Friday, 22nd November 2024

ಖರ್ಗೆಯವರೇ, ಈ ಭಾಷೆ ನಿಮಗೆ ಶೋಭಿಸುವುದಿಲ್ಲ

ಪ್ರಕಾಶ್

ಪ್ರಕಾಶ್ ಶೇಷರಾಘವಾಚಾರ್‌

ಹೈದರಾಬಾದ್ ಕರ್ನಾಟಕ ಪ್ರದೇಶ ರಜಾಕರ ಆಳ್ವಿಕೆಯಲ್ಲಿ ಇದ್ದ ವೇಳೆ ಮಲ್ಲಿಕಾರ್ಜುನ ಖರ್ಗೆಯವರ ತಂದೆಯವರನ್ನು ಹೊರತುಪಡಿಸಿ ಅವರ ಇಡಿ ಕುಟುಂಬವನ್ನು ರಜಾಕರು ಬೆಂಕಿ ಹಚ್ಚಿ ಕೊಂದಿದ್ದರು. ಖರ್ಗೆಯವರ ಜೀವನದಲ್ಲಿ ಬಾಲ್ಯದಲ್ಲಿಯೇ ಇಂತಹ ಘೋರ ದುರಂತವನ್ನು ಅನುಭವಿಸಿ ಬೆಳದವರು.

ಒಮ್ಮೆ ಕೂಡ ತಮ್ಮ ಕುಟುಂಬದವರ ಸಾವಿಗೆ ರಜಾಕ ಮುಸ್ಲಿಂರು ಕಾರಣ ಎಂದು ಹೇಳಿ ಕೊಂಡವರಲ್ಲ. ಮೊನ್ನೆ ಇಂಡಿಯಾ ಟುಡೆ ಕಾನ್ ಕ್ಲೇವ್‌ನಲ್ಲಿ ತಮ್ಮ ಬಾಲ್ಯದಲ್ಲಿ ನಡೆದ ದುರ್ಘಟನೆಯನ್ನು ವಿವರಿಸುವಾಗಲೂ ರಜಾಕರ ಪೈಚಾಚಿಕ ವರ್ತನೆ ಯನ್ನು ಉಲ್ಲೇಖಿಸ ಲಿಲ್ಲ. ರಾಜಕೀಯದಲ್ಲಿ ಇವರದು ಕೇವಲ ಏರುಗತಿಯ ಬೆಳವಣಿಗೆ 1972ರಿಂದ ಒಂಬತ್ತು ಬಾರಿ ಶಾಸಕರು, ಎರಡು ಬಾರಿ ಲೋಕಸಭಾ ಸದಸ್ಯರು, ಈಗ ರಾಜ್ಯಸಭಾ ಸದಸ್ಯರು.

೫೦ ವರ್ಷಗಳಿಂದ ಒಂದಲ್ಲ ಒಂದು ಅಧಿಕಾರವನ್ನು ಸತತವಾಗಿ ಅನುಭವಿಸುತ್ತಿರುವ ಅಪರೂಪದ ರಾಜಕಾರಣಿ. ರಾಜ್ಯದಲ್ಲಿ ಹಲವು ಖಾತೆಗಳ ಸಚಿವರು, ಪ್ರತಿಪಕ್ಷದ ನಾಯಕರು ಮತ್ತು ಕೇಂದ್ರದಲ್ಲಿ ಕಾರ್ಮಿಕ ಮತ್ತು ರೈಲ್ವೆ ಸಚಿವರಾಗಿದ್ದರು. 2014ರಲ್ಲಿ ಲೋಕಸಭೆ ಕಾಂಗ್ರೆಸ್ ಗುಂಪಿನ ನಾಯಕ ಈಗ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರು. ಯಾರಿ ಗುಂಟು ಯಾರಿಗಿಲ್ಲ ಇಂತಹ ಭಾಗ್ಯ? ತಮ್ಮ ಸುದೀರ್ಘ ರಾಜಕೀಯ ಜೀವನದ ಅನುಭವ ಹಾಗೂ ಸತತ ಅಧಿಕಾರದಿಂದ ರಾಜ್ಯದ ಹಿರಿಯ ಮುತ್ಸದ್ದಿ ರಾಜಕಾರಣಿಯಾಗಿ ಮಾಗಬೇಕಿತ್ತು.

