Saturday, 14th December 2024

ಹೆಜ್ಜೆಗಡಿ ಇಡುವ ಮಗು ಬಿದ್ದೀತೆಂದು ಕಟ್ಟಿಹಾಕಿ ಬಿಟ್ಟರೆ !

ಸುಪ್ತ ಸಾಗರ

rkbhadti@gmail.com

ಫಲಿತಾಂಶ ಮೇಲ್ನೋಟಕ್ಕೆ ಹೆಮ್ಮೆ ಎಂದೆನಿಸುತ್ತಿದೆ. ಆದರೆ, ಇದರ ಹಿಂದಿನ ಒತ್ತಡ ಹಾಗೂ ಅದು ಮಕ್ಕಳ ಮನಃಸ್ಥಿತಿಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಒಮ್ಮೆ ಯೋಚಿಸಿ. ಕಂಪ್ಯೂಟರ್ ತಂತ್ರಜ್ಞಾನದ ಗತಿ ವೇಗದಲ್ಲಿ ಸಾಗಿರುವಾಗ ಪ್ರತಿ ಮಕ್ಕಳ ಜ್ಞಾನ ಪರಿಧಿ ವಿಸ್ತಾರವಾಗುತ್ತಿದೆ. ಹೆಚ್ಚೆಚ್ಚು ಪೈಪೋಟಿಗೆ ಮಕ್ಕಳು ಸಹ ಸಜ್ಜಾಗುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳೋಣ.

ಗೆಳೆಯನೊಬ್ಬನ ಪುತ್ರೋತ್ಸವಕ್ಕೆ ಆಹ್ವಾನ ಬಂದಿತ್ತು. ಆಗಿನ್ನೂ ಆ ಶಿಶುವಿಗೆ ಮೂರು ತಿಂಗಳು  ತುಂಬಿದ್ದಿರಬೇಕು. ನಮ್ಮೆಲ್ಲರಿಗೆ ಏರ್ಪಡಿಸಿದ್ದ ಆ ಔತಣಕೂಟದಲ್ಲಿ ಸಹಜವಾಗಿ ಮಗು ಎಲ್ಲರ ಕೇಂದ್ರಬಿಂದು. ಆದರೆ ಆ ಮಗುವಿನ ತಾಯಿಗೆ ಅದೇನೋ ಒಂಥರಾ ಹೆಗ್ಗಳಿಕೆಯೋ, ಹಿಂಜ ರಿಕೆಯೋ ತನ್ನ ಮಗುವನ್ನು ಬೇರಾರೂ ಮುಟ್ಟಬಾರದು ಎಂಬ ಮಡಿವಂತಿಕೆಯೋ… ಅಂತೂ ಯಾರೇ ಮಗುವನ್ನು ಮಾತಾಡಿಸಲು ಬಂದರೂ ‘ನಮ್ಮನೆ ಕಂದೂಗೆ ಬೇರೆ ಯಾರು ಎತ್ತಿಕೊಂಡರೂ ಆಗಲ್ಲ. ಕಿರುಚಾಡ್ತಾನೆ.

ಯಾವಾಗಲೂ ಅಮ್ಮನೇ ಬೇಕು ಅಂತಾನೆ…’ ಎಂದೆಲ್ಲಾ ನೆಪ ಮಾಡಿ ಯಾರೂ ಮುಟ್ಟದಂತೆ ನೋಡಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಹಳ್ಳಿಯಿಂದ ಬಂದಿದ್ದ ಹಿರಿಯ ಸಂಪ್ರದಾಯಸ್ಥ ಜೀವವೊಂದಕ್ಕೆ ಒಂದು ಸಲ ಮಗುವನ್ನು ತಾನೇ ಎತ್ತಿಕೊಂಡು, ಮಗುವಿನ ಕೈಗೆ ಹಣ ಇಟ್ಟು ಆಶೀರ್ವದಿಸುವ ಹಂಬಲ. ಈಕೆಯದ್ದು ಮತ್ತದೇ ವರಾತ. ಆ ಹಿರಿಯ ಜೀವ ಇಂಥ ಅದೆಷ್ಟು ಮಕ್ಕಳನ್ನು ಹೆತ್ತಿಲ್ಲ, ಎತ್ತಿ ಆಡಿಸಿಲ್ಲ. ಪಟ್ಟು ಬಿಡದೇ ಎತ್ತಿಕೊಂಡೇ ಬಿಟ್ಟರೂ, ಮಗು ಕಿಲಕಿಲನೆ ನಗುತ್ತಲೇ ಅಜ್ಜಿ ತೆಕ್ಕೆಗೆ ಹಾರಿತು. ಹೆತ್ತವಳಿಗೆ ಅವಮಾನವಾಗಿರಬೇಕು.

