ನೆನಪಿನಂಗಳ
ಡಾ.ಸಿ.ಎನ್.ಅಶ್ವತ್ಥನಾರಾಯಣ
ಕೆಂಪೇಗೌಡರ ಪ್ರತಿಮೆಯಡಿ 120 ಟನ್ ಕಬ್ಬಿಣವನ್ನು ಬಳಸಲಾಗಿದ್ದು, 18 ಅಡಿ ಎತ್ತರದ ಉಷ್ಣತಾ ನಿರೋಧಕ ಕಾಂಕ್ರೀಟ್ ಕಟ್ಟೆ ಪ್ರತಿಮೆಯ ಅಡಿಪಾಯವಾಗಿದೆ. ಅದರ ಮೇಲೆ ತಲಾ 1 ಟನ್ ತೂಕದ 4 ಕಂಚಿನ ಉಬ್ಬುಶಿಲ್ಪ ಗಳನ್ನು, ಸುತ್ತಲೂ ಭೂದೃಶ್ಯಗಳನ್ನು ಅಂದವಾಗಿ ರೂಪಿಸಲಾಗಿದೆ.
ಬೆಂಗಳೂರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಮೇಲೆ ಅಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು ಎನ್ನುವ ಉದ್ದೇಶವಿತ್ತು. ಈ ದಿಕ್ಕಿನಲ್ಲಿ ಹಿಂದಿನ ಸರಕಾರ ಗಳೂ ಪ್ರಯತ್ನ ಮಾಡಿದ್ದುವು. ಆದರೆ, ಸರಿಯಾದ ಸ್ಥಳ ಯಾವುದೆಂಬುದು ತೀರ್ಮಾನ ಆಗಿರಲಿಲ್ಲ. ಮೊದಲಿನ ಜಾಗ ವಿಮಾನ ನಿಲ್ದಾಣದ ಆಚೆ ಇತ್ತು. ಎತ್ತರದ ದೃಷ್ಟಿಯಿಂದ ನೋಡಿದಾಗ ಅದು ತೊಡಕಾಗುವ ಸಾಧ್ಯತೆ ಇತ್ತು. ಹಾಗಾಗಿ ಸುಮಾರು 15 ಅಡಿ ಎತ್ತರದ ಪ್ರತಿಮೆಯನ್ನಷ್ಟೇ ಮಾಡಬೇಕು ಎಂಬ ಆಲೋಚನೆ ಆಗ ಇತ್ತು.
ಆದರೆ, ಅದು ಸಾಂಕೇತಿಕವಾಗಿ ಇರುತ್ತಿತ್ತು ಮತ್ತು ಅದು ಕೇವಲ ಕಾಗದದ ಮೇಲೆ ಇದ್ದ ಒಂದು ಯೋಜನೆಯಾಗಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಕೂಡಲೆ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ನಿರ್ಧಾರವನ್ನು ಪ್ರಕಟಿಸಿದರು. ಹೀಗೆ ಪ್ರಕಟಣೆ ಮಾಡಿದ ನಂತರ ನನ್ನನ್ನು ಕರೆದ ಅವರು, ‘ಇದನ್ನು ಕಾರ್ಯರೂಪಕ್ಕೆ ತರುವ ಹೊಣೆ ನಿಮ್ಮದು’ ಎಂದು ಹೇಳಿದರು.
ಇದಕ್ಕೂ ಮುಂಚೆಯೇ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ರಚನೆಯಾಗಿತ್ತು. ಅದರ ಉಪಾಧ್ಯಕ್ಷರಾಗಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಇರುತ್ತಾರೆ. ಹೀಗಾಗಿ ನಾನು ಆ ಪ್ರಾಧಿಕಾರದ ಉಪಾಧ್ಯಕ್ಷನಾಗಿದ್ದೆ. ಇದರ ಜತೆಗೆ ಪ್ರತಿಮೆ ಸ್ಥಾಪನೆಯ ಉಸ್ತುವಾರಿಯೂ ನನ್ನ ಭುಜದ ಮೇಲೆ ಬಿದ್ದಂತಾಯಿತು. ಯೋಜನೆ ರೂಪಿಸುವುದೇ ಬಹಳ ಮುಖ್ಯವಾದುದು ಮತ್ತು ಅದು ಸರಿಯಾಗಿ ಇರಬೇಕು. ಹಲವು ಸುತ್ತಿನ ಮಾತುಕತೆಗಳ ನಂತರ ಈಗಿನ ಜಾಗ ನಿಗದಿಯಾಯಿತು.