ಖರ್ಗೆಯವರು ತಮ್ಮ ಸ್ವಂತ ಬಲದ ಮೇಲೆ ರಾಜಕೀಯದಲ್ಲಿ ಬೆಳದವರು. ಹಾಗಿದ್ದರೂ ಅನವಶ್ಯಕವಾಗಿ ಗಾಂಧಿ ಕುಟುಂಬ ವನ್ನು ಓಲೈಸುವ ಚಪಲ ಹಾಗೂ ಅನಗತ್ಯವಾದ ಶಬ್ದ ಪ್ರಯೋಗದಿಂದ ಪದೇ ಪದೇ ಮಾಡಿ ತಮ್ಮ ವ್ಯಕ್ತಿತ್ವಕ್ಕೆ ಕುಂದು ತಂದು ಕೊಳ್ಳುತ್ತಿದ್ದಾರೆ. ದೇಶಕ್ಕಾಗಿ ಪ್ರಾಣ ಕೊಡುವುದು ಅಥವಾ ನಂಬಿಕೊಂಡಿರುವ ಸಿದ್ಧಾಂತಕ್ಕೆ ಜೀವ ಕೊಡುವುದು ಅಸಾಮಾನ್ಯ ತ್ಯಾಗವೇ ಸರಿ. ಬದುಕಿ ಬಾಳಬೇಕಾದವರು ವಿಚಾರ ಭೇದದ ಕಾರಣಕ್ಕೆ ಹತ್ಯೆಯಾದವರನ್ನು ಗೌರವದಿಂದ ಕಾಣಬೇಕೇ ವಿನಹ ಲೇವಡಿ ಮಾಡುವ ಅಮಾನವೀಯತೆ ಸಲ್ಲದು.

‘ದೇಶಕ್ಕಾಗಿ ಇಂದಿರಾ ಮತ್ತು ರಾಜೀವ್ ತಮ್ಮ ಪ್ರಾಣವನ್ನೆ ಕೊಟ್ಟಿದ್ದಾರೆ. ಆದರೆ ಬಿಜೆಪಿಯ ಒಂದು ನಾಯಿಯೂ ಪ್ರಾಣತ್ಯಾಗ ಮಾಡಿಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳುವ ಮುನ್ನ ಹತ್ಯೆಯಾದವರ ಕುಟುಂಬಕ್ಕೆ ತಮ್ಮ ಮಾತಿನಿಂದ ಆಗುವ ನೋವು ಮತ್ತು ಅವಮಾನದ ಬಗ್ಗೆ ಒಮ್ಮೆ ಯೋಚಿಸಬೇಕಾಗಿತ್ತು. ಖರ್ಗೆಯವರು ಬಲಿದಾನಿಗಳ ಆತ್ಮಗಳನ್ನು ನಾಯಿಗೆ ಹೋಲಿಕೆ ಮಾಡಿ ಹೀಯಾಳಿಸಿದ್ದು ಇದೇನು ಮೊದಲ ಬಾರಿಯಲ್ಲ. ಈ ಹಿಂದೆಯು ಕೂಡ ಇದೇ ಭಾಷೆಯನ್ನು ಬಳಸಿದ್ದರು.

ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಾರ್ಟಿಗೆ ಹೋರಾಟ ಮಾಡುವ ಪ್ರಮೇಯವೆ ಇರಲಿಲ್ಲ. ಸೈದ್ಧಾಂತಿಕ ಅಥವಾ ವೈಚಾರಿಕ  ನೆಲಗಟ್ಟಿನ ಮೇಲೆ ಪಕ್ಷ ಸಂಘಟನೆಯಾಗಲಿ ಅಥವಾ ದೇಶದ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಹೋರಾಟ ಮಾಡಿದ್ದಾಗಲೀ ಉದಾಹರಣೆಯೇ ಇಲ್ಲದಿರುವಾಗ ಇನ್ನು ಬಲಿಯಾಗುವುದು ಹೇಗೆ ಸಾಧ್ಯ? ಪಂಜಾಬಿನಲ್ಲಿ ಆಪರೇಷನ್ ಬ್ಲೂ ಸ್ಟಾರ್ ಕೈಗೊಂಡ ನಂತರ ಕಾಂಗ್ರೆಸ್ ಮುಖಂಡರು ಪಂಜಾಬ್ ಉಗ್ರರ ಕೆಂಗಣ್ಣಿಗೆ ಗುರಿ ಯಾದರು. ಪಾಪ ಪಂಜಾಬ್ ಮುಖ್ಯ ಮಂತ್ರಿ ಬೇಂತ್ ಸಿಂಗ್ ಮತ್ತು ಲಲಿತ್ ಮಖನ್‌ರವರು ಉಗ್ರರ ಗುಂಡಿಗೆ ಬಲಿಯಾದರು. ಆದರೆ ಅವರ ಬಲಿದಾನದ ಸ್ಮರಣೆಯನ್ನು ಕಾಂಗ್ರೆಸ್ ಮಾಡುವುದಿಲ್ಲ.

ಇನ್ನು ಜನಸಂಘ ಅಥವಾ ಬಿಜೆಪಿಯ ಇತಿಹಾಸವನ್ನು ತಿಳಿಯುವ ಪ್ರಯತ್ನ ಮಾಡಿದ್ದರೆ ಇವರಿಗೆ ಬಿಜೆಪಿಯ ನಾಯಕರ ಮತ್ತು ಕಾರ್ಯಕರ್ತರ ತ್ಯಾಗ ತಿಳಿಯುತ್ತಿತ್ತು. ತಮ್ಮ ಪಕ್ಷದವರ ಬಲಿದಾನವೇ ತಿಳಿಯದವರಿಗೆ ಇತರ ಪಕ್ಷದವರ ಬಲಿದಾನದ ಬಗ್ಗೆ ಮಾಹಿತಿ ಇರಬೇಕಿತ್ತು ಎಂದು ಅಪೇಕ್ಷಿಸು ವುದು ಅತಿಯಾದ ನಿರೀಕ್ಷೆಯೇನೊ?! ಮಲ್ಲಿಕಾರ್ಜುನ ಖರ್ಗೆಯವರರ ಗಮನಕ್ಕೆ ಸಂಘಪರಿವಾರದ ಕಾರ್ಯಕರ್ತರು ದೇಶಕ್ಕಾಗಿ ಮತ್ತು ಸಮಾಜದ ಒಳಿತಿಗಾಗಿ ಪ್ರಾಣ ಕೊಟ್ಟವರ ಬಗ್ಗೆ ತಿಳಿಸಿ ಕೊಡಬೇಕಾದ ಅಗತ್ಯವಿದೆ.

1947ರ ತರುವಾಯ ಈ ದೇಶದ ಸಮಗ್ರತೆ ಮತ್ತು ಏಕತೆಗಾಗಿ ಮೊದಲು ಹುತಾತ್ಮರಾಗಿದ್ದು ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷ ಶ್ಯಾಮಾಪ್ರಸಾದ್ ಮುಖರ್ಜಿಯವರು. ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣ ವಿಲೀನ ಮಾಡಲು 1953ರಲ್ಲಿ ‘ಕಾಶ್ಮೀರ ಚಲೋ’ ಹೋರಾಟ ಕೈಗೊಂಡಾಗ ಅಂದಿನ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಶೇಖ್ ಅಬ್ದು, ಶ್ಯಾಮಾಪ್ರಸಾದ್ ಮುಖರ್ಜಿಯವರನ್ನು ಅಕ್ರಮವಾಗಿ ಬಂಧಿಸಿ ಸೆರೆಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಡುವಂತೆ ನೋಡಿಕೊಂಡರು. ಅದೊಂದು ಹತ್ಯೆ, ಸಹಜ ಸಾವಲ್ಲ ಎಂದು ಕೂಗಿ ಹೇಳಿದರು ಸಾವಿನ ಹಿಂದಿನ ಕಾರಣದ ತನಿಖೆ ನಡೆಯಲೇ ಇಲ್ಲ.

