Wednesday, 9th October 2024

ಕಾಸರಗೋಡು ಕನ್ನಡದ ಕಥೆ-ವ್ಯಥೆ

ಅಭಿಪ್ರಾಯ

ಶ್ರೀವಾಣಿ ಕಾಕುಂಜೆ

ಕಾಸರಗೋಡು ಕೇರಳ ರಾಜ್ಯದಲ್ಲಿರುವ ಕನ್ನಡನಾಡು. ಸಾಂಸ್ಕೃತಿಕವಾಗಿಯೂ ಭೌಗೋಳಿಕವಾಗಿಯೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ ಚೆಲುವ ಗಡಿನಾಡು. ಹಲವು ಧರ್ಮಗಳ, ಆಚಾರ-ವಿಚಾರಗಳ ನೆಲೆಬೀಡು. ಭಾಷಾವಾರು ಪ್ರಾಂತ್ಯ ರಚನೆ ಎಂಬ ವ್ಯಾಜ್ಯದಲ್ಲಿ ಅನ್ಯಾಯವಾಗಿ ಕನ್ನಡಾಂಬೆಯ ಮಡಿಲಿನಿಂದ ಹೊರಗೆಸೆಯಲ್ಪಟ್ಟ ಕೂಸು. ಹೀಗೆ ಕಾಸರಗೋಡು ಎಂಬ ನಾಡಿನ ನಿರ್ವಚನಗಳು ಹಲವು. ಆದರೆ ಸತ್ಯ ಯಾವತ್ತಿದ್ದರೂ ಒಂದೇ; `ಕಾಸರ ಗೋಡು ಕನ್ನಡನಾಡು’.

ಮಲಯಾಳವೇ ಆಡಳಿತಾತ್ಮಕ ಭಾಷೆಯಾಗಿರುವ ಕೇರಳದಲ್ಲಿ ಕಾಸರಗೋಡಿನ ಕನ್ನಡಿಗರು ಭಾಷಾ ಅಲ್ಪಸಂಖ್ಯಾತರು. ಆದರೂ ಇದೊಂದು ಬಹು ಭಾಷಾ, ಬಹು ಸಂಸ್ಕೃತಿಯ ನಾಡು. ಇಲ್ಲಿ ಕನ್ನಡ ಮಾತ್ರವಲ್ಲದೆ ತುಳು, ಮಲಯಾಳ, ಕೊಂಕಣ , ಮರಾಠಿ, ಬ್ಯಾರಿ, ಉರ್ದು ಮೊದಲಾದ ಹಲವು ಭಾಷೆಗಳಿದ್ದರೂ ಜನರು ತಮ್ಮ ದೈನಂದಿನ ವ್ಯವಹಾರಕ್ಕೆ ಕನ್ನಡವನ್ನೇ ಬಳಸುತ್ತಾ ಬಂದಿದ್ದಾರೆ. ಹಾಗಾಗಿಯೇ ಇದು ಸಪ್ತಭಾಷಾ ಸಂಗಮಭೂಮಿ ಎಂದೂ ಪ್ರಸಿದ್ಧವಾಗಿದೆ.

