Friday, 22nd November 2024

ಸಮಾಜವನ್ನು ಒತ್ತೆಯಾಳಾಗಿಸಿ ಸ್ವಾರ್ಥ ಸಾಧಿಸುವುದರಲ್ಲಿ ಸಾಮರ್ಥ್ಯವಿದೆ

ರಾವ್ – ಭಾಜಿ
ಪಿ.ಎಂ.ವಿಜಯೇಂದ್ರ ರಾವ್

ಬೈಕನ್ನು ನಿಲ್ಲಿಸಿ, ಇಗ್ನಿಷನ್ ಕೀ ತೆಗೆಯದೆ ರಸ್ತೆ ಬದಿಯಲ್ಲಿ ಉಚ್ಚೆ ಹುಯ್ಯುವ ದೃಶ್ಯವನ್ನು ನಿತ್ಯ ಕಾಣುತ್ತೇವೆ. ಮೂತ್ರ ವಿಸರ್ಜನೆಯ ಮಧ್ಯದಲ್ಲಿ ಬೈಕನ್ನು ಕಳ್ಳನಾರೋ ಗಾಡಿಯ ಮಾಲೀಕನ ಕಣ್ಣೆದುರಿಗೇ ಹಾರಿಸಿಕೊಂಡು ಹೋಗುವಾಗ ಆತ
ಅನುಭವಿಸುವ ಯಾತನೆ ಇದೆಯಲ್ಲ, ಅದು ಅಸಹಾಯಕತೆಯ ಉಚ್ಛ್ರಾಯ ಸ್ಥಿತಿ.

ದೇಶವನ್ನು ಬರಿದುಮಾಡಲೇ ಬಂದ ಹೊರಗಿನ ಜನ ನಮಗೆ ಬಿಟ್ಟುಹೋದ ವ್ಯವಸ್ಥೆಯಲ್ಲಿ, ಯಾರು ಯಾರನ್ನು ಬೇಕಾದರೂ ಅಂತಹ ಶೋಚನೀಯ ಪರಿಸ್ಥಿತಿಗೆ ತಳ್ಳುವಂಥ ವಿಕೃತ ಸಾಮರ್ಥ್ಯವನ್ನು ನಾವು ಪಡೆದುಕೊಂಡಿದ್ದೇವೆ. ಆ ವಿಕೃತ ದೈತ್ಯ ಶಕ್ತಿಯ ಬಗ್ಗೆ ನಾವು ಮೀಸೆ ತಿರುವ ಪರಿಪಾಠವೂ ಉಂಟು.

ಎಲ್ಲಾ ವೃತ್ತಿಗಳಿಗೂ ಸಮಾಜವೆಂಬ ಬೃಹತ್ ತೇರನ್ನು ಸುಗಮವಾಗಿ ಎಳೆಯಬಲ್ಲ ಸಾಮರ್ಥ್ಯವೂ, ಜವಾಬ್ದಾರಿಯೂ ಇದೆ. ಆ ತೇರಿನ ಹಾದಿಯನ್ನು ಏರುಪೇರು ಮಾಡಬಲ್ಲ ವಿಕೃತ ಸಾಮರ್ಥ್ಯವೂ ಊಹಿಸಲಾಗದಷ್ಟಿದೆ. ಆ ವಿಕೃತಿಯ ನಿತ್ಯ ಬಳಕೆ ಮತ್ತು
ಪ್ರದರ್ಶನವೇ ನಮ್ಮ ವ್ಯವಸ್ಥೆಯನ್ನು ಹೈರಾಣಾಗಿಸಿದೆ. ವ್ಯವಸ್ಥೆಯನ್ನು ಎಷ್ಟು ಬುಡಮೇಲು ಮಾಡಬಲ್ಲವೆಂಬ ಆಧಾರದ ಮೇಲೆ ವ್ಯಕ್ತಿ – ಸಾಮರ್ಥ್ಯವನ್ನೂ, ವೃತ್ತಿ ಸಾಮರ್ಥ್ಯವನ್ನೂ ಅಳೆಯುವಂಥ ಹೀನಾಯ ಪರಿಸ್ಥಿತಿಗೆ ನಮ್ಮನ್ನು ನಾವು ದೂಡಿಕೊಂಡಿ ದ್ದೇವೆ.

