ನೂರೆಂಟು ವಿಶ್ವ
vbhat@me.com
ಹಂತ ಹಂತಕ್ಕೂ ಅವರನ್ನು ಅವರ ಅಪ್ಪಂದಿರಿಗೆ ಹೋಲಿಸುತ್ತಾರೆ. ತಂದೆಯ ನೆರಳಿನಿಂದ ಹೊರಬರಲು ಅವರಿಗೆ ಸಾಧ್ಯವಾಗುವುದೇ ಇಲ್ಲ. ಮಕ್ಕಳ ಎಲ್ಲ ಸಾಧನೆಗೆ ಅವರ ತಂದೆಯೇ ಮಾಪಕವಾಗುತ್ತಾರೆ, ಅವರ ತಂದೆಯಾಗಿದ್ದರೆ ಈ ರೀತಿ ಮಾಡುತ್ತಿರಲಿಲ್ಲ ಎಂಬ ಹೋಲಿಕೆ ಶುರುವಾಗುತ್ತದೆ. ಕ್ರಮೇಣ ಮಕ್ಕಳಿಗೆ ತಂದೆ ಕೊಟ್ಟ ಹೆಸರು ಕಿರೀಟವಲ್ಲ, ಮಣಭಾರದ ಹೊರೆ ಎಂದೆನಿಸಲಾರಂಭಿಸುತ್ತದೆ.
ಮೊನ್ನೆಮೊನ್ನೆಯಷ್ಟೇ ಅಪ್ಪಂದಿರ ದಿನ ಮುಗಿದಿದೆ. ಈ ವೇಳೆ ನನಗೆ ಕೆಲ ವರ್ಷದ ಹಿಂದೆ ಓದಿದ ಖ್ಯಾತ ಕ್ರಿಕೆಟ್ ಆಟಗಾರ, ನನ್ನ ನೆಚ್ಚಿನ ಸಂಭಾವಿತ ಕ್ರಿಕೆಟಿಗ ಸಂಜಯ ಮಂಜ್ರೇಕರ ಆತ್ಮಕತೆ ನೆನಪಾಯಿತು. ಬಹಳ ವಿಚಾರ ಮಾಡಿ, Imperfect (ಅಪರಿ ಪೂರ್ಣ) ಎಂಬ ಹೆಸರನ್ನು ಇದಕ್ಕೆ ಇಟ್ಟಿದ್ದಾರೆ. ಸಾಮಾನ್ಯವಾಗಿ ಆತ್ಮಕತೆಯಲ್ಲಿ ಆತ್ಮರತಿಯೇ ತುಂಬಿರುತ್ತದೆ. ಆದರೆ ಮಂಜ್ರೇಕರ ತಮ್ಮನ್ನು ಟೀಕಿಸುತ್ತಾ, ಗೇಲಿ ಮಾಡುತ್ತಾ, ತಮ್ಮ ಬಲೂನನ್ನು ತಾವೇ ಚುಚ್ಚಿಕೊಳ್ಳುತ್ತಾ, ತಮ್ಮೊಳಗಿನ ಖಾಲಿತನ ಅನಾವರಣಗೊಳಿಸುತ್ತಾ ಆಪ್ತ ರಾಗುತ್ತಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೆಂದು ಮಾನ್ಯತೆ ಪಡೆದ ಮಂಜ್ರೇಕರ ಕ್ರಿಕೆಟ್ ಬಗ್ಗೆ ಇದಕ್ಕಿಂತ ಖಡಾಖಡಿ, ನೇರಾನೇರ ಹೇಳಲು ಸಾಧ್ಯವಿಲ್ಲ. ‘ನನಗೆ ಕ್ರಿಕೆಟ್ ಅಂದ್ರೆ ಉಸಿರೂ ಅಲ್ಲ. ಜೀವನವೂ ಅಲ್ಲ. ನಾನು ಕೆಲವು ವರ್ಷ ಕ್ರಿಕೆಟ್ ಆಡಿದೆ ಅಷ್ಟೆ. ಹಾಗೆಂದ ಮಾತ್ರಕ್ಕೆ ನನಗೆ ಅದೇ ಸರ್ವಸ್ವ ಎಂದು ಭಾವಿಸಬೇಕಿಲ್ಲ. ಕ್ರಿಕೆಟ್ ನನಗೆ ಜೀವನವಲ್ಲ. ಕ್ರಿಕೆಟ್‌ಗಿಂತ ಮಿಗಿಲಾದುದು ಜೀವನ. ಕ್ರಿಕೆಟ್ ಹೊರಗೂ ಒಂದು ಅದ್ಭುತ ಜೀವನವಿದೆ ಎಂಬುದನ್ನು ಕಂಡುಕೊಂಡಿದ್ದೇನೆ. ಹೀಗಾಗಿ ಕ್ರಿಕೆಟ್‌ನಿಂದ ನಿವೃತ್ತನಾದ ನಂತರವೂ ಸಂತಸದ, ನೆಮ್ಮದಿಯ ಬದುಕು ಸಾಗಿಸುತ್ತಿದ್ದೇನೆ’ ಎಂದು ಮುಕ್ತವಾಗಿ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ನಿಮಗೆ ಗೊತ್ತಿರಬಹುದು, ಸಂಜಯ ಮಂಜ್ರೇಕರ ಅವರ ತಂದೆ ವಿಜಯ್ ಮಂಜ್ರೇಕರ ಈ ದೇಶ ಕಂಡ ಅತ್ಯುತ್ತಮ ಬ್ಯಾಟ್ಸಮನ್‌ಗಳ ಪೈಕಿ ಒಬ್ಬರು. ಅವರು ಆಡಿದ್ದು ಕೇವಲ 53 ಟೆಸ್ಟ್‌ಗಳು ಮಾತ್ರ. ಈ ಪಂದ್ಯಗಳಲ್ಲಿ ಅವರು ಗಳಿಸಿದ ಒಟ್ಟೂ ರನ್ 3208. ಅಂದರೆ ಅವರ ರನ್ ಸರಾಸರಿ 39.12. ಅವರದು ಅತ್ಯಾಕರ್ಷಕ ಟೆಕ್ನಿಕ್. ಈ ಆತ್ಮಕತೆಯಲ್ಲಿ ಸಂಜಯ ಮಂಜ್ರೇಕರ ಒಂದೆಡೆ, ‘ನನ್ನ ಕ್ರಿಕೆಟ್ ಜೀವನಕ್ಕೆ ನನ್ನ ತಂದೆಯೇ ಮುಳುವಾದ. ಎಲ್ಲರೂ ನನ್ನನ್ನು ನನ್ನ ತಂದೆ ಜತೆ ಹೋಲಿಸುತ್ತಿದ್ದರು. ವಿಜಯ ಮಂಜ್ರೇಕರ ಹಾಗೆ ಆಡುತ್ತಿದ್ದರು, ಹೀಗೆ ಆಡುತ್ತಿದ್ದರು, ಅಂಥ ಬ್ಯಾಟ್ಸಮನ್ ಮತ್ತೊಮ್ಮೆ ಹುಟ್ಟಿಬರಲಾರ, ಕೋಟಿಗೊಬ್ಬ ವಿಜಯ ಮಂಜ್ರೇಕರ ಎಂದೆಲ್ಲ ಹೇಳಿ, ನನಗೆ ನಾನಾಗಲು ಬಿಡಲೇ ಇಲ್ಲ. ಮಂಜ್ರೇಕರ ಎಂಬ ಹೆಸರು ಕೇಳಿದರೆ ಸಾಕು, ತಂದೆ ಬಗ್ಗೆ ಎಲ್ಲರೂ ಕೊರೆಯುತ್ತಿದ್ದರು.
