Saturday, 14th December 2024

ಮೂತ್ರಪಿಂಡಗಳ ನಾಟಿ ಏಕೆ ? ಯಾವಾಗ ? ಹೇಗೆ ?

ಸ್ವಾಸ್ಥ್ಯ ಸಂಪದ

yoganna55@gmail.com

ನಾಟಿ ಮಾಡಿದ ಮೂತ್ರಜನಕಾಂಗ ತಕ್ಷಣ ಅಥವಾ ದೀರ್ಘಾವಧಿಯಲ್ಲಿ ತಿರಸ್ಕಾರಕ್ಕೊಳಗಾಗಬಹುದು. ತಕ್ಷಣ ತಿರಸ್ಕಾರ ಕ್ಕೊಳ ಗಾದಲ್ಲಿ ನಾಟಿ ಮಾಡಿದ 24 ಗಂಟೆಯೊಳಗೆ ಜ್ವರ, ಹೊಟ್ಟೆನೋವು, ಮೂತ್ರ ವಿಸರ್ಜನೆಯಾಗ ದಿರುವಿಕೆ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ದೇಹದೊಳಗೆ ಉತ್ಪತ್ತಿಯಾಗುವ ಸ್ವ ನಿರೋಧಕತ್ವವನ್ನು ದಮನ ಮಾಡುವ ಔಷಧಗಳನ್ನು ಗರಿಷ್ಠ ಪ್ರಮಾಣದಲ್ಲಿ ನೀಡಿ ತಿರಸ್ಕಾರದ ಕ್ರಿಯೆಗಳನ್ನು ದಮನ ಮಾಡಲಾಗುತ್ತದೆ.

ಮೂತ್ರಜನಕಾಂಗದ ಕಾಯಿಲೆಗಳು ಪ್ರಪಂಚಾದ್ಯಂತ ಅದರಲ್ಲೂ ಭಾರತದಲ್ಲಿ ದಿನೇ ದಿನೇ ವ್ಯಾಪಕವಾಗಿ ಹೆಚ್ಚಾಗುತ್ತಿವೆ. ಸಕ್ಕರೆಕಾಯಿಲೆಯ ಮೂತ್ರಜನಕಾಂಗದ ಕಾಯಿಲೆ, ಏರು ರಕ್ತ ದೊತ್ತಡದ ಮೂತ್ರಜನಕಾಂಗದ ಕಾಯಿಲೆ, ಕ್ರಾನಿಕ್ ಗ್ಲ್ಯಾಮ್ಯುರಿ ಲೊನೆಫ್ರೈ ಟಿಸ್, ಪಾಲಿಸಿಸ್ಟಿಕ್ ಕಿಡ್ನಿ ಕಾಯಿಲೆ ಇವು ಮೂತ್ರಜನಕಾಂಗಗಳ ಪ್ರಮುಖ ‘ಬೇರೂರಿದ ಕಾಯಿಲೆ’ ಗಳಾಗಿದ್ದು, (ಕ್ರಾನಿಕ್ ಕಿಡ್ನಿಡಿಸೀಸಸ್-ಸಿಕೆಡಿ) ಇವುಗಳಲ್ಲಿ ಸಕ್ಕರೆಕಾಯಿಲೆಯ ಮೂತ್ರಜನಕಾಂಗದ ಕಾಯಿಲೆ ವ್ಯಾಪಕವಾಗಿ ಕಂಡುಬರುವ ಕಿಡ್ನಿ ಕಾಯಿಲೆಯಾಗಿದೆ.

ಈ ಕಾಯಿಲೆಗಳಿರುವ ಬಹುಪಾಲರಲ್ಲಿ ಎರಡೂ ಮೂತ್ರಜನಕಾಂಗಗಳು ಏಕಕಾಲದಲ್ಲಿ ಕಾಯಿಲೆಗೀಡಾಗಿ ಹಲವಾರು ವರ್ಷ ಗಳಲ್ಲಿ ಹಂತಹಂತವಾಗಿ ಮುಂದುವರೆದು ಅಂತಿಮಹಂತದಲ್ಲಿ ಎರಡೂ ಮೂತ್ರಜನಕಾಂಗಗಳ ಕಾರ್ಯ ಸ್ಥಗಿತವಾಗಿ ‘ಮೂತ್ರ ಜನಕಾಂಗದ ಬೇರೂರಿದ ವಿಫಲತೆ’ (ಕ್ರಾನಿಕ್ ರೀನಲ್ ಫೆಲ್ಯೂರ್) ಉಂಟಾಗುತ್ತದೆ. ಈ ಹಂತವನ್ನು ‘ಅಂತಿಮಹಂತದ ಕಿಡ್ನಿ ಕಾಯಿಲೆ’ (ಎಂಡ್‌ಸ್ಟೇಜ್ ರೀನಲ್ ಡಿಸೀಸ್) ಎಂದು ಹೆಸರಿಸಲಾಗಿದೆ. ಈ ಹಂತದಲ್ಲಿ ರಕ್ತದಲ್ಲಿ ಯೂರಿಯಾ, ಕ್ರಿಯಾ ಟಿನಿನ್, ಪೊಟ್ಯಾಷಿಯಂ ಇತ್ಯಾದಿ ವಿಷಮತೆಯ ರಾಸಾಯನಿಕಗಳು ಅಧಿಕವಾಗಿ ಸಾವು ಸಂಭವಿಸುವ ಸಾಧ್ಯತೆಯಿದ್ದು, ಜರೂರು ಚಿಕಿತ್ಸೆ ಅತ್ಯವಶ್ಯಕ.

