Sunday, 8th September 2024

ಕಣಿವೆಯ ಗಣಿಯಿಂದ ಭಾರತದ ಭಾಗ್ಯ ಬದಲಾದೀತೇ ?

ವಿದೇಶವಾಸಿ

dhyapaa@gmail.com

ಕಳೆದ ವರ್ಷ ಭಾರತವೇ ಸುಮಾರು ೯ ಸಾವಿರ ಕೋಟಿ ರು. ಮೌಲ್ಯದ ಲಿಥಿಯಂ ಬ್ಯಾಟರಿಯನ್ನು ಆಮದು ಮಾಡಿಕೊಂಡಿತ್ತು. ಅದಲ್ಲದೆ, ಸುಮಾರು ಒಂದೂಮುಕ್ಕಾಲು ಕೋಟಿ ಮೌಲ್ಯದ ಲಿಥಿಯಂ ಲೋಹವನ್ನೂ ಬೇರೆ ಬೇರೆ ದೇಶಗಳಿಂದ ತರಿಸಿಕೊಂಡಿತ್ತು. ಅಂತಹ ಒಂದು ಖಜಾನೆ ಭಾರತಕ್ಕೆ ಕಾಶ್ಮೀರದಲ್ಲಿ ದೊರೆತಿರುವುದು ಅದೃಷ್ಟವೇ ಸರಿ.

ಹಿಂದೊಮ್ಮೆ ಕಣಿವೆ ರಾಜ್ಯ ಕಾಶ್ಮೀರದ ಕುರಿತು ‘ಇದು ಕಲ್ಲು ಹೋಗಿ ಮಾಲ್ ಬರುವ ಸಮಯ’ ಎಂಬ ಲೇಖನ ಬರೆದಿದ್ದೆ. ಕಾಶ್ಮೀರದಲ್ಲಿ ಆಗುತ್ತಿರುವ ಬೆಳವಣಿಗೆ, ಅಭಿವೃದ್ಧಿ ಮತ್ತು ಅಲ್ಲಿ ಹಣ ಹೂಡಲು ಮುಂದಾಗಿರುವ ಕೆಲವು ಸಂಸ್ಥೆಗಳ ಬಗ್ಗೆ ಹೇಳಿದ್ದೆ. ೩೭೦ನೇ ವಿಧಿ ರದ್ದಾದ ಮೇಲೆ ಆಗುತ್ತಿರುವ ಬದಲಾವಣೆಯ ಕುರಿತು ತಿಳಿಸಿದೆ.

ಆ ಲೇಖನ ಓದಿ ಪ್ರತಿಕ್ರಿಯಿಸಿದ್ದ ಕೆಲವು ಓದುಗರು, ಅಲ್ಲಿ ಸಿಕ್ಕಿರುವ ಅಭೂತಪೂರ್ವ ನಿಧಿಯ ಕುರಿತೂ ಬರೆಯ ಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಒಂದು ಲೇಖನದಲ್ಲಿ ಅದನ್ನು ವಿವರವಾಗಿ ಬರೆಯಲು ಸಾಧ್ಯ ವಿರಲಿಲ್ಲ. ಇದೂ ಅಷ್ಟೇ ಮಹತ್ವದ ವಿಷಯವಾದ್ದರಿಂದ ಒಂದು ಲೇಖನ ಅದಕ್ಕೇ ಮೀಸಲಾಗಿರಬೇಕು ಅಂದು ಕೊಂಡಿದ್ದೆ. ಕಾಶ್ಮೀರ ಶ್ವೇತಸ್ವರ್ಣದ ರಾಜ್ಯ ಅಥವಾ ಬಿಳಿ ಬಂಗಾರದ ಪ್ರದೇಶ ಎಂದಾಗ ನಿಮ್ಮ ಮನದಲ್ಲಿ
ಯಾವ ಚಿತ್ರ ಮೂಡುತ್ತದೆ? ಅಲ್ಲಿಯ ಬೆಳ್ಳಗಿನ ಮಂಜುಗಡ್ಡೆ ಅಥವಾ ಹಿಮಾಚ್ಛಾದಿತ ಶಿಖರ ಶ್ರೇಣಿಗಳು ತಾನೆ? ಆದರೆ ಈಗ ಹೇಳುತ್ತಿರುವುದು ಅದಲ್ಲ. ಇದು ಸುಮಾರು ೪ ತಿಂಗಳ ಹಿಂದೆ ಬಂದ ಒಂದು ಸುದ್ದಿ. ಭಾರತದ ಗಣಿ ಸಚಿವಾಲಯ ಕಳೆದ ಫೆಬ್ರವರಿ ೯ರಂದು ನೀಡಿದ ಮಾಹಿತಿಯಂತೆ, ಕಾಶ್ಮೀರದ ರಿಯಾಸಿ ಜಿಯಲ್ಲಿ ಭಾರಿ ಪ್ರಮಾಣದ ಲಿಥಿಯಂ ನಿಕ್ಷೇಪ ದೊರೆತಿದೆ. ಅದೂ ಎಂಥದ್ದು? ಬರೋಬ್ಬರಿ ೫೯ ಲಕ್ಷ ಟನ್ ಲಿಥಿಯಂ ನಿಕ್ಷೇಪ.

