ಅವಲೋಕನ
ಡಾ.ಜಯಂತಿ ಮನೋಹರ
ದೇಶಾದ್ಯಂತ ಸಂಚಲನ ಮೂಡಿಸಿರುವ ‘ಕಾಶ್ಮೀರ್ ಫೈಲ್ಸ್’ ಚಿತ್ರ, ಅಲ್ಲಿ ನಡೆದ ಕರಾಳ ಅತ್ಯಾಚಾರಗಳನ್ನು ತೋರಿಸುವುದರೊಂದಿಗೆ
ಇಂದಿನ ಜನಾಂಗವನ್ನು ಕಾಲೇಜ್ ಪ್ರೊಪೆಸರ್ಗಳು ಹೇಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎನ್ನುವುದನ್ನೂ ತೋರಿಸಿದೆ.
ಚಿತ್ರದ ಉದ್ದಕ್ಕೂ ಕೇಳುವ ಕರ್ಣ ಕಠೋರ ಕೂಗು ‘ಆಜಾದಿ – ಸ್ವಾತಂತ್ರ್ಯ’ ಕಳವಳಕಾರಿ. ಅದರೊಂದಿಗೇ, ಕಾಶ್ಮೀರ ಭಾರತದ ಅಂಗವೇ
ಎಂದೂ ಆಗಿರಲಿಲ್ಲ ಎನ್ನುವ ಸುಳ್ಳು ಕೂಡ ಚಿತ್ರದ (ಉಗ್ರರ, ಪರ ಪ್ರೊಫೆಸರ್ಗಳ ಪಾತ್ರಗಳ)ಲ್ಲಿ ಬಹಳಷ್ಟು ಬಾರಿ ಕೇಳುತ್ತದೆ. ಕಾಶ್ಮೀರ ವೆಂದರೆ ಭಾರತದ ಮುಕುಟ ಎಂದು ನನಗೆ ಮೊದಲು ಹೇಳಿದವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನನ್ನ ತಾಯಿ. ವಿಭಜನ ಪೂರ್ವ ಭಾರತದ ಭೂಪಟ ದಲ್ಲಿ, ಗೋವಿನ ಶಿರದಂತೆ ಕಾಣಿಸುವ ಕಾಶ್ಮೀರವನ್ನು ತೋರಿಸುತ್ತ, ‘ನಮ್ಮ ಇಡೀ ದೇಶವೇ ಗೋಮಾತೆಯಂತೆ ಕಾಣುತ್ತದಲ್ಲವೇ’ ಎಂದು ಹೇಳಿ, ದೇಶಪ್ರೇಮವನ್ನು ಬಿತ್ತಿದ ಅಂತಹ ಲಕ್ಷಾಂತರ ದೇಶಪ್ರೇಮಿಗಳೊಂದಿಗೆ ಇಂದು ವಿಚಾರವಂತರೆಲ್ಲರೂ ಕಾಶ್ಮೀರದ ಸಮಸ್ಯೆ ಬಗೆಹರಿಯುವುದರ ಪ್ರತೀಕ್ಷೆಯಲ್ಲಿದ್ದಾರೆ.
ಪರಕೀಯರ ಆಳ್ವಿಕೆಯಿಂದ ಭಾರತ ಸ್ವತಂತ್ರವಾಗುವುದರೊಂದಿಗೆ ನಮ್ಮ ಬೆನ್ನೇರಿದ ಹಲವಾರು ದುರಂತಗಳಲ್ಲಿ ಇಂದಿಗೂ ನಮ್ಮನ್ನು ಪ್ರಮುಖವಾಗಿ ಕಾಡುತ್ತಿರುವುದು ಕಾಶ್ಮೀರದ ಸಮಸ್ಯೆ. ಕಾಶ್ಮೀರಿ ಪಂಡಿತರು ಜೀವ ಉಳಿಸಿಕೊಳ್ಳಲು, ಅನಿವಾರ್ಯವಾಗಿ ತಮ್ಮ ಜನ್ಮ ಸ್ಥಳವನ್ನು ತೊರೆದು ಬೇರೆಡೆ, ನಿರ್ಗತಿಕರಂತೆ ಹಂಗಾಮಿ ಟೆಂಟುಗಳಲ್ಲಿ ಕೆಲವು ದಶಕಗಳಿಂದಲೂ ಬದುಕುತ್ತಿರುವುದು ದೇಶಕ್ಕೇ ಅಂಟಿರುವ ಕಳಂಕ.