ಈ ಹಂತದ ಕಾಯಿಲೆಯನ್ನು ಯಾವುದೇ ಔಷಧ ಚಿಕಿತ್ಸೆಯಿಂದಲೂ ವಾಸಿಮಾಡಲಾಗುವುದಿಲ್ಲ. ಡಯಾಲಿಸಿಸ್ ಅಥವಾ ಮೂತ್ರಜನಕಾಂಗದ ನಾಟಿ ಇದಕ್ಕೆ ಸೂಕ್ತ ಚಿಕಿತ್ಸೆ. ಇವುಗಳಲ್ಲಿ ಡಯಾಲಿಸಿಸ್ ತಾತ್ಕಾಲಿಕ ಚಿಕಿತ್ಸೆಯಾಗಿದ್ದು, ಮೂತ್ರಜನಕಾಂಗ ನಾಟಿ ಶಾಶ್ವತ ಚಿಕಿತ್ಸೆ.

ಮೂತ್ರಜನಕಾಂಗದ ಅಂತಿಮ ಹಂತದ ಕಾಯಿಲೆಯನ್ನು ಗುರುತಿಸುವುದು ಹೇಗೆ?

ವಾಂತಿ, ರಕ್ತ ವಾಂತಿ, ಬೇಧಿ, ತೂಕ ಕಡಿಮೆಯಾಗುವಿಕೆ, ಮೂತ್ರ ಪ್ರಮಾಣ ಕಡಿಮೆಯಾಗುವಿಕೆ ಅಥವಾ ಹೆಚ್ಚಾಗುವಿಕೆ, ಚರ್ಮದ ಸಮಸ್ಯೆಗಳು, ಪ್ರಜ್ಞಾ ಸಮಸ್ಯೆಗಳು, ಸುಸ್ತು ಸಂಕಟ ಇವು ಇದರ ರೋಗ ಲಕ್ಷಣಗಳು. ರಕ್ತ ಯೂರಿಯಾ ಮತ್ತು ಕ್ರಿಯಾಟಿನಿನ್ ಏರಿಕೆ, ಮೂತ್ರದಲ್ಲಿ ಆಲ್ಬ್ಯುಮಿನ್ ಮತ್ತು ರಕ್ತ ವಿಸರ್ಜನೆ, ಕಾಸ್ಟ್‌ಗಳಿರುವಿಕೆ ಮತ್ತು ಅಲ್ಟ್ರಾಸೌಂಡ್, ಸಿ.ಟಿ. ಪರೀಕ್ಷೆಗಳಿಂದ ಇದನ್ನು  ದೃಢೀಕರಿಸಿಕೊಳ್ಳಲಾಗುತ್ತದೆ.

ದೇಹದಲ್ಲಿ ಎರಡು ಮೂತ್ರಜನಕಾಂಗಗಳಿದ್ದು, ಅವೆರಡೂ ವಿಫಲವಾದಾಗ ಮಾತ್ರ ಮೂತ್ರಜನಕಾಂಗದ ವಿಫಲತೆಯ ಈ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಂದು ಮೂತ್ರಜನಕಾಂಗ ಕಾರ್ಯ ನಿರ್ವಹಿಸಿದರೂ ಯಾವ ತೊಂದರೆ ಗಳುಂಟಾಗುವು ದಿಲ್ಲ. ಇದಲ್ಲದೆ ಕಾರಣ ಕಾರಕ ಕಾಯಿಲೆಗಳಾದ ಸಕ್ಕರೆಕಾಯಿಲೆ, ಏರು ರಕ್ತದೊತ್ತಡ ಇತ್ಯಾದಿ ಕಾಯಿಲೆಗಳನ್ನೂ ಸಹ ಸಂಬಂಧಿ ಸಿದ ಪರೀಕ್ಷೆಗಳಿಂದ ದೃಢೀಕರಿಸಿಕೊಳ್ಳಲಾಗುತ್ತದೆ.

ಮೂತ್ರಜನಕಾಂಗದ ನಾಟಿ(ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್) ಎಂದರೇನು?

ಅಂತಿಮ ಹಂತದ ಮೂತ್ರಜನಕಾಂಗಗಳ  ಕಾಯಿಲೆಗಳು ಪ್ರಪಂಚಾದ್ಯಂತ ಅತ್ಯಧಿಕವಾಗುತ್ತಿದ್ದು, ಇಂದು ಸುಮಾರು ಇದರ ಪ್ರಮಾಣ ಶೇ.13.4 ಆಗಿದ್ದು, ಇವರೆಲ್ಲರಿಗೂ ಮೂತ್ರಜನಕಾಂಗದ ನಾಟಿ ಚಿಕಿತ್ಸೆ ಅತ್ಯವಶ್ಯಕ ವಾಗಿರುವುದು ಮೂತ್ರ ಜನಕಾಂಗದ ನಾಟಿ ಚಿಕಿತ್ಸೆಯ ಬೇಡಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಹೃದಯವನ್ನು ಹೊರತುಪಡಿಸಿ ಪ್ರಮುಖ ಜೀವಾಂಗಗಳಾದ ಶ್ವಾಸಕೋಶಗಳು, ಮೂತ್ರಜನಕಾಂಗಗಳನ್ನು ಸೃಷ್ಟಿಕರ್ತ ಒಂದೇ ಅವಶ್ಯಕವಾದರೂ ಮತ್ತೊಂದನ್ನು ಹೆಚ್ಚುವರಿಯಾಗಿ ನೀಡಿದ್ದಾನೆ.

