Wednesday, 9th October 2024

ಅವರಿವರಿದ್ದರೂ ಅವರದ್ದೇ ಹೆಸರು !

ವಿಶ್ಲೇಷಣೆ

ಚಂದ್ರಶೇಖರ ಬೇರಿಕೆ

I have been getting many requests from citizens across India to name the Khel Ratna Award after Major Dhyan Chand. I thank them for their views. Respecting their sentiment, the Khel Ratna Award will hereby be called the Major Dhyan Chand Khel Ratna Award! Jai Hind! Major Dhyan Chand was among India’s foremost sportspersons who brought honour and pride for India. It is fitting that our nation’s highest sporting honour will be named after him.

ಕ್ರೀಡಾ ಸಾಧಕರಿಗೆ ಕೇಂದ್ರ ಸರಕಾರದಿಂದ ಕೊಡುವ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಿಸಿ ಮರುನಾಮಕರಣ ಮಾಡಿ ದೇಶದ ಜನತೆಗೆ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಕಟಿಸಿದ ಸಂದರ್ಭ.

ಟೊಕಿಯೋ ಒಲಿಂಪಿಕ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಆಗ 5, 2021ರಂದು ಜರ್ಮನಿಯನ್ನು 5-4 ಗೋಲುಗಳಿಂದ ಮಣಿಸಿ 41 ವರ್ಷದ ಬಳಿಕ ಪದಕ ಜಯಿಸಿದ ಸಂಭ್ರಮ. ಕಂಚಿನ ಪದಕ ಗೆದ್ದು ಈ ಐತಿಹಾಸಿಕ ಸಾಧನೆ ಮೆರೆದ ಮರುದಿನ ಅಂದರೆ ಆಗ 6, 2021ರಂದು ‘ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ’ ಹೆಸರನ್ನು ಹಾಕಿ ದಿಗ್ಗಜ ಧ್ಯಾನ್ ಚಂದ್ ಗೌರವಾರ್ಥ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಬದಲಿಸಿ ರುವುದಾಗಿ ಭಾರತದ ಪ್ರಧಾನ ಮಂತ್ರಿಗಳು ಟ್ವೀಟಿಸಿದ ಈ ಎರಡು ಟ್ವೀಟ್ ಗಳು ದೇಶದಲ್ಲಿ ಬಹಳಷ್ಟು ಸದ್ದು ಮಾಡಿದ ಮತ್ತು ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗೆ ವೇದಿಕೆ ಕಲ್ಪಸಿದ ಪ್ರಸಂಗ.

ಸಾರ್ವಜನಿಕ ಯೋಜನೆಗಳು, ಕಾರ್ಯಕ್ರಮಗಳು, ಪ್ರಶಸ್ತಿಗಳು ಇತ್ಯಾದಿಗಳಿಗೆ ರಾಜಕಾರಣಿಗಳ ಹೆಸರನ್ನು ನಾಮಕರಣ ಮಾಡುವ ಸಂದರ್ಭದಲ್ಲಿ ಯಾವ ಮಾರ್ಗಸೂಚಿ, ಮಾನದಂಡಗಳನ್ನು ಅನುಸರಿಸುತ್ತಾರೆ ಎಂಬುದೇ ಅರ್ಥವಾಗದ ವಿಷಯ. ಇವೆಲ್ಲವುಗಳಿಗೆ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಿದರೆ ಅವುಗಳಿಗೆ ಅರ್ಥವೂ ಇರುತ್ತದೆ, ಮೌಲ್ಯವೂ ಇರುತ್ತದೆ. ಪ್ರಶಸ್ತಿ ವಿಚಾರಗಳಲ್ಲಿ ಆ ಪ್ರಶಸ್ತಿಗಳನ್ನು ಪಡೆಯುವ ಸಾಧಕರಿಗೆ ತೃಪ್ತಿಯೂ ಇರುತ್ತದೆ, ಹೆಮ್ಮೆಯೂ ಇರುತ್ತದೆ. ಈ ದಿಕ್ಕಿನಲ್ಲಿ ಯೋಚಿಸಿದರೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರು ನಾಮಕರಣ ಮಾಡಿದ್ದ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹವೇ.

