Thursday, 12th December 2024

ಹೀಗಾದರೆ ದೇವರ ಸ್ವಂತ ನಾಡಿನ ಕಥೆಯೇನು ?

ವಿಶ್ಲೇಷಣೆ

ಗಣೇಶ್ ಭಟ್, ವಾರಣಾಸಿ

ganeshabhatv@gmail.com

ಉದ್ಯಮಗಳು ಇಲ್ಲದೇ ಇರುವುದರಿಂದ ಕೇರಳದ ಆದಾಯವು ಕೂಡ ಕಡಿಮೆಯೇ. ಜಿಎಸ್ಟಿ ಸಂಗ್ರಹದಲ್ಲಿ ಕೇರಳವು ೧೫-೧೬ ನೇ ಸ್ಥಾನ ದಲ್ಲಿರುತ್ತದೆ. ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕೇರಳವು ಆದಾಯಕ್ಕಾಗಿ ಲಾಟರಿ ಮತ್ತು ಮದ್ಯ ಮಾರಾಟವನ್ನು ಅವಲಂಬಿಸಬೇಕಾಗಿರುವುದು ನಾಚಿಕೆಗೇಡಿನ ಪರಿಸ್ಥಿತಿ ಎಂದು ಟೀಕಿಸಿದ್ದರು

ಒಂದು ಕಾಲದಲ್ಲಿ ಹಲವು ಪ್ರಥಮಗಳ ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಿದ್ದ ಕೇರಳ, ಇಂದು ಇಂತಹ ಪರಿಸ್ಥಿತಿಗೆ ತಲುಪುತ್ತದೆ ಎಂದು ಯಾರೂ ಭಾವಿಸಿರಲು ಸಾಧ್ಯವಿಲ್ಲ. ಕೇರಳದಲ್ಲಿ ಸಾಕಷ್ಟು ಮಳೆ ಬೆಳೆ ಆಗುತ್ತದೆ. ಪ್ರಾಕೃತಿಕ ಸಂಪನ್ಮೂಲಗಳಿಗೆ ಕೊರತೆಯಿಲ್ಲ. ಸುಮಾರು ೬೦೦ ಕಿಲೋಮೀಟರ್ ಉದ್ದದ ಕರಾವಳಿಯನ್ನು ಹೊಂದಿರುವ ರಾಜ್ಯದಲ್ಲಿ ಮತ್ಸ್ಯೋದ್ಯಮ ಹಾಗೂ ಪ್ರವಾಸೋದ್ಯಮಗಳಿಗೆ ವಿಪುಲವಾದ ಅವಕಾಶಗಳು ಇವೆ. ರಾಜ್ಯ ದುದ್ದಕ್ಕೂ ರೈಲ್ವೆ ಸಂಪರ್ಕ ಇದೆ. ಸಂಪೂರ್ಣ ಸಾಕ್ಷರತೆ ಸಾಧಿಸಿದ ಪ್ರಥಮ ರಾಜ್ಯ ಕೇರಳವೇ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾವಂತ ಯುವ ಸಮು ದಾಯವನ್ನು ಕೇರಳವು ಹೊಂದಿದೆ.

ಆದರೆ ಇಂತಹ ಕೇರಳವಿಂದು ಸಂಪನ್ಮೂಲದ ಕೊರತೆ, ಸಾಲದ ಬಾಧೆ, ನಿರುದ್ಯೋಗ ಸಮಸ್ಯೆ, ಹೆಚ್ಚಾಗಿರುವ ಆತ್ಮಹತ್ಯೆ, ಅಪರಾಧ ಪ್ರಮಾಣದಲ್ಲಿ ಏರಿಕೆ, ಮೂಲಭೂತ ಸೌಕರ್ಯಗಳ ಕೊರತೆ, ಅಭಿವೃದ್ದಿ ದರದಲ್ಲಿ ಹಿಂದುಳಿಯುವಿಕೆ, ಉದ್ಯಮ ವಿರೋಧಿ ವಾತಾವರಣ, ರಾಜಕೀಯ ಹಿಂಸಾಚಾರ ಮೊದಲಾದವುಗಳಿಂದ ಬಳಲುತ್ತಿದೆ. ಕೇರಳದ ಆರ್ಥಿಕತೆಯಿಂದು ಬಹಳ ಶೋಚನೀಯವಾಗಿದೆ. ರಾಜ್ಯವಿಂದು ೩.೩೫ ಲಕ್ಷ ಕೋಟಿ ರುಪಾಯಿಗಳ ಸಾಲದ ಹೊರೆ ಹೊತ್ತಿದೆ. ಕಳೆದ ೫ ವರ್ಷಗಳಲ್ಲಿ ರಾಜ್ಯದ ಸಾಲದ ಪ್ರಮಾಣ ಶೇ.೮೦ ಏರಿದೆ.

