Thursday, 21st November 2024

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತವೇ …

ತಿಳಿರು ತೋರಣ

srivathsajoshi@yahoo.com

ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದೆದುರಿಗೆ ನಾನೀಗ ನಿಂತುಕೊಂಡಿದ್ದೇನೆ ಎನ್ನುವ ಅರಿವಿನ ಅನುಭೂತಿ ಆಗುವುದಿದೆ ಯಲ್ಲ, ಅದು ನಿಜವಾಗಿಯೂ ವರ್ಣಿಸಲಸದಳ. ಬಹುಶಃ ಅಯೋಧ್ಯಾ ಎಂಬ ಹೆಸರಿನ ವಿಶೇಷ ಶಕ್ತಿಯದು. ಸನಾತನ ಸಂಸ್ಕೃತಿಯನ್ನು ಆರಾಧಿಸುವ ಭಾರತೀಯರೆಲ್ಲರ ಮನಸ್ಸು-ಹೃದಯಗಳನ್ನು ಉದ್ದೀಪಿಸಬಲ್ಲ, ಮನಸ್ಸಿಗೆ ಮುದನೀಡಬಲ್ಲ ಅನನ್ಯ ಅಸದೃಶ ಶಕ್ತಿಯದು.

ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಮಾಡಿ ಕಣ್ತುಂಬಿಸಿಕೊಂಡ ಪುಳಕವನ್ನು ಅನುಭವಿಸುತ್ತಲೇ ಈ ಅಂಕಣ ಬರೆಯುತ್ತಿದ್ದೇನೆ. ಉತ್ತರಭಾರತ ಯಾತ್ರೆಯಲ್ಲಿ, ಪ್ರವಾಸದ ನಡುವಿನಲ್ಲೇ ಸಿಕ್ಕ ಅಲ್ಪ ಬಿಡುವಿನಲ್ಲಿ ಅಂಕಣ ಬರೆಯುವುದು, ಇಂಟರ್‌ನೆಟ್ ಸಂಪರ್ಕ ಹುಡುಕಿ ಡೆಡ್‌ಲೈನ್ ನೊಳಗೆ ಬರಹವನ್ನು ಪತ್ರಿಕೆಗೆ ಕಳುಹಿಸುವುದು ಕೂಡ ಒಂದು ತೆರನಾದ ಥ್ರಿಲ್ಲಿಂಗ್ ವಿಷಯವೇ. ಅಂಥ ರೀತಿಯಲ್ಲಿ ತಯಾರಾದ ಈ ಪಾಕವನ್ನು ನೀವು ಪ್ರವಾಸಿಗ ನಿಂದ ಒಂದು ಪತ್ರ ಎಂಬ ಧಾಟಿಯಲ್ಲಿ ಓದಿಕೊಂಡರೆ ಚೆನ್ನಾಗಿರುತ್ತದೆ.

ಇಪ್ಪತ್ತೈದು ವರ್ಷಗಳ ಹಿಂದೆ ಮದುವೆಯ ಸಂದರ್ಭದಲ್ಲಿ ನಾನೂ ಯಥಾಪ್ರಕಾರ ‘ಕಾಶೀಯಾತ್ರೆ’ಯ ಸೋಗು ಮಾಡಿದವನೇ. ಬಂಧುಮಿತ್ರರ ಮೋಜು-ಮಸ್ತಿಗೆ ಗ್ರಾಸವಾದವನೇ. ಆದರೆ ನಿಜವಾದ ಕಾಶೀಯಾತ್ರೆ ಇದುವರೆಗೆ ಕೈಗೂಡಿರಲಿಲ್ಲ. ಈಸಲ ಅಮೆರಿಕದಿಂದ ರಜೆಯಲ್ಲಿ ಬಂದಾಗ ಕಾಶೀಯಾತ್ರೆ
ಮಾಡೋಣವೆಂಬ ಉಮೇದು ನನಗಿಂತಲೂ ಹೆಚ್ಚು ಇದ್ದದ್ದು ಪತ್ನಿ ಸಹನಾಗೆ. ಅದಕ್ಕೋಸ್ಕರ ಮೇಕ್ ಮೈ ಟ್ರಿಪ್ ಡಾಟ್ ಕಾಮ್ ರೀತಿಯ ಕೆಲವು ಯಾತ್ರೆ ವೆಬ್‌ಸೈಟುಗಳನ್ನೆಲ್ಲ ನೋಡಿ ಅವಳೊಂದಿಷ್ಟು ತಯಾರಿಯನ್ನೂ ನಡೆಸಿದ್ದಳು.

ಕಾಶಿಗೆ ಹೋಗುತ್ತೇವಾದರೆ ಅಯೋಧ್ಯೆಯನ್ನು ಬಿಡಲಾದೀತೇ, ರಾಮಲಲ್ಲಾನನ್ನು ನೋಡದಿರಲಾದೀತೇ, ಆದ್ದರಿಂದ ಅಯೋಧ್ಯೆಗೂ ಹೋಗಿಬರೋಣ
ಎಂದು ನನ್ನ ಅಭಿಮತ. ಅದಕ್ಕೆ ಸರಿಯಾಗಿ ‘ಭಾರತ ಪರಂಪರಾ ದರ್ಶನ’ ಪ್ಯಾಕೇಜ್ ಟೂರ್‌ಗಳನ್ನು ನಡೆಸುವ ಸ್ನೇಹಿತ, ಬೆಂಗಳೂರಿನ ಪ್ರಕಾಶ ಹೆಬ್ಬಾರ್ ಅವರು ಅಯೋಧ್ಯಾ-ಪ್ರಯಾಗರಾಜ್ -ಬೋಧಗಯಾ-ವಾರಾಣಸಿಗಳನ್ನು ಸಂದರ್ಶಿಸುವ ಏಳು ದಿನಗಳ ಯಾತ್ರೆ ಬೆಂಗಳೂರಿನಿಂದ ಹೊರಟು ಬೆಂಗ ಳೂರಿಗೆ ಹಿಂದಿರುಗುವ ರೀತಿಯದು ಮೇ ಮೊದಲ ವಾರಕ್ಕೆ ಆಯೋಜನೆ ಆದದ್ದಿದೆ ಎಂದು ತಿಳಿಸಿದರು.

