Sunday, 15th December 2024

ಸಮಾಜಗೇಡಿ ಶಾಸಕರನ್ನು ಮತದಾರ, ಸರಕಾರ ದೂರವಿಡಬೇಕಿದೆ!

ಹಂಪಿ ಎಕ್ಸ್‌ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಕಳೆದ ಆರೇಳು ದಶಕಗಳಿಂದ ದೇಶವನ್ನು ಕಾಡುತ್ತಿರುವ ವೋಟ್ ಬ್ಯಾಂಕ್ ರಾಜಕಾರಣ, ದೇಶ ಅನಿಷ್ಟರ ಮನಸ್ಥಿತಿಯವರ ಮತ್ತು ಸ್ವಾರ್ಥಿಗಳ ವಂಶ ರಾಜಕಾರಣದ ಗುಲಾಮಗಿರಿ ಆಡಳಿತಗಳಿಂದ ಮುಕ್ತಿಗೊಳಿಸಿ ದೇಶದ ದಿಕ್ಕನ್ನು ಬದಲಿಸಿ ಹೊಸ ಮನ್ವಂತರದೆಡೆಗೆ ಕೊಂಡೊಯ್ಯಬೇಕೆಂಬ ಒಂದು ಸಂಕಲ್ಪ ರಾಷ್ಟ್ರನಿಷ್ಠ ದೇಶಾಭಿಮಾನಿಗಳಲ್ಲಿತ್ತು. ಅದಕ್ಕೆ ಪೂರಕವಾದ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಬಂದ ಸಂಘ ಪರಿವಾರ ಪೋಷಿತ ಭಾರತೀಯ ಜನಸಂಘವು ಎರಡು ಕ್ಷೇತ್ರಗಳಿಂದ ಮೊದಲ್ಗೊಂಡು ಮುನ್ನೂರು ಕ್ಷೇತ್ರಗಳ ಜನಾದೇಶ ಪಡೆದು ದೇಶವನ್ನು ಆಳುತ್ತಿದೆ.

ಅಸಲಿಗೆ ಇಂದು ರಾಜಕಾರಣವೆಂದರೆ ಯಾರೂ ಸಾಚಾ ಅಲ್ಲ ಎಂಬಂತಾಗಿದೆ. ಆದರೂ ಇರುವಷ್ಟರಲ್ಲಿ ಲಾಯಕ್ಕು ಮುಖಗಳನ್ನು ಗುರುತಿಸಿ ಸಣ್ಣಪುಟ್ಟ ರಾಜಿ ಹೊಂದಾಣಿಕೆಗಳನ್ನು ಮಾಡಿಕೊಂಡು ಅಧಿಕಾರಕ್ಕೆ ಬಂದು ದೇಶಮೌಲ್ಯಾಧಾರಿತ ಆಡಳಿತ ನೀಡುವ ಉದ್ದೇಶದಿಂದ ಬಿಜೆಪಿ ಅನೇಕ ಪಾಡುಪಟ್ಟು ಅಧಿಕಾರಕ್ಕೆ ಬಂದಿದ್ದಿದೆ. ಉದಾಹರಣೆಗೆ ನಮ್ಮ ನಾಡಿನ ರಾಜ್ಯ ಸರಕಾರ. ಬಿಜೆಪಿ ತನಗೆ ಬಹುಮತವಿಲ್ಲದಿದ್ದಾಗ ಅನ್ಯಪಕ್ಷದಿಂದ ಬಂದ ಹದಿನೇಳು ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯದಲ್ಲಿ ಸರಕಾರವನ್ನು ಸ್ಥಾಪಿಸಿದೆ.

ಕೇಂದ್ರ ಬಿಜೆಪಿಯ ಕಟ್ಟುಪಾಡುಗಳಿಗೆ ತಲೆಬಾಗಿ ಗೋಪಾಲಯ್ಯ, ನಾರಾಯಣಗೌಡ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರರಂಥ ಅನ್ಯಪಕ್ಷಗಳ ಶಾಸಕರೆಲ್ಲಾ ಬಿಜೆಪಿ ಪಕ್ಷದ ಸಿದ್ಧಾಂತ ಗಳನ್ನು ಒಪ್ಪಿಕೊಂಡು ತಮ್ಮ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದ್ದಾರೆ. ಕನಿಷ್ಠ ತಮಗೆ ಮತಚಲಾಯಿಸಿದ ಮತದಾರರಿಗಾದರು ಹೆದರಿ ಸರಕಾರದೊಂದಿಗಿದ್ದಾರೆ. ಸಂಘ ಪರಿವಾರ ಮತ್ತು ಬಿಜೆಪಿ ಆಶಿಸುವಂತೆ ಒಬ್ಬ ಶಾಸಕ ಅಥವಾ ಸಂಸದ ಹೇಗಿರಬೇಕೆಂಬುದಕ್ಕೆ ಮೊನ್ನೆ ನಾಡಿನ ಸಂಸದರೊಬ್ಬರು ದೃಷ್ಟಾಂತವಾಗಿದ್ದಾರೆ.