ಇಂಥ ದೊಡ್ಡ ಕೆಲಸಗಳು ರಾತ್ರೋರಾತ್ರಿ ಆಗುವುದಿಲ್ಲ ಮತ್ತು ಅದಕ್ಕೆ ಹಲವು ಅಡಚಣೆಗಳೂ ಇರುತ್ತವೆ. ಆದರೆ, ಒಮ್ಮೆ ಸಂಕಲ್ಪ ಮಾಡಿದರೆ ಅವುಗಳೆಲ್ಲ ತಾನೇ ತಾನಾಗಿ ನಿವಾರಣೆಯಾಗಿ ಸ್ಪಷ್ಟವಾದ ಹಾದಿ ಕಾಣಿಸಲು ಶುರುವಾಗುತ್ತದೆ. ಕೆಂಪೇಗೌಡರ ಪ್ರತಿಮೆ ಹೇಗಿರಬೇಕು ಎನ್ನುವುದು ನಮ್ಮ ಮುಂದೆ ಇದ್ದ ಪ್ರಶ್ನೆಯಾಗಿತ್ತು. ಅವರು ಒಬ್ಬ ಶ್ರೇಷ್ಠ ಆಡಳಿತಗಾರ. ಶೂರ ಮತ್ತು ಸಾಮಂತ. ಈ ಮೂರೂ ವ್ಯಕ್ತಿತ್ವಗಳು ಆ ಪ್ರತಿಮೆಯಲ್ಲಿ ಹೇಗೆ ಮೇಳೈಸಬೇಕು ಎಂಬ ವಿಚಾರ ನಮ್ಮ ಮುಂದೆ ಇತ್ತು.
ಮುಖ್ಯಮಂತ್ರಿಗಳು, ಸ್ವಾಮೀಜಿಯವರು ಮತ್ತು ವಿವಿಧ ಕ್ಷೇತ್ರಗಳ ಪರಿಣತರ ಜತೆಗೆ ಚರ್ಚಿಸಿ ಅಂತಿಮವಾಗಿ ಪ್ರತಿಮೆಯ ನಿರ್ಮಾಣದ ಹೊಣೆಯನ್ನು ರಾಂ ಸುತಾರ್ ಅವರಿಗೇ ಕೊಡಬೇಕು ಎಂದು ನಿರ್ಧರಿಸಿದೆವು. ಸುತಾರ್ ಅವರಿಗೆ ಈಗಾಗಲೇ ಹಲವು ಪ್ರತಿಮೆಗಳನ್ನು ರೂಪಿಸಿರುವ ಅನುಭವವಿದೆ. ಪ್ರತಿಮೆ ತಯಾರುಮಾಡುವುದು ಒಂದು ವಿಚಾರವಾದರೆ, ಅದನ್ನು ತಂದು ನಿಲ್ಲಿಸಿದ ಮೇಲೆ ಏನೂ ತೊಂದರೆಯಾಗಬಾರದು ಎನ್ನುವುದು ಇನ್ನೊಂದು ವಿಚಾರ.