ಅವರು ಸ್ವಾಭಿಮಾನದಿಂದ ಮರಳಿ ಕಾಶ್ಮೀರದಲ್ಲಿ ಬಾಳುವುದು ಕನಸಿನಂತೆ ತೋರು ತ್ತಿದ್ದ ಹೊತ್ತಿನಲ್ಲಿ ಒಮ್ಮೆಗೇ ಆಶಾಭಾವವನ್ನು ತಂದಿರುವ ಮಾನ್ಯ ನರೇಂದ್ರ ಮೋದಿಯವರ ಸರಕಾರಕ್ಕೆ ಸಫಲತೆಯನ್ನು ಕೋರುವುದ ರೊಂದಿಗೇ ಕಾಶ್ಮೀರದ ಭವ್ಯ ಚರಿತ್ರೆ ಕಣ್ಣ ಮುಂದೆ ಕಂಗೊಳಿಸುತ್ತದೆ. ಈ ಪಂಡಿತರ ಪೂರ್ವಜರು ಕಾಶ್ಮೀರದಲ್ಲಿ ನೆಲೆಸಿರುವುದಕ್ಕೆ ಸಾವಿ ರಾರು ವರ್ಷಗಳ ಇತಿಹಾಸವಿದೆ. ಅವರಲ್ಲಿ ಪ್ರಸಿದ್ಧ ಸಂಸ್ಕೃತ ಕವಿಗಳ, ವೇದಾಂತಿಗಳ, ರಾಜ ಮಹಾರಾಜರ ಐತಿಹ್ಯ ಕಾಣುತ್ತದೆ. ಅಲ್ಲಿನ ರಾಜ್ಯಾಡಳಿತದ ಭಾಷೆ ಹಾಗೂ ನಾಡು ನುಡಿ ಸಂಸ್ಕೃತವಾಗಿತ್ತು.
ಉನ್ನತ ಜ್ಞಾನ ಪರಂಪರೆ: ಧರೆಯ ಮೇಲಿನ ಸ್ವರ್ಗದಂತೆ ತೋರುವ ಆ ನಾಡಿಗೆ ‘ಕಾಶ್ಮೀರ’ ವೆಂಬ ಹೆಸರು ಬಂದಿರುವುದು ಅಲ್ಲಿನ ಮೂಲ ಪುರುಷ, ‘ಕಶ್ಯಪ’ ಮಹರ್ಷಿಗಳಿಂದ. ಪ್ರಾಗೈತಿಹಾಸಿಕ ಕಾಲದಿಂದಲೂ ಪ್ರಸಿದ್ಧರಾದ ಕಶ್ಯಪರ ತಪಸ್ ಶಕ್ತಿಯೊಂದಿಗೆ, ಆದಿ ಶಂಕರಾ ಚಾರ್ಯರು ಸರ್ವಜ್ಞಪೀಠವನ್ನು ಅಲಂಕರಿಸಿದ ಶಕ್ತಿಪೀಠದ ಪ್ರಭಾವವೂ ಸೇರಿರುವ ಕಾಶ್ಮೀರ ನಮಗೆ ಪುಣ್ಯಭೂಮಿ. ಅಲ್ಲಿ ವಿಕಸಿತವಾದ ಕಾಶ್ಮೀರಿ ‘ಶೈವ ಸಿದ್ಧಾಂತ’ ಇಡೀ ದೇಶದಲ್ಲಿ ತನ್ನ ಪ್ರಭಾವ ಬೀರಿದೆ.