ದೆಹಲಿಯಿಂದ ಮೈಸೂರಿಗೆ ಬಂದು ತಾಯಿ ಚಾಮುಂಡಿದೇವಿ ದರ್ಶನ ಪಡೆದು, ನಂತರ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿನೀಡಿ ಅಲ್ಲಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು, ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ವಂದಿಸಿ, ಬಿಜೆಪಿ ಕಚೇರಿಗೆ ತೆರಳಿ ಅಲ್ಲಿ ಭಾರತಮಾತೆಗೆ ಪೂಜಿಸಿ, ಅಲ್ಲಿನ ಗೋಮಾತೆಗೆ ಗೋಗ್ರಾಸ ನೀಡಿ ತಮ್ಮ ಜಿಲ್ಲಾ ಪ್ರವಾಸವನ್ನು ಆರಂಭಿಸಿದರು. ಈ ಮಟ್ಟದ ಸಾಂಸ್ಕೃತಿಕ ಶಿಷ್ಟಾಚಾರ ತೋರಿದವರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆಯವರು. ಸಾಕು, ಇಷ್ಟು ಸಂಸ್ಕಾರವನ್ನು ಬೆಳೆಸಿ ಕೊಂಡವರು ತಮ್ಮ ರಾಜಕಾರಣದಲ್ಲೂ ಅಷ್ಟೇ ಶಿಸ್ತು ಸಜ್ಜನಿಕೆ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುತ್ತಾರೆಂಬ ನಂಬಿಕೆಯನ್ನು ಸಾರ್ವಜನಿಕರಲ್ಲಿ ಮೂಡಿಸುತ್ತದೆ.

ಹಾಗಂತ ಬಿಜೆಪಿಯ ಎಲ್ಲಾ ಶಾಸಕರೂ ಸಂಸದರೂ ಹೀಗೇ ಸುಸಂಸ್ಕೃತರಾಗಿರುತ್ತಾರೆ ಮತ್ತು ಹಾಗೇ ಇರಬೇಕೆಂದೇನಿಲ್ಲ. ಈಗಲೂ ಅವರು ಯಾವ ಪಕ್ಷ ದಲ್ಲಿದ್ದಾರೆಂಬುದು ಸ್ವತ: ಅವರಿಗೆ ಮತ್ತು ಸಾರ್ವಜನಿಕರಿಗೆ ಗೊಂದಲವಿದೆ. ಇಂಥವರನ್ನೆಲ್ಲಾ ಸಹಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಸದ್ಯಕ್ಕೆ ಬಿಜೆಪಿ ಯದ್ದಾಗಿದೆ. ಇನ್ನು ಹೊಸಪೇಟೆ ವಿಜಯನಗರದ ಆನಂದ್ ಸಿಂಗ್ ಎಂಬ ಮಹಾಶಯನಿಗೆ ತಾನು ಹೇಗೆಲ್ಲಾ ಏನೆಲ್ಲಾ ಮಾಡಿ ಗೆದ್ದು ಬಂದಿದ್ದೇನೆ, ಸಂವಿಧಾನಾ ತ್ಮಕ ಚೌಕಟ್ಟಿನ ತನ್ನ ಶಾಸಕತ್ವದ ಮೂಲ ಆಶಯಗಳೇನು, ಸರಕಾರದಲ್ಲಿನ ನನ್ನ ಹೊಣೆಗಾರಿಕೆಗಳೇನು, ಕ್ಷೇತ್ರದ ಜನ ತನಗೆ ಏತಕ್ಕಾಗಿ ಮತ ಚಲಾಯಿಸಿ ದ್ದಾರೆ, ನಾಡಿನ ಜನ, ಸಮಾಜ ತನ್ನನ್ನು ಹೇಗೆಲ್ಲಾ ನೋಡುತ್ತಿದೆ ಎಂಬ ಸಣ್ಣ ಪರಿಜ್ಞಾನವೂ ಇದ್ದಂತಿಲ್ಲ.

