Saturday, 23rd November 2024

ಕೌದಿ ಬರೀ ಬಟ್ಟೆತುಂಡಲ್ಲ, ಭಾವನೆಗಳನ್ನು ಬೆಸೆದ ಕಂಬಳಿ

ತಿಳಿರು ತೋರಣ

srivathsajoshi@yahoo.com

ಗೌರವಾನ್ವಿತ ಜನರಿಗೆ ಗಿಫ್ಟ್ ಕೊಡಬೇಕಿದ್ರೆ ನಾನು ಹೂವುಹಣ್ಣು ಬೆಳ್ಳಿಬಂಗಾರ ಎಲ್ಲ ಕೊಡಂಗಿಲ್ಲ, ಯಾವಾಗ್ಲೂ ಹೊಸ ದೊಂದು ಕೌದಿನೇ ಕೊಡ್ತೀನಿ’ ಅಂದ್ರಲ್ಲ ಅದೂ ನಿಜವೇ. ಮೂರು ವರ್ಷಗಳ ಹಿಂದೆ 2019ರಲ್ಲಿ ಸುಧಾ ಮೂರ್ತಿ ಒಮ್ಮೆ ‘ಕೌನ್ ಬನೇಗಾ ಕರೋಡ್‌ಪತಿ’ ಸರಣಿಯ ಒಂದು ಎಪಿಸೋಡ್‌ನಲ್ಲಿ ಭಾಗವಹಿಸಿ ದವರು ರೆಕಾರ್ಡಿಂಗ್ ದಿನ ಅಮಿತಾಭ್ ಬಚ್ಚನ್‌ಗೆ ಕೌದಿ ಮತ್ತು ಪುಸ್ತಕ ಉಡುಗೊರೆ ಕೊಟ್ಟದ್ದು ಸುದ್ದಿಯಾಗಿತ್ತು.

‘ಅದರ ಹಿಂದೊಂದು ಮನಮಿಡಿಯುವ ಕಥೆ ಇದೆ…’ ಅಂತ ನಾವು ಕೆಲವು ವಸ್ತುಗಳ ಬಗ್ಗೆ, ವಿಷಯಗಳ ಬಗ್ಗೆ, ಸಂಗತಿಗಳ ಬಗ್ಗೆ ಆಗಾಗ ಹೇಳುವುದಿದೆ. ಆ ಕಥೆಗಳು ನಿಜವಾಗಿಯೂ ಮನ ಮಿಡಿಯುವಂತೆಯೇ ಇರುತ್ತವೆ. ಮಾನವಾಸಕ್ತಿಯ ಕಥಾನಕ ಅಥವಾ ಹ್ಯೂಮನ್ ಇಂಟೆರೆಸ್ಟ್ ಸ್ಟೋರಿ ಎಂದು ಅವು ಕರೆಯಲ್ಪಡುತ್ತವೆ. ಎರಡು ತಿಂಗಳ ಹಿಂದೆ ಧಾರವಾಡಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸುಧಾ ಮೂರ್ತಿಯವರು ಒಂದು ರೇಷ್ಮೆ ಸೀರೆ, ವಿಶೇಷವಾದ ಒಂದು ಕೌದಿ, ಮತ್ತು ಆ ಕೌದಿಗೆ ಸಂಬಂಧಿಸಿದಂತೆ ಅವರೇ ಬರೆದ ಎರಡು ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರಷ್ಟೆ? ಆ ದೃಶ್ಯ ಮತ್ತು ತದ ನಂತರ ಮಾಧ್ಯಮದವರೊಡನೆ ಸುಧಾ ಮೂರ್ತಿ ಮಾತುಗಳಿದ್ದ ಒಂದು ವಿಡಿಯೊಕ್ಲಿಪ್ ವಾಟ್ಸ್ಯಾಪ್‌ನಲ್ಲಿ ಹರಿದಾಡಿತ್ತು. ನಮ್ಮೆಲ್ಲರನ್ನೂ ಭಾವುಕರನ್ನಾಗಿಸಿತ್ತು.

ರಾಷ್ಟ್ರಪತಿಗೆ ಉಡುಗೊರೆಯಾಗಿ ಕೊಟ್ಟ ಕೌದಿಯ ಹಿಂದೆ ಕೂಡ ಒಂದು ಮನಮಿಡಿಯುವ ಕಥೆ ಇದೆ. ಅದನ್ನು ಸ್ವತಃ ಸುಧಾ
ಮೂರ್ತಿಯವರ ಮಾತುಗಳಲ್ಲೇ ತಿಳಿದುಕೊಳ್ಳುವುದಾದರೆ- ‘ರಾಷ್ಟ್ರಪತಿಯವರಿಗೆ ನಾನೊಂದು ಕೌದಿ ಕೊಟ್ಟೀನಿ. ಹ್ಯಾಂಡ್
ಸ್ಟಿಚ್ಡ್ ಕೌದಿ. ಕೌದಿ ಅಂದ್ರೆ ಗೊತ್ತಾತಲ್ಲ ನಿಮ್ಗೆ? ಅದು ಬಹಳ ವಿಶೇಷವಾದ ಕೌದಿ. ಅದರ ಜೊತೆ ಒಂದು ಪುಸ್ತಕ ಕೊಟ್ಟೆ ಆ
ಕೌದಿಯ ಬಗ್ಗೆ. ಅದು ಇಂಗ್ಲಿಷ್‌ನಲ್ಲಿ ತ್ರೀ ಥೌಸಂಡ್ ಸ್ಟಿಚಸ್ ಅಂತ ಬರೆದಿರೋದು. ಹಿಂದೀಯಲ್ಲಿ ತೀನ್ ಹಜಾರ್ ಟಾಕೇ ಅಂತ. ಎರಡನ್ನೂ ಕೊಟ್ಟಿದ್ದೇನೆ. ಅದನ್ನು ಬರೆದವ್ಳು ನಾನೇ ಇದ್ದೀನಿ.