ಅಂತೆಯೇ 1928, 1932 ಮತ್ತು 1936ರ ಒಲಿಂಪಿಕ್ ಹಾಕಿ ಪಂದ್ಯಾಟದಲ್ಲಿ ಭಾರತ ಚಿನ್ನದ ಪದಕಗಳನ್ನು ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಗೆ ಸೂಕ್ತ ಗೌರವ ಸಂದಾಯ ಮಾಡಿದಂತೆಯೂ ಆಯಿತು. ಈ ಪ್ರಶಸ್ತಿಗೆ ಮರುನಾಮಕರಣ ಮಾಡುತ್ತಲೇ ಸಹಜವಾಗಿಯೇ ಈ ನಿರ್ಧಾರ ಕಾಂಗ್ರೆಸ್ ಪಕ್ಷವನ್ನು ಕೆರಳಿಸಿತ್ತು. ಆ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರಾದಿಯಾಗಿ ಬಹುತೇಕ ನಾಯಕರು ಈ ಪ್ರಶಸ್ತಿಯ ಮರುನಾಮಕರಣ ನಿರ್ಧಾರವನ್ನು ಟೀಕಿಸಿ ಗಾಂಧಿ ಪರಿವಾರಕ್ಕೆ ತಮ್ಮ ನಿಷ್ಠೆಯನ್ನು ಸಾಬೀತು ಪಡಿಸುವ ಒಂದು ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.

ಮುಂದುವರೆದು ಪ್ರತಿಭಟನೆಗಳೂ ಕಾಣಿಸಿಕೊಂಡವು. ಮರುನಾಮಕರಣಕ್ಕೆ ಒಳಗಾದ ಹೆಸರು ಗಾಂಧಿ ಪರಿವಾರದ ಹೊರಗಿನ ವ್ಯಕ್ತಿಯದ್ದಾಗಿದ್ದರೆ ಬಹುಶಃ ಆ ಪಕ್ಷದ ನಾಯಕರು ಇಷ್ಟೊಂದು ರಂಪ ಮಾಡುತ್ತಿರಲಿಲ್ಲವೇನೋ? ಈ ಪ್ರಶಸ್ತಿಯ ಮರುನಾಮಕರಣದ ಪರ- ವಿರೋಧ ಚರ್ಚೆಯ ಸಂದರ್ಭದಲ್ಲಿ ಬೆಳಕಿಗೆ ಬಂದ
ನೆಹರು-ಗಾಂಧಿ ಪರಿವಾರದ ನಾಮ ಜಪದ ಪಟ್ಟಿಯನ್ನು ನೋಡಿದಾಗ ಬೆರಗಾಗುತ್ತದೆ. 100ಕ್ಕೂ ಹೆಚ್ಚು ವಿಶ್ವವಿದ್ಯಾಲಯ ಮತ್ತು ವಿದ್ಯಾಸಂಸ್ಥೆಗಳು, 20ಕ್ಕೂ ಹೆಚ್ಚು ಕೇಂದ್ರ ಸರಕಾರದ ಯೋಜನೆಗಳು, 100ಕ್ಕೂ ಹೆಚ್ಚು ರಾಜ್ಯ ಸರಕಾರ ಪ್ರಾಯೋಜಿತ ಯೋಜನೆಗಳಿಗೆ ನೆಹರು-ಗಾಂಧಿ ಪರಿವಾರದ ಹೆಸರನ್ನಿಡಲಾಗಿದೆ.