2008ರಲ್ಲಿ ಮೊದಲ ಬಾರಿ ಆಯ್ಕೆಯಾದ ನಂತರ ಕನ್ನಡಿಗರ ಐತಿಹ್ಯ ಆಸ್ತಿಯಾಗಿದ್ದ ತಿರುಮಲದೇವರಾಯನಿಗೆ (ಶ್ರೀಕೃಷ್ಣದೇವರಾಯನಿಗೆ ತಿರುಮಲ ದೇವರಾಯ ಎಂಬ ಒಬ್ಬ ಮಗನಿದ್ದ ಎಂದು ಹೇಳುವ ಏಕೈಕ ಶಾಸನ) ಸಂಬಂಧಿಸಿದ ಅತ್ಯಮೂಲ್ಯ ಶಾಸನವನ್ನು ಛಿದ್ರಗೊಳಿಸಿ ಅದರ ಮೇಲೆ ಐಷಾರಾಮಿ ಸಮಾಧಿ ನಿರ್ಮಿಸಲಾಯಿತು. ಈಗಲೂ ಹಂಪಿ ವಿಶ್ವವಿದ್ಯಾಲಯದ ಸಂಪುಟದಲ್ಲಿ ದಾಖಲಾಗಿರುವ ಈ ಶಾಸನವನ್ನು ಹುಡುಕಿಕೊಡಿ ಎಂದು ಯಾವನಾದರು ಒಬ್ಬ ವಿದ್ಯಾರ್ಥಿ ಕೇಂದ್ರ ಪುರಾತತ್ವ ಇಲಾಖೆಗೆ, ಯುನೆಸ್ಕೋ ಸಂಸ್ಥೆಗೋ ಅಥವಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಸ್ಥಳೀಯ ಅಧಿಕಾರಸ್ಥರ ದರ್ಪ ದೌರ್ಜನ್ಯ ಅಕ್ರಮಗಳು ಬಯಲಾಗುತ್ತದೆ.

ಇನ್ನು 2015 ರಲ್ಲಿ ಬೇಲಿಕೇರಿ ಅದಿರು ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಗೊಳ್ಳಲಾಯಿತು. ಇನ್ನು ಮತ್ತೊಂದು ಬಾರಿಗೆ ಕಾಂಗ್ರೆಸ್‌ನಿಂದ ಗೆದ್ದು ಶಾಸಕನಾದಾಗ ಕಂಪ್ಲಿ ಗಣೇಶನೊಂದಿಗೆ ಬುರುಡೆ ಬಿಚ್ಚಿಕೊಳ್ಳುವಂಥ ಹೊಡೆ ದಾಟಗಳಾದವು. ಆದರೂ ಐದನೇ ಬಾರಿಗೂ ಗೆದ್ದು ಮಂತ್ರಿಯಾಗಿ ಘನತೆ ಯುಳ್ಳ ಸರಕಾರಿ ಖಾತೆ ದೊರಕಿದರೂ ಅದನ್ನು ಒಪ್ಪಿಕ್ಕೊಂಡು ಸಂವಿಧಾನಾತ್ಮಕ ಸೇವೆಗೆ ತೊಡಗಿಸಿಕೊಳ್ಳದೆ, ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ಧಿಕ್ಕರಿಸಿ ರಾಜಿನಾಮೆ ಆಟಗಳನ್ನು ಆಡುತ್ತಿರುವುದನ್ನು ನೋಡಿದರೆ ನಮ್ಮ ಹಂಪಿಯ ಕ್ಷೇತ್ರ ಮತ್ತು ಸುತ್ತಮುತ್ತಲಿನ ಮತದಾರರ ಬಗ್ಗೆ ಅನುಕಂಪ ಮತ್ತು ಪಶ್ಚಾತ್ತಾಪ ಮೂಡುತ್ತದೆ.