ರಾಜ್ಯದ ಸಾಲದ ಪ್ರಮಾಣವು ರಾಜ್ಯದ ಒಟ್ಟು ವಾರ್ಷಿಕ ಉತ್ಪಾದನೆಯ ೩೭.೧೮% ದಷ್ಟು ಇದೆ. ರಾಜ್ಯಗಳ ವಾರ್ಷಿಕ ಉತ್ಪಾದನೆಯನ್ನು ಅನುಸರಿಸಿ ಅತೀ ಹೆಚ್ಚು ಸಾಲವನ್ನು ಹೊಂದಿರುವ ರಾಜ್ಯಗಳ ಪೈಕಿ ಕೇರಳವು ೨ ನೆಯ ಸ್ಥಾನದಲ್ಲಿದೆ. ೨೦೨೩-೨೪ ರ ಕೇರಳ ರಾಜ್ಯ ಬಜೆಟ್ ನ ಪ್ರಕಾರ ಈ ಆರ್ಥಿಕ ವರ್ಷದಲ್ಲಿ ಸುಮಾರು ರಾಜ್ಯವು ೩೯೦೦೦ ಕೋಟಿ ರುಪಾಯಿಗಳಷ್ಟು ವಿತ್ತೀಯ ಕೊರತೆಯನ್ನು ಎದುರಿಸ ಲಿದ್ದು ಅಷ್ಟೇ ಮೊತ್ತದ ಸಾಲವನ್ನು ಪಡೆಯಬೇಕಾಗಿದೆ. ಬಿಹಾರ , ಕೇರಳ, ಪಂಜಾಬ, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳಗಳು ಅತೀ ಹೆಚ್ಚು ವಿತ್ತೀಯ ಕೊರತೆಯ ಸಮಸ್ಯೆ ಯನ್ನು ಎದುರಿಸುತ್ತಿರುವ ೫ ರಾಜ್ಯಗಳು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ವರದಿಯಲ್ಲಿ ಹೇಳಿದೆ.

೨೦೨೩-೨೪ರಲ್ಲಿ ಕೇರಳ ಸರಕಾರವು ೨೬,೬೯೮ ಕೋಟಿ ರುಪಾಯಿಗಳನ್ನು ಸಾಲಗಳ ಮೇಲಿನ ಬಡ್ಡಿ ಪಾವತಿಗಾಗಿ ವಿನಿಯೋಗಿಸಲಿದೆ. ಈ ಮೊತ್ತವು ಕೇರಳದ ಆದಾಯದ ಶೇ.೨೦ ಆಗಿದೆ. ಆದಾಯ ತಂದುಕೊಡಬಲ್ಲ ಬೃಹತ್ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಕೇರಳದಲ್ಲಿ ಇಲ್ಲದೇ ಇರುವುದು ಅಲ್ಲಿನ ಆರ್ಥಿಕ ಸಮಸ್ಯೆಗೆ ಪ್ರಮುಖ ಕಾರಣ. ಕೇರಳದ ಕಾರ್ಮಿಕ ಸಂಘಟನೆಗಳ ಅಟಾಟೋಪಕ್ಕೆ ಹೆದರಿ ಯಾವ ಉದ್ಯಮಿಗಳು ಅಥವಾ ಹೂಡಿಕೆ ದಾರರು ಕೇರಳದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ಸರಕಾರವೂ ಈ ಕಾರ್ಮಿಕ ಸಂಘಟನೆಗಳನ್ನೇ ಬೆಂಬಲಿಸುತ್ತದೆ.