ಅಂಥವರು, ಇಂಥವರು ಎಂದೆಲ್ಲ ಪ್ರಶಂಸಿಸುತ್ತಿದ್ದರು. ನನ್ನ ಪಾಲಿಗೆ ಈ ಮಂಜ್ರೇಕರ ಹೆಸರೇ ಭಾರವಾಯಿತು. ನನಗೆ ಅಪ್ಪನಿಂದ
ಹೊರತಾದ ಜೀವನ ರೂಪಿಸಿಕೊಳ್ಳಲು ಬಹಳ ಕಷ್ಟವಾಯಿತು. ನನಗೆ ನನ್ನ ಅಪ್ಪ ದೊಡ್ಡ ಕ್ರಿಕೆಟ್ ಆಟಗಾರರೆಂಬುದು ಗೊತ್ತಿರಲಿಲ್ಲ. ಅಲ್ಲದೇ ‘ಮಂಜ್ರೇಕರ’ ಎಂಬ ಅಡ್ಡ ಹೆಸರಿನ ಬಗ್ಗೆ ಕೂಡ ವಿಶೇಷ ಪ್ರೀತಿಯಾಗಲಿ, ಜಾಗೃತಿಯಾಗಿರಲಿ ಇರಲಿಲ್ಲ. ನಾನು ಕ್ರಿಕೆಟ್ ಆಡುವ ಹೊತ್ತಿಗೆ ಅವರು ನಿವೃತ್ತರಾಗಿದ್ದರು. ವಿಜಯ ಮಂಜ್ರೇಕರ ಮಗ ಎಂಬ ಕಾರಣಕ್ಕೆ ನನಗೆ ವಿಶೇಷ ಮರ್ಯಾದೆ ನೀಡಿದರೆ ಆಗುತ್ತಿರಲಿಲ್ಲ. ‘ಅಪ್ಪನ ಮುಖ ನೋಡಿ ಮಣೆ ಹಾಕಬೇಡಿ’ ಎಂದು ಮುಲಾಜಿಲ್ಲದೇ ಹೇಳುತ್ತಿದ್ದರು. ಈಗ ಯಾರಾದರೂ ಅವರ ತಂದೆ ಬಗ್ಗೆ ಪ್ರಶ್ನಿಸಿದರೆ,
‘ಹೌದು, ನನ್ನ ತಂದೆ ಕ್ರಿಕೆಟರ್ ಎಂಬುದಷ್ಟೇ ಗೊತ್ತು. ಅವರ ಬಗ್ಗೆ ನನಗಿಂತ ಬೇರೆಯವರಿಗೇ ಜಾಸ್ತಿ ಗೊತ್ತು’ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ.
ಹಾಗಂತ ತಂದೆ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಅವರೊಬ್ಬ ಮಹಾನ್ ಕ್ರಿಕೆಟರ್ ಹಾಗೂ ತಾನು ಅವರ ಮಗ ಎಂಬ ಕಾರಣಕ್ಕೆ ಎಲ್ಲಿಲ್ಲದ ಸ್ಕೋಪು ಹಾಗೂ ಮಾವಿನ ತೋರಣ ಸಿಕ್ಕಿಸಿಕೊಳ್ಳಬಾರದು ಎಂಬುದು ಅವರ ನಿಲುವು. ‘ ಒಂದು ವೇಳೆ ಮಂಜ್ರೇಕರ
ಅವರ ಮಗ ಆಗದಿದ್ದರೆ ಅಥವಾ ಮಂಜ್ರೇಕರ ಎಂಬ ಅಡ್ಡ ಹೆಸರು ಅಂಟಿಕೊಳ್ಳದಿದ್ದರೆ, ನನ್ನ ಬದುಕಿನ ಗತಿ ಇದಕ್ಕಿಂತ ಚೆನ್ನಾಗಿರುತ್ತಿತ್ತೋ ಇಲ್ಲವೋ ಗೊತ್ತಿಲ್ಲ . ಆದರೆ ಹೀಗಂತೂ ಇರದೇ, ಇನ್ನೂ ಭಿನ್ನವಾಗಿರುತ್ತಿತ್ತು’ ಎಂದು ಬರೆದುಕೊಂಡಿದ್ದಾರೆ.
ಅಪ್ಪನ ಹೆಸರಿನ ಅಡಿಯಲ್ಲಿ ಬೆಳೆಯೋದು ಬಹಳ ಕಷ್ಟ. ಶ್ರೀಮಂತ, ಜನಪ್ರಿಯ, ಪ್ರಸಿದ್ಧ ಅಪ್ಪನ ಮಗನಾಗಿ ಸ್ವಂತ ವ್ಯಕ್ತಿತ್ವ ರೂಪಿಸಿ ಕೊಳ್ಳುವುದು ಸುಲಭವಲ್ಲ. ಹೆಜ್ಜೆ ಹೆಜ್ಜೆಗೆ ಜನ ನಿಮ್ಮನ್ನು ಗುರುತಿಸುತ್ತಾರೆ. ನಿಮ್ಮನ್ನು ನಿಮ್ಮ ತಂದೆಯ ಜತೆ ಹೋಲಿಸುತ್ತಾರೆ. ಅವರು ಪ್ರತಿಪಾದಿಸಿದ ವಿಚಾರಧಾರೆಗಳನ್ನು ನೀವು ಪಾಲಿಸಿಬೇಕೆಂದು ಜನ ಬಯಸುತ್ತಾರೆ. ಅವರಿಗಿಂತ ತುಸು ಭಿನ್ನಹಾದಿ ತುಳಿದರೆ, ತಂದೆಯ ವಿರುದ್ಧ ತಿರುಗಿ ಬಿದ್ದವ, ಬಂಡಾಯ ಬಾವುಟ ಹಾರಿಸಿದವ ಎಂದೆಲ್ಲ ಹಣೆಪಟ್ಟಿ ಅಂಟಿಸಿ ಬಿಡುತ್ತಾರೆ.
