ಶ್ವೇತ ಪತ್ರ
shwethabc@gmail.com
ತೀವ್ರತರವಾಗಿ ಬದುಕುವ ಕ್ರಿಯೆ ಗೊತ್ತಿರುವುದು ಒಂದು ಮಗುವಿಗಷ್ಟೇ. ಯಾವುದೇ ಭಯಗಳ, ಗಂಭೀರತೆಯ ಸಂಕೋಲೆಗಳಿಲ್ಲದೆ ಪೂರ್ಣವಾಗಿ
ಬದುಕುವುದಷ್ಟೇ ಮಗುವಿಗೆ ಗೊತ್ತಿರುವ ಸಿದ್ಧಾಂತ. ತುಂಟತನ, ಹುಡುಗಾಟಿಕೆ ನಮ್ಮ ಬುದ್ಧಿಶಕ್ತಿಗೆ ಸಾಣೆ ಹಿಡಿಯುತ್ತವೆ. ನಮ್ಮನ್ನು ಮತ್ತೆ ಮಗುವಾಗಿಸುತ್ತವೆ.
ಮನುಷ್ಯರಲ್ಲಿ ಹೆಚ್ಚು ತುಳಿತಕ್ಕೊಳಗಾದ ಅಂಶವೆಂದರೆ ತುಂಟತನ, ಹುಡುಗಾಟಿಕೆಯ ಸ್ವಭಾವ. ಎಲ್ಲ ಸಮಾಜಗಳು, ಸಂಸ್ಕೃತಿಗಳು, ನಾಗರಿಕತೆ ಗಳಿಗೂ ತುಂಟತನವೆಂದರೆ ಎಲ್ಲಿಲ್ಲದ ಸಿಟ್ಟು, ಸೆಡವು. ಏಕೆಂದರೆ, ತುಂಟತನ ಇರುವ ಮನುಷ್ಯರು ಗಂಭೀರರಲ್ಲ ಎಂಬ ಭಾವನೆ. ಸಮಾಜದ ಅಳತೆ ಗೋಲಿನ ಪ್ರಕಾರ, ಮನುಷ್ಯನೊಬ್ಬ ಗಂಭೀರನಾಗದ ಹೊರತು ಹಣ, ಅಂತಸ್ತು, ಸ್ಥಾನಮಾನಗಳನ್ನು ಗೆಲ್ಲಲಾರ. ನಮ್ಮೊಳಗಿನ ಮಗು ಎಂದೂ ಬತ್ತದು, ಕ್ಷೀಣಿಸದು, ಸಾಯದು.
ಆದರೆ ಸಮಾಜದ ಕಟ್ಟುಪಾಡುಗಳಿಗೋಸ್ಕರ ಆ ಮಗುವನ್ನು ನಾವೇ ಚಿವುಟಿ ಹಾಕಿಬಿಡುತ್ತೇವೆ. ಗಂಭೀರವಲ್ಲದ ವ್ಯಕ್ತಿಗಳೆಂದರೆ ಸಮಾಜಕ್ಕೆ ಭಯ. ಏಕೆಂದರೆ ಅವರು ದುಡ್ಡು ಅಥವಾ ಅಧಿಕಾರದ ಹಿಂದೆ ಬೀಳುವವರಲ್ಲ, ಬದಲಿಗೆ ಅವರ ಇರುವಿಕೆಯನ್ನಷ್ಟೇ ಸಂಭ್ರಮಿಸುವವರಾಗಿರುತ್ತಾರೆ.
ತುಂಟಾಟದಿಂದ ಬದುಕುವುದೆಂದರೆ ಅಹಂನ ಹೊರತಾಗಿ ಬದುಕುವುದೆಂದರ್ಥ. ಬೇಕಾದರೆ ಇದನ್ನು ನೀವು ಪ್ರಯೋಗಿಸಿ ನೋಡಬಹುದು. ಹಾಗೇ, ಪುಟ್ಟಮಕ್ಕಳ ಜತೆ ಆಡಿ ನಲಿಯಿರಿ, ಅಲ್ಲಿ ನಿಮ್ಮ ಇಗೋ, ಅಹಂಗಳಿಗೆ ಜಾಗವಿರುವುದಿಲ್ಲ. ನೀವು ಮತ್ತೆ ಮಗುವಾದ ಅನುಭಾವವಷ್ಟೇ ಇರುತ್ತದೆ.
