Sunday, 15th December 2024

ಖರ್ಗೆಯವರಿಗೇನು ಗೊತ್ತು ಕಸ್ತೂರಿ ಪರಿಮಳ ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

‘ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿಯೂ ಸತ್ತಿಲ್ಲ, ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದೆ’ ಎಂಬ ಎರಡು ಸಾಲುಗಳನ್ನೇ ಪದೇಪದೇ ಹೇಳುತ್ತಿದ್ದರೆ ಭಾರತೀಯರು ಅದನ್ನಿಷ್ಟು ಜನ್ಮ ಕೇಳಬೇಕು? ಖರ್ಗೆಯವರ ಭಾಷಣದಲ್ಲಿ ದೇಶದ ಭವಿಷ್ಯ, ಭದ್ರತೆ, ಸಮಾನತೆ, ಸಹಬಾಳ್ವೆಯ ಮಾತುಗಳನ್ನು ಯಾವಾಗಿನಿಂದ ಕೇಳಬೇಕು?

ಮಾಗಡಿ ರಸ್ತೆಯ ತಾವರೆಕರೆಯ ಆಂಜನೇಯಸ್ವಾಮಿ ದೇಗುಲದಲ್ಲಿ ೧೫೨೪ರ ಕಾಲದ ಒಂದು ಶಿಲಾಶಾಸನವಿದೆ. ಈ ಶಾಸನದಲ್ಲಿ ಶ್ರೀಕೃಷ್ಣದೇವರಾಯರಿಗೆ ಮತ್ತು ಯುವರಾಜ ತಿರುಮಲದೇವರಾಯನಿಗೆ ಒಳಿತು ಬಯಸಿ ಸ್ಥಳೀಯ ಮಾಂಡಲಿಕ ನೊಬ್ಬ ದೇವತಾಕಾರ್ಯ ನೆರವೇರಿಸಿರುವ ಉಲ್ಲೇಖವಿದೆ. ಮಾರೇನಹಳ್ಳಿಯಲ್ಲಿನ ಜನ ರಾಯನಿಗೆ ಒಳಿತಾಗಲೆಂದು ನಡೆದುಕೊಳ್ಳುತ್ತಾರೆಂದರೆ ಅದು ರಾಯನ ‘ಆಡಳಿತ ಧರ್ಮ’ದ ಅನಂತತೆ. ಇಡೀ ದಕ್ಷಿಣಭಾರತ ವ್ಯಾಪಿಸಿದ್ದ ಸುವರ್ಣಯುಗ ದಲ್ಲಿ ‘ಶ್ರೀಕೃಷ್ಣದೇವರಾಯರು ಅರಸನಾಗಿದ್ದರೆ ಸಾಕು’ ಎಂಬ ಧೈರ್ಯ, ವಿಶ್ವಾಸ ಇಡೀ ದಕ್ಷಿಣಭಾರತದ ಸಾಮಂತರಲ್ಲಿತ್ತು.

1510ರಲ್ಲಿ ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ್ತನಾದ ವರ್ಷದಲ್ಲಿ ಜನಿಸಿದ ಕೆಂಪೇಗೌಡ, ತನ್ನ ಇಪ್ಪತ್ತೊಂದನೇ (1531)ವಯಸ್ಸಿಗೇ ಪಟ್ಟಕ್ಕೇರಿ ಯಾವುದೇ ಶತ್ರುಬಾಧೆಗಳಿಲ್ಲದೇ ನಿರ್ಭಯವಾಗಿ ಆಡಳಿತ ನಡೆಸಿ ಬೆಂಗಳೂರಿನಂಥ ನಗರವನ್ನು ಕಟ್ಟಿದರೆಂದರೆ ಅದಕ್ಕಿದ್ದ ಸದಾವಕಾಶ ವಿಶ್ವಾಸ ಶಕ್ತಿಯೆಂದರೆ ಕೇಂದ್ರದಲ್ಲಿದ್ದ ಶ್ರೀಕೃಷ್ಣದೇವರಾಯರ ಕಟ್ಟಿದ ವಿಜಯನಗರ ಸಾಮ್ರಾಜ್ಯ. ಸಮುದ್ರದಾಚೆಯ ವ್ಯಾಟಿಕನ್‌ನಿಂದ ಹಿಡಿದು ಮಾರೇನಹಳ್ಳಿಯ ತನಕ ರಾಯನ ಗುಣಗಾನ ವಿತ್ತಲ್ಲ, ಅದು ಒಬ್ಬ ಯಶಸ್ವಿ ರಾಜನ ಆಡಳಿತದ ಧ್ಯೋತಕ.

