Saturday, 14th December 2024

ಕನ್ನಡದ ಸಿಡಿಗುಂಡು ಡಾ.ಕಯ್ಯಾರ ಕಿಞ್ಞಣ್ಣ ರೈ

ನುಡಿನಮನ

ಬನ್ನೂರು ಕೆ.ರಾಜು

‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ, ಎಲ್ಲರೂ ಎದ್ದೆದ್ದು ಓಡಿ ಬನ್ನಿ, ಕನ್ನಡ ಗಡಿ ಕಾಯೆ, ಗುಡಿ ಕಾಯೆ, ನುಡಿ ಕಾಯೆ, ಕಾಯ ಲಾರನೆ ಸಾಯೆ! ಓ ಬನ್ನಿ ಬನ್ನಿ. ಹಾರೆ ಗುದ್ದಲಿ ಕೊಡಲಿ ನೊಗ ನೇಗಿಲೆತ್ತುತಲಿ ನೆಲದಿಂದ ಹೊಲದಿಂದ ಹೊರಟು ಬನ್ನಿ, ಕನ್ನಡ ನಾಡಿನಿಂದ ಕಾಡಿಂದ ಗೂಡಿಂದ ಕಡಲಿಂದ ಸಿಡಿಲಿಂದ ಗುಡುಗಿ ಬನ್ನಿ……’ -ಹೀಗೆ ಗುಡುಗುತ್ತಿದ್ದ ಉಜ್ವಲ ಕನ್ನಡಾ ಭಿಮಾನಿ, ಕನ್ನಡ ಹೋರಾಟದ ಗಡಿನಾಡ ಕಿಡಿ, ಸಾಹಿತ್ಯಲೋಕದ ಸವ್ಯಸಾಚಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಯಾರಿಗೆ ತಾನೆ ಗೊತ್ತಿಲ್ಲ? ತಮ್ಮ ಮೌಲಿಕ ಸಾಹಿತ್ಯ ಕೃಷಿ, ಕನ್ನಡಪರ ಹೋರಾಟ, ಶೈಕ್ಷಣಿಕ ಕೈಂಕರ್ಯದಿಂದ ಸಮಸ್ತ ಕನ್ನಡಿಗರ ಹೃನ್ಮನವನ್ನು ಆವರಿಸಿರುವ ಕನ್ನಡ ನುಡಿ ಭಕ್ತರಿವರು.

ವಿಶೇಷವಾಗಿ ಗಡಿನಾಡ ಕನ್ನಡಿಗರ ದನಿಯಾಗಿದ್ದ ಕಯ್ಯಾರರು ‘ಕಾಸರ ಗೋಡು ಕರ್ನಾಟಕದ್ದು’ ಎಂದು ದೃಢವಾಗಿ ನಂಬಿದ್ದರು. ಭಾಷಾವಾರು ಪ್ರಾಂತ್ಯರಚನೆ ವೇಳೆ ಅಪ್ಪಟ ಕನ್ನಡನೆಲ ಕಾಸರಗೋಡನ್ನು ಕೇರಳಕ್ಕೆ ಸೇರಿಸಿದ ಅನ್ಯಾಯ ವಾದ ದಿನದಿಂದಲೂ ಇದರ ವಿರುದ್ಧ ತಾವು ಬದುಕಿರುವ ತನಕವೂ ಉಗ್ರಹೋರಾಟ ನಡೆಸುತ್ತಲೇ ಬಂದವರು.

ಕಾಸರಗೋಡು ಕರ್ನಾಟಕಕ್ಕೇ ಸೇರಬೇಕೆಂಬ ಗುರಿ ಹೊತ್ತು ಅವರು ನಡೆಸಿದ ಹೋರಾಟದಲ್ಲಿ ಕಾಸರಗೋಡು ಪ್ರಾಂತ್ಯ
ದಲ್ಲಿರುವ ಕನ್ನಡಿಗರ ನೋವಿದೆ. ಅವರೆಲ್ಲರ ಪ್ರಾತಿನಿಧಿಕ ಧ್ವನಿಯಾಗಿದ್ದ ಇವರ ಗರ್ಜನೆ ಕನ್ನಡ ನಾಡಿನಲ್ಲಿ ಇವತ್ತಿಗೂ
ಪ್ರತಿಧ್ವನಿಸುತ್ತಿದ್ದು, ಅದು ಮಹಾಜನ ವರದಿಯನ್ನು ರಾಜಕೀಯ ದಾಳವಾಗಿಸಿಕೊಂಡಿರುವವರಿಗೆ ಕೇಳಿಸುವುದು ಯಾವಾಗ? ಎಂಬುದೊಂದು ಯಕ್ಷಪ್ರಶ್ನೆಯಾಗಿದೆ.