ಗೃಹಪ್ರವೇಶ ಸಮಾರಂಭಕ್ಕೆ ಅಡುಗೆ ತಯಾರಿಕೆ ಎಡವಟ್ಟಾಗದಂತೆ ನೀರಿನ ಸಮರ್ಪಕ ಸರಬರಾಜಿಗಾಗಿ ವಾಲ್ವ್ ಮ್ಯಾನನ್ನು ಸಂಪ್ರೀತಗೊಳಿಸುವುದೂ ಸಿದ್ಧತೆಯ ಮುಖ್ಯ ಕ್ರಮಗಳಲ್ಲೊಂದು. ಮನೆ ಮಾಲೀಕ ಅವನನ್ನು ಹುಡುಕಿಕೊಂಡು ಹೋಗಿ ಅವನಿಗೆ ಪೂಸಿ ಹೊಡೆದು ಕೈ ಬೆಚ್ಚಗೆ ಮಾಡುವಾಗ ಅವನಿಗಾಗುವ ಸಂತೋಷ ಅವರ್ಣನೀಯ. ಆ ಸಂತೋಷದ ಮೂಲ ಪಡೆದ ಲಂಚ ವಲ್ಲ. ಆ ದೊಡ್ಡ ಮನೆಯ ಗೃಹಪ್ರವೇಶ ಸುಸೂತ್ರವಾಗಿ ನಡೆಯಲು ತನ್ನ ಪಾತ್ರ ಎಷ್ಟು ಮಹತ್ವದ್ದೆಂಬ ಅಂಶದ ಪುನರ್ ದೃಢೀ ಕರಣ.

ಒಂದು ವೇಳೆ, ಆ ಕ್ಷುದ್ರ ದೇವತೆಯನ್ನು ನೀವು ಒಲಿಸಿಕೊಳ್ಳಲಿಲ್ಲವೆಂದರೆ ಅದರ ಪರಿಣಾಮವನ್ನು ಊಹಿಸಿ. ವಾಲ್ವನ್ನು ಮೂರು ಸುತ್ತು ತಿರುಗಿಸುವ ಒಬ್ಬ ವ್ಯಕ್ತಿಗೇ ಮನುಜಪಥದ ದಿಕ್ಕನ್ನು ಬದಲಾಯಿಸಬಲ್ಲ ಬಲವಿದೆ ಎಂದರೆ, ಅಂತಹ ಅನೇಕರನ್ನು ನಿಭಾಯಿಸಬೇಕಾದ, ಅವರೊಡನೆ ನಿತ್ಯ ಸಂಪರ್ಕವಿಟ್ಟುಕೊಳ್ಳಬೇಕಾದ, ಅವರೊಂದಿಗೆ ಏಗಬೇಕಾದ ಅನಿವಾರ್ಯತೆ ಇರುವ
ಬಹಳಷ್ಟು ಮಂದಿಯ ಗತಿ ಏನು? ಅಂತಹ ಸಂದರ್ಭದಲ್ಲಿ ಯಾರಿಗೂ ಅನಾನುಕೂಲವಾಗದಂತೆ ಅಥವಾ ಅನಾನುಕೂಲದ ಪ್ರಮಾಣವನ್ನು ಕನಿಷ್ಠಗೊಳಿಸುವುದಕ್ಕಾಗಿ ನಿರ್ಮಿತವಾದ ಸಂಸ್ಥೆಗಳೇ ಕಾರ್ಯಾಂಗ, ಶಾಸಕಾಂಗ, ಮತ್ತು ನ್ಯಾಯಾಂಗ.