ಹೀಗಾದರೆ ಪ್ರಜಾಪ್ರಭುತ್ವಕ್ಕೆ ಇರುವ ಗೌರವ ಮರ್ಯಾದೆಯ ಗತಿಯೇನು? ಅಸಲಿಗೆ ಪ್ರಜಾಪ್ರಭುತ್ವದಲ್ಲಿ ಒಬ್ಬ ಅಯೋಗ್ಯ ಶಾಸಕ ಹೇಗೆ ರೂಪುಗೊಳ್ಳುತ್ತಾ ನೆಂಬುದನ್ನು ನಾವು ಕಂಡುಕೊಳ್ಳಬೇಕಿದೆ. ಒಂದು ಕ್ಷೇತ್ರದಲ್ಲಿ ವಾಸವಾಗಿದ್ದು ಪ್ರಾಮಾಣಿಕವಾಗೋ ಅಕ್ರಮವಾಗೋ ಅಗತ್ಯಕ್ಕಿಂತ ಹೆಚ್ಚು ಹಣ ಸಂಪಾದಿಸಿ ಕೊಂಡು ಊರಿನಲ್ಲಿ ದೊಡ್ಡ ಶ್ರೀಮಂತ ಎನಿಸಿಕೊಳ್ಳುತ್ತಾನೆ. ಈ ರೀತಿಯ ಇಮೇಜನ್ನು ‘ಮೇಂಟೇನ್’ ಮಾಡಿಕೊಳ್ಳಲು ಮೊದಲಿಗೆ ತಮ್ಮ ಹಿಂಬಾಲಕರ ಅಗತ್ಯ ಗಳನ್ನು ಪೂರೈಸುತ್ತಾನೆ. ಇದರಿಂದ ಪ್ರೇರಿತರಾಗಿ ಚೇಲಾಗಳೆಂದು ಕರೆಸಿಕೊಳ್ಳುವಂಥ ಒಂದಷ್ಟು ಜನ ಈತನ ಸುತ್ತ ಹುಟ್ಟಿಕೊಳ್ಳುತ್ತಾರೆ.ಇಷ್ಟಾದ ಮೇಲೆ
ಆತನಿಗೆ ರಾಜಕೀಯ ತೆವಲು ಶುರುವಾಗುತ್ತದೆ.

ಇದಕ್ಕಾಗಿ ಕ್ಷೇತ್ರದ ಮತದಾರರನ್ನು ಓಲೈಸಿಕೊಳ್ಳಲು ಶುರುವಿಟ್ಟುಕೊಳ್ಳುತ್ತಾನೆ. ಮತದಾರನು ಪುಣ್ಯಾತ್ಮನೋ ಪಾಪಿಯೋ ಕೊಲೆಗಾರ ಕಳ್ಳವಂಚಕನೋ ಒಟ್ಟಿನಲ್ಲಿ ಆತ ತಾನು ಸಾಕಿಕೊಂಡಿರುವ ಒಂದು ನಾಯಿಯಂತೆ ಕಾಣಲಾ ರಂಭಿಸುತ್ತಾನೆ. ಹೀಗೆ ತನ್ನದೇ ಹಣ ಹರಿಸಿದಮೇಲೆ ಅದಕ್ಕೆ ತಕ್ಕಂತೆ ಸಿಕ್ಕಸಿಕ್ಕ
ಅಡ್ಡದಾರಿಗಳನ್ನಿಡಿದು ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುವ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಯಾರಾದರೂ ತನ್ನ ವಿರುದ್ಧ ನಿಂತರೆ ಆತನನ್ನು ಗುಟ್ಟಾಗಿ ದಮಕಿ ಹಾಕುವ ರೌಡಿತನ, ಅದಕ್ಕೂ ಬಗ್ಗದಿದ್ದರೆ ಮುಗಿಸಿಬಿಡುವಂಥ ರಾಕ್ಷಸತನದ ಗೋಮುಖವಾಡವನ್ನು ಧರಿಸುತ್ತಾನೆ.