ಹಚ್ಚಹಸಿರಿನ ಸ್ವಚ್ಛ ಪರಿಸರದ ಮಡಿಲಲ್ಲಿ ಹುಟ್ಟಿ ಬೆಳೆದವರು ಕಯ್ಯಾರರು. ಜನನ ೧೯೧೫ ಜೂನ್ ೮. ಜನ್ಮಸ್ಥಳ ಕಾಸರ ಗೋಡು ತಾಲೂಕಿನ ಪೆರಡಾಲ ಎಂಬ ಪುಟ್ಟಗ್ರಾಮ. ತಂದೆ ದುಗ್ಗಪ್ಪರೈ, ತಾಯಿ ದೆಯ್ಯಕ್ಕೆ. ಕಬ್ಬು, ಬಾಳೆ, ತೆಂಗು, ಕಂಗು, ಮಾವಿನ ತೋಟಗಳೇ ಆಗ ಇವರಿಗೆ ತೊಟ್ಟಿಲು. ಹೆತ್ತವರು ಇವರಿಗಿಟ್ಟ ಹೆಸರು ‘ಕಯ್ಯಾರ ಕಿಞ್ಞಣ್ಣ ರೈ’. ಕಾವ್ಯನಾಮ ‘ದುರ್ಗಾದಾಸ’. ಕಿಞ್ಞಣ್ಣ ಎಂದರೆ ತುಳು ಭಾಷೆಯಲ್ಲಿ ‘ಚಿಕ್ಕಣ್ಣ’ ಅರ್ಥಾತ್ ‘ಕಿರಿಯಣ್ಣ ’. ಆದರೆ ಅವರು ತಮ್ಮ ಸಾಹಿತ್ಯ ಸಾಧನೆ, ಶೈಕ್ಷಣಿಕ ಸೇವೆ, ಕನ್ನಡ ಪರ ಹೋರಾಟದಿಂದ ಕನ್ನಡದ ಎತ್ತರಕ್ಕೂ ಬೆಳೆದು ದೊಡ್ಡಣ್ಣರಾದದ್ದು ಈಗ ಇತಿಹಾಸ.

ಎತ್ತರದ ನಿಲುವಿನ ದೃಢಕಾಯದ ಅವರು, ಹಿಡಿದ ಹಠವನ್ನು ಬಿಡದೆ ಸಾಽಸುವ ಬಂಟ ಜನಾಂಗಕ್ಕೆ ಸೇರಿದವರಾದರೂ ‘ಕನ್ನಡವೇ ನನ್ನ ಜಾತಿ’ ಎಂದವರು. ಕನ್ನಡ ಚಳವಳಿಯ ಅಗ್ರನಾಯಕ ವಾಟಾಳ್ ನಾಗರಾಜ್ ಅವರ ಮಾತುಗಳ ಹೇಳುವುದಾದರೆ, ‘ಕಯ್ಯಾರರಿಗೆ ಕನ್ನಡವೇ ಜಾತಿ, ಕನ್ನಡವೇ ನೀತಿ, ಕನ್ನಡವೇ ಧರ್ಮ, ಕನ್ನಡವೇ ದೇವರು. ಒಟ್ಟಾರೆ ಅವರ ಸರ್ವಸ್ವವೂ ಕನ್ನಡವೇ’. ಈ ಮಾತು ಅಕ್ಷರಶಃ ನಿಜ. ಕಯ್ಯಾರರ ಕನ್ನಡಾಭಿಮಾನದ ಉತ್ತುಂಗವನ್ನು ಕಂಡವರಿಗೆ ಇದು ಉತ್ಪ್ರೇಕ್ಷೆ ಎನಿಸದು.