ಕಮ್ಯುನಿಸ್ಟ್ ಬೆಂಬಲಿತ ಯೂನಿಯನ್‌ಗಳು ಸದಾ ಮುಷ್ಕರ, ಹರತಾಳಗಳ ನಿರತವಾಗಿರುತ್ತವೆ. ಯಾವನೋ ಒಬ್ಬ ಉದ್ಯಮಿ ಕೋಟಿಗಟ್ಟಲೆ ರುಪಾಯಿ ಗಳನ್ನು ಹೂಡಿಕೆ ಮಾಡಿ ಉದ್ಯಮವನ್ನು ಆರಂಭಿಸಿದರೆ ಅಲ್ಲಿ ಕೂಡಲೇ ಕಾರ್ಮಿಕ ಸಂಘಟನೆಗಳು ತಲೆಯೆತ್ತುತ್ತವೆ. ಯೂನಿಯನ್‌ಗಳು ತಾವು ಕೆಲಸ ಮಾಡುವ ಉದ್ಯಮದ ಅಭಿವೃದ್ಧಿಗಿಂತಲೂ ತಮಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾತ್ರ ಚೌಕಾಸಿಯನ್ನು ಮಾಡಲು ಆರಂಭಿಸುತ್ತವೆ. ಕೇರಳದಲ್ಲಿ ೯೫೦ ಕ್ಕಿಂತಲೂ ಹೆಚ್ಚು ಶಾಖೆಗಳನ್ನು ಹೊಂದಿದ್ದ ಮುತ್ತೂಟ್ ಫಿನ್‌ಕಾರ್ಪ್ ಸಂಸ್ಥೆಯು ಕೇರಳದಲ್ಲಿ ಸಿಐಟಿಯು ಕಾರ್ಮಿಕರ ಮುಷ್ಕರದಿಂದ ಬಾಧಿತ ವಾದ ೩೦೦ಕ್ಕೂ ಹೆಚ್ಚಿನ ಸಂಖ್ಯೆಯ ಶಾಖೆಗಳನ್ನು ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಮುಚ್ಚಿದೆ.

ಕೇರಳ ಸರಕಾರದ ಕಿರುಕುಳಕ್ಕೆ ಬೇಸತ್ತು ರಾಜ್ಯವನ್ನೇ ಬಿಟ್ಟು ಹೊರ ನಡೆದ ಇನ್ನೊಂದು ದೊಡ್ಡ ಉದ್ಯಮ ಕಿಟೆಕ್ಸ್. ಜಾಗತಿಕವಾಗಿ ಮಕ್ಕಳ ಗಾರ್ಮೆಂಟ್ಸ್ ಅನ್ನು ತಯಾರಿಸುವ ಎರಡನೇ ಅತೀ ದೊಡ್ಡ ವಸೋದ್ಯಮವಾದ ಕಿಟೆಕ್ಸ್ ಗಾರ್ಮೆಂಟ್ಸ್ ಸಂಸ್ಥೆಯು ೨೦೨೧ರಲ್ಲಿ ಕೇರಳದಿಂದ ತೆಲಂಗಾಣಕ್ಕೆ ವಲಸೆ ಹೋಗಿದೆ. ೩೫೦೦ ಕೋಟಿ ರುಪಾಯಿ ಮೌಲ್ಯದ ಈ ಸಂಸ್ಥೆಯ ಮಾಲೀಕರಾದ ಜಾಕೋಬ್ ನಾವಾಗಿಯೇ ಕೇರಳವನ್ನು ತೊರೆಯುತ್ತಿಲ್ಲ, ಕೇರಳದಿಂದ ನಮ್ಮನ್ನು ಒದ್ದಾಡಿಸಲಾಗುತ್ತಿದೆ ಎಂದು ಹೇಳಿದ್ದರು.

