ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹವನ್ನು ಹೈಜಾಕ್ ಮಾಡಿ ದೆಹಲಿಯಲ್ಲಿ ಅಧಿಕಾರಕ್ಕೇರಿದ ಅರವಿಂದ್ ಕೇಜ್ರಿವಾಲರ ಪಕ್ಷವನ್ನು ಇಡೀ ದೇಶವೇ ಒಂದು ಕ್ರಾಂತಿಕಾರಕ ಪಕ್ಷವೆಂಬಂತೆ ನೋಡುತ್ತಿತ್ತು.
ದೆಹಲಿಯಲ್ಲಿ ಗದ್ದುಗೆ ಏರಿದ ನಂತರ ನರೇಂದ್ರ ಮೋದಿ ಯವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೇಜ್ರಿವಾಲ್
ಮಹಾನ್ ನಾಯಕನಾಗುತ್ತಾರೆಂದು ಅವರ ಪಕ್ಷದ ಕಾರ್ಯಕರ್ತರು ಕನಸು ಕಂಡಿದ್ದರು. ಆದರೆ ದೆಹಲಿಯ ಚುನಾವಣೆ ಹಾಗೂ ದೇಶಕ್ಕಾಗಿ ನಡೆಯುವ ಚುನಾವಣೆಯನ್ನು ಎಂದೂ ಸಹ ಹೋಲಿಕೆ ಮಾಡಲಿಕ್ಕಾಗುವುದಿಲ್ಲವೆಂಬುದನ್ನು 2014 ಹಾಗೂ 2019ರ ಚುನಾವಣೆಯು ತೋರಿಸಿತು.
ದೆಹಲಿಯ ಚುನಾವಣೆಯಲ್ಲಿ ಶೇ 90ರಷ್ಟು ಕ್ಷೇತ್ರಗಳನ್ನು ಗೆದ್ದಂಥ ‘ಆಮ್ ಆದ್ಮಿ ಪಕ್ಷ’ ಸಂಸತ್ ಚುನಾವಣೆಯಲ್ಲಿ ದೆಹಲಿಯಲ್ಲಿ ಒಂದೇ ಒಂದು ಸೀಟನ್ನೂ ಕೂಡ ಗೆಲ್ಲಲಿಕ್ಕಾಗಲಿಲ್ಲ. ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ ಚುನಾವಣಾ ತಿಕ್ಕಾಟದ ನಡುವೆ ಕೊಚ್ಚಿಹೋದದ್ದು ಮಾತ್ರ ಕಾಂಗ್ರೆಸ್ ಪಕ್ಷ. ಶೀಲಾ ದೀಕ್ಷಿತ್‌ನಂಥ ಮಹಾನ್ ನಾಯಕಿ ಅಷ್ಟು ವರ್ಷಗಳ ಕಾಲ ದೆಹಲಿಯ ಮುಖ್ಯಮಂತ್ರಿಯಾಗಿದ್ದರೂ ಸಹ ಕಾಂಗ್ರೆಸ್ ದೆಹಲಿಯಲ್ಲಿ ನೆಲ ಕಚ್ಚಿದ್ದು ಮಾತ್ರ ವಿಪರ್ಯಾಸವೇ ಸರಿ.
ನಿವೃತ್ತ ಆದಾಯ ತೆರಿಗೆ ಅಧಿಕಾರಿಯಾಗಿದ್ದಂಥ ‘ಕೇಜ್ರಿವಾಲ’ ದೆಹಲಿಯನ್ನು ಉನ್ನತ ಮಟ್ಟದ ಅಭಿವೃದ್ಧಿಯೆಡೆಗೆ ಕೊಂಡೊ ಯ್ಯುತ್ತಾರೆಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಪ್ರಾದೇಶಿಕ ಪಕ್ಷಗಳ ರೀತಿಯಲ್ಲಿ ಚುನಾವಣಾ ಸಮಯದಲ್ಲಿ ‘ಉಚಿತ ಘೋಷಣೆ’ಗಳನ್ನು ಮಾಡುವ ಮೂಲಕ ಮತ್ತದೇ ಹಳೆಯ ರಾಜಕಾರಣ ಮಾಡಿದರು. ದೆಹಲಿಯಲ್ಲಿನ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ರಾಜ್ಯಗಳಿಂದ ಕೆಲಸ ಅರಸಿ ಬಂದಿರುವ ವಲಸಿಗರೇ ಹೆಚ್ಚು. ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ, ಪಂಜಾಬ್, ಹರ್ಯಾಣ, ಜಾರ್ಖಂಡ್, ಈಶಾನ್ಯ ರಾಜ್ಯಗಳಿಂದ ಹೆಚ್ಚಿನ ಜನರು ದೆಹಲಿಯಲ್ಲಿ ಕೆಲಸ ಅರಸಿ ಬರುತ್ತಾರೆ.
ದೆಹಲಿಯ ಜನಸಂಖ್ಯೆಯ ಬಹುಪಾಲು ಜನರು ಮಾರ್ಕೆಟ್ಟುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಮನೆಗೆಲಸ ಮಾಡಿ ಕೊಂಡಿದ್ದಾರೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿದ್ದಾರೆ. ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನಿಟ್ಟು ಕೊಂಡಿದ್ದಾರೆ. ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರಿದ್ದಾರೆ. ಸಣ್ಣ ಸಣ್ಣ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸು ತ್ತಿದ್ದಾರೆ. ಇವರ‍್ಯಾರಿಗೂ ದೆಹಲಿ ತಮ್ಮ ಊರೆಂದು ಅನಿಸುವುದಿಲ್ಲ, ಕೇವಲ ಕೆಲಸ ಅರಸಿ ಬಂದಿರುವುದರಿಂದ ದೆಹಲಿಯ ಜತೆಗೆ ಅಷ್ಟೊಂದು ಭಾವನಾತ್ಮಕ ನಂಟಿರುವುದಿಲ್ಲ.