ರುಪಾಯಿಯ ಲೆಕ್ಕದಲ್ಲಿ ಹೇಳುವುದಾದರೆ, ಸುಮಾರು ೩೫ ಲಕ್ಷ ಕೋಟಿ ರುಪಾಯಿಯ ಖಜಾನೆ ಇದು. ಅಂದರೆ ಕರ್ನಾಟಕದ ೧೩-೧೪ ವರ್ಷದ ಬಜೆಟ್ ಅಂದುಕೊಳ್ಳಿ. ಲಿಥಿಯಂ ಕುರಿತು ಹೆಚ್ಚು ಹೇಳಬೇಕಿಲ್ಲ. ಇಂದು ನಾವು ಬಳಸುವ ಸ್ಮಾರ್ಟ್ ಫೋನ್‌ನಿಂದ ಹಿಡಿದು ಇಲೆಕ್ಟ್ರಿಕ್ ಕಾರಿನವರೆಗೆ, ಗಾಳಿ ಯಂತ್ರದಿಂದ ಹಿಡಿದು ನವೀಕರಿಸಬಹುದಾದ ಶಕ್ತಿಯವರೆಗೆ ವಿದ್ಯುತ್ ಶಕ್ತಿಯನ್ನು ಶೇಖರಿಸಿಡಲು ಬಳಸುವ ಬ್ಯಾಟರಿ ತಯಾರಿಸುವಲ್ಲಿ ಇದು ಪ್ರಯೋ ಜನಕಾರಿ. ಇತ್ತೀಚಿನ ದಿನಗಳಲ್ಲಿ ಬಹು ಬಳಕೆ ಯಲ್ಲಿರುವ ಲಿಥಿಯಂ ಅಯಾನ್ ಬ್ಯಾಟರಿಯಗಲಿ, ಲಿಥಿಯಂ ಪಾಲಿಮರ್ ಬ್ಯಾಟರಿಯಗಲಿ ಬಳಕೆ ಯಾಗುವ ಈ ವಸ್ತು ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳಲ್ಲೊಂದು.

ಲಿಥಿಯಂ ಬ್ಯಾಟರಿಗಳು ಸಾಮಾನ್ಯವಾಗಿ ನಾವು ಬಳಸುವ ಲೆಡ್ ಆಸಿಡ್ ಬ್ಯಾಟರಿಗಳಿಗಿಂತ ೧೦ ಪಟ್ಟು ಹೆಚ್ಚು ಬಾಳಿಕೆ ಬರುವುದಷ್ಟೇ ಅಲ್ಲ, ತೂಕ ದಲ್ಲೂ ಸುಮಾರು ಶೇ. ೫೦ರಷ್ಟು ಕಡಿಮೆ. ಬಣ್ಣದಲ್ಲಿ ಬಿಳಿ, ಬೆಲೆಯಲ್ಲಿ ಕಿಲೋ ಒಂದಕ್ಕೆ ೫-೬ ಸಾವಿರ ರೂಪಾಯಿ. ಅಲ್ಲಿಗೆ ಇದು ಅಮೂಲ್ಯ
ವಸ್ತು ಎನ್ನುವುದಂತೂ ಸತ್ಯ. ಅದಕ್ಕೇ ಹೇಳಿದ್ದು, ಇನ್ನು ಮುಂದೆ ಜಮ್ಮು-ಕಾಶ್ಮೀರ ಎಂದರೆ ಬಿಳಿಹಿಮ ಮಾತ್ರವಲ್ಲ, ಬಿಳಿ ಲಿಥೇನಿಯಂ ರಾಜ್ಯವೂ ಹೌದು.