ತನಗೆ ಜೈಕಾರ ಹಾಕುವ ಮಂದಿಗಳಿಗೆ ಸಂಘ ಸಂಸ್ಥೆಗಳಿಗೆ ಕೇಳಿದಷ್ಟು ಹಣ ಹರಿಸಿ ಅವರುಗಳಿಗೆ ಮೋಜು ಮಜಾ ಮಾಡುವ ಪಾರ್ಟಿಗಳನ್ನು ಪ್ರವಾಸಗಳನ್ನು ಏರ್ಪಡಿಸಿ ಕ್ಷೇತ್ರದಲ್ಲಿ ಪ್ರಬಲ ನಾಯಕನಾಗಿ ಬುನಾದಿ ಹಾಕಿಕೊಳ್ಳುತ್ತಾನೆ. ತನಗೆ ಬೇಕಾದಂತೆ ನಡೆದುಕೊಂಡರೆ ಎಂಥ ಪರಮ ಪಾಪಿ ಕೈದಿ ರೌಡಿಶೀಟರ್ ಆದರೂ ಆತನನ್ನು ಬಳಸಿಕೊಂಡು ತನ್ನ ಸುತ್ತ ಭಯಭೀತಿಯ ಬೇಲಿಯನ್ನು ಹಾಕಿಕೊಂಡಿರುತ್ತಾನೆ. ಈತನ ವಿರುದ್ಧ ತಿರುಗಿ ಬೀಳುವುದಕ್ಕಾಗಲಿ, ಮತ ಚಲಾಯಿಸುವುದಕ್ಕಾಗಲಿ ಹೆದರುವ ಜನ, ಈತನಿಗೆ ಕಷ್ಟಕಾಲ ಬಂದರೆ ಈತನ ಪರ ಸುತ್ತುವರೆದು ಬೆಂಬಲಿಸಿ ಪ್ರತಿಭಟಿಸುವುದಕ್ಕೂ ಸಿದ್ದರಾಗಿರುತ್ತಾರೆ.

ಇಂಥ ದರವೇಸಿಗೆ ಅಧಿಕಾರದ ಅಮಲು ಹತ್ತಿಬಿಟ್ಟರಂತೂ ಈತನನ್ನು ಹಿಡಿಯಲು ಯಾವ ಪೊಲೀಸ್ ಅಧಿಕಾರಿಗಳಿಗೂ, ಸರಕಾರಿ ವ್ಯವಸ್ಥೆಗಳಿಗೂ ಸಾಧ್ಯ ವಾಗುವುದಿಲ್ಲ. ಇನ್ನು ಹೈಕಮಾಂಡ್ ಎಂಬುದು ಯಾವ ಲೆಕ್ಕ. ಇಂಥವರು ಎಷ್ಟು ಅಪಾಯಕಾರಿಯೆಂದರೆ ಒಂದೊಮ್ಮೆ ಓವೈಸಿಯೋ ಅಥವಾ ಎಸ್ಡಿಪಿಐ
ಯಂಥ ಪಕ್ಷದವರು ಬಂದು ತಮ್ಮ ಪಕ್ಷದಿಂದ ಟಿಕೆಟ್ ನೀಡಿ ನಿನಗೆ ಬೇಕಿರುವ ಎಲ್ಲಾ ಕೆಲಸಕ್ಕೂ ನಾವು ಸಹಕರಿಸುತ್ತೇವೆ ಎಂದು ಹೇಳಲಿ, ಅಷ್ಟೇ ಏಕೆ
ಆಫ್ಘಾನಿಸ್ಥಾನದ ತಾಲಿಬಾನ್ ಭಯೋತ್ಪಾದಕನೊಬ್ಬ ನಮ್ಮ ಪರವಾಗಿ ನಿಲ್ಲು ನಿನ್ನನ್ನು ಗೆಲ್ಲಿಸಿ ನಿನ್ನನ್ನು ಕೃತಾರ್ತನಾಗಿಸುತ್ತೇವೆ ಎಂದು ಹೇಳಿದರೂ ಕೂಡಲೇ
ಶಾಸಕತ್ವಕ್ಕ ರಾಜಿನಾಮೆ ಬಿಸಾಡಿ ಅವರ ಪರವಾಗಿ ನಿಲ್ಲುವುದಕ್ಕೂ ಹಿಂಜರಿಯುವುದಿಲ್ಲ.