ಶ್ರೀಕೃಷ್ಣದೇವರಾಯನ ನಂತರ ಆಧುನಿಕ ಭಾರತದ ಆಡಳಿತಗಾರನೊಬ್ಬ ಇಡೀ ಜಗತ್ತಿನ ಗಮನಸೆಳೆದದ್ದು ನೇತಾಜಿ ಯವರನ್ನು ಹೊರತು ಪಡಿಸಿದರೆ ಬಹುಶಃ ನರೇಂದ್ರ ಮೋದಿ ಎಂದರೆ ಅತಿಶಯೋಕ್ತಿಯಲ್ಲ. ಅದು ನಗರಸಭೆಯೇ ಆಗಿರಲಿ, ರಾಜ್ಯವಿಧಾಸಭೆಯ ಚುನಾವಣೆಯೇ ಆಗಿರಲಿ ಮೋದಿಯವರ ಹೆಸರಿನಲ್ಲಿ ಮತಕೊಡಿ ಎನ್ನುತ್ತಾರೆ.

‘ಮತ ಕೇಳಬೇಕಾದ್ದು ಅಭ್ಯರ್ಥಿ ಹೆಸರಲ್ಲಿ, ಮೋದಿಯನ್ನು ನೋಡಿ ಮತಹಾಕಿ ಎಂದರೆ ಎಷ್ಟು ಬಾರಿ ನಿಮ್ಮ ಮುಖ ನೋಡಬೇಕು? ನಿಮಗೆ ಎಷ್ಟು ಅವತಾರ ಇದೆ? ನಿಮಗೇನು ರಾವಣನ ಹಾಗೆ ೧೦೦ ತಲೆ ಇದೆಯೇ?’ ಎಂದು ಗುಜರಾತಿನ ವೇದಿಕೆಯಲ್ಲಿ ಮಾತನಾಡುತ್ತಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು. ಖರ್ಗೆಯವರಂಥ ಮಹಾಮುತ್ಸದ್ದಿ ಪ್ರಧಾನಿಯವರ ವಿರುದ್ಧ ಅಸಹನೀಯವಾಗಿ ಮಾತನಾಡುತ್ತಿರುವುದನ್ನು ನೋಡಿದರೆ ಅಷ್ಟರಮಟ್ಟಿಗೆ ಸಂಯಮ ಕಳೆದುಕೊಂಡಿದ್ದಾರೆಂಬುದು ಅರಿವಾದೀತು.

2007ರಲ್ಲಿ ಸೋನಿಯಾ ಗಾಂಧಿ, ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆದದ್ದು ಅವರ ಬಾಲಿಶ ಮತ್ತು ಅನನು ಭವದ ದ್ಯೋತಕವಾಗಿತ್ತು. ಆದರೆ ಖರ್ಗೆಯವರಿಗೆ ಏನಾಗಿದೆ? ಖರ್ಗೆ ಮಾತನಾಡಿದ ರೀತಿ ನೋಡಿದರೆ ಹಳ್ಳಿಯಲ್ಲಿ
ಕಡ್ಡಿಪುಡಿ ಮುದುಕಿಯೊಬ್ಬಳು ಹಿಂದೆಮುಂದೆ ಯೋಚಿಸದೆ ‘ನಿನ್ನ ಮನೆ ಹಾಳಾಗ, ನೀನು ನೆಗೆದು ಬಿದ್ದು ಸಾಯ, ನಿನಗೆ ಬರಬಾರದು ಬರಾ..’ ಎಂದು ಶಪಿಸುವ ಹತಾಶೆಯಿದ್ದಂತಿತ್ತು.