ನಮ್ಮೊಳಗಿನ ಮಗುವನ್ನು ನಾವು ತುಳಿತಕ್ಕೊಡ್ಡಿದ್ದರಿಂದ, ನಮ್ಮ ಮಕ್ಕಳನ್ನೂ ತುಳಿತಕ್ಕೊಳ ಗಾಗಿಸಲು ಯತ್ನಿಸುತ್ತೇವೆ, ಹೌದಲ್ಲವೇ?! ನಮ್ಮ ಮಕ್ಕಳು ಕುಣಿಯುವುದನ್ನು, ಹಾಡುವುದನ್ನು, ಕೂಗುವುದನ್ನು, ಕಿರಿಚುವುದನ್ನು ಮಾಡಲು ನಾವು ಬಿಡುವುದಿಲ್ಲ. ಮಳೆಯಲ್ಲಿ ಜೀಕುತ್ತ ನೆನೆಯಲು ನಾವು ಒಪ್ಪುವುದಿಲ್ಲ. ಇಂಥ ಪುಟ್ಟ ಸಂಗತಿಗಳಲ್ಲಿ ದೊಡ್ಡ ಅಧ್ಯಾತ್ಮವೇ ಅಡಗಿದೆ. ಯಾವಾಗ ನಾವು ಇಂಥ ಪುಟ್ಟ ಸಂಗತಿಗಳನ್ನು ಕಮರಿ ಬಿಡುತ್ತೇವೋ ತುಂಟತನವು ಅಲ್ಲಿ ಮರುಗಿಬಿಡುತ್ತದೆ.
ವಿಧೇಯ ಮಗುವನ್ನು ತಂದೆ-ತಾಯಿ-ಗುರುಗಳಿಂದ ಹಿಡಿದು ಎಲ್ಲರೂ ಹೊಗಳುತ್ತಾರೆ; ಅದೇ ತುಂಟಮಗುವನ್ನು ಖಂಡಿಸುತ್ತಾರೆ. ಹುಡುಗಾಟಿಕೆಯ ಸ್ವಭಾವ ಅಕ್ಷರಶಃ ಯಾರಿಗೂ ತೊಂದರೆ ಕೊಡದಿದ್ದರೂ, ಮುಂದೆ ಅದು ಬಂಡಾಯವಾಗುವ ಸಾಧ್ಯತೆಯ ಬಗೆಗೆ ಸಮಾಜಕ್ಕೆ ಭಯವಿರುತ್ತದೆ. ಯಾವುದೇ ಮಗು ಸಂಪೂರ್ಣ ಸ್ವಾತಂತ್ರ್ಯದಿಂದ, ಹುಡುಗಾಟಿಕೆಯ ಸ್ವಭಾವದಿಂದ ಬೆಳೆದಾಗ, ಮುಂದೆ ಆ ಮಗು ಸುಲಭವಾಗಿ ಗುಲಾಮನಾಗದು. ಬೇರೆಯವರನ್ನು ಅಥವಾ ತನ್ನನ್ನು ತಾನು ಹಾಳುಗೆಡವಲು ಬಿಡುವುದಿಲ್ಲ. ಅದೇ ಬಂಡಾಯದ ಮಗು ಮುಂದೆ ಪ್ರತಿಭಟಿಸುವ ಯುವಕನಾಗುತ್ತಾನೆ. ಆಗ ಆತನ ಮೇಲೆ ನಾವೆಲ್ಲ ಮದುವೆಯನ್ನು ಹೇರಲಾಗುವುದಿಲ್ಲ, ಇಂಥದೇ ಕೆಲಸ ಆಯ್ಕೆಮಾಡಿಕೋ ಎನ್ನಲಾಗುವು ದಿಲ್ಲ, ತಂದೆ-ತಾಯಿಯರ ಆಸೆ-ಆಕಾಂಕ್ಷೆಗಳ ಒತ್ತಡವನ್ನು ಅವನ ಮೇಲೆ ಹಾಕಲಾಗುವುದಿಲ್ಲ.