‘ಅಯ್ಯೋ ಪುಟ್ಟಾ ನಮ್ಮನೆ ಅಜ್ಜಿ ಅಂತ ಅಂದ್ಕೋಬಿಟ್ಯಾ?’ ಎನ್ನುತ್ತಾ ಮಗುವಿನ ಕೆನ್ನೆಯನ್ನೊಮ್ಮೆ ತುಸು ಜೋರಾಗಿಯೇ ಚಿವುಟಿಬಿಟ್ಟಳು. ಕ್ಷಣದಲ್ಲಿ ಮಗು ಉಮ್ಮಳಿಸಿ ಅಳಲಾರಂಭಿಸಿತು. ‘ನಾನು ಹೇಳಿರಲಿಲ್ಲವಾ, ನಮ್ಮ ಕಂದೂ ಬೇರೆ ಯಾರ ಹತ್ರಾನೂ ಹೋಗಲ್ಲ’ ಎನ್ನುತ್ತಾ ಮಗುವನ್ನು ಕಸಿದು ಕೊಂಡು ಹೊರಟುಬಿಟ್ಟಳು…ಮಕ್ಕಳು ಮಕ್ಕಳಾಗಿ ಇರುವುದು, ಅವರಿಷ್ಟದಂತೆ ಬೆಳೆಯುವುದು, ಆಡುವುದು, ಆಗುವುದು ಯಾವುದೂ ನಮಗೆ ಬೇಕಾಗಿಯೇ ಇಲ್ಲ. ಹುಟ್ಟಿದ ಮರುಕ್ಷಣದಿಂದಲೇ ಮಗುವಿನ ಬಗ್ಗೆ ನಾವೇ ಏನೋ ಒಂದಷ್ಟು ಭ್ರಮೆಗಳನ್ನು ಕಟ್ಟಿಕೊಂಡುಬಿಡುತ್ತೇವೆ. ಅದರಿಂದ ತುಸುವೂ ಆಚೆ, ಈಚೆ ಆಗುವುದನ್ನು ನಾವು ಸಹಿಸೆವು. ನಮ್ಮ ಮಗುವನ್ನು ಜೀನಿಯಸ್ ಆಗಿಸಿಬಿಡುತ್ತೇವೆ ಎಂಬ ಭರದಲ್ಲಿ ಅದರೊಳಗಣ ಸ್ವಾತಂತ್ರ್ಯವನ್ನು ಚಿವುಟಿ, ಸವಾರಿ ಮಾಡುತ್ತೇವೆ.

ಪ್ರತಿಭೆ ಎನ್ನುವುದು ಹುಟ್ಟಿನಿಂದಲೇ ಬರುತ್ತದೆ, ಆದರೆ ಪರಿಪೂರ್ಣತೆ ತರಬೇತಿ- ಪರಿಶ್ರಮದಿಂದ ಮಾತ್ರ ದಕ್ಕುವಂಥದ್ದು. ಜೀನಿಯಸ್‌ನ ಮೂಲ ಇರುವುದು ಜೀನ್‌ನಲ್ಲಿ. ಒಪ್ಪೋಣ. ಆದರೆ ಅದು ಪ್ರತಿಯೊಂದು ಮಗುವಿನಲ್ಲೂ ಮೊಳೆತಿರುತ್ತದೆ. ಅದನ್ನು ಗುರುತಿಸಿ, ನೀರೆರೆಯಬೇಕಾದ್ದು ಪರಿಸರದ ಹೊಣೆ. ಗುಣಾತ್ಮಕ, ಮೌಲ್ಯಯುತ ಕ್ರಮಗಳಿಂದ ಮಾತ್ರವೇ ಒಬ್ಬ ಜೀನಿಯಸ್‌ನನ್ನು ತಯಾರಿಸುತ್ತದೆಯೇ ಹೊರತೂ ಹಲವು ಮಿಶ್ರಣಗಳನ್ನು ಕಲಕಿ ಎರಕ ಹೊಯ್ಯುವುದರಿಂದಾಗಲಿ, ಹರಕೆ, ಹಾಡ್ಯಗಳನ್ನು ಹೊತ್ತು ಅಂಥ ಮಗುವನ್ನು ಹೆತ್ತು ಬಿಡುತ್ತೇನೆ ಎಂಬ ನಂಬಿಕೆಯಿಂದಾಗಲಿ ಜೀನಿಯಸ್‌ ನನ್ನು ಪಡೆಯಲು ಸಾಧ್ಯವೇ ಇಲ್ಲ.

ನಮ್ಮ ಮೆದುಳಿನ ವಿಶೇಷ ಗುಣ ಮತ್ತು ಅದರ ವೈಫಲ್ಯ ಎರಡೂ ಒಂದೇ. ಏನೆಂದರೆ ಬಳಸದೇ ಇದ್ದ ಭಾಗ ಸಾಯುತ್ತದೆ. ಶೇ.೨೫ರಷ್ಟು ಮೆದುಳನ್ನು ಮಾತ್ರ ಸದಾ ಕ್ರಿಯಾಶೀಲವಾಗಿಟ್ಟು ಉಳಿದದ್ದನ್ನು ಹಾಗೆಯೇ ಬಿಟ್ಟರೆ ಅದು ನಮ್ಮೊಂದಿಗೇ ಸತ್ತು ಹೋಗುತ್ತದೆ. ಹಾಗೆ ಸಾಯದೇ ಮೆದುಳಿನ ಎಲ್ಲ ಭಾಗವನ್ನೂ ಕ್ರಿಯಾಶೀಲವಾಗಿರುವಂತೆ ಮಾಡಲು ಮೂಲಭೂತವಾಗಿ ಬೇಕಾಗಿರುವಂಥದ್ದು ಪ್ರೇರಣೆ. ಅಂಥ ಪ್ರೇರಣೆಯನ್ನು ಮಕ್ಕಳಿಗೆ ಹೆತ್ತವರು, ಶಿಕ್ಷಕರು, ಬಂಧುಗಳು ಅಥವಾ ಸುತ್ತಲಿನ ಪರಿಸರದ ವ್ಯಕ್ತಿಗಳು ನೀಡಬೇಕಾಗುತ್ತದೆ. ಆಗ ತಂತಾನೆ ಅವರೊಳಗಿನ ಆಸಕ್ತಿ, ಕುತೂಹಲ ಗಳು ಹೆಚ್ಚಿ ಮಕ್ಕಳು ಆತ್ಮವಿಶ್ವಾಸದೊಂದಿಗೆ ಮುನ್ನಡಿ ಇಡಲಾರಂಭಿಸುತ್ತವೆ.