ಅಂದರೆ… ನಾನು ರಾಯಚೂರು ಜಿಲ್ಲೆಯಲ್ಲಿ ದೇವದಾಸಿಗಳನ್ನು, ಅವರ ಜೊತೆ ಹದಿನೇಳು-ಹದಿನೆಂಟು ವರ್ಷ ಕೆಲ್ಸ ಮಾಡಿ, ಅವರಲ್ಲಿ ಮೂರು ಸಾವಿರ ಜನರನ್ನು ಸನ್ಮಾರ್ಗಕ್ಕೆ ತಂದು ಜೀವನ ಮಾಡ್ಸೊಕೆ ಬಹಳ ಕಷ್ಟಪಟ್ಟೆ. ಹದಿನೆಂಟು ವರ್ಷ ಹಿಡೀತು ನನಗೆ. ಹದಿನೆಂಟು ವರ್ಷದಲ್ಲಿ ಮೂರು ಸಾವಿರ ಜನರು ಆ ದೇವದಾಸಿ ವೃತ್ತಿಯನ್ನು ಬಿಟ್ಟು ತಮ್ಮ ಸಾಮಾನ್ಯ ಜೀವನಕ್ಕೆ ಬಂದ್ರು. ಅವರು ಒಂದು ಸಭೆಯಲ್ಲಿ ನನಗೆ ಹೇಳಿದ್ದರು- ಅಕ್ಕಾ, ನೀನು ನಮಗೆ ಭಾಳ ಮಾಡಿದ್ದೀ.

ನಾವು ನಿನಗೇನು ಕೊಡ್ಬೇಕೆಂದು ತಿಳಿಯುವಂಗಿಲ್ಲ. ನಿನಗೆ ನಾವು ಒಂದು ಕೌದಿ ಹಚ್ಚಿಕೊಡ್ತೀವಿ. ಅದರೊಳಗೆ ಮೂರು ಸಾವಿರ
ಹೊಲಿಗೆ ಇರ್ತಾವ. ಒಂದೊಂದು ಹೊಲಿಗೆ ಅಂದ್ರ ಒಬ್ಬೊಬ್ಬರ ಕಡೆಯಿಂದ ನಾವು ಹಾಕ್ಸೀವಿ. ಅದಕ್ಕ ಅದು ಚಳಿಗಾಲ್ದಾಗ ಬೆಚ್ಚಗೆ, ಮತ್ತು ಬ್ಯಾಸಿಗೆ ಒಳಗ ಅದು ತಣ್ಣಗ ಕೊಡ್ತದ. ಇದು ನಮ್ಮ ಪ್ರೀತಿ. ಈ ಕೌದಿ ನೋಡ್ದಾಗ ನೀನು ನಮ್ಮೆಲ್ಲರ ಸಲುವಾಗಿ ಎಷ್ಟು ಕಷ್ಟಪಟ್ಟಿದ್ದಿ ಅಂತ ನಮ್ಗ ಗೊತ್ತಾಗ್ತದ… ಎನ್ನುತ್ತ ಆ ಹೆಂಗಸರೆಲ್ಲ ನನಗೊಂದು ಕೌದಿ ಮಾಡ್ಕೊಟ್ಟಿದ್ರು.

ಅದನ್ನು ನೋಡಿ ನನಗೆ ಕಣ್ಣೊಳಗೆ ನೀರು ಬಂತು. ಯಾಕಂದ್ರೆ ಬಂಗಾರ ಬೆಳ್ಳಿ-ಗಿಳ್ಳಿ ಎಲ್ಲಾರೂ ಕೊಡ್ತಾರ. ಬಡವ್ರು ನನಗೆ ಒಬ್ಬೊಬ್ಬ ದೇವದಾಸಿ ಒಂದೊಂದು ಹೊಲಿಗೆ ಹಾಕ್ಯಾಳ ಅದರೊಳಗೆ. ಆಮೇಲೆ ಅದನ್ನು ನೋಡಿದ್ಮೇಲೆ ನಾನೇನ್ ಹೇಳಿದೆ ಹಿಂಗ್ ಮಾಡಮ್ಮಾ ನಾನು ದುಡ್ಡು ಕೊಡ್ತೀನಿ ಛಲೋ ಬಟ್ಟೆ ತಗೊಳ್ರಿ, ಛಂದನೆ ಕೌದಿ ಹೊಲೀರಿ, ಮೂರು ಸಾವಿರಕ್ಕಿಂತ ಹೆಚ್ಚು ಸ್ಟಿಚ್ ಇದ್ರೂ ನಡೀತಾವ. ನೀವೆಲ್ಲ ಕೌದಿ ಮಾಡ್ರಿ ಅದಕ್ಕೆ ನಾ ಸಹಾಯ ಮಾಡ್ತೀನಿ.

ಅವರ ಕಡೆಯಿಂದ ಅದು ಪ್ರತಿ ವರ್ಷ, ಆರಾರು ತಿಂಗಳಿಗೊಮ್ಮೆ ಕೌದಿ ಮಾಡಿಸ್ತೀನಿ. ಡಿಮ್ಯಾಂಡ್ ಇದ್ರಂತೂ ಪ್ರತಿ ತಿಂಗ್ಳಾ ಮಾಡಿಸ್ತೀನಿ. ಯಾರಿಗಾದ್ರೂ ಏನಾದ್ರೂ ಗೌರವಾನ್ವಿತ ಜನರಿಗೆ ಗಿಫ್ಟ್ ಕೊಡಬೇಕಿದ್ರೆ ನಾನು ಹೂ ಕೊಡಂಗಿಲ್ಲ ಸ್ವೀಟ್ ಕೊಡಂಗಿಲ್ಲ ಬಂಗಾರ ಕೊಡಂಗಿಲ್ಲ ಬೆಳ್ಳಿ ಕೊಡಂಗಿಲ್ಲ, ಆ ಕೌದಿ ಕೊಡ್ತೀನಿ! ಆ ಕೌದಿಯಿಂದ ಆ ಹೆಣ್ಮಕ್ಕಳ ಜೀವನ ಆಗ್ತದೆ. ಆ ಕೌದಿ ಕೇವಲ ಒಂದು ಬಟ್ಟೆಯಲ್ಲ. ಅದರ ಹಿಂದಿರುವ ಭಾವನೆಗಳು… ಅದರ ಹಿಂದಿರುವ ಅವರ ಕಷ್ಟ… ಅವರ ದುಡಿತ ಮತ್ತು ಸನ್ಮಾರ್ಗಕ್ಕೆ ಬಂದ್ಮೇಲೆ ಅವರು ಹ್ಯಾಗಿರ್ಬೇಕು ಎಂದು ಅವರು ಕಲ್ತಿರೋ ಪಾಠ ಇದೆ.

