Tuesday, 10th September 2024

ಲೋಕಸಭೆ ಚುನಾವಣೆ ಫಲಿತಾಂಶದ ಕಪ್ಪುಮುಖ

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

೨೦೨೪ ರ ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ ೪ರಂದು ಹೊರಬಿದ್ದ ನಂತರ ಟೀವಿ ಚಾನಲ್‌ಗಳಲ್ಲಿ ಕುಳಿತು ಕಿರುಚಾಡಿದ ಬಹುತೇಕರು ಒಂದು ಅಪಾಯಕಾರಿ ಸಂಗತಿಯನ್ನು ಗಣನೆಗೇ ತೆಗೆದುಕೊಂಡಿಲ್ಲ. ಯಾವಾಗಲೂ ಹಾಗೆಯೇ. ಸುದ್ದಿ ವಾಹಿನಿಗಳಲ್ಲಿ ಅತ್ಯಂತ ಪ್ರಮುಖವಾದ ಅಂಶವೇ ಹಿನ್ನೆಲೆಗೆ ಸರಿದು, ಡ್ರಾಮಾ ಮುನ್ನೆಲೆಗೆ ಬಂದುಬಿಡುತ್ತದೆ. ಸಹಜವಾಗಿಯೇ ಈ ಬಾರಿಯೂ ಹೀಗೇ ಆಗಿದೆ.

ಏನದು ಅಂತಹ ಅಪಾಯಕಾರಿ ಸಂಗತಿ? ಈ ಸಲದ ಚುನಾವಣೆಯಲ್ಲಿ ಪ್ರತ್ಯೇಕತಾವಾದಿ ಹೋರಾಟಗಾರರ ಮೂವರು ಉತ್ತರಾಧಿಕಾರಿಗಳು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಅವರಲ್ಲಿ ಇಬ್ಬರು ಪಂಜಾಬ್‌ನವರು, ಒಬ್ಬ ಕಾಶ್ಮೀರದವರು. ಅಮೃತ್‌ಪಾಲ್ ಸಿಂಗ್ ಸಂಧು ಪಂಜಾಬ್‌ನಿಂದ ಆಯ್ಕೆಯಾದ, ಖಲಿಸ್ತಾನ್ ಚಳವಳಿಯ ಪರ ತನ್ನದೇ ಆದ ಶೈಲಿಯಲ್ಲಿ ಹೋರಾಟ ನಡೆಸುತ್ತಾ ಬಂದಿರುವ ಪ್ರತ್ಯೇಕತಾವಾದಿ ಸಂಸದ. ಈತ ನಾಲ್ಕು ದಶಕಗಳ
ಹಿಂದೆ ಇದೇ ಜೂನ್‌ನಲ್ಲಿ ಅಮೃತಸರದ ಸ್ವರ್ಣ ಮಂದಿರದೊಳಗೆ ಆಪರೇಷನ್ ಬ್ಲೂಸ್ಟಾರ್‌ನಲ್ಲಿ ಹತ್ಯೆಗೀಡಾದ ಜರ್ನೇಲ್ ಸಿಂಗ್ ಭಿಂದ್ರನ್‌ವಾಲೆಯ ಅಪರಾವತಾರದಂತಿದ್ದಾನೆ.

ಪಂಜಾಬ್‌ನಿಂದಲೇ ಆಯ್ಕೆಯಾದ ಇನ್ನೊಬ್ಬ ಪ್ರತ್ಯೇಕತಾವಾದಿ ಧೋರಣೆಯ ಸಂಸದ ಸರಬ್ಜಿತ್ ಸಿಂಗ್ ಖಾಲ್ಸಾ. ಈತ ಇಂದಿರಾ ಗಾಂಧಿಯ ಹಂತಕ ಬಿಯಾಂತ್ ಸಿಂಗ್‌ನ ಮಗ. ಮೂರನೆಯ ಪ್ರತ್ಯೇಕತಾವಾದಿ ಸಂಸದ ಶೇಖ್ ಅಬ್ದುಲ್ ರಶೀದ್. ಅವನಿಗೀಗ ೫೬ ವರ್ಷ ವಯಸ್ಸು. ಜಮ್ಮು ಮತ್ತು ಕಾಶ್ಮೀರದ ಲೋಕೋಪಯೋಗಿ ಇಲಾಖೆಯಲ್ಲಿ ಈ ಹಿಂದೆ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದವನು. ಪ್ರಚಂಡ ಬುದ್ಧಿವಂತ. ಈ ಮೂವರೂ ಸ್ವತಂತ್ರವಾಗಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಈ ಮೂವರಲ್ಲಿ ಒಬ್ಬೊಬ್ಬರೂ ಬಹಳ ಆಸಕ್ತಿಕರ ವ್ಯಕ್ತಿತ್ವದವರು. ಆದರೆ ನಿಜವಾದ ಕತೆ ಯಾವಾಗಲೂ ಮತದಾರರ ಜೋಳಿಗೆಯಲ್ಲೇ ಇದ್ದಿರುತ್ತದೆ.  ನಮ್ಮ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಂದ ಸ್ಪಽಸಿಲ್ಲದ ಸ್ವತಂತ್ರ ಅಭ್ಯರ್ಥಿಗಳಿಗೆ ಗೆಲುವು ಸಿಗುವುದು ಅಪರೂಪ. ಸ್ವತಂತ್ರ ಅಭ್ಯರ್ಥಿಯೊಬ್ಬ ಗೆದ್ದಿದ್ದಾನೆ ಅಂದರೆ ಅವನಿಗೆ ಸ್ಥಳೀಯವಾಗಿ ಅವನದೇ ಆದ ಸಂಪರ್ಕ ಜಾಲದ ಮೂಲಕ ವ್ಯಾಪಕ ಜನಬೆಂಬಲ ಇದ್ದಿರುತ್ತದೆ. ಆ ಸ್ಥಳದಲ್ಲಿ ಅವನು ಬಲವಾಗಿ ಬೇರು ಬಿಟ್ಟಿರಬೇಕು. ಆಗ ಮಾತ್ರ ಗೆಲ್ಲಲು ಸಾಧ್ಯ. ಹಾಗಿದ್ದರೆ ದೇಶವನ್ನು ಒಡೆಯಬೇಕೆಂದು ಪ್ರತಿಪಾದಿಸುವ ಈ ಮೂವರಿಗೆ ಸ್ಥಳೀಯವಾಗಿ ಅದಿನ್ನೆಂಥ ಬೆಂಬಲ ಇದ್ದಿರಬೇಕು? ಇದು ಅಪಾಯಕಾರಿ ಟ್ರೆಂಡ್ ಅಲ್ಲವೇ? ೧೯೯೩ರಲ್ಲಿ ಜನಿಸಿದ ಅಮೃತ್‌ಪಾಲ್ ಸಿಂಗ್ ಸಂಧು
ತನ್ನ ಬೆಂಬಲಿಗರಿಗೆ ಸಿಖ್ಖರ ಧಾರ್ಮಿಕ ನಂಬಿಕೆ ಮತ್ತು ಪ್ರತ್ಯೇಕತಾವಾದದ ಕ್ರಾಂತಿಕಾರಿ ಹೋರಾಟದ ಸಿದ್ಧಾಂತವನ್ನು ಮಿಶ್ರಣ ಮಾಡಿ ಬೋಧಿಸುತ್ತಾನೆ.