ವಿಶೇಷವೆಂದರೆ ಈ ಕನ್ನಡಿಗರಲ್ಲಿ ಹಲವರು ಮನೆಮಾತಾಗಿ ಮಲಯಾಳವನ್ನೇ ಬಳಸುತ್ತರಾದರೂ ಇವರೆ ಲ್ಲರೂ ಕನ್ನಡವನ್ನೇ ಕಲಿತು, ಕನ್ನಡವನ್ನೇ ಆರಿತು ಕೊಂಡವರಾಗಿದ್ದಾರೆ. ಹಾಗಾಗಿಯೇ ಕಾಸರಗೋಡು ಭಾಷಾ ವೈವಿಧ್ಯ ಮತ್ತು ಸಾಂಸ್ಕೃತಿಕ ವೈವಿಧ್ಯಗಳನ್ನು ಹೊಂದಿರುವ ಒಂದು ಸಮೃದ್ಧ ನಾಡಾಗಿದೆ. ವ್ಯಾಪಾರ ವಹಿವಾಟುಗಳಿಗೂ ಹತ್ತಿರದ ಮಂಗಳೂರನ್ನೇ ಆಶ್ರಯಿಸಿದ್ದ ಇಲ್ಲಿನ ಜನರು ಭೌಗೋಳಿಕವಾಗಿಯೂ ಸಾಂಸೃತಿಕವಾಗಿಯೂ ಕನ್ನಡ ಮಣ್ಣಿನ ಮಕ್ಕಳೆಂಬುದರಲ್ಲಿ ಎರಡು ಮಾತಿಲ್ಲ. ಆದಾಗ್ಯೂ ರಾಜಕೀಯ ಪ್ರೇರಿತ ವಾಗಿ ಕನ್ನಡಿಗರ ವಿರೋಧವನ್ನು ಲೆಕ್ಕಿಸದೇ ಕೇರಳ ಪ್ರಾಂತ್ಯಕ್ಕೆ ದೂಡಲ್ಪಟ್ಟ ಕಾಸರಗೋಡು ಈಗ ಅತ್ತ ಕೇರಳಕ್ಕೂ ಬೇಡದ ಇತ್ತ ಕರ್ನಾಟಕಕ್ಕೂ ಸಲ್ಲದ ಅನಾಥ ಕೂಸು.

ಸ್ವಾತಂತ್ರ‍್ಯಾ ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯಾಗಬೇಕೆಂಬ ಬೇಡಿಕೆ ಹೆಚ್ಚಾಗಿದ್ದ ಕಾಲದಲ್ಲಿ ಕೇಂದ್ರ ಸರಕಾರವು ರಾಜ್ಯ ಪುನರ್‌ವಿಂಗಡನಾ ಆಯೋಗವೊಂದನ್ನು ರಚಿಸಿತ್ತು. ಒರಿಸ್ಸಾ ರಾಜ್ಯಪಾಲರಾಗಿದ್ದ ಸೈಯದ್ -ಫಜಲ್ ಅಲಿಯವರು ಅಧ್ಯಕ್ಷರಾಗಿದ್ದ ಆ ಸಮಿತಿಯಲ್ಲಿ ಕೇರಳದವರೇ ಆದ ಸರ್ದಾರ್ ಕೇವಲಂ ಮಾಧವ ಪಣಕ್ಕರ್ ಒಬ್ಬ ಸದಸ್ಯರಾಗಿದ್ದರು. ಕಾಸರಗೋಡಿಗೆ ಬಂದು ಪರಿಶೀಲಿಸಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಈ ತಂಡ
ಚಂದ್ರಗಿರಿಯ ಉತ್ತರ ಭಾಗವನ್ನು ಎಲ್ಲರ ಇಚ್ಛೆಯಂತೆ ಅಂದಿನ ಮೈಸೂರು ರಾಜ್ಯಕ್ಕೂ ದಕ್ಷಿಣ ಭಾಗವನ್ನು ಕೇರಳಕ್ಕೂ ಸೇರಿಸುವುದೆಂಬ ಭರವಸೆಯನ್ನಿತ್ತು ಮರಳಿದರಾದರೂ -ಫಜಲಲಿಯವರ ಗೈರುಹಾಜರಿಯಲ್ಲಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಕೆ.ಎಂ.ಪಣಕ್ಕರರು ತನ್ನ ರಾಜ್ಯಕ್ಕೆ ಲಾಭವಾಗು ವಂತೆ ಮಾಡಿ ಕಾಸರಗೋಡು ತಾಲೂಕು ಕೇರಳ ರಾಜ್ಯಕ್ಕೆ ಸೇರ್ಪಡೆಯಾಗಬೇಕೆಂಬ ವರದಿಯನ್ನು ತಯಾರಿಸಿದರು.