ಆತ ತನ್ನ ಒಳಮನಸ್ಸಿನ ಆಣತಿಯಂತೆ ಬದುಕನ್ನು ಕಟ್ಟಿಕೊಳ್ಳಲು ಇಚ್ಛಿಸುತ್ತಾನೆ. ಹೀಗೆ ಪ್ರತಿಭಟಿಸುವ ಸ್ವಭಾವ ಸಹಜವಾದದ್ದು, ವಿಧೇಯತೆ
ನಿರ್ಜೀವವಾದದ್ದು. ವಿಧೇಯ ಮಗುವು ಅಪ್ಪ-ಅಮ್ಮನ ಮನಸ್ಸಿಗೆ ಹತ್ತಿರವಾಗಿರುತ್ತದೆ, ಏಕೆಂದರೆ ಅಂಥ ಮಕ್ಕಳನ್ನು ನಿಯಂತ್ರಿಸುವುದು ಸುಲಭ. ಮನುಷ್ಯನ ಮನಸ್ಸು ವಿಚಿತ್ರವೂ, ಕೆಲವೊಮ್ಮೆ ರೋಗಗ್ರಸ್ತವೂ ಹೌದು. ಹೀಗಾಗಿ ಆತ ಜನರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುತ್ತಾನೆ. ಈ
ನಿಯಂತ್ರಿಸುವಿಕೆ ಆತನ ಅಹಂ ಅನ್ನು ಸಂತೃಪ್ತಗೊಳಿಸುತ್ತಿರುತ್ತದೆ. ಇದೇ ಕಾರಣಗಳಿಗೆ ಚಿಕ್ಕಂದಿನಿಂದಲೇ ಹುಡುಗಾಟಿಕೆ, ತುಂಟಾಟವನ್ನು ಉಸಿರುಗಟ್ಟಿಸಲಾಗುತ್ತಿರುತ್ತದೆ.
ಹಾಗಿದ್ದರೆ ನಮ್ಮೆಲ್ಲರಿಗೂ ಈ ಹುಡುಗಾಟಿಕೆಯ, ತುಂಟಾಟದ ಸ್ವಭಾವವನ್ನು ಹತ್ತಿಕ್ಕುವ ಭಯವಾದರೂ ಏಕೆ? ಏಕೆಂದರೆ, ಈ ಭಯವೆಂಬ ಬೀಜ ಬೇರೆಯವರಿಂದ ಹುಟ್ಟಿಕೊಂಡ ಒಂದು ಕ್ರಿಯೆ. ಸದಾ ನಿಯಂತ್ರಣದಲ್ಲಿರಬೇಕು, ಶಿಸ್ತಿನಿಂದಿರಬೇಕು, ದೊಡ್ಡವರಿಗೆ ಗೌರವ ತೋರಿಬೇಕು, ಯಾವಾಗಲೂ ಗುರು-ಹಿರಿಯರು ಹೇಳಿದಂತೆ ನಡೆಯಬೇಕು- ಹೀಗೆ ಹೇರಿಕೆಗಳು ಮನಸ್ಸಿಗೆ ಭಾರವಾದಂತೆ ಸತ್ತ ಮಗುವೊಂದನ್ನು ಮನಸ್ಸು ಹೊತ್ತು ತಿರುಗುತ್ತಿರುತ್ತದೆ. ಈ ಸತ್ತ ಮಗುವು ನಮ್ಮೊಳಗಿನ ಹಾಸ್ಯವನ್ನು ಕೊಲ್ಲುತ್ತದೆ. ಹೃದಯ ತುಂಬಿ ನಗಲು ನಾವು ಸೋಲುತ್ತೇವೆ. ಬದುಕಿನಲ್ಲಿ ಪುಟ್ಟಪುಟ್ಟ ಸಂಗತಿಗಳನ್ನು ಸಂಭ್ರಮಿಸಲು ನಮಗೆ ಸಾಧ್ಯವಾಗುವುದಿಲ್ಲ. ಬದುಕಲ್ಲಿ ನಾವು ಎಷ್ಟೊಂದು ಸೀರಿಯಸ್ ಆಗಿಬಿಡುತ್ತೇವೆಂದರೆ, ಹಿಗ್ಗುವಿಕೆಗಿಂತ ಕುಗ್ಗುವುದಕ್ಕೆ ಶುರುವಿಟ್ಟುಕೊಂಡುಬಿಡುತ್ತೇವೆ.