ಮನುಷ್ಯನ ದೇಹ ಸಹಜವಾಗಿ ಕಾರ್ಯನಿರ್ವಹಿಸಲು ಒಂದೇ ಮೂತ್ರಜನಕಾಂಗ ಸಾಕು. ಹಾಗಾಗಿ ಮತ್ತೊಂದನ್ನು ಅವಶ್ಯಕ ವಿರುವವರಿಗೆ ದಾನಮಾಡಬಹುದಾಗಿದೆ. ದಾನಿ ದೇಹದ ಆರೋಗ್ಯಕರ ಹೊಂದಿಕೊಳ್ಳುವ ಕಿಡ್ನಿಯನ್ನು ಹೊರತೆಗೆದು
ಅವಶ್ಯಕ ವಿರುವ ರೋಗಿಗೆ ಶಸ್ತ್ರಕ್ರಿಯೆಯ ಮೂಲಕ ದೇಹದೊಳಕ್ಕೆ ಜೋಡಿಸುವುದನ್ನು ‘ಕಿಡ್ನಿ ನಾಟಿ ಚಿಕಿತ್ಸೆ’ (ಮೂತ್ರ ಜನಕಾಂಗ ನಾಟಿ ಚಿಕಿತ್ಸೆ) ಎನ್ನಲಾಗುತ್ತದೆ. ಒಂದು ಮೂತ್ರಜನಕಾಂಗ ಕಾರ್ಯನಿರ್ವಹಿಸುತ್ತಿದ್ದಲ್ಲಿ ಮೂತ್ರಜನಕಾಂಗದ ನಾಟಿ ಚಿಕಿತ್ಸೆ ಅವಶ್ಯಕತೆಯಿಲ್ಲ.

ಯಾರಿಗೆ ಮೂತ್ರಜನಕಾಂಗದ ನಾಟಿ?

ಅಂತಿಮಹಂತದ ಕಿಡ್ನಿ ಕಾಯಿಲೆ ಇರುವ, ಶಸ್ತ್ರಕ್ರಿಯೆಯ ಒತ್ತಡವನ್ನು ತಡೆದುಕೊಳ್ಳುವ 5-65ರ ವಯೋಮಾನದ ಎಲ್ಲ ರೋಗಿಗಳಿಗೂ ಮೂತ್ರಜನಕಾಂಗಗಳ ನಾಟಿ ಮಾಡಬಹುದಾಗಿದೆ. ವಯಸ್ಸಾದಂತೆಲ್ಲಾ ನಾಟಿ ಮಾಡಿದ ಕಿಡ್ನಿಯನ್ನು ಸ್ವೀಕೃ ತಕಾರನ ದೇಹ ತಿರಸ್ಕರಿಸುವ ಸಾಧ್ಯತೆ ಹೆಚ್ಚಾ ಗಿರುತ್ತದೆಯಾದುದರಿಂದ ಆದಷ್ಟು ಬೇಗ ಕಿಡ್ನಿ ನಾಟಿ ಚಿಕಿತ್ಸೆಗೆ ಒಳಗಾಗುವುದು ಒಳ್ಳೆಯದು.

ಹೃದಯ ಮತ್ತಿತರ ಅಂಗಾಂಗಗಳು ಸದೃಢವಾಗಿದ್ದು, ಶಸ್ತ್ರಕ್ರಿಯೆಯ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವಿದ್ದಲ್ಲಿ 65 ವರ್ಷಗಳ ನಂತರವೂ ಇದನ್ನು ಕೈಗೊಳ್ಳಬಹುದು. ಮೂತ್ರಜನಕಾಂಗಗಳ ಶಾಶ್ವತ ವಿಫಲತೆಗೆ ಮೂತ್ರಜನಕಾಂಗದ ನಾಟಿ ಯೊಂದೇ ಸೂಕ್ತ, ಶಾಶ್ವತ ಪರಿಹಾರವಾದುದರಿಂದ ಅವಶ್ಯಕವಿರುವ ಎಲ್ಲರಿಗೂ ಇದರ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ ಮೂತ್ರಜನಕಾಂಗವನ್ನು ನೀಡುವ ದಾನಿಗಳು ಲಭಿಸುವುದು ಸಹ ಕಷ್ಟಕರವಾದುದರಿಂದ ಲಭಿಸು ವವರೆವಿಗೂ ಡಯಾಲಿಸಿಸ್ ಅನಿವಾರ್ಯವಾಗುತ್ತದೆ. ಎಷ್ಟು ಬೇಗ ಮೂತ್ರಜನಕಾಂಗದ ನಾಟಿ ಮಾಡಲಾಗುತ್ತದೋ ಅಷ್ಟು ಒಳ್ಳೆಯದಾದುದರಿಂದ ಆದ್ಯತೆಯ ಮೇಲೆ ಇದನ್ನು ಪರಿಗಣಿಸುವುದು ಸೂಕ್ತ.

ಯಾರಿಗೆ ಮೂತ್ರಜನಕಾಂಗ ನಾಟಿ ಸಮಂಜಸವಲ್ಲ?

ಮೂತ್ರಜನಕಾಂಗದ ನಾಟಿ ಚಿಕಿತ್ಸೆ ಮಾಡುವ ಮುನ್ನ ಸ್ವೀಕೃತಕಾರನಿಗೆ ಇದರ ಗರಿಷ್ಠ ಉಪಯೋಗ ಲಭಿಸುತ್ತದೆಯೇ ಮತ್ತು ನಾಟಿಯನ್ನು ಸ್ವೀಕೃತ ಮಾಡಬಲ್ಲನೇ ಹಾಗೂ ಶಸ್ತ್ರಕ್ರಿಯೆಯ ಒತ್ತಡದ ಪರಿಣಾಮವನ್ನು ಸಹಿಸಬಲ್ಲನೇ? ಎಂಬುದನ್ನು ನಿರ್ಧರಿಸುವುದು ಅತ್ಯವಶ್ಯಕ. ನಿಯಂತ್ರಿಸಲಾಗದ ತೀವ್ರ ಹೃದ್ರೋಗ, ತೀವ್ರ ಶ್ವಾಸಕೋಶ ರೋಗಗಳು, ತೀವ್ರತರನಾದ ಸೋಂಕು ಗಳು, ಮಾನಸಿಕ ಅಸ್ವಸ್ಥತೆ ಇತ್ಯಾದಿ ಗಂಭೀರ ಸ್ವರೂಪದ ಸಮಸ್ಯೆಗಳಿದ್ದಲ್ಲಿ ಹೊಂದಾಣಿಕೆ ಪರೀಕ್ಷೆಗಳು ಯಶಸ್ವಿಯಾದರೂ ನಿರೀಕ್ಷಿಸಿದ ಫಲ ಸಿಗದ ಕಾರಣ ಇವರುಗಳಲ್ಲಿ ನಾಟಿ ಚಿಕಿತ್ಸೆ ಸಮಂಜಸವಲ್ಲ.