30ಕ್ಕೂ ಹೆಚ್ಚು ಕ್ರೀಡಾ ಪಂದ್ಯಾವಳಿಗಳು ಮತ್ತು 20 ಪ್ರಸಿದ್ಧ ಕ್ರೀಡಾಂಗಣಗಳು, 15ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು, 40ಕ್ಕೂ ಹೆಚ್ಚು ಆಸ್ಪತ್ರೆ
ಮತ್ತು ವೈದ್ಯಕೀಯ ಸಂಸ್ಥೆಗಳು, ವಿದ್ಯುತ್ ಸ್ಥಾವರಗಳು, ಹತ್ತಾರು ವಿಮಾನ ನಿಲ್ದಾಣಗಳು, ಬಂದರುಗಳು, ಮೆಟ್ರೋ ಸ್ಟೇಷನ್‌ಗಳು, 100ಕ್ಕೂ ಹೆಚ್ಚು ರಸ್ತೆಗಳು, ಕಟ್ಟಡಗಳು, ಸ್ಮಾರಕಗಳು, ಟ್ರಸ್ಟ್ ಗಳು, ಸ್ಥಳಗಳು ಮತ್ತು ಅಧ್ಯಯನ ಪೀಠಗಳಿಗೆ ನೆಹರು- ಗಾಂಧಿ ಕುಟುಂಬದ ಹೆಸರನ್ನಿಡಲಾಗಿದೆ. ಅಲ್ಲದೇ 50ಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳು, 25ಕ್ಕೂ ಹೆಚ್ಚು ವಿದ್ಯಾರ್ಥಿ ವೇತನಗಳು ಈ ಪರಿವಾರದ ವ್ಯಕ್ತಿಗಳ ಹೆಸರಿನಲ್ಲಿ ಕೊಡಲಾಗುತ್ತದೆ.

ವಿಶೇಷವೆಂದರೆ ಹಬ್ಬಗಳಿಗೂ ಇವರ ಹೆಸರನ್ನಿಡಲಾಗಿದೆ. ಇದರ ಹೊರತಾಗಿ ದೇಶಾದ್ಯಂತ ಅದೆಷ್ಟೋ ಸಣ್ಣಪುಟ್ಟ ನಗರಗಳು, ಮೈದಾನಗಳು ಇವರ ಹೆಸರು ಗಳಿಂದಲೇ ಗುರುತಿಸಿಕೊಂಡಿವೆ. ಇವೆಲ್ಲದಕ್ಕೂ ನೆಹರು-ಗಾಂಧಿ ಪರಿವಾರದ ನಾಯಕರು ಅಂದರೆ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹೆಸರಿಡಲಾಗಿದೆ ಎಂಬುದು ಅವಶ್ಯವಾಗಿ ತಿಳಿದಿರಲಿ. ಆಶ್ಚರ್ಯ ಎಂದರೆ ಕಾಂಗ್ರೆಸ್ ಪಕ್ಷದಲ್ಲಿದ್ದ ನೆಹರು-ಗಾಂಧಿ ಪರಿವಾರದ ಹೊರತಾದ ನಾಯಕರ ಹೆಸರುಗಳಿಗೆ ಇಲ್ಲಿ ಅರ್ಹತೆ, ಯೋಗ್ಯತೆ ಮತ್ತು ಮನ್ನಣೆಯಿರಲಿಲ್ಲ ಎಂಬುದು ಗಮನಾರ್ಹ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿನ ಬಹುತೇಕ ಯೋಜನೆಗಳಿಗೆ ನೆಹರು-ಗಾಂಧಿ ಕುಟುಂಬದ ಹೆಸರನ್ನೇ ನಾಮಕರಣ ಮಾಡುವಲ್ಲಿ ಹೆಚ್ಚಿನ ಆದ್ಯತೆ ನೀಡ ಲಾಗಿತ್ತು. ಅಂದರೆ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇಲ್ಲದಿದ್ದರೂ ನೆಹರು-ಗಾಂಧಿ ಪರಂಪರೆಯ ಮುದ್ರೆಗಳು ಪ್ರತಿ ಸರಕಾರದಲ್ಲೂ ಸದಾಕಾಲ ಉಳಿಯುವಂತೆ ಮಾಡಲು ಏನು ಮಾಡಬಹುದೋ ಅದೆಲ್ಲವನ್ನೂ ಆ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿತ್ತು. ಕೇಂದ್ರ ಸಚಿವಾಲಯಗಳ ಎಲ್ಲಾ ಪ್ರಮುಖ ಕಾರ್ಯಕ್ರಮಗಳಿಗೆ ನೆಹರು-ಗಾಂಧಿ ಕುಟುಂಬದ ಹೆಸರನ್ನು ಇಡಲಾಗಿದೆ.