ಇವನದು ಜರ್ನೇಲ್ ಸಿಂಗ್ ಭಿಂದ್ರನ್‌ವಾಲೆಯ ಖಲಿಸ್ತಾನಿ ಹೋರಾಟದ್ದೇ ಸಿದ್ಧಾಂತ. ಜರ್ನೇಲ್ ಸಿಂಗ್‌ನನ್ನು ಇವನು ಸಂತ ಎಂದು ಕರೆಯುತ್ತಾನೆ. ಜರ್ನೇಲ್ ಸಿಂಗ್ ಪಂಜಾಬ್‌ನಲ್ಲಿ ರಕ್ತಪಾತಕ್ಕೆ ಕಾರಣವಾದ ಖಲಿಸ್ತಾನಿ ಸಶಸ್ತ್ರ ಹೋರಾಟವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಿದ ಪ್ರತ್ಯೇಕತಾವಾದಿ ನಾಯಕ. ೧೯೮೪ರ ಜೂನ್ ೧ರಿಂದ ಜೂನ್ ೧೦ರ ನಡುವೆ ಅಮೃತಸರದ ಸ್ವರ್ಣ ಮಂದಿರದಲ್ಲಿ ಹಿಂದೆಂದೂ ಕೇಳರಿಯದ ಆಪರೇಷನ್ ಬ್ಲೂಸ್ಟಾರ್ ಹೆಸರಿನ ಬಂದೂಕು ಕಾರ್ಯಾಚರಣೆ ನಡೆದು ಭಯೋತ್ಪಾದಕರು ಹತ್ಯೆಗೀಡಾದ ಘಟನೆಯ ಮೂಲ ಕಾರಣ ಈತನೇ. ನಂತರ ಇದೇ ಘಟನೆ ಆ
ವರ್ಷದ ಅಕ್ಟೋಬರ್ ೩೧ರಂದು ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಗೂ ಕಾರಣವಾಯಿತು. ಆ ದಶಕದಲ್ಲಿ ಪಂಜಾಬ್‌ನಲ್ಲಿ ನಡೆದ ಸಾವುನೋವಿನ ಸರಣಿಗಳು ಹಾಗೂ ರಕ್ತಪಾತ ನನ್ನ ನೆನಪಿನಲ್ಲಿ ಇನ್ನೂ ಕಡುಕೆಂಪು ಬಣ್ಣದಲ್ಲಿ ಅಚ್ಚೊತ್ತಿದೆ. ಜರ್ನೇಲ್ ಸಿಂಗ್‌ನನ್ನು ಕೊನೆಯ ಬಾರಿ ಸಂದರ್ಶನ ನಡೆಸಿದ ಪತ್ರಕರ್ತರಲ್ಲಿ ನಾನೂ ಒಬ್ಬ. ೧೯೮೪ರಲ್ಲಿ ನಾನು ಆತನನ್ನು ಭೇಟಿಯಾದ ಮನೆಯ ಟೆರೇಸ್ ಮೇಲೆ ಆಮೇಲೆ ಎಕೆ ೪೭ ಗನ್‌ಗಳಿಂದ ದಾಳಿ ನಡೆದಿತ್ತು.

ಈ ಸಂಧು ಅಮೃತಸರದ ಬಾಕಲಾ ತಾಲೂಕಿನ ನಿವಾಸಿ. ೨೦೧೨ರಲ್ಲಿ ಯುವಕನಾಗಿದ್ದಾಗ ದುಬೈಗೆ ಹೋಗಿ ಟ್ರಾನ್ಸ್‌ಪೋರ‍್ಟ್ ಬಿಸಿನೆಸ್‌ಗೆ ಸೇರಿಕೊಂಡಿದ್ದ.
ಸುಮಾರು ಒಂದು ದಶಕದ ಕಾಲ ಅಲ್ಲಿದ್ದು, ನಂತರ ಪಂಜಾಬ್‌ಗೆ ಮರಳಿ ವಾರಿಸ್ ಪಂಜಾಬ್ ದೇ ಸಂಘಟನೆಯ ನಾಯಕನಾದ. ಈ ಸಂಘಟನೆಯ ಛತ್ರದಡಿ ಆನಂದಪುರ ಖಾಲ್ಸಾ -ಜ್ ಎಂಬ ಭಯೋತ್ಪಾದಕರ ಘಟಕವೂ ಇದೆ. ಇವನ ದೀಕ್ಷಾ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ನಂತರ ಭಿಂದ್ರನ್‌ವಾಲೆಯ ರೀತಿ ಯಲ್ಲೇ ಈತ ಪಂಜಾಬಿನ ಯುವಕರನ್ನು ಡ್ರಗ್ಸ್ ದಾಸ್ಯ ದಿಂದ ಹೊರತರಲು ಹೋರಾಟ ನಡೆಸಿದ. ಹೀಗಾಗಿ ಸಾವಿರಾರು ಕುಟುಂಬಗಳು ಈತನ ಬೆಂಬಲಿಗರಾದರು. ಬೆಂಬಲ ಹೆಚ್ಚಿದಂತೆ ಈತನ ಭಯೋತ್ಪಾದಕ ಚಟುವಟಿಕೆಗಳೂ ತೀವ್ರತೆ ಪಡೆದವು. ೨೦೨೨ರ ಡಿಸೆಂಬರ್‌ನಲ್ಲಿ ಒಂದಷ್ಟು ‘ನಿರ್ದಿಷ್ಟ ಗುರಿಯ ದಾಳಿಗಳು ಇವನ ಕಡೆಯಿಂದ ನಡೆದವು.