ಬದುಕು ಪ್ರತಿಕ್ಷಣದ ಅತ್ಯಮೂಲ್ಯ ಸೃಜನಶೀಲತೆಯಾಗಬೇಕು. ನಾವೇನು ಸೃಷ್ಟಿಸುತ್ತೇವೆ ಎಂಬುದು ಮುಖ್ಯವಲ್ಲ. ಸಮುದ್ರದಡದ ಮರಳಿನ ಸಣ್ಣಕಣವೇ ಆಗಿರಬಹುದು, ಅದು ನಮ್ಮ ತುಂಟತನ ಹಾಗೂ ಖುಷಿಯ ಕನಸಿನಲ್ಲಿ ಹುಟ್ಟಿದ್ದಾಗಿರಬೇಕು. “ನನಗೆ ಸದಾ ತುಂಟಾಟ ಮಾಡುತ್ತ,
ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಆರಾಮಾಗಿ ಇರುವುದೆಂದರೆ ಇಷ್ಟ. ಹೀಗೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತ ಇರಲು ಬಯಸುವ ನನಗೆ ‘ಗಂಭೀರವಾಗಿರು’ ಎಂಬ ನನ್ನ ಅಪ್ಪನ ಹೇಳಿಕೆ ಸಿಟ್ಟು ತರಿಸುತ್ತದೆ”- ಹೀಗೆ ಒಂದು ಹುಡುಗಿ ಆಪ್ತಸಲಹೆಗೆ ಬಂದಾಗ ಹೇಳಿಕೊಂಡು ಕಣ್ಣೀರಿಟ್ಟಿದ್ದಳು.
ಬದುಕೊಂದು ಸುಂದರವಾದ ಅವಕಾಶ, ಅದನ್ನು ಗಂಭೀರತೆಯೊಳಗೆ ಕಳೆದುಕೊಳ್ಳಲು ಬಿಡಬಾರದೆಂಬುದು ನನ್ನ ವಾದ. ಓಶೋ ಹೇಳಿದ ಕನ್ ಫ್ಯೂಷಿಯಸ್ ಕಥೆಯಿಲ್ಲಿ ನೆನಪಾಗುತ್ತಿದೆ. ಒಮ್ಮೆ ಕನ್ ಫ್ಯೂಷಿಯಸ್ ನನ್ನು ಅನುಯಾಯಿಯೊಬ್ಬ ‘ಸಾವಿನ ನಂತರ ಏನಾಗುತ್ತದೆ?’ ಎಂದು
ಪ್ರಶ್ನಿಸಿದ. ಅದಕ್ಕೆ ಕನ್ ಫ್ಯೂಷಿಯಸ್ ನಗುತ್ತಾ ಹೇಳಿದ- ‘ಈ ಪ್ರಶ್ನೆಯನ್ನು ಹಾಗೂ ಯೋಚನೆಯನ್ನು ನೀನು ಸಮಾಧಿಯೊಳಗೆ ಮಲಗಿದಾಗ ವಿಚಾರಮಾಡು; ಈಗ ಸದ್ಯಕ್ಕೆ ಬದುಕು’!
ಬದುಕುವುದಕ್ಕೂ ಸಮಯವಿದೆ, ಸಾಯುವುದಕ್ಕೂ ಸಮಯವಿದೆ. ಇವೆರಡನ್ನೂ ಬೆರೆಸುವ ಪ್ರಯತ್ನ ಮಾಡಬಾರದು. ಹಾಗೆ ಮಾಡಿದಾಗ ಎರಡನ್ನೂ ಕಳೆದುಕೊಂಡು ಬಿಡುತ್ತೇವೆ. ನಾವೆಲ್ಲ ಈ ಕ್ಷಣದಲ್ಲಿ ಬದುಕಬೇಕು ತೀವ್ರತರವಾಗಿ. ಹೀಗೆ ತೀವ್ರತರವಾಗಿ ಬದುಕುವ ಕ್ರಿಯೆ ಗೊತ್ತಿರುವುದು ಒಂದು ಮಗುವಿಗಷ್ಟೇ. ಯಾವುದೇ ಭಯಗಳ, ಗಂಭೀರತೆಯ ಸಂಕೋಲೆಗಳಿಲ್ಲದೆ ಪೂರ್ಣವಾಗಿ ಬದುಕುವುದಷ್ಟೇ ಮಗುವಿಗೆ ಗೊತ್ತಿರುವ ಸಿದ್ಧಾಂತ.
ತುಂಟತನ, ಹುಡುಗಾಟಿಕೆ ನಮ್ಮ ಬುದ್ಧಿಶಕ್ತಿಗೆ ಸಾಣೆ ಹಿಡಿಯುತ್ತವೆ. ನಮ್ಮನ್ನು ಮತ್ತೆ ಮಗುವಾಗಿಸುತ್ತವೆ.