ಪ್ರತಿನಿತ್ಯ ಕೆಲಸ ಮಾಡಿ ಹಣ ಸಂಪಾದಿಸಿ ಜೀವನ ನಡೆಸಿಕೊಂಡು ಆಗಾಗ ತಮ್ಮ ತಮ್ಮ ಊರುಗಳಿಗೆ ಹೋಗಿ ಬರುತ್ತಿರುತ್ತಾರೆ. ವಲಸಿಗರು ಹೆಚ್ಚಿರುವ ನಗರಗಳಲ್ಲಿ ‘ಉಚಿತ ಸೇವೆ’ಯ ಯೋಜನೆಗಳ ಮೂಲಕ ಚುನಾವಣೆ ಗೆಲ್ಲುವುದು ಸುಲಭ. ಅವರಿಗೆ ಇಂದು ದೆಹಲಿ ನಾಳೆ ಮುಂಬೈ ನಾಳಿದ್ದು ಬೆಂಗಳೂರು ಹೀಗೆ ಎಲ್ಲಿ ಅವಕಾಶ ಹಾಗೂ ಸರಕಾರಿ ಪ್ರಾಯೋಜಿತ ಸೌಲಭ್ಯಗಳು ದೊರೆಯುತ್ತವೆಯೋ ಅಲ್ಲಿಗೆ ಹೋಗಿ ಜೀವನ ಕಟ್ಟಿಕೊಳ್ಳುತ್ತಾರೆ.
ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಸರಕಾರ ಯಶಸ್ವಿಯಾಗಲು ಕಾರಣವಾದವರು ವಲಸಿಗರು. ಬೇರೆ ನಗರಗಳಲ್ಲಿ ಕೇಳಿ ಬರುವ ಸಾಮಾನ್ಯ ಮಾತಾದ ‘ಮೂಲ’ ಮತ್ತು ‘ವಲಸಿಗ’ ವಿಚಾರಗಳು ದೆಹಲಿಯಲ್ಲಿ ಹೆಚ್ಚಾಗಿ ಕೇಳಿಬರುವುದಿಲ್ಲ. ಅಲ್ಲಿನ ವಲಸಿಗರಿಗೆ ತಾವು ಹುಟ್ಟಿ ಬೆಳೆದ ರಾಜ್ಯಗಳೇ ಮೂಲಸ್ಥಾನವಾಗಿರುತ್ತದೆ. ಆದರೆ ಮುಂಬೈ, ಬೆಂಗಳೂರು, ಚೆನ್ನೆ , ಹೈದರಾಬಾದ್ ನಗರಗಳಿಗೆ ಹೋದಲ್ಲಿ ಮೂಲ ಮತ್ತು ವಲಸಿಗರ ನಡುವೆ ಯಾವಾಗಲೂ ಮಾತಿನ ಚಕಮಕಿಯಾಗುತ್ತಲೇ ಇರುತ್ತದೆ.
ಮೂಲ ನಿವಾಸಿಗಳಿಗೆ ತಮ್ಮ ನಾಡು, ನೆಲ, ಜಲವೆಂದರೆ ಸರಕಾರಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ. ಸರಕಾರಿ ಯೋಜನೆಗಳ ಜತೆಗೆ ಯಾರು ತಮ್ಮ ಮೂಲ ಉದ್ದೇಶಗಳಿಗೆ ಬೆಲೆ ಕೊಡುತ್ತಾರೋ ಅಂಥ ಪಕ್ಷದ ಜತೆಗೆ ಮೂಲ ನಿವಾಸಿಗಳು ನಿಲ್ಲುತ್ತಾರೆ. ಉದಾ ಹರಣೆಗೆ ಕರ್ನಾಟಕದಲ್ಲಿ ಬಜೆಟ್ ಮಂಡಿಸಬೇಕಾದರೆ ಹಲವು ಜಾತಿಗಳ ಅಭಿವೃದ್ಧಿ ಪ್ರಾಧಿಕಾರಗಳಿಗೆ ಹಣವನ್ನು ಮೀಸಲಿಡಬೇಕು. ಯಾಕೆಂದರೆ ಪ್ರತಿಯೊಂದು ಜಾತಿಗೂ ತನ್ನದೇ ಆದ ಮೂಲ ನೆಲೆಯೆಂಬುದಿದೆ.
‘ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ’ಕ್ಕೆ 500 ಕೋಟಿಯಷ್ಟು ಹಣವನ್ನು ಮೀಸಲಿಡಲಾಯಿತು. ‘ಮರಾಠ ಅಭಿವೃದ್ಧಿ ಪ್ರಾಧಿಕಾರ’ಕ್ಕೆ 50 ಕೋಟಿಯಷ್ಟು ಹಣವನ್ನು ಮೀಸಲಿಡಲಾಯಿತು. ದೇವಸ್ಥಾನಗಳಿಗೆ, ಮಠಗಳಿಗಿಷ್ಟು ಎಂದು ಹಣವನ್ನು ಮೀಸಲಿಡಬೇಕು. ಇಲ್ಲದಿದ್ದರೆ ನಮ್ಮಲ್ಲಿನ ಮೂಲ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಏಳುತ್ತದೆ? ಅಷ್ಟೇ ಯಾಕೆ ಕರ್ನಾಟಕದಲ್ಲಿ ದಶಕಗಳಿಂದಿರುವ ‘ಕ್ರಿಶ್ಚಿಯನ್’ರ ಅಭಿವೃದ್ಧಿಗೆಂದು 200 ಕೋಟಿಯಷ್ಟು ಹಣವನ್ನು ಮೀಸಲಿಡಲಾಯಿತು. ಆದರೆ ದೆಹಲಿಯಲ್ಲಿ ಈ ರೀತಿಯ ಒಂದೇ ಒಂದು ಪ್ರಾಧಿಕಾರಕ್ಕೆ ಹಣವನ್ನು ಮೀಸಲಿಡುವುದು ಬೇಕಿಲ್ಲ. ಯಾಕೆಂದರೆ ಅಲ್ಲಿನ ವಲಸಿಗರು ಇದನ್ನು ಬಯಸುವುದಿಲ್ಲ.