ಇಂಥವರಿಗೆ ಮತದಾರರ ಋಣ, ದೇಶ ಧರ್ಮ ಸಂಸ್ಕೃತಿ ಸಂವಿಧಾನ ಎಂಬುದೆಲ್ಲಾ ತಿಂದು ಬಿಸಾಡುವನಲ್ಲಿ ಮೂಳೆಯಂತೆ. ಒಟ್ಟಿನಲ್ಲಿ ತನ್ನ ಕ್ಷೇತ್ರದ ಪ್ರಜಾ ಪ್ರಭುತ್ವವನ್ನು ಪಾಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುತ್ತಾನೆ. ಹೀಗಿದೆ ನೋಡಿ ನಮ್ಮ ದೇಶದಲ್ಲಿ ಒಬ್ಬ ಅಯೋಗ್ಯ ಶಾಸಕ ರೂಪುಗೊಳ್ಳುವ ಪರಿ. ಇನ್ನು ನಮ್ಮ ಆನಂದ್ ಸಿಂಗ್ ಅವರ ವಿಚಾರಕ್ಕೆ ಬರುವುದಾದರೆ, ಈ ಶಾಸಕನಿಗೆ ಏನು ಕಡಿಮೆಯಾಗಿದೆ? ಇಡೀ ಬಳ್ಳಾರಿಯಿಂದ ಪ್ರಮುಖವಾಗಿರಿಸಿ ಮಂತ್ರಿಗಿರಿಯನ್ನು ನೀಡಿರುವಾಗ ಅದನ್ನು ಗೌರವದಿಂದ ಸ್ವೀಕರಿಸಿ ಮುಂದೆ ಬಯಸಿದ ಖಾತೆಯನ್ನು ಕೇಳಬಹುದಿತ್ತಲ್ಲವೇ?.

ಇಷ್ಟಕ್ಕೂ ಖಾತೆಯಿಂದ ಮಂತ್ರಿಗಿರಿಗೆ ಹೊಳಪು ಬರುವುದಿಲ್ಲ. ತಾನು ಮಾಡುವ ಕೆಲಸದಿಂದ ಖಾತೆಗೆ ಹೊಳಪು ಬರುತ್ತದೆ. ಪ್ರವಾಸೋದ್ಯಮ ಖಾತೆಯೆಂದರೆ
ಅದು ಆನಂದ್ ಸಿಂಗ್ ಎನ್ನುವಷ್ಟು ಒಳ್ಳೆಯ ಕೆಲಸಗಳನ್ನು ಬದಲಾವಣೆಗಳನ್ನು ತಂದು ಮಾದರಿ ಮಂತ್ರಿಯಾಗಿ ಗುರುತಿಸಿಕೊಳ್ಳುವ ಅವಕಾಶಗಳಿವೆ. ಮೊನ್ನೆ ಯಷ್ಟೇ ಕೋಟಾ ಶ್ರೀನಿವಾಸ ಪೂಜಾರಿಯವರು ತಮಗೆ ನೀಡಿದ್ದ ಯಾರಿಗೂ ಬೇಡವಾದ ಮುಜರಾಯಿ ಇಲಾಖೆಯಲ್ಲಿ ಹೇಗೆಲ್ಲಾ ಬದಲಾವಣೆಯನ್ನು ತಂದು ಜನಪ್ರಿಯತೆ ಗಳಿಸಿದರು. ಪ್ರಭುಚೌಹಾಣ್ ತನಗೆ ನೀಡಿದ ಪಶುಸಂಗೋಪನಾ ಇಲಾಖೆಯಲ್ಲಿ ಗೋವಿನ ಉಳಿವಿಗಾಗಿ ದಿಟ್ಟಕ್ರಮಗಳನ್ನು ತಂದು ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ಮತ್ತೇ ಅವರಿಗೆ ಅದೇ ಖಾತೆ ದೊರಕಿದೆ.

ಇನ್ನು ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಎಂದರೆ ಅದು ವಿಶ್ವವಿಖ್ಯಾತಿ ಪಡೆದಿದೆ. ಅದರಲ್ಲೂ ಹಂಪಿ ಕ್ಷೇತ್ರದಲ್ಲಿ ಗೆದ್ದು ಬಂದಿರುವ ಆನಂದ್ ಸಿಂಗ್‌ಗೆ
ಇದಕ್ಕಿಂತ ಹೆಮ್ಮೆಯ ಖಾತೆ ಬೇಕಿದೆಯೇ? ಕಸದಿಂದ ರಸ ತೆಗೆಯುವವನು ಪಂಡಿತ ವಿದ್ವಾಂಸ ಎನಿಸಿಕೊಳ್ಳುತ್ತಾನೆ. ಹಾಗೆಯೇ ಯಾವುದೇ ಖಾತೆಯಾಗಲಿ ಅದರನ್ನು ಸರಿಯಾಗಿ ನಿಭಾಯಿಸಿದರೆ ದೇಶದ ಗಮನವನ್ನು ಸೆಳೆಯಬಹುದು. ಕೊಳಚೆ ನಿರ್ಮೂಲನ ಮಂಡಳಿಯಾಗಲಿ ಆರ್ಥಿಕ ಇಲಾಖೆಯಾಗಲಿ ನಿಭಾಯಿಸು
ವವನು ಸಂಭಾವಿತ ಪ್ರಾಮಾಣಿಕೆ ಶ್ರದ್ಧಾವಂತ ಬದ್ಧತೆ ಯುಳ್ಳವನಾಗಿದ್ದರೆ ಅದನ್ನು ಸಮಾಜಕ್ಕೆ ಮಾದರಿಯನ್ನಾಗಿಸಬಹುದು.