ಅಂದರೆ ಅದು ನನ್ನ ರಜಾದಿನಗಳಿಗೆ ಹೊಂದಿಕೆಯಾಗುವಂತೆ ಅನುಕೂಲಕರವಾಗಿಯೇ ಇತ್ತು. ಮರು ಆಲೋಚನೆಯಿಲ್ಲದೆ ತತ್‌ಕ್ಷಣ ಅವರ ಪ್ಯಾಕೇಜ್ ಟೂರ್‌ನಲ್ಲಿ ಎರಡು ಸೀಟ್ ಕಾದಿರಿಸಿದ್ದಾಯ್ತು. ಯಾತ್ರೆಯಲ್ಲಿ ವಿಮಾನ ಪ್ರಯಾಣದ ಭಾಗಕ್ಕಷ್ಟೇ ಮುಂಗಡ ಹಣ ಪಾವತಿಸಿ ಟಿಕೆಟ್ ಬುಕ್ ಮಾಡಿಸಿ ದ್ದಾಯ್ತು. ಈ ಟೂರ್‌ನಲ್ಲಿ ಸುಮಾರು ೪೦ ಜನರಿರುತ್ತಾರೆಂದು ವಾಟ್ಸ್ಯಾಪ್ ಪ್ರಕಟಣೆಗಳಿಂದ ತಿಳಿದುಕೊಂಡಿದ್ದೂ ಆಯ್ತು. ಪ್ರಕಾಶ ಹೆಬ್ಬಾರ್ ಅವರ ‘ಭಾರತ ಪರಂಪರಾ ದರ್ಶನ’ ಪ್ಯಾಕೇಜ್ ಟೂರ್‌ಗಳ ಬಗ್ಗೆ ನಾನು ಅವರಿವರಿಂದ ಓದಿ/ಕೇಳಿ ತಿಳಿದಿದ್ದೆ. ಪ್ರವಾಸ ವ್ಯವಸ್ಥೆ ಹೇಗಿರುತ್ತದೆಂದು ಅವರದೇ ಫೇಸ್‌ಬುಕ್ ಪೋಸ್ಟ್‌ಗಳಿಂದ, ಚಿತ್ರಗಳು ಮತ್ತು ವಿಡಿಯೊ ತುಣುಕುಗಳಿಂದಲೂ ಅಂದಾಜು ಮಾಡಿದ್ದೆ. ಅಲ್ಲದೇ ಅವರ ವ್ಯವಸ್ಥೆಯಲ್ಲೇ ಚಾರ್‌ಧಾಮ್ ಯಾತ್ರೆ, ಕಾಶ್ಮೀರ ಪ್ರವಾಸ, ಈಶಾನ್ಯದ ಸಪ್ತಸೋದರಿ ರಾಜ್ಯಗಳ ಪ್ರವಾಸ ಮುಂತಾದ ಟೂರ್‌ಗಳಲ್ಲಿ ಭಾಗವಹಿಸಿದ್ದ ಬಂಧುಮಿತ್ರರೂ ಒಳ್ಳೆಯ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದರು.

ಪ್ರಕಾಶ ಹೆಬ್ಬಾರರೇ ಪ್ರತಿಯೊಂದು ಟೂರ್‌ನಲ್ಲಿ ವ್ಯವಸ್ಥಾಪಕರಾಗಿ ಭಾಗವಹಿಸುತ್ತಾರೆ, ಪರ್ಸನಲ್ ಟಚ್ ಕೊಟ್ಟು ಉತ್ತಮ ಸೇವೆ ಒದಗಿಸುತ್ತಾರೆ,
ತೀರ್ಥಕ್ಷೇತ್ರಗಳಿಗಾದರೆ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ; ಕಾಫಿ-ತಿಂಡಿ-ಊಟದ ವ್ಯವಸ್ಥೆಯಂತೂ ಅತ್ಯುತ್ತಮ; ಅಡುಗೆ ತಂಡದವರೂ ನಮ್ಮೊಡನೆ ಇರುತ್ತಾರೆ; ಕರ್ನಾಟಕದ ಪ್ರಜೆಗಳಿಗೆ ಸರಿಹೊಂದುವ ಸವಿರುಚಿಯ ಶಾಕಾಹಾರ ಒದಗಿಸುತ್ತಾರೆ… ಅಂತೆಲ್ಲ ಪ್ರಶಂಸಾತ್ಮಕ ಅನಿಸಿಕೆಗಳನ್ನು ಫಲಾನುಭವಿಗಳಿಂದ ಕೇಳಿದ್ದೆ.