ಅವರ ಮೂಲ ಊರಿನಲ್ಲಿ ಅಲ್ಲಿನ ರಾಜ್ಯವು ಅವರ ಸಮುದಾಯಕ್ಕೆ ಬೇಕಾದಂಥ ಹಣವನ್ನು ತನ್ನ ಬಜೆಟ್‌ನಲ್ಲಿ ಮೀಸಲಿಟ್ಟಿ ರುತ್ತದೆ. ‘ಆಮ್ ಆದ್ಮಿ ಪಕ್ಷ’ ದೆಹಲಿಯಲ್ಲಿ ಮಂಡಿಸಿದಷ್ಟು ಸುಲಭವಾಗಿ ಬೇರೆ ರಾಜ್ಯಗಳಲ್ಲಿ ಬಜೆಟ್ ಮಂಡಿಸಲು ಸಾಧ್ಯವೇ ಇಲ್ಲ. ದೆಹಲಿಯ ಬಜೆಟ್ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ಯ ಬಜೆಟ್ ಇದ್ದಂತೆ, ಆ ‘ಬಜೆಟ್’ನ ಅಂಶಗಳನ್ನು ತೆಗೆದುಕೊಂಡು ದೇಶದಲ್ಲಿ ಕೇಜ್ರಿವಾಲ್ ಉತ್ತಮ ಬಜೆಟ್ ಮಂಡಿಸಿದ್ದಾರೆನ್ನಲಾಗುವುದಿಲ್ಲ.
ಒಂದು ‘ನಿಂಬೆ’ಕಾಯಿಯನ್ನು ‘ಕಲ್ಲಂಗಡಿ’ ಹಣ್ಣಿಗೆ ತಾಳೆಮಾಡಲು ಬರುವುದಿಲ್ಲ. ಕರ್ನಾಟಕದ ಒಟ್ಟಾರೆ ತೆರಿಗೆಯಲ್ಲಿ ಶೇ.60 ಕ್ಕಿಂತಲೂ ಹೆಚ್ಚು ಪಾಲು ಬೆಂಗಳೂರಿನಿಂದ ಸಂದಾಯವಾಗುತ್ತದೆ. ಈ ಹಣದಿಂದ ಕರ್ನಾಟಕದ ಇತರ ಜಿಗಳ ಅಭಿವೃದ್ಧಿಗೆ ಬೇಕಾದಂಥ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕು. ದೆಹಲಿಯಲ್ಲಿ ಈ ರೀತಿ ಇಲ್ಲವಲ್ಲ, ದೆಹಲಿಯಲ್ಲಿ ಸಂಗ್ರಹವಾದಂಥ ತೆರಿಗೆಯ ಹಣವು ಕೇವಲ ದೆಹಲಿಗೆ ಮಾತ್ರ ಸೀಮಿತ, ಹಾಗಾಗಿ ದೆಹಲಿಯ ‘ಬಜೆಟ್ ’ಯಾವ ರಾಜ್ಯದ ಹೋಲಿಕೆಗೂ ಸಮವಲ್ಲ.
ದೆಹಲಿಯು ರಾಷ್ಟ್ರ ರಾಜಧಾನಿಯೂ ಆಗಿರುವುದರಿಂದ ಕೇಂದ್ರ ಸರಕಾರದಿಂದ ವಿಶೇಷ ಅಭಿವೃದ್ಧಿ ಯೋಜನೆಗಳು ದೆಹಲಿ ಯಲ್ಲಿ ಸದಾ ಕಾಲ ಬರುತ್ತಲೇ ಇರುತ್ತದೆ. ಇದ್ಯಾವುದಕ್ಕೂ ಕೇಜ್ರಿವಾಲ್ ಸರಕಾರ ತನ್ನ ಬಜೆಟ್‌ನಲ್ಲಿ ಹಣ ಮೀಸಲಿಡ ಬೇಕಾದ ಅವಶ್ಯಕತೆಯಿಲ್ಲವಲ್ಲ. ಕರ್ನಾಟಕದಂತೆ ಪ್ರತಿಯೊಂದು ರಾಜ್ಯದಲ್ಲಿಯೂ ಸಹ ಹಲವು ಯೋಜನೆಗಳಿಗೆ ಹಣವನ್ನು ಮೀಸಲಿಡಬೇಕಾಗುತ್ತದೆ.
ಮಹಾರಾಷ್ಟ್ರದಲ್ಲಿ ಹೆಚ್ಚಿನ ತೆರಿಗೆಯು ‘ಮುಂಬೈ’ನಗರದಿಂದ ಕ್ಷಿಂದಾಯವಾಗುತ್ತದೆ. ಆದರೆ ಇಡೀ ರಾಜ್ಯದ ಹಿತದೃಷ್ಟಿಯನ್ನು ಮನಗೊಂಡು ಅಲ್ಲಿನ ರಾಜ್ಯ ಸರಕಾರ ಬಜೆಟ್ ಮಂಡಿಸಬೇಕಾಗುತ್ತದೆ. ತೆಲಂಗಾಣದಲ್ಲಿ ‘ಹೈದರಬಾದ್’ ನಗರದಿಂದ ಹೆಚ್ಚಿನ ತೆರಿಗೆ ಸಂದಾಯ ವಾದರೂ ಸಹ ಇಡೀ ರಾಜ್ಯದ ಹಿತದೃಷ್ಟಿಯಿಂದ ಬಜೆಟ್ ಮಂಡಿಸಬೇಕಾಗುತ್ತದೆ. ತಮಿಳುನಾಡಿನಲ್ಲಿಯೂ ಅಷ್ಟೇ ‘ಚೆನ್ನೈ’ ಮಹಾನಗರದಿಂದ ಹೆಚ್ಚಿನ ತೆರಿಗೆ ಸಂಗ್ರಹವಾದರೂ ಸಹ ಇತರ ಜಿಗಳಿಗೆ ನೀಡಬೇಕಾದಂಥ ಅನುದಾನವನ್ನು ನೀಡಲೇಬೇಕು.