ಕಯ್ಯಾರರು ಹುಟ್ಟಿದೂರಲ್ಲಿ ಪ್ರಾಥಮಿಕ ಶಾಲೆ ಇರಲಿಲ್ಲವಾದ್ದರಿಂದ, ಅವರ ತಾಯಿಯ ತಂದೆ ಶಂಕರ ಆಳ್ವರು ಅವರನ್ನು ಬದಿಯಡ್ಕ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಅವರ ಮನೆಯಲ್ಲಿ ನಡೆಯುತ್ತಿದ್ದ ಚಂಡೆ ಮದ್ದಳೆಯಂತೆಯೇ ಅವರೊಳಗಿನ ಸಾಹಿತ್ಯಶಕ್ತಿ ಎಳೆಯದರ ಪರಿಸರದ ಪ್ರಭಾವದಿಂದ ಪುಟಿ ದೇಳುತ್ತಿತ್ತು. ಅದನ್ನು ಎದೆಯಲ್ಲಿ ತುಂಬಿಕೊಂಡು ಸಾಹಿತ್ಯ ಸರಸ್ವತಿಯನ್ನು ಮನದ ಆರಾಧಿಸುತ್ತಾ ಮೊದಲ ಹಂತದ ವಿದ್ಯಾಭ್ಯಾಸವನ್ನು ಬದಿಯಡ್ಕದಲ್ಲಿ ಮುಗಿಸಿದ ಕಯ್ಯಾರರು, ನಂತರ ಪೆರಡಾಲದ ನಿರ್ಚಾಲಿನ ಲ್ಲಿದ್ದ ಮಹಾಜನ ಸಂಸ್ಕೃತ ಕಾಲೇಜಿಗೆ ಸೇರಿದರು.

ಕನ್ನಡ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲಿಯೂ ಪ್ರವೇಶ ಪರೀಕ್ಷೆ ಬರೆದು ಉತ್ತಮ ಅಂಕಗಳಿಂದ ತೇರ್ಗಡೆ ಹೊಂದಿ ಮುಂದೆ ವಿದ್ವಾನ್, ಶಿರೋಮಣಿ ಎಂಬ ಕನ್ನಡ, ಸಂಸ್ಕೃತ ಪದವಿಗಳನ್ನು ಪಡೆದರು. ವಿಶ್ವವಿದ್ಯಾಲಯದ ಉತ್ತಮ ವಿದ್ಯಾರ್ಥಿ ಎನಿಸಿ
ಬಿ.ಎ. ಪದವಿಯಲ್ಲಿ ಪ್ರಥಮ, ಎಂ.ಎ. ಪದವಿಯಲ್ಲಿ ದ್ವಿತೀಯ ಸ್ಥಾನಗಳಿಸಿ ಉತ್ತೀರ್ಣರಾದ ಅವರು ಅಧ್ಯಾಪಕ ತರಬೇತಿ ಪದವಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು.

ಕಯ್ಯಾರರ ಮಾತೃಭಾಷೆ ತುಳುವಾದರೂ ಅವರ ಮೈ-ಮನ-ಮನೆಗಳ ಕನ್ನಡದ್ದೇ ದರ್ಬಾರು. ಬಾಲ್ಯದಿಂದಲೂ ಕನ್ನಡದ ಜತೆಗೆ ಸಂಸ್ಕೃತದಲ್ಲಿ ಆಸಕ್ತಿ ಹೊಂದಿದ್ದ ಅವರ ಮೇಲೆ ಅಕ್ಕಪಕ್ಕದ ಮನೆಯ ಮಲಯಾಳ ಭಾಷೆಯ ಪ್ರಭಾವ ಕೂಡ ಇತ್ತು. ಹಾಗಾಗಿ ಅವರು ಪದವೀಧರರಾಗುವಷ್ಟರಲ್ಲಿ ತುಳು, ಕನ್ನಡ, ಸಂಸ್ಕೃತ, ಮಲಯಾಳಂ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದ್ದರು.
ವಿದ್ಯಾರ್ಥಿ ದೆಸೆಯ ಸಾಹಿತ್ಯ, ಕೃಷಿಯತ್ತಲೂ ಹೆಜ್ಜೆಯಿರಿಸಿದ್ದ ಕಯ್ಯಾರರು ಅಪ್ಪಟ ಗಾಂಧಿವಾದಿಗಳೂ ಆಗಿದ್ದು, ಗಾಂಧೀಜಿ ಅವರನ್ನು ಕಾಣುವ ತವಕದಿಂದ ೧೯೪೩ರಲ್ಲಿ ಪೆರಡಾಲದಿಂದ ಕಾಲುನಡಿಗೆಯ ಸಹಪಾಠಿ ಗಳ ಜತೆ ಮಂಗಳೂರಿನ ಕೊಡಿಯಾಲ ಬೈಲಿಗೆ ಬಂದು ಗಾಂಧೀಜಿಯವರ ದರ್ಶನ ಪಡೆದಿದ್ದರು. ಆ ಕ್ಷಣ ಅವರಿಗೆ ‘ಈ ದೇವಮಾನವನ ಮುಂದೆ ಬೇರೆ ದೇವರು ಏಕೆ?’ ಎಂಬ ಭಾವ ಬಂದಿತ್ತಂತೆ.