ಅಷ್ಟಾಗಿಯೂ ‘ನೀವು ಅಮೆರಿಕದವ್ರು. ನಮ್ಮ ವ್ಯವಸ್ಥೆಗಳೆಲ್ಲ ನಿಮಗೆ ಸರಿಹೋಗುತ್ತವೋ ಇಲ್ಲವೋ’ ಎಂದು ಪ್ರಕಾಶ ಹೆಬ್ಬಾರರು ನನ್ನೊಡನೆ ತುಸು ಅಳುಕಿನಿಂದಲೇ ವ್ಯವಹರಿಸಿದ್ದರು. ಅದೊಂದೇ ಸಾಕು ಅವರು ಎಂಥ ನಿಗರ್ವಿ ನಿರ್ಮಲ ಮನಸ್ಸಿನ ಗ್ರಾಹಕಸೇವಿ ಉದ್ಯಮಿಯೆಂದು ಅರಿಯುವುದಕ್ಕೆ. ‘ನಾನು ಅಮೆರಿಕದವನೆಂದು ನೀವು ನನಗೇನೂ ವಿಐಪಿ ಟ್ರೀಟ್‌ಮೆಂಟ್ ಕೊಡಬೇಕಿಲ್ಲ. ಎಲ್ಲರೊಳಗೊಂದಾಗಿ ಸಾಮಾನ್ಯನಾಗಿ ಇರುವುದೇ ನನಗೂ ಇಷ್ಟ’ ಎಂಬ ನನ್ನ ನಿಲುವಿನಿಂದ ಅವರಿಗೂ ಸಮಾಧಾನವಾಯ್ತು. ಅಂತೂ ಒಂದು ರೀತಿಯ ಕಾತರದ ನಿರೀಕ್ಷೆಯ ವಾತಾವರಣ ಹಿತಕರವಾಗಿ
ಸಿದ್ಧವಾಗಿತ್ತು, ಉತ್ತರ ಭಾರತದಲ್ಲಿ ಕಾದ ಕಾವಲಿಯಂತೆ ಬಿಸಿಲಿನ ಝಳವಿರುತ್ತದೆಯೆಂದು ಗೊತ್ತಿದ್ದರೂ.

ಏಪ್ರಿಲ್ ೩೦ರಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ಲಖನೌಗೆ ವಿಮಾನಪ್ರಯಾಣದ ಮೂಲಕ ನಮ್ಮ ಯಾತ್ರೆಯ ಆರಂಭ. ಶುಭಾರಂಭ ಎನ್ನಬೇಕಿತ್ತು, ಅಶುಭ ಎನ್ನುವಂಥದ್ದಲ್ಲವಾದರೂ ಒಂದು ಅನಿರೀಕ್ಷಿತ ಅಡಚಣೆ ಎದುರಾಯಿತು. ಒಟ್ಟು ೪೫ ಜನರ ತಂಡದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿಗೆ ಬೆಂಗಳೂರು-ಲಖನೌ ಇಂಡಿಗೋ ವಿಮಾನದಲ್ಲೂ, ಇನ್ನುಳಿದವರಿಗೆ ಹೆಚ್ಚೂಕಡಿಮೆ ಅದೇ ಸಮಯಕ್ಕೆ ಬೆಂಗಳೂರಿನಿಂದ ಲಖನೌಗೆ ಹೋಗುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲೂ ಪ್ರಯಾಣವ್ಯವಸ್ಥೆ ಆಗಿದ್ದದ್ದು. ಹಿಂದಿನ ದಿನ ರಾತ್ರಿ ಏಳು ಗಂಟೆಗೆ ಇಂಡಿಗೋ ಸಂಸ್ಥೆಯಿಂದ ಪ್ರಕಾಶ ಹೆಬ್ಬಾರ ರಿಗೆ ಒಂದು ಮೆಸೇಜು ಬಂತಂತೆ.

‘ತಾಂತ್ರಿಕ ತೊಂದರೆಗಳಿಂದಾಗಿ ಏಪ್ರಿಲ್ ೩೦ರ ಬೆಳಗ್ಗಿನ ಬೆಂಗಳೂರು-ಲಖನೌ ವಿಮಾನಯಾನ ರದ್ದಾಗಿದೆ. ಅಡಚಣೆಗಾಗಿ ವಿಷಾದಿಸುತ್ತೇವೆ’. ಅಯ್ಯೋ ದೇವರೇ ಹೋಗಿಹೋಗಿ ಇದೇ ವಿಮಾನ ಕ್ಯಾನ್ಸಲ್ ಆಗ್ಬೇಕಿತ್ತಾ! ಅಷ್ಟೇಅಲ್ಲ, ಮರುಬುಕ್ಕಿಂಗ್‌ಗೆಂದು ಸಂಪರ್ಕಿಸಿದರೆ ಏರ್ ಲೈನ್‌ನವರು ಸರಿಯಾಗಿ ಸ್ಪಂದಿಸಲೂ ಇಲ್ಲವಂತೆ. ನಾವು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್ ಪಡೆದಿದ್ದವರೇನೋ ಆರಾಮಾಗಿ ಲಖನೌ ತಲುಪಿದೆವು; ಇಂಡಿಗೋದಲ್ಲಿ ಟಿಕೆಟ್ ಆಗಿದ್ದವರೆಲ್ಲ ಬೆಂಗಳೂರಲ್ಲೇ ಬಾಕಿ. ಕೊನೆಗೂ ಅವರೆಲ್ಲರನ್ನೂ ಆ ದಿನದ ಬೇರೆ ಯಾನಗಳಲ್ಲಿ ರಾತ್ರಿಯೊಳಗೆ ಲಖನೌ ಮುಟ್ಟಿಸುವ ಹರ ಸಾಹಸದಲ್ಲಿ ಯಶಸ್ವಿಯಾದರು ಹೆಬ್ಬಾರರು. ನಿಜವಾಗಿಯೂ ತಾಳ್ಮೆಯ ಪರೀಕ್ಷೆ.