ಇದು ಈ ಭಾಗದ ಕನ್ನಡಿಗರಿಗೆ ಬಹಳದೊಡ್ಡ ಆಘಾತವನ್ನೇ ತಂದೊಡ್ಡಿತು. ಈ ಬಗ್ಗೆ ಕರ್ನಾಟಕ ಏಕೀಕರಣ ಸಮಿತಿ ಎಂಬ ಸಂಘಟನೆಯೊಂದನ್ನು ಕಟ್ಟಿಕೊಂಡು ಹೋರಾಟಕ್ಕಿಳಿದ ಕನ್ನಡಿಗರು ಈ ಅನ್ಯಾಯವನ್ನು ಬಹಳಷ್ಟು ಕಟುವಾಗಿಯೇ ವಿರೋಧಿಸಿದರು. ಮಕ್ಕಳು, ಮುದುಕರೆನ್ನದೆ, ಜಾತಿ-ಮತ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕಾಸರಗೋಡನ್ನು ಕರ್ನಾಟಕದಲ್ಲಿಯೇ ಅಂದರೆ ಅಂದಿನ ಮೈಸೂರು ಸಂಸ್ಥಾನದಲ್ಲಿಯೇ ಉಳಿಸಲು ಪಣ ತೊಟ್ಟು ಹೋರಾಟಕ್ಕೆ ಧುಮುಕಿದರು.

ಕಾಸರಗೋಡು ಮಲ್ಲಕಾರ್ಜುನ ದೇವಸ್ಥಾನದ ಎದುರು ನಡೆದ ಪ್ರತಿಭಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಪೋಲೀಸರ ಗುಂಡೇಟಿಗೆ ಬಲಿಯಾದರು. `ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂಬ ಕವನದ ಮೂಲಕ ಕಯ್ಯಾರರೂ, ತಾಯೆಬಾರ ಮೊಗವ ತೋರ ಕನ್ನಡಿಗರ ಮಾತೆಯೇ ಎಂಬ ಕವನದ ಮೂಲಕ ಮಂಜೇಶ್ವರ ಗೋವಿಂದ ಪೈಗಳೂ ಜನರನ್ನು ಜಾಗೃತಗೊಳಿಸಿದರು. ಹತ್ತು ವರುಷಗಳಷ್ಟು ಕಾಲದ ಈ ನಿರಂತರ ಹೋರಾಟದ -ಫಲವಾಗಿ ಕೊನೆಗೂ ಕೇಂದ್ರ ಸರಕಾರವು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯವಾದಿಗಳಾಗಿದ್ದ ಮೆಹರ್‌ಚಂದ್ ಮಹಾಜನ್ ಎಂಬವರ ಏಕಸದಸ್ಯ ಆಯೋಗವನ್ನು ರಚಿಸಿತು.

ಬೆಳಗಾವಿಯ ಸಮಸ್ಯೆಯನ್ನೂ ಇದೇ ಸಮಿತಿಗೆ ಒಪ್ಪಿಸಲಾಯಿತು. ಮಹಾಜನ್ ಆಯೋಗ ಎಂದೇ ಪ್ರಸಿದ್ಧವಾಗಿರುವ ಈ ಆಯೋಗವು ಕಾರಗೋಡಿನ ಸಮರ್ಥ
ನಾಯಕರುಗಳಾಗಿದ್ದ ಕೆ. ಆರ್. ಕಾರಂತ, ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಮೊದಲಾದವರೆಲ್ಲರ ವಾದವನ್ನು ಪರಿಶೀಲಿಸಿ ಚಂದ್ರಗಿರಿ ನದಿಯ ಉತ್ತರಕ್ಕಿರುವ 72 ಗ್ರಾಮಗಳು ಕರ್ನಾಟಕ್ಕೇ ಸೇರಬೇಕೆಂಬ ತೀರ್ಪನ್ನು ಕೊಟ್ಟರು. ನಂತರ 1984 ಮೇ 24ರಂದು ಹೊಸದುರ್ಗ ಮತ್ತು ಕಾಸರಗೋಡನ್ನು ಸೇರಿಸಿ ಕಾಸರ ಗೋಡು ತಾಲೂಕನ್ನು ಅದೇ ಹೆಸರಿನ ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು. ಇಂದಿಗೂ ಉನ್ನತಮಟ್ಟದ ಸೌಲಭ್ಯಗಳಿಂದ ವಂಚಿತರಾಗಿರುವ ಕಾಸರ ಗೋಡಿನ ಜನರು ಹೆಚ್ಚಿನ ಚಿಕಿತ್ಸೆ, ಉದ್ಯೋಗ, ವಿದ್ಯಾಭ್ಯಾಸ ಇತ್ಯಾದಿ ಕಾರ್ಯಗಳಿಗೆ ಮಂಗಳೂರನ್ನೇ ಆಶ್ರಯಿಸಬೇಕಾಗಿ ಬಂದಿರುವುದು ಕಾಸರಗೋಡಿನ ಬಗೆಗೆ ಕೇರಳ ಸರಕಾರ ಹೊಂದಿರುವ ಅವಾಜ್ಞೆಗೆ ಹಿಡಿದ ಕನ್ನಡಿಯಾಗಿದೆ.