ಇಷ್ಟಕ್ಕೂ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆ ಬೇಡವೆನ್ನುವ ಆನಂದ್ ಸಿಂಗ್‌ರ ಅರ್ಹತೆಗೆ ಯೋಗ್ಯತೆಗೆ ಇನ್ನಾವ ಖಾತೆಯನ್ನು ಕೊಡಬೇಕು?. ಉನ್ನತ ಶಿಕ್ಷಣ, ವೈದಕೀಯ ಶಿಕ್ಷಣ ಅಥವಾ ಹಣಕಾಸು ಇಲಾಖೆ ನೀಡಬೇಕಿದೆಯೇ?. ಅದೂ ಅಸಾಧ್ಯವೇನಲ್ಲ. ತನಗೆ ನೀಡಿರುವ ಖಾತೆಯಲ್ಲೇ ಹೆಚ್ಚು ಕ್ರಿಯಾಶೀಲತೆ ಯಿಂದ ಪ್ರಾಮಾಣಿಕತೆ ಶ್ರದ್ಧೆಯಿಂದ ಕೆಲಸಮಾಡಿದರೆ ಮುಂದೆ ದೊಡ್ಡ ಖಾತೆಗಳೇನು, ಮುಖ್ಯಮಂತ್ರಿಯೂ ಆಗುವಷ್ಟು ಅರ್ಹತೆಯನ್ನು ಸಂಪಾದಿಸಿಕೊಳ್ಳ ಬಹುದು. ಇಷ್ಟಕ್ಕೂ ಪ್ರಭಾವಿ ಖಾತೆಯನ್ನು ಪಡೆದು ಅಕ್ರಮ ಹಣಗಳಿಸುವ ದರಿದ್ರ ಆನಂದ್ ಸಿಂಗ್‌ಗೆ ಇಲ್ಲ. ಮೊದಲಿನಿಂದಲೂ ತನ್ನ ಊರಿನ ಜನಗಳ ಅನೇಕ ಕಷ್ಟಗಳಿಗೆ ಮಿಡಿದಿದ್ದಾರೆ, ಬಸ್ ಓಡಿಸುವುದರಿಂದ ಹಿಡಿದು ಗಣಿಯ ಮಣ್ಣೆತ್ತುವವರೆಗೂ ಕಷ್ಟಜೀವಿಯಾಗಿ ಜನಾನುರಾಗಿಯಾಗಿದ್ದಾರೆ.

ವಿಜಯ ನಗರ ಜಿಲ್ಲೆಯಾಗಿ ರೂಪುಗೊಳ್ಳುವುದಕ್ಕೆ ಮನಸಾರೆ ಶ್ರಮಿಸಿದ್ದಾರೆ. ಹೊಸಪೇಟೆಯ ಜೋಳದರಾಶಿ ಗುಡ್ಡದಲ್ಲಿ ವಿಜಯನಗರ ಸಾರ್ವಭೌಮ ಶ್ರೀಕೃಷ್ಣ ದೇವ ರಾಯನ ಪ್ರತಿಮೆಗೆ ಶ್ರಮಿಸುತ್ತಿದ್ದಾರೆ. ಜೋಳದರಾಶಿ ಗುಡ್ಡದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಬಿಡದೇ, ಭೂಗಳ್ಳರು, ಸ್ವಾರ್ಥಿಗಳು ಮತ್ತು ಅವರ ಕುಟುಂಬದವರ ಪಾಲಾಗದಂತೆ ಕಟ್ಟೆಚ್ಚರವಹಿಸಬೇಕಿದೆ. ಈಗಾಗಲೇ ಜೋಳದರಾಶಿ ಗುಡ್ಡದ ಜಮೀನುಗಳನ್ನು ಕೆಲ ಪ್ರಭಾವಿ ವ್ಯಕ್ತಿಗಳು ತಮ್ಮ ಮನೆಮಂದಿಯವರ ಹೆಸರಿನಲ್ಲಿ ಖರೀದಿಸಿ ತಮಗೆ ಬೇಕಾದಂತೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಕೂಗು ಸ್ಥಳೀಯರಿಂದ ಕೇಳಿ ಬರುತ್ತಿದೆ.