ಪರಸ್ಪರ ಸಹಕಾರ, ಸಂಯಮ ಹೆಚ್ಚು ಅಗತ್ಯವಾಗುವುದು ಇಂಥ ಸಂದರ್ಭಗಳಲ್ಲೇ. ಮೂಲ ಪ್ಲಾನ್ ಪ್ರಕಾರವಾದರೆ ಬೆಳಗ್ಗೆ ಒಂಬತ್ತಕ್ಕೆಲ್ಲ ಎಲ್ಲರೂ ಲಖನೌ ತಲುಪಿ ವಿಮಾನನಿಲ್ದಾಣದಲ್ಲೇ ಉಪಾಹಾರ ಮುಗಿಸಿ ಅಲ್ಲಿಂದ ಬಸ್ಸಿನಲ್ಲಿ ನೈಮಿಷಾರಣ್ಯ ಕ್ಷೇತ್ರಕ್ಕೆ ಹೋಗುವುದಿದ್ದದ್ದು. ಆದರೆ ಇಡೀ ತಂಡ ಒಟ್ಟುಗೂಡುವವರೆಗೆ ನಾವು ಕೆಲವರು ಹಗಲಿಡೀ ಲಖನೌದಲ್ಲೇ ಕಳೆದು, ಮಹಿಳೆಯರು ಒಂದಿಷ್ಟು ಲಖನೌ ಸ್ಪೆಷಲ್ ಬಟ್ಟೆಬರೆ ಶಾಪಿಂಗ್ ಸಹ ಮಾಡಿ
(ಲಗ್ಗೇಜ್ ಹೆಚ್ಚಿಸಿಕೊಂಡು), ತಡರಾತ್ರಿಗೆ ನೈಮಿಷಾರಣ್ಯ ಹೋಟೆಲ್ ತಲುಪಿದೆವು.

ಮಾರನೆಯ ದಿನ ಬೆಳಗ್ಗೆ ನೈಮಿಷಾರಣ್ಯ ದರ್ಶನ. ‘ಏಕದಾ ನೈಮಿಷಾರಣ್ಯೇ…’ ಎಂದು ಸತ್ಯನಾರಾಯಣ ವ್ರತಕಥೆಯ ಆರಂಭದಲ್ಲಿ ಈ ಹೆಸರು ಕೇಳಿಯಷ್ಟೇ ಗೊತ್ತಿದ್ದದ್ದು. ಗೋಮತಿ ನದಿಯ ತೀರದಲ್ಲಿರುವ ಈ ನೈಮಿಷಾರಣ್ಯದಲ್ಲಿಯೇ ಮಹಾಭಾರತದ ಕಥೆಯನ್ನು ಸೂತಪುರಾಣಿಕರು ಶೌನಕಾದಿ
ಋಷಿಮುನಿಗಳಿಗೆ ಹೇಳಿದ್ದಂತೆ. ವೇದವ್ಯಾಸ ಮಹರ್ಷಿಗಳು ನಾಲ್ಕು ವೇದಗಳನ್ನು, ಹದಿನೆಂಟು ಪುರಾಣಗಳನ್ನು, ಆರು ಶಾಸಗಳನ್ನು ೮೮ ಸಾವಿರ ಶಿಷ್ಯರಿಗೆ ಬೋಧಿಸಿದ ಸ್ಥಳ ಕೂಡ ಇದೇ ಎಂದು ಪ್ರತೀತಿ. ಅಂಥ ಮಹಾಮಹಿಮರು ಓಡಾಡಿದ ಭೂಮಿಯಲ್ಲೇ ನಾವೂ ಈಗ ನಡೆಯುತ್ತಿದ್ದೇವಲ್ಲ ಎಂದು ರೋಮಾಂಚನ ಆಗುವುದಂತೂ ಹೌದು.

೫೯೦೦ ವರ್ಷಗಳಷ್ಟು ಹಳೆಯದ್ದೆನ್ನಲಾದ ವಟವೃಕ್ಷವೊಂದನ್ನು ನೋಡಿದಾಗ, ಹಾಗಿದ್ದರೆ ಈ ಮರವು ವೇದವ್ಯಾಸರಿಗೂ ನೆರಳು ನೀಡಿದ್ದೇ ಎಂದು ಊಹಿಸಿದಾಗಲೇ ಮೈ ಝುಮ್ಮೆನ್ನುವುದೂ ಹೌದು. ಕಾಲ್ದಾರಿಯೋ ಎಂಬಂಥ ಅಗಲ ಕಿರಿದಾದ ಚಿಕ್ಕ ರಸ್ತೆಗಳಲ್ಲಿ ‘-ಟ್ -ಟಿ’ ಆಟೋರಿಕ್ಷಾಗಳಲ್ಲೇ ಹೋಗಿ ನೋಡಬೇಕಾದ ಸ್ಥಳಗಳು ನೈಮಿಷಾರಣ್ಯದಲ್ಲಿ ತುಂಬ ಇವೆ. ಚಕ್ರತೀರ್ಥ, ರುದ್ರಕುಂಡ, ಲಲಿತಾದೇವಿಮಂದಿರ, ಹನೂಮಾನ್ ಮಂದಿರ, ಸತ್ಯನಾರಾ ಯಣ ದೇವಸ್ಥಾನ ಇತ್ಯಾದಿ. ಅವೆಲ್ಲದಕ್ಕೂ ಕುತೂಹಲಕಾರಿ ಪುರಾಣಕಥೆಗಳೂ ಇವೆ. ಹಾಗೆಯೇ ಪಾಂಡವರ ಗುಹೆ ಎಂಬಲ್ಲಿ ಪಂಚಪಾಂಡವರ ದೊಡ್ಡದೊಡ್ಡ ವಿಗ್ರಹಗಳು.