ಕರ್ನಾಟಕದಂಥ ರಾಜ್ಯದಲ್ಲಿ ‘ರೈತ’ರಿಗಾಗಿಯೇ ಸಾವಿರಾರು ಕೋಟಿಯಷ್ಟು ಹಣವನ್ನು ಪ್ರತಿವರ್ಷವೂ ಮೀಸಲಿಡಬೇಕು. ರೈತನು ಬೆಳೆದ ಬೆಳೆಯ ಮೇಲೆ ತೆರಿಗೆಯಿಲ್ಲದ ಕಾರಣ, ಇತರರಿಂದ ಸಂಗ್ರಹವಾದ ತೆರಿಗೆಯಿಂದ ಅನ್ನದಾತನ ಕಷ್ಟಗಳಿಗನು ಗುಣವಾಗಿ ಬಜೆಟ್ ನಲ್ಲಿ ಹಣವನ್ನು ಮೀಸಲಿಡಲೇಬೇಕು. ಸಹಕಾರಿ ಸಂಘಗಳಲ್ಲಿ ‘ಸಬ್ಸಿಡಿ’ದರದಲ್ಲಿ ಸಾಲವನ್ನು ನೀಡಬೇಕು. ಕೃಷಿ ಹೊಂಡಗಳಿಗೆ ಅನುದಾನವನ್ನು ನೀಡಬೇಕು. ಬೀಜಗಳಿಗೆ ಬೇಕಾದಂಥ ಪ್ರೋತ್ಸಾಹ ಧನವನ್ನು ನೀಡಬೇಕು.
ಜಾನುವಾರುಗಳ ಆರೈಕೆಗೆ ಹಣವನ್ನು ಮೀಸಲಿಡಬೇಕು. ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಗಳಿಗೆ ಹಣವನ್ನು ಮೀಸಲಿಡಬೇಕು. ಹಾಲಿಗಿಷ್ಟೆಂದು ಪ್ರೋತ್ಸಾಹ ಧನವನ್ನು ರೈತನಿಗೆ ನೀಡಬೇಕು. ಜಾನುವಾರುಗಳು ಸತ್ತರೆ ಪರಿಹಾರವನ್ನು ನೀಡಬೇಕು. ಇತ್ತೀಚಿಗೆ ಕುರಿಗಳ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಜೋರು
ಧ್ವನಿಯಲ್ಲಿ ಮಾತನಾಡಿದ್ದನ್ನು ಎಲ್ಲರೂ ಕೇಳಿದ್ದೇವೆ. ಇಷ್ಟೆ ಅಂಶಗಳನ್ನು ಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸ
ಬೇಕಾದಂಥ ಪರಿಸ್ಥಿತಿ ರಾಜ್ಯ ಸರಕಾರಗಳದ್ದು. ಈ ಅಂಶಗಳಲ್ಲಿ ಒಂದೇ ಒಂದು ಅಂಶವಾದರೂ ದೆಹಲಿಯ ‘ಕೇಜ್ರಿವಾಲ’ನ
ಸರಕಾರದಲ್ಲಿದೆಯೇ? ದೆಹಲಿಯಲ್ಲಿ ಹಳ್ಳಿಯೆಂಬುದೇ ಇಲ್ಲವಲ್ಲ.
‘ಆಮ್ ಆದ್ಮಿ ಪಕ್ಷ’ಕ್ಕೆ ರೈತನಾಗಿ ಹಣವನ್ನು ಮೀಸಲಿಡುವ ಅವಶ್ಯಕತೆಯೇ ಇಲ್ಲವಲ್ಲ. ದೆಹಲಿಯಲ್ಲಿ ಯಾರು ಕುರಿ ಸಾಗಾಣಿಕೆ ಮಾಡುತ್ತಾರೆ? ದೆಹಲಿಯ ಯಾವ ರೈತನಿಗೆ ಕೇಜ್ರಿವಾಲ್ ಸಹಕಾರ ಸಂಘಗಳಿಂದ ಸಬ್ಸಿಡಿ ದರದಲ್ಲಿ ಸಾಲವನ್ನು ನೀಡಬೇಕು? ದೆಹಲಿಯಲ್ಲಿ ಯಾವ ಕೃಷಿ ಹೊಂಡ ನಿರ್ಮಾಣ ಮಾಡಬೇಕು? ಅಷ್ಟೇ ಯಾಕೆ ದೆಹಲಿಯಲ್ಲಿ ಯಾವ ರೈತರ ‘ಸಾಲಮನ್ನಾ’ ಮಾಡಬೇಕು ಹೇಳಿ? ದೆಹಲಿಯೆಂಬ ನಗರದಲ್ಲಿ ಇದ್ಯಾವುದು ಇಲ್ಲವೇ ಇಲ್ಲ. ಇತರ ರಾಜ್ಯ ಸರಕಾರಗಳ ಶೇ.75ರಷ್ಟು ಯೋಜನೆ ಗಳು ದೆಹಲಿಯಲ್ಲಿ ಬೇಕಾಗಿಯೇ ಇಲ್ಲ. ಆದರೆ ಸಂಗ್ರಹವಾದ ತೆರಿಗೆ ಮಾತ್ರ ಕೇವಲ ದೆಹಲಿಗಷ್ಟೇ ಮೀಸಲು.