ಅದು ಬರೀ ಒಂದು ಕೌದಿ ಬರೀ ಒಂದು ಬಟ್ಟೆಯತುಂಡಲ್ಲ. ಅದಕ್ಕೇ ನಾನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಒಂದು ಕೌದಿ, ಅದನ್ನು ಯಾಕೆ ನಾನು ಈಥರ ಕೌದಿ ಕೊಟ್ಟೆ ಅನ್ನೋದ್ರ ಮೇಲೆ ಒಂದು ಪುಸ್ತಕ ತ್ರೀ ಥೌಸಂಡ್ ಸ್ಟಿಚಸ್ ಅಥವಾ ತೀನ್ ಹಜಾರ್ ಟಾಕೇ ಅಂತ ಅದು, ಮತ್ತು ನಮ್ಮ ಕರ್ನಾಟಕಕ್ಕೆ ಬಂದಿದ್ದಾರೆ ನಮ್ಮ ಕರ್ನಾಟಕದವ್ರ ಗುಣ ಯಾವಾಗ್ಲೂ ವೈಶಾಲ್ಯ, ದೊಡ್ಡದು, ಅದಕ್ಕೋಸ್ಕರ ಒಂದು ರೇಷ್ಮೆ ಸೀರೆ ಕೊಟ್ಟೆ. ವೇದಿಕೆಯಲ್ಲಿದ್ದ ಉಳಿದವರೆಲ್ಲರಿಗೂ ಕೌದಿ ಕೊಟ್ಟಿದ್ದೇನೆ…’ ಇದಿಷ್ಟನ್ನು ಹೇಳುವಾಗ ಅವರ ಮುಖದ ಮೇಲಿನ ಮಂದಹಾಸ, ಸಂತಸ, ಧನ್ಯತೆ ವರ್ಣಿಸಲದಳ.

ಸುಧಾ ಮೂರ್ತಿ ಅಂದರೆ ಹಾಗೆಯೇ. ಹೆಸರಿಗೆ ತಕ್ಕಂತೆ ಇರುವವರು. ಬಹುಶಃ ಅವರ ದೇಹದಲ್ಲಿ ಹರಿಯೋದು ರಕ್ತವಲ್ಲ ಸುಧೆ ಯೇ ಇರಬೇಕು ಎಂದು ಕೆಲವೊಮ್ಮೆ ನನಗನಿಸುವುದುಂಟು. ಧಾರವಾಡದಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಇನ್‌ಫಾರ್ಮೇ ಷನ್ ಟೆಕ್ನಾಲಜಿ ಕ್ಯಾಂಪಸ್‌ನ ಉದ್ಘಾಟನಾ ಸಮಾರಂಭದ ಅದೇ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೂ, ಧಾರವಾಡದ ಸಂಸದ ಪ್ರಲ್ಹಾದ ಜೋಶಿಯವರಿಗೂ ಸುಧಾ ಮೂರ್ತಿಯವರು ಕೌದಿ ಮತ್ತು ಪುಸ್ತಕ ಉಡುಗೊರೆ ಯಾಗಿ ಕೊಟ್ಟಿದ್ದಾರೆ.

‘ಗೌರವಾನ್ವಿತ ಜನರಿಗೆ ಗಿಫ್ಟ್ ಕೊಡ ಬೇಕಿದ್ರೆ ನಾನು ಹೂವುಹಣ್ಣು ಬೆಳ್ಳಿಬಂಗಾರ ಎಲ್ಲ ಕೊಡಂಗಿಲ್ಲ, ಯಾವಾಗ್ಲೂ ಹೊಸದೊಂದು ಕೌದಿನೇ ಕೊಡ್ತೀನಿ’ ಅಂದ್ರಲ್ಲ ಅದೂ ನಿಜವೇ. ಮೂರು ವರ್ಷಗಳ ಹಿಂದೆ 2019ರಲ್ಲಿ ಸುಧಾ ಮೂರ್ತಿ ಒಮ್ಮೆ ‘ಕೌನ್ ಬನೇಗಾ ಕರೋಡ್‌ಪತಿ’ ಸರಣಿಯ ಒಂದು ಎಪಿಸೋಡ್‌ನಲ್ಲಿ ಭಾಗವಹಿಸಿದವರು ರೆಕಾರ್ಡಿಂಗ್ ದಿನ ಅಮಿತಾಭ್ ಬಚ್ಚನ್‌ಗೆ ಕೌದಿ ಮತ್ತು ಪುಸ್ತಕ ಉಡುಗೊರೆ ಕೊಟ್ಟದ್ದು ಸುದ್ದಿಯಾಗಿತ್ತು. ಆಗಲೂ ಅವರು ಕೌದಿಯ ಹಿಂದಿನ ‘ಮನಮಿಡಿಯುವ ಕಥೆ’ಯನ್ನು ಅಮಿತಾಭ್‌ಗಷ್ಟೇ ಹೇಳಿದ್ದರೋ ಏನೋ.