ಒಂದು ಸಣ್ಣ ಅಂಕಿ-ಅಂಶ ನೋಡಿ ಮುಂದುವರಿಯೋಣ. ಇಂದು ವಿಶ್ವದಲ್ಲಿ ಅತಿಹೆಚ್ಚು ಲಿಥಿಯಂ ಹೊಂದಿರುವ ದೇಶಗಳಲ್ಲಿ ಚಿಲಿ ಮೊದಲ
ಸ್ಥಾನದಲ್ಲಿದೆ. ಚಿಲಿ ಸುಮಾರು ೯೨ ಲಕ್ಷ ಟನ್ ಲಿಥಿಯಂ ಹೊಂದಿದ್ದರೆ, ಆಸ್ಟ್ರೇಲಿಯಾ ಸುಮಾರು ೫೭ ಲಕ್ಷ ಟನ್ ಹೊಂದಿದ್ದು, ೨ನೇ ಸ್ಥಾನದಲ್ಲಿದೆ
(ಈಗ ಭಾರತ ೨ನೇ ಸ್ಥಾನಕ್ಕೆ ಜಿಗಿಯಬಹುದು). ಕಳೆದ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು ೬೦ ಸಾವಿರ ಕೋಟಿ ರು. ಮೌಲ್ಯದ ಲಿಥಿಯಂ ವಹಿವಾಟಾಗಿತ್ತು. ಇನ್ನು ೫ ವರ್ಷದಲ್ಲಿ ಈ ಮೊತ್ತ ೧.೫ ಲಕ್ಷ ಕೋಟಿ ರು. ದಾಟಬಹುದು ಎಂಬ ನಿರೀಕ್ಷೆಯಿದೆ. ಕಳೆದ ವರ್ಷ ಭಾರತವೇ ಸುಮಾರು ೯ ಸಾವಿರ ಕೋಟಿ ರು. ಮೌಲ್ಯದ ಲಿಥಿಯಂ ಬ್ಯಾಟರಿಯನ್ನು ಆಮದು ಮಾಡಿಕೊಂಡಿತ್ತು. ಅದಲ್ಲದೆ, ಸುಮಾರು ಒಂದೂ ಮುಕ್ಕಾಲು ಕೋಟಿ ಮೌಲ್ಯದ ಲಿಥಿಯಂ ಲೋಹ ವನ್ನೂ ಬೇರೆ ಬೇರೆ ದೇಶಗಳಿಂದ ತರಿಸಿಕೊಂಡಿತ್ತು.