ಹೆಜ್ಜೆ ಇಡಲಾರಂಭಿಸುವ ಮಗುವನ್ನು ಬಿದ್ದುಬಿಟ್ಟೀತೆಂದು ಕಟ್ಟಿಹಾಕಿ ಬಿಟ್ಟರೆ ಅದರ ಕಾಲು ಬಲಿತು ನಡೆಯುವುದನ್ನು ಕಲಿಯುವುದಾದರೂ ಹೇಗೆ? ಅಥವಾ ನಾವೇ ಅದನ್ನು ಕೆಳಕ್ಕೆ ಇಳಿಸದೇ ಎತ್ತಿಕೊಂಡೋ, ಕೈಹಿಡಿದುಕೊಂಡೋ ತಿರುಗಾಡಿಸಿದರೂ ಮಗು ಅವಲಂಬನೆಯಿಂದ ಹೊರಬರುವುದೇ ಇಲ್ಲ. ಮಗು ಬೀಳಲೇಬೇಕು. ಅದರಿಂದ ಅದಕ್ಕೆ ತೀವ್ರ ಆಘಾತವಾಗದಂತೆ ಕಣ್ಣೆಚ್ಚರದಲ್ಲಿ ಇಟ್ಟುಕೊಳ್ಳುವುದಷ್ಟೇ ನಮ್ಮ ಕರ್ತವ್ಯ. ಜತೆಗೆ ಹೀಗೆಯೇ ನಡೆ ಎನ್ನುವುದನ್ನು ನಾವದರ ಮುಂದೆ ನಡೆದಾಡಿ ತೋರಿಸಿ ತಿದ್ದಬೇಕು. ಆಗಲೇ ಅದು ದೃಢವಾಗಿ ತನ್ನ ಕಾಲಮೇಲೆ ನಿಂತುಕೊಳ್ಳುತ್ತದೆ. ನಂತರ ದಿನವೂ ಸ್ವಲ್ಪ ಸ್ವಲ್ಪವೇ ನಡೆದಾಡಿಸಿ, ಓಡಿಸಿ, ಕಠಿಣ ವ್ಯಾಯಾಮಗಳನ್ನು ಕಲಿಸಿ, ತಂತ್ರಗಾರಿಕೆಗಳನ್ನು ಕಲಿಸಿ ಆ ಮಗುವನ್ನು ನುರಿತ ಓಟಗಾರ ನನ್ನಾಗಿ ಸಿದ್ಧಪಡಿಸಬಹುದು.

ಆತ್ಮಬಲ, ಸ್ವಯಂಶಿಸ್ತು, ಪರಿಶ್ರಮ, ಕಾರ್ಯತತ್ಪರತೆಗಳನ್ನು ಮಕ್ಕಳಲ್ಲಿ ತುಂಬಿದಾಗ ಬೇರೆ ಬೇರೆ ಅಭಿರುಚಿಯ ಮಕ್ಕಳು ಆಯಾ ಕ್ಷೇತ್ರಗಳ ಸಾಧಕರಾಗಿ ಹೊರಹೊಮ್ಮಲು ಸಾಧ್ಯ. ಇಲ್ಲದಿದ್ದರೆ ಕತ್ತೆಯನ್ನು ಗಾಣಕ್ಕೆ ಕಟ್ಟಿ ಕೋಣವನ್ನು ಮರಳುಗಾಡಿಗೆ ಬಿಟ್ಟಂತಾಗಬಹುದು. ತಮ್ಮ ಮಗು ಎಲ್ಲರಿಗಿಂತ ಬುದ್ಧಿವಂತನಾಗಬೇಕು ಎಂಬುದು ಬಹುಶಃ ಈ ಭೂಮಿಯ ಮೇಲಿನ ಎಲ್ಲರ ಹೆಬ್ಬಯಕೆಯೂ ಆಗಿರುತ್ತದೆ. ಆದರೆ ಅಂಥ ಕನಸಿಗೆ ನೀರೆರೆದು ಪೋಷಿಸಿಕೊಳ್ಳುವಲ್ಲಿ ಸ್ವತಃ ಹೆತ್ತವರೇ ವಿಫಲರಾಗುತ್ತಾರೆ.

ಹೊಸತನ, ಆವಿಷ್ಕಾರಗಳಿಗೆ ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಸೃಜನಶೀಲರನ್ನಾಗಿಸಿದಾಗಲೇ ಅವರೊಳಗಿನ ಪ್ರತಿಭೆ ಪುಟವಿಟ್ಟುಕೊಂಡು ಹೊಳೆಯಲು ಸಾಧ್ಯ. ಮಾತ್ರವಲ್ಲ, ವ್ಯಕ್ತಿ, ವಸ್ತು, ಸ್ಥಳ, ಸನ್ನಿವೇಶ ಮತ್ತು ವಿಷಯಗಳ ಬಗ್ಗೆ ನಾವು ಮೊದಲು ಸಕಾರಾತ್ಮಕವಾಗಿ ಯೋಚಿಸಬೇಕು. ಆಗ ನಮ್ಮ ಮಕ್ಕಳು ಸಹ ವಿಶ್ವಾಸದ ಹೆಜ್ಜೆಗಳನ್ನು ಇಡಲು ಸಾಧ್ಯ. ಸ್ಪರ್ಧೆಗೆ ಹೆದರುವಮನಸ್ಸುಗಳಿಂದ ಯಾವುದೇ ಸಾಧನೆ ಸಾಧ್ಯವೇ ಇಲ್ಲ. ಹೀಗಾಗಿ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮಕ್ಕಳಲ್ಲಿನ ಪುಕ್ಕಲುತನ, ಹಿಂಜರಿಕೆ, ಸಂಕೋಚ, ಅವಿಶ್ವಾಸಗಳನ್ನು ಹೊಡೆದೋಡಿಸಿ.