‘ಕೌದಿ ಕೇವಲ ಒಂದು ಬಟ್ಟೆಯಲ್ಲ. ಅದರ ಹಿಂದಿರುವ ಭಾವನೆಗಳು… ದೇವದಾಸಿಯರ ದುಡಿಮೆ… ಕಷ್ಟದ ಜೀವನ…
ಕಲಿತಿರುವ ಪಾಠಗಳು…’ ನಿಜಕ್ಕೂ ಹೃದಯಸ್ಪರ್ಶಿ ಮಾತು. ಕೌದಿಯನ್ನು ಉಡುಗೊರೆಯಾಗಿ ಪಡೆದವರಿಗೆ ಬಿಡಿ, ಸುದ್ದಿಯನ್ನು ಕೇಳಿದ ಯಾರಿಗೇ ಆದರೂ ಗಂಟಲು ಉಬ್ಬಿಬರುವಂಥ ಸನ್ನಿವೇಶವೇ. ಕೌದಿಗಳ ಬಗ್ಗೆ ಇಂತಹದೇ ಒಂದು ಮನಮಿಡಿಯುವ
ಕಥಾನಕವನ್ನು ನಾನು ತಿಳಿದುಕೊಂಡದ್ದು ಹತ್ತು ವರ್ಷಗಳ ಹಿಂದೆ ಅಮೆರಿಕನ್ನಡಿತಿ ಸ್ನೇಹಿತೆ ಸವಿತಾ ರವಿಶಂಕರ್ ಅವರಿಂದ.

‘ಮಗಳು ಸಿಂಧು ದಕ್ಷಿಣ ಆಫ್ರಿಕಾಕ್ಕೆ ರಿಸರ್ಚ್ ವರ್ಕ್‌ಗೋಸ್ಕರ ಹೇಗೂ ಹೋಗುವವಳಿದ್ದಳು. ಅವಳ ಲಗೇಜ್‌ನೊಂದಿಗೆ ಸುಮಾರು ೬೦ಕ್ಕೂ ಹೆಚ್ಚು ಕೌದಿಗಳನ್ನು ಕಳುಹಿಸಿದೆವು. ‘ಪ್ರೊಜೆಕ್ಟ್ ಲೈನಸ್’ನ ನಮ್ಮ ನಾರ್ತ್ ಕೆರೊಲಿನಾ ಶಾಖೆಯಲ್ಲಿ ಸಂಗ್ರಹವಾದ
ಕೌದಿಗಳು ಅವು. ಉಣ್ಣೆಯಿಂದ ಕೈಮಗ್ಗದಲ್ಲಿ ತಯಾರಿಸಿದ ಬ್ಲಾಂಕೆಟ್‌ಗಳೂ ಇದ್ದವು. ಮುಖ್ಯವಾಗಿ ಕ್ರೋಷೆ ರೀತಿಯಲ್ಲಿ ಕೈಯಿಂದ ಹೆಣೆದು ಮಾಡಿದ ಕೌದಿಗಳು. ಸಿಂಧು ಅವುಗಳನ್ನು ಆಫ್ರಿಕಾದಲ್ಲಿ ತನ್ನ ಸಂಶೋಧನಾ ಕ್ಷೇತ್ರದಲ್ಲಿರುವ ಎಚ್‌ಐವಿ ಪೀಡಿತ ಬಡ ಮಕ್ಕಳಿಗೆ ಹಂಚುತ್ತಾಳೆ.

ಅದೇ ರೀತಿ ಇನ್ನೊಂದಿಷ್ಟು ಕೌದಿಗಳನ್ನು ನಮ್ಮದೇ ಶಾಖೆಯಿಂದ ಹಾಂಡುರಾಸ್ ದೇಶದ ಅನಾಥಾಶ್ರಮಗಳ ಮಕ್ಕಳಿಗೂ ಕಳಿಸಿಕೊಟ್ಟಿದ್ದೇವೆ. ಪ್ರೊಜೆಕ್ಟ್ ಲೈನಸ್ ಎಂಬುದು ನಿಜಕ್ಕೂ ಒಂದು ಹೃದಯಸ್ಪರ್ಶಿ ಕಾನ್ಸೆಪ್ಟ್. ನೀವು ಅದರ ಬಗ್ಗೆ ಯಾವಾ ಗಾದ್ರೂ ಬರೆದು ಎಲ್ಲರಿಗೂ ಪರಿಚಯಿಸಬೇಕು…’ ಎಂದು ಸವಿತಾ ಒಮ್ಮೆ ನನ್ನೊಡನೆ ಉಭಯಕುಶಲೋಪರಿ ಮಾತನಾಡುತ್ತ ಹೇಳಿದ್ದರು.

ಸವಿತಾ ಮೂಲತಃ ಮೈಸೂರಿನವರು, ಈಗಿರುವುದು ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ. ಪತಿ ರವಿಶಂಕರ್ ಮತ್ತು ಇಬ್ಬರು ಹೆಣ್ಮಕ್ಕಳು ಸಿಂಧು-ಸೀಮಾ ಸೇರಿದ ಪುಟ್ಟ ಸಂಸಾರ. ವಿಶ್ವಜೀವನವೊಂದು ಪಾರವಿಲ್ಲದ ಸಿಂಧು ಎನ್ನುತ್ತ ಸೀಮಾತೀತವಾಗಿ ತನ್ನ ಕೈಲಾದಷ್ಟು ವಿಶ್ವಪ್ರಜೆಯಾಗಿ ಜೀವಿಸುವವರು ಸವಿತಾ. ದಸರಾ ಹಬ್ಬದವೇಳೆ ಮನೆತುಂಬ ಗೊಂಬೆಗಳನ್ನು ಕೂಡಿಸಿ ಭಾರತೀಯ ಸಂಸ್ಕೃತಿಯನ್ನು ಅಮೆರಿಕನ್ನರಿಗೆ ಪರಿಚಯಿಸುತ್ತಾರೆ; ಕ್ರಿಸ್ಮಸ್‌ನಲ್ಲಿ ಮನೆಯೊಳಗೆ ಅಷ್ಟು ದೊಡ್ಡ ಕ್ರಿಸ್ಮಸ್ ಟ್ರೀ ಇಟ್ಟು ಮನೆ ಹೊರಗೂ ವಿದ್ಯುದ್ದೀಪಗಳ ಅಲಂಕಾರ ಮಾಡಿ ಸಂಭ್ರಮಿಸುತ್ತಾರೆ. ಅವರಿಗೆ ಜುಲೈ ೪ ಮತ್ತು ಆಗಸ್ಟ್ 15 ಸಮಾನ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಗಳು.