ಕಿಟೆಕ್ಸ್ ಕಂಪನಿಯ ಮೇಲೆ ಸರಕಾರದ ನಾನಾ ಇಲಾಖೆಗಳು ನಿತ್ಯ ದಾಳಿ ನಡೆಸುತ್ತಿದ್ದವು. ಕೇರಳದ ಕೈಗಾರಿಕಾ ಕಾನೂನುಗಳು ಓಬೀರಾಯನ ಕಾಲದವು ಗಳಾಗಿದ್ದು, ಇವುಗಳ ಉಪಟಳದಲ್ಲಿ ಕೈಗಾರಿಕೆಗಳು ಉಳಿಯಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದರು. ಕಿಟೆಕ್ಸ್ ಕಂಪನಿಯು ತೆಲಂಗಾಣಕ್ಕೆ ವಲಸೆ ಹೋದುದರಿಂದಾಗಿ ಕೇರಳದಲ್ಲಿ ಸುಮಾರು ೩೫ ಸಾವಿರ ಮಂದಿಗೆ ಉದ್ಯೋಗಾವಕಾಶಗಳು ನಷ್ಟವಾದವು. 2007ರ ಕೋಕಾಕೋಲ ಕೇರಳವನ್ನು ತೊರೆದಿದ್ದರೆ ಇತ್ತೀಚೆಗೆ ಪೆಪ್ಸಿಕೋ ಕೂಡ ತನ್ನ ಕೇರಳದ ಫ್ಯಾಕ್ಟರಿಯನ್ನು ಮುಚ್ಚಿತ್ತು.

ಇತ್ತೀಚೆಗೆ ಕರ್ನಾಟಕದ ಪ್ರಸಿದ್ಧ ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ಕಂಪನಿಯು ಕೇರಳದ ಎರ್ನಾಕುಳಂನ ಏಲೂರಿನಲ್ಲಿದ್ದ ತನ್ನ ಶಾಖೆಯನ್ನು ಸಿಐಟಿಯು
ಕಾರ್ಮಿಕ ಸಂಘಟನೆಯ ಉಪಟಳಕ್ಕೆ ಬೇಸತ್ತು ಮುಚ್ಚಿದೆ. ಕಾರ್ಮಿಕ ಸಂಘಟನೆಗಳು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಅಂಗವಾದುದರಿಂದ ಅವುಗಳ ಉಪಟಳವನ್ನು ನಿಗ್ರಹಿಸುವ ಬದಲು ಸರಕಾರವು ಅವರನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ. ಕೇರಳದಲ್ಲಿ ಕೂಲಿ ಕಾರ್ಮಿಕರ ಸಂಘಟನೆಗಳು ರೂಪಿಸಿ ರುವ ನೊಕ್ಕು ಕೂಲಿ ಎನ್ನುವ ಕುಖ್ಯಾತ ವ್ಯವಸ್ಥೆ ಇದೆ. ಕಾರ್ಮಿಕ ಸಂಘಟನೆಗಳ ಸದಸ್ಯರಾದ ಕೂಲಿಗಳು ಕೆಂಪು ಅಥವಾ ನೀಲಿ ಬಣ್ಣದ ಅಂಗಿ ಹಾಗೂ ಲೋಹದ ಬಿಯನ್ನು ಧರಿಸಿಕೊಂಡು ರೈಲ್ವೇ ಸ್ಟೇಶನ್ ಹಾಗೂ ಮಾರುಕಟ್ಟೆಗಳಲ್ಲಿ ಇರುತ್ತಾರೆ.