ಅವುಗಳ ಪೈಕಿ ರಾಜೀವ್ ಗಾಂಧಿಯವರ ಹೆಸರೇ ಸಿಂಹ ಪಾಲು ಪಡೆದುಕೊಂಡಿದೆ. 2004 ರಿಂದ 2014 ರವರೆಗಿನ ಯುಪಿಎ ಅವಧಿಯ ಬಹುತೇಕ ಯೋಜನೆ ಗಳಿಗೆ ರಾಜೀವ್ ಗಾಂಧಿ ಹೆಸರಿಡಲಾಗಿದೆ. ಒಂದು ಅಂದಾಜಿನ ಪ್ರಕಾರ ಸರಿ ಸುಮಾರು 500ಕ್ಕೂ ಹೆಚ್ಚು ಯೋಜನೆಗಳು, ಕಾರ್ಯಕ್ರಮಗಳು, ಸ್ಥಳ ನಾಮಗಳು, ಪ್ರಶಸ್ತಿಗಳು, ಇತ್ಯಾದಿಗಳು ನೆಹರು-ಗಾಂಧಿ ಹೆಸರಿನಲ್ಲಿ ಊರ್ಜಿತದಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಗುರಿಯನ್ನು ಸಾಧಿಸುವುದಕ್ಕಿಂತಲೂ ಸಾರ್ವಜನಿಕ ಯೋಜನೆಗಳು, ಕಾರ್ಯಕ್ರಮಗಳು, ಪ್ರಶಸ್ತಿಗಳು ಇತ್ಯಾದಿಗಳಿಗೆ ಜನಹಿತಕ್ಕೆ ಪೂರಕವಾದ ಹೆಸರನ್ನಿಟ್ಟು ಈ ಕುಟುಂಬದ ಹೆಸರಿಗೆ ಮುಕ್ತಿ ಹಾಡಲು ಬಹಳ ಪರಿಶ್ರಮಪಡಬೇಕಾದೀತು!.

ಈ ನೆಹರು-ಗಾಂಧಿ ನಾಮಕರಣದ ಪರಿ ಹೇಗಿದೆಯೆಂದರೆ ಹೆಜ್ಜೆಗೊಂದು ಜಾಹೀರಾತಿನ ಫಲಕಗಳನ್ನು ಸ್ಥಾಪಿಸಿದಂತಾಗಿದೆ. ಒಂದು ವರದಿಯ ಪ್ರಕಾರ ಕೇಂದ್ರ ಸರಕಾರದ ಒಟ್ಟಾರೆ ಬಜೆಟ್ ಮೊತ್ತದ ಪೈಕಿ ಹತ್ತಾರು ಸಾವಿರ ಕೋಟಿ ಮೊತ್ತದ ಹಣ ನೆಹರು-ಗಾಂಧಿ ಕುಟುಂಬದ ಹೆಸರಿನ ಯೋಜನೆಗಳಿಗೆ ಹಂಚಿಕೆಯಾಗು ತ್ತದೆ ಎಂಬುದು ಆಶ್ಚರ್ಯ ಎನಿಸಿದರೂ ನಂಬಲೇಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರಿಗಿಂತಲೂ ನೆಹರು-ಗಾಂಧಿ ಹೆಸರಿಗೆ ಪ್ರಾಶಸ್ತ್ಯ ನೀಡಿದ್ದನ್ನು ನಾವು ಗಮನಿಸಬಹುದು.