ಎಂಥ ವಿಚಿತ್ರವೆಂದರೆ, ನಿಮ್ಮ ತಂದೆ ಸಸ್ಯಾಹಾರಿ ಪ್ರತಿಪಾದಕರಾದರೆ, ನಿಮಗೆ ಅವರ ವಿಚಾರ, ಹೋರಾಟ ಹಾಗೂ ಸಿದ್ಧಾಂತಗಳು ಇಷ್ಟವಾಗುವುದೋ, ಇಲ್ಲವೋ, ನೀವು ಅವರ ತತ್ತ್ವವನ್ನು ಒಪ್ಪಿಕೊಳ್ಳಬೇಕು. ಒಂದು ವೇಳೆ ನೀವು ಅವರ ಸಿದ್ಧಾಂತವನ್ನು ಪ್ರಶ್ನಿಸಿದರೆ ಅಥವಾ ಮಾಂಸಾಹಾರ ಪ್ರತಿಪಾದಕರಾದರೆ, ಮುಗಿದೇ ಹೋಯಿತು. ‘ಎಂಥವರ ಹೊಟ್ಟೆಯಲ್ಲಿ ಎಂಥ ಚಾಂಡಾಳ ಹುಟ್ಟಿದ್ದಾನೆ ? ತಂದೆಗೇ ಸೆಡ್ಡು ಹೊಡೆಯುವಷ್ಟು ಅಽಕಪ್ರಸಂಗತನವಾ? ತಂದೆಯನ್ನೇ ಧಿಕ್ಕರಿಸಿದ ಮಗ’ ಎಂದೆಲ್ಲ ಹೋದಲ್ಲಿ ಬಂದಲ್ಲಿ ಹಳಿಯುತ್ತಾರೆ, ಚುಚ್ಚುಮಾತುಗಳನ್ನು ಹೇಳುತ್ತಾರೆ. ತಂದೆಯ ವಿಚಾರಗಳನ್ನು ಕುರುಡಾಗಿ ಅನುಸರಿಸಬೇಕು. ಸ್ವಲ್ಪ ಪ್ರಶ್ನಿಸಿದರೂ ಟೀಕೆ ತಪ್ಪಿದ್ದಲ್ಲ. ತಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರೆ, ಮಗನೂ ಅದೇ ಪಕ್ಷದಲ್ಲಿರಬೇಕು, ಆತನಿಗೆ ಆ ಪಕ್ಷದ ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲದಿದ್ದರೂ ! ಇಲ್ಲದಿದ್ದರೆ ಅಪ್ಪ-ಮಗನಿಗೆ ಸರಿಯಿಲ್ಲ, ಸದಾ ವಾದ-ವಿವಾದದಲ್ಲೇ ಮುಳುಗುತ್ತಾರೆ ಎಂದೆಲ್ಲ ಸುದ್ದಿ ಹಬ್ಬಿಸುತ್ತಾರೆ.