ಅಂತಹ ಒಂದು ಖಜಾನೆ ಭಾರತಕ್ಕೆ ಕಾಶ್ಮೀರದಲ್ಲಿ ದೊರೆತಿರುವುದು ಅದೃಷ್ಟವೇ ಸರಿ. ಈ ನಿಕ್ಷೇಪಕ್ಕೂ ೩೭೦ನೇ ವಿಧಿ ರದ್ದಾಗುವುದಕ್ಕೂ ಒಂದು ಸಂಬಂಧವಿದೆ. ೨೦೧೮ಕ್ಕೂ ಮೊದಲು, ೩೭೦ನೇ ವಿಧಿ ಜಾರಿಯಲ್ಲಿರುವವರೆಗೆ ಅಲ್ಲಿಯ ಭೂಮಿಯ ಮೇಲೆ ಮಂತ್ರಿಗಳ ಮತ್ತು ಅದಿಕಾರಿಗಳ ಹಿಡಿತ ವಿತ್ತು. ೨೦೦೧ರಲ್ಲಿ ಜಾರಿಯಾದ ‘ರೋಷನಿ’ ಕಾಯಿದೆಯ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಸ್ಥಳೀಯರ ಹೊರತಾಗಿ ಬೇರೆ ಯಾರೂ ಭೂಮಿ ಖರೀದಿಸು ವಂತಿರಲಿಲ್ಲ. ಇದೇ ಕಾನೂನಿನ ಅಡಿಯಲ್ಲಿ ಅಲ್ಲಿಯ ಸರಕಾರ ೧೬ ಲಕ್ಷ ಹೆಕ್ಟೇರ್ ಭೂಮಿಯನ್ನು ಕಮ್ಮಿ ದರದಲ್ಲಿ ಸ್ಥಳೀಯರಿಗೆ ಗುತ್ತಿಗೆ ನೀಡಿತ್ತು.

ನಿಮಗೆ ತಿಳಿದಿರಲಿ, ಜಮ್ಮು ಕಾಶ್ಮೀರ ಸರಕಾರ ಆ ಕಾಲದಲ್ಲಿ ೨೫ ಸಾವಿರ ಕೋಟಿ ರು. ಮೌಲ್ಯದ ಭೂಮಿಯನ್ನು ಗುತ್ತಿಗೆ ಪಡೆಯಲು ಟೆಂಡರ್ ಕರೆಯಿತು. ಆದರೆ ೧೬ರ ಬದಲು ಕೇವಲ ೬ ಲಕ್ಷ ಹೆಕ್ಟೇರ್ ಭೂಮಿ ಮಾತ್ರ ಲಭ್ಯವಾಗುವಂತೆ ಮಾಡಿತ್ತು. ಟೆಂಡರ್ ಪ್ರಕ್ರಿಯೆ ಪ್ರಕಾರ ೩೧೭ ಕೋಟಿ ರು. ಸರಕಾರಕ್ಕೆ ಸಿಗಬೇಕಿತ್ತು. ಆದರೆ ದೊರಕಿದ್ದು ಬರೀ ೭೬ ಕೋಟಿ ಮಾತ್ರ. ಹಾಗಾದರೆ ಉಳಿದ ಹಣ ರಾಜಕಾರಣಿಗಳ ಕಿಸೆ ಸೇರಿತ್ತೇ? ನೀವೇ ನಿರ್ಣಯಿಸಿ.
ಇದಕ್ಕೂ ಮೊದಲು ರಾಜ್ಯದ ವಿಜಿಲೆನ್ಸ್ ಆರ್ಗನೈಝೇಷನ್ ಈ ಕಾಯಿದೆಯ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಏಕೆಂದರೆ, ಇದಕ್ಕೂ ಮೊದಲು ಗುಲ್‌ಮಾರ್ಗ್ ಪ್ರಾಂತ್ಯದಲ್ಲಿ ಸರಕಾರ ಇದೇ ಕಾಯಿದೆಯ ಅಡಿಯಲ್ಲಿ ಅರ್ಹರಲ್ಲದ (ಕಾಯಿದೆಯ ಪ್ರಕಾರ) ವ್ಯಕ್ತಿಗಳಿಗೂ ಭೂಮಿ ನೀಡಿತ್ತು. ಇರಲಿ, ೨೦೧೮ರಲ್ಲಿ ವಿಧಿ ರದ್ದಾಗುವು ದಕ್ಕಿಂತ ಸ್ವಲ್ಪ ಮೊದಲು ಈ ಕಾಯಿದೆಯನ್ನು ಹಿಂಪಡೆಯಲಾಯಿತು.