ತೆರಿಗೆದಾರ ಹಣದಿಂದ ರೂಪಿಸಲಾಗುವ ದೇಶದ ಯೋಜನೆಗಳಲ್ಲಿ ಈ ನೆಹರು-ಗಾಂಧಿ ಹೆಸರೇ ಯಾಕೆ ಮೇಲೈಸಿದೆ ಎಂಬುದನ್ನು ವಿಮರ್ಶೆ ಮಾಡಿದಾಗ
ಪರಿವಾರ ಪೂಜೆ ಎಂಬ ಪುಟ ತೆರೆದುಕೊಳ್ಳುತ್ತದೆ. ಈ ದೇಶದಲ್ಲಿ ನೆಹರು-ಗಾಂಧಿಗಳು ಅಲ್ಲದ ಕಾಂಗ್ರೆಸ್ ವ್ಯಕ್ತಿಗಳು ಆಡಳಿತ ನಡೆಸಿದಾಗಲೇ ದೇಶದ ಅಭಿವೃದ್ಧಿ
ಮತ್ತು ಸಾಮಾಜಿಕ ಕಾರ್ಯಕ್ರಮಗಳು, ಯೋಜನೆ ಗಳು ಇತ್ಯಾದಿಗಳಿಗೆ ಕುಟುಂಬ ನಾಮಕರಣ’ ವಿಸ್ತರಿಸಲ್ಪಟ್ಟಿದ್ದು ಎಂದರೆ ತಪ್ಪಾಗಲಾರದು. ಇದನ್ನು
ಗಾಂಧಿ ಕುಟುಂಬ ‘ರಿಮೋಟ್ ಕಂಟ್ರೋಲ್’ ಮೂಲಕ ಸಾಧಿಸಿಕೊಂಡಿದ್ದು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಗಾಂಧಿ ಪರಿವಾರಕ್ಕೆ ನಿಷ್ಠೆ, ಸ್ವಾಮಿತ್ವ, ಪ್ರೀತಿಯನ್ನು ತೋರ್ಪಡಿಸಿ, ಗುಣಗಾನದ ಮೂಲಕ ಮೆಚ್ಚಿಸಿ ಅವರ ಕೃಪಾ ಕಟಾಕ್ಷ ಪಡೆಯಲು ಕುಟುಂಬದ ಹೊರಗಿನ ನಾಯಕರು ಈ ನಾಮಕರಣ ಧೋರಣೆಯನ್ನು, ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂಬುದು ಬಹಿರಂಗ ರಹಸ್ಯ. ಗಾಂಧಿ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡರೆ ಅವರ ಅವಕೃಪೆಗೆ ಒಳಗಾಗಿ ಮೂಲೆಗುಂಪಾಗುವ ಭಯದಿಂದಲೂ ನಾಯಕರು ಪಕ್ಷದ ನಿರ್ಧಾರಗಳಿಗೆ ಬೇಷರತ್ ಬೆಂಬಲ ವ್ಯಕ್ತಪಡಿಸಬೇಕಾದ ಸನ್ನಿವೇಶ ಗಳೂ ಇತ್ತು. ಇದು ಸ್ಪಷ್ಟವಾಗಿ ಗುಲಾಮಗಿರಿಯ ಲಕ್ಷಣ ಮತ್ತು ಸಂಸ್ಕೃತಿಯನ್ನು ಸಾಂಕೇತಿಸುತ್ತದೆ.