ಅಮೆರಿಕದ ಜೀವನದಿಂದ ಕಲಿತದ್ದನ್ನು, ಗಳಿಸಿದ್ದನ್ನು ಸವಿತಾ ತವರೂರು ಮೈಸೂರಿನಲ್ಲಿ ಬೇರೆಬೇರೆ ಶಾಲೆಗಳ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾರೆ. ಕರ್ನಾಟಕದ ಐತಿಹಾಸಿಕ ವಿವರಗಳನ್ನು ಇಲ್ಲಿಯ ಮಕ್ಕಳಿಗೆ ಕಲಿಸುತ್ತಾರೆ, ಸ್ಮರಣಿಕೆಗಳನ್ನು ಉಡುಗೊರೆ ಕೊಡುತ್ತಾರೆ. ಅವರ ಇಂತಹ ರಚನಾತ್ಮಕ ಚಿಂತನೆ-ಚಟುವಟಿಕೆಗಳ ಬಗ್ಗೆಯೇ ಒಂದು ಲೇಖನ ಬರೆಯಬಹುದು. ಇರಲಿ, ಇಲ್ಲೀಗ
ನಾವು ಪ್ರೊಜೆಕ್ಟ್ ಲೈನಸ್ ವಿಚಾರ ತಿಳಿದುಕೊಳ್ಳೋಣ.

ಇದು ಸವಿತಾ ಅವರ ಕಲ್ಪನೆಯ ಕೂಸೇನಲ್ಲ; ಅವರು ಇದರಲ್ಲೊಬ್ಬ ಸಹಭಾಗಿ, ಸ್ವಯಂಸೇವಕಿ ಅಷ್ಟೇ. 1995 ಡಿಸೆಂಬರ್ 24, ಭಾನುವಾರ. ಕ್ರಿಸ್ಮಸ್ ಈವ್ ಸಡಗರದ ದಿನ. ಆವತ್ತು ‘ಪರೇಡ್’ (ಅಮೆರಿಕದಾದ್ಯಂತ ಭಾನುವಾರದ ವಾರ್ತಾಪತ್ರಿಕೆಗಳೊಂದಿಗೆ
ಉಚಿತವಾಗಿ ವಿತರಣೆಯಾಗುವ ಮ್ಯಾಗಜಿನ್) ಸಂಚಿಕೆ ಯಲ್ಲಿ ಜಾಯ್ ಟು ದ ವರ್ಲ್ಡ್ ಎಂಬ ತಲೆಬರಹದ ಒಂದು ವಿಶೇಷ  ಡಿಚಿತ್ರ ಪ್ರಕಟವಾಗಿತ್ತು. ಪುಲಿಟ್ಜರ್ ಪ್ರಶಸ್ತಿವಿಜೇತ ಫೋಟೊಜರ್ನಲಿಸ್ಟ್ ಎಡ್ಡಿ ಆಡಮ್ಸ್ ಎಂಬಾತ ಬರೆದ ಲೇಖನವದು.

ಅದರಲ್ಲಿ ಕ್ಯಾಲಿಫೋರ್ನಿಯಾದ ಲೌರಾ ಎಂಬ ಪುಟ್ಟ ಹುಡುಗಿಯೊಬ್ಬಳ ಕಥಾನಕ ಚಿತ್ರಿತವಾಗಿತ್ತು. ಬಡಕಲು ದೇಹದ, ಬೋಳು ತಲೆಯ, ಕೈಯಲ್ಲೊಂದು ಕೌದಿ ಹಿಡಿದುಕೊಂಡಿದ್ದ ಅವಳ ಚಿತ್ರ. ಲೌರಾ ಎರಡು ವರ್ಷದವಳಿದ್ದಾಗಿಂದ ಲ್ಯುಕೀಮಿಯಾ ರೋಗಬಾಧಿತೆ. ಕೆಮೊಥೆರಪಿಗಾಗಿ ಆಸ್ಪತ್ರೆಗೆ ಓಡಾಡುತ್ತಿದ್ದವಳು. ಪ್ರತಿಸಲ ಆಸ್ಪತ್ರೆಗೆ ಹೋಗುವಾಗಲೂ ತನ್ನ ನೆಚ್ಚಿನ ಕೌದಿ ಯನ್ನು ಜತೆಯಲ್ಲಿ ಒಯ್ಯುತ್ತಿದ್ದಳು. ಅದು ಅವಳಿಗೆ ನೋವು ಮರೆಸಿ ಉಲ್ಲಾಸ ತಂದುಕೊಡುತ್ತಿತ್ತು.

ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತಿತ್ತು. ಅವಳ ಕಾಯಿಲೆಯನ್ನು ಹದ್ದುಬಸ್ತಿನಲ್ಲಿಡುವುದರಲ್ಲಿ ಆ ಕೌದಿಯ ಪಾತ್ರವೂ ಪ್ರಮುಖ ವಾಗಿತ್ತು… ಅಂತೆಲ್ಲ ಮನಕಲಕುವ ಚಿತ್ರಣ ಆ ಲೇಖನದಲ್ಲಿತ್ತು. ಆಗಲೇ ಹೇಳಿದಂತೆ ಪರೇಡ್ ಮ್ಯಾಗಜಿನ್‌ಅನ್ನು ಕವರ್ -ಟು-ಕವರ್ ಓದುವ ಓದುಗರು ಅಮೆರಿಕದೆಲ್ಲೆಡೆ ಇದ್ದಾರೆ. ಕೊಲರಾಡೊ ಸಂಸ್ಥಾನದ ಡೆನ್ವರ್ ನಗರದ ಕರೆನ್ ಲೌಕ್ಸ್ ಎಂಬಾಕೆ
ಅಂತಹ ಒಬ್ಬ ಓದುಗಳು. ಆಕೆಯ ಮೇಲೆ ಆ ಲೇಖನ ಗಾಢ ಪರಿಣಾಮ ಬೀರಿತು.