ಎರಡು ತಿಂಗಳ ನಂತರ ಫೆಬ್ರವರಿಯಲ್ಲಿ ಅವನ ಬೆಂಬಲಿಗರು ಅಂಜಲಾ ಪೊಲೀಸ್ ಸ್ಟೇಶನ್ ಮೇಲೆ ಧರ್ಮಗ್ರಂಥಗಳನ್ನು ಗುರಾಣಿಯಂತೆ ಹಿಡಿದು
ಹಿಂಸಾತ್ಮಕ ದಾಳಿ ನಡೆಸಿದರು. ೨೦೨೩ರ ಮಾರ್ಚ್ ೧೮ರಂದು ಪಂಜಾಬ್ ಪೊಲೀಸರು ವಾರಿಸ್ ಪಂಜಾಬ್ ದೇ ಸಂಘಟನೆಯ ಮೇಲೆ ಕಾರ್ಯಾಚರಣೆ
ಆರಂಭಿಸಿದರು. ೨೦೨೩ರ ಏಪ್ರಿಲ್ ೨೩ರಂದು ಮೋಗಾದಲ್ಲಿ ಸಂಧು ಅರೆಸ್ಟ್ ಆದ. ಅವನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸು ದಾಖಲಿಸಿ
ಅಸ್ಸಾಂ ಜೈಲಿಗೆ ತಳ್ಳಲಾಯಿತು. ಪಂಜಾಬ್‌ನಿಂದ ಅಷ್ಟು ದೂರದಲ್ಲಿರುವ ಜೈಲಿನ ಕೋಣೆಯಿಂದಲೇ ಅವನು ಈ ಸಲ ಖದೂರ್ ಸಾಹಿಬ್ ಲೋಕಸಭಾ
ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ೧,೯೩,೧೩೦ ಮತಗಳಿಂದ ಗೆದ್ದಿದ್ದಾನೆ. ಅವನ ತಂದೆ ಈ ಜಯಕ್ಕಾಗಿ ದೇವರು ಹಾಗೂ ಸಂಘಟನೆಗೆ ಧನ್ಯವಾದ ಹೇಳಿದ್ದಾರೆ.

ಖದೂರ್ ಸಾಹಿಬ್‌ನಿಂದ ಸುಮಾರು ೧೦೦ ಕಿಲೋಮೀಟರ್ ದೂರದಲ್ಲಿ ಫರೀದ್‌ಕೋಟ್ ಇದೆ. ಅಲ್ಲಿ ಗೆದ್ದವನು ಸರಬ್ಜಿತ್ ಸಿಂಗ್ ಖಾಲ್ಸಾ. ಆಪ್
ಅಭ್ಯರ್ಥಿಯಾಗಿದ್ದ ಚಿತ್ರನಟ ಹಾಗೂ ಪಂಜಾಬ್ ಮುಖ್ಯಮಂತ್ರಿಯ ಸ್ನೇಹಿತನಾದ ಕರಮ್ಜಿತ್ ಅನ್ಮೋಲ್ ವಿರುದ್ಧ ೭೦,೦೫೩ ಮತಗಳಿಂದ ಈತ
ಜಯ ಗಳಿಸಿದ್ದಾನೆ. ಇವನ ತಂದೆ ಬಿಯಾಂತ್ ಸಿಂಗ್ ಪ್ರಧಾನಿ ಇಂದಿರಾ ಗಾಂಧಿಗೆ ಬಾಡಿಗಾರ್ಡ್ ಆಗಿದ್ದ. ಇಂದಿರಾ ಗಾಂಧಿ ಆಪರೇಷನ್ ಬ್ಲೂಸ್ಟಾರ್‌ಗೆ ಆದೇಶ ನೀಡಿದ್ದರಿಂದ ಆತ ಬಹಳ ಕ್ರುದ್ಧಗೊಂಡಿದ್ದ. ಗುಪ್ತಚರ ದಳದವರು ಇಂದಿರಾಗೆ ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಇಂದಿರಾ ಗಾಂಧಿ ಮಾತ್ರ ಬಿಯಾಂತ್ ಸಿಂಗ್ ಮೇಲೆ ತಾನು ಇರಿಸಿದ್ದ ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ.

ಆದರೆ ೧೯೮೪ರ ಅಕ್ಟೋಬರ್ ೩೧ರಂದು ಬೆಳಿಗ್ಗೆ ೯.೩೦ಕ್ಕೆ ಬಿಯಾಂತ್ ಸಿಂಗ್ ಮತ್ತು ಅವನ ಸಹೋದ್ಯೋಗಿ ಸತ್ವಂತ್ ಸಿಂಗ್ ಇಬ್ಬರೂ ಸೇರಿ ಇಂದಿರಾ ಗಾಂಧಿ ಮೇಲೆ ಗುಂಡಿನ ಮಳೆಗರೆದಿದ್ದರು. ಸಫ್ದರ್‌ಜಂಗ್ ರಸ್ತೆಯ ಪ್ರಧಾನಿ ನಿವಾಸದಲ್ಲಿ ಇಂದಿರಾ ಶವ ಅಸಹಾಯಕವಾಗಿ ಉರುಳಿತ್ತು. ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ ೨೦೧೩ರಲ್ಲಿ ಅವಾಮಿ ಇತ್ತೆಹಾದ್ ಪಾರ್ಟಿ (ಎಐಪಿ)ಯನ್ನು ಹುಟ್ಟುಹಾಕಿದವನು ಇಂಜಿನಿಯರ್ ರಶೀದ್. ಇವನು ತುಂಬಾ ಸರಳ ವ್ಯಕ್ತಿ. ಆ ಕಾರಣಕ್ಕಾಗಿಯೇ ಜನರು ಈತನನ್ನು ಬಹಳ ಇಷ್ಟಪಡುತ್ತಾರೆ. ಎಲ್ಲಾ ಕಡೆಗಳಂತೆ ಜಮ್ಮು ಮತ್ತು ಕಾಶ್ಮೀರದಲ್ಲೂ ರಾಜಕಾರಣಿಗಳು ತುಂಬಾ ಅದ್ಧೂರಿ ಜೀವನ ನಡೆಸುತ್ತಾರೆ. ಅದಕ್ಕೆ ವ್ಯತಿ ರಿಕ್ತವಾಗಿ ರಶೀದ್ ಸರಳಾತಿಸರಳವಾಗಿ ಬದುಕುತ್ತಾನೆ.