ಅಲ್ಲಿನ ರಾಜ ಮಹಾರಾಜರಿಗೆ ಸಾಹಿತ್ಯದಲ್ಲಿದ್ದ ವಿಶೇಷ ಆಸಕ್ತಿಯಿಂದಾಗಿ ಕಾಶ್ಮೀರದಲ್ಲಿಯೇ ಹುಟ್ಟಿ ಬೆಳೆದ ಕವಿಗಳೊಂದಿಗೆ, ಬೇರೆಡೆ ಯಿಂದ ಅಲ್ಲಿಗೆ ಹೋಗಿ ನೆಲೆಸಿದ ಕವಿಗಳ ದೊಡ್ಡ ಸಾಲು ಕಾಣಿಸುತ್ತದೆ. ಪ್ರಸಕ್ತ ಶಕೆ 5ನೇ ಶತಮಾನದಲ್ಲಿ ಸಂಸ್ಕ೫ಪತ ಸಾಹಿತ್ಯದ ಹೆಸರಾಂತ ಕವಿ ಮಾತೃಗುಪ್ತ ಕಾಶ್ಮೀರದ ರಾಜ ಸಿಂಹಾಸವನ್ನು ಅಲಂಕರಿಸಿದ್ದು ಕಾಣುತ್ತದೆ.
ಹಾಗೆಯೇ, ಕವಿ ಬಿಲ್ಹಣನಿಂದ ೧೨ನೇ ಶತಮಾನದಲ್ಲಿ ರಚನೆಯಾಗಿರುವ ಸಂಸ್ಕೃತದ ಪ್ರಸಿದ್ಧ ಐತಿಹಾಸಿಕ ಕೃತಿ ‘ರಾಜತರಂಗಿಣಿ’
ಹೇಳುವುದು ಕಾಶ್ಮೀರದ ಚರಿತ್ರೆಯನ್ನು. ಅದರಲ್ಲಿ, ನಾನ್ನೂರು ವರ್ಷಗಳ ಅವಧಿಯಲ್ಲಿ ಆಳಿದ 9 ರಾಜರ ಇತಿಹಾಸ, ಭೌಗೋಳಿಕ ವಿವರಣೆ ಹಾಗೂ ಅಲ್ಲಿ ನಡೆದ ಸಾಹಿತ್ಯ ಮತ್ತು ಶಾಸ್ತ್ರ ಗ್ರಂಥರಚನೆಗಳ ಉಲ್ಲೇಖವಿದೆ.
8ನೇ ಶತಮಾನದ ರತ್ನಾಕರ, 9ರಲ್ಲಿ ಶಿವಸ್ವಾಮಿ, ಶಂಭುಕವಿ, ವಲ್ಲಭದೇವ, ವಿಕಟನಿತಂಬ, 11ನೇ ಶತಮಾನದ ಕ್ಷೇಮೇಂದ್ರ, ಅವನ ಮಗ ಸೋಮೇಂದ್ರ, ಬಿಲ್ಹಣ, 12ರಲ್ಲಿದ್ದ ಶ್ರೀಹರ್ಷ ಮುಂತಾದ ಕವಿಗಳೊಂದಿಗೆ ಅಲಂಕಾರ ಶಾಸ್ತ್ರ ರಚಿಸಿದ ಕವಿಗಳ ಸಾಲೂ ಅಲ್ಲಿ ದೊಡ್ಡದಿದೆ. ಯಾವುದೇ ಭಾಷೆಯಲ್ಲಿ ಸಾಹಿತ್ಯ ರಚನೆ ಪೂರ್ಣ ವಿಕಸನ ಗೊಂಡಾಗ, ವಿಶ್ಲೇಷಿಸುವ ಅಲಂಕಾರ ಶಾಸ್ತ್ರವೂ ಬೆಳೆಯುವುದು ಕಾಣುತ್ತದೆ.