ಜತೆಗೆ ಎಲ್ಲ ಮಕ್ಕಳೂ ಎಲ್ಲದರಲ್ಲೂ ಪರಿಣತರಾಗಿರಲು ಸಾಧ್ಯವೇ ಇಲ್ಲ. ಅದು ನಮ್ಮ ದೌರ್ಬಲ್ಯ, ನವಿಲನ್ನು ಕಂಡೊಡನೆ ನಮ್ಮ ಮಗುವೂ ನೃತ್ಯ ಮಾಡಬೇಕಿತ್ತು ಎನಿಸುತ್ತದೆ. ಕೋಗಿಲೆಯನ್ನು ನೋಡಿ ಮಗುವನ್ನು ಹಾಡುಗಾರನನ್ನಾಗಿಸಬೇಕಿತ್ತು ಎಂದುಕೊಳ್ಳುತ್ತೇವೆ. ನಿಜವಾಗಿ ಅದು ಓಡುವ ಚಿಗರೆ. ಒಂದೊಂದು ಮಗುವಿನಲ್ಲಿ ಒಂದೊಂದು ವಿಶೇಷತೆ ಇರುತ್ತದೆ. ಅದನ್ನು ಗುರುತಿಸಿ ಆ ದಾರಿಯಲ್ಲೇ ಮುನ್ನಡೆಸಿದರೆ ಯಶಸ್ಸು ಖಂಡಿತಾ ಲಭ್ಯ.

***

ಹಿಂದೆ…

’ಶಾಲೆಯ ಪರೀಕ್ಷೆ ಯಾಕೋ ಆಗಿಬರುತ್ತಿಲ್ಲ, ಮಗಳು ಮನೆಯಲ್ಲಿದ್ದು ಮನೆ ಕೆಲಸ ಕಲಿಯಲಿ. ವಯಸ್ಸಿಗೆ ಬಂದಾ ತಕ್ಷಣ ಮದುವೆ ಮಾಡಿಬಿಟ್ಟ ರಾಯಿತು’ ಮನೆಯಲ್ಲಿ ಅಮ್ಮ ಯಜಮಾನರಿಗೆ ಹೇಳಿಬಿಡುತ್ತಿದ್ದಳು. ’ಮಗನಿಗೇಕೋ ಗವರ‍್ನಮೆಂಟ್ ಪಾಠ ಹತ್ತುತ್ತಿಲ್ಲ, ಶಾಲೆ ಖೈದು ಮಾಡಿ ತೋಟದ ಕಡೆಗೋ, ಅಂಗಡಿ ಕಡೆಗೋ ಹಾಕೋದು ಒಳ್ಳೇದು.’ ಅಪ್ಪ ಮನೆಯಲ್ಲಿ ನಿರ್ಧರಿಸಿಬಿಡುತ್ತಿದ್ದ. ಇದರ ಹೊರತಾಗಿ ಮಗನೋ ಮಗಳೋ ನಪಾಸದ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಅದೊಂದು ಸಂಗತಿಯೇ ಆಗಿರಲಿಲ್ಲ. ಒಂದೇ ಒಂದು ತಲೆಮಾರಿನ ಹಿಂದೆ ತಿರುಗಿ ನೋಡಿ. ಬಹುತೇಕ ಎಲ್ಲ ಮನೆಗಳ ಸನ್ನಿವೇಶವೂ ಹೀಗೆಯೇ ಇರುತ್ತಿತ್ತು. ಮುಗು ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ತೆಗೆದುಕೊಂಡಿದೆ ಎಂದರೆ ಅದೇ ದೊಡ್ಡ ಸಾಧನೆ. ನೂರಕ್ಕೆ ೬೦ಕ್ಕಿಂತ ಹೆಚ್ಚು ತೆಗೆಯುವ ಎಲ್ಲ ಮಕ್ಕಳೂ ಜಾಣರೇ. ಹಾಗೆಂದು ಅವನ ಬುದ್ಧಿವಂತಿಕೆಗೆ ಅದು ಯಾವತ್ತೂ ಮಾನದಂಡವಾಗಿರಲಿಲ್ಲ. ಪಾಸಾದರೂ ಸಾಕು. ’ಕಲಿಕೆಯಲ್ಲಿ ಹುಷಾರಿ ದ್ದಾನೆ. ಮನೆಯಲ್ಲಿ ಇವನು ಓದಲು ಹೋಗಲಿ’ ಎಂಬ ಫರ್ಮಾನು ಮನೆಯ ಹಿರಿಯರಿಂದ ಹೊರಡುತ್ತಿತ್ತೇ ಹೊರತಾಗಲಿ, ಓದಲೇಬೇಕೆಂಬ ಒತ್ತಾಯ ಪೂರ್ವಕ ಹೇರಿಕೆ ಯಾರಿಂದಲೂ ಇರುತ್ತಿರಲಿಲ್ಲ. ಅಷ್ಟೇಕೆ, ಬಹುತೇಕ ಸಂದರ್ಭದಲ್ಲಿ ’ವ್ಯವಹಾರ, ಮನೆ ತೂಗಿಸಿಕೊಂಡು ಹೋಗಲು ಇವನಿಂದಾ ಗದು, ಓದಾದರೂ ಓದಲಿ’ ಎಂಬಂಥ ತೀರ್ಮಾನಗಳೂ ಬರುತ್ತಿದ್ದವು.