ವಿಧಿ ರದ್ದಾದ ನಂತರ ಕಾರ್ಯ ಇನ್ನೂ ಸುಲಭವಾಯಿತು. ಕಳೆದ ವರ್ಷ ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾ (ಜಿಎಸ್‌ಐ) ರಾಜ್ಯದಲ್ಲಿ ತನ್ನ ಸಂಶೋಧನಾ ಕಾರ್ಯವನ್ನು ಆರಂಭಿಸಿತ್ತು. ಹಾಗಾಗಿ, ೩೭೦ನೇ ವಿಧಿ ರದ್ದಾಗಿದ್ದರಿಂದ ಖನಿಜ ದೊರೆತಿಲ್ಲವಾದರೂ, ಮೊದಲಿನಿಂದಲೂ ಇದ್ದ ಖನಿಜವನ್ನು ಪತ್ತೆ ಹಚ್ಚು ವಂತಾಯಿತು ಎನ್ನುವುದಂತೂ ಹೌದು. ಆ ಸಂಪನ್ಮೂಲವನ್ನು ಇಂದು ಯಾರು ಬೇಕಾದರೂ ಭೂಮಿಯಿಂದ ಹೊರಗೆ ತೆಗೆಯಬಹುದು ಎನ್ನುವುದೂ ಹೌದು. ಹಾಗಾದರೆ ಭಾರತ ರಾತ್ರೋರಾತ್ರಿ ಬದಲಾಗುತ್ತದೆಯೇ? ರಾತ್ರಿ ಕಳೆದು ಬೆಳಗಾಗುವುದರೊಳಗೆ ಶ್ರೀಮಂತ ರಾಷ್ಟ್ರವಾಗುತ್ತದೆಯೇ? ನೈಸರ್ಗಿಕ ಅನಿಲ ದೊರೆತ ನಂತರ ನಾರ್ವೆ ಯದ ಬದಲಾವಣೆ, ಆಸ್ಟ್ರೇಲಿಯಾದದ ಬದಲಾವಣೆ ಗೊತ್ತಿಲ್ಲದ ವಿಷಯವೇನಲ್ಲ.

೧೯೩೮ರ ಮೊದಲು ಎಲ್ಲೂ ಇಲ್ಲದ ಸೌದಿ ಅರೇಬಿಯಾ ಮತ್ತು ಇತರೆ ಕೊಲ್ಲಿ ರಾಷ್ಟ್ರಗಳು ತೈಲನಿಕ್ಷೇಪ ದೊರೆತ ನಂತರ ಶ್ರೀಮಂತ ರಾಷ್ಟ್ರಗಳಾಗಿ ಬದ
ಲಾದ ಉದಾಹರಣೆ ಕಣ್ಣ ಮುಂದೆಯೇ ಇದೆ ಯಲ್ಲ. ತೈಲನಿಕ್ಷೇಪ ದೊರೆತಾಗ ಅದನ್ನು ಭೂಮಿಯಿಂದ ಹೊರಗೆ ತೆಗೆಯುವ ತಂತ್ರಜ್ಞಾನವಾಗಲಿ,
ಅದನ್ನು ಮಾರುವ ವ್ಯಾಪಾರಿ ಬುದ್ಧಿಯಾಗಲಿ ಸೌದಿ ಅರೇಬಿಯಾಕ್ಕೆ ಇರಲಿಲ್ಲ. ಈಗ ಭಾರತದಲ್ಲಿ ತಂತ್ರಜ್ಞಾನ, ವ್ಯಾಪಾರ ಕೌಶಲ ಎರಡೂ ಇವೆ.
ಇದನ್ನು ಭಾರತ ವಿದೇಶಗಳಿಗೆ ಮಾರಿ ಹಣಗಳಿಸ ಬಹುದು, ತನ್ನ ದೇಶದ ಅಭಿವೃದ್ಧಿಗಾಗಿಯೇ ಬಳಸಿಕೊಳ್ಳಬಹುದು. ಭಾರತದ ಬಳಿ ಎರಡೂ
ಆಯ್ಕೆಗಳಿವೆ.