ಮೊದಲು ಆನಂದಸಿಂಗ್ ಇಂಥ ಅವ್ಯವಹಾರಗಳನ್ನು ತಡೆದು ಅದನ್ನು ಸರಕಾರದ ಮತ್ತು ಕ್ಷೇತ್ರದ ಭಾಗವಾಗಿ ಅಭಿವೃದ್ಧಿಪಡಿಸಿ ಹಂಪಿಯ ಸ್ಮಾರಕಗಳಂತೆ ಗುಡ್ಡವನ್ನು ಪ್ರೇಕ್ಷಣೀಯ ಸ್ಥಳವಾಗಿಸಿ ಪ್ರವಾಸೋದ್ಯಮಕ್ಕೆ ಕೊಡುಗೆಯಾಗಿ ನೀಡಬೇಕಾದ ಜವಾಬ್ದಾರಿಯಿದೆ. ಐದು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಅಂಥ
ಯಡಿಯೂರಪ್ಪನವರನ್ನೇ ಪಕ್ಷ ಗೌರವಯುತವಾಗಿ ಅಧಿಕಾರದಿಂದ ಮುಕ್ತಗೊಳಿಸಿ ಪಕ್ಷದಲ್ಲಿನ ಶಿಸ್ತು ನಿಯಮಗಳನ್ನು ಎತ್ತಿಹಿಡಿಯಲಾಗಿದೆ. ಆನಂದ್‌ಸಿಂಗ್
ಕಂಡಿರುವಂತೆ ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಗೌರವವಿರುತ್ತದೆ.

ಪ್ರಾಮಾಣಿಕರಿಗಂತೂ ಪದವಿ ಹುಡುಕಿಕೊಂಡು ಬರುತ್ತದೆ.ಆದ್ದರಿಂದ ಆನಂದಸಿಂಗ್ ನಿರಾಶರಾಗದೆ ತನಗೆ ನೀಡಿರುವ ಖಾತೆಯನ್ನು ಹೆಮ್ಮೆಯಿಂದ ಸ್ವೀಕರಿಸಿ ನಾಡಿನ ಜನರ ಮತ್ತು ವರಿಷ್ಠರ ಮನಗೆದ್ದು ಮುಂದೆ ತಾನು ಬಯಸಿದ ಖಾತೆಯನ್ನು ಪಡೆಯಬಹುದಾದ ಅವಕಾಶವಿದೆ. ಪದೇಪದೇ ಬಂಡಾಯ, ಹೋಟೆಲ್,
ರೆಸಾರ್ಟು, ರಾಜಿನಾಮೆ, ಪಕ್ಷಾಂತರ, ಚುನಾವಣೆ ಇಂಥ ಸಮಾಜಗೇಡಿತನಗಳಿಂದ ಮತದಾರ ರೋಸಿ ಹೋಗಿದ್ದಾನೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದು ಅತಿಯಾದರೆ ಅಧೋಗತಿಯಾಗುತ್ತದೆ.

ಮೊನ್ನೆ ಆನಂದ್ ಸಿಂಗ್ ಮಂತ್ರಿಯಾಗಿ ಪ್ರಮಾಣವಚನವನ್ನು ಒಂದು ಬೆಂಕಿಯ ಮೇಲೆ ಪ್ರಮಾಣಿಸಿ ಸ್ವೀಕರಿಸಿದ್ದಾರೆ. ಆ ಬೆಂಕಿಯ ಹೆಸರು ’ವಿರೂಪಾಕ್ಷ’. ಗೊತ್ತಲ್ಲಾ? ನೀಚರು, ಕೆಡುಕರು ದುರುಳರು ದುರಹಂಕಾರಿಗಳು ಮೆರೆಯಲಾರಂಭಿಸಿದರೆ ಅವರ ಸರ್ವನಾಶ ಶತಸಿದ್ಧ ! ಎಲ್ಲರೂ ನೆನಪಿಟ್ಟುಕೊಳ್ಳಬೇಕಿದೆ.