ಸಂವಿಧಾನಾತ್ಮಕವಾಗಿ ಜನರಿಂದ ಸ್ಪಷ್ಟ ಜನಾದೇಶ ಪಡೆದು ಒಂದು ರಾಜ್ಯದ 12 ವರ್ಷದ ಮುಖ್ಯಮಂತ್ರಿಯಾಗಿ,
ದೇಶದ ದಶಕದ ಪ್ರಧಾನಿಯಾಗಿರುವ ಒಬ್ಬ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ಕುರಿತು ಇಷ್ಟೊಂದು ಹೀನಾಯವಾಗಿ ಮಾತನಾಡಿದ್ದು ಕಂಡಾಗ ಅನಿಸಿದ್ದು, ಖರ್ಗೆಯವರಿಗೂ ಜಮೀರ್ ಖಾನ್‌ಗೂ ಯಾವುದೇ ವ್ಯತ್ಯಾಸವಿಲ್ಲ. ಮೋದಿ
ಹಿಂದುಳಿದ ಗಾಣಿಗ ಸಮುದಾಯದವರಾಗಿದ್ದೇ ಈ ಪರಿಯ ನಿಂದನೆಗೆ ಒಳಗಾಗುತ್ತಿದಾರೆಂದರೆ ಇನ್ನೊ ಅವರೇನಾದರೂ ಬ್ರಾಹ್ಮಣರಾಗಿದ್ದರೆ ಅವರನ್ನು ದೇವರೇ ಕಾಪಾಡಬೇಕಿತ್ತು!.

ಪುಟ್ಟ ಬಾಲಕ ಕೂಡ ಮೋದಿಯವರ ಸಾಧನೆಯ ಬಗ್ಗೆ ಏ ಯಿಂದ ಝಡ್ ತನಕ ಹೇಳಬಲ್ಲ. ಅದು ಬಾಲಕನಿಗೆ ತನ್ನ
ರಾಷ್ಟ್ರದ ಪ್ರಧಾನಿಯ ಮೇಲಿರುವ ಹೆಮ್ಮೆ. ಮೋದಿ ಮುಖನೋಡಿ ವೋಟು ಕೇಳುವುದು ಪ್ರಾಮಾಣಿಕವಾದ, ಜಾಗೃತ ದೇಶಭಕ್ತಿಯಿಂದಲೇ ಹೊರತು ಒಂದು ಕುಟುಂಬಕ್ಕೆ ತೋರುವ ರೀತಿಯ ಗುಲಾಮಗಿರಿಯಲ್ಲ. ಗ್ರಾಮಪಂಚಾಯಿತಿ ಸದಸ್ಯನೂ
‘ಮೋದಿ ನೋಡಿ ನನಗೆ ಮತಹಾಕಿ’ ಎಂದರೆ ಮೋದಿ ಅನುಯಾಯಿಯಾಗಿ ತಾವೂ ಅವರಂತೇ ಪ್ರಾಮಾಣಿಕರು, ದಕ್ಷರು ಎಂಬುದರ ಪ್ರತೀಕ. ಮೋದಿ ಯಂಥ ವ್ಯಕ್ತಿಯನ್ನು ಮತ್ತು ಅವರ ಪಕ್ಷವನ್ನು ತಾನು ಪ್ರತಿನಿಧಿಸುತ್ತಿರುವ ಹೆಗ್ಗಳಿಗೆ ಆತನದು. ಇಂದು ಇಡೀ ವಿಶ್ವವೇ ಮೋದಿ ನಾಯಕತ್ವ ಬಯಸುತ್ತಿದೆ.