ಇಲ್ಲಿ ಗಮನಿಸಬೇಕಾದುದು ಬಹಳಷ್ಟಿದೆ. ಶಾಳಾ ಶಿಕ್ಷಣ ಜೀವನಕ್ಕೆ ಅಗತ್ಯ ಎಂಬುದನ್ನು ಮನಗಂಡಿದ್ದರೂ, ಅದೇ ಅನಿವಾರ್ಯ ಆಗಿರಲಿಲ್ಲ. ಒಂದಷ್ಟಯ ವ್ಯಾವಹಾರಿಕ ಜ್ಞಾನಕ್ಕಾಗಿ ಶಾಲೆಗೆ ಸೇರಿಸಲಾಗುತ್ತಿತ್ತು. ಉಳಿದಂತೆ ಬುದ್ಧಿವಂತಿಕೆಯ ಮಾನದಂಡ ಆತ ಬದುಕನ್ನು ಹೇಗೆ ತೂಗಿಸಿ ಕೊಂಡು ಹೋಗಬಲ್ಲ ಎಂಬುದರ ಮೇಲೆಯೇ ನಿರ್ಧರಿತವಾಗುತ್ತಿತ್ತು. ಶೈಕ್ಷಣಿಕ ಪರೀಕ್ಷೆಯಲ್ಲಿನ ಸೋಲು ಯಾವತ್ತೂ ಸೋಲೆಂದು ಪರಿಗಣಿತವಲ್ಲವೇ ಅಲ್ಲ. ಬದುಕಿನ ಗೆಲವೇ ಪ್ರತಿ ಮಕ್ಕಳ ಹೆತ್ತವರ ಗುರಿಯಾಗಿರುತ್ತಿತ್ತು. ಅದಕ್ಕಾಗಿ ಮಕ್ಕಳನ್ನು ಗುರುತಿಸಿ ಸಜ್ಜುಗೊಳಿಸಿ, ಅವರಲ್ಲಿ ಯಾವ ಶಕ್ತಿ ಸಾಮರ್ಥ್ಯಗಳಿರುತ್ತವೆಯೋ ಅದಕ್ಕೇ ಹಚ್ಚುತ್ತಿದ್ದರು.

***

ಈಗ? ಎಸ್ಸೆಸ್ಸೆಲ್ಸಿಯಲ್ಲೋ, ಪಿಯುಸಿಯಲ್ಲೋ ಶೇ. ೮೫ ಅಂಕ ಗಳಿಸಿದರೂ ಅದು ಏನೇನೂ ಅಲ್ಲ. ನಮ್ಮ ಮನೆಯ ಮಗುವೋ, ಪರಿಚಿತರ ಮಕ್ಕಳೋ ಡಿಸ್ಟಿಂಕ್ಷನ್ ಪಡೆದಿರುವುದೂ ನಮಗೆ ಹೆಗ್ಗಳಿಕೆ, ಹೆಮ್ಮೆಯ ಸಂಗತಿಯಲ್ಲವೇ ಅಲ್ಲ. ಶೇ, ೭೦, ೮೦, ೮೫ ರಷ್ಟು ಅಂಕಗಳೂ ಗಣನೆಗೆ ಬರುತ್ತಿಲ್ಲ. ನೂರಕ್ಕೆ ನೂರು ಗಳಿಕೆಯ ದಾಖಲೆಯ ಮುಂದೆ ಒಂದು ಅಂಕ ಕಡಿಮೆ ಪಡೆದವರನ್ನೂ ನಿರಾಸೆಯ ಕಾರ್ಮೋಡ ಕ್ಕೆ ತಳ್ಳುತ್ತಿದೆ. ಕಾರಣ ನೂರಕ್ಕೆ ನೂರು ಸಾಧನೆ ಸಾಧ್ಯವೆಂದು ಸಾಬೀತಾಗಿದೆ ರಾಗಶ್ರೀ ಮತ್ತು ರಂಜನ್ ರಿಂದ.