ಸಂಜಯ ಮಂಜ್ರೇಕರ ಸೆಂಚುರಿ ಹೊಡೆದಾಗ, ‘ವಿಜಯ ಮಂಜ್ರೇಕರ ಸಹ ಇದೇ ರೀತಿ, ಇದೇ ಮೈದಾನದಲ್ಲಿ ಸೆಂಚುರಿ ಹೊಡೆದಿದ್ದರು’ ಎಂದು ಬರೆದಿದ್ದರಂತೆ. ಅವರು ಔಟಾದಾಗಲೂ, ಅಪ್ಪನ ಥರಾನೇ ಸ್ಟೈಲಿಶ್ ಬ್ಯಾಟ್ಸಮನ್ ಎಂದು ವೀಕ್ಷಕ ವಿವರಣಕಾರರು ಕಾಮೆಂಟ್ ಮಾಡುತ್ತಿದ್ದರಂತೆ. ‘ನಾನು ನನ್ನ ತಂದೆಯವರು ಕ್ರಿಕೆಟ್ ಆಡಿದ್ದನ್ನೇ ನೋಡಿಲ್ಲ. ನಾವು ಆಡುವ ಹೊತ್ತಿಗೆ ಅವರು ರಿಟೈರ್ ಆಗಿ ಎಷ್ಟೋ
ವರ್ಷಗಳಾಗಿದ್ದವು. ನಾನು ಕ್ರಿಕೆಟ್ ಆಡುವುದು ಅವರಿಗೆ ಗೊತ್ತೇ ಇರಲಿಲ್ಲ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಹೊತ್ತಿಗೆ ಅವರು ನಿಧನರಾಗಿದ್ದರು.
ನನ್ನ ತಂದೆ ಗ್ರೇಟ್ ಕ್ರಿಕೆಟರ್ ಆಗಿರಬಹುದು. ಆದರೆ ನನ್ನ ಕ್ರಿಕೆಟ್ ಜೀವನದಲ್ಲಿ ಅವರ ಕೊಡುಗೆ ಏನೂ ಇಲ್ಲ. ಅವರ ರಕ್ತವನ್ನು ನಾನು
ಹಂಚಿಕೊಂಡಿದ್ದೇನೆ ಎಂಬುದನ್ನು ಬಿಟ್ಟರೆ. ಆದರೆ ಅವರ ಸರ್ ನೇಮ್ ಇದೆಯಲ್ಲ, ಅದೇ ನನಗೆ ಹೊರೆಯಾಯಿತು. ನನಗೆ ನಾನಾಗಿ ಬೆಳೆಯಲು, ವ್ಯಕ್ತಿತ್ವ ರೂಪಿಸಿಕೊಳ್ಳಲು ಆಗಲೇ ಇಲ್ಲ. ನನ್ನ ಸಾಧನೆಗೆ ಎಷ್ಟೆಂದರೂ ಯಾರ ಮಗ ಅನ್ನೋರು. ಡಬಲ್ ಸೆಂಚುರಿ ಹೊಡೆದಾಗ ವಿಜಯ ಮಂಜ್ರೇಕರ ಅಪರಾವತರ ಅನ್ನೋರು. ನಾನು ಟೆಸ್ಟ್‌ಗೆ ಪದಾರ್ಪಣೆ ಮಾಡಿದಾಗ, ಕ್ರಿಕೆಟ್ ಆಟಗಾರನ ಹೊಟ್ಟೆಯಲ್ಲಿ ಟೆನಿಸ್‌ಪಟು ಹುಟ್ಟುವುದಿಲ್ಲ ಎಂದು ಬರೆದಿದ್ದರು’ ಎಂದು ಸೆಲಬ್ರಿಟಿ ತಂದೆಯ ಮಗನಾಗಿ ಹುಟ್ಟುವುದರ ತಾಪತ್ರಯಗಳ ಬಗ್ಗೆ ಸಂಜಯ್ ಮಂಜ್ರೇಕರ ನಿರ್ದಾಕ್ಷಿಣ್ಯವಾಗಿ ಹೇಳಿಕೊಂಡಿದ್ದಾರೆ.