ರೈಲು, ಲಾರಿ, ಟೆಂಪೋಗಳಿಗೆ ಲಗೇಜ್‌ಗಳನ್ನು ಏರಿಸುವುದು ಹಾಗೂ ಇಳಿಸುವ ಕೆಲಸವನ್ನು ಇವರಿಗೇ ಕೊಡಬೇಕು. ಇವರು ಇಂತಹ ಕೆಲಸಗಳಿಗೆ ದುಬಾರಿ
ಕೂಲಿಯನ್ನು ನಿಗದಿಪಡಿಸುತ್ತಾರೆ. ಅವರ ದುಬಾರಿ ಕೂಲಿ ದರವನ್ನು ಒಪ್ಪದೆ ನಮ್ಮ ಲಗೇಜ್‌ಗಳನ್ನು ನಾವೇ ಸಾಗಿಸಿದರೂ ಈ ಕಾರ್ಮಿಕರಿಗೆ ಕೂಲಿ
ಕೊಡಲೇ ಬೇಕು. ಕೊಡದಿದ್ದರೆ ಕೂಲಿ ಸಂಘಟನೆಯ ಸದಸ್ಯರೆಲ್ಲ ಒಗ್ಗಟ್ಟಾಗಿ ಬಂದು ಅಡ್ಡಗಟ್ಟುತ್ತಾರೆ. ಎರಡು ವರ್ಷಗಳ ಹಿಂದೆ ತಿರುವನಂತಪುರದ
ತಂಬಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋವಿನ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್‌ಗೆ ಬೃಹತ್ ಯಂತ್ರೋಪಕರಣಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳನ್ನು ನೊಕ್ಕು ಕೂಲಿಗಾಗಿ ಪೀಡಿಸಿ ಕಾರ್ಮಿಕರು ಅಡ್ಡಗಟ್ಟಿದ್ದರು. ಈ ಬೃಹತ್ ಯಂತ್ರಗಳನ್ನು ಕ್ರೇನ್‌ಗಳ ಮೂಲಕ ಮಾತ್ರ ಕೆಳಗಿಳಿಸಲು ಸಾಧ್ಯ ಎಂದಿದ್ದರೂ ತಮಗೆ ನಿಗದಿತ ಕೂಲಿಯನ್ನು ಕೊಡಬೇಕೆಂದು ಕಾರ್ಮಿಕ ಸಂಘಟನೆಗಳು ಪಟ್ಟುಹಿಡಿದದ್ದು ಸುದ್ದಿಯಾಗಿತ್ತು.

ಕಮ್ಯುನಿಸ್ಟ್ ಪಕ್ಷವು ನೊಕ್ಕು ಕೂಲಿ ಹೆಸರಿನಲ್ಲಿ ಉದ್ಯಮಿಗಳ ಕೈಯಿಂದ ಹಣವನ್ನು ವಸೂಲು ಮಾಡುತ್ತಿದೆ ಎನ್ನುವ ಆರೋಪವಿದೆ. ಕೇರಳ
ಹೈಕೋರ್ಟ್ ನೊಕ್ಕು ಕೂಲಿ ವ್ಯವಸ್ಥೆಯು ಕಾನೂನು ಬಾಹಿರ ಎಂದು ಹೇಳಿದ್ದರೂ ನೊಕ್ಕು ಕೂಲಿ ಕೇರಳದಲ್ಲಿ ಅಬಾಧಿತವಾಗಿ ಮುಂದುವರಿದಿದೆ.
ಇಂತಹ ವಾತಾವರಣವಿರುವ ಕೇರಳದಲ್ಲಿ ಉದ್ಯಮಗಳು ಬದುಕುಳಿಯುವುದಾರೂ ಹೇಗೆ? ಈ ಕಾರಣದಿಂದಾಗಿಯೇ ಕೇರಳವಿಂದು ಉದ್ಯಮ ಸ್ನೇಹೀ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ರಾಜ್ಯಗಳ ಪಟ್ಟಿಯಲ್ಲಿ ೧೫ ನೇ ಸ್ಥಾನದಲ್ಲಿದೆ.

ಉದ್ಯಮಗಳು ಇಲ್ಲದೇ ಇರುವುದರಿಂದ ಕೇರಳದ ಆದಾಯವು ಕೂಡ ಕಡಿಮೆಯೇ ಇದೆ. ಜಿಎಸ್ಟಿ ಸಂಗ್ರಹದಲ್ಲಿ ಕೇರಳವು ೧೫-೧೬ ನೇ ಸ್ಥಾನದಲ್ಲಿರುತ್ತದೆ. ಇತ್ತೀಚೆಗೆ ಕೇರಳದ ರಾಜ್ಯಪಾಲರಾಗಿರುವ ಆರಿಫ್ ಮೊಹಮ್ಮದ್ ಖಾನ್ ಅವರು ಕೇರಳವು ಆದಾಯಕ್ಕಾಗಿ ಲಾಟರಿ ಮತ್ತು ಮದ್ಯ ಮಾರಾಟವನ್ನು
ಅವಲಂಬಿಸಬೇಕಾಗಿರುವುದು ನಾಚಿಕೆಗೇಡಿನ ಪರಿಸ್ಥಿತಿ ಎಂದು ಟೀಕಿಸಿದ್ದರು. ಇದು ಸತ್ಯವೂ ಹೌದು. ಕೇರಳದ ಸರಕಾರದ ೧೩% ಆದಾಯಯವು ಲಾಟರಿ ಹಾಗೂ ಮದ್ಯ ಮಾರಾಟದಿಂದ ಲಭಿಸುತ್ತದೆ.