ಯಾವುದೇ ಸಾರ್ವಜನಿಕ ಯೋಜನೆಗಳು, ಕಾರ್ಯಕ್ರಮಗಳು ಹಾಗೆಯೇ ಪ್ರಶಸ್ತಿಗಳಿಗೆ ಆಯಾ ಕ್ಷೇತ್ರದ ಸಾಧಕರ ಹೆಸರುಗಳ ನಾಮಕರಣ ಬಹಳ ಅರ್ಥಪೂರ್ಣ ಎನಿಸುತ್ತದೆ ಮತ್ತು ಸರ್ವ ಸ್ವೀಕೃತಗೊಳ್ಳುತ್ತದೆ. ಈ ಮರುನಾಮ ಕರಣ ವಿಚಾರವು ಕರ್ನಾಟಕದಲ್ಲೂ ಪ್ರತಿಧ್ವನಿಸಿ ಇಂದಿರಾ ಕ್ಯಾಂಟೀನ್ ಮತ್ತು ನಾಗರ ಹೊಳೆಯ ರಾಜೀವ್ ಗಾಂಽ ರಾಷ್ಟ್ರೀಯ ಉದ್ಯಾನವನದ ಹೆಸರಿನ ಕುರಿತಂತೆ ಚರ್ಚೆಗಳು ತೀವ್ರ ಸ್ವರೂಪ ಪಡೆದು ರಾಜಕಾರಣಿಗಳ ಮಧ್ಯೆ ಪರಸ್ಪರ ಕೆಸರೆರೆಚಾಟ ಮತ್ತು ಮಾತಿನ ಎಲ್ಲಾ ಮೀರಿದ ಟೀಕೆ, ಟಿಪ್ಪಣಿಗಳು ಮತ್ತು ನಡವಳಿಕೆಗಳನ್ನು ನಾವು ನೋಡುವಂತಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ದೊಡ್ಡ ಮಟ್ಟದ ಮತ್ತು ಉಗ್ರ ಸ್ವರೂಪದ ವಿರೋಧವನ್ನು ವ್ಯಕ್ತಪಡಿಸಿದೆ. ಈ ಹಿಂದಿನ ಗಾಂಽ ಪರಿವಾರದ ಹೆಸರಿನ ಯೋಜನೆಗಳಿಗೆ ಮುಂಬರುವ ದಿನಗಳಲ್ಲಿ ಮರುನಾಮಕರಣ ಅಭಿಯಾನದ ಪ್ರಕ್ರಿಯೆಯ ವಿಸ್ತರಣೆಯನ್ನು ತಡೆಯುವುದಕ್ಕಾಗಿಯೇ ಕಾಂಗ್ರೆಸ್ ಪಕ್ಷ ತನ್ನ ಆಕ್ರೋಶವನ್ನು ಮುಂದುವರೆಸಿದೆ ಎಂಬುದು ಸತ್ಯ.
ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದ ಹೆಸರನ್ನು ಅರುಣ್ ಜೇಟ್ಲಿ ಕ್ರೀಡಾಂಗಣ ಮತ್ತು ಇತ್ತೀಚೆಗೆ ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದ ಹೆಸರನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂಬುದಾಗಿ ಆಯಾ ರಾಜ್ಯದ ಕ್ರಿಕೆಟ್ ಅಸೋಸಿಯೇಷನ್‌ಗಳು ಮರುನಾಮಕರಣ ಮಾಡಿದ್ದವು.