ಅಂದಿನ ಪ್ರಧಾನಿ ನೆಹರು ಅವರ ಕೈವಾಡವು ಕೂಡ ಅವರ ಹತ್ಯೆಯ ಹಿಂದೆ ಇತ್ತು ಎಂಬ ಅನುಮಾನ ದಟ್ಚವಾಗಿತ್ತು. ಏರುಗತಿ ಯಲ್ಲಿದ್ದ ಜನಸಂಘದ ಪ್ರಗತಿಯನ್ನು ಸಹಿಸದೇ ೧೯೬೮ರಲ್ಲಿ ಅಂದಿನ ಜನಸಂಘದ ಅಧ್ಯಕ್ಷ ಪಂ.ದೀನದಯಾಳ್ ಉಪಾಧ್ಯಾ ರನ್ನು ರೈಲಿನಲ್ಲಿ ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. 1996ರಲ್ಲಿ ಭಟ್ಕಳ ಬಿಜೆಪಿ ಶಾಸಕ ಡಾ| ಚಿತ್ತರಂಜನ್ ರವರನ್ನು ಮನೆಗೆ ನುಗ್ಗಿ ಅವರನ್ನು ಗುಂಡು ಹಾರಿಸಿ ಕೊಲ್ಲಲಾಯಿತು. 1993 ರಲ್ಲಿ ಚೆನ್ನೈನ ಆರೆಸ್ಸೆಸ್ ಕಚೇರಿಯ ಮೇಲೆ ನಡೆದ ಬಾಂಬ್ ದಾಳಿಗೆ ಸಂಘ ಪರಿವಾರದ ಅತ್ಯಮೂಲ್ಯ ೧೧ ಕಾರ್ಯಕರ್ತರನ್ನು ಕಳೆದುಕೊಳ್ಳಬೇಕಾಯಿತು.

ಅಯೋಧ್ಯೆ ರಾಮಜನ್ಮ ಭೂಮಿ ಹೋರಾಟದಲ್ಲಿ ನೂರಾರು ಕಾರ್ಯಕರ್ತರು ಪೊಲೀಸರ ಗುಂಡಿಗೆ ಬಲಿಯಾಗಿzರೆ. ಜೀವದ
ಹಂಗು ತೊರೆದು ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ರಕ್ತವನ್ನೇ ಹರಿಸಿದರು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ
ಹೋರಾಟದಲ್ಲಿ ಧ್ವಜ ಹಾರಿಸಲು ಬಂದ ಕಾರ್ಯ ಕರ್ತರ ಮೇಲೆ ಪೊಲೀಸರು ಸುರಿಸಿದ ಗುಂಡಿನ ಮಳೆಗೆ ಆರಕ್ಕೂ ಹೆಚ್ಚು
ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯ ಕರ್ತರು ಪ್ರಾಣತ್ಯಾಗ ಮಾಡಿದ್ದರು. ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ಹತ್ತಾರು ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಭಯೋತ್ಪಾದಕರ ಗುಂಡಿಗೆ ಅಥವಾ ಅವರ ಮಚ್ಚಿನೇಟಿಗೆ ಬಲಿಯಾಗಿದ್ದಾರೆ.

ಖರ್ಗೆಯವರೇ, ಹಿಂದೂ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಜಿಹಾದಿ ದಾಳಿಗೆ ಹದಿನೈದಕ್ಕೂ ಹೆಚ್ಚು ಸಂಘ ಪರಿವಾರದ ಕಾರ್ಯಕರ್ತರು ಬಲಿಯಾಗಿದ್ದಾರೆ. ಕೇರಳದಲ್ಲಿ ಬಿಜೆಪಿ, ಆರೆಸ್ಸೆಸ್ ಮತ್ತು ಇತರ ಪರಿವಾರದ ಕಾರ್ಯಕರ್ತರು ಕಮ್ಯುನಿಷ್ಟರ ಮತ್ತು ಇಸ್ಲಾಂ ಮೂಲಭೂತವಾದಿಗಳಿಂದ ನೂರಾರು ಜನರು ಹತ್ಯೆಯಾಗಿದ್ದಾರೆ.