ದೂರದಲ್ಲಿ ಕುಳಿತ ಮೋದಿಯವರನ್ನು ಕಂಡ ಅಮೆರಿಕ ಅಧ್ಯಕ್ಷರೇ ನಿಂತು ಸೆಲ್ಯೂಟ್ ಹೊಡೆದು ಮೋದಿಯವರೊಂದಿಗೆ ಬೆರೆಯಲು ಹಾತೊರೆಯುತ್ತಾರೆಂದರೆ ಅದು ಮೋದಿಯವರು ಸಿದ್ಧಿಸಿಕೊಂಡ ಕರ್ಮಸಾಧನೆ. ಕಳೆದ ಒಂದು ದಶಕದಿಂದ ಮಾತ್ರ ಮೋದಿ ಮಾಯೆ ಕಂಡು ಅಸಹನೆ ಅತೃಪ್ತಿ ಹೊಂದಿರುವಂತೆ ಮಾತನಾಡಿರುವ ಖರ್ಗೆಯವರ ಕಾಂಗೆಸ್, ಸ್ವಾತಂತ್ರ ಬಂದಾಗಿನಿಂದಲೂ ದೇಶದಲ್ಲಿ ಹೇಳಿಕೊಂಡು ಬಂದ ಒಂದೇ ಹೆಸರು ‘ಗಾಂಧಿ’ ಮಾತ್ರವಲ್ಲವೇ?. ಅದೂ ನೆಹರು ಕುಟುಂಬಕ್ಕೂ ಗಾಂಧಿ ಪದಕ್ಕೂ ಸಂಬಂಧವೇ ಇಲ್ಲದಿದ್ದರೂ ‘ಗಾಂಧಿ ಪರಿವಾರ’ವೆಂದು ಹೇಳಿಕೊಂಡೇ ಅಧಿಕಾರ
ಹಿಡಿದಿಲ್ಲವೇ? ಇತ್ತೀಚಿನ ಇಂದಿರಾ ಕ್ಯಾಂಟಿನ್ ವರೆಗೂ ಅದೆಷ್ಟು ಸಂಸ್ಥೆಗಳಿಗೆ ಗಾಂಧಿ ಕುಟುಂಬದ ಹೆಸರುಗಳನ್ನೇ ಇಟ್ಟಿಲ್ಲ? ಕಾಂಗ್ರೆಸ್ ರಾಹುಲ್ -ಸೋನಿಯಾ ಹೆಸರನ್ನು ಹೇಳದೇ ಪ್ರಚಾರ ಮಾಡಲು ಸಾಧ್ಯವೇ? ಖರ್ಗೆಯವರೂ ಅಷ್ಟೇ ಎಐಸಿಸಿ ಅಧ್ಯಕ್ಷರಾಗಬೇಕಾದರೂ ಗಾಂಧಿ ಕುಟುಂಬದ ಹೆಸರನ್ನು ಬಿಟ್ಟು ಅಧಿಕಾರ ಸ್ವೀಕರಿಸುತ್ತಾ ರೆಯೇ? ‘ಸ್ವಾತಂತ್ರ್ಯ ಹೋರಾಟ ದಲ್ಲಿ ಬಿಜೆಪಿಯ ಒಂದು ನಾಯಿಯೂ ಸತ್ತಿಲ್ಲ, ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದೆ’ ಎಂಬ ಎರಡು
ಸಾಲುಗಳನ್ನೇ ಪದೇಪದೇ ಹೇಳುತ್ತಿದ್ದರೆ ಭಾರತೀಯರು ಅದನ್ನಿಷ್ಟು ಜನ್ಮ ಅದನ್ನೇ ಕೇಳಬೇಕು? ಬರೀ ಮೋದಿ-ಬಿಜೆಪಿ-ಆರೆಸ್ಸೆಸ್-ಹಿಂದೂತ್ವದ ಅವಹೇಳನ ಮಾಡುವಂಥ ಮಾತುಗಳನ್ನು ಬಿಟ್ಟರೆ ಖರ್ಗೆಯವರ ಭಾಷಣದಲ್ಲಿ ದೇಶದ ಭವಿಷ್ಯ,
ಭದ್ರತೆ, ಸಮಾನತೆ ಸಹಬಾಳ್ವೆಯ ಮಾತುಗಳನ್ನು ಯಾವಾಗಿನಿಂದ ಕೇಳಬೇಕು?.