ಅಲ್ಲಿ ನನ್ನ ಗಮನವನ್ನು ವಿಶೇಷವಾಗಿ ಸೆಳೆದದ್ದೆಂದರೆ ಯುಧಿಷ್ಠಿರ ಜೀ, ಭೀಮಸೇನ ಜೀ, ಅರ್ಜುನ ಜೀ… ಮುಂತಾಗಿ ವಿಗ್ರಹಗಳಿಗೆ ಅನುಕ್ರಮವಾದ ಹೆಸರುಗಳನ್ನು ಬರೆದದ್ದು; ಸಹದೇವನ ಮೂರ್ತಿಗೆ ಮಾತ್ರ ‘ಪಂಡಿತ್ ಸಹದೇವ ಜೀ’ ಎಂದು ಹೆಸರು. ಅದಕ್ಕೆ ಕಾರಣವೆಂದರೆ ಪಾಂಡವರ ಪೈಕಿ ಸಹ ದೇವನಿಗೆ ಮಾತ್ರ ಭೂತಭವಿಷ್ಯದ್ವಿಚಾರಗಳನ್ನು ತಿಳಿಯುವ ದಿವ್ಯವಾದ ಶಕ್ತಿ ಸಾಮರ್ಥ್ಯಗಳು ಇದ್ದುವಂತೆ. ಆದ್ದರಿಂದಲೇ ಆತ ಪಂಡಿತ! ನೈಮಿಷಾರಣ್ಯ ದಿಂದ ಅಯೋಧ್ಯೆಗೆ, ಸುಮಾರು ನಾಲ್ಕು ತಾಸುಗಳ ಬಸ್ ಪ್ರಯಾಣ. ಬೆಳಗ್ಗೆ ಬೇಗ ಹೊರಟು ಮಧ್ಯಾಹ್ನದೊಳಗೆ ಅಯೋಧ್ಯೆ ತಲುಪ ಬೇಕಿತ್ತು. ಆದರೆ ಇಂಡಿಗೋ ರಾದ್ಧಾಂತದಿಂದಾಗಿ ನಮ್ಮ ವೇಳಾಪಟ್ಟಿಯಲ್ಲಿ ಅನಿವಾರ್ಯ ವಿಳಂಬ ಸೇರಿಕೊಂಡಿತ್ತು.

ಹಾಗಾಗಿ ನಾವು ಅಯೋಧ್ಯೆ ತಲುಪಿದಾಗ ಸಂಜೆಯಾಗಿತ್ತು. ಅಯೋಧ್ಯೆಗೆ ಸ್ವಾಗತ ಎಂಬ ಫಲಕಗಳನ್ನು ನೋಡಿದಾಗಲೇ ಮೈಮನದಲ್ಲೆಲ್ಲ ಏನೋ ಒಂದು ಪುನೀತ ಭಾವ. ರಾಮಲಲ್ಲಾನನ್ನು ಯಾವಾಗ ಕಾಣುತ್ತೇವೋ ಎಂಬ ತವಕ. ಆದರೆ ಅಲ್ಲಿ ನಮಗೆ ಮತ್ತೊಂದು ಅಡಚಣೆ ಧುತ್ತೆಂದು ಎದುರಾ ಯಿತು! ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆವತ್ತೇ ಅಯೋಧ್ಯೆಗೆ ಭೇಟಿ ನೀಡುವವರಿದ್ದರು, ಅದೂ ಸಂಜೆ ೪ರಿಂದ ೮ರವರೆಗೆ ಅವರ ಕಾರ್ಯಕ್ರಮ. ದೇಶದ ಪ್ರಥಮ ಪ್ರಜೆಯು ರಾಮಲಲ್ಲಾನನ್ನು ನೋಡಲು ಬಯಸಿದ್ದರಿಂದ ಮಿಕ್ಕೆಲ್ಲ ಪ್ರಜೆಗಳಿಗೆ ಅಯೋಧ್ಯೆ ಬಂದ್!

ಅಕ್ಷರಶಃ ರಸ್ತೆಗಳನ್ನೆಲ್ಲ ಬ್ಲಾಕ್ ಮಾಡಿಟ್ಟಿದ್ದರು. ಪುಣ್ಯಕ್ಕೆ ಅಯೋಧ್ಯೆಯಲ್ಲಿ ನಮ್ಮ ಅಂದಿನ ವಾಸ್ತವ್ಯದ ಹೋಟೆಲ್ ಇದ್ದದ್ದು ಶ್ರೀರಾಮ ಮಂದಿರದಿಂದ ಏಳೆಂಟು ಕಿಲೋಮೀಟರ್ ದೂರದಲ್ಲಾದ್ದರಿಂದ ಅಲ್ಲಿಗೆ ತಲುಪುವುದು ಸಾಧ್ಯವಾಯಿತು. ಸಂಜೆಹೊತ್ತು ಮಂದಿರದ ಸುತ್ತಮುತ್ತಲೆಲ್ಲ ತಿರುಗಾಡಿ ಅಯೋಧ್ಯೆಯ ಪುಣ್ಯಪ್ರದ ಹವೆಯನ್ನು ಹೀರಿಕೊಳ್ಳೋಣ, ದೀಪಾಲಂಕಾರ ನೋಡಿ ಧನ್ಯರಾಗೋಣವೆಂದರೆ ಅದಕ್ಕೆ ಆಸ್ಪದವಿಲ್ಲ. ಶಬರಿ ಕಾದಂತೆ ಕಾಯಬೇಕಾಯ್ತು ನಾವೂ ಶ್ರೀರಾಮನ ದರ್ಶನಕ್ಕಾಗಿ. ಆದರೆ ಇವೆಲ್ಲ ಅಡಚಣೆಗಳು ಬಹುಶಃ ನಮ್ಮ ಒಳ್ಳೆಯದಕ್ಕೇ ಆದದ್ದಿರಬೇಕು.