ಇದೆಲ್ಲ ಅಷ್ಟು ಸುಲಭವೇ? ಸುಲಭವಂತೂ ಖಂಡಿತ ಅಲ್ಲ, ಹಾಗಂತ ಅಸಾಧ್ಯವೂ ಅಲ್ಲ. ಅದಕ್ಕೆ ಹಲವು ಕಾರಣಗಳು. ಜಿಎಸ್‌ಐ ಸಂಸ್ಥೆಯ ಪ್ರಕಾರ
ಇದು ಇನ್ನೂ ಊಹಿಸಿದ ಸಂಪನ್ಮೂಲ. ಇದು ಮುಂದುವರಿದು ಸೂಚಿಸಿದ ಸಂಪನ್ಮೂಲವಾಗಿ ಮಾಪನದ ಸಂಪನ್ಮೂಲವಾಗಲು ಅಂದರೆ ಬಳಕೆಗೆ ಯೋಗ್ಯವಾಗುವಂತೆ ಮಾಡಲು ಸುಮಾರು ೫-೭ ವರ್ಷ ಬೇಕಾಗಬಹುದು. ಈ ವರ್ಷಗಳಲ್ಲಿ ಅಲ್ಲಿರುವ ಲಿಥಿಯಂನ ಗುಣಮಟ್ಟ ಹೇಗಿದೆ, ಯಾವ
ಪ್ರಮಾಣದಲ್ಲಿದೆ ಎಂದು ನೋಡಬೇಕು. ಆ ಪ್ರದೇಶದಲ್ಲಿ ಗಣಿಗಾರಿಕೆಯ ಸಾಧ್ಯತೆಗಳೇನು, ಅದಕ್ಕಾಗುವ ಖರ್ಚು-ವೆಚ್ಚ ಎಷ್ಟು ಎಂದು ಲೆಕ್ಕ ಹಾಕಬೇಕು.

ಅದರೊಂದಿಗೆ ಈ ಗಣಿಗಾರಿಕೆಯಿಂದ ಪರಿಸರದ ಮೇಲಾಗುವ ಪರಿಣಾಮ ಏನು ಎಂಬುದನ್ನು ಪರಿಶೀಲಿಸಬೇಕು. ಒಂದು ಅಂದಾಜಿನ ಪ್ರಕಾರ ಭೂಮಿಯಿಂದ ೧ ಟನ್ ಲಿಥಿಯಂ ಪಡೆಯುವ ಪ್ರಕ್ರಿಯೆಗೆ ೨೨ ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಈ ಗಣಿಗಾರಿಕೆಯಿಂದ ಯಾವ ಪ್ರಮಾಣದಲ್ಲಿ ಭೂಮಾಲಿನ್ಯ, ವಾಯುಮಾಲಿನ್ಯ ಗಳಾಗುತ್ತವೆ ಎನ್ನುವುದರೆಡೆಗೂ ಲಕ್ಷ್ಯವಹಿಸ ಬೇಕು. ಇದರ ಜತೆಜತೆಗೆ ಇನ್ನೊಂದಷ್ಟು ವಿಷಯಗಳ ಕಡೆಗೂ ಗಮನ ಹರಿಸಬೇಕು.

ಹೇಳುತ್ತಾರಲ್ಲ, ಸುಯೋಗದ ಜತೆಗೆ ಸಮಸ್ಯೆಯೂ ಬರುತ್ತದಂತೆ. ಹಾಗೆಯೇ, ಕಾಶ್ಮೀರದಲ್ಲಿ ಲಿಥಿಯಂ ದೊರೆತಿದೆ ಎಂಬ ವಿಷಯ ತಿಳಿದಾಕ್ಷಣ
ಜೈಶ್-ಎ-ಮೊಹಮ್ಮದ್, ಪಿಎಎಫ್ಎ-ನಂಥ ಸಂಘಟನೆಗಳು ಭಾರತವನ್ನು ಬರ್ಬಾದ್ ಮಾಡುವುದಾಗಿ ಧಮಕಿ ಹಾಕಿವೆ. ಮೊದಲನೆಯದಾಗಿ ಇಂಥ ಸಂಘಟನೆಗಳ ಪ್ರಮುಖ ಕಚೇರಿ ಎಂದು ಕರೆಸಿಕೊಳ್ಳುವ ದೇಶ ಖುದ್ದು ದಿವಾಳಿಯ ಅಂಚಿನಲ್ಲಿದೆ. ಅಲ್ಲದೆ ಈ ಖನಿಜ ದೊರೆತಿರುವುದು ಕಾಶ್ಮೀರದಲ್ಲಿ. ಹಾಗಿರುವಾಗ ಭಾರತವನ್ನು ಬರ್ಬಾದ್ ಮಾಡುತ್ತೇವೆ ಎಂದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭದ ಮಾತಲ್ಲ.