ದಾನಿಯ ಆಯ್ಕೆ

ಮೂತ್ರಜನಕಾಂಗವನ್ನು ನೀಡುವ ದಾನಿಯನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಿಕೊಳ್ಳಬೇಕು. ಮೂತ್ರ ಜನಕಾಂಗವನ್ನು ಮಿದುಳಿನ ಸಾವಿಗೀಡಾದ ವ್ಯಕ್ತಿಯಿಂದ ಹಿಡಿದು ಜೀವಂತವಾಗಿರುವ ಯಾವ ಮನುಷ್ಯನಿಂದಾದರೂ ಪಡೆದು ನಾಟಿ ಮಾಡ ಬಹುದಾದರೂ ಮೊದಲನೇ ಹಂತದ ಜೀವಿತ ಸಂಬಂಧಿಗಳು(ತಂದೆ, ತಾಯಿ, ತಾತ, ಅಣ್ಣ, ತಮ್ಮ, ತಂಗಿ) ಮೊದಲ ಆದ್ಯತೆ ಯಾಗುತ್ತಾರೆ.

ಚಿಕ್ಕಪ್ಪ, ಚಿಕ್ಕಮ್ಮ ಅವರ ಮಕ್ಕಳು, ಸ್ನೇಹಿತರು ಮತ್ತಿತರರು ಎರಡನೆಯ ಆದ್ಯತೆಯಾಗುತ್ತಾರೆ ಮತ್ತು ಮೆದುಳಿನ ಸಾವಿಗೀಡಾದ
ಯಾವುದೇ ವ್ಯಕ್ತಿಗಳಿಂದ (ಸಂಬಂಧೇತರ) ಮೂತ್ರಜನಕಾಂಗವನ್ನು ಪಡೆಯಬಹುದಾಗಿರುತ್ತದೆ. ಚಿಕ್ಕಪ್ಪ ಚಿಕ್ಕಮ್ಮ ಮತ್ತವರ ಮಕ್ಕಳು ಮತ್ತು ಇನ್ನಿತರರಿಂದ ಪಡೆಯಲು ರಾಜ್ಯಮಟ್ಟದ ಕಾನೂನಾತ್ಮಕ ಸಮಿತಿಯ ಅನುಮತಿ ಅತ್ಯವಶ್ಯಕ. ಜೀವಿತ ವ್ಯಕ್ತಿ ಗಳಿಂದ ತೆಗೆದ ಮೂತ್ರಜನಕಾಂಗ, ಮೆದುಳಿನ ಸಾವಿಗೀಡಾದ ವ್ಯಕ್ತಿಗಳಿಂದ ತೆಗೆದ ಮೂತ್ರಜನಕಾಂಗಕ್ಕಿಂತ ಸುಮಾರು
2-3 ವರ್ಷಗಳ ಹೆಚ್ಚು ಕಾಲಾವಧಿಗೆ ಕಾರ್ಯನಿರ್ವಹಿಸುತ್ತದೆಯಾದುದರಿಂದ ಇದು ಮೊದಲನೇ ಆದ್ಯತೆಯಾಗಿದ್ದು, ಮಿದುಳಿನ
ಸಾವಿಗೀಡಾದವರಿಂದ ಪಡೆಯುವಿಕೆ ಅಂತಿಮ ಆದ್ಯತೆ ಯಾಗಿರುತ್ತದೆ. ೨೦ ರಿಂದ ೬೦ ವರ್ಷದ ವಯಸ್ಸಿನವರು ಮೂತ್ರ ಜನಕಾಂಗವನ್ನು ದಾನ ಮಾಡಬಹುದಾಗಿದೆ.

ಹೊಂದಾಣಿಕೆ ಪರೀಕ್ಷೆ
ದೇಹಕ್ಕೆ ತನ್ನ ಅಂಗಾಂಗಗಳನ್ನು ತನ್ನದೇ ಎಂದು ಗುರುತಿಸುವ ವಂಶಪಾರಂಪರ್ಯವಾಗಿ ವಂಶವಾಹಿಗಳ ಮೂಲಕ ಪೂರ್ವನಿಗದಿತವಾದ ಸಾಮರ್ಥ್ಯವಿದ್ದು, ಇದನ್ನು ‘ಸ್ವ ಸಹಿಷ್ಣತೆ’ (ಸೆಲ್ ಟಾಲರೆನ್ಸ್) ಎನ್ನಲಾಗುತ್ತದೆ. ಬೇರೊಂದು ದೇಹದ ಅಂಗಾಂಗ ಇನ್ನೊಂದು ದೇಹದ ಅಂಗಾಂಗದೊಳಕ್ಕೆ ನಾಟಿಮಾಡಿದಾಗ ಅದನ್ನು ತನ್ನದಲ್ಲ ಎಂದು ತಿರಸ್ಕರಿಸುವ ಅತಿ ಸೂಕ್ಷ್ಮ ಬುದ್ಧಿ ದೇಹ ಕ್ಕಿದ್ದು, ಅದರ ವಿರುದ್ಧ ನಿರೋಧಕ ವಸ್ತುಗಳು ಉತ್ಪತ್ತಿಯಾಗಿ ನಾಟಿಮಾಡಿದ ಅಂಗಾಂಗ ನಾಶಕ್ಕೀಡಾಗುತ್ತದೆ.