ಆಗ ಅವರು ‘ಗಾಂಧಿ ದರ್ಶನ’ ಎಂಬ ಕವಿತೆ ಬರೆದರು. ಇವತ್ತಿಗೂ ಅದು ಅತ್ಯಂತ ಮೌಲಿಕ ಸೃಷ್ಟಿ ಎನಿಸಿದೆ. ಬಾಲ್ಯದ ಪತ್ರಿಕೋದ್ಯಮದ ಸೆಳೆತಕ್ಕೂ ಒಳಗಾಗಿದ್ದ ಕಯ್ಯಾರರು ತಮ್ಮ ಶಾಲಾ ದಿನಗಳ ‘ಸುಶೀಲಾ’ ಎಂಬ ಹಸ್ತಪ್ರತಿ ಪತ್ರಿಕೆಯನ್ನು ಶಿಕ್ಷಕರ ಪ್ರೇರಣೆಯಿಂದ ಹೊರ ತಂದಿದ್ದರು. ಆಶ್ಚರ್ಯವೆಂದರೆ ಆಗ ಅವರಿಗೆ ಕೇವಲ ೧೨ ವರ್ಷ ವಯಸ್ಸು. ಮುಂದೆ ಸ್ವದೇಶಾಭಿಮಾನ, ಜಯ ಕರ್ನಾಟಕ, ದೇಶಾಭಿಮಾನಿ, ರಾಷ್ಟ್ರಬಂಧು ಮುಂತಾದ ಪತ್ರಿಕೆಗಳ ಒಡನಾಡಿಯಾಗಿ ತಮ್ಮ ಲೇಖ ನಿಯನ್ನು ಹರಿಯಬಿಟ್ಟು ಬರವಣಿಗೆಯ ಬೆಟ್ಟವನ್ನೇ ಕಟ್ಟಿದರು.

ಆಡು ಮುಟ್ಟದ ಸೊಪ್ಪಿಲ್ಲ, ಕಯ್ಯಾರರು ಬರೆಯದ ಪತ್ರಿಕೆಗಳೇ ಇಲ್ಲವೆಂಬಷ್ಟರ ಮಟ್ಟಿಗೆ ಅವರು ಆ ಕಾಲದ ಎಲ್ಲಾ  ಪತ್ರಿಕೆ ಗಳಲ್ಲೂ ಕಥೆ, ಕವನ, ಲೇಖನ ಗಳನ್ನು ಬರೆದು ಆ ಮುಖೇನ ಕನ್ನಡ ಸಾರಸ್ವತ ಲೋಕದಲ್ಲಿ ಮಾತ್ರವಲ್ಲದೆ ಪತ್ರಿಕೋದ್ಯಮ ದಲ್ಲೂ ಪ್ರಸಿದ್ಧರಾದರು. ಕನ್ನಡದ ಮೊಟ್ಟ ಮೊದಲ ರಾಷ್ಟ್ರಕವಿ ಗೋವಿಂದ ಪೈ ಅವರ ಗರಡಿಯಲ್ಲಿ ಪಳಗಿದ ಕಯ್ಯಾರರು ಸೃಜನಶೀಲ ಸಾಹಿತ್ಯ ಮತ್ತು ಸೃಜನೇತರ ಸಾಹಿತ್ಯ ಗಳೆರಡರಲ್ಲೂ ಬಹಳ ಎತ್ತರದ ಸಾಧನೆ ಮಾಡಿದವರು, ವಿದ್ವತ್ತಿನ ಮೇರುಶಿಖರ ವಾಗಿ ಬೆಳೆದವರು. ಬರವಣಿಗೆ ಹಾಗೂ ಕನ್ನಡಪರ ಹೋರಾಟವಲ್ಲದೆ ಗಾಂಧೀಜಿ ಅವರಿಂದ ಪ್ರಭಾವಿತರಾಗಿ ಅಪ್ರತಿಮ ದೇಶಪ್ರೇಮಿಯೂ ಆಗಿದ್ದರು.