ಆನೆಯಂತೆ ಸಾಗುತ್ತಿರುವ ಮೋದಿಯವರನ್ನು ನಿಂದಿಸುವ ಚಟ ಬಿಟ್ಟು ದೇಶದಲ್ಲಿ ನಿರುದ್ಯೋಗ ನಿವಾರಿಸಲು ಕೇಳಿ. ಪಕ್ಷಭೇದವಿಲ್ಲದೇ ನಡೆಯುವ ಭ್ರಷ್ಟಾಚಾರ, ಅಕ್ರಮ-ಬೇನಾಮಿ ಆಸ್ತಿ ಗಳಿಸುವಿಕೆಯನ್ನು ನಿಗ್ರಹಿಸುವುದಕ್ಕೆ ಪಟ್ಟುಹಿಡಿಯಿರಿ. ದೇಶದ ಪ್ರಜಾಪ್ರಭುತ್ವದಲ್ಲಿ ಸಮಾನತೆ ಸೃಷ್ಟಿಸುವ ‘ಏಕರೂಪ ನಾಗರಿಕ ನೀತಿಸಂಹಿತೆ’ ಕಾಯ್ದೆ ಜಾರಿಗೆ ತರಲು ಆಗ್ರಹಿಸಿ. ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಲು ಒತ್ತಾಯಿಸಿ.

ಅಕ್ರಮವಾಗಿ ನುಸುಳುತ್ತಿರುವ ರೋಹಿಂಗ್ಯಾಗಳನ್ನು ಹುಡುಕಿಹುಡುಕಿ ಗಡಿಪಾರು ಮಾಡಿ ಎಂದು ಪ್ರತಿಭಟಿಸಿ. ನಿರುದ್ಯೋಗಕ್ಕೆ, ದೇಶದ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗುವಂಥ ‘ಜನಸಂಖ್ಯೆ ನಿಯಂತ್ರಣ’ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ
ತನ್ನಿ ಎಂದು ಒತ್ತಾಯಿಸಿ. ಸಂವಿಧಾನಶಿಲ್ಪಿ ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಮೀಸಲಿಗೆ ಕಾಲಾವಧಿಯನ್ನು ಸೂಚಿಸಿದ್ದರೂ ಅದನ್ನೇ ವೋಟ್‌ಬ್ಯಾಂಕ್‌ಗಾಗಿ ಬಳಸಿಕೊಳ್ಳದೇ ನೊಂದವರಿಗೆ, ಅರ್ಹರಿಗೆ, ನಿಜವಾದ ಬಡವರಿಗೆ
ಕೊಡಬೇ ಕೆಂದು ಸತ್ಯಾಗ್ರಹ ಕೂರಿ.

ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿ, ಮತಾಂತರ, ಮತಾಂಧ ಕುತಂತ್ರಗಳನ್ನು ಹತ್ತಿಕ್ಕಿ ಎಂದು ಎಚ್ಚರಿಸಿ. ಇಷ್ಟೆಲ್ಲ ಕೆಲಸಗಳು ದೇಶವನ್ನು ಬಲಿಷ್ಠವಾಗಿಸಿ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡುವುದಕ್ಕೆ ಅಡ್ಡಿಯಾಗಲು ಕಾಂಗ್ರೆಸ್ ಪಕ್ಷವೇನು ದೇಶದ್ರೋಹಿ ಪಕ್ಷವಲ್ಲ ಅಲ್ಲವೇ? ತಮ್ಮ ಚಿಂತನೆಯೂ ದೇಶದ ಒಳಿತಿಗಾಗೇ ಇರುವಾಗ ಮೋದಿಯವರಿಗೆ ಕಿಂಚಿತ್ತು
ಒಂದೊಳ್ಳೆಯ ಮಾತುಗಳನ್ನು ಆಡಬಹುದಲ್ಲವೇ? ಪಂಡಿತರ ಮಾರಣಹೋಮಕ್ಕಾಗೇ ಇದ್ದಂತಿದ್ದ ಕಾಶ್ಮೀರದ 370 ವಿಽಯನ್ನು ಕಿತ್ತೆಸೆದಂತೆ, ಕಳೆದ ಹತ್ತು ವರ್ಷಗಳಿಂದ ಭಯೋತ್ಪಾದಕರ ಕಾಟವಿಲ್ಲ ದಂತೆ, ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿಯಿಂದ ಸರಿಯಾದ ತಿರುಗೇಟು ಕೊಟ್ಟಂತೆ, ಹಳೇ ನೋಟನ್ನು ರದ್ದುಮಾಡಿ
ಪಾಕಿಸ್ತಾನವನ್ನು ತಿರುಪೆ ಎತ್ತುವಂತೆ ಮಾಡಿದಂತೆ, ಬ್ಯಾಂಕುಗಳಿಗೆ ಅಸ್ಪೃಶ್ಯರಂತಿದ್ದ ಅನಕ್ಷರಸ್ಥರಿಗೂ ಖಾತೆಯನ್ನು ತೆರೆದು ಸೌಲಭ್ಯಗಳನ್ನು ನೇರವಾಗಿ ತಲುಪುವಂತೆ ಮಾಡಿದಂತೆ, ಬಹುಸಂಖ್ಯಾತ ಹಿಂದೂಗಳ ಹರಕೆಯಾಗಿದ್ದ ಅಯೋಧ್ಯೆಯ ರಾಮಮಂದಿರ ನಿರ್ಮಿಸಿದಂತೆ, ಕೊಳಚೆ ಪ್ರದೇಶವಾಗಿದ್ದ ವಾರಣಾಸಿಯಲ್ಲದೇ ಅನೇಕ ದೇಗುಲಗಳನ್ನು ರಕ್ಷಿಸಿದಂತೆ, ಮುಸಲ್ಮಾನ ಮಹಿಳೆಯರಿಗೆ ಶಾಪವಾಗಿದ್ದ ತ್ರಿವಳಿ ತಲಾಖ್ ತೆಗೆದಂತೆ, ಹೊರದೇಶಗಳಲ್ಲಿ ಯಾತನೆ ಅನುಭವಿಸುತ್ತಿರುವ ಭಾರತೀಯರಿಗಾಗಿ ಭಿಸಿಎಎಭಿ ತಂದಂತೆ, ಪ್ರತಿಯೊಬ್ಬ ಯುವಕನನ್ನೂ ದೇಶಶಾಭಿಮಾನಿಯಾಗಿಸುವ ‘ಅಗ್ನಿವೀರ’ ಯೋಜ
ನೆಯನ್ನು ತಂದಂತೆ, ವ್ಯಾಕ್ಸಿನ್‌ಗಾಗಿ ಅನ್ಯರಾಷ್ಟ್ರಕ್ಕೆ ಭಿಕ್ಷೆ ಬೇಡುವಂತಿದ್ದ ಭಾರತದಲ್ಲಿ ಕರೋನಾದಂಥ ಜಗಮಾರಕಕ್ಕೆ ಒಂಬತ್ತೇ ತಿಂಗಳಲ್ಲಿ ಲಸಿಕೆ ಸೃಷ್ಟಿಸಿದಂತೆ, ಮೋದಿ ಹಿಂದುಳಿದ ವರ್ಗದವರಾದರೂ ಜಗದ್ಗುರು ಶಂಕರಾಚಾರ್ಯ ರಾಮಾನುಜಾಚಾರ್ಯ, ಅಹಲ್ಯಾಬಾಯಿ ಹೋಳ್ಕರ್, ಕೆಂಪೇಗೌಡರ ಬೃಹತ್ ಪ್ರತಿಮೆಗಳನ್ನು ನಿಲ್ಲಿಸಿದಂತೆ, ಇಡೀ ವಿಶ್ವ ಭಾರತವನ್ನು ಹಿಂಬಾಲಿಸುವಂತೆ ಆಡಳಿತ ನೀಡಿದ ಮೋದಿ ರಾವಣರಂತೆ ಕಂಡರೇ? ಕಳೆದ ಹತ್ತು ವರ್ಷಗಳಿಂದ ಒಂದೂ ದಿನವನ್ನು ಮೋಜು ಮಸ್ತಿಗೆ ವಿನಿಯೋಗಿಸದೇ, ದಿನದ ಹದಿನೆಂಟು ಗಂಟೆಗಳೂ ದೇಶಕ್ಕಾಗಿ ದುಡಿಯುವ, ಒಂದು ರುಪಾಯಿಯ ಭ್ರಷ್ಟಚಾರವಿಲ್ಲದ, ದೇಶಾಭಿಮಾನವೆಂದರೆ ಅದು ಮೋದಿ ಎಂಬಂತೆ ಬೆಳೆದು ನಿಂತಿರುವ ಮೋದಿಯವರ ಭಿಕಸ್ತೂರಿಭಿ ಪರಿಮಳ ಖರ್ಗೆಯವರಿಗೇನು ಗೊತ್ತು? ಇಷ್ಟಕ್ಕೂ ಮೋದಿಯವರು ಅನುಭವಿಸಲು ಊರುಗಟ್ಟಲೆ ಜಮೀನು, ದೇಶವಿದೇಶಗಳಲ್ಲಿ ಬಂಗಲೆಗಳು, ಐಷರಾಮಿ ಹೋಟಲ್‌ಗಳು, ಅಪಾರ್ಟ್ಮೆಂಟುಗಳು, ಹೂಡಿಕೆಗಳನ್ನು ಬೇನಾಮಿಯಾಗಿ
ಇಟ್ಟುಕೊಂಡಿಲ್ಲ.