ಲಾಟರಿಯಿಂದಾಗಿ ಕಳೆದ ೬ ವರ್ಷಗಳಲ್ಲಿ ಕೇರಳ ಸರ್ಕಾರಕ್ಕೆ ೫೦ ಸಾವಿರ ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು ಹಣ ಸಂಗ್ರಹವಾಗಿದೆ ಹಾಗೂ ಗಣನೀಯ ಪ್ರಮಾಣದ ಲಾಭವೂ ಆಗಿದೆ. ಆದರೆ ಕೇರಳದಲ್ಲಿ ಈ ಲಾಟರಿ ಚಟದಿಂದಾಗಿ ಬೀದಿಗೆ ಬಿದ್ದ ಕುಟುಂಬಗಳೆಷ್ಟೋ! ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥ ಅಥವಾ ಷಟ್ಪಥಗಳಾಗಿ ಪರಿವರ್ತನೆ ಹೊಂದಿದ್ದರೂ ಕೇರಳವನ್ನು ಉತ್ತರದಿಂದ ದಕ್ಷಿಣವನ್ನು ಜೋಡಿಸುವ ರಾಷ್ಟ್ರೀಯ ಹೆzರಿ ೬೬ರ ವಿಸ್ತರಣಾ ಕೆಲಸ ಆರಂಭವಾದದ್ದು ತೀರಾ ಇತ್ತೀಚೆಗೆ.

ಇಡೀ ದೇಶದ ಭೂಸ್ವಾಧೀನದ ಭೂಮಿಯ ಬೆಲೆ ಕೇರಳದ ಹೆಚ್ಚಾದುದರಿಂದ ಕೇಂದ್ರಕ್ಕೆ ಕೇರಳದಲ್ಲಿ ಹೆದ್ದಾರಿ ವಿಸ್ತರಣೆ ಬಹಳ ಕಠಿಣವಾಗಿ ಪರಿಣ ಮಿಸಿತು. ಹೀಗಾಗಿ ಹೆದ್ದಾರಿ ವಿಸ್ತರಣಾ ಕೆಲಸ ಸ್ವಲ್ಪ ಕಾಲ ನನೆಗುದಿಗೆ ಬಿದ್ದಿತ್ತು. ಆದರೆ ಭೂಸ್ವಾಧೀನದ ಶೇ.೨೫ ವೆಚ್ಚವನ್ನುತಾನು ಭರಿಸುವುದಾಗಿ ಕೇರಳ ಸರಕಾರವು ಭರವಸೆಯನ್ನು ನೀಡಿದ ನಂತರ ಹೆದ್ದಾರಿ ವಿಸ್ತರಣಾ ಕೆಲಸವು ಆರಂಭವಾಯಿತು. ಆದರೆ ತಾನು ಕೊಟ್ಟ ಮಾತಿನಿಂದ ಹಿಂದೆ ಸರಿದ ಕೇರಳ ಸರಕಾರವು ಭೂಸ್ವಾಧೀನದ ಶೇ.೨೫ ವೆಚ್ಚವನ್ನು ಭರಿಸಲು ತನ್ನಲ್ಲಿ ಹಣವಿಲ್ಲವೆಂದು ಹೇಳಿ ಕೈಚೆಲ್ಲಿದೆ. ಈಗ ಕೇಂದ್ರ ಸರಕಾರವೇ ಎಲ್ಲ ವೆಚ್ಚಗಳನ್ನು ಭರಿಸಬೇಕಾಗಿದೆ.