ಕೇರಳ ರಾಜ್ಯದಲ್ಲಿದ್ದರೂ ಕಾಸರಗೋಡಿನ ಹೆಚ್ಚಿನ ಮೂಲ ಸ್ಥಳನಾಮಗಳು ಕನ್ನಡ ಅಥವಾ ತುಳು ಭಾಷೆಯಲ್ಲಿಯೇ ಇವೆ. ಕಾಸರಕನ ಎಂಬ ಮರಗಳಿಂದ ಕೂಡಿದ ಗುಡ್ಡಪ್ರದೇಶವಾಗಿದ್ದರಿಂದ ಕಾಸರಗೋಡು ಎಂಬ ಹೆಸರು ಬಂತೆನ್ನುವ ಮಾತಿದೆ. ಕಾಡುಕೋಣಗಳ ಕಾಡು ಎಂಬ ಅರ್ಥ ಕೊಡುವ ಕಾಸರಕಾಡು ಎಂಬ ಶಬ್ದವೇ ಮುಂದೆ ಕಾಸರಗೋಡು ಎಂದಾಗಿದೆಯೆಂದೂ ಹೇಳುತ್ತಾರೆ. ನೀರ್ಚಾಲಿನ ಸಮೀಪದ ಎರಟೆಕಾಯರ್ ಎಂಬ ಸ್ಥಳದ ಬಗ್ಗೆ ಹೇಳುವುದಾದರೆ ಕಾಯರ್ ಎಂದರೆ ತುಳುವಿನಲ್ಲಿ ಕಾಸರಕನ, ಹಾಗಾಗಿ ಎರಟೆಕಾಯರ್ ಎಂದರೆ ಎರಡು ಕಾಸರಕನ ಮರಗಳಿರುವ ಜಾಗ. ಹಾಗೆಯೇ ಕಾರ‍್ಕಟ್ಟೆ, ಕಾಯರ್ ತೋಡಿ, ಕಾಯರ್‌ಪಳ್ಳ ಇತ್ಯಾದಿ. ಅಲ್ಲದೆ ಇಲ್ಲಿ ದೊರೆತ ಹಲವು ಪುರಾತನ ಶಾಸನಗಳು ಇಲ್ಲಿನ ತೌಳವ ಸಂಸೃತಿಯನ್ನು ಪ್ರತಿನಿಧಿಸುತ್ತವೆ.