ಹಾಗೆಯೇ, ಸಂಸ್ಕೃತ ಸಾಹಿತ್ಯದಲ್ಲಿ ಅಲಂಕಾರ ಶಾಸ್ತ್ರ ರಚಿಸಿರುವ ಹೆಸರಾಂತ ಕವಿಗಳಲ್ಲಿ ಕಾಶ್ಮೀರದ ಕೊಡುಗೆ ಬಹಳ ದೊಡ್ಡದು. ಒಂಬತ್ತನೇ ಶತಮಾನದ ರುದ್ರಟನೊಂದಿಗೇ, ಅಲಂಕಾರ ಶಾಸ್ತ್ರಗ್ರಂಥಗಳಲ್ಲಿ ಮುಕುಟಪ್ರಾಯವಾದ ‘ಧ್ವನ್ಯಾಲೋಕ’ ರಚಿಸಿದ ಆನಂದ ವರ್ಧನ ಕಾಣುತ್ತಾನೆ. ಒಂದರ ಮೇಲೊಂದು ರಸ ಸಿದ್ಧಾಂತಗಳನ್ನು ಮಂಡಿಸಿದ ಉzಮ ಕಾಶ್ಮೀರಿ ವಿದ್ವಾಂಸರು 11ನೇ ಶತಮಾನದಲ್ಲಿ ಕಾಣುತ್ತಾರೆ. ಕುಂತಕನ ವಕ್ರೋಕ್ತಿ ಜೀವಿತ’, ಮಹಿಮಭಟ್ಟನ ವ್ಯಕ್ತಿವಿವೇಕ’, ಕ್ಷೇಮೇಂದ್ರನ ಸುವೃತ್ತ ತಿಲಕ’, ರುಯ್ಯಕನ ಅಲಂಕಾರ ಸರ್ವಸ್ವ’ಗಳೊಂದಿಗೆ, ಆನಂದವರ್ಧನನ ಧ್ವನ್ಯಾಲೋಕದ ಮೇಲೆ, ಅಭಿನವಗುಪ್ತ ಬರೆದ ವ್ಯಾಖ್ಯಾನವಾದ ‘ಧ್ವನ್ಯಾಲೋಕ ಲೋಚನ’ ಗಳು ಇಂದಿಗೂ ದೇಶ ವಿದೇಶಗಳಲ್ಲಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ತೀರದ ಆಕರಗಳಾಗಿವೆ.
ಒಂದನೇ ಶತಮಾನದಲ್ಲಿದ್ದ ಪ್ರಸಿದ್ಧ ಕವಿ ಹಾಗೂ ದಾರ್ಶನಿಕ ಅಶ್ವಘೋಷ ಬರೆದ ‘ಮಹಾಯಾನ ಶ್ರದ್ಧೋತ್ಪಾದ ಶಾಸ್ತ್ರ’, ಚೈನಾ ಭಾಷೆಗೆ ಅನುವಾದಗೊಂಡ ಮೊದಲ ಗ್ರಂಥ ಎಂದು ಹೇಳುತ್ತಾರೆ. ಅವನ ಎರಡು ಮಹಾಕಾವ್ಯಗಳಾದ, ‘ಬುದ್ಧ ಚರಿತ’ ಹಾಗೂ ‘ಸೌಂದರಾನಂದ’ ಮತ್ತು ‘ಶೌರೀಪುತ್ರ ಪ್ರಕರಣ’ವೆಂಬ ನಾಟಕಗಳು ಬಹಳ ಹಿಂದೆಯೇ ಚೀನಾ- ಟಿಬೆಟ್ಟುಗಳ ಭಾಷೆಗಳಲ್ಲಿ ಪ್ರಚಲಿತವಾಗಿದ್ದವು.
ವೇದಾಂತ ದರ್ಶನಗಳಲ್ಲಿ ಪ್ರಸಿದ್ಧರಾಗಿರುವ ಹಲವು ಅಧ್ಯಾತ್ಮ ಗುರುಗಳು ಕಾಶ್ಮೀರವನ್ನು ಸಂದರ್ಶಿಸಿದ ದಾಖಲೆ ಕಾಣುತ್ತದೆ. ಕಾಶ್ಮೀರದ
ಶಾರದಾಪೀಠದಲ್ಲಿ ಮಾತ್ರ ಉಳಿದಿದ್ದ ಬೋಧಾಯನರ ಗ್ರಂಥವನ್ನು ಕಾಣಲೆಂದೇ ಅಲ್ಲಿಗೆ ಹೋದ ಶ್ರೀವೈಷ್ಣವ ಮತದ ಪ್ರಸಿದ್ಧ ಆಚಾರ್ಯ ರಾಮಾನುಜರು ಅಲ್ಲಿನ ಪಂಡಿತರೊಂದಿಗೆ ನಡೆಸಿದ ವಿದ್ವತ್ ಚರ್ಚೆಗಳು ಅವರ ಗ್ರಂಥದಲ್ಲಿ ಬಹಳಷ್ಟು ಪ್ರಸ್ತಾಪಗೊಂಡಿವೆ.