ಲೌರಾಳ ಚಿತ್ರ, ಅವಳ ಕೈಲಿದ್ದ ಕೌದಿ, ಲೌರಾಗೆ ಅದರಿಂದಾದ ಉಪಯೋಗದ ವಿವರಗಳು ಕರೆನ್ ಮನಸ್ಸನ್ನು ಬಹಳವಾಗಿ ಕಾಡಿದವು. ಲೌರಾಳಿಗಾದರೋ ಸ್ವಂತದ ಕೌದಿ ಇತ್ತು, ಬೇರೆ ನತದೃಷ್ಟ ಮಕ್ಕಳ ಬಗ್ಗೆ ಕರೆನ್ ಯೋಚಿಸತೊಡಗಿದಳು. ಆಸ್ಪತ್ರೆ ಗಳಲ್ಲಿ ಅಂತಹ ಎಷ್ಟು ಎಳೆ ಕಂದಮ್ಮಗಳಿರುವುದಿಲ್ಲ! ರೋಗದ ಭಯಾನಕತೆಯನ್ನು ಮತ್ತಷ್ಟು ಹೆಚ್ಚಿಸುವ ಬಿಳಿ ಚಾದರ ಹೊದ್ದುಕೊಂಡಿರುವವರು! ಅವರ ಸ್ಥಿತಿಯನ್ನು ಊಹಿಸಿ ಕರೆನ್ ಮಮ್ಮಲಮರುಗಿದಳು.

ಅವಳು ಆಗಷ್ಟೇ ಉಣ್ಣೆಯಿಂದ ಕಂಬಳಿ ಹೆಣೆಯುವುದನ್ನು, ಬಟ್ಟೆ ತುಂಡುಗಳಿಂದ ಕೌದಿ ಹೊಲಿಯುವುದನ್ನೂ ಕಲಿತಿದ್ದಳು. ಹೊಸದಾಗಿ ನೇಯ್ದಿದ್ದ ಒಂದೆರಡು ಕೌದಿಗಳನ್ನು ತೆಗೆದುಕೊಂಡು ಆಕೆ ಡೆನ್ವರ್ ನ ಆಸ್ಪತ್ರೆಗೆ ಹೊರಟೇಬಿಟ್ಟಳು. ಅಲ್ಲಿನ ವೈದ್ಯರನ್ನು ಭೇಟಿಯಾಗಿ ನಿಮ್ಮಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಯಾರಾದರೂ ಬಡ ಮಕ್ಕಳಿದ್ದರೆ ಅವರಿಗೆ ಪ್ರೀತಿಯ ಉಡುಗೊರೆಯಾಗಿ ಇವುಗಳನ್ನು ತಂದಿದ್ದೇನೆ ಎಂದಳು. ಅವಳ ಔದಾರ್ಯವನ್ನು ಅರ್ಥಮಾಡಿಕೊಂಡ ವೈದ್ಯರು ಸಂತೋಷ ದಿಂದ ಆ ಕೌದಿಗಳನ್ನು ಸ್ವೀಕರಿಸಿ ಮಕ್ಕಳಿಗೆ ಕೊಟ್ಟರು. ಚಿಕಿತ್ಸೆಯಿಂದ ಬಾರದಿದ್ದ ಗೆಲುವು, ಉಲ್ಲಾಸ ಬಣ್ಣಬಣ್ಣದ ಕೌದಿಯಿಂದ ಬಂದಿತ್ತು ಆ ಮಕ್ಕಳ ಮುಖದಲ್ಲಿ! ಕರೆನ್ ಆವತ್ತೇ ಸಂಕಲ್ಪ ಮಾಡಿದಳು.

ರೋಗಪೀಡಿತ, ಅನಾಥ, ಪ್ರೀತಿವಂಚಿತ ಮಕ್ಕಳಿಗೆ ಬೆಚ್ಚಗಿನ ಕಂಬಳಿಗಳನ್ನು, ಕೌದಿಗಳನ್ನು ಉಚಿತವಾಗಿ ಒದಗಿಸುವ ಯೋಜನೆ ಯೊಂದನ್ನು ತಯಾರಿಸಿದಳು. ಪ್ರೊಜೆಕ್ಟ್ ಲೈನಸ್ ಎಂದು ಅದಕ್ಕೆ ಹೆಸರಿಟ್ಟಳು. ಅಂದಹಾಗೆ ‘ಲೈನಸ್’ ಎಂದರೆ ಚಾರ್ಲ್ಸ್ ಸ್ಕಲ್ಜ್‌ನ ಜಗದ್ವಿಖ್ಯಾತ ಪೀನಟ್ಸ್ ಕಾಮಿಕ್ ಸರಣಿಯ ಒಂದು ಕ್ಯಾರೆಕ್ಟರ್. ಆ ಕಾಮಿಕ್ ನಲ್ಲಿ ಮುಖ್ಯ ಪಾತ್ರವಾದ ಚಾರ್ಲಿ ಬ್ರೌನ್‌ನ ಚಡ್ಡಿ ದೋಸ್ತನೇ ಲೈನಸ್. ಬೆರಳು ಚೀಪುತ್ತಿರುವ ತುಂಟ ಹುಡುಗ. ಹೆಗಲ ಮೇಲೆ ಯಾವಾಗಲೂ ತನ್ನ ಪ್ರೀತಿಯ ತಿಳಿನೀಲಿ ಕೌದಿ ಹೊತ್ತುಕೊಂಡು ತಿರುಗುವವನು. ಅದೇ ಅವನ ಗುರುತು. ಕಂಬಳಿ ಮತ್ತು ಕೌದಿಗಳ ಬಟವಾಡೆಯ ಈ ಮಹಾ ಯೋಜನೆಗೆ ಲೈನಸ್ ಹೆಸರೇ ಅತಿ ಸೂಕ್ತವಾದುದು ಎಂದುಕೊಂಡಳು ಕರೆನ್.