ತಾನೊಬ್ಬ ‘ಹಿಂದುಳಿದ ವರ್ಗದವ’ ಎಂದು ಹೇಳಿಕೊಂಡೇ ಸಾವಿರಾರು ಕೋಟಿ ಹೆಣ ಬಾರ ಆಸ್ತಿಯನ್ನು ಮಾಡಿಕೊಂಡಿಲ್ಲ. ಹಿಂದುಳಿದ ಜಾತಿ ಎಂದು ಹೇಳಿಕೊಂಡು ತನ್ನಂತೆ ತನ್ನ ಮಗನೂ ಶಾಸಕನಾಗಬೇಕು, ಮಂತ್ರಿಯಾಗಬೇಕು, ಮೆರೆಯ
ಬೇಕೆನ್ನುವುದಕ್ಕೆ ಅಯೋಗ್ಯ ಮಕ್ಕಳ್ಯಾರೂ ಮೋದಿ ಯವರಿಗಿಲ್ಲ. ರಾಜಕೀಯದಿಂದ ನಿವೃತ್ತಿಯಾದರೆ ತನ್ನ ತಾಯಿಯನ್ನು ನೋಡಿಕೊಂಡಿದ್ದು ನಂತರ ಹಿಮಾಲಯದ ಗುಹೆಯಲ್ಲಿ ಕೂತು ದಿನಕಳೆಯಬಹುದಷ್ಟೇ.