ಕೇರಳದ ಹೈಯರ್ ಸೆಕೆಂಡರಿ (ಪಿಯುಸಿ) ಪರೀಕ್ಷೆಯಲ್ಲಿ ಗಡಿ ಭಾಗದ ಕನ್ನಡತಿ ರಾಗಶ್ರೀ ೧೨೦೦ಕ್ಕೆ ೧೨೦೦ ಅಂಕಗಳಿಸಿದ್ದಾಳೆ. ಎಸ್ಸೆಸೆಲ್ಸಿಯಲ್ಲಿ ರಾಜ್ಯದಲ್ಲಿ ಭದ್ರಾವತಿಯ ರಂಜನ್ ೬೨೫ಕ್ಕೆ ೬೨೫ ಅಂಕಗಳನ್ನೂ ಬಾಚಿಕೊಂಡು ಹೊಸ ದಾಖಲೆಯನ್ನು ಬರೆದಿದ್ದಾನೆ. ಮಾತ್ರವಲ್ಲ ಒಂದು ಅಂಕ ಕಡಿಮೆ ಪಡೆದು ಏಳು ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದಿರುವವರ ಸಾಧನೆಯೂ ಕಡಿಮೆ ಏನಲ್ಲ. ೬೨೩ ಅಂಕ ಗಳಿಸಿದ ೧೧ ಅಭ್ಯರ್ಥಿಗಳು ಮೂರನೇ ಸ್ಥಾನದಲ್ಲಿದ್ದಾರೆ. ಟಾಪ್ ನಾಲ್ಕು ಸ್ಥಾನಗಳಿಗೆ ೬೨ ವಿದ್ಯಾರ್ಥಿಗಳು ಪೈಪೋಟಿ ನಡೆಸಿದ್ದಾರೆ.

ಈ ಎಲ್ಲರೂ ಅಭಿನಂದನಾರ್ಹರೇ. ಆದರೆ, ಇಂಥ ದಾಖಲೆಯ ಫಲಿತಾಂಶ ಹೆಮ್ಮೆಯಷ್ಟೇ ಆಗಿ ಉಳಿದಿಲ್ಲ. ಸಹಜ ಅಚ್ಚರಿಗೂ ಕಾರಣವಾಗುತ್ತಿಲ್ಲ. ಬದಲಾಗಿ ಮಕ್ಕಳ ’ಬುದ್ಧಿವಂತಿಕೆ’ಗೆ ಹೊಸ ವ್ಯಾಖ್ಯಾನವನ್ನು ಹೆತ್ತವರ ತಲೆಯಲ್ಲಿ ಸೃಷ್ಟಿಸಿಬಿಟ್ಟಿದೆ. ಶೇ.೯೯.೯೯, .೯೮. ,೯೭ ಹೀಗೆ ದಶಮಾಂಶ ದಲ್ಲಿ ಮಾನದಂಡಗಳು ನಿಗದಿಯಾಗುತ್ತಿವೆ. ಸಹಜವಾಗಿ ನೂರಕ್ಕೆ ೮೦, ೮೫ ಪಡೆದವರ ಸಾಧನೆ ಏನೇನೂ ಅಲ್ಲವೆಂದು ಅನಿಸಲು ಆರಂಭಿಸಿದೆ. ಇದನ್ನು ಹೇಗೆ ವಿಶ್ಲೇಷಿಸೋಣ? ಇದು ನಿಜಕ್ಕೂ ಶೈಕ್ಷಣಿಕ ಸುಧಾರಣೆಯ ದಿಕ್ಸೂಚಿಯೇ, ಮಕ್ಕಳ ಪರಿಶ್ರಮ, ಪ್ರತಿಭೆಯ ಫಲವೇ? ನಾವು ಅವಲೋಕನಕ್ಕಿಳಿಯಲೇಬೇಕಿದೆ.

ಹೌದು, ಫಲಿತಾಂಶ ಮೇಲ್ನೋಟಕ್ಕೆ ಹೆಮ್ಮೆ ಎಂದೆನಿಸುತ್ತಿದೆ. ಆದರೆ, ಇದರ ಹಿಂದಿನ ಒತ್ತಡ ಹಾಗೂ ಅದು ಮಕ್ಕಳ ಮನಃಸ್ಥಿತಿಯ ಮೇಲೆ ಬೀರಬಹು ದಾದ ಪರಿಣಾಮದ ಬಗ್ಗೆ ಒಮ್ಮೆ ಯೋಚಿಸಿ. ಸ್ಫರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಗತಿ ವೇಗದಲ್ಲಿ ಸಾಗಿರುವಾಗ ಪ್ರತಿ ಮಕ್ಕಳ ಜ್ಞಾನ ಪರಿಧಿ ವಿಸ್ತಾರವಾಗುತ್ತಿದೆ. ಹೆಚ್ಚೆಚ್ಚು ಪೈಪೋಟಿಗೆ ಮಕ್ಕಳು ಸಹ ಸಜ್ಜಾಗುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಇಂಥಾ ಪರಿ ಸ್ಪರ್ಧೆಗೆ ಮಕ್ಕಳನ್ನು ಒಡ್ಡುವುದು ಅಗತ್ಯವೇ?

***

ಒಂದು ಸಮೀಕ್ಷೆಯನ್ನು ಗಮನಿಸಿ. ಸಾಮಾನ್ಯವಾಗಿ ಒಂದು ಟನ್ ಕಾಗದದ ತಯಾರಿಕೆಗೆ, ೧೭ ಬೃಹತ್ ಮರಗಳು, ೨೬.೫ ಸಾವಿರ ಲೀಟರ್ ನೀರು ಅಗತ್ಯ. ಒಂದು ಟನ್ ಕಾಗದದಿಂದ ೨೧ ಲಕ್ಷದ ೨೦ ಸಾವಿರ ನೋಟ್ ಪುಸ್ತಕದ ಹಾಳೆ ತಯಾರಿಸಬಹುದಂತೆ. ಬೆಂಗಳೂರಿನಂಥ ನಗರದ ಹೈಟೆಕ್ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಳಸಿ ಉಳಿದ ೧೦೦ ಕೋಟಿಗೂ ಹೆಚ್ಚು ಹಾಳೆಗಳು ಪ್ರತಿ ವರ್ಷ ಪುನರ್ ಬಳಕೆಗೆ ಯೋಗ್ಯವಾಗಿರುತ್ತವೆ.