ಶ್ರೀರಾಮಚಂದ್ರನೇ ಹಾಗೆ ಯೋಜಿಸಿದ್ದಿರಬೇಕು. ಏಕೆಂದರೆ… ಗುರುವಾರದ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ಅಯೋಧ್ಯೆಯ ಮುಖ್ಯದ್ವಾರದವರೆಗೆ ಬಸ್ಸಿನಲ್ಲಿ ಹೋಗಿ ತಲುಪಿದಾಗ ಆಗಷ್ಟೇ ಸೂರ್ಯೋದಯವಾಗಿತ್ತು. ಸೂರ್ಯವಂಶಸಂಜಾತನ ದರ್ಶನಕ್ಕೆ ಹೊರಟವರಿಗೆ ಆ
ಮುಖ್ಯದ್ವಾರದಲ್ಲೂ ಸಪ್ತಾಶ್ವರೂಢ ಸೂರ್ಯದೇವನ ಭವ್ಯಪ್ರತಿಮೆಯದೇ ಸ್ವಾಗತ. ಅಲ್ಲಿಂದ ರಾಮಜನ್ಮಭೂಮಿ ಪ್ರಾಕಾರದವರೆಗೆ ೨-೩ ಕಿಲೋ ಮೀಟರ್ ದೂರವನ್ನು ಅಗಲ ಕಿರಿದಾದ ಗಲ್ಲಿಗಳ ಮೂಲಕ -ಟ್-ಟಿ ಆಟೋರಿಕ್ಷಾಗಳಲ್ಲೇ ಕ್ರಮಿಸಬೇಕು. ಮಾರ್ಗಮಧ್ಯದಲ್ಲಿ ‘ಲತಾ ಮಂಗೇಶ್ಕರ್ ಚೌಕ’
ಸಿಗುತ್ತದೆ.

ದೊಡ್ಡದೊಂದು ವೀಣೆಯ ಕಲಾಕೃತಿಯನ್ನು ಅಲ್ಲಿ  ಸ್ಥಾಪಿಸಿದ್ದಿದೆ. ಅಲ್ಲಿ ರಿಕ್ಷಾ ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದೂ ಆಯ್ತು. ಗಂಧ-ಕುಂಕುಮಗಳಿಂದ ಹಣೆಮೇಲೆ ಶ್ರೀರಾಮನಾಮ ಬರೆಸಿಕೊಂಡಿದ್ದೂ ಆಯ್ತು. ಸರಯೂ ನದಿಯ ನೀರನ್ನು ಬಾಲರವಿಯ ಕಿರಣಗಳು ಸ್ವರ್ಣಮಯವಾಗಿಸಿದ್ದ ಕ್ಷಣದಲ್ಲೇ ನಾವು ಅಲ್ಲಿಗೆ ತಲುಪಿದ್ದು. ಸರಯೂ ತೀರ್ಥದ ಪ್ರೋಕ್ಷಣೆ ಮಾಡಿಕೊಂಡು ಬರುವಷ್ಟರಲ್ಲಿ ನಮ್ಮಂತೆಯೇ ಸಾವಿರಾರು ಭಕ್ತರು ಅದಾಗಲೇ ಸಾಲಿನಲ್ಲಿ ನಿಂತಿದ್ದರು.

ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ. ಪಾದರಕ್ಷೆಗಳನ್ನೂ ಬಲುದೂರದಲ್ಲೇ ತೆಗೆದಿಡಬೇಕು. ನಡುನಡುವೆ ತಪಾಸಣೆ. ಅಲ್ಲೊಂದು ಕಡೆ ಪುರುಷರು ಮಹಿಳೆಯರು ಪ್ರತ್ಯೇಕ ಸಾಲುಗಳಲ್ಲಿ ಹೋಗಬೇಕು. ಅಷ್ಟು ಹೊತ್ತಿಗೆ ಹೆಚ್ಚೂಕಡಿಮೆ ಲಕ್ಷದಷ್ಟು ಜನರಿದ್ದರೂ ಲಗುಬಗೆಯಿಂದ ಸಾಗುತ್ತಿದ್ದ
ಸರತಿಯ ಸಾಲುಗಳಲ್ಲಿ ೧೫-೨೦ ನಿಮಿಷಗಳೊಳಗೇ ನಾವು ಶ್ರೀರಾಮಮಂದಿರದ ಮೆಟ್ಟಲುಗಳನ್ನೇರಿ ಭವ್ಯ ಪ್ರಾಂಗಣವನ್ನು ದಾಟಿ ರಾಮಲಲ್ಲಾನ ಎದುರು ಕೈಮುಗಿದು ನಿಂತಿದ್ದೆವು! ಅಲ್ಲೂ ಒಂದು ವಿಶೇಷ ರೋಮಾಂಚನ ಘಟಿಸಿತು. ಶ್ರೀರಾಮನೇ ಅದನ್ನು ಸಾಧ್ಯವಾಗಿಸಿದ್ದೋ ಗೊತ್ತಿಲ್ಲ. ತಪಾಸಣೆ ಪಾಯಿಂಟ್‌ನಲ್ಲಿ ಪುರುಷರ-ಮಹಿಳೆಯರ ಸಾಲುಗಳು ಬೇರೆಬೇರೆಯಾದಾಗ ಪ್ರತ್ಯೇಕಗೊಂಡು ಜನಜಂಗುಳಿಯಲ್ಲಿ ಬೆರೆತುಹೋದ- ಅಂದರೆ ಎಲ್ಲಿದ್ದೇವೆ ಎಂದು ಪರಸ್ಪರ ಗೊತ್ತೂ ಆಗದ ರೀತಿಯಲ್ಲಿ ಮುಂದೆ ಸಾಗಿದ್ದ- ಸಹನಾ ಮತ್ತು ನಾನು, ರಾಮಲಲ್ಲಾನ ಎದುರಿಗೆ ಇಬ್ಬರೂ ಏಕಕಾಲಕ್ಕೆ ಬಂದು ತಲುಪಿದೆವು; ಜೊತೆಯಾಗಿ ಕೈಮುಗಿದು ಕೃತಾರ್ಥರಾದೆವು!