ಇಂಥದೇ ಮಾತುಗಳನ್ನು ಹಿಂದಿ ಚಿತ್ರ ನಟ ಅಮಿತಾಬ್ ಬಚ್ಚನ್ ಸಹ ಹೇಳಿಕೊಂಡಿದ್ದಾರೆ. ಅವರ ತಂದೆ ಹರಿವಂಶರಾಯ್ ಬಚ್ಚನ್ ಹಿಂದಿ ಸಾಹಿತ್ಯದ ಮೇರು ಕವಿ, ಸಾಹಿತಿ. ಹಿಂದಿ ಕವಿ ಸಮ್ಮೇಳನಗಳು ಅವರಿಲ್ಲದೇ ನಡೆಯುತ್ತಿರಲಿಲ್ಲ. ಸರಕಾರದ ಮೇಲೆ ಪ್ರಭಾವ ಬೀರುವಂಥ ವರ್ಚಸ್ಸು ಅವರಿಗಿತ್ತು. ಅವರು ಬರೆದಿದ್ದನ್ನು ವಿಮರ್ಶಕರು ಗಂಭೀರವಾಗಿ ಪರಿಗಣಿಸುತ್ತಿದ್ದರು. ಅಲ್ಲದೇ ಹರಿವಂಶರಾಯರು ಹಿಂದಿ
ಭಾಷಿಕರಲ್ಲಿ ಪ್ರತಿಷ್ಠಿತರೆಂದು ಮನ್ನಣೆ ಗಳಿಸಿದ್ದರು. ಇಂಥವರ ಮಗ ಹಿಂದಿ ಚಿತ್ರರಂಗ ಪ್ರವೇಶಿಸಿದಾಗ, ‘ಕವಿಶ್ರೇಷ್ಠರ ಮಗ ಬಣ್ಣಹಚ್ಚಿ ಸಿನಿಮಾ ನಟನಾಗಲು ಹವಣಿಸುತ್ತಿದ್ದಾನೆ’ ಎಂದು ಬರೆದಿದ್ದರಂತೆ.
ಅಮಿತಾಬ್ ಅವರನ್ನು ಹಿಂದಿ ಚಿತ್ರರಂಗದ ಮಂದಿ ‘ನೀವು ಹರಿವಂಶರಾಯರ ಮಗನಾ? ನಿಮ್ಮ ತಂದೆ ಮಹಾನ್ ಕವಿ. ಅವರ ಮಗನಾಗಿ ಈ ನಟನೆಯೆಲ್ಲ ಯಾಕೆ? ಅವರಂತೆ ನೀವೂ ಸಾಹಿತಿ ಆಗಬಹುದಲ್ಲ? ಈ ಬಣ್ಣದ ಬದುಕು ಬೇಕಾ? ಸಾಹಿತಿಗಿರುವ ಗೌರವವೇ ಬೇರೆ. ಇಂಥವರ ಹೊಟ್ಟೆಯಲ್ಲಿ ಹುಟ್ಟಿದವರಾಗಿ ಈ ವೇಷ ಬಿಟ್ಟುಬಿಡಿ’ ಎಂದು ಹೇಳುತ್ತಿದ್ದರಂತೆ. ಸಿನಿಮಾರಂಗ ಸೇರಿ ಐದಾರು ವರ್ಷಗಳಾದರೂ ಈ ರೀತಿಯ ಪ್ರಶ್ನೆಗಳನ್ನು ಬಚ್ಚನ್ ಎದುರಿಸಿದರು. ಬಚ್ಚನ್ ಎಂಬ ಹೆಸರು ಕೇಳುತ್ತಿದ್ದಂತೆ, ‘ನೀವು ಹರಿವಂಶರಾಯ ಬಚ್ಚನ್‌ಗೆ ಏನಾಗಬೇಕು? ನೀವು ಅವರ ಮಗನಾ? ನೀವೇಕೆ ಈ ರಂಗಕ್ಕೆ ಬಂದಿರಿ? ನೀವೇಕೆ ತಂದೆಯಂತೆ ಸಾಹಿತಿಯಾಗಲಿಲ್ಲ, ಕವಿಯಾಗಲಿಲ್ಲ?’ ಎಂದು ಕೇಳುತ್ತಿದ್ದರು.