ಬಸ್‌ಗಳಲ್ಲಿ ಜನಸಾಮಾನ್ಯರ ಜೊತೆಗೆ ಓಡಾಡುತ್ತಾನೆ. ೨೦೧೯ರಲ್ಲಿ ಈತ ಭಯೋತ್ಪಾದನಾ ಕಾಯ್ದೆ (ಯುಎಪಿಎ) ಅಡಿ ಬಂಽತನಾಗಿದ್ದಾನೆ. ದೆಹಲಿಯ
ಕುಖ್ಯಾತ ತಿಹಾರ್ ಜೈಲಿನಲ್ಲಿ ಈತನನ್ನು ಬಂಧಿಸಿಡಲಾಗಿದೆ. ಅಲ್ಲಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಭರ್ಜರಿ ಜಯ ಗಳಿಸಿದ್ದಾನೆ. ಈತ ಸೋಲಿಸಿದ್ದು ಇನ್ನಾರನ್ನೂ ಅಲ್ಲ, ಖುದ್ದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರನ್ನು! ಒಮರ್ ೨,೬೮,೩೩೯ ವೋಟು
ಪಡೆದಿದ್ದರೆ, ಇಂಜಿನಿಯರ್ ರಶೀದ್ ೪,೭೨,೪೮೧ ವೋಟು ಗಳಿಸಿ ಜಯಭೇರಿ ಬಾರಿಸಿದ್ದಾನೆ. ಜಯದ ಅಂತರ ನೋಡಿದರೇ ತಿಳಿಯುತ್ತದೆ, ಈತನಿಗೆ ಎಂಥಾ ಬೆಂಬಲವಿದೆ ಎಂಬುದು. ರಶೀದ್‌ನ ೨೨ ವರ್ಷದ ಮಗ ಅಬ್ರಾರ್ ಹೇಳಿದ ಮಾತು ನೆನಪಿಡುವಂಥದ್ದು.

‘ನನ್ನ ಅಪ್ಪನ ಪರ ಪ್ರಚಾರ ಮಾಡಲು ನಾವು ಇಡೀ ಚುನಾವಣೆಗೆ ಖರ್ಚು ಮಾಡಿದ್ದು ೨೭೦೦೦ ರೂಪಾಯಿ. ಅದೂ ನಾವು ಓಡಾಡಲು ಬಳಸಿದ
ಜೀಪಿಗೆ ಡೀಸೆಲ್ ಹಾಕಿಸಲು ಮಾಡಿದ ಖರ್ಚು. ಇದನ್ನು ನಮ್ಮ ದೇಶದಲ್ಲಿ ಈಗ ಸಾಮಾನ್ಯ ಅಭ್ಯರ್ಥಿಗಳು ಚುನಾವಣೆಗೆ ಮಾಡುವ ಖರ್ಚಿನ ಜೊತೆಗೆ ಒಮ್ಮೆ ಹೋಲಿಸಿ ನೋಡಿ. ಅಬ್ರಾರ್ ಮತ್ತು ಅವನ ತಮ್ಮ ಅಸ್ರಾರ್ ರಶೀದ್ ಚುನಾವಣಾ ಪ್ರಚಾರಕ್ಕೆ ಬಳಸಿದ ಘೋಷಣೆ ತುಂಬಾ ಸರಳವಾಗಿತ್ತು: ‘ಜೈಲಿನ ಸೇಡು ಮತದಿಂದ ತೀರಿಸಿಕೊಳ್ಳೋಣ.

ಆದರೆ ಈ ಮೂವರೂ ಒಂದು ಸಂಗತಿಯನ್ನು ಮಾತ್ರ ಈಗ ಒಪ್ಪಿಕೊಳ್ಳಲೇಬೇಕು. ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆ ಎಷ್ಟು ವಿಶಿಷ್ಟವಾಗಿದೆ ಅಂದರೆ, ಇದು ತನ್ನ ಆಂತರ್ಯದಲ್ಲಿ ಸ್ವಾತಂತ್ರ್ಯವನ್ನು ಹುದುಗಿಸಿಟ್ಟುಕೊಂಡು, ಪ್ರತ್ಯೇಕತಾವಾದಿಗಳಿಗೂ ಕೂಡ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತದೆ. ಆದರೆ ಅವರು ಗೆದ್ದು ಬಂದರೆ ಲಕ್ಷ್ಮಣರೇಖೆ ಹಾಕುತ್ತದೆ. ಈಗ ಗೆದ್ದಿರುವ ಮೂವರೂ ಸಂಸತ್ತಿನ ಸದಸ್ಯರಾಗುವುದಕ್ಕಿಂತ ಮೊದಲು ನಾವು ಭಾರತದ ಸಾರ್ವಭೌಮತೆಯನ್ನು ಗೌರವಿಸುತ್ತೇವೆ ಮತ್ತು ರಕ್ಷಿಸುತ್ತೇವೆ ಎಂದೇ ಪ್ರಮಾಣವಚನ ಸ್ವೀಕರಿಸಬೇಕು. ಏನಾಗುತ್ತದೆಯೋ ನೋಡೋಣ.
***