ತಿರುಪತಿಯಲ್ಲಿ ‘ಜರಗಂಡಿ ಜರಗಂಡಿ…’ ಇದ್ದಂತೆ ಇಲ್ಲೂ ಒಬ್ಬೊಬ್ಬರಿಗೆ ಹೆಚ್ಚೆಂದರೆ ಹತ್ತಿಪ್ಪತ್ತು ಸೆಕೆಂಡುಗಳಷ್ಟೇ ದರ್ಶನಕ್ಕೆ ಕಾಲಾವಕಾಶ. ಹುಂಡಿ ಯಲ್ಲಿ ಕಾಣಿಕೆ ಹಾಕುವ ನೆಪದಲ್ಲಿ ಅದನ್ನೇ ಒಂದಿಷ್ಟು ಹಿಗ್ಗಿಸಿಕೊಳ್ಳಬೇಕಷ್ಟೆ. ಆದರೂ ಆ ಹತ್ತಿಪ್ಪತ್ತು ಸೆಕೆಂಡುಗಳು ಒದಗಿಸುವ ಧನ್ಯತೆ ಭಾವಪರವಶತೆ ಗಳನ್ನು ಅಕ್ಷರಗಳಲ್ಲಿ ಹಿಡಿದಿಡುವುದೆಂತು? ಅನಿರ್ವಚನೀಯವಾದ ಅದನ್ನು ಅನುಭವಿಸಿಯೇ ತೀರಬೇಕು.

ಚಿಕ್ಕಂದಿನಲ್ಲಿ ‘ಎಳೆಯರ ರಾಮಾಯಣ’ ಪುಸ್ತಕದಲ್ಲಿ, ಆಮೇಲೆ ಅಮರಚಿತ್ರಕಥೆಯಲ್ಲಿ, ತದನಂತರ ಮರಾಠಿ ಗೀತರಾಮಾಯಾಣದಲ್ಲಿ, ಠುಮಕ ಚಲತ ರಾಮಚಂದ್ರ ಬಾಂಧತ ಪೈಂಝಣಿಯಾ ಮುಂತಾದ ತುಲಸೀದಾಸ ಭಜನೆಗಳಲ್ಲಿ, ರಮಾನಂದ ಸಾಗರರ ಟಿವಿ ರಾಮಾಯಣದಲ್ಲಿ… ಒಟ್ಟಿನಲ್ಲಿ
‘ಫಣಿರಾಯ ತಿಣುಕುವಂತಾದ ರಾಮಾಯಣ ವೈವಿಧ್ಯ’ಗಳಲ್ಲಿ ರಾಮಮಹಿಮೆಯನ್ನು ಸವಿದವನು ನಾನು. ಸರಯೂ ನದೀತೀರದ ಅಯೋಧ್ಯಾ ನಗರಿಯ ವರ್ಣನೆ, ದಶರಥನ ಪುತ್ರಕಾಮೇಷ್ಟಿಯಾಗದಿಂದ ಹಿಡಿದು ರಾವಣವಧೆಯ ಬಳಿಕ ಪುಷ್ಪಕವಿಮಾನದಲ್ಲಿ ರಾಮ-ಸೀತೆ-ಲಕ್ಷ್ಮಣರು ಲಂಕೆ ಯಿಂದ ಮರಳುವವರೆಗಿನ ಒಂದೊಂದು ಘಟನೆಯೂ ಕಣ್ಮುಂದೆಯೇ ನಡೆಯಿತೇನೋ ಎಂಬಂತೆ ವರ್ಣಮಯ ಚಿತ್ರಣಗಳು.