ಇದನ್ನು ‘ಅಂಗಾಂಗದ ತಿರಸ್ಕಾರ’ (ಆರ್ಗನ್ ರಿಜಕ್ಷನ್) ಎನ್ನಲಾಗುತ್ತದೆ. ಇದೆಂತಹ ವಿಸ್ಮಯ! ಆದರೆ ತಂದೆ ತಾಯಿಗಳು ಮತ್ತು ಅವರ ಮಕ್ಕಳ ಅಂಗಾಂಗಗಳನ್ನು ತಿರಸ್ಕರಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಮೊದಲ ಹಂತದ ಸಂಬಂಧಿಗಳನ್ನು ಮಾತ್ರ ದಾನಕ್ಕೆ ಮೊದಲ ಆದ್ಯತೆಯ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅವಳಿಗಳ ನಡುವಿನ ಮೂತ್ರಜನಕಾಂಗ ನಾಟಿ ಅತ್ಯಂತ
ಸುರಕ್ಷಿತ. ಜೀವಿತ ದಾನಿ ಮತ್ತು ಸ್ವೀಕೃತಕಾರನ ರಕ್ತ ಗುಂಪುಗಳ ಹೊಂದಾಣಿಕೆ ಮತ್ತು ರಕ್ತದ ಹೆಚ್‌ಎಲ್‌ಎ ಆಂಟಿಜನ್‌ಗಳ ಹೊಂದಾಣಿಕೆಯನ್ನು ಮಾಡಿ ಸ್ವೀಕೃತಿಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಸಂಬಂಧಗಳಲ್ಲೂ ಸಹ ಇವು ಹೊಂದಾಣಿಕೆಯಾದರೆ ಮಾತ್ರ ದಾನಿಯಿಂದ ಮೂತ್ರಜನಕಾಂಗವನ್ನು ಪಡೆಯಬಹುದು.

ರಕ್ತಗುಂಪಿನಲ್ಲಿ ಎ,ಬಿ, ಎಬಿ ಮತ್ತು ಒ ಎಂಬ ನಾಲ್ಕು ಪ್ರಮುಖ ಗುಂಪುಗಳಿದ್ದು, ದಾನಿ ಮತ್ತು ಸ್ವೀಕೃತಕಾರರು ಸಮಗುಂಪಿನವ ರಾಗಿರಬೇಕು. ದಾನಿ ಒ ಗುಂಪಿನ ರಕ್ತವನ್ನು ಹೊಂದಿದ್ದಲ್ಲಿ ಅವನು ಯಾವುದೇ ಗುಂಪಿನ ಸ್ವೀಕೃತಕಾರನಿಗೆ ದಾನ ಮಾಡಬಹುದು. ಸ್ವೀಕೃತಕಾರ ಎಬಿ ರಕ್ತ ಗುಂಪಿನ ರಕ್ತವನ್ನು ಹೊಂದಿದ್ದಲ್ಲಿ ಅವನು ಎಬಿ, ಎ, ಬಿ ಅಥವಾ ಒ ರಕ್ತ ಗುಂಪಿನ ದಾನಿಗಳಿಂದ ಮೂತ್ರ ಜನಕಾಂಗವನ್ನು ಪಡೆಯಬಹುದಾಗಿದೆ.

ನಾಟಿ ಮಾಡುವ ದಾನಿಯ ಮೂತ್ರಜನಕಾಂಗಗಳ ಕಾರ್ಯ ಸಾಮರ್ಥ್ಯವನ್ನು ಡಿಟಿಪಿಎ (ರೀನಲ್ ಐಸೋಟೋಪ್ ಸ್ಕ್ಯಾನ್) ಪರೀಕ್ಷೆಯಿಂದ ದೃಢೀಕರಿಸಿಕೊಳ್ಳಲಾಗುತ್ತದೆ. ದಾನಿಯ ಎರಡೂ ಮೂತ್ರಜನಕಾಂಗಗಳ ಕಾರ್ಯ ಸಾಮರ್ಥ್ಯ ಸಹಜವಾಗಿದ್ದಲ್ಲಿ ಮಾತ್ರ ಆಯ್ಕೆಮಾಡಿಕೊಳ್ಳಲಾಗುತ್ತದೆ. ಒಂದು ಮೂತ್ರಜನಕಾಂಗವನ್ನು ದಾನಿಯಿಂದ ತೆಗೆದ ನಂತರ ಅವನ ಬದುಕಿಗೆ ಮತ್ತೊಂದು ಸಹಜ ಮೂತ್ರಜನಕಾಂಗ ಅತ್ಯವಶ್ಯಕ.

ನಾಟಿ ಶಸಕ್ರಿಯೆ
ದಾನಿಯಿಂದ ಮೂತ್ರಜನಕಾಂಗವನ್ನು ತೆಗೆದು ಸ್ವೀಕೃತಕಾರನಿಗೆ ಏಕಕಾಲದಲ್ಲಿ ಜೋಡಿಸುವ ಶಸ್ತ್ರಕ್ರಿಯೆ ಅತ್ಯಂತ ಸೂಕ್ಷ್ಮ ಮತ್ತು ದೀರ್ಘಾವಧಿಯ ಶಸ್ತ್ರಕ್ರಿಯೆಯಾಗಿದ್ದು, ಈ ಶಸ್ತ್ರಕ್ರಿಯೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ದಾನಿ ಮತ್ತು ಸ್ವೀಕೃತ ಕಾರರಿಬ್ಬರಿಗೂ ಇರಬೇಕು. ದಾನಿಯಿಂದ ತೆಗೆದ ಮೂತ್ರಜನಕಾಂಗವನ್ನು 4 ಗಂಟೆಯ ಒಳಗೆ ಸ್ವೀಕೃತಕಾರನಿಗೆ ಜೋಡಿಸಲಾಗುತ್ತದೆ.