ಅರ್ನಾಬ್ ಗೋಸ್ವಾಮಿಯ ಸಂದರ್ಭದಲ್ಲಿ ಕಾರ್ಯಾಂಗ ಹಣ ಪಡೆದು ನೀರು ಬಿಡುವ ವಾಲ್ವ್ ಮ್ಯಾನ್‌ನಂತೆ ವರ್ತಿಸುತ್ತಿದ್ದರೆ, ಶಾಸಕಾಂಗ ಆ ವಾಲ್ವ್ ಮ್ಯಾನನ್ನು ನಿಯಂತ್ರಿಸುವ ಕಿರಿಯ ಎಂಜಿನಿಯರ್‌ನಂತಿದೆ. ಗೃಹಪ್ರವೇಶದಂದು ರಜೆ ಹಾಕಿ, ಗೃಹಪ್ರವೇಶ
ನೆರವೇರಿಸುತ್ತಿರುವ ಮನೆ ಮಾಲೀಕನ ಆರ್ತಕರೆಯನ್ನು ಸ್ವೀಕರಿಸದೆ ಫೋನ್ ಸ್ವಿಚ್ ಆಫ್ ಮಾಡಿರುವ ಸಹಾಯಕ ಎಂಜಿನಿಯ ರ್‌ನಂತೆ ನ್ಯಾಯಾಂಗ ಕಂಡುಬರುತ್ತಿದೆ.

ಕಾರ್ಯಾಂಗದ ಒಂದು ಭಾಗವಾದ ಪೊಲೀಸ್ ಪ್ರಾಬಲ್ಯದ ಪುಟ್ಟ ಉದಾಹರಣೆಯಾಗಿ ನೈಜ ಘಟನೆಯೊಂದನ್ನು ಹಂಚಿಕೊಳ್ಳು ತ್ತೇನೆ. ತನ್ನ ಮಾತಿಗೊಪ್ಪದ ಒಬ್ಬ ಯುವ ವಕೀಲನಿಗೆ ಇನ್ಸ್ಪೆಕ್ಟರ್ ಹೇಳಿದ್ದು ಹೀಗೆ: ಒಂದು ಕುರೂಪಿ ವೇಶ್ಯೆಯ ಜತೆ ನೀನಿದ್ದೆ ಎಂದು ಫಿಟ್ ಮಾಡುತ್ತೇನೆ, ಹುಷಾರ್!

ಸುಳ್ಳು ಕೇಸ್ ಹಾಕುವ ಬೆದರಿಕೆ. ವೇಶ್ಯೆಯ ಬಳಿ ಹೋದವನೆಂದು ಜಗತ್ತಿಗೆ ಸಾರುವ ಬೆದರಿಕೆ. ಅದರಲ್ಲೂ, ಸ್ಟೇಟಸ್ ಮೈಂಟೇನ್ ಮಾಡದೆ, ಕುರೂಪಿ ವೇಶ್ಯೆಯ ಸಂಗ ಬಯಸಿದ ಬರಗೆಟ್ಟವನೆಂದು ಬಿಂಬಿಸುವ ಕುತಂತ್ರವನ್ನು ಕ್ಷಣಮಾತ್ರದಲ್ಲಿ ಹೆಣೆದು ನಿನ್ನ ಚಾರಿತ್ರ್ಯವನ್ನು ಹತ್ಯೆ ಮಾಡಬಲ್ಲ ಸಾಮರ್ಥ್ಯ ತನಗಿದೆಯೆಂಬ ಕುತ್ಸಿತ ರಣ – ಮದ ಘೋಷಣೆ.

ಸಂವಹನೆಯ ಪರಿಣಾಮ ಯಾವ ರೀತಿ ಇರುತ್ತದೆನ್ನುವುದಕ್ಕೆ ಒಂದು ಉದಾಹರಣೆ ನೀಡಿ ಮತ್ತೆ ಮುಖ್ಯ ವಿಷಯಕ್ಕೆ ಬರುತ್ತೇನೆ. ನನ್ನ ವಿವಾಹಪೂರ್ವ ದಿನಗಳಲ್ಲಿ ಸ್ನೇಹಿತನೊಬ್ಬ ಒಂದು ಊಟದ ಮೆಸ್ ತೋರಿಸಿ ಅಲ್ಲಿ ಅಡುಗೆಗೆ ಸೋಡಾ ಬಳಸುವುದಿಲ್ಲ ವೆಂದು ಹೇಳಿದ್ದ. ಅದು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿತ್ತು. ಅಲ್ಲಿಗೆ ಎಂದಾದರೂ ಒಮ್ಮೆ ಊಟಕ್ಕೆ ಹೋದಾಗಲೆಲ್ಲ ಅವನ ಮಾತು ಕಿವಿಯಲ್ಲಿ ರಿಂಗಣಿಸುತ್ತಿತ್ತು. ಅಲ್ಲಿ ಅಡುಗೆಗೆ ಸೋಡಾ ಹಾಕುವುದಿಲ್ಲವೆಂದೇ ನಂಬಿದ್ದೆ.