ಇಂತಹ ‘ಬಜೆಟ್’ನ ಪ್ರತಿಯನ್ನಿಟ್ಟುಕೊಂಡು ದೇಶದಲ್ಲಿಯೇ ಅತ್ಯುತ್ತಮ ಬಜೆಟ್ ಮಂಡಿಸಿದ್ದೇವೆ. ನಮಗೆ ಇತರ ರಾಜ್ಯಗಳಲ್ಲಿ ಅಧಿಕಾರ ಕೊಡಿಯೆಂದು ಜನರ ಮುಂದೆ ಹೋಗಿ ನಿಲ್ಲುತ್ತಾರೆ. ರೈತರ ಮುಂದೆ ಹೋಗಿ ಮತ ಕೇಳಲು ಇವರ ‘ಬಜೆಟ್’ ಪ್ರತಿಯಲ್ಲಿ
ಏನಿದೆ? ಮನೆಯಲ್ಲಿ ಒಬ್ಬ ಮಗನಿದ್ದರೆ ಸಾಕುವುದು ಸುಲಭ, ಆದರೆ ಮನೆಯಲ್ಲಿ ದುಡಿಯುವ ಒಬ್ಬ ಮಗನ ಜತೆಗೆ, ಓದುತ್ತಿರುವ ಇಬ್ಬರು ಮಕ್ಕಳು, ವಯಸ್ಸಾದಂಥ ಅಪ್ಪ, ಅಮ್ಮ ಎಲ್ಲರು ಇದ್ದರೆ ಒಬ್ಬನ ದುಡಿಮೆಯಿಂದ ಹೇಗೆ ತಾನೇ ಮನೆ ನಡೆಸಲು ಸಾಧ್ಯ? ದೆಹಲಿಯ ಪರಿಸ್ಥಿತಿಯೂ ಅಷ್ಟೇ. ಒಬ್ಬ ಮಗನನ್ನು ಸಾಕುವಷ್ಟು ಸುಲಭದ ಸರಕಾರವದು. ಇತರ ರಾಜ್ಯಗಳ ರೀತಿಯಲ್ಲಿ ಒಂದು ಇಡೀ ಕುಟುಂಬವನ್ನು ಸಾಕುವಷ್ಟು ಕಷ್ಟ ದೆಹಲಿಗಿಲ್ಲ.
ದೆಹಲಿಗೆ ಇಷ್ಟೆ ಪ್ರಯೋಜನಗಳಿದ್ದರೂ ಕೇಜ್ರಿವಾಲ್ ಆಡಳಿತದಲ್ಲಿ ದೆಹಲಿ ಸರಕಾರದ ಸಾಲ ಏರುತ್ತಲಿದೆ. 2019-20ರಲ್ಲಿ 4291 ಕೋಟಿ ಇದ್ದಂಥ ಸಾಲ 2020-21ಕ್ಕೆ 15500 ಕೋಟಿಗೆ ತಲುಪಿದೆ. ಒಂದೇ ಒಂದು ವರ್ಷದಲ್ಲಿ ಸಲವೂ ಮೂರು ಪಟ್ಟು ಹೆಚ್ಚಾಗಿದೆ. 2021-22ರ ಬಜೆಟ್ ಮಂಡನೆಯಲ್ಲಿ 1271 ಕೋಟಿಯ ‘ಆದಾಯ ಹೆಚ್ಚಳ’ವನ್ನು ಮಾತ್ರ ತೋರಿಸಿ, ನಾವು ಮೊದಲ ಬಾರಿಗೆ ದೆಹಲಿಯಲ್ಲಿ ‘ಆದಾಯ ಹೆಚ್ಚಳ’ ಬಜೆಟ್ ಮಂಡಿಸಿದ್ದೇವೆಂದು ಹೇಳುತ್ತಾರೆ.
ಆದರೆ ತಮ್ಮ ಸರಕಾರದ ಸಾಲದ ಬಗ್ಗೆ ಮಾತ್ರ ಮಾತನಾಡುವುದಿಲ್ಲ. 2017-18, 2018-19, 1029-20ರ ನಡುವೆ ಏರಿಕೆಯಾದಂಥ ಸಾಲ, ಆದಾಯ ಕೊರತೆಯ ಬಗ್ಗೆಯೂ ಮಾತನಾಡುವುದಿಲ್ಲ. ಸಾಲ ಮಾಡಿದಂಥ ಹೆಚ್ಚಿನ ಹಣವು ಉಚಿತ ಸೇವೆಗಳಿಗೆ ಹೆಚ್ಚಿಗೆ ಬಳಕೆಯಾಗುವುದರ ಬಗ್ಗೆಯೂ ಮಾತನಾಡುವುದಿಲ್ಲ. ಸಾಲ ಮಾಡಿ ಎಷ್ಟು ಪ್ರಮಾಣದ ‘ಆಸ್ತಿ’ಏರಿಕೆಯಾಯಿತೆಂಬುದರ ಬಗ್ಗೆ ಮಾತನಾಡುವುದಿಲ್ಲ. ವರ್ಷಕ್ಕೆ ಕಟ್ಟುವ ಬಡ್ಡಿಯ ಬಗ್ಗೆ ಮಾತನಾಡುವುದಿಲ್ಲ. ಕೆಲವೊಂದು ಸರಕಾರಿ ಶಾಲೆಗಳ ಅಭಿವೃದ್ಧಿ, ಕೆಲವೊಂದು ಮೊಹ ಕ್ಲಿನಿಕ್‌ಗಳ ಬಗ್ಗೆ ಮಾತ್ರ ಪ್ರಚಾರ ಮಾಡಿ ಬಡವರ ಪರ ಸರಕಾರವೆಂದು ಹೇಳುತ್ತಾರೆ.
ಕರ್ನಾಟಕದ ಜಿಎಸ್‌ಡಿಪಿ ಸುಮಾರು 18 ಲಕ್ಷ ಕೋಟಿ, ದೆಹಲಿಯ ಜಿಎಸ್‌ಡಿಪಿ ಸುಮಾರು 8 ಲಕ್ಷ ಕೋಟಿ. ಕರ್ನಾಟಕದ ಸುಮಾರು ಅರ್ಧದಷ್ಟು ‘ಜಿಎಸ್‌ಡಿಪಿ’ಯನ್ನು ಕೇವಲ ದೆಹಲಿ ನೀಡುತ್ತಿದೆ. ಕರ್ನಾಟಕದ ‘ಜಿಎಸ್‌ಡಿಪಿ’ಯಲ್ಲಿ ತೆರಿಗೆ ಇಲ್ಲದ ಕೃಷಿಯೂ ಸಹ ಸೇರಿದೆ. ದೆಹಲಿಯ ‘ಜಿಎಸ್ ಡಿಪಿ’ಯಲ್ಲಿ ತೆರಿಗೆಯಿಲ್ಲದ ವ್ಯವಹಾರಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಇಷ್ಟಾದರೂ ಸಹ ದೆಹಲಿ ಸರಕಾರದ ಸಾಲ ಮಾತ್ರ ಕೇಜ್ರಿವಾಲ್ ಆಡಳಿತದಲ್ಲಿ ಏರುತ್ತಲಿದೆ.