ಆದರೆ ನಾಮಕರಣದ ಬಗೆಗಿನ ಸಂಪ್ರದಾಯಗಳನ್ನು, ವಿಚಾರಗಳನ್ನು ಅವಲೋಕಿಸಿದಾಗ ಈ ನಿರ್ಧಾರವೂ ಸರಿಯಾದ ನಡೆಯಲ್ಲ. ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ ಮಾಡುವ ಸಂದರ್ಭದಲ್ಲಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಾಯಿಸಬೇಕೆಂದು ದೇಶದ ನಾನಾ ಮೂಲೆ ಗಳಿಂದ ನಾಗರೀಕರು ಮನವಿ ಮಾಡಿದ್ದರು. ಅವರ ಅಭಿಪ್ರಾಯ, ಭಾವನೆಗಳಿಗೆ ಬೆಲೆ ಕೊಟ್ಟು ಮರುನಾಮಕರಣ ಮಾಡಲಾಗಿದೆ’ ಎಂದು ಪ್ರಧಾನಿಯವರು ಸ್ಪಷ್ಟನೆ ನೀಡಿದ್ದರು. ದೆಹಲಿ ಮತ್ತು
ಅಹಮದಾಬಾದ್ ಕ್ರೀಡಾಂಗಣಕ್ಕೆ ಕ್ರಮವಾಗಿ ಅರುಣ್ ಜೇಟ್ಲಿ ಮತ್ತು ಪ್ರಧಾನಿ ಮೋದಿಯವರ ಹೆಸರನ್ನು ನಾಮಕರಣ ಮಾಡಿರುವ ಬಗ್ಗೆಯೂ ಇದೇ ತೆರನಾದ ಅಭಿಪ್ರಾಯ ಮತ್ತು ಒತ್ತಾಯಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಎರಡೂ ಕ್ರೀಡಾಂಗಣಗಳಿಗೆ ಕ್ರೀಡಾ ಸಾಧಕರ ಹೆಸರನ್ನು ಮರುನಾಮಕರಣಕ್ಕೆ ಸೂಚಿಸಿ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಮೋದಿಯವರು ಒಂದು ಮೇಲ್ಪಂಕ್ತಿಯನ್ನು ಹಾಕಿ ಶ್ರೇಷ್ಠ ಪರಂಪರೆಗೆ ಮುನ್ನುಡಿ ಬರೆದು ಮಹೋನ್ನತ
ಆದರ್ಶವನ್ನು ಸಾರಬೇಕಾಗಿದೆ.

ಯಾವುದೇ ಸಾರ್ವಜನಿಕ ಯೋಜನೆಗಳು, ಕಾರ್ಯಕ್ರಮಗಳು ಯಾವುದೇ ವ್ಯಕ್ತಿಯ ಹೆಸರಿನಿಂದಾಗಿ ಯಶಸ್ಸು ಗಳಿಸುವುದಿಲ್ಲ ಎಂಬುದನ್ನು ಪ್ರತಿಯೊಂದು ಸರಕಾರಗಳು ಹಾಗೆಯೇ ಜನರು ಅರ್ಥ ಮಾಡಿಕೊಳ್ಳಬೇಕು. ಅಂತೆಯೇ ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಯೋಜನೆಗಳು, ಕಾರ್ಯಕ್ರಮಗಳು ಇತ್ಯಾದಿಗಳಿಗೆ ರಾಜಕೀಯ ನಾಯಕರ ಹೆಸರನ್ನು ನಾಮಕರಣ ಮಾಡಿಕೊಂಡು ಆ ಮೂಲಕ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವಂತೆ ಮಾಡುವ, ಅಽಕಾರವನ್ನು ದುರುಪಯೋಗಪಡಿಸಿಕೊಳ್ಳುವ ಬದಲಾಗಿ ಜನ ಸೇವೆಯ ಮೂಲಕ ತಮ್ಮ ಹೆಸರು ಈ ದೇಶದ ಮಣ್ಣಿನಲ್ಲಿ, ಜನರ ಹೃದಯದಲ್ಲಿ ಚಿರಕಾಲ
ಉಳಿಯುವ ನಿಟ್ಟಿನಲ್ಲಿ ಜನಹಿತದ ಕೆಲಸ ಕಾರ್ಯಗಳನ್ನು, ಸಾಧನೆಗಳನ್ನು ಮಾಡುವುದೇ ಶ್ರೇಷ್ಠವೆನಿಸಲಿದೆ.