ಮುಖ್ಯವಾಗಿ ಅದು ಗಾಳಿ ನಿರೋಧಕ ಮತ್ತು ಭೂಕಂಪನ ನಿರೋಧಕ ಶಕ್ತಿ ಹೊಂದಿರಬೇಕು. ಈ ಕುರಿತು ನಾವು ಆಯಾ ಕ್ಷೇತ್ರಗಳ ತಜ್ಞರಿಂದ ಮಾಹಿತಿ ಪಡೆದೆವು. ಅಂತಿಮವಾಗಿ 64 ಕೋಟಿ ರುಪಾಯಿ ವೆಚ್ಚದಲ್ಲಿ 100 ಟನ್ ತೂಕದ ಪ್ರತಿಮೆ ಮಾಡುವುದು ಎಂದು ನಿರ್ಣಯಿಸಿದೆವು. ಪ್ರತಿಮೆಯ ಅಡಿಯಲ್ಲಿ 120 ಟನ್ ಕಬ್ಬಿಣವನ್ನು ಬಳಸಿದ್ದೇವೆ. 18 ಅಡಿ ಎತ್ತರದ ಉಷ್ಣತಾ ನಿರೋಧಕ ಕಾಂಕ್ರೀಟ್ ಕಟ್ಟೆಯನ್ನು ಪ್ರತಿಮೆಯ ಅಡಿಪಾಯವಾಗಿ ನಿರ್ಮಿಸಿದ್ದೇವೆ. ಅದರ ಮೇಲೆ ತಲಾ ಒಂದು ಟನ್ ತೂಕದ ನಾಲ್ಕು ಕಂಚಿನ ಉಬ್ಬುಶಿಲ್ಪಗಳನ್ನು ಮಾಡಿಸಿದ್ದೇವೆ. ಸುತ್ತಲೂ ಭೂದೃಶ್ಯಗಳನ್ನು ಅಂದವಾಗಿ ರೂಪಿಸಲಾಗಿದೆ.
ಕೋವಿಡ್ ಇದ್ದರೂ ಅದರಿಂದ ಎಷ್ಟೇ ಅಡಚಣೆಗಳು ಬಂದರೂ ಯಾವ ಕೆಲಸವನ್ನೂ ನಾವು ನಿಲ್ಲಿಸಲಿಲ್ಲ. ಎಷ್ಟು ಜನ ಕೆಲಸ ಮಾಡಬೇಕಿತ್ತೋ ಅಷ್ಟು ಜನ ಅಲ್ಲಿ ಕೆಲಸ ಮಾಡಿದರು. ಥೀಮ್ ಪಾರ್ಕ್ ಮತ್ತು ಭೂದೃಶ್ಯಗಳ ನಿರ್ಮಾಣಕ್ಕೆ 20 ಕೋಟಿ ರುಪಾಯಿ ತೆಗೆದಿರಿಸಲಾಗಿದ್ದು, ಅದರ ಕೆಲಸವೂ ಶುರುವಾಗಿದೆ. ಪರಿಣತರನ್ನು ಕರೆಸಿಯೇ ಈ ಕೆಲಸ ಮಾಡುತ್ತಿದ್ದೇವೆ. ಹಲವು ಘಟಕಗಳು ಅದರಲ್ಲಿ ಇರಲಿವೆ. ಎತ್ತಿನ ಬಂಡಿಯ ಪರಿಕಲ್ಪನೆಯನ್ನೂ ಅಲ್ಲಿ ಅಳವಡಿಸಿದ್ದೇವೆ. ಭೂದೃಶ್ಯಗಳಲ್ಲಿ ಕೆಂಪೇಗೌಡರು ಕೆರೆ ಕಟ್ಟೆಗಳನ್ನು ನಿರ್ಮಿಸಿರುವುದಕ್ಕೆ ಪ್ರಾಮುಖ್ಯ ಕೊಟ್ಟಿದ್ದೇವೆ.