ನಾನೆಂದೂ, ಸ್ನೇಹಿತನ ಮಾತನ್ನು ಪ್ರಮಾಣಿಸಿ ನೋಡುವ ಗೋಜಿಗೆ ಹೋಗಲಿಲ್ಲ. ಅವನಿಗೆ ಆ ಮಾಹಿತಿ ನೀಡಿದವರಾರು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅಲ್ಲಿ ಅಡುಗೆಗೆ ಸೋಡಾ ಬಳಸಿದ್ದರೂ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ವಿಷಯ ಏನೆಂದರೆ, ಅಷ್ಟೇನೂ ಮುಖ್ಯವಲ್ಲದ ಒಂದು ಮಾತು ಕೂಡ ಅದನ್ನು ಕೇಳಿದವನನ್ನು ಪ್ರಭಾವಕ್ಕೀಡು ಮಾಡುವ ಬಗೆ ಸಂವ ಹನೆಯ ಸ್ವರೂಪವೇ ಅಂತಹದು.

ಹಾಗಿರುವಾಗ, ಆ ಪೊಲೀಸನು ತನ್ನ ದಾರಿಗೆ ಬರದ ವಕೀಲನೊಬ್ಬನ ಮೇಲೆ ವೇಶ್ಯಾಸಂಗದ ಆರೋಪ ಹೊರಿಸಿ ಮೊಕದ್ದಮೆ ದಾಖಲಿಸಿದ್ದಿದ್ದರೆ ಅದರ ಸತ್ಯಾಸತ್ಯತೆಯನ್ನು ನೀವು ನಾನಾದರೇನಾದರೂ ಪರಿಶೀಲಿಸುವ ಗೋಜಿಗೆ ಹೋಗುತ್ತಿದ್ದೆವೇ, ಸ್ವಾಮಿ? ಅರ್ನಾಬ್ ಪ್ರಕರಣವನ್ನು ಇಲ್ಲಿ ಪ್ರಸ್ತಾಪಿಸಿರುವ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ನೋಡಬೇಕು. ಇಲ್ಲಿ ವ್ಯಾಪಕವಾದ
ಸಂಚಿದೆ. ಅರ್ನಾಬ್‌ನನ್ನು ಬೇಟೆಯಾಡಲಾಗಿದೆ. ಆತನಿಂದ ಆಕ್ರಮಣಕ್ಕೊಳಗಾದವರೆಲ್ಲರೂ ಒಟ್ಟಿಗೆ ಮುಗಿಬಿದ್ದಿದ್ದಾರೆ.
ಪ್ರಜಾಪ್ರಭುತ್ವದ ಶಕ್ತಿಕೇಂದ್ರಗಳೆಂದರೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳಷ್ಟೇ ಅಲ್ಲ, ಧಾರ್ಮಿಕ ಕೇಂದ್ರಗಳೂ ಇವೆ. ಅರ್ನಾಬ್‌ಗೆ ಸಂಬಂಧಪಟ್ಟಂತೆ ಬಾಲಿವುಡ್ ಎಂಬ ದುಷ್ಟಶಕ್ತಿಯ ಪ್ರಭಾವವೂ ಇದೆ.