ಜ್ಞಾನ ಸಂವಹನ: ವಿಶಾಲ ಭಾರತದ ತುಟ್ಟತುದಿಯಲ್ಲಿ ನಿಂತಿರುವ ದೇವಭೂಮಿ ಕಾಶ್ಮೀರ, ದೇಶದ ಇತರ ಭಾಗಗಳೊಂದಿಗೆ ಹೊಂದಿದ್ದ ನಿಕಟ ಸಂಬಂಧವನ್ನು ತಿಳಿಸುವ ಹಲವಾರು ಸಂಗತಿಗಳನ್ನು ಕಲ್ಹಣನ ‘ರಾಜತರಂಗಿಣಿ’ ತಿಳಿಸುತ್ತದೆ. ಈಗ ಕಾಣುವ ಬಹುತೇಕ ಭಗ್ನಾವ ಶೇಷವಾಗಿರುವ ದೇವಾಲಯಗಳಿಗಿಂತಲೂ ನೂರು ಪಟ್ಟು ಹೆಚ್ಚಿನ ಯಾತ್ರಾಸ್ಥಳಗಳಿದ್ದ ಕಾಶ್ಮೀರಕ್ಕೆ ದೇಶದ ಇತರ ಭಾಗಗಳಿಂದ ಜನರು ಸಾವಿರಾರು ಸಂಖ್ಯೆಯಲ್ಲಿ ಹೋಗುತ್ತಿದ್ದರು. ಅಲ್ಲಿ ಪುಣ್ಯತೀರ್ಥವಲ್ಲದ ಒಂದು ಪ್ರದೇಶವೂ ಇರಲಿಲ್ಲ ಎನ್ನುತ್ತಾನೆ ಕಲ್ಹಣ.
ಅವನು ನೀಡಿರುವ ಭೌಗೋಳಿಕ ವಿವರ ಹಾಗೂ ಘಟನೆಗೆ ಸಂಪೂರ್ಣ ಸಾಂಗತ್ಯ ಹೊಂದಿರುವ ಪ್ರವಾರಪುರ, ಪರಿಹಾಸಪುರ, ಜಯಪುರ, ದ್ವಾರಾವತಿಗಳೆಂಬ ಹಲವಾರು ಪಟ್ಟಣ ಇಂದಿಗೂ ಗುರುತಿಸಬಹುದು. ಇಂದಿನಂತಹ ವಿಮಾನ ಸೌಕರ್ಯಗಳಿಲ್ಲದ ಅಂದಿನ
ದಿನಗಳಲ್ಲಿ, ಮೂಲತಃ ವ್ಯಾಪಾರಕ್ಕಾಗಿ ವಿಶಾಲ ಭಾರತದ ಉದ್ದಗಲದಲ್ಲಿ ಸಂಚರಿಸುತ್ತಿದ್ದ ಸಾರ್ಥವಾಹಕರು ದೇಶದ ಯಾವುದೇ ಒಂದು ಭಾಗದಲ್ಲಿ ರಚನೆಯಾಗುತ್ತಿದ್ದ ಸಾಹಿತ್ಯ, ದರ್ಶನ, ಅಲಂಕಾರ ಶಾಸ್ತ್ರಗ್ರಂಥಗಳನ್ನು ಎಡೆ ತಲುಪಿಸುತ್ತಿದ್ದರು.