ನಾವೀಗ ಮತ್ತೆ ೧೯೮೨ರ ದಿನಗಳನ್ನು ನೋಡುತ್ತಿದ್ದೇವಾ? ರಾಷ್ಟ್ರೀಯ ಹಿತಾಸಕ್ತಿ ಹೊಂದಿರುವ ಎಲ್ಲರ ಮನದಲ್ಲೂ ಇಂಥದ್ದೊಂದು ಪ್ರಶ್ನೆ ಮೂಡುತ್ತಿದೆ. ೧೯೮೨ರಲ್ಲಿ ದೆಹಲಿ ಪೊಲೀಸರು ಏಷ್ಯನ್ ಗೇಮ್ಸ್ ಆರಂಭವಾಗುವುದಕ್ಕೂ ಮುನ್ನ ಬಸ್ಸು, ಕಾರುಗಳನ್ನು ರಸ್ತೆಯಲ್ಲಿ ತಡೆದು ಅವುಗಳಲ್ಲಿರುವ ಸಿಖ್ಖರನ್ನು ತಪಾಸಣೆಗೆ ಒಳಪಡಿಸುತ್ತಿದ್ದರು. ಆಗ ಕೇಂದ್ರ ಸರ್ಕಾರದಲ್ಲಿರುವ ಯಾರಿಗೂ ಅದರಿಂದ ಸಮಸ್ಯೆಯಿರಲಿಲ್ಲ. ಏಕೆಂದರೆ ಪಂಜಾಬ್‌ನ ಸಮಸ್ಯೆಗಳು ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಕಣ್ಣಿನಲ್ಲಿ ಸಿಖ್ಖರನ್ನೆಲ್ಲ ಶಂಕಿತರನ್ನಾಗಿ ಮಾಡಿದ್ದವು.

ವಿಮಾನ ನಿಲ್ದಾಣಗಳಲ್ಲಿ ಮಾಡುವಂತೆ ಬಸ್ಸು, ರೈಲಿನ ಎಲ್ಲಾ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಿದರೆ ಅದರಿಂದ ಸಮಸ್ಯೆಯಿಲ್ಲ. ಏಕೆಂದರೆ ಆಗ ತಾರತಮ್ಯ ಮಾಡಿದಂತಾಗುವುದಿಲ್ಲ. ಆದರೆ ಅಂದು ಕೇವಲ ಸಿಖ್ಖರನ್ನೇ ಗುರುತಿಸಿ ತಪಾಸಣೆ ಮಾಡಲಾಗುತ್ತಿತ್ತು. ಅದು ಆ ಧರ್ಮೀಯರಿಗೆ
ಅವಮಾನ ಮಾಡಿದಂತಾಗುತ್ತಿತ್ತು. ಹೀಗಾಗಿ ಸಿಖ್ಖರು ಸಿಟ್ಟಾಗಿದ್ದರು. ಅದು ಕೆಲ ಒಳಪಂಗಡಗಳು ಒಟ್ಟಾಗಿ ಕ್ರಾಂತಿಕಾರಿ ಗುಂಪುಗಳಾಗಿ ಮಾರ್ಪಡುವುದಕ್ಕೆ ಪ್ರಚೋದನೆ ನೀಡಿತು. ದೇಶಭಕ್ತಿಯ ಪರಮೋಚ್ಚ ತಾಣವೆಂದು ನಂಬಲಾದ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಖ್ಖರನ್ನೂ ಅನುಮಾನದಿಂದಲೇ ನೋಡಲಾಗುತ್ತಿತ್ತು.

ಆಘಾತಕಾರಿ ಘಟನೆಯೊಂದರಲ್ಲಿ ಘರವಾಲ್ ರೈಫಲ್ಸ್‌ನ ಮೇಜರ್ ಜನರಲ್ ಶಾಬೇಗ್ ಸಿಂಗ್ ೧೯೮೨ರಲ್ಲಿ ತಮ್ಮ ದೆಹಲಿಯ ಮನೆ ಬಿಟ್ಟು ಹೋಗಬೇಕಾಯಿತು. ಏಕೆಂದರೆ ಅವರನ್ನೂ ಭದ್ರತಾ ಪಡೆಗಳು ದೇಶದ ಭದ್ರತೆಗೆ ಅಪಾಯಕಾರಿ ವ್ಯಕ್ತಿ ಎಂದು ಶಂಕಿಸಿದ್ದವು. ೧೯೪೭, ೧೯೬೨, ೧೯೬೫ ಹಾಗೂ ೧೯೭೧ರ ಯುದ್ಧಗಳಲ್ಲಿ ಭಾರತದ ಪರವಾಗಿ ಹೋರಾಡಿದ್ದ ವೀರ ಯೋಧ ಅವರಾಗಿದ್ದರು. ದುರ ದೃಷ್ಟವಶಾತ್ ಅವರು ಅವಮಾನದಿಂದ ಕ್ರುದ್ಧರಾಗಿ ಸಂತ ಭಿಂದ್ರನ್‌ವಾಲೆಯ ಖಾಸಗಿ ಸೇನೆಗೆ ಕಮಾಂಡರ್ ಆಗಿ ಸೇರ್ಪಡೆಗೊಂಡರು. ಆಪರೇಷನ್ ಬ್ಲೂಸ್ಟಾರ್ ವೇಳೆ ತಮ್ಮ ಪರಾಕ್ರಮವನ್ನೂ
ತೋರಿಸಿದರು. ಹಿಂದೆ ಆದ ತಪ್ಪುಗಳಿಗೆ ಬೆಲೆ ಕಟ್ಟುವುದಕ್ಕೆ ಇತಿಹಾಸಕ್ಕೆ ಅಷ್ಟೇನೂ ಅವಸರ ಇರುವುದಿಲ್ಲ. ಆದರೆ ಅದು ತಪ್ಪನ್ನು ಯಾವತ್ತೂ ಮರೆಯುವುದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಪ್ತ ಭದ್ರತಾ ತಂಡ ಮೂರನೇ ಅವಧಿಗೆ ಅಧಿಕಾರ ಆರಂಭಿಸುತ್ತಿದ್ದಂತೆ ಈ ಮೂರು ಫಲಿತಾಂಶಗಳು
ಅತ್ಯಂತ ಆದ್ಯತೆಯ ವಿಷಯವಾಗಿ ಪರಿಣಮಿಸುತ್ತವೆ. ಸಂಸತ್ತಿಗೆ ಆಯ್ಕೆಯಾದ ಈ ಮೂವರು ಪ್ರತ್ಯೇಕತಾವಾದಿಗಳಿಂದ ಎದುರಾಗಿರುವ ಅಪಾಯವನ್ನು ಅತ್ಯಂತ ಜಾಣ್ಮೆಯಿಂದ, ರಾಜಕೀಯ ಮತ್ತು ಆಡಳಿತಾತ್ಮಕ ಕ್ರಮಗಳ ನಾಜೂಕು ಮಿಶ್ರಣದಿಂದಲೇ ಬಗೆಹರಿಸಿಕೊಳ್ಳಬೇಕು. ಏನೂ ಆಗುವುದಿಲ್ಲ ಬಿಡಿ
ಎಂಬ ನಿರ್ಲಕ್ಷ್ಯ ಅಥವಾ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಸಡ್ಡೆ ಅಥವಾ ದಬ್ಬಾಳಿಕೆಯ ನೀತಿಯಿಂದ ಇದನ್ನು ಬಗೆಹರಿಸಲು ಸಾಧ್ಯವಿಲ್ಲ.
ಅಥವಾ ೧೯೮೨ರಲ್ಲಿ ಇದ್ದ ದಪ್ಪ ಚರ್ಮದ, ತೆಳು ಬುದ್ಧಿಯ ಸರ್ಕಾರ ಮಾಡಿದಂತೆ ಒಡೆದು ಆಳುವ ಅಥವಾ ತಾರಾತಮ್ಯದ ನೀತಿ ತೋರುವುದ ರಿಂದಲೂ ಇದು ಬಗೆಹರಿಯುವುದಿಲ್ಲ.