ಬಾಲಿವುಡ್ ಭೂಗತ ಜಗತ್ತಿನ ಸಭ್ಯ ಮುಖ ಎಂಬುದರ ಅರಿವಿರುವವರಿಗೆ ಅರ್ನಾಬ್ ತನ್ನ ಜೀವಕ್ಕೆ ಅಪಾಯವಿದೆಯೆಂದು ಹೇಳಿದ್ದು ಅವಾಸ್ತವವಲ್ಲ ಎಂದು ತಿಳಿಯುತ್ತದೆ. ಖಾದಿ, ಖಾಕಿಯ ದುರ್ಮಿಲನಕ್ಕೆ ಕಾವಿಯೇತರ ಪೋಷಾಕು ಧರಿಸಿದವರ ಕುಮ್ಮಕ್ಕು ಇಲ್ಲದಿಲ್ಲ. ಅದಕ್ಕೆ ವರ್ಣಮಯ ಬಾಲಿವುಡ್ ಸಾಥ್ ಕೊಡುತ್ತಿದೆ. ಅಬ್ಬರಿಸುತ್ತಿದ್ದ ಪತ್ರಕರ್ತನ ಅವಸಾನವನ್ನು
ಬಯಸುತ್ತಿರುವವರಲ್ಲಿ, ಅನಾಶ್ಚರ್ಯಕರವಾಗಿ, ರಕ್ತಕ್ರಾಂತಿಯ ಮಂತ್ರವನ್ನುಚ್ಚರಿಸುವ ಎಡಪಂಥೀಯ ಪತ್ರಕರ್ತರೂ ಸೇರಿಕೊಂಡಿದ್ದಾರೆ. ತಾತ್ವಿಕ(!)ವಾಗಿ ತಾವು ವಿರೋಧಿಸಿಕೊಂಡೇ ಬಂದಿರುವ ಶಿವಸೇನೆಯೇ ಸಹ-ಪ್ರಾಯೋಜಿಸಿರುವ ಪ್ರಜಾ ಪ್ರಭುತ್ವದ ಕೊಲೆಗೆ ತಮ್ಮ ಕುಡಗೋಲು-ಕೊಡಲಿಗಳನ್ನು ದೇಣಿಗೆ ನೀಡಿದ್ದಾರೆ.

(ಮಾರ್ಕ್ಸ್‌ ಸಿದ್ಧಾಂತದ ಈ ಕೊಲೆಗೆ ಮಾರ್ಕ್ಸಿಸ್ಟರೇ ಕೈಜೋಡಿಸಿಬಿಟ್ಟರೇ! ವೈರಿಯ ಹತ್ಯೆಯಷ್ಟೇ ಮುಖ್ಯ, ಕೊಲೆಗಾರ ಮತ್ತೊಬ್ಬ ವೈರಿಯಾದರೇನು ಎಂಬ ನೀತಿಯನ್ನನುಸರಿಸುತ್ತಿದ್ದಾರೆ ಮಾರ್ಕ್ಸ್‌‌ವಾದಿಗಳು!) ಇಂತಹ ದುರಂತಮಯ ಸನ್ನಿವೇಶದಲ್ಲಿ ಅರ್ನಾಬ್‌ಗೆ ಆಸರೆಯಾಗಿ ಅವರ ಕುಟುಂಬದಾಚೆ ಪ್ರಜ್ಞಾವಂತ ನಾಗರಿಕರು ನಿಂತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯ ಸ್ತಂಭಗಳಿಂದ ಸಿಗದ ಬೆಂಬಲ ಅರ್ನಾಬ್‌ಗೆ ಜನಮಾನಸದ ಶಕ್ತಿಕೇಂದ್ರದಿಂದ ದೊರಕಿದೆ. ಮುಖ್ಯವಾಹಿನಿ ಮಾಧ್ಯಮ ದಿಂದ ನಿರೀಕ್ಷಿಸಲಾಗದ ದನಿ ಸಾಮಾಜಿಕ ಜಾಲತಾಣಗಳಲ್ಲಿ ಕಿವಿಗಡಚಿಕ್ಕುತ್ತಿದೆ. ಈ ದನಿ ಸ್ಟುಡಿಯೋನಲ್ಲಿನ ಅರ್ನಾಬ್ ದನಿಯನ್ನೂ ಮೀರಿಸುವಷ್ಟಿದೆ. ಅರ್ನಾಬ್‌ಗೆ ಯಾವುದೇ ಅಪಾಯವಾದಲ್ಲಿ ನಾಗರಿಕರ ಸಹನೆಯ ಕಟ್ಟೆ ಒಡೆಯುವ ಸಾಧ್ಯತೆ ಇದೆ.