೧೯೩೫ರಲ್ಲಿ ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಅಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದ ನಾರಾಯಣ ಕಿ, ಕೆ.ಕೆ. ಶೆಟ್ಟಿ, ಕೃಷ್ಣಪ್ಪ ತಿಂಗಳಾಯ, ಡಾ. ಯು.ಪಿ. ಮಲ್ಯ, ಶ್ರೀನಿವಾಸ ಮಲ್ಯ ಮುಂತಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಜತೆಗೂಡಿದ್ದ ಕೈಯ್ಯಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಕರಾವಳಿಯಲ್ಲಿ ತಮ್ಮ ದನಿ ಮೊಳಗಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಸೂರ್ತಿ ನೀಡುವಂತಹ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು.
ಪ್ರೌಢಶಿಕ್ಷಣ ಮುಗಿಯುತ್ತಿದ್ದಂತೆಯೇ ೧೯೪೫ರಲ್ಲಿ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ ವೃತ್ತಿಜೀವನ ಆರಂಭಿಸಿದ ಕಯ್ಯಾರರು ಶಿಕ್ಷಕರಾಗಿದ್ದುಕೊಂಡೇ ಮುಂದಿನ ತಮ್ಮೆ ಉನ್ನತ ವಿದ್ಯಾಭ್ಯಾಸವನ್ನು ಮಾಡಿ ಸಾಧನೆಯ ಮೆಟ್ಟಿಲೇರಿದರು.

ಉಪಾಧ್ಯಾಯ ವೃತ್ತಿ ಹಾಗೂ ವ್ಯಾಸಂಗ ಇದೆಲ್ಲದರ ಜತೆಯ ಹೋರಾಟ, ಬರವಣಿಗೆ ಎಲ್ಲವನ್ನೂ ಮಾಡಿ ಕನ್ನಡವನ್ನು ಕಟ್ಟಿದ ಕನ್ನಡ ಯೋಧರವರು. ೩೨ ವರ್ಷಗಳ ಸುದೀರ್ಘ ಕಾಲ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅವರು ಕೇಂದ್ರ ಸರ್ಕಾರದಿಂದ ‘ಶ್ರೇಷ್ಠ ಶಿಕ್ಷಕ’ ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಣೋತ್ತಮರೂ ಹೌದು. ಶ್ರೀಮತಿ ಉಞ್ಞಕ್ಕೆ ಅವರು ಕಯ್ಯಾರರ ಧರ್ಮಪತ್ನಿ. ದುರ್ಗಾ ಪ್ರಸಾದ್ ರೈ, ಜಯಶಂಕರ ರೈ, ದೇವಕಿ ದೇವಿ, ಶ್ರೀರಂಗನಾಥ ರೈ, ಪ್ರಸನ್ನ ರೈ, ಕಾವೇರಿ ದೇವಿ, ಕೃಷ್ಣ
ಪ್ರದೀಪರೈ, ರವಿರಾಜರೈ ಇವರುಗಳು ಅವರ ಮಕ್ಕಳು. ಒಟ್ಟಾರೆ ತುಂಬು ಸಂಸಾರ ಅವರದು.