ಸರಿ ಸುಮಾರು ೬ ಸಾವಿರ ಶಾಲೆಗಳಲ್ಲಿನ ೩೦೦ ವಿದ್ಯಾರ್ಥಿಗಳು ೫೦೦ ಹಾಳೆಗಳನ್ನು ಳಸದೇ ಬಿಟ್ಟರೆ ೯೦ ಕೋಟಿ ಹಾಳೆಗಳು ಉಳಿತಾಯ ವಾಗುತ್ತವೆ. ಹಾಗಾದರೆ ಇವುಗಳೆಲ್ಲ ಏನಾಗುತ್ತಿವೆ. ಎಲ್ಲೂ ಮನೆಯ ಮೂಲೆಯ ಕಬೋರ್ಡ್ ಸೇರಿ ಕುಳಿತುಕೊಳ್ಳುತ್ತವೆ. ಕೊನೆಗೊಂದು ದಿನ ರದ್ದಿಯ

ಜತೆ ಅಂಗಡಿಯ ತೂಕಕ್ಕೆ ಹೋಗುತ್ತವೆ. ಹಿಂದೆಲ್ಲ ಒಂದು ಕ್ರಮವಿತ್ತು. ಪ್ರತಿ ವರ್ಷ ಹೊಸ ಪಠ್ಯ ಪುಸ್ತಕಗಳನ್ನು ಕೊಳ್ಳುತ್ತಿರಲಿಲ್ಲ. ಹಿರಿಯ ವಿದ್ಯಾರ್ಥಿ ಗಳಿಂದ ಅರ್ಧ ಬೆಲೆಗೆ ಪಠ್ಯವನ್ನು ಕೊಂಡುಕೊಳ್ಳಲಾಗುತ್ತಿತ್ತು. ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಬಳಸಿ ಉಳಿದ ಎಕ್ಸರ್‌ಸೈಜ್ ಪುಸ್ತಕದ ಖಾಲಿ ಹಾಳೆಗಳನ್ನು ಸೇರಿಸಿ ಬೈಂಡಿಂಗ್ ಮಾಡಿಸಿ ಮತ್ತೆ ಬಳಸಲಾಗುತ್ತಿತ್ತು. ಆದರಿಂದು ಇಂಥವುಗಳ ಬಳಕೆಗೆ ಶಾಲೆಯ ಆಡಳಿತ ಮಂಡಳಿಗಳೇ ಅನುಮತಿ ನೀಡುತ್ತಿಲ್ಲ. ಎಲ್ಲವೂ ಹೊಸದೇ ಆಗಬೇಕು. ಹಾಗಿದ್ದರೆ ನಾವು ಪ್ರತಿ ವರ್ಷ ಕಡಿದುರುಳಿಸುತ್ತಿರುವ ಮರಗಳ ಸಂಖ್ಯೆ ಎಷ್ಟಿರಬಹುದು? ವ್ಯರ್ಥ ಮಾಡುತ್ತಿರುವ ನೀರಿನ ಪ್ರಮಾಣ ಎಷ್ಟಾಗಬಹುದು? ನಾಗರಿಕ ಸಮಾಜವೊಂದಕ್ಕೆ ಇದು ಶೋಭೆಯೇ? ಭೂಮಿಯ ಮೇಲಿನ ಸಂಪನ್ಮೂಲ ಸಂರಕ್ಷಣೆಯ ಹೊಣೆಗಾರಿಕೆಯನ್ನು ಹೊರಬೇಕಿರುವ ಮುಂದಿನ ಜನಾಂಗಕ್ಕೆ ನಾವು ನೀಡುತ್ತಿರ ವಮಾರ್ಗದರ್ಶನವಾದರೂ ಎಂಥದ್ದು? ಸ್ವಲ್ಪ ಯೋಚಿಸಿ.

ಇನ್ನೊಂದು ಸಂಗತಿಯ ಬಗೆಗೆ ಹೊರಳಿದರೆ, ಪ್ರಯೋಗಾಲಯಗಳ ಪ್ರತಿರೂಪದಂತಿರುವ, ಕ್ರಿಯಾಶೀಲತೆಯ ಕುಡುಬಿಗಳಾಗಿರುವ ನಮ್ಮ ಮಕ್ಕಳ ಮನಸ್ಸನ್ನು ಯಾಂತ್ರಿಕ ಶಿಕ್ಷಣ ಕ್ರಮಗಳ ಬಲೆಯಲ್ಲಿ ಸಿಲುಕಿಸಿ ಕೇವಲ ಮಕ್ಕಿ ಕಾ ಮಕ್ಕಿಯ ಕಾರ್ಖಾನೆಗಳನ್ನಾಗಿ ರೂಪಿಸುತ್ತಿದ್ದೇವೆಯೇ? ಶಾಲೆಗಳು ಆರಂಭವಾದರೆ ಅದೇ ನಿಗದಿತ ಸಿಲಬಸ್, ಹೆಚ್ಚೆಂದರೆ ಪ್ರತಿ ವರ್ಷ ಅದದೇ ಪ್ರಾಜೆಕ್ಟ್ ವರ್ಕ್‌ಗಳು, ಅದರ ಹರಕೆ ಒಪ್ಪಿಸಲು ಹೆಣಗಾಡುವ ಹೆತ್ತವರು, ಅವರ ಸಹಾಯಕ್ಕೆ ಹುಟ್ಟಿಕೊಂಡಿರುವ ಪ್ರಾಜೆಕ್ಟ್ ವರ್ಕ್ ಬ್ಯುಸಿನೆಸ್‌ದಾರರು, ಅಲ್ಲಿಂದ ಹೊರಬಂದರೆ ಹತ್ತಾರು ಕೋರ್ಸ್‌ಗಳು.