ಅನಂತಪುರ ಕ್ಷೇತ್ರದಲ್ಲಿ ದೊರೆತ ೧೫ನೇ ಶತಮಾನದ ತುಳು ಶಾಸನ, ತಳಂಗೆರೆಯಲ್ಲಿ ಸಿಕ್ಕಿದ 10-11 ನೇ ಶತಮಾನದ್ದೆನ್ನಲಾದ ಹಳೆಗನ್ನಡ ಶಾಸನ ಮುಂತಾದ ಅನೇಕ ಶಾಸನಗಳು ಈ ಕನ್ನಡ ಮಣ್ಣಿನ ಚರಿತ್ರೆಯನ್ನು ತಿಳಿಸುತ್ತವೆಯೆಂದು ಅನೇಕ ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ. ಕಾಸರಗೋಡು ಸಾಂಸ್ಕೃತಿಕವಾಗಿಯೂ ಸಾಹಿತ್ಯಾತ್ಮಕವಾಗಿಯೂ ಶ್ರೀಮಂತವಾದ ಊರು. ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ತವರೂರು. ಭಕ್ತಿ, ವೀರ ಪ್ರಧಾನವಾದ ಈ ಯಕ್ಷಗಾನದ ಶ್ರೇಷ್ಠ ಕವಿ ಪಾರ್ತಿಸುಬ್ಬ ಕುಂಬಳೆಯವನು. ಪುತ್ರ ಕಾಮೇಷ್ಟಿ, ಪಂಚವಟಿ, ಚೂಡಾಮಣ, ಅಂಗದ ಸಂಧಾನ, ಬಾಲಲೀಲೆ, ಐರಾವತ ಮುಂತಾಗಿ ಅವನು ರಚಿಸಿದ 12 ಪ್ರಸಂಗಗಳು ಅತ್ಯುತ್ಕೃಷ್ಟವಾದವುಗಳಾಗಿವೆ. ಹಾಗೆಯೇ ಸುಮಾರು ಮೂರು ಸಾವಿರ ವರ್ಷಗಳಷ್ಟು ಇತಿಹಾಸವನ್ನು
ಹೊಂದಿರುವ ಯಕ್ಷಗಾನ ಬೊಂಬೆಯಾಟದ ಪರಂಪರೆಯೂ ಈ ನಾಡಿಗಿದೆ. ಸಿರಿಗನ್ನಡದ ಸಿರಿಯೆಂದೇ ಗುರುತಿಸಲ್ಪಟ್ಟ ಕೆ.ವೆಂಕಟಕೃಷ್ಣಯ್ಯನವರಿಂದ ಸ್ಥಾಪಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಕಲಾ ಸಂಘವು ಇಂದು ದೇಶ-ವಿದೇಶಗಳಲ್ಲಿ ಹಲವು ಪ್ರದರ್ಶನ ನೀಡುತ್ತಾ ಬಂದಿದ್ದು ಯುವ ಜನಾಂಗಕ್ಕೆ ಯಕ್ಷಗಾನ ಬೊಂಬೆಯಾಟವನ್ನು ಪರಿಚಯಿಸಿ ಆ ಕಲೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ಯತ್ನಿಸುತ್ತಿರುವುದು ಒಂದು ಖುಷಿಯ ಸಂಗತಿ ಯಾಗಿದೆ.

ರಂಗಭೂಮಿ ಕ್ಷೇತ್ರದಲ್ಲೂ ಕಾಸರಗೋಡಿನಲ್ಲಿ ಅಪೂರ್ವ ಕಲಾವಿದರು ಕಾಸರಗೋಡು, ಗಡಿನಾಡ ಕಲಾವಿದರು, ರಂಗ ಚಿನ್ನಾರಿ ಮೊದಲಾದ ಹಲವು ನಾಟಕ ತಂಡಗಳು ನಿರಂತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಈ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಹಾಗೆಯೇ ಪಿ.ಎಸ್.ಪುಣಂಚಿತ್ತಾಯರೆಂದೇ ಪ್ರಸಿದ್ಧರಾದ ಪುಂಡೂರು ಶಂಕರನಾರಾಯಣ ಪುಣಂಚಿತ್ತಾಯರು ಚಿತ್ರಕಲಾ ಮಾಂತ್ರಿಕರು. ತಮ್ಮ ಸಾಧನೆಗಾಗಿ ಕೇರಳ ಅಕಾಡೆಮಿಯಿಂದ ಪುರಸ್ಕೃತರಾಗಿರುವ ಕಾರಡ್ಕ ಬಳಿ ಕಾಂಚನಗಂಗಾ ಎಂಬ ಕಲಾಧಾಮವನ್ನು ರೂಪಿಸಿ ಅನೇಕ ಕಲಾವಿದರನ್ನು ಸೆಳೆಯುತ್ತಿದ್ದಾರೆ.