ಅಮಿತಾಬ್‌ಗೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗುತ್ತಿತ್ತು. ಆದರೆ ಅವರು ತಂದೆಯ ವೃತ್ತಿಯನ್ನು ಹಿಡಿಯಲಿಲ್ಲ. ಮಂಜ್ರೇಕರ ಬರೆಯುತ್ತಾರೆ-‘ಪಿತೃವಾಕ್ಯಪರಿಪಾಲಕನಾದ ರಾಮನೂ ಇದ್ದಾನೆ. ತಂದೆಯ ಆದೇಶ ಧಿಕ್ಕರಿಸಿದ ಪ್ರಹ್ಲಾದನೂ ಇದ್ದಾನೆ. ತಂದೆಯ ಹಾದಿ ತುಳಿಯದಿರುವುದನ್ನು ಅಪರಾಧ ಎಂಬ ಭಾವನೆ ಈಗಲೂ ಕೆಲವರಲ್ಲಿದೆ. ಸಿಲಬ್ರಿಟಿ ತಂದೆಯ ಮಗನಾಗಿ ಹುಟ್ಟಿದರೆ, ಕೆಲವೊಂದು
ಲಾಭಗಳಿವೆ. ಹಾಗೆಯೇ ಅದರ ಜತೆಗೇ ಒಂದಷ್ಟು ಬ್ಯಾಗೇಜ್ ಗಳನ್ನೂ ಹೊತ್ತುಕೊಳ್ಳಲು ಸಿದ್ಧರಿರಬೇಕು. ಬಹುತೇಕ ಅತಿ ಗಣ್ಯರ ಮಕ್ಕಳು ಅಪ್ಪಂದಿರ ಪ್ರಖ್ಯಾತಿ, ಜನಪ್ರಿಯತೆ ಹೊತ್ತು ಕೊಳ್ಳಲಾಗದೇ ಕುಸಿದುಹೋಗುತ್ತಾರೆ. ಅದೇ ಅವರಿಗೆ ಮುಳುವಾಗುತ್ತದೆ.’
ಸಚಿನ್ ತೆಂಡುಲ್ಕರ್, ಸುನಿಲ್ ಗಾವಸ್ಕರ್ ಮುಂತಾದ ಕ್ರಿಕೆಟ್ ಆಟಗಾರರ ಮಕ್ಕಳಾಗುವುದು ಬಹಳ ಕಷ್ಟ. ಪ್ರತಿಸಲ ಖ್ಯಾತ ಕ್ರಿಕೆಟ್ ಆಟಗಾರರ ಮಕ್ಕಳಾದವರು ಫೀಲ್ಡ್‌ಗೆ ಇಳಿದಾಗ, ಅವರ ಅಪ್ಪಂದಿರಿಗಿಂತ ಚೆನ್ನಾಗಿ ಆಡಬೇಕೆಂದು ನಿರೀಕ್ಷಿಸುತ್ತಾರೆ. ಹಂತ ಹಂತಕ್ಕೂ ಅವರನ್ನು ಅವರ ಅಪ್ಪಂದಿರಿಗೆ ಹೋಲಿಸುತ್ತಾರೆ. ತಂದೆಯ ನೆರಳಿನಿಂದ ಹೊರಬರಲು ಅವರಿಗೆ ಸಾಧ್ಯವಾಗುವುದೇ ಇಲ್ಲ. ಮಕ್ಕಳ ಎಲ್ಲ ಸಾಧನೆಗೆ ಅವರ ತಂದೆಯೇ ಮಾಪಕವಾಗುತ್ತಾರೆ, ಅವರ ತಂದೆಯಾಗಿದ್ದರೆ ಈ ರೀತಿ ಮಾಡುತ್ತಿರಲಿಲ್ಲ ಎಂಬ ಹೋಲಿಕೆ ಶುರು ವಾಗುತ್ತದೆ. ಕ್ರಮೇಣ ಮಕ್ಕಳಿಗೆ ತಂದೆ ಕೊಟ್ಟ ಹೆಸರು ಕಿರೀಟವಲ್ಲ, ಮಣಭಾರದ ಹೊರೆ ಎಂದೆನಿಸಲಾರಂಭಿಸುತ್ತದೆ.