ಕ್ಷಿಪ್ರವಾಗಿ ಬದಲಾಗುತ್ತಿರುವ ಸಮಾಜದ ಚಿಂತನಾ ಕ್ರಮವನ್ನು ಗುರುತಿಸುವ ಚುರುಕಾದ ಕಣ್ಣು ಹಾಗೂ ಮುಕ್ತ ಮನಸ್ಸು ಇದಕ್ಕೆ ಅಗತ್ಯವಿದೆ.
ಎಲ್ಲಾ ಫಲಿತಾಂಶಕ್ಕೂ ಒಂದು ಅರ್ಥವಿರುತ್ತದೆ. ಕಳೆದೊಂದು ದಶಕದಲ್ಲಿ ನೂರಾರು ಲಕ್ಷ ಭಾರತೀಯರ ಆರ್ಥಿಕ ಸ್ಥಿತಿಗತಿ ಅಳತೆಗೂ ಮೀರಿ ಸುಧಾರಿಸಿದೆ. ಆದ್ದರಿಂದಲೇ ಬಿಜೆಪಿಗೆ ೨೪೦ ಸೀಟು ಲಭಿಸಿದೆ. ಆದರೆ ಒಳಗಿನ ಅಂಕಿಅಂಶಗಳನ್ನು ನಿಕಷಕ್ಕೆ ಒಡ್ಡಿದರೆ ಬೇರೆ ಬೇರೆ ಸಂಗತಿಗಳು ಗೋಚರಿಸುತ್ತವೆ. ಈ ಚುನಾವಣೆಯಲ್ಲಿ, ನಗರ ಪ್ರದೇಶಗಳಲ್ಲಿ ಬಿಜೆಪಿಯ ಮತ ಗಳಿಕೆ ಪ್ರಮಾಣ ೨೦೧೯ರಲ್ಲಿ ಇದ್ದ ಶೇ.೩೩ರಿಂದ ಶೇ.೪೦ಕ್ಕೆ ಏರಿಕೆಯಾಗಿದೆ. ಯಾವ ಲೆಕ್ಕದಲ್ಲಿ ನೋಡಿದರೂ ಇದು ಅದ್ಭುತವಾದ ಬೆಳವಣಿಗೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಲಭಿಸಿದ್ದ ಶೇ.೩೯.೫ರಷ್ಟು ವೋಟುಗಳು ಈ ಬಾರಿ ಶೇ.೩೫ಕ್ಕೆ ಕುಸಿದಿವೆ.

ಪ್ರಧಾನಿ ಮೋದಿಗೆ ಗ್ರಾಮೀಣ ಮಹಿಳೆಯರಿಂದ ಲಭಿಸುತ್ತಿರುವ ಅಭೂತ ಬೆಂಬಲ ಹಾಗೂ ಉಚಿತ ಪಡಿತರ ಮತ್ತು ಉತ್ತಮ ಆಡಳಿತದ ಮೂಲಕ ಅವರು ಮಹಿಳೆಯರ ಮನಸ್ಸನ್ನು ಗೆದ್ದಿರುವುದರ ಹೊರತಾಗಿಯೂ ಹಳ್ಳಿಗಾಡಿನಲ್ಲಿ ಬಿಜೆಪಿಯ ಮತ ಗಳಿಕೆ ಇಳಿಕೆಯಾಗಿದೆ. ನಿರುದ್ಯೋಗದ ಸಮಸ್ಯೆ ಹಾಗೇ ಇರುವುದರಿಂದ ಯುವಕರೂ ದೂರ ಹೋಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಕಳೆದುಕೊಂಡ ಮತಗಳನ್ನು ಸೀಟುಗಳಾಗಿ ಪರಿವರ್ತಿಸಿದರೆ ೬೩ ಸೀಟುಗಳಾಗುತ್ತವೆ! ಬಿಜೆಪಿ ಕಳೆದುಕೊಂಡ ಸೀಟುಗಳು ಎಲ್ಲಿ ಹೋದವು ಎಂಬುದಕ್ಕೆ ಉತ್ತರ ಇಲ್ಲೇ ಇದೆ.