2021-22ರ ಬಜೆಟ್‌ನಲ್ಲಿ ಸಾಲದ ಮೊತ್ತವನ್ನು ಕಡಿಮೆ ಮಾಡುವಂತೆ ಮಂಡಿಸಿದ್ದರೂ ಸಹ ಸಾಲದ ಮೊತ್ತ ಮಾತ್ರ 9285 ಕೋಟಿಯಷ್ಟಿರುತ್ತದೆ. ರೈತರು ಬೆಳೆದ ಬೆಳೆಯ ಮುಕ್ತ ಮಾರುಕಟ್ಟೆಯ ವಿಚಾರದಲ್ಲಿ 2014ರ ಚುನಾವಣೆಯ ವೇಳೆ ನೀಡಿದ್ದಂಥ ತನ್ನದೇ ಹೇಳಿಕೆಯನ್ನು ಕೇಜ್ರಿವಾಲ್ 2020ರ ರೈತ ಪ್ರತಿಭಟನೆಯಲ್ಲಿ ತಿರುಚಿ ಹೇಳುತ್ತಾರೆ. ಸಮಯಕ್ಕೆ ತಕ್ಕಂತೆ ತನ್ನ ಮಾತುಗಳನ್ನು ಬದಲಿಸಿಕೊಂಡು ಬರುತ್ತಿರುವ ‘ಆಮ್ ಆದ್ಮಿ ಪಕ್ಷ’ದ ನಾಯಕ ಎಂದು ಸಹ ತನ್ನ ನಿಲುವಿನ ಬಗ್ಗೆ ಗಟ್ಟಿಯಾಗಿ ನಿಂತಿಲ್ಲ. ನಗರ ಪ್ರದೇಶಗಳಲ್ಲಿನ ಜನರಿಗೆ ಅನುಕೂಲವಾಗುವಂತಹ ಸಾರಿಗೆ, ನೀರು, ವಿದ್ಯುತ್ ಖರ್ಚುಗಳನ್ನು ಉಚಿತವಾಗಿ ನೀಡುತ್ತೇವೆಂದು ಹೇಳುವ ಮೂಲಕ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದನ್ನು ನೋಡಿದರೆ ತಮ್ಮ ಕಾಲುಗಳ ಮೇಲೆ ತಾವು ನಿಲ್ಲಬೇಕಿರುವ ‘ಪ್ರಜೆಗಳ ಸಬಲೀಕರಣ’ದ ವಿಚಾರದಲ್ಲಿ ‘ಆಮ್ ಆದ್ಮಿ ಪಕ್ಷ’ ಎಷ್ಟು ದುರ್ಬಲವೆಂದು ತಿಳಿಯುತ್ತದೆ.
ಒಟ್ಟಾರೆ ದೇಶದ ಸಮಸ್ಯೆಯನ್ನೇ ಅರಿಯದೆ ಕೇವಲ ಒಂದು ನಗರದ ಸಮಸ್ಯೆಗಳ ಬಗ್ಗೆ ಚಿಂತಿಸಿ ಇಡೀ ದೇಶವನ್ನೇ ಅಳುತ್ತೇವೆಂದು ಹೇಳುವಾಗ ನಗು ಬರುತ್ತದೆ. ಒಂದು ರಾಜ್ಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ, ದೆಹಲಿಯ ಬಜೆಟ್ ಎಲ್ಲರಿಗೂ ಮಾದರಿಯೆಂದು ಹೇಳುವ ‘ಆಮ್ ಆದ್ಮಿ ಪಕ್ಷ’ ಅಪ್ಪಿ ತಪ್ಪಿ ಯಾವುದಾದರೊಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಆ ರಾಜ್ಯದ ಆರ್ಥಿಕ ಪರಿಸ್ಥಿತಿ ಅದೋಗತಿಯಾಗುವುದು ನಿಶ್ಚಿತ.
ಕರ್ನಾಟಕದಲ್ಲಿ ಭಾರಿ ನೀರಾವರಿಗಂತಲೇ 2021-22ರಲ್ಲಿ ಸುಮಾರು 21000 ಕೋಟಿಯಷ್ಟು ಹಣವನ್ನು ಮೀಸಲಿಡ ಲಾಗಿದೆ. ಈ ಹಣದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ, ಭದ್ರ ಎಡದಂಡೆ ಯೋಜನೆ, ಹೀಗೆ ಹಲವಾರು ಯೋಜನೆ ಗಳಿವೆ. ರೈತನ ಜಮೀನಿಗೆ ನೀರುಣಿಸಬೇಕು. ನಗರ ಪ್ರದೇಶಗಳಿಗೆ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ದೆಹಲಿಯಲ್ಲಿ ಅದೆಷ್ಟು ನದಿಗಳಿವೆ? ಅದೆಷ್ಟು ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಬೇಕಿದೆ? ಅಲ್ಲಿನ ಯಾವ ರೈತರಿಗೆ ವ್ಯವಸಾಯ ಮಾಡಲು ನೀರಿನ ಅವಶ್ಯಕತೆ ಮಾಡಬೇಕಿದೆ? ಭಾರೀ ನೀರಾವರಿ ಯೋಜನೆಗಳನ್ನು ಮಾಡಲು ಸಾವಿರಾರು ಎಕರೆಯಷ್ಟು ರೈತರ ಜಮೀನನ್ನು ಸರಕಾರ ಬಳಸಿಕೊಳ್ಳಬೇಕಿರುತ್ತದೆ.