ಶಸ್ತ್ರಕ್ರಿಯೆಯೂ ಸಹ ಅವಘಡಗಳಿಂದ ಹೊರ ತಾಗಿಲ್ಲ. ನಾಟಿ ಮಾಡಿದ ಎಲ್ಲರ ದೇಹವೂ ಮೂತ್ರಜನಕಾಂಗವನ್ನು ಒಪ್ಪಿ ಕೊಳ್ಳುತ್ತದೆಯೆಂಬ ಭರವಸೆ ಇರುವುದಿಲ್ಲ. ಶಸ್ತ್ರಕ್ರಿಯೆ ನಂತರ ಜೀವಿತ ದಾನಿಯಿಂದ ಪಡೆದ ಮೂತ್ರಜನಕಾಂಗ ಕ್ಷಣದಲ್ಲಿಯೇ ಕಾರ್ಯಾರಂಭ ಮಾಡುತ್ತದೆ. ಮೃತ ದಾನಿಗಳಿಂದ ಪಡೆದ ಮೂತ್ರಜನಕಾಂಗ ಕೆಲ ಕಾಲದ ನಂತರ ಕಾರ್ಯನಿರ್ವಹಿಸಲಾ ರಂಭಿಸುತ್ತದೆ. ನಾಟಿ ಮಾಡಿದ 24-48 ಗಂಟೆಗಳಲ್ಲಿ ನಾಟಿ ಮಾಡಿದ ಅಂಗಾಂಗವನ್ನು ದೇಹ ಸ್ವೀಕರಿಸಿದೆಯೇ ಅಥವಾ ತಿರಸ್ಕರಿಸಿದೆಯೇ ಎಂಬುದು ವ್ಯಕ್ತವಾಗುತ್ತದೆ.

ಸ್ವೀಕರಿಸಿದಲ್ಲಿ ಮೂತ್ರ ವಿಸರ್ಜನೆ ಪ್ರಾರಂಭವಾಗಿ ರಕ್ತದ ಕ್ರಿಯಾಟಿನಿನ್ ಮತ್ತು ಯೂರಿಯಾಗಳು ಕ್ರಮೇಣ ಕಡಿಮೆಯಾಗುತ್ತ ಸಹಜ ಸ್ಥಿತಿಗೆ ಬರುತ್ತದೆ. ತಿರಸ್ಕೃತವಾದಲ್ಲಿ ಮೂತ್ರ ಉತ್ಪತ್ತಿಯಾಗುವುದಿಲ್ಲ.

ಪ್ರಯೋಜನಗಳು
ಮೂತ್ರಜನಕಾಂಗದ ನಾಟಿ ಚಿಕಿತ್ಸೆಯಿಂದ ರೋಗಿ ಸಂಪೂರ್ಣವಾಗಿ ಗುಣಮುಖನಾಗಿ ಉತ್ತಮ ಗುಣಮಟ್ಟದ ಜೀವನವನ್ನು ಚಟುವಟಿಕೆಗಳಿಂದ ನಿರ್ವಹಿಸಬಹುದಾಗಿರುತ್ತದೆ. ಆಹಾರ ಕ್ರಮ ಮತ್ತು ದ್ರವ ಸೇವನೆಯ ಕಟ್ಟುಪಾಡುಗಳ ಮಿತಿ ಇರುವುದಿಲ್ಲ. ಲೈಂಗಿಕಾಸಕ್ತಿ ಸಹಜ ಸ್ಥಿತಿಗೆ ಬರುತ್ತದೆ. ಸ್ತ್ರೀಯರು ಗರ್ಭ ಧರಿಸಬಹುದು. ದೀರ್ಘಕಾಲ( 10 ರಿಂದ 25 ವರ್ಷಗಳು) ನೆಮ್ಮದಿ ಯಿಂದ ಬದುಕಬಹುದಾಗಿದೆ. ಡಯಾಲಿಸಿಸ್ ನಿಂದ ಉಂಟಾಗುತ್ತಿದ್ದ ತೊಂದರೆಗಳು ಮತ್ತು ಪಾಲಿಸಬೇಕಾಗುತ್ತಿದ್ದ ಕಠಿಣ ನಿಯಮಗಳಿರುವುದಿಲ್ಲ.

ಸಂಭವಿಸಬಹುದಾದ ಅವಘಡಗಳು
ನಾಟಿ ಮಾಡಿದ ಮೂತ್ರಜನಕಾಂಗ ತಕ್ಷಣ ಅಥವಾ ದೀರ್ಘಾವಧಿಯಲ್ಲಿ ತಿರಸ್ಕಾರಕ್ಕೊಳಗಾಗಬಹುದು. ತಕ್ಷಣ ತಿರಸ್ಕಾರಕ್ಕೊಳ ಗಾದಲ್ಲಿ ನಾಟಿ ಮಾಡಿದ 24 ಗಂಟೆಯೊಳಗೆ ಜ್ವರ, ಹೊಟ್ಟೆನೋವು, ಮೂತ್ರ ವಿಸರ್ಜನೆಯಾಗದಿರುವಿಕೆ ಮುಂತಾದ ತೊಂದರೆ ಗಳು ಕಾಣಿಸಿಕೊಳ್ಳುತ್ತವೆ. ದೇಹದೊಳಗೆ ಉತ್ಪತ್ತಿಯಾಗುವ ಸ್ವ ನಿರೋಧಕತ್ವವನ್ನು ದಮನ ಮಾಡುವ ಔಷಧಗಳನ್ನು
ಗರಿಷ್ಠ ಪ್ರಮಾಣದಲ್ಲಿ ನೀಡಿ ತಿರಸ್ಕಾರದ ಕ್ರಿಯೆಗಳನ್ನು ದಮನ ಮಾಡಲಾಗುತ್ತದೆ.