ನಮ್ಮೊಳಗಿನ ಪ್ರೀತಿಯನ್ನು ಆಳವಾಗಿಸುತ್ತವೆ. ಹಾಗಾಗಿ ನಾವು ಪ್ರಪಂಚಕ್ಕೆ ತೆರೆದುಕೊಂಡಾಗಲೆಲ್ಲ ತುಂಟತನವನ್ನು, ಖುಷಿಯನ್ನು ಬದುಕಿಗೆ ಪಸರಿಸುತ್ತ ಸಾಗಬೇಕು. ಇಡೀ ಪ್ರಪಂಚ ನಗುತ್ತ, ಸಂಭ್ರಮಿಸುತ್ತ, ಆಡುತ್ತ, ಹಾಡುತ್ತ ನಡೆದುಬಿಟ್ಟರೆ ಅಲ್ಲೊಂದು ಕ್ರಾಂತಿಯೇ ನಡೆದುಬಿಡುತ್ತದೆ
ಎನ್ನುತ್ತಾರೆ ಓಶೋ. ಅವರು ಮುಂದುವರಿದು ಹೇಳುವ ಮಾತುಗಳಲ್ಲಿ ಬದುಕಿನ ದುರಂತಮಯ ವಾಸ್ತವವೇ ತೆರೆದುಕೊಳ್ಳುತ್ತದೆ.
ಯುದ್ಧಗಳನ್ನು ಸೃಷ್ಟಿಸಿದ್ದು, ಕೊಲೆಗಳನ್ನು ಮಾಡಿದ್ದು ಗಂಭೀರ ಜನರು. ಆತ್ಮಹತ್ಯೆ ಮಾಡಿಕೊಂಡಿದ್ದೂ ಇದೇ ಗಂಭೀರ ಜನರೇ. ಈ ಗಂಭೀರತೆ ಮಾನವ ಸಂಕುಲಕ್ಕೆ ಮಾಡುತ್ತಿರುವ ಅಪಾಯಗಳನ್ನು ನೋಡಿಯೇ ನಾವು ಗಂಭೀರತೆಯ ಸಂಕೋಲೆಗಳಿಂದ ಜೀಕಬೇಕು, ಜಿಗಿಯ ಬೇಕು. ನಮ್ಮೊಳಗಿನ ಮಗುವಿಗೆ ರೆಕ್ಕೆಕಟ್ಟಿ ಹಾರಲು- ಹಾಡಲು-ಕುಣಿಯಲು ಬಿಡಬೇಕು. ನಮ್ಮ ಮನೆ, ಸುತ್ತಲಿನ ಗಿಡ, ಮರ, ನಕ್ಷತ್ರ, ಜನ, ಸಮುದ್ರ, ನದಿ, ಬೆಟ್ಟ, ಗುಡ್ಡ, ಸ್ನೇಹಿತರು ಹೀಗೆ ಅಪೂರ್ವವಾದ ಜಗತ್ತಿನಲ್ಲಿ ಗಂಭೀರತೆಯ ಕಲ್ಲಿನೊಳಗೆ ಅಡಗಿ ಕುಳಿತುಬಿಡುವುದಲ್ಲ.
ಕುಣಿದು ಕುಪ್ಪಳಿಸಬೇಕು. ಗಂಭೀರತೆ ಒಂದು ಕಾಯಿಲೆ, ಆತ್ಮಕ್ಕೆ ಹರಡಿದ ಕ್ಯಾನ್ಸರ್ನಂತೆ. ಪ್ರೀತಿ, ಖುಷಿ, ತುಂಟತನಗಳಲ್ಲೇ ಬದುಕಿನ ಪ್ರತಿಕ್ಷಣದ ಅರಿವು ನಮಗುಂಟಾಗುವುದು. ಬದುಕು ಬರೀ ಅಷ್ಟರಲ್ಲೇ ಅರ್ಥಪಡೆದುಕೊಳ್ಳುವುದಿಲ್ಲ; ಅದರೊಳಗೆ ನಗು, ಖುಷಿ, ತುಂಟತನದ ಘಮಲುಗಳನ್ನು ಸಿಡಿಸಿದಾಗಲಷ್ಟೇ ಅದಕ್ಕೊಂದು ಪೂರ್ಣತೆ. ನಮ್ಮ ನಗುವು ಕೆಲವು ಜನರನ್ನು ತೊಂದರೆಗೀಡು ಮಾಡುತ್ತದೆ. ಹೀಗೆ ನಮ್ಮ ನಗುವಿನಿಂದ ನೊಂದುಕೊಳ್ಳುವ ಜನ ಸದಾ ನಮಗೆ ‘ಜೀವನ ಒಂದು ಆಟವಲ್ಲ’ ಎಂಬ ಪಾಠವನ್ನು ಹೇಳಿಕೊಡಲು ಬಯಸುತ್ತಿರುತ್ತಾರೆ. ಇಂಥ ಜನರು ಮಾನಸಿಕ ವಾಗಿ ರೋಗಗ್ರಸ್ತರಾಗಿರುತ್ತಾರೆ. ತಾವು ಮಾಡದಿದ್ದುದನ್ನು ಬೇರೆಯವರೂ ಮಾಡಬಾರದೆಂಬ ಮನೋಭಾವ ಅವರದ್ದು.