ಈ ಮೊದಲು ಸಂಘ ಪರಿವಾರದವರು ಮಾರ್ಕ್ಸವಾದಿ ಕಮ್ಯುನಿಸ್ಟರಿಂದ ಹ ಮತ್ತು ಹತ್ಯೆಗೆ ಗುರಿಯಾಗಿದ್ದರು ಈಗ ಪಿಎಫ್ ಐನಂತಹ ಭಯೋತ್ಪಾದಕ ಸಂಘಟನೆಗಳೂ ರಾಷ್ಟ್ರವಾದಿಗಳನ್ನು ಗುರಿ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಸಂಜಿತ್ ಅವರನ್ನು ಪಿಎಫ್ ಐ ಗೂಂಡಾಗಳು ನಡು ಬೀದಿಯಲ್ಲಿ ಅವರ ಪತ್ನಿಯ ಮುಂದೆಯೇ ಘೋರವಾಗಿ ಹತ್ಯೆ ಮಾಡುತ್ತಾರೆ.

೨೦೦೧ರಲ್ಲಿ ತ್ರಿಪುರದಲ್ಲಿ ನಾಲ್ವರು ಸಂಘದ ಪ್ರಚಾರಕರನ್ನು ಬ್ಯಾಪ್ಟಿಸ್ಟ್ ಚರ್ಚ್ ಮತ್ತು ತ್ರಿಪುರ ನ್ಯಾಷನಲ್ ಫ್ರಂಟ್‌ನವರು ಅಪಹರಿಸಿ ಅವರನ್ನು ಅಮಾನುಷವಾಗಿ ಹತ್ಯೆ ಮಾಡಲಾಯಿತು. ಅಪರಾಧಿಗಳು ಇಲ್ಲಿಯತನಕ ಪತ್ತೆಯೇ ಆಗಲಿಲ್ಲ. ಇಂತಹ ಭಯಾನಕ ಪರಿಸ್ಥಿಯಲ್ಲಿಯೂ ಸಂಘದ ಕೆಲಸಕ್ಕೆ ಹಿನ್ನಡೆಯಾಗಿಲ್ಲ ಎಂಬುದು ಅರಿಯಬೇಕಾದ ಸಂಗತಿ.

೨೦೧೯ ಏಪ್ರಿಲ್‌ನಲ್ಲಿ ಆರೆಸ್ಸೆಸ್ ನಾಯಕ ಚಂದ್ರಕಾಂತ್ ಶರ್ಮಾ ಅವರನ್ನು ಕಾಶ್ಮೀರದ ಮೂಲಭೂತವಾದಿಗಳು ಜಮ್ಮುವಿನಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಮಮತಾ ಬ್ಯಾನರ್ಜಿ ಯವರ ತೃಣಮೂಲ ಕಾಂಗ್ರೆಸ್ ಗೂಂಡಾಗಳನ್ನು ಎದುರಿಸಿ ಪಕ್ಷವನ್ನು ಬೆಳೆಸುತ್ತಿzರೆ. ಇದಕ್ಕಾಗಿ ಹತ್ತಾರು ಬಿಜೆಪಿ ಕಾರ್ಯಕರ್ತರು ಅಮಾನುಷವಾಗಿ ಹತ್ಯೆಯಾಗಿದ್ದಾರೆ. ಮಹಿಳಾ ಕಾರ್ಯಕರ್ತರ ಮೇಲೆ ಅತ್ಯಾಚಾರ ನಡೆದಿದೆ.