ಸ್ವಾರಸ್ಯವೆಂದರೆ ಪೀನಟ್ಸ್ ಕಾಮಿಕ್ ಸೃಷ್ಟಿಕರ್ತ ಚಾರ್ಲ್ ಸ್ಕಲ್ಜ್‌ನಿಗೂ ಪ್ರೊಜೆಕ್ಟ್ ಲೈನಸ್ ಬಗ್ಗೆ ತಿಳಿಸಲಾಯ್ತು; ಅದನ್ನು ಕೇಳಿ ಆತನಿಗೆ ಅಪಾರ ಸಂತಸವಾಗಿತ್ತು. ಅದಾದ ಮೇಲೆ ಪ್ರೊಜೆಕ್ಟ್ ಲೈನಸ್ ಬಗ್ಗೆ ಅಮೆರಿಕದ ಪ್ರಮುಖ ಪತ್ರಿಕೆಗಳೆಲ್ಲ ಬರೆದವು. ಟೆಲಿವಿಷನ್‌ನಲ್ಲಿ ಕರೆನ್‌ಳ ಸಂದರ್ಶನ ಪ್ರಸಾರವಾಯಿತು. ಅಮೆರಿಕದ ಮೂಲೆಮೂಲೆಗಳಿಂದ ಹ್ಯಾಂಡ್‌ಮೇಡ್ ಬ್ಲಾಂಕೆಟ್‌ಗಳು, ಬಣ್ಣಬಣ್ಣದ ಕೌದಿ-ಕಂಬಳಿಗಳು ಕರೆನ್ ಮನೆಗೆ ಬಂದುಬೀಳತೊಡಗಿದವು.

ಪ್ರೊಜೆಕ್ಟ್ ಲೈನಸ್‌ನಲ್ಲಿ ತಾವೂ ಭಾಗಿಯಾಗುತ್ತೇವೆಂದು ಜನ ಮುಂದೆ ಬಂದರು. ಎಷ್ಟೋ ಮಂದಿ ತಮ್ಮ ದೈನಂದಿನ ಕೆಲಸ ಗಳೆಲ್ಲ ಮುಗಿದ ಮೇಲೆ ತಡರಾತ್ರಿಯಾದರೂ ಸರಿ, ಸ್ವಲ್ಪ ಹೊತ್ತು ಉಣ್ಣೆ ಹೆಣಿಗೆ ಮಾಡಿಯೇ ಮಲಗುವ ಪರಿಪಾಟ ಬೆಳೆಸಿ ಕೊಂಡರು. ವಾರಕ್ಕೋ ತಿಂಗಳಿಗೋ ಒಂದೆರಡಾದರೂ ಬ್ಲಾಂಕೆಟ್ ತಯಾರಿಸುವ ವೇಗವನ್ನು ಪಡೆದುಕೊಂಡರು. ಸಮಾನ ಮನಸ್ಕ ‘ಬ್ಲಾಂಕೆಟೀರ್ಸ್’ ಸ್ನೇಹಿತರಾದರು; ಹೆಣಿಗೆ, ಕ್ರೋಷೆ ಮತ್ತಿತರ ಕರಕೌಶಲಗಳ ಹೊಸ ಹೊಸ ಐಡಿಯಾಗಳನ್ನು
ವಿನಿಮಯ ಮಾಡಿಕೊಂಡರು.

ನಾಲ್ಕೈದು ವರ್ಷಗಳಲ್ಲೇ ಅಮೆರಿಕದ ಐವತ್ತೂ ಸಂಸ್ಥಾನಗಳಲ್ಲಿ ಪ್ರೊಜೆಕ್ಟ್ ಲೈನಸ್‌ನ ಸ್ಥಳೀಯ ಶಾಖೆಗಳು ತೆರೆದುಕೊಂಡವು. ಇಲ್ಲಿನಾಯ್ ಸಂಸ್ಥಾನದ ಬ್ಲೂಮಿಂಗ್‌ಟನ್ ಪಟ್ಟಣದಲ್ಲಿ ಪ್ರೊಜೆಕ್ಟ್ ಲೈನಸ್ ಹೆಡ್ ಕ್ವಾರ್ಟರ್ಸ್ ಸ್ಥಾಪನೆಯಾಯಿತು (ಅಲ್ಲಿಂದ ಅದು ಈಗ ಮಿಸ್ಸೌರಿ ಸಂಸ್ಥಾನದ ಬೆಲ್ಟನ್ ಪಟ್ಟಣಕ್ಕೆ ವರ್ಗಾವಣೆಯಾಗಿದೆ). ಸ್ವಯಂಸೇವಕರು ಪ್ರೀತಿಯಿಂದ ಹೆಣೆದುಕೊಟ್ಟ ಬ್ಲಾಂಕೆಟ್‌ಗಳನ್ನು, ಕೌದಿ-ಕಂಬಳಿಗಳನ್ನು ಸಂಗ್ರಹಿಸಿ ದೇಶವಿದೇಶಗಳ ಆಸ್ಪತ್ರೆಗಳಿಗೆ, ಅನಾಥಾಶ್ರಮಗಳಿಗೆ ವಿತರಿಸುವ ವ್ಯವಸ್ಥೆಯಾಯಿತು.