ಅರ್ನಾಬ್‌ರಿಗೆ ಗತಿ ಕಾಣಿಸಲು ತವಕರಾಗಿರುವವರಲ್ಲಿ ಮಾಧ್ಯಮದವರೂ ಇದ್ದಾರೆ ಎಂದು ಹೇಳಿದೆ. ಅರ್ನಾಬ್ ಪತ್ರಕರ್ತನೇ ಅಲ್ಲ, ಪತ್ರಕರ್ತನಾಗಿದ್ದರೆ ನಾನು ಬೆಂಬಲಿಸುತ್ತಿದ್ದ ಎಂದು The Wire ನಲ್ಲಿ ಒಂದು ಲೇಖನ ಪ್ರಕಟವಾಗಿದೆ. ಸಹೋದ್ಯೋಗಿ ಯೊಬ್ಬನ ಅಧ್ಯಾಯ ಮುಗಿಸಲು ಮಾಫಿಯಾ ವರ್ತನೆಯನ್ನು ಸಮರ್ಥಿಸುವ ವ್ಯಕ್ತಿ ಪತ್ರಕರ್ತನಾಗಬಲ್ಲನೇ? ಅಂತಹ ಹೇಳಿಕೆ ನೀಡುವ ಮೂಲಕ ನ್ಯಾಯಾಲಯದ ಮೇಲೆ ಪರೋಕ್ಷವಾಗಿ ಪ್ರಭಾವ ಬೀರಬಲ್ಲನೆಂಬ ಭ್ರಮೆ ಇಂತಹ ವ್ಯಕ್ತಿಗಳಿಗಿರುತ್ತದೆ.

ಸಾರ್ವಜನಿಕರ ಕಣ್ಣಿಗೆ ಲಾಗಾಯ್ತಿನಿಂದಲೂ ಮಂಕು ಬೂದಿಯನ್ನೆರಚಿಕೊಂಡೇ ಬಂದಿರುವ ಅವರಿಗೆ ಅರ್ನಾಬ್ ಗೆ ಮಸಿ ಬಳಿಯುವುದು ಅವರ ಟಿಆರ್‌ಪಿ ವೃದ್ಧಿ ಅಜೆಂಡಾದ ಮತ್ತೊಂದು ಬತ್ತಳಿಕೆ. ಅರ್ನಾಬ್‌ಗೂ, ಮತ್ತೆ ಕೆಲವು ವಾಹಿನಿಗಳಿಗೂ ಇದ್ದ ಟಿಆರ್‌ಪಿ ಸ್ಪರ್ಧೆಯಲ್ಲಿ ಆತನನ್ನು ಹಿಮ್ಮೆಟ್ಟಿಸುವ ಹುನ್ನಾರ ಫಲಿಸುವುದಿರಲಿ Republic TV ಚಾನೆಲ್‌ನ ಟಿಆರ್‌ಪಿ ಇನ್ನೂ ಹೆಚ್ಚಾಗಿ ಸ್ಪರ್ಧಾಳುಗಳ ಸಂಕಟದ ತೀವ್ರತೆಯನ್ನು ಹೆಚ್ಚಿಸಿದೆ.

ಉಚ್ಚೆ ಹುಯ್ಯುವವನ ಅಸಹಾಯಕತೆಯ ದುರುಪಯೋಗಪಡಿಸಿಕೊಂಡು ಬೈಕನ್ನು ಅಪಹರಿಸುವ ಕಳ್ಳ ಹೆಚ್ಚು ದೂರ ಹೋಗಲಾರ. ಇಂದಲ್ಲ ನಾಳೆ ಸಿಕ್ಕಿ ಬೀಳುತ್ತಾನೆ. ಅದನ್ನು ಮನಗಾಣುವುದರ ಜತೆಗೆ ಪ್ರತಿಸ್ಪರ್ಧಿ ಚಾನೆಲ್‌ಗಳು ಮತ್ತು ಅರ್ನಾಬ್ ಟೀಕಾಕಾರರು ಅರಿಯಬೇಕಾದ್ದು ಅರ್ನಾಬ್ ಜನಪ್ರಿಯತೆಯ ಕಾರಣವನ್ನು. ಅದು ಕಣ್ಣಿಗೆ ಕಾಣದಂತೇನಿಲ್ಲ.