ರೈತರಿಗೆ ನೀಡಬೇಕಿರುವ ಪರಿಹಾರ, ಅಲ್ಲಿ ಉದ್ಭವಿಸುವ ಕಾನೂನಿನ ತೊಡಕುಗಳು ಇವ್ಯಾವುದು ಸಹ ದೆಹಲಿ ‘ಬಜೆಟ್’ನಲ್ಲಿಲ್ಲ. ಕರ್ನಾಟಕದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ಉತ್ತರ ಪ್ರದೇಶ, ಪಂಜಾಬ್, ಮಧ್ಯ ಪ್ರದೇಶ, ರಾಜಸ್ಥಾನ
ರಾಜ್ಯಗಳಲ್ಲಿಯೂ ಕೃಷಿ ಹಾಗೂ ನೀರಾವರಿ ಬಜೆಟ್‌ನಲ್ಲಿನ ಅತ್ಯಂತ ಪ್ರಮುಖ ವಿಷಯ. ಇಂತಹ ರಾಜ್ಯಗಳಿಗೆ ಹೋಗಿ ‘ದೆಹಲಿ’ಮಾದರಿಯ ಬಜೆಟ್ ಮಂಡಿಸಿದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ? ದೇಶದ ಬಹುತೇಕ ರಾಜ್ಯಗಳಲ್ಲಿ
ಗ್ರಾಮೀಣಾಭಿವೃದ್ಧಿ ಮತ್ತೊಂದು ಮಹತ್ತರವಾದ ವಿಷಯ.
ಪ್ರತಿಯೊಂದು ಬಜೆಟ್‌ನಲ್ಲಿಯೂ ಗ್ರಾಮಗಳ ಅಭಿವೃದ್ಧಿಗೆ ಇಂತಿಷ್ಟು ಹಣವನ್ನು ಮೀಸಲಿಡಲೇಬೇಕು. ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಿಗೂ ಅನುದಾನವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ತಮ್ಮ ಬಜೆಟ್‌ನಲ್ಲಿ ಘೋಷಿಸಬೇಕು. ಕರ್ನಾಟಕ ದಲ್ಲಿ ಸುಮಾರು 5800 ಗ್ರಾಮ ಪಂಚಾಯತ್ ಗಳಿವೆ, ಪ್ರತಿಯೊಂದು ಪಂಚಾಯಿತಿಗೂ ಇಂತಿಷ್ಟು ಹಣವನ್ನು ಅನುದಾನದ ರೂಪದಲ್ಲಿ ನೀಡಬೇಕು.
ದೆಹಲಿಯ ‘ಕೇಜ್ರಿವಾಲ’ ಸರಕಾರದ ಬಜೆಟ್‌ನಲ್ಲಿ ಒಂದೇ ಒಂದು ಗ್ರಾಮ ಪಂಚಾಯತ್ ಇಲ್ಲ, ಹಾಗಾದರೆ ದೆಹಲಿಯ ಬಜೆಟ್
ಅದ್ಯಾವ ರೀತಿಯಲ್ಲಿ ಇತರೆ ರಾಜ್ಯಗಳ ಬಜೆಟ್‌ಗಳಿಗೆ ಸರಿಸಾಟಿಯಾಗಿದೆಯಲ್ಲವೇ? ಗ್ರಾಮಗಳಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಗಳಾದ ರಸ್ತೆ, ಶಾಲೆ, ಕುಡಿಯುವ ನೀರು, ಸಾರಿಗೆಯ ವ್ಯವಸ್ಥೆಗಾಗಿಯೇ ಸಾವಿರಾರು ಕೋಟಿಯಷ್ಟು ಹಣವನ್ನು ಇತರ ರಾಜ್ಯಗಳು ಪ್ರತಿವರ್ಷವೂ ತಮ್ಮ ಬಜೆಟ್ ನಲ್ಲಿ ಎತ್ತಿಡಬೇಕಿದೆ.
ಕೇಜ್ರಿವಾಲ್ ಉಚಿತವಾಗಿ ನೀಡುತ್ತಿರುವ ಸಾರಿಗೆ ವ್ಯವಸ್ಥೆ, ಮೆಟ್ರೋ ವ್ಯವಸ್ಥೆ, ನೀರು, ವಿದ್ಯುಚ್ಛಕ್ತಿ ಕೇವಲ ದೆಹಲಿ ನಗರಕ್ಕಷ್ಟೇ ಮೀಸಲು, ಅಲ್ಲಿ ಯಾವ ಹಳ್ಳಿಯು ಇಲ್ಲ. ದೆಹಲಿಯ ಬಜೆಟ್‌ನಲ್ಲಿ ಗ್ರಾಮಗಳ ಅಭಿವೃದ್ಧಿಗಾಗಿ ಹಣವನ್ನೇ ಮೀಸಲಿಡಬೇಕಿಲ್ಲ. ದೆಹಲಿ ನಗರವೊಂದಕ್ಕೆ ‘ಉಚಿತಸೇವೆ’ಗಳಿಗಾಗಿ ಬಂದಂಥ ತೆರಿಗೆ ಹಣವನ್ನು ಎತ್ತಿಟ್ಟರೆ ಸಾಕು. ದೆಹಲಿಯ ಯಾವ ಹಳ್ಳಿಗೂ ನೀರು, ವಿದ್ಯುತ್, ರಸ್ತೆ ನೀಡುವ ಅವಶ್ಯಕತೆ ಇಲ್ಲವೇ ಇಲ್ಲ. ದೆಹಲಿಯಲ್ಲಿ ‘ಪಂಚಾಯತ್ ರಾಜ್’ ವ್ಯವಸ್ಥೆಯೇ ಇಲ್ಲ.