ದೇಶದ ಹೆಚ್ಚಿನ ರಾಜ್ಯಗಳು ಪೆಟ್ರೋಲ್ ಡೀಸೆಲ್ ಗಳ ಮೇಲಿನ ವ್ಯಾಟ್ ಅನ್ನು ಕಡಿಮೆಗೊಳಿಸಿದ್ದರೂ ಕೇರಳವು ಕಡಿಮೆಗೊಳಿಸಿಲ್ಲ. ಬದಲಾಗಿ ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿಯ ಬಜೆಟ್‌ನಲ್ಲಿ ಪೆಟ್ರೋಲ್ ಡೀಸೆಲ್‌ಗಳ ಮೇಲೆ ಹೆಚ್ಚುವರಿಯಾಗಿ ತಲಾ ೨ ರುಪಾಯಿಗಳ ಸೆಸ್ ಹೇರಿಕೆ ಮಾಡಿದೆ. ಎರಡು ವರ್ಷಗಳ ಹಿಂದೆ ೬೦ ಸಾವಿರ ಕೋಟಿ ರುಪಾಯಿಗಳ ವೆಚ್ಚದಲ್ಲಿ ಪಿಣರಾಯೀ ವಿಜಯನ್ ನೇತೃತ್ವದ ಕೇರಳ ಸರಕಾರವು ಕಾಸರಗೋಡಿನಿಂದ ತಿರುವನಂತಪುರಂವರೆಗೆ ಸೆಮಿ ಹೈಸ್ಪೀಡ್ ರೈಲನ್ನು ಓಡಿಸುವ ಸಿರ್ಲ್ವ ಲೈನ್ ಕೇರಳ ರೈಲು ಅಥವಾ ಕೆ ರೈಲು ಯೋಜನೆಯನ್ನು ಜಾರಿ ಮಾಡುವುದಾಗಿ ಭಾರೀ ಪ್ರಚಾರದೊಂದಿಗೆ ಘೋಷಿಸಿತ್ತು. ಆದರೆ ಈ ಯೋಜನೆಗೆ ಹಣ ಹೂಡಿಕೆ ಮಾಡಲು ಯಾವ ಹೂಡಿಕೆದಾರನೂ ಮುಂದೆ ಬಂದಿಲ್ಲ.

ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಕೇರಳ ಸರಕಾರವು ಇಷ್ಟು ದೊಡ್ಡ ಮೊತ್ತದ ಹಣವನ್ನು ತರುವುದಾದರೂ ಎಲ್ಲಿಂದ? ಹೀಗಾಗಿ ಈ ಯೋಜನೆಯನ್ನು ಪಿಣರಾಯಿ ಸರಕಾರವು ಸದ್ಯಕ್ಕೆ ಕೈಬಿಟ್ಟಂತೆ ತೋರುತ್ತಿದೆ. ಕಳೆದ ಬಾರಿಯ ಬಜೆಟ್ ನಲ್ಲಿ ಕೆ ರೈಲು ಯೋಜನೆಗೆ ೨ ಸಾವಿರ ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದ್ದ ಕೇರಳ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಈ ಯೋಜನೆಗೆ ನಯಾ ಪೈಸೆಯನ್ನೂ ಮೀಸಲಿಟ್ಟಿಲ್ಲ. ಕೇರಳದ ವಿದ್ಯಾವಂತ ಯುವಕರಲ್ಲಿ ಶೇ.೪೦ ಮಂದಿ ನಿರುದ್ಯೋಗಿಗಳಾಗಿದ್ದಾರೆ.