ಅಲ್ಲಿ ನೀರಿನ ಹರಿವು ಇದೆ, ಕಾಲುವೆಗಳು ಇವೆ. ಜಲ ಮತ್ತು ಹಸಿರು ಸಂಪತ್ತಿನ, ಸಮೃದ್ಧಿಯ ದ್ಯೋತಕ. ಇದರ ಜತೆಗೆ ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿರುವ ಮೆಟಾವರ್ಸ್ ಅನ್ನೂ ಇಲ್ಲಿ ಅಳವಡಿಸಲಿದ್ದೇವೆ. ಅದು ವರ್ಚುಯಲ್ ಅನುಭವನ್ನು
ತಂದುಕೊಡುತ್ತದೆ. ಆ ತಂತ್ರಜ್ಞಾನದ ಮೂಲಕ ಕೆಂಪೇಗೌಡರನ್ನು ನಿಜರೂಪದಲ್ಲಿಯೇ ನಾವು ಕಾಣಬಹುದು. ಥೀಮ್ ಪಾರ್ಕ್ ಆದ ಮೇಲೆ ಬೆಂಗಳೂರು ಮತ್ತು ಸುತ್ತಮುತ್ತ ಇರುವ ಕೆಂಪೇಗೌಡರ ತಾಣಗಳನ್ನು ಒಳಗೊಂಡು ಒಂದು ಪ್ರವಾಸಿ ಸರ್ಕಿಟ್
ಮಾಡುವ ಉದ್ದೇಶವಿದೆ. ಎಲ್ಲವನ್ನೂ ಸಾಧ್ಯವಾದಷ್ಟು ಬೇಗ ಮಾಡುತ್ತೇವೆ.
ಹತ್ತಿರದ ಕೆಂಪಾಪುರದಲ್ಲಿ ಕೆಂಪೇಗೌಡರ ವೀರಸಮಾಧಿ ಇರುವ ಐದೂವರೆ ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು 11 ಕೋಟಿ ರುಪಾಯಿ ಸಂದಾಯ ಮಾಡಿದ್ದೇವೆ. ಕೆಂಪಾಪುರ ಅಭಿವೃದ್ಧಿಗೂ ಎಲ್ಲ ಸಿದ್ಧತೆಗಳು ಆದಂತೆ ಆಗಿದೆ. ಈ ಪ್ರತಿಮೆಯ ಸ್ಥಾಪನೆ ಮಾಡುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಯವರು ತೋರಿಸಿದ ಮುತುವರ್ಜಿ ಮತ್ತು ಮಾಡಿದ ಮಾರ್ಗದರ್ಶನದಿಂದಾಗಿಯೇ ಈ ಕೆಲಸ ಕೇವಲ 18 ತಿಂಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿತು.
ನಮಗೆ ಹಣಕಾಸಿನ ಯಾವುದೇ ತೊಂದರೆಯಾಗದಂತೆ ಇವರಿಬ್ಬರೂ ನೋಡಿಕೊಂಡರು ಎಂಬುದನ್ನು ನಾನು ಇಲ್ಲಿ ಕೃತಜ್ಞತೆ ಯಿಂದ ನೆನಪಿಸಿಕೊಳ್ಳುತ್ತೇನೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು, ಶ್ರೀ ನಂಜಾವಧೂತ ಸ್ವಾಮೀಜಿ ಯವರು, ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರು ನಮಗೆ ಆಗಾಗ ಉಪಯುಕ್ತ ಸಲಹೆ-ಸೂಚನೆ
ನೀಡಿzರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ ಸೇರಿದಂತೆ ಅನೇಕ ರಾಜಕೀಯ ಧುರೀಣರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈ ಕೆಲಸ ಮಾಡಿದ್ದೇವೆ.
ಹಲವು ಕಡೆ ಸವಾಲುಗಳು ಎದುರಾದವು. ಆದರೆ, ಯಾವ ವಿಘ್ನವೂ ಇಲ್ಲದೆ ಅಂತಿಮವಾಗಿ ಈ ಪ್ರತಿಮೆ ಈಗ ಆಕಾಶದೆತ್ತರಕ್ಕೆ ಎದ್ದುನಿಂತಿದೆ ಎಂಬುದು ನನಗೆ ಸಂತೋಷದ, ಹೆಮ್ಮೆಯ ಸಂಗತಿ. ಕೆಂಪೇಗೌಡರ ಬದುಕು ಒಂದು ಸ್ಫೂರ್ತಿದಾಯಕ ಕಥೆ. ಸಾಮಂತರಾಗಿ ಇದ್ದವರು ಈ ಮಟ್ಟಕ್ಕೆ ಸಾಧನೆ ಮಾಡಿದರು ಎಂದರೆ ಅದು ಸಾಮಾನ್ಯ ಸಂಗತಿಯಲ್ಲ. ಅದನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿದೆ. ಅದಕ್ಕಾಗಿಯೇ ಇದಕ್ಕೆ ‘ಪ್ರಗತಿಯ ಪ್ರತಿಮೆ’, ’Statue of Prosperity’ ಎಂದು
ಹೆಸರಿಟ್ಟಿ ದ್ದೇವೆ.