ಈ ಗಡಿನಾಡಿನಲ್ಲಿ ಅನೇಕ ಪ್ರಾಚೀನ ಸಂಸ್ಕೃತ ಗ್ರಂಥಗಳೂ ದೊರಕಿವೆ. ವೇಲಾಪುರ ಮಹಾತ್ಮೆ ಎಂಬ ಸುಮಾರು 100 ವರ್ಷ ಪ್ರಾಚೀನವಾದ ಸಂಸ್ಕೃತ ಗ್ರಂಥವು ಸ್ಕಂದ ಪುರಾಣಾಂತರ್ಗತವಾದುದೆಂದು ಹೇಳಲಾಗುತ್ತಿದೆ. ಕುಂಬಳೆ ಸೀಮೆಗೆ ಸಂಬಂಧಿಸಲಾದ ಹಲವು ಸ್ಥಳನಾಮಗಳು ಉದಾಹರಣೆಗೆ
ಕುಮಾರಮಂಗಲ, ಮಂಜೇಶ್ವರವೆಂದು ಈಗ ಕರೆಯಲ್ಪಡುವ ಮಂಜುಳಾಖ್ಯಪುರ, ಐಲ ಎಂದು ಕರೆಯಲ್ಪಡುವ ವೇಲಾಪುರ ಮೊದಲಾದವುಗಳು ಇಲ್ಲಿ ಉಲ್ಲೇಖಿಸಲ್ಪಟ್ಟಿದೆ. ಹಾಗೆಯೇ ಮಧ್ವಾಚಾರ್ಯರ ಜೀವನ ಸಾಧನೆಗಳನ್ನೊಳಗೊಂಡ ಮೊದಲ ಗ್ರಂಥವಾದ ಮಧ್ವ ವಿಜಯವು ನಾರಾಯಣ ಪಂಡಿತಾ
ಚಾರ್ಯರು ಬರೆದಂತಹ ಅಮೂಲ್ಯ ಗ್ರಂಥವಾಗಿದೆ.