ಖರ್ಗೆಯವರೇ, ‘ಬಿಜೆಪಿ ನಾಯಿಗಳು’ ಎಂದು ಕರೆಯುವ ಮುನ್ನ ೧೯೬೮ ನಂತರದ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಯಾರು ಪ್ರಾಣ ತ್ಯಾಗ ಮಾಡಿzರೆ ಎಂಬುದರ ವಿವರ ಹಂಚಿಕೊಳ್ಳಿ. ಆಗ ಕಾಂಗ್ರೆಸಿನ ನಿಜ ಬಣ್ಣ ಅರ್ಥವಾಗುತ್ತದೆ. ಸ್ವಾತಂತ್ರ್ಯ ಬಂದ ತರುವಾಯ ಬೆರಳಣಿಕೆಯಷ್ಟು ಕಾಂಗ್ರೆಸ್ ಮುಖಂಡರು ದೇಶದ ಹಿತಕ್ಕಾಗಿ ಬಲಿಯಾಗಿರು ವುದು. ಅವರು ಬಲಿಯಾಗಬೇಕಿತ್ತು ಎಂಬ ವಾದ ನನ್ನದಲ್ಲ. ತಾವೇ ಸ್ವಾತಂತ್ರ್ಯ ತಂದುಕೊಟ್ಟವರು ಅದರ ಲಾಭ ತಮಗೆ ಮಾತ್ರ ದೊರೆಯಬೇಕು ಎಂಬ ಮನಃ ಸ್ಥಿತಿಯ ಕಾರಣ ಹೋರಾಟ ಮತ್ತು ವಿಚಾರಕ್ಕಾಗಿ ಸಂಘರ್ಷ ನಿಮಗೆ ಅಪಥ್ಯ ವಾಗಿತ್ತು. ಅಧಿಕಾರವನ್ನು ಗರಿಷ್ಠ ಅನುಭವಿಸಿ ಸಾರ್ವಜನಿಕ ಜೀವನದಲ್ಲಿ ಇಸೀ ಮಾಡಿದ ಬಟ್ಟೆ ಸುಕ್ಕಾಗದಂತೆ ಇದ್ದವರು ಕಾಂಗ್ರೆಸಿಗರು ಎಂಬುದನ್ನು ನೆನಪಿಸಲು ಮಾತ್ರ ಹೇಳಿರುವುದು.

ದೇಶಕ್ಕೆ ಸ್ವಾತಂತ್ರ್ಯ ಬಂದ ಕೀರ್ತಿಯು ಕೇವಲ ನಿಮ್ಮೊಬ್ಬರ ಸೊತ್ತಲ್ಲ. ಸಾವಿರಾರು ಜನರು ಮಾಡಿದ ನಿಃಸ್ವಾರ್ಥ ಹೋರಾ ಟದ ಫಲ ದೇಶ ಇಂದು ಸ್ವತಂತ್ರವಾಗಿದೆ. ಅದರ ಶ್ರೇಯಸ್ಸು ಪಡೆಯು ವುದು ಕಾಂಗ್ರೆಸ್ ಪಾರ್ಟಿಯ ಏಕ ಸ್ವಾಮ್ಯವಲ್ಲ ಎಂದು
ನಿಮ್ಮಂತಹ ಅನುಭವಿ ಹಿರಿಯ ರಾಜ ಕಾರಣಿಗೆ ಅರ್ಥವಾಗದ ಸಂಗತಿಯೇ? ನಿಮ್ಮ ಹೆಚ್ಚುಗಾರಿಕೆ ಯನ್ನು ವೈಭವೀಕರಿಸಲು
ಇತರರ ತ್ಯಾಗ ಬಲಿದಾನವನ್ನು ಕೇವಲ ವಾಗಿ ಕಂಡು ಅವರನ್ನು ನಾಯಿಗೆ ಹೋಲಿಸುವ ಕೊಳಕು ಮನಸ್ಥಿತಿಯು ಹಿರಿಯ ರಾಜಕಾರಣಿಯಾದ ತಮಗೆ ಶೋಭೆ ತರುವುದಿಲ್ಲ.

Read E-Paper click here