ಚಿಕ್ಕಂದಿನಿಂದಲೂ ನಮ್ಮ ತುಂಟತನವನ್ನು ಯಾರಾದರೊಬ್ಬರು ಹತ್ತಿಕ್ಕಿದವರೇ. ಇದಕ್ಕೆ ನಮ್ಮೆಲ್ಲರ ಉದಾಹರಣೆಯೊಂದನ್ನು ಇಲ್ಲಿ ಪ್ರಸ್ತಾಪಿಸುವೆ. ಪ್ರತಿಬಾರಿ ನಾವೆಲ್ಲ ರೆಕ್ಕೆಬಿಚ್ಚಿ ಕುಣಿವಾಗಲೂ ನಮ್ಮ ಸಮಾಜ ಹಿಂದೆ ನಿಂತು, ‘ಜೀವನವೆಂದರೆ ಬರೀ ಹುಡುಗಾಟಿಕೆಯಲ್ಲ, ಸ್ವಲ್ಪ
ಗಂಭೀರವಾಗಿ ರುವುದನ್ನು ಕಲಿಯಿರಿ. ನಗೋದಷ್ಟೆ ಅಲ್ಲ, ಸೀರಿಯಸ್ಸಾಗಿರಿ. ನಿಮಗೆಲ್ಲ ಯಾವಾಗ ಬುದ್ಧಿ ಬೆಳೆಯುತ್ತದೋ. ದೇಹ ಬೆಳೆಸಿದರಷ್ಟೇ ಸಾಲದು’- ಹೀಗೆ ಸೀರಿಯಸ್ನೆಸ್ಗಳ ಪಾಠವನ್ನು ಬೋಧಿಸುತ್ತಲೇ ನಮ್ಮ ಸಮಾಜವು ನಮ್ಮನ್ನು ನಾವು ಕಳೆದುಕೊಳ್ಳುವಂತೆ ಮಾಡಿಬಿಟ್ಟಿತು.
ನಮ್ಮದೇ ಬದುಕಿನ ಕಥೆಯನ್ನು ೯ ಚಿತ್ರವುಳ್ಳ ಒಂದು ಕಥೆಗೆ ಹೋಲಿಸಿ ನೋಡಬಹುದು. ಮೊದಲ ಚಿತ್ರದಲ್ಲಿ ವ್ಯಕ್ತಿಯೊಬ್ಬ ತನ್ನ ಹಸುವನ್ನು ಕಳೆದುಕೊಂಡಿರುತ್ತಾನೆ. ಹಸುವಿಗಾಗಿ ಆತ ಕಾಡುಮೇಡು, ಬೆಟ್ಟಗುಡ್ಡ ಎಲ್ಲ ಕಡೆ ಹುಡುಕಾಡಿದರೂ ಹಸುವಿನ ಸುಳಿವಿರುವುದಿಲ್ಲ. ಎರಡನೇ
ಚಿತ್ರದಲ್ಲಿ, ಆತನಿಗೆ ಹಸುವಿನ ಹೆಜ್ಜೆಗುರುತುಗಳು ಕಾಣಿಸುತ್ತವೆ. ಮೂರನೇ ಚಿತ್ರದಲ್ಲಿ, ಮರದ ಹಿಂದೆ ಹಸು ಅಡಗಿರುವುದು ಹಿಂದಿನಿಂದ ಕಾಣಿಸುತ್ತದೆ.