ಬೆಂಗಳೂರು ಐಟಿ-ಬಿಟಿ ಮಾತ್ರವಲ್ಲದೆ ಸ್ಟಾರ್ಟ್ ಅಪ್‌ಗಳಲ್ಲಿ, ನಾವೀನ್ಯಗಳಲ್ಲಿ ದಾಪುಗಾಲಿನ ಹೆಜ್ಜೆಯಿಡುತ್ತ ಮುನ್ನಡೆಯುತ್ತಿದೆ. ಇದು ಯುವಜನರ ಆಶೋತ್ತರಗಳ ರಾಜಧಾನಿಯಾಗಿದೆ. ಈ ನಗರದ ಜತೆಗೆ ಇಡೀ ಕರ್ನಾಟಕವನ್ನು ಬೆಸೆಯುವ ಸಲುವಾಗಿ ರಾಜ್ಯದಾದ್ಯಂತದ 22 ಸಾವಿರಕ್ಕಿಂತ ಹೆಚ್ಚು ಹಳ್ಳಿ, ಪಟ್ಟಣ ಮತ್ತು ನಗರಗಳಿಂದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ತರುವ ಕೆಲಸ ಮುಗಿದಿದೆ. ಈ ಮೃತ್ತಿಕೆಯನ್ನು ಪ್ರತಿಮೆಯ ಸುತ್ತಲೂ ನಿರ್ಮಿಸುವ ಕೆಂಪೇಗೌಡರ ಗಡಿಗೋಪುರಗಳ ಪ್ರತಿರೂಪಗಳಲ್ಲಿ ಶಾಶ್ವತಗೊಳಿಸಲಿದ್ದೇವೆ.
ಕೆಂಪೇಗೌಡರ ಪ್ರತಿಮೆಯ ಅನಾವರಣ ಎನ್ನುವುದು ಒಂದು ಕಾರ್ಯಕ್ರಮ ಮಾತ್ರವಲ್ಲ, ಅದೊಂದು ಅಭಿಯಾನ. ಅದು ಆ ಮಹಾನುಭಾವನ ಸುಸ್ಥಿರ ನಗರ ಪರಿಕಲ್ಪನೆಯ ಮುಂದುವರಿಕೆ. ಕೆಂಪೇಗೌಡರು ಕಂಡ ಸರ್ವ ಜನಾಂಗದ ಶಾಂತಿಯ ತೋಟದ ಕನಸನ್ನು ಸಾಕಾರಗೊಳಿಸುವ ಅಭಿಯಾನ. ಪ್ರಧಾನಿ ನರೇಂದ್ರ ಮೋದಿಯವರೂ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಕನಸನ್ನು ನನಸು ಮಾಡಲು ಹೊರಟ ಧೀಮಂತ ನಾಯಕರು. ಅವರು ಶುಕ್ರವಾರ ನವೆಂಬರ್ 11ರಂದು ಈ ಪ್ರತಿಮೆಯನ್ನು
ಅನಾವರಣ ಮಾಡಲಿರುವುದು ನಮ್ಮ ಜೀವನದಲ್ಲಿ ಒಂದು ಅಮೃತ ಘಳಿಗೆ.
ಕರ್ನಾಟಕದ ಇತಿಹಾಸದಲ್ಲಿ ಚಿನ್ನದ ರೇಕುಗಳಿಂದ ಬರೆಯಬೇಕಾದ ಒಂದು ಅಪೂರ್ವ ಅಧ್ಯಾಯ.