‘ಶ್ರೀಮುಖ’ ಕವನ ಸಂಕಲನದ ಮೂಲಕ ಕನ್ನಡ ಸಾರಸ್ವತ ಲೋಕ ಪ್ರವೇಶಿಸಿದ್ದ ಕಯ್ಯಾರರು ಕಥೆ, ಕವನ, ಕಾದಂಬರಿ, ನಾಟಕ, ಜೀವನ ಚರಿತ್ರೆ, ವಿಮರ್ಶೆ, ಶಿಶುಸಾಹಿತ್ಯ, ಖಂಡಕಾವ್ಯ, ವ್ಯಾಕರಣ, ಪ್ರಬಂಧ, ಸಂಪಾದನೆ, ಅನುವಾದ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು ೧೦೦ ಕೃತಿಗಳನ್ನು ಕನ್ನಡಮ್ಮನ ಸಾಹಿತ್ಯ ಭಂಡಾರಕ್ಕೆ ನೀಡಿದ್ದಾರೆ.

ಇಷ್ಟೊಂದು ವೈವಿಧ್ಯಮಯವಾಗಿ ಸಾಹಿತ್ಯ ಕೃಷಿ ಮಾಡಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಯ್ಯಾರರ ಪುಸ್ತಕಗಳು ಬಂದಿದ್ದರೂ ಅವರು ಕವಿಯಾಗಿಯೇ ಹೆಚ್ಚು ಪ್ರಸಿದ್ಧರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (೧೯೬೯), ಭಾರತ ಸರಕಾರದಿಂದ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ (೧೯೬೯), ದಕ್ಷಿಣ ಕನ್ನಡ ಜಿ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೧೯೮೫), ಕರ್ನಾಟಕ ಸರಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೧೯೮೫), ಪ್ರಥಮ ಅಖಿಲ ಭಾರತ ಜನಪರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೧೯೮೮), ಅಖಿಲ ಭಾರತ ತುಳು ಸಮ್ಮೇಳನದ ಗೌರವ ಪ್ರಶಸ್ತಿ (೧೯೮೯), ೬೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಮಹಾಗೌರವ (೧೯೯೭), ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪುರಸ್ಕಾರ, ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ (೨೦೧೩) ಸೇರಿದಂತೆ ನೂರಾರು ಪ್ರಶಸ್ತಿ-ಪುರಸ್ಕಾರ, ಸನ್ಮಾನ-ಗೌರವಗಳಿಗೆ ಕಯ್ಯಾರರು ಭಾಜನರಾಗಿದ್ದಾರೆ.

ಕರ್ನಾಟಕ ಸರಕಾರವಷ್ಟೇ ಅಲ್ಲದೆ, ತಮಿಳುನಾಡು, ಕೇರಳ ಸರಕಾರಗಳು ಕೂಡ ಇವರ ಸಾಹಿತ್ಯಕ, ಶೈಕ್ಷಣಿಕ, ಸಾಂಸ್ಕೃ ತಿಕ, ಸಾಮಾಜಿಕ ಸೇವೆಯನ್ನು ಗುರುತಿಸಿ ವಿವಿಧ ಸಂದರ್ಭಗಳಲ್ಲಿ ಗೌರವಿಸಿವೆ. ಭಾರತ ಸರಕಾರ ಕೂಡ. ಸಮಗ್ರ ಕರ್ನಾಟಕದ ಸಾಕ್ಷಿಪ್ರeಯಂತಿದ್ದ ಕಯ್ಯಾರ ಕಿಞ್ಞಣ್ಣ ರೈ ಅವರು ಬದುಕಿನಲ್ಲಿ ಶತಮಾನೋತ್ಸವ ಕಂಡು ೧೦೧ ವರ್ಷಗಳ ಸಾರ್ಥಕ ಜೀವನ ನಡೆಸಿದವರು. ೨೦೧೫ರ ಆಗಸ್ಟ್ ೯ರಂದು ಇಹಲೋಕದಿಂದ ಕಣ್ಮರೆಯಾದರೂ, ಸಮಗ್ರ ಕರ್ನಾಟಕದ ಕಣ್ಬೆಳಕಲ್ಲಿ ಕಯ್ಯಾರರು ಎಂದೂ ಆರದ ನಂದಾದೀಪವಾಗಿರುವರು.