ನೆ ಮಾಡಬಹುದಾಗಿದೆ ಹಾಗೂ ತಪ್ಪದೇ ಎಲ್ಲ ಸಂಸದರೂ ತಮ್ಮ ಕಾರ್ಯಸೂಚಿಗಳ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಮಾಧ್ಯಮಗಳ ಸಹಾಯದಿಂದ ಆಗ್ರಹಿಸಿ ಒಂದು ರೀತಿಯ ಆಂದೋಲನವನ್ನು ರೂಪಿಸಬಹುದಾಗಿದೆ.

ನಮಗೆ ಏನು ಬೇಕು ಎನ್ನುವುದನ್ನು ಚುನಾವಣಾ ಪೂರ್ವದಲ್ಲಿ ಅಭ್ಯರ್ಥಿಗಳಿಗೆ ತಿಳಿಸಲಾಗದಿದ್ದಾಗ, ನಮ್ಮ ಪ್ರತಿನಿಧಿಗಳು ಕೆಲಸ ಮಾಡಿದ್ದಾರೆ ಅಥವಾ ಇಲ್ಲ ಎನ್ನಲು ಮತದಾರರಾಗಿ ಮುಂದೆ ನಮಗೆ ಮಾನದಂಡವೇ ಇರುವುದಿಲ್ಲ. ಎಂದಿನಂತೆ ಅವರು ಮಾಡಿದಷ್ಟು ಕೆಲಸಕ್ಕೆ ಮತದಾರ ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದಷ್ಟೇ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)