ಇಲ್ಲಿ ಕಾವು, ಕೂಡ್ಲು, ಇಂದಿನ ಕುಂಬಳೆಯೆಂದು ಸಂಶಯಿಸಲ್ಪಡುವ ಕಬೆನಾಡು ಮೊದಲಾದ ಸ್ಥಳಗಳ ಉಲ್ಲೇಖವೂ ಇದೆ. ಕುಂಬಳೆ ಸೀಮೆಯ ಪ್ರಸಿದ್ಧ ದೇವಾಲಯಗಳ ಬಗೆಗೆ ಹೇಳುವುದಾದರೆ ಚತುರ್ಧಾಮಗಳೆನಿಸಿಕೊಂಡ ಅಡೂರು, ಮಧೂರು, ಕಾವು, ಕಣ್ಯಾರ ಇಲ್ಲಿನ ಪ್ರಮುಖ ಪುಣ್ಯಕ್ಷೇತ್ರಗಳು. ಕಿತಾರಾರ್ಜು
ನೀಯ ಕಾಳಗದ ನಂತರ ಆರ್ಜುನನಿಂದ ಸ್ಥಾಪಿಸಲ್ಪಟ್ಟ ಶಿವಲಿಂಗವುಳ್ಳ ಅಡೂರು ಮಹಾಲಿಂಗೇಶ್ವರ ದೇವಸ್ಥಾನ, ಮಧುವಾಹಿನಿ ಹೊಳೆಯ ಪಕ್ಕದಲ್ಲೇ ವಿರಾಜಿಸುತ್ತಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮುಚುಕುಂದ ಮುನಿಗಳ ತಪೋಭೂಮಿಯಾದ ಕಾವು ಗ್ರಾಮದಲ್ಲಿರುವ ಮುಜುಂಗಾವು ಅಥವಾ ಮುಜುವಂಗೆರೆ ಪಾರ್ಥಸಾರಥಿ ದೇವಾಲಯ, ಕುಂಬಳೆ ಹೊಳೆಯ ಪಾವನ ಪರಿಸರದಲ್ಲಿ ಮುನಿ ಕಣ್ವರಿಂದ ಸ್ಥಾಪಿಸಲ್ಪಟ್ಟ ಶ್ರೀ ಗೋಪಾಲ ಕೃಷ್ಣ ದೇವಾಲಯಗಳೇ ಆ ನಾಲ್ಕು ಕ್ಷೇತ್ರಗಳು. ಈ ಸೀಮೆಯ ತುಳು ಭೂತಗಳೂ ನಾಲ್ವೆರ್ ದೇವೆರ್ ಎಂದು ಹೇಳುತ್ತಾರೆ ಮತ್ತು ಕುಂಬಳೆ ಸೀಮೆಯ ಸತ್ಯ ನೋಡಿಕೊಳ್ಳಲಿ ಎಂದು ಹೇಳಿಬಿಟ್ಟರೆ ದೈವಭೀರುಗಳ ನಡುವೆ ಜಗಳವಿಲ್ಲವೆಂಬ ನಂಬಿಕೆ ಇದೆ.

ಈ ಊರಿನ ಅನೇಕ ವೀರರ ಸಾಹಸಗಾಥೆಗಳು ಜನರ ಬಾಯಿಂದ ಬಾಯಿಗೆ ಬಂದು ಮನೆಮಾತಾಗಿ ಪ್ರಚಲಿತದಲ್ಲಿವೆ. ಅಂತಹ ದೇಶಪ್ರೇಮಿಗಳ ಸಾಲಲ್ಲಿ ಪ್ರಾತಃ
ಸ್ಮರಣೀಯರಾಗಿದ್ದಾರೆ ಬೇಕಲ ತಿಮ್ಮನಾಯಕ. ಬೇಕಲದ ಕೋಟೆಯವರ ವರ್ಗದವನಾಗಿದ್ದ ಈತನು ತನ್ನ ವಂಶ ವೃತ್ತಿಗನುಸಾರವಾಗಿ ವೀರನೂ ಪರಾ ಕ್ರಮಿಯೂ ಆಗಿದ್ದನು. ಬ್ರಿಟಿಷರ ಆಕ್ರಮಣ ಕಾಲದಲ್ಲಿ ಅವರೊಂದಿಗೆ ಹೋರಾಡುತ್ತಾ ಅವರಿಗೆ ವಶವಾಗಿ ಗಲ್ಲಿಗೇರಿಸಲ್ಪಟ್ಟಿದ್ದನು. ಹಾಗೆಯೇ ಸಿಡಿಲಮರಿ ಎಂದೇ ಕರೆಯಲ್ಪಡುತ್ತಿದ್ದ ಕೆಂಗಣ್ಣ ನಾಯಕ, ಮಾಯಿಪ್ಪಾಡಿ ಬಳಿಯ ಪುಳ್ಕೂರು ಬಾಚ ಎಂದೇ ಖ್ಯಾತವಾಗಿದ್ದ ವಾಸುದೇವ, ಹಾಗೆಯೇ ಕುಂಬಳೆಯ ನಾಯಕರು ಮುಂತಾದ ಅನೇಕ ವೀರರ ಕಥೆಗಳು ಆ ಕಾಲದ ಚರಿತ್ರೆಯನ್ನರುಹುತ್ತವೆ.