ಅದೇನಿದ್ದರೂ ಮನಸಿನ ಕಲ್ಪನೆಯಲ್ಲಿ ಮಾತ್ರ. ಅಂಥ ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದೆದುರಿಗೆ ನಾನೀಗ ನಿಂತುಕೊಂಡಿದ್ದೇನೆ ಎನ್ನುವ ಅರಿವಿನ ಅನುಭೂತಿ ಆಗುವುದಿದೆಯಲ್ಲ, ನಿಜವಾಗಿಯೂ ವರ್ಣಿಸಲಸದಳವು. ರಾಮಲಲ್ಲಾನ ವಿಗ್ರಹವನ್ನು ಪ್ರತ್ಯಕ್ಷ ನೋಡುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಹಾದುಹೋದ ಇನ್ನೊಂದು ಚಿತ್ರಸರಣಿಯೆಂದರೆ ಆಧುನಿಕ ಯುಗದಲ್ಲಿ ನಮ್ಮ ಸಮಕಾಲೀನ ಅವಧಿಯಲ್ಲಿ ಅಯೋಧ್ಯೆ ಎಂಬ ಪದ ಅಥವಾ ಅದರ ಅಸ್ಮಿತೆಯು ಮೂಡಿಸುವ ವಿವಿಧ ದೃಶ್ಯಾವಳಿ: ಬಾಬರಿಮಸೀದಿಯ ಗುಂಬಜ್ ಗಳನ್ನು ಹತ್ತಿ ಧ್ವಂಸಗೊಳಿಸಿದ ಕರಸೇವಕರು, ಲಾಲಕೃಷ್ಣ
ಆಡ್ವಾಣಿಯವರ ರಥಯಾತ್ರೆ, ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಡವಳಿಕೆಗಳ ಸುದ್ದಿಗಳು, ಕೋವಿಡ್‌ನ ಅಂಧಕಾರದ ಸಮಯದಲ್ಲೇ ನರೇಂದ್ರ ಮೋದಿಯವರಿಂದ ಶಿಲಾನ್ಯಾಸ, ಆಮೇಲೆ ತ್ವರಿತಗತಿಯಿಂದ ಸಾಗಿದ ಮಂದಿರನಿರ್ಮಾಣ, ನಮ್ಮ ಕರ್ನಾಟಕದ ಶಿಲ್ಪಿ ಅರುಣ
ಯೋಗಿರಾಜ್ ಕೆತ್ತಿದ ಸುಂದರ ರಾಮಲಲ್ಲಾ ವಿಗ್ರಹದ ಆಯ್ಕೆ, ಜನವರಿ ೨೨ರಂದು ಶ್ರೀರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ, ಉಡುಪಿಯ ಪೇಜಾವರ ಶ್ರೀಗಳ ಉಪಸ್ಥಿತಿ, ದೇಶದ ಪ್ರಧಾನಸೇವಕ ಮೋದಿಯವರೇ ಕಾರ್ಯಕ್ರಮದ ಅಧ್ವರ್ಯು, ಸ್ವಾಮಿ ಗೋವಿಂದ ದೇವ ಗಿರಿಜೀ ಮಹಾರಾಜ ರಿಂದ ವೇದಿಕೆಯ ಮೇಲೆಯೇ ಮೋದಿಯವರ ಉಪವಾಸ ವ್ರತದ ಸಮಾರೋಪ, ಅದಾದ ಮೇಲೆ ಮೋದಿಯವರಿಂದ ಭಾವಾವೇಶದ ಅತ್ಯದ್ಭುತವಾದ ಭಾಷಣ, ವಿಶ್ವದೆಲ್ಲೆಡೆ ಸಂಭ್ರಮ ಸಡಗರದ ವಾತಾವರಣ, ನಾವು ಅಮೆರಿಕದಲ್ಲಿ ರಾತ್ರಿಯಿಡೀ ಜಾಗರಣೆ ಮಾಡಿ ದೂರದರ್ಶನದಲ್ಲಿ ವೀಕ್ಷಿಸಿದ ನೇರ ಪ್ರಸಾರ, ರಾಮಮಂದಿರದ ಉದ್ಘಾಟನೆ ಆದಮೇಲೂ ಅಲ್ಲಿ ನಡೆಯುತ್ತಿದ್ದ ನಗರಸಂಕೀರ್ತನೆ, ಯಕ್ಷಗಾನ ಪ್ರದರ್ಶನ, ಚೆಂಡೆ ತಾಳವಾದ್ಯ ಸ್ಯಾಕ್ಸೊ ಫೋನ್ ಮುಂತಾಗಿ ನಮ್ಮ ಕರ್ನಾಟಕದ ವಿವಿಧ ತಂಡಗಳ ಸಾಂಸ್ಕೃತಿಕ ಪ್ರಸ್ತುತಿಗಳ ವಿಡಿಯೊ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಣೆಗೆ ಸಿಗುತ್ತಿದ್ದದ್ದು… ಎಲ್ಲವೂ ಒಮ್ಮೆ ಕಣ್ಮುಂದೆ ಬಂದುಹೋದುವು.

ಬಹುಶಃ ಅಯೋಧ್ಯಾ ಎಂಬ ಹೆಸರಿನ ವಿಶೇಷ ಶಕ್ತಿಯದು. ಸನಾತನ ಸಂಸ್ಕೃತಿಯನ್ನು ಆರಾಧಿಸುವ ಭಾರತೀಯರೆಲ್ಲರ ಮನಸ್ಸು-ಹೃದಯಗಳನ್ನು ಉದ್ದೀಪಿಸಬಲ್ಲ, ಮನಸ್ಸಿಗೆ ಮುದನೀಡಬಲ್ಲ ಅನನ್ಯ ಅಸದೃಶ ಶಕ್ತಿ. ಮಂದಿರದಲ್ಲಿ ದರ್ಶನ ಪಡೆದಾದ ಮೇಲೆ ಪ್ರಸಾದ ಸ್ವೀಕರಿಸಿ ಹೊರಬಂದಾಗ ಇನ್ನೂ ಎಳೆಬಿಸಿಲೇ ಇತ್ತು. ಅಂದರೆ, ‘ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ…’ ಎಂದು ರಾಮಲಲ್ಲಾನಿಗೆ ಸುಪ್ರಭಾತ ಹೇಳುವ ಸಮಯವೇ ನಮಗೆ ದರ್ಶನಭಾಗ್ಯಕ್ಕೆ ಒದಗಿಬಂದದ್ದು ಕೂಡ ಪೂರ್ವಜನ್ಮಸುಕೃತವೇ ಇರಬಹುದು. ಇಂಡಿಗೋ ವಿಮಾನಯಾನ ಕ್ಯಾನ್ಸಲ್ ಆದದ್ದು,
ರಾಷ್ಟ್ರಪತಿಯ ಅಯೋಧ್ಯೆ ಭೇಟಿಯಿಂದಾಗಿ ನಾವೆಲ್ಲ ಒಂದುದಿನ ಕಾಯಬೇಕಾಗಿ ಬಂದದ್ದು… ಆದದ್ದೆಲ್ಲ ಒಳಿತೇ ಆಯಿತು!

ಬದುಕಿನಲ್ಲೂ ಹಾಗೆಯೇ ಅಲ್ಲವೇ? ಅಡಚಣೆಗಳು ಬರುವುದು ಅಂತಿಮವಾಗಿ ಏನೋ ಒಂದು ಒಳ್ಳೆಯದು ಸಂಭವಿಸುವುದಕ್ಕೇ. ಅಂಥದೊಂದು ಆಶಾಭಾವನೆ ತೃಪ್ತಿ ಸಮಾಧಾನ ಇರಬೇಕು ಅಷ್ಟೇ. ಉತ್ತರಭಾರತ ಯಾತ್ರೆಯ ಮತ್ತಷ್ಟು ಅನುಭವ-ಅನಿಸಿಕೆಗಳನ್ನು ಮುಂದಿನವಾರದ ಅಂಕಣದಲ್ಲಿ ಹಂಚಿಕೊಳ್ಳುತ್ತೇನೆ.