ಆದರೂ, ಇವರzಲ್ಲ ಯಾವ ರೀತಿಯ ಮನಸ್ಥಿತಿ ಇರಬೇಕು, ಅವರ ಮನಸ್ಸಿನಲ್ಲಿ ಅದ್ಯಾವ ಪ್ರಮಾಣದಲ್ಲಿ ವಿಷ ತುಂಬಿಕೊಂಡಿರಬೇಕು ಊಹಿಸಿ.
ಇನ್ನು, ಇಷ್ಟೊಂದು ಬೆಲೆ ಬಾಳುವ ನಿಕ್ಷೇಪ ಭಾರತದಲ್ಲಿ ದೊರೆತಿದೆ ಎಂದರೆ ವಿಶ್ವದ ದೊಡ್ಡಣ್ಣ ಅಮೆರಿಕ ಸುಮ್ಮನೆ ಕುಳಿತೀತೆ? ಇಂಥ ವಿಷಯ
ಗಳಲ್ಲಿ ಅಮೆರಿಕದ ಕಣ್ಣು ಕಿವಿ ದಿನದ ೨೪ ತಾಸೂ ಚುರುಕು. ವಿಷಯ ತಿಳಿದ ಮರುಕ್ಷಣವೇ ಅಮೆರಿಕ ತನ್ನ ಪ್ರತಿನಿಽಯನ್ನು ಭಾರತಕ್ಕೆ ಕಳುಹಿಸಿತು.
ಲಿಥಿಯಂ ಗಣಿಗಾರಿಕೆಯಲ್ಲಿ ಪಾಲುದಾರನಾಗಿ ಅದರಿಂದ ಬರುವ ಲಾಭದಲ್ಲಿ ಪಾಲು ಪಡೆಯುವ ಪ್ರಸ್ತಾಪವನ್ನು ಮಂಡಿಸಿತು. ಆ ಪ್ರಸ್ತಾಪವನ್ನು
ಭಾರತ ಒಪ್ಪಿಕೊಳ್ಳಬೇಕೆಂದಿಲ್ಲ ಎಂಬುದು ನಿಜ.

ಆದರೆ ಅದೇ ಕಾರಣವನ್ನು ಹೇಳದಿದ್ದರೂ, ಆ ಕಾರಣವನ್ನಿಟ್ಟುಕೊಂಡು, ಬೇರೆ ವಿಷಯದಲ್ಲಿ ಅಥವಾ ಬೇರೆ ರೀತಿಯಲ್ಲಿ ಪೆಟ್ಟು ಕೊಡಲು ಅಮೆರಿಕ
ಕಾಯುತ್ತಿರುತ್ತದೆ ಎನ್ನುವುದೂ ಅಷ್ಟೇ ನಿಜ. ಇದರೊಂದಿಗೆ, ಸೌದಿ ಅರೇಬಿಯಾ, ಇರಾನ್, ಇರಾಕ್‌ನಂಥ ದೇಶಗಳಿಂದ ಕಚ್ಚಾ ತೈಲ ಖರೀದಿ ಕಡಿಮೆ ಆಗುವ ಕಾರಣದಿಂದ ಆ ದೇಶಗಳ ಅಸಮಾಧಾನ, ಅಸಹಕಾರವನ್ನು ಎದುರಿಸಬೇಕಾದೀತು. ಇನ್ನು ಚೀನಾದ ವಿಷಯಕ್ಕೆ ಬಂದರೂ ಅಷ್ಟೇ, ತನಗೆ ಒಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಳ್ಳುವುದನ್ನು ಯಾವ ದೇಶವೂ ಸಹಿಸಿಕೊಳ್ಳುವುದಿಲ್ಲ.