ಸಂಪುಟ ಸಚಿವ ಅರ್ಜುನ್ ಮುಂಡಾ ಅವರ ಸೋಲು ಇನ್ನೊಂದು ಸಂದೇಶ ನೀಡುತ್ತಿದೆ. ಜಾರ್ಖಂಡ್‌ನ ಗುಡ್ಡಗಾಡು ಪ್ರದೇಶಗಳ ಮತ ಈ ಬಾರಿ ಬಿಜೆಪಿಯ ಕೈತಪ್ಪಿದೆ. ಇಷ್ಟೇ ಅಲ್ಲ, ದುರಸ್ತಿ ಮಾಡುವುದಕ್ಕೆ ಇನ್ನೂ ಸಾಕಷ್ಟಿದೆ. ಬಹಳ ದೊಡ್ಡ ಅಪಾಯವಿರುವುದು ಈಶಾನ್ಯ ರಾಜ್ಯಗಳಲ್ಲಿ. ಅದಕ್ಕೆ ಕ್ಷಿಪ್ರ ಪರಿಹಾರವೂ ಇಲ್ಲ. ಜಾದೂ ಮಾಡಿ ಈಶಾನ್ಯ ರಾಜ್ಯಗಳ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಈಶಾನ್ಯಕ್ಕೆ ತಕ್ಷಣ ಬೇಕಿರುವುದು ಕನಿಕರ, ಸ್ಪಷ್ಟತೆ, ಕಳಕಳಿ ಹಾಗೂ ಕೆಲವು ಕಡೆ ಶಕ್ತಿ. ಪ್ರಚೋದಕರಿಂದ ಪ್ರಚೋದನೆಗೆ ಒಳಗಾಗುವುದು ಒಳ್ಳೆಯ ಆಡಳಿತಗಾರರ ಲಕ್ಷಣವಲ್ಲ.

ಹಾಗೆಯೇ, ದೇಶದ ನಿಜವಾದ ಶತ್ರುಗಳಿಗೆ ಯಾವ ಪ್ರಮಾಣದ ಚಾಟಿ ಬೀಸಬೇಕೋ ಅದನ್ನು ಬೀಸಲೇಬೇಕು. ೧೯೮೦ರ ದಶಕದಲ್ಲಿ ಪಂಜಾಬ್‌ನಲ್ಲಿ ಸಂಭವಿಸಿದ ರಾಜಕೀಯ ಭೂಕಂಪನವನ್ನು ನಾವು ನೋಡಿದ್ದೇವೆ. ೧೯೭೦ರ ದಶಕದಲ್ಲಿ ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಯಿಂದಾಗಿ ಶಾಂತಿ ಹಾಗೂ ಸಹಬಾಳ್ವೆಗೆ ಮರಳಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ೧೯೮೭ರಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನರೆನ್ಸ್ ಪಕ್ಷಗಳು ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಚುನಾವಣೆಯಲ್ಲಿ ಅಕ್ರಮ ಎಸಗಿದ್ದರಿಂದ ಅಲ್ಲಿನ ಪರಿಸ್ಥಿತಿ ಏಕ್‌ದಂ ಹದಗೆಟ್ಟಿದ್ದನ್ನೂ ನೋಡಿದ್ದೇವೆ. ಅಲ್ಲಿನ ಜನರು ಅವೆರಡೂ ಪಕ್ಷಗಳನ್ನು ಕ್ಷಮಿಸಲಿಲ್ಲ.

ಆದರೆ ಅದು ಅಷ್ಟೇನೂ ಮುಖ್ಯವಲ್ಲ. ಬಹಳ ಮುಖ್ಯವಾದ ಸಂಗತಿ ಏನೆಂದರೆ, ಹಾಗೆ ಸೃಷ್ಟಿಯಾದ ಅಶಾಂತಿಯ ಪರಿಣಾಮದಿಂದಾಗಿ ಹಿಂಸಾಚಾರ ಭುಗಿಲೆದ್ದು, ಜಮ್ಮು ಮತ್ತು ಕಾಶ್ಮೀರದ ಒಗ್ಗಟ್ಟು ಛಿದ್ರಗೊಂಡು, ಪಾಕಿಸ್ತಾನದ ಪ್ರಚೋದಕ ಶಕ್ತಿಗಳ ಕುಮ್ಮಕ್ಕಿನಿಂದ ಸ್ಥಳೀಯರು ಕಾಶ್ಮೀರಿ ಪಂಡಿತರನ್ನು ಅವರ ಮನೆ ತೊರೆದು ಹೋಗುವಂತೆ ಮಾಡಿದರಲ್ಲ, ಅದರ ಘೋರ ಪರಿಣಾಮ ತಣ್ಣನೆಯ ಕಣಿವೆ ರಾಜ್ಯದಲ್ಲಿ ಇವತ್ತಿಗೂ ಅನುರಣಿಸುತ್ತಿದೆ.