ರಾಜ್ಯಗಳ ಅತಿದೊಡ್ಡ ಇಲಾಖೆಯದಂಥ’ ಗ್ರಾಮೀಣಾಭಿವೃದ್ಧಿ ಇಲಾಖೆಯೇ ದೆಹಲಿಯಲ್ಲಿಲ್ಲದಿರುವಾಗ ಆಮ್ ಆದ್ಮಿ ಪಕ್ಷದ
ಬಜೆಟ್ ಮಾದರಿಯನ್ನು ಹೇಗೆ ತಾನು ಇತರ ರಾಜ್ಯಗಳು ಮಾದರಿಯಾಗಿ ಒಪ್ಪಲು ಸಾಧ್ಯ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಎಂದಿಗೂ ಸಹ ಕರ್ನಾಟಕ ರಾಜ್ಯದ ಬಜೆಟ್‌ಗೆ ಹೋಲಿಕೆಯಾಗುವುದಿಲ್ಲ. ಅದೇ ರೀತಿ ದೆಹಲಿಯ ಬಜೆಟ್ ಸಹ ರಾಜ್ಯ ಹಾಗೂ ದೇಶದ ಬಜೆಟ್‌ಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.
‘ಆಮ್ ಆದ್ಮಿ ಪಕ್ಷ’ವು ದೆಹಲಿಯಿಂದ ಆಚೆಗೆ ತನ್ನ ಅಧಿಕಾರವನ್ನು ವಿಸ್ತರಿಸಲು ಸಾಧ್ಯವಾಗದೆ ಇರಲು ಕಾರಣ, ತನ್ನ ಸಂಕುಚಿತ ವರ್ತನೆ. ಪ್ರಾದೇಶಿಕ ಪಕ್ಷಗಳು ಒಂದು ರಾಜ್ಯಕ್ಕೆ ಸೀಮಿತವಾಗಿ ಇಡೀ ರಾಜ್ಯದ ಆಗುಹೋಗುಗಳನ್ನು ಮನಗೊಂಡು ಅಧಿಕಾರಕ್ಕೆ ಬರುತ್ತದೆ. ‘ಆಮ್ ಆದ್ಮಿ ಪಕ್ಷ’ ಪ್ರಾದೇಶಿಕ ಪಕ್ಷಕ್ಕಿಂತಲೂ ಕೆಳಗೆ ಅಂದರೆ ಕೇವಲ ಒಂದು ನಗರಕ್ಕೆ ಮಾತ್ರ ಸೀಮಿತವಾದ ಪಕ್ಷ ವೆಂದರೆ ತಪ್ಪಿಲ್ಲ. ತಾನು ಮಂಡಿಸುವ ಬಜೆಟ್ ಕೇವಲ ದೆಹಲಿಯೆಂಬ ನಗರಕ್ಕೆ ಸೀಮಿತವೆಂಬ ಅಂಶವನ್ನು ಅರ್ಥ ಮಾಡಿಕೊಳ್ಳ ಬೇಕು. ರಾಜ್ಯ ಸರಕಾರದ ಚುನಾವಣೆಗಳು ಬಂದಾಗ ಈ ಪಕ್ಷದ ಪ್ರಣಾಳಿಕೆಯಲ್ಲಿ ರೈತರ ಸಮಸ್ಯೆ, ಗ್ರಾಮಗಳ ಅಭಿವೃದ್ಧಿ, ನೀರಾವರಿ ಯೋಜನೆಗಳ ಬಗ್ಗೆ ಅರಿವೇ ಇರುವುದಿಲ್ಲ.
ಪಂಜಾಬಿನಲ್ಲಿ ‘ಡ್ರಗ್ಸ್’ ವಿಷಯವನ್ನು ಮುಂದಿಟ್ಟುಕೊಂಡು ಕೆಲವೊಂದಷ್ಟು ಸೀಟುಗಳನ್ನು ಆಗ ಗೆದ್ದದ್ದು ಬಿಟ್ಟರೆ ಮತ್ತೆಲ್ಲೂ ತನ್ನ ಅಧಿಕಾರವನ್ನು ವಿಸ್ತರಿಸಲಾಗಲಿಲ್ಲ. ಮೊನ್ನೆ ನಡೆದ ಸೂರತ್ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜತೆ ಕೈ ಜೋಡಿಸಿ
ಮತ್ತದೇ ದೆಹಲಿ ಮಾದರಿಯ ಯೋಜನೆಗಳ ಬಗ್ಗೆ ಹೇಳಿ 27 ಕ್ಷೇತ್ರಗಳಲ್ಲಿ ಜಯಗಳಿಸಿದ್ದು ಬಿಟ್ಟರೆ ಮತ್ಯಾವ ದೊಡ್ಡ ಸಾಧನೆ ಯನ್ನು ಇದುವರೆಗೂ ಮಾಡಿಲ್ಲ. ದೆಹಲಿಯ ಬಜೆಟ್ ಕೇವಲ ಒಂದು ನಗರಕ್ಕಷ್ಟೇ ಸೀಮಿತ, ಅದರಲ್ಲಿಯೂ ರಾಷ್ಟ್ರ ರಾಜಧಾನಿ ಯಲ್ಲಿ ಸಂಗ್ರಹವಾಗುವ ತೆರಿಗೆಯ ಎಲ್ಲ ಪಾಲನ್ನೂ ಅಲ್ಲಿಯೇ ಬಳಕೆ ಮಾಡಿದ ಮೇಲೂ ಸಹ ‘ದೆಹಲಿ’ ಸರಕಾರ ಸಾಲದ ಮೊತ್ತ ವನ್ನು ಹೆಚ್ಚಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಕೊನೆಯದಾಗಿ ಮತ್ತದೇ ಮಾತು ಒಂದು ನಗರದ ಅಭಿವೃದ್ಧಿಗಾಗಿ ಮಂಡಿಸಿದ ಬಜೆಟ್ ಎಂದೂ ಸಹ ಒಂದು ರಾಜ್ಯ ಹಾಗೂ ದೇಶದ ಬಜೆಟ್‌ಗೆ ಮಾದರಿಯಾಗಲು ಸಾಧ್ಯವೇ ಇಲ್ಲ.