ಕ್ರಮೇಣ ಸ್ವನಿರೋಧಕತ್ವ ದಮನಕಾರಿ ಔಷಧಗಳನ್ನು ಜೀವನವಿಡೀ ಮುಂದುವರಿಸಲಾಗುತ್ತದೆ. ಸೋಂಕು ಮತ್ತೊಂದು ಪ್ರಮುಖ ಕಾರಣವಾಗಿದ್ದು ಸೋಂಕು ತಗಲದಂತೆ ಕಟ್ಟೆಚ್ಚರಗಳನ್ನು ವಹಿಸುವುದು ಅತ್ಯವಶ್ಯಕ. ಅವಶ್ಯಕವಿದ್ದಾಗ ಸೋಂಕು
ನಿರೋಧಕ ಔಷಧಗಳನ್ನು ಉಪಯೋಗಿಸಲಾಗುತ್ತದೆ. ನಾಟಿ ಮಾಡಲಾದ ಮೂತ್ರಜನಕಾಂಗ ತಿರಸ್ಕಾರಕ್ಕೊಳಗಾದಲ್ಲಿ ಮತ್ತೊಂದನ್ನು ನಾಟಿಮಾಡಿ ಜೀವಾವಧಿಯನ್ನು ಮುಂದುವರೆಸಬಹುದು.

ವಹಿಸಬೇಕಾದ ಮುನ್ನೆಚ್ಚರಿಕೆಗಳು
ನಾಟಿ ಮಾಡಲಾದ ಮೂತ್ರಜನಕಾಂಗ ತಿರಸ್ಕಾರಕ್ಕೊಳಗಾಗುವ ಸಾಧ್ಯತೆ ಇರುವುದರಿಂದ ಪ್ರತಿನಿತ್ಯ ತಿರಸ್ಕಾರವನ್ನು ದಮನ ಮಾಡುವ ನಿರೋಧಕ ದಮನಕಾರಿ ಔಷಧಗಳನ್ನು ಜೀವನವಿಡೀ ಪ್ರತಿನಿತ್ಯ ಸೇವಿಸುತ್ತಿರಬೇಕು. ಈ ಔಷಧಗಳನ್ನು ಸೇವಿಸುವು ದರಿಂದ ದೇಹದ ಇಮ್ಯುನಿಟಿ ದಮನವಾಗುವುದರಿಂದ ಸೋಂಕುಗಳು ಬೇಗ ತಗುಲುವ ಸಾಧ್ಯತೆ ಇದ್ದು, ಅವುಗಳನ್ನು
ನಿಯಂತ್ರಿಸಲು ಸದಾಕಾಲ ಮಾಸ್ಕ್ ಅನ್ನು ಧರಿಸಬೇಕು.

ಜನಜಂಗುಳಿ ಇರುವ ಪ್ರದೇಶಗಳಿಂದ ದೂರವಿರಬೇಕು. ಶ್ರೇಷ್ಠಮಟ್ಟದ ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಸಕ್ಕರೆ ಕಾಯಿಲೆ, ಏರು ರಕ್ತದೊತ್ತಡಗಳಿದ್ದಲ್ಲಿ ಅವುಗಳನ್ನು ನಿಯಂತ್ರಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಾಟಿ ಮಾಡಲಾದ ಮೂತ್ರ ಜನಕಾಂಗವೂ ಸಹ ಮತ್ತೊಮ್ಮೆ ಹಾನಿಗೀಡಾಗುವ ಸಂಭವವಿರುತ್ತದೆ. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಗಳನ್ನು ಸೇವಿಸಬಾರದು. ಜ್ವರ, ಮೂತ್ರತೊಂದರೆಗಳು ಬಂದಲ್ಲಿ ಬಹುಬೇಗ ವೈದ್ಯರನ್ನು ಕಾಣಬೇಕು.

ಜೀವನಶೈಲಿ
ದೇಹದೊಳಗೆ ಹೊರ ಅಂಗಾಂಗವೊಂದಿದೆ ಎಂಬ ಅರಿವು ಅತ್ಯವಶ್ಯಕ. ನಾಟಿ ಚಿಕಿತ್ಸೆಗೆ ಒಳಗಾಗುವವರು ಸಹಜ ಜೀವನ ನಡೆಸಬಹುದಾದರೂ ಅತಿಯಾದ ದೈಹಿಕ, ಮಾನಸಿಕ ಒತ್ತಡಗಳಿಂದ ದೂರವಿರುವ, ತ್ಯಾಗ ಮನೋಭಾವದ ಜೀವನಶೈಲಿ ಯನ್ನು ಅಳವಡಿಸಿಕೊಂಡು, ಸದಾಕಾಲ ಸಂತೋಷವಾಗಿರುವ ಆಧ್ಯಾತ್ಮಿಕ ಜೀವನಶೈಲಿಯನ್ನು ರೂಢಿಸಿಕೊಂಡಲ್ಲಿ ನಾಟಿ ಮಾಡಲಾದ ಅಂಗಾಂಗ ದೀರ್ಘ ಕಾಲ ಬಾಳಿಕೆಗೆ ಬರುತ್ತದೆ. ದೇಹದ ತೂಕ ನಿಯಂತ್ರಣ, ವ್ಯಾಯಾಮ, ಯೋಗ, ಸಮತೋಲನ ಆಹಾರ, ದುಶ್ಚಟಗಳ ರಹಿತ ಬದುಕು ರಕ್ಷಾಕವಚ.

ದುಬಾರಿ ವೆಚ್ಚ
ಮೂತ್ರಜನಕಾಂಗ ನಾಟಿ ಚಿಕಿತ್ಸೆ ಅತ್ಯಂತ ದುಬಾರಿಯಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲೂ ಶಸ್ತ್ರಕ್ರಿಯೆಗೆ ಕನಿಷ್ಠ 3 ಲಕ್ಷ ರೂಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 8 ರಿಂದ 10ಲಕ್ಷ ರೂಗಳು ಖರ್ಚಾಗುವುದರಿಂದ ಇದು ಎಲ್ಲರಿಗೂ ಸಿಗುವುದು ಮರೀಚಿಕೆಯಾಗಿದೆ. ಇದಲ್ಲದೆ ಜೀವನವಿಡೀ ಸೇವಿಸಬೇಕಾದ ಔಷಧಗಳ ವೆಚ್ಚವೂ ಸಹ ಮಾಹೆಯಾನ 15 ರಿಂದ 20 ಸಾವಿರರೂಗಳಾಗುತ್ತದೆ.