ಐಬಿಎಂ, ಲಾಕ್‌ಹೀಡ್‌ಮಾರ್ಟಿನ್, ಎಟಿಏಂಡ್‌ಟಿ, ಸ್ಟಾರ್‌ಬಕ್ಸ್ ಮುಂತಾದ ದೊಡ್ಡದೊಡ್ಡ ಕಂಪನಿಗಳೂ ಪ್ರಾಯೋಜಕತ್ವ ರೂಪದಲ್ಲಿ ನೆರವಾದವು. ಇದೀಗ ಸುಮಾರು ಮುನ್ನೂರಕ್ಕೂ ಹೆಚ್ಚಿನ ಶಾಖೆಗಳಿಂದ, ೮೦ ಸಾವಿರಕ್ಕೂ ಹೆಚ್ಚು ಸ್ವಯಂಸೇವಕ ರಿಂದ, ಒಟ್ಟು ೯೦ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಕೌದಿಗಳನ್ನು ಸಂಗ್ರಹಿಸಿ ವಿತರಿಸಲಾಗಿದೆ ಎನ್ನುತ್ತದೆ ಪ್ರೊಜೆಕ್ಟ್ ಲೈನಸ್‌ನ ವೆಬ್‌ಸೈಟು.

ಕೇವಲ ಒಂದು ಲೇಖನವು ಓದುಗಳೊಬ್ಬಳ ಮೇಲೆ ಇಷ್ಟು ಪರಿಣಾಮ ಬೀರಿ, ದೊಡ್ಡದೊಂದು ಅಭಿಯಾನಕ್ಕೇ ಕಾರಣವಾಯಿ ತೆಂದರೆ ನಿಜಕ್ಕೂ ಅದ್ಭುತ ಎನಿಸುವುದಿಲ್ಲವೇ? ‘ಜಾಯ್ ಟು ದ ವರ್ಲ್ಡ್’ ಎಂದು ಶೀರ್ಷಿಕೆ ಕೊಡುವಾಗ ಲೇಖನವು ಇಷ್ಟೊಂದು
ಸಂತಸವನ್ನು- ಕೌದಿಗಳನ್ನು ಹೊಲಿಯುವವರಿಗೂ ಹೊದ್ದುಕೊಳ್ಳುವವರಿಗೂ- ಉಂಟುಮಾಡುತ್ತದೆಂದು ಖಂಡಿತ ಕಲ್ಪನೆ ಇದ್ದಿರಲಿಕ್ಕಿಲ್ಲ. ಕಾಣದ ಕೈಗಳ ಕರುಣೆಯ ಕೊಡುಗೆ ಎಂದರೆ ಇದೇ ಇರಬೇಕು.

ಬ್ಲಾಂಕೆಟೀರ್ಸ್ ಸ್ವಯಂಸೇವಕರಿಗೆ ತಾವು ಹೆಣೆದ ಕಂಬಳಿ ಅಥವಾ ಕೌದಿ ಯಾವ ಮಗುವಿಗೆ ರಕ್ಷಣೆಯೊದಗಿಸುತ್ತದೆ, ಸಂಕಟದ ಕ್ಷಣಗಳನ್ನು ಮರೆಸಿ ಸಂತಸವನ್ನು ತರುತ್ತದೆ, ಎಂಬ ಕಲ್ಪನೆಯಿರುವುದಿಲ್ಲ. ಬೆಚ್ಚಗಿನ ಪ್ರೀತಿಯನ್ನು ಕೌದಿಯಲ್ಲಿ ಪಡೆದುಕೊಂಡ
ಮಗುವಿಗೆ ಅದನ್ನು ಹೆಣೆದು ತನಗೆ ಉಡುಗೊರೆ ಕೊಟ್ಟವರಾರು ಎಂದು ಗೊತ್ತಿರುವುದಿಲ್ಲ. ಇಲ್ಲಿ ಲಾಭ, ಕೀರ್ತಿಗಳ ಪ್ರಶ್ನೆಯೇ ಇಲ್ಲ. ಯಾರು ಎಷ್ಟು ದಾನ ಮಾಡಿದರು ಎಂಬ ಲೆಕ್ಕವಿಲ್ಲ, ತಾರತಮ್ಯವಿಲ್ಲ.

ಭಾವುಕವಾಗಿ ಹೇಳುವುದಾದರೆ, ಒಂದೊಂದು ಕೌದಿಯಲ್ಲೂ ಇರುವುದು ನೂಲಿನ ಎಳೆಗಳೇ ಅಲ್ಲ! ಕರುಣೆ, ಮಮತೆ, ಆರೈಕೆ, ಹಾರೈಕೆ ಮತ್ತು ಎಲ್ಲ ರೀತಿಯಲ್ಲಿಯೂ ನಿರ್ಮಲವಾದ ಕಳಕಳಿಯ ಭಾವನೆಯುಳ್ಳ ನವುರಾದ ಎಳೆಗಳು. ಪ್ಯಾರ್-ಕೇ-ಧಾಗೇ ಎಂದು ಹಿಂದೀಯಲ್ಲೊಂದು ಕಹಾವಟ್ ಇದೆಯಲ್ಲಾ ಅಂತಹ ನಿಸ್ವಾರ್ಥ ಪ್ರೀತಿಯ ಅಕ್ಕರೆಯ ಎಳೆಗಳು. ತುಂಡುತುಂಡು ಚಿಂದಿ ಬಟ್ಟೆಯ ಚೂರುಗಳನ್ನು ಉಪಯೋಗ ಇಲ್ಲದವೆಂದು ನಾವು ನಿಕೃಷ್ಟವಾಗಿ ಕಾಣುತ್ತೇವೆ. ಆ ಚಿಂದಿ ಚೂರುಗಳನ್ನು ಹೊಲಿದು ಜೋಡಿಸಿದಾಗಲೇ ಅಂದವಾದ ಕೌದಿ ಆಗುವುದು. ಆ ಜೋಡಣೆಯು ಮೇಲಿನ ರೀತಿಗಳಂತೆ ಉಪಯೋಗಕ್ಕೆ ಬಂದರಂತೂ ಅದರ ಸಾರ್ಥಕತೆ ಬೆಲೆಕಟ್ಟಲಾಗದ್ದು. ಸುಧಾ ಮೂರ್ತಿ ಹೇಳಿದ್ದು ಸರಿಯೇ ಇದೆ: ಕೌದಿ ಬರೀ ಬಟ್ಟೆತುಂಡಲ್ಲ, ಭಾವನೆಗಳನ್ನು ಬೆಸೆದ ಕಂಬಳಿ.

Read E-Paper click here