ಯಾವುದೇ ಒಂದು ನಾಡಿನ ಸಾಂಸೃತಿಕ ಬೆಳವಣಿಗೆಯಲ್ಲಿ ಅಲ್ಲಿನ ಪ್ರಸಿದ್ಧ ಮನೆತನಗಳೂ ಅವರ ಕೊಡುಗೆಯೂ ತುಂಬ ಮಹತ್ವ ಪಡೆಯುತ್ತವೆ. ಕಾಸರಗೋಡಿ ನಲ್ಲಿಯೂ ಕೂಡ್ಲು, ಇಚ್ಲಂಪಾಡಿಯಂತಹ ಅನೇಕ ಮನೆತನಗಳಿದ್ದುವು. ಪಾಡಿ ಸುಬ್ಬಯ್ಯ ಶಾನುಭೋಗರ ವಂಶವೇ ಕೂಡ್ಲಿನಲ್ಲಿ ನೆಲೆಸಿ ಕೂಡ್ಲು ಮನೆತನವೆಂದು
ಪ್ರಸಿದ್ಧವಾಯಿತು. ಹಾಗೆಯೇ ಕುಂಬಳೆ ಅರಸರಿಗೆ ತುಂಬಾ ಆತ್ಮೀಯವಾಗಿದ್ದ ಇಚ್ಲಂಪಾಡಿಯಲ್ಲಿದ್ದ ಗುತ್ತಿನಮನೆಯು ಆ ಕಾಲದ ನ್ಯಾಯ ತೀರ್ಮಾನ, ಪ್ರಮಾಣಾದಿಗಳೆಲ್ಲಾ ನಡೆಯುತ್ತಿದ್ದ ಒಂದು ಶ್ರೀಮಂತ ಮನೆತನವಾಗಿತ್ತು.

ಇಲ್ಲಿನ ಕೋಟ್ಯಣ್ಣಾಳ್ವರೇ ಇಚ್ಲಂಪಾಡಿ ಮೇಳದ ಸ್ಥಾಪಕರು. ಹೀಗೆ ಹಲವಾರು ವೈಶಿಷ್ಟ್ಯಗಳಿರುವ ಕಾಸರಗೋಡೆಂಬ ಕನ್ನಡ ನಾಡು ಕೇರಳದ ತೆಕ್ಕೆಯಲ್ಲಿದ್ದರೂ ಕನ್ನಡಿಗರ ಬತ್ತದ ಇಚ್ಛಾಶಕ್ತಿಯಿಂದಾಗಿ ಇನ್ನೂ ಉಸಿರಾಡುತ್ತಿದೆ. ಸರಕಾರದ ಶೋಷಣಾತ್ಮಕ ನಿಲುವಿನಿಂದಾಗಿ ಅನೇಕ ವಿದ್ಯಾರ್ಥಿಗಳೂ ಜನಸಾಮಾನ್ಯರೂ ಪಡಬಾರದ ಕಷ್ಟ ಪಡುತ್ತಿದ್ದರೂ ಕನ್ನಡವನ್ನು ಕಟ್ಟುವ, ಉಳಿಸುವ, ಬೆಳೆಸುವ ಛಲ ಇನ್ನೂ ಉಳಿದಿರುವುದು ಕಾಸರಗೋಡಿನ ಪುಣ್ಯವೇ ಸರಿ. ಕಲಾ ಕ್ಷೇತ್ರವನ್ನೂ ಶೈಕ್ಷಣಿಕ ಕ್ಷೇತ್ರವನ್ನೂ ಒಳಗೊಂಡಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಲಯಾಳದ ಪ್ರಭುತ್ವವು ಹೆಚ್ಚುತ್ತಿರುವ ಕಾಸರಗೋಡಿನಲ್ಲಿ ಈ ನಾಡಿನ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿ ಅದರ ಅಸ್ಮಿತೆಯನ್ನು ಕಾಪಾಡಿಕೊಂಡು ಹೋಗಬೇಕಾಗಿರುವುದು ಈ ಕಾಲದ ಅಗತ್ಯವಾಗಿದೆ.