ಇವೂ ಹೆತ್ತವರ ಪ್ರತಿಷ್ಠೆಯ ಪ್ರತೀಕವಾಗಿ ಮಕ್ಕಳ ಸಮಯವನ್ನು ತಿಂದು ಹಾಕುತ್ತಿವೆ. ಇದನ್ನು ಬಿಟ್ಟು ಮಗು ತನ್ನ ಪಾಡಿಗೆ ತಾನು ಏನನ್ನೋ ಗೀಚಲಾರಂಭಿಸಿದರೆ, ಕತ್ತರಿ ಕೈಗೆತ್ತಿಕೊಂಡು ಏನನ್ನೋ ಕತ್ತರಿಸತೊಡಗಿದರೆ, ಗೋಂದು ಹಚ್ಚಿ ನೀವುತ್ತಿದ್ದರೆ ನಮಗೆ ಕಿರಿಕಿರಿಯಾಗತೊಡಗುತ್ತದೆ. ಅದು ವೃಥಾ ಸಮಯ ಹಾಳು ಮಾಡುತ್ತಿದೆ ಎನಿಸುತ್ತದೆ. ಮನೆಯೆಲ್ಲಾ ಹರಡುತ್ತಿದೆ ಎಂದೆನಿಸಿ ರೇಗಿ ಮಗುವನ್ನು ಅಂಥ ಚಟುವಟಿಕೆಗಳಿಂದ ವಿಮುಖ ಗೊಳಿಸುತ್ತೇವೆ. ಮಕ್ಕಳು ಮನೋವಿಕಾಸ ಪಥವನ್ನು ಚಿವುಟಿ ಹಾಕುವುದು ಇಲ್ಲೇ? ನಿಮ್ಮ ಮಗು ಕಾಗದವನ್ನು ಕತ್ತರಿಸಿ ಏನೋ ಮಾಡುತ್ತಿದೆ ಎಂದರೆ, ಕಡ್ಡಿಗಳನ್ನು ಸೇರಿಸಿ ಕಟ್ಟುತ್ತಿದೆ ಎಂದರೆ, ಮತ್ತಿನ್ನೇನನ್ನೂ ಅಂಟಿಸುತ್ತಿದ್ದರೆ, ಬಣ್ಣ ಬಳಿಯುತ್ತಿದ್ದರೆ ಅದರ ಮನದ ಮೂಸೆಯಿಂದ ಹೊಸದೊಂದು ಪ್ರಯೋಗ ಮೂಡಿಬರುತ್ತಿದೆ ಎಂದೇ ಅರ್ಥ.

ಅಂಥಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಹಕ್ಕು ಖಂಡಿತಾ ದೊಡ್ಡವರಿಗಿಲ್ಲ. ಯಾರಿಗೆ ಗೊತ್ತು ಮಗುವಿನ ಇಂಥ ತರಲೆ ಕೆಲಸವೇ ಮುಂದೊಂದು ದಿನ ಆತ ಅಥವಾ ಆಕೆಯನ್ನು ಮಹಾನ್ ಕಲಾವಿದನನ್ನಾಗಿಯೋ, ತಂತ್ರಜ್ಞನನ್ನಾಗಿಯೋ, ಯೋಜನಾ ಕರ್ತೃವನ್ನಾಗಿಯೋ ರೂಪಿಸಿಬಿಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ, ಅದರ ಮನಸ್ಸಿನ ವಿಕಾಸಕ್ಕೆ ಇಂಥ ಚಟುವಟಿಕೆಗಳೇ ಪೂರಕವಾಗುತ್ತವೆ. ಆರೋಗ್ಯ ಪೂರ್ಣ ಮನಸ್ಸಿಗೆ ಇದೇ ನಾಂದಿ.

***

ಕೊನೇ ಪಕ್ಷ ಈ ಬೇಸಿಗೆ ರಜೆಯಲ್ಲಾದರೂ ಮಕ್ಕಳ ಪಾಡಿಗೆ ಮಕ್ಕಳನ್ನು ಬಿಟ್ಟು ನೋಡಿ, ಮೊಬೈಲ್‌ಗೇಮ್ಸ್, ಟೀವಿ ಪೆಟ್ಟಿಗೆ, ಕಾರ್ಟೂನ್ ನೆಟ್‌ವರ್ಕ್, ಕ್ರಿಕೆಟ್‌ನಂಥ ನೀರಸ ವಿಷಯಗಳಿಂದ ಅವರನ್ನು ಹೊರತನ್ನಿ. ವ್ಯರ್ಥವಾಗುತ್ತಿರುವ ಕಾಗದ, ತುಕ್ಕು ಹಿಡಿಯುತ್ತಿರುವ ನಿಮ್ಮ ಮಗುವಿನ ಮನಸ್ಸು ಎರಡರ ಮರುಬಳಕೆಯ ಜತೆಗೆ ಅತ್ಯದ್ಭುತ ಅಚ್ಚರಿಗೆ ಈ ಬೇಸಿಗೆ ರಜೆ ಸಾಕ್ಷಿಯಾದೀತು. ಪ್ರಯತ್ನಿಸಿ.