ಈ ಕಾರಣಗಳಿಂದಾಗಿ ಮೂತ್ರಜನಕಾಂಗದ ವಿಫಲತೆಯ ರೋಗಿಗಳು ತಮ್ಮ ಜೀವಾವಧಿಯನ್ನು ಹೆಚ್ಚಿಸಿಕೊಂಡು ನೆಮ್ಮದಿಯಾಗಿ ಬದುಕುವ ಅವಕಾಶಗಳು ಸಿರಿವಂತರಿಗೆ ಮಾತ್ರ ಸಿಗುವಂತಾಗಿದ್ದು, ಬಡ ಬೋರೇಗೌಡ ಅನ್ಯಮಾರ್ಗವಿಲ್ಲದೆ ಬಹುಬೇಗ ಸಾವನ್ನಪ್ಪುತ್ತಿದ್ದಾನೆ.

ಸವಾಲುಗಳು
ವ್ಯಾಪಕವಾಗಿ ಸಾಂಕ್ರಾಮಿಕ ರೋಗದಂತೆ ವ್ಯಾಪಿಸುತ್ತಿರುವ ಅನಿಯಂತ್ರಿತ ಸಕ್ಕರೆಕಾಯಿಲೆ ಮತ್ತು ಏರುರಕ್ತ ದೊತ್ತಡದಿಂದಾಗಿ ಮೂತ್ರಜನಕಾಂಗದ ವಿಫಲತೆಯ ರೋಗಿಗಳು ದಿನೇ ದಿನೇ ಅಧಿಕವಾಗಿ ಮೂತ್ರಜನಕಾಂಗದ ನಾಟಿ ಚಿಕಿತ್ಸೆಯ ಬೇಡಿಕೆಯೂ ಹೆಚ್ಚಾಗುತ್ತಿದೆ. ಕೂಡು ಕುಟುಂಬಗಳು ಇಂದು ನ್ಯೂಕ್ಲಿಯರ್ ಕುಟುಂಬಗಳಾಗುತ್ತಿದ್ದು, ಸಂಸಾರಗಳಲ್ಲಿ ಸಾಮರಸ್ಯ ಕಡಿಮೆ ಯಾಗಿ, ಭಾವ ಸಂಬಂಧಗಳು ದೂರವಾಗುತ್ತಿವೆ.

ಹೀಗಾಗಿ ಸಂಬಂಧಿಗಳಲ್ಲಿ ಮೂತ್ರಜನಕಾಂಗ ದಾನ ಮಾಡುವವರ ಜೀವಿತ ದಾನಿಗಳ ಸಂಖ್ಯೆಯೂ ಸಹ ಕಡಿಮೆಯಾಗುತ್ತಿ ರುವುದರಿಂದ ಮೂತ್ರಜನಕಾಂಗದ ಲಭ್ಯತೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ಮೃತ ದೇಹಗಳ ಅಂಗಾಂಗ ದಾನ ಕಡ್ಡಾಯ ಕಾನೂನು ಈಗಿರುವ ಅಂಕಿ ಅಂಶಗಳ ಪ್ರಕಾರ ಮುಂದಿನ ೨೦ವರ್ಷಗಳಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಎಲ್ಲ ಸಾಧ್ಯತೆಗಳೂ ಇವೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಈಗಲೇ ಕಂಡುಕೊಳ್ಳುವುದು ಅವಶ್ಯಕವಾಗಿದೆ.

ಮೃತ ದಾನಿಗಳಿಂದ ಅಂಗಾಂಗಗಳನ್ನು ತೆಗೆದು ಅವಶ್ಯಕವಿರುವವರಿಗೆ ಮರು ಜೋಡಿಸುವ ವಿಷಯದಲ್ಲಿ ಸರಕಾರ ಕಾನೂ ನೊಂದನ್ನು ರಚಿಸಿ ಮೃತರ ಅಂಗಾಂಗ ದಾನವನ್ನು ಕಾನೂನಿನ್ವಯ ಕಡ್ಡಾಯಗೊಳಿಸುವ ದಿಕ್ಕಿನಲ್ಲಿ ನಿಯಮಗಳನ್ನು ಜಾರಿಗೆ ತರುವತ್ತ ಗಂಭೀರವಾಗಿ ಚಿಂತಿಸುವುದು ಈ ಸಮಸ್ಯೆಗೆ ಪರಿಹಾರವಾಗಬಲ್ಲದು. ಸಿಂಗಾಪುರ ಮತ್ತಿತರ ದೇಶಗಳಲ್ಲಿ ಈ ಕಾನೂನು ಈಗಾಗಲೆ ಜಾರಿಯಲ್ಲಿದೆ. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮೂಡಿಸುವುದು ಅತ್ಯವಶ್ಯಕ.

ಅಂಗಾಂಗಗಳ ಬೇಡಿಕೆ ಇಂದು ಹೆಚ್ಚಾಗುತ್ತಿದ್ದು, ಇವುಗಳ ನಾಟಿ ಚಿಕಿತ್ಸೆಯ ವೆಚ್ಚವೂ ಸಹ ದುಬಾರಿಯಾಗಿದ್ದು, ವೆಚ್ಚವನ್ನು ತಗ್ಗಿಸಿ, ಅಂಗಾಂಗಗಳು ಸುಲಭವಾಗಿ ಅವಶ್ಯಕವಿರುವವರಿಗೆ ಲಭಿಸುವಂತಾಗಿಸುವ ದಿಕ್ಕಿನಲ್ಲಿ ಆರೋಗ್ಯ ರಕ್ಷಣೆಯ ಜವಾಬ್ದಾರಿ ಹೊತ್ತ ಸರಕಾರ ಚಿಂತಿಸದೆ ಕೈಚೆಲ್ಲಿ ಕುಳಿತಿರುವುದು ಸಮಂಜಸವಲ್ಲ.