ಇಂಥ ಬಾಳು ಬಾಳುವ ಯೋಗ್ಯತೆ ಯಾವ ರಾಜಕಾರಣಿಗಿದೆ ಹೇಳಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮುಖ್ಯಮಂತ್ರಿ ಎಂದು ಘೋಷಿಸಿ, ತಾನೇ ‘ಸುನ್ನತ್’ ಮಾಡಿಸಿಕೊಂಡು ಮತಾಂತರವಾಗಿ ಮುಖ್ಯಮಂತ್ರಿಯಾಗಲೂ ರೆಡಿಯಾಗಿರುವ ‘ಪುಟಗೋಸಿ’ ರಾಜಕಾರಣಿಗಳಿರುವಾಗ ದೇಶದ ಭವಿಷ್ಯವೇ ಬದುಕು ಎಂದು ಬಾಳುತ್ತಿರುವ ಮೋದಿಯವರ ಬಗ್ಗೆ ಖರ್ಗೆ ಯವರು ಕೊಂಚ ಅನುಕಂಪ ತೋರುವಂತಾಗಲಿ.

ಇನ್ನು, ಮೊನ್ನೆ ಭಾಷಣದಲ್ಲಿ ನಿಮ್ಮಂಥ ವ್ಯಕ್ತಿಗಳು (ಪ್ರಧಾನಿ ಮೋದಿ) ತಾವು ಬಡವರು ಎಂದು ಹೇಳಿಕೊಳ್ಳುತ್ತಾರೆ. ನಾನು ಕೂಡ ಬಡವ. ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಟೀ ಕುಡಿಯುತ್ತಾರೆ. ಆದರೆ ನನ್ನ ಚಹಾವನ್ನು ಯಾರೂ ಕುಡಿಯುವುದಿಲ್ಲ ಎಂಬ ಮಾತು ಹೇಳಿದಿರಲ್ಲ ಮಾನ್ಯ ಖರ್ಗೆ ಯವರೇ! ಎಂಥ ಬಾಲಿಶವಾದ ಮಾತು. ನಮ್ಮೊಂದಿಗಿರುವ ಗೂಡಂಗಡಿಯ ಚಮ್ಮಾರನೂ ಸಹ ಎಲ್ಲರೊಂದಿಗೆ ಕಲೆತು ಸ್ವಾಭಿಮಾನಿಯಾಗಿ ತನ್ನ ಕಾಯಕದ ಬಗ್ಗೆ ಹೆಮ್ಮೆ ಪಡುತ್ತಾನೆ. ಆದರೆ ನಿಮ್ಮಂಥ ದೊಡ್ಡ ಮನುಷ್ಯರು ‘ನನ್ನ ಮನೆಯ ಟೀ ಕುಡಿಯುವುದಿಲ್ಲ, ನಾನು ಬಡವರಲ್ಲಿ ಬಡವ’ ಎಂಬ ‘ಕಾರ್ಡ್’ ಚಲಾಯಿಸುವುದು ನಿಮ್ಮ ಘನತೆಗೆ ತಕ್ಕುದಾದುದಲ್ಲ.

ಇದರಿಂದ ದಲಿತರನ್ನು ನೀವು ಅವಮಾನಿಸಿದಂತೆ ಮತ್ತು ಅವರ ಆತ್ಮವಿಶ್ವಾಸಕ್ಕೆ ನೀವು ನೀಡುವ ದೊಡ್ಡ ಪೆಟ್ಟೂ ಹೌದು. ಕೊನೆಗೆ, ಇಡೀ ದೇಶದ ಕಾಂಗ್ರೆಸ್ ಅಭ್ಯರ್ಥಿಗಳು ‘ನಮ್ಮ ಖರ್ಗೆಯವರನ್ನು ನೋಡಿ ನನಗೆ ಮತನೀಡಿ’ ಎನ್ನುವಂತೆ ಮಾನ್ಯ ಖರ್ಗೆಯವರು ಬೆಳೆಯುವಂತಾಗಲಿ.