ರಾಜ್ಯದಲ್ಲಿ ಉನ್ನತ ವಿದ್ಯಾಭ್ಯಾಸ ಸಂಸ್ಥೆಗಳ ಸಂಖ್ಯೆ ಬೇಡಿಕೆಯನ್ನು ಪೂರೈಸುವಷ್ಟಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕ, ತಮಿಳುನಾಡು ಅಥವಾ ಇತರ ರಾಜ್ಯಗಳನ್ನು ಅವಲಂಬಿಸುತ್ತಾರೆ. ಚಿಕಿತ್ಸೆಗೂ ಕೇರಳಿಗರು ಪಕ್ಕದ ರಾಜ್ಯಗಳ ಆಸ್ಪತ್ರೆಗಳನ್ನೇ ಅವಲಂಬಿ ಸಿದ್ದಾರೆ. ಮಂಗಳೂರಿನ ಆಸ್ಪತ್ರೆಗಳಲ್ಲಿ ಕೇರಳಿಗರು ಗಣನೀಯ ಪ್ರಮಾಣದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಕೇರಳದಲ್ಲಿ ಉದ್ಯೋಗಾವಕಾಶ ಕಡಿಮೆ ಇರುವ ಕಾರಣ ಅಲ್ಲಿನ ಯುವಕರು ಉದ್ಯೋಗಕ್ಕಾಗಿ ಹೊರ ರಾಜ್ಯಗಳನ್ನು ಹಾಗೂ ವಿದೇಶಗಳನ್ನು ಅದರಲ್ಲೂ ಗಲ ದೇಶಗಳನ್ನು ಅವಲಂಬಿಸಿದ್ದಾರೆ.

೩೫ ಲಕ್ಷಕ್ಕೂ ಹೆಚ್ಚಿನ ಕೇರಳಿಗರು ಗಲ ದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಸ್ವಯಂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ ವೀಣಾ
ಅವರು ಐ ಟಿ ಉದ್ಯಮವನ್ನು ಆರಂಭಿಸಿದ್ದು ಬೆಂಗಳೂರಿನಲ್ಲಿ! ಕೇರಳದಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗುತ್ತಿದೆ. ಅಲ್ಲಿನ ಯುವಕ ಯುವತಿಯರು ಐಸಿಸ್‌ ನಂತಹ ಉಗ್ರಗಾಮಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ದೇಶದಲ್ಲಿ ೩ನೇ ಅತೀ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರ ರಾಜ್ಯ ಕೇರಳ. ಪ್ರತೀ ಒಂದು ಲಕ್ಷ ಜನರಲ್ಲಿ ೨೪ ಮಂದಿ ಕೇರಳದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಚಿನ್ನ ಕಳ್ಳಸಾಗಣಿಕೆಯ ಅವ್ಯವಹಾರದಲ್ಲಿ ಮುಖ್ಯಮಂತ್ರಿಗಳ ಆಪ್ತರ ಹೆಸರೂ ತಳುಕು ಹಾಕಿಕೊಂಡಿದೆ. ಸರಕಾರದ ಬಳಿ ಸರಕಾರೀ ಉದ್ಯೋಗಿಗಳಿಗೆ ಸಂಬಳ ವಿತರಿಸಲೂ ಹಣ ಇಲ್ಲ. ಕೇರಳದಲ್ಲಿ ಸರಕಾರೀ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯನ್ನು ಏರಿಸದೆ ೩ ವರ್ಷಗಳೇ ಸಂದವು. ಕೇರಳ ಸರಕಾರದ ಆದಾಯದ ೭೧% ಮೊತ್ತವು ಸರಕಾರೀ ಉದ್ಯೋಗಿಗಳ ಸಂಬಳ, ಪಿಂಚಣಿ ವಿತರಣೆಗೆ ಹಾಗೂ ಸಾಲದ ಬಡ್ಡಿ ಪಾವತಿಗೆ ಖರ್ಚಾಗುತ್ತಿದೆ. ಮೂಲಭೂತ ಸೌಕರ್ಯ ಅಭಿವೃದ್ದಿ, ಆರೋಗ್ಯ, ವಿದ್ಯಾಭ್ಯಾಸ ಮೊದಲಾದ ಕ್ಷೇತ್ರಗಳಿಗೆ ಸಿಗುವ ಉಳಿದ ಶೇ.೨೯ ಹಣವು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಯಂತಾಗಿದೆ. ಹೀಗಿರುವಾಗ ಕೇರಳವು ಅಭಿವೃದ್ಧಿಯಾಗುವುದಾದರೂ ಹೇಗೆ?

Read E-Paper click here