ಹೀಗಾಗಿ, ಕಾಶ್ಮೀರದಲ್ಲಿ ರಚನೆಯಾದ ಕಾವ್ಯಗಳಿಗೆ ಕೆಲವೇ ದಿನಗಳಲ್ಲಿ ತಮಿಳುನಾಡಿನ, ಬಂಗಾಳದ, ಕರ್ನಾಟಕದ ಸಿದ್ಧವಾಗುತ್ತಿದ್ದ ವಿಮರ್ಶೆಗಳು ಹಾಗೂ ಶಾಸ್ತ್ರಗ್ರಂಥಗಳಿಗೆ ನಡೆಯುತ್ತಿದ್ದ ಖಂಡನ ಮಂಡನಗಳೂ ವ್ಯಾಪಕವಾಗಿ ಸಂವಹನಗೊಳ್ಳುತ್ತಿದ್ದವು. ಸಾರ್ಥವಾ ಹಕರೊಂದಿಗೆ ಸಂಚರಿಸುತ್ತಿದ್ದ ಕವಿಗಳು, ಯಾತ್ರಿಕರು, ಪಂಡಿತರು ತಮ್ಮ ವಿಚಾರಗಳನ್ನು ವಿವಿಧ ಪ್ರದೇಶಗಳಲ್ಲಿ ಹರಡುತ್ತಿದ್ದರು. ಹೀಗೆ, ಕಾಶ್ಮೀರದಿಂದ ಕೆಲವು ಶೈವಾಚಾರ್ಯರು ಕರ್ನಾಟಕಕ್ಕೆ ಬಂದು ನೆಲೆನಿಂತದ್ದು ಕಾಣುತ್ತದೆ.
ಶೈವ ದರ್ಶನ ಹಾಗೂ ಕರ್ನಾಟಕ: ನಮ್ಮ ದೇಶದಲ್ಲಿ ವಿಕಸಿತವಾದ ಶೈವ ದರ್ಶನಗಳಲ್ಲಿ, ‘ಕಾಶ್ಮೀರಿ ಶೈವ ದರ್ಶನ’ ಪ್ರಮುಖವಾದುದು. ಕಲಿಯುಗದ ಪ್ರಾರಂಭದಲ್ಲಿ ದೂರ್ವಾಸ ಮುನಿಗಳಿಗೆ ಪರಶಿವ ಪ್ರತ್ಯಕ್ಷನಾಗಿ ಶೈವಾಗಮಗಳ ಬೋಧನೆ ಮಾಡಿದ ಎಂದು, ಕಾಶ್ಮೀರಿ ಶೈವಪಂಥದ ಪ್ರಮುಖ ಆಚಾರ್ಯ ಸೋಮಾನಂದರು ಹೇಳುತ್ತಾರೆ. ಅದರಲ್ಲಿ, ಪಾಶುಪತ, ಲಕುಲೀಶ, ಕಾಪಾಲಿಕ, ಕಾಳಾಮುಖ ಎಂಬ ಪಂಥಗಳಿವೆ.