ಇವೆಲ್ಲವನ್ನೂ ಮೀರಿ, ೨೦೨೪ರ ಚುನಾವಣೆಯ ಸಂದೇಶ ಏನೆಂದರೆ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತೊಮ್ಮೆ ಗೆದ್ದಿದೆ. ಜನರ
ನಂಬಿಕೆಯನ್ನು ಯಾರೂ ಘಾಸಿಗೊಳಿಸಲು ಸಾಧ್ಯವಾಗಿಲ್ಲ. ಯಾರಾದರೂ ಅದಕ್ಕೆ ಪ್ರಯತ್ನ ಪಟ್ಟಿದ್ದರೂ ಯಶಸ್ವಿಯಾಗುತ್ತಿರಲಿಲ್ಲ. ಸಾರ್ವಜನಿಕ
ಜೀವನದಲ್ಲಿರುವ ವ್ಯಕ್ತಿಗಳು ಐದು ವರ್ಷದ ಅವಧಿಗೆ ರಾಜನಾಗಿ ಮೆರೆಯಬಹುದು. ಆದರೆ ನಿಜವಾದ ರಾಜ ಮತದಾರ. ಕೆಲ ವಿದೇಶಿ ಪತ್ರಕರ್ತರು
ಸೇರಿಕೊಂಡು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವ್ಯವಸ್ಥಿತ ಆರೋಪವೊಂದನ್ನು ಹೊರಿಸಿ, ಭಾರತದ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯಲು ನಿರಂತರವಾಗಿ ಯತ್ನಿಸಿದ್ದರು. ಭಾರತವೀಗ ಪ್ರಜಾಪ್ರಭುತ್ವವಾಗಿ ಉಳಿದಿಲ್ಲ ಎಂದು ಅವರು ಪ್ರಚಾರ ಮಾಡುತ್ತಿದ್ದರು.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುತ್ತಿರುವುದನ್ನು ನೋಡಿಕೊಂಡೂ ಹೀಗೆ ಹೇಳುವುದಕ್ಕೆ ಒಂದೋ ನೀವು ಮೂರ್ಖರಾಗಿರಬೇಕು, ಇಲ್ಲಾ ಕುರುಡರಾಗಿರಬೇಕು. ಪ್ರಜಾಪ್ರಭುತ್ವ ದಲ್ಲಿ ಕೆಲಸ ಮಾಡದೆ ಇದ್ದರೆ ಉಳಿಗಾಲವಿಲ್ಲ. ಆಡಳಿತವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ರಾಜಕೀಯಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕಗಳಲ್ಲೂ ಒಂದಲ್ಲಾ ಒಂದು ಪಾಠ ಇದ್ದೇ ಇರುತ್ತದೆ. ನಾನು ಓದಿದ ಅತ್ಯಂತ ಒಳ್ಳೆಯ ಉಪದೇಶ ಇಡೀ ಪುಸ್ತಕ ಆಗಿರಲಿಲ್ಲ, ಬದಲಿಗೆ ಅದೊಂದು ಪ್ಯಾರಾ ಅಷ್ಟೇ ಆಗಿತ್ತು.

೭ನೇ ಶತಮಾನದಲ್ಲಿ ಡಮಾಸ್ಕಸ್ ಅನ್ನು ಆಳಿದ ಉಮಾಯದ್ ಕ್ಯಾಲಿಫ್, ಮೌವಿಯಾ ಇಬ್ನ್ ಸೂಫಿಯಾ ಹೇಳಿದ ಮಾತು ಇದು: ‘ಎಲ್ಲಿ ನಾಲಿಗೆ ಸಾಕೋ ಅಲ್ಲಿ ಛಡಿಯನ್ನು ನಾನು ಬಳಸುವುದಿಲ್ಲ. ಎಲ್ಲಿ ಛಡಿ ಸಾಕೋ ಅಲ್ಲಿ ಖಡ್ಗ ಬಳಸುವುದಿಲ್ಲ. ನನ್ನ ಪ್ರಜೆಗಳ ಜೊತೆಗೆ ನನಗೆ ಒಂದೇ ಒಂದು ಕೂದಲಿನ ಷ್ಟಾದರೂ ನಂಟು ಇದೆ ಎಂದಾದರೆ, ಅದು ತುಂಡಾಗಲು ಯಾವತ್ತೂ ಬಿಡುವುದಿಲ್ಲ. ಅವರು ಎಳೆದರೆ ನಾನೇ ಸಡಿಲ ಬಿಡುತ್ತೇನೆ. ಅವರು
ಸಡಿಲ ಬಿಟ್ಟರೆ ನಾನು ಎಳೆಯುತ್ತೇನೆ. ಇದೊಂದು ಮಾತಿನಲ್ಲಿ ಎಂಥಾ ರಾಜಕೀಯ ಪಾಠವಿದೆ!

ಪ್ರಜಾಪ್ರಭುತ್ವದಲ್ಲಿ ಮತದಾನದ ದಿನವೆಂಬುದು ಒಂದು ಸುದೀರ್ಘ ಪ್ರಕ್ರಿಯೆಯ ಅಂತ್ಯವಷ್ಟೆ. ಪ್ರಜಾಪ್ರಭುತ್ವವೆಂಬುದು ಅಧಿಕಾರ ಮತ್ತು ಜನರ
ನಡುವೆ ನಂಬಿಕೆ, ವಿಶ್ವಾಸ, ಸಂವಾದ ಹಾಗೂ ಪರಸ್ಪರ ಕಲಿಕೆಯ ಮೂಲಕ ಬೆಸೆದುಕೊಂಡಿರುವ ಅನುದಿನದ ಸಂಬಂಧ. ಪ್ರಜಾಪ್ರಭುತ್ವವೆಂಬುದು ಡ್ಯಾನ್ಸ್ ಅಲ್ಲ, ಅದೊಂದು ಕೊರಿಯೋಗ್ರಫಿ. ಅಲ್ಲಿ ಜನರು ದಾರಿ ತೋರಿಸುತ್ತಾರೆ ಮತ್ತು ಸರ್ಕಾರ ದಾರಿಯ ನಕ್ಷೆಯನ್ನು ಸಿದ್ಧಪಡಿಸುತ್ತದೆ. ಇಬ್ಬರೂ ಸೇರಿಕೊಂಡು ಆ ದಾರಿಯಲ್ಲಿ ಎಲ್ಲಿ ಶಾಂತಿ, ಸಹಬಾಳ್ವೆ ಹಾಗೂ ನೆಮ್ಮದಿಯಿಂದ ಕೂಡಿದ ಒಳ್ಳೆಯ ಭವಿಷ್ಯವಿದೆಯೋ, ಎಲ್ಲಿ ಸಾಕಷ್ಟು ಆಹಾರ ಹಾಗೂ ಸಮೃದ್ಧಿಯಿದೆಯೋ ಆ ದಿಗಂತದತ್ತ ಕೈಕೈ ಹಿಡಿದು ಸಾಗುತ್ತಾರೆ.

(ಲೇಖಕರು: ಹಿರಿಯ ಪತ್ರಕರ್ತ)

 

Leave a Reply

Your email address will not be published. Required fields are marked *