ಅದರಲ್ಲೂ ಪಕ್ಕದ ಟ್ಟಿಕೊಂಡರೆ ಹೇಗೆ ಸಹಿಸೀತು ಜೀವ? ಸದ್ಯ ಲಿಥಿಯಂ ಬ್ಯಾಟರಿ ತಯಾರಿಸುವ ದೇಶಗಳಲ್ಲಿ ಚೀನಾ ಮೊದಲನೆಯ ಸ್ಥಾನದಲ್ಲಿದೆ.
ವಿಶ್ವಕ್ಕೆ ಬೇಕಾಗುವ ಶೇ. ೭೫ಕ್ಕೂ ಹೆಚ್ಚು ಲಿಥಿಯಂ ಬ್ಯಾಟರಿಯನ್ನು ಚೀನಾ ತಯಾರಿಸಿ ಪೂರೈಸುತ್ತಿದೆ. ಅದೂ ಬೇರೆ ದೇಶಗಳಿಂದ ಲಿಥಿಯಂ ಖರೀದಿಸಿ! ಆಗಲೇ ಹೇಳಿದಂತೆ, ಚೀನಾದಲ್ಲಿ ಅಷ್ಟೊಂದು ಲಿಥಿಯಂ ನಿಕ್ಷೇಪ ಇಲ್ಲ. ಆದರೂ ಲಿಥಿಯಂ ಬ್ಯಾಟರಿ ತಯಾರಿಸುವಲ್ಲಿ ಚೀನಾ ನಂಬರ್ ೧. ಆದರೆ ಚೀನಾ ಮತ್ತು ಭಾರತದ ಸಂಬಂಧ ಹಿಂದೂ ಅಷ್ಟೇ, ಈಗಲೂ ಅಷ್ಟೇ, ಮುಂದಕ್ಕೂ ಅಷ್ಟಕ್ಕಷ್ಟೇ. ಆದ್ದರಿಂದ ಚೀನಾ ಅಸಮಾಧಾನಗೊಂಡರೆ ಭಾರತಕ್ಕೆ ಅಂಥಾ -ರಕ್ ಏನೂ ಬೀಳುವುದಿಲ್ಲ.

ಇದೆಲ್ಲದರ ಜತೆಗೆ ನಮ್ಮ ದೇಶದ ಒಳಗಿನ ರಾಜಕೀಯ ಇನ್ನೂ ಶುರು ಆಗಲಿಲ್ಲ. ಸದ್ಯ ಎಲ್ಲರೂ ಬೇರೆಬೇರೆ ವಿಷಯದಲ್ಲಿ ವ್ಯಸ್ತರಾಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ತಯಾರಾಗುತ್ತಿzರೆ. ಇದರನು ರಾಜಕೀಯ ಎಂದು ಕೇಳಬೇಡಿ. ಕಾದು ನೋಡಿ. ಇದರಲ್ಲೂ ರಾಜಕೀಯ ಮಾಡ ದಿದ್ದರೆ ಅದು ಭಾರತವೇ ಅಲ್ಲ. ಒಂದಂತೂ ನಿಜ, ಈಗಲ್ಲದಿದ್ದರೆ ಮುಂದಿನ ಐದು ವರ್ಷದದರೂ ಲಿಥಿಯಂ ಅವಶ್ಯಕತೆ ಇದ್ದರೆ ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂಬ ಧೈರ್ಯ ಭಾರತಕ್ಕೆ ಲಭಿಸಿದೆ. ಕಾಶ್ಮೀರದ ಕಣಿವೆಯ ಗಣಿ ಭಾರತದ ಭಾಗ್ಯ ಬದಲಾಯಿಸಬಲ್ಲದೇ? ಕಾದು ನೋಡೋಣ. Let us hope for the best!

error: Content is protected !!