ಬಹುಕಾಲದಿಂದಲೂ ಕಾಶ್ಮೀರದಲ್ಲಿ ಆಚರಣೆಯಲ್ಲಿದ್ದ ವಿಶಿಷ್ಟವಾದ ಶೈವ ದರ್ಶನವನ್ನು ಸೈದ್ಧಾಂತಿಕ ರೂಪದಲ್ಲಿ ಗ್ರಂಥರೂಪಕ್ಕೆ ತಂದವ ರಲ್ಲಿ ಕವಿ, ಆಲಂಕಾರಿಕ ಹಾಗೂ ದಾರ್ಶನಿಕನಾಗಿದ್ದ ಅಭಿನವಗುಪ್ತ ಪ್ರಮುಖನಾಗಿzನೆ. ಶೈವಾ ಚಾರ್ಯನೆಂಬ ಗೌರವ ಪಡೆದ ಅಭಿನವ ಗುಪ್ತ ರಚಿಸಿದ ಗ್ರಂಥಗಳು ಹಾಗೂ ಅವನ ಶಿಷ್ಯರಿಂದ ದೂರ ದೂರದವರೆಗೂ ಕಾಶ್ಮೀರಿ ಶೈವ ದರ್ಶನ ಹರಡಿತು. ಹಾಗೆ ಕರ್ನಾಟಕಕ್ಕೆ ಬಂದ ಲಕುಲೀಶ, ಪಾಶುಪತ ಪಂಥದ ಆಚಾರ್ಯರು, ಇಟಗಿಯಲ್ಲಿರುವ ಮಹಾದೇವ ದೇವಾ ಲಯದಂತಹ (12.ಶ.) ಪ್ರಮುಖ ದೇವಾ ಲಯಗಳನ್ನು ಕಟ್ಟುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ವೀರಶೈವ ಧರ್ಮದ ಬಸವದೇವ ಗುರು ಕಾಳಾಮುಖ ಆಚಾರ್ಯರಿಂದ ದೀಕ್ಷೆ ಪಡೆದಿದ್ದರು ಎಂಬ ಐತಿಹ್ಯವೂ ಕಾಣುತ್ತದೆ. ಪ್ರಸಕ್ತ ಶಕೆಯ ಪ್ರಾರಂಭ ಕಾಲದಿಂದಲೂ ಬೌದ್ಧ ಧರ್ಮದೊಂದಿಗೆ, ಗ್ರೀಕ್, ಚೈನೀಸ್ ಹಾಗೂ ಮಧ್ಯ ಏಷ್ಯಾಗಳೊಂದಿಗೆ ಸಂಪರ್ಕ ಹೊಂದಿದ್ದರೂ ತನ್ನ ತನವನ್ನು ಉಳಿಸಿಕೊಂಡಿದ್ದ, ಕಾಶ್ಮೀರ ೧೪ ನೇ ಶತಮಾನದಲ್ಲಿ ಸುಲ್ತಾನರ ಆಳ್ವಿಕೆಗೆ ಸಿಲುಕಿತು.
ಅಲ್ಲಿಂದ ಅವನತಿಯ ಹಾದಿಯನ್ನು ಹಿಡಿದ ಕಾಶ್ಮೀರದ ಬದುಕು ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ, ದೇಶದ ಮುಖ್ಯ ಧಾರೆಯಿಂದ ದೂರ ಸರಿಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಜಾರಿಯಾದ, ಕಾಶ್ಮೀರವನ್ನೇ ಪ್ರತ್ಯೇಕವಾಗಿ ಕಾಣುವ ಶಾಸನಗಳು, ಪರಿಸ್ಥಿತಿ ಯಲ್ಲಿ ಸುಧಾರಣೆ ತರುವ ಬದಲಾಗಿ ಮತ್ತಷ್ಟು ಹದಗೆಡಿಸಿವೆ. ಹೊರಗಿನ ಆಕ್ರಮಣವನ್ನು ತಡೆಯಬಲ್ಲ ಕೋಟೆಯಂತಿರುವ ಭಾರತದ ಮುಕುಟ, ಕಾಶ್ಮೀರವನ್ನು ಪುನಃ ಮುಖ್ಯಧಾರೆಗೆ ತರುವ ಪ್ರಯತ್ನ ಇಂದು ಸಮರೋಪಾದಿಯಲ್ಲಿ ನಡೆಯಬೇಕಾಗಿದೆ.
ಒಂದೊಮ್ಮೆ, ಈ ಕೋಟೆಯನ್ನು ನಾವು ಕಳೆದುಕೊಂಡಲ್ಲಿ, ಆಕ್ರಮಣಕಾರಿಗಳು ಅಲ್ಲಿಯೇ ನಿಲ್ಲುವುದಿಲ್ಲ ಎನ್ನುವುದನ್ನೂ ಗಂಭೀರವಾಗಿ
ಪರಿಗಣಿಸಬೇಕಾಗುತ್ತದೆ. ಈ ದಿಸೆಯಲ್ಲಿ, ಇಂದು ನಮ್ಮ ಸರಕಾರ ತೆಗೆದುಕೊಳ್ಳುತ್ತಿರುವ ದಿಟ್ಟ ಹೆಜ್ಜೆಗಳು ಸ್ವಾಗತಾರ್ಹ.