ನನಗೆ ಇಲ್ಲಿ ನೆನಪಾಗುವುದು ಮಹಾತ್ಮಾ ಗಾಂಧಿ ಮಗ ಹರಿಲಾಲ್ ಗಾಂಧಿ. ಬಹುಶಃ ನಮ್ಮ ದೇಶದಲ್ಲಿ ಗಾಂಧೀಜಿ ಹೆಸರನ್ನು ಕೇಳದವರಿಲ್ಲ. ಅದಕ್ಕಿಂತ ಪರಿಚಿತ ಹಾಗೂ ದೊಡ್ಡ ದಾದ ಅಡ್ಡಹೆಸರೂ ಇರಲಿಕ್ಕಿಲ್ಲ. ಗಾಂಧೀಜಿ ಹಾಗೂ ಗಾಂಧಿ ಎಂಬುದು ಮನೆಮಾತು. ಗಾಂಧೀಜಿಯವರು ಕೇವಲ ಒಬ್ಬ ವ್ಯಕ್ತಿ ಅಲ್ಲ. ಅವರೊಂದು ಆದರ್ಶ. ನುಡಿದಂತೆ ನಡೆದವರು. ಈ ದೇಶದಲ್ಲಿ ಹಲವಾರು ರಾಷ್ಟ್ರಪತಿಗಳಾಗಿ ಹೋಗಿದ್ದಾರೆ. ‘ರಾಷ್ಟ್ರಪಿತ’ ಅವರೊಬ್ಬರೇ! ಅಂಥ ರಾಷ್ಟ್ರಪಿತನ ನಾಲ್ವರು ಗಂಡು ಮಕ್ಕಳಲ್ಲಿ ಜ್ಯೇಷ್ಠಪುತ್ರನೇ ಹರಿಲಾಲ. ಓದು, ಬರಹ ದಲ್ಲಿ ಬುದ್ಧಿವಂತ. ಗಾಂಧೀಜಿ ಹೆಸರು ಇಡೀ ದೇಶವನ್ನು ವ್ಯಾಪಿಸಿದ ಸಂದರ್ಭದಲ್ಲಿ ಹರಿಲಾಲ ತನ್ನ ಬದುಕು ಕಟ್ಟಿಕೊಳ್ಳಲು ನೋಡುತ್ತಿದ್ದ.
ಎಲ್ಲ ಕಡೆಗಳಲ್ಲೂ ಗಾಂಧಿಮಂತ್ರ. ಸ್ವಾಭಾವಿಕವಾಗಿ ಗಾಂಧಿ ಮಕ್ಕಳೆಂಬ ಕಾರಣ ದಿಂದ ಹರಿಲಾಲನಿಗೆ ಎಲ್ಲೆಡೆ ಪ್ರಾಮುಖ್ಯ ಸಿಗುತ್ತಿತ್ತು. ಹರಿಲಾಲನೂ ಗಾಂಧಿಯಂತೆ ಕಠೋರವಾದಿ. ತನ್ನ ತಂದೆ ವಿರುದ್ಧವೇ ಮಾತಾಡಲಾರಂಭಿಸಿದ! ತಂದೆಯ ತಪ್ಪುಗಳನ್ನೇ ಎತ್ತಿ ತೋರಿಸಲಾರಂಭಿಸಿದ. ಸಹಜವಾಗಿ ಈ ಮಾತುಗಳಿಗೆ ಪ್ರಾಮುಖ್ಯ ಸಿಗಲಾರಂಭಿಸಿತು. ಗಾಂಧಿ ಮಗನ ಬಾಯಲ್ಲಿ ಇಂಥ ಮಾತು ಗಳಾ ಎಂದು ಜನ ಕೇಳಲಾರಂಭಿಸಿದರು. ತನ್ನ ತಂದೆಯಂತೆ ಜನಪ್ರಿಯನಾಗಬೇಕೆಂದರೆ ಅವನ ವಿರುದ್ಧವೇ ಮಾತಾಡಬೇಕು, ಆಗ ದಿಢೀರ್ ಪ್ರಸಿದ್ಧನಾಗಬಹುದೆಂದು ಅವನಿಗೆ ಅನಿಸಲಾರಂಭಿಸಿತು. ಹೀಗಾಗಿ ಅಪ್ಪನ ವಿರುದ್ಧ ಭಾಷಣ ಮಾಡಲಾರಂಭಿಸಿದ.
ಗಾಂಧಿ ತತ್ತ್ವಗಳನ್ನು ವಿರೋಧಿಸಿದರೆ, ಅದನ್ನೂ ಇಷ್ಟಪಡುವವರ ದೊಡ್ಡ ಗುಂಪಿದೆ ಎಂಬುದು ಅವನಿಗೆ ಮನದಟ್ಟಾಯಿತು. ಹೀಗಾಗಿ ಗಾಂಧಿ ತತ್ತ್ವಗಳ ವಿರುದ್ಧ ಪ್ರತಿಪಾದಿಸಲಾರಂಭಿಸಿದ. ಪರಿಣಾಮವಾಗಿ ಕುಡಿಯಲಾರಂಭಿಸಿದ. ಕುಡಿದು ಕುಡಿದು ರಸ್ತೆಯಲ್ಲಿ ಬಿದ್ದ. ಅದು ಪತ್ರಿಕೆಗಳಲ್ಲಿ ಪ್ರಕಟವಾಗಿ ದೊಡ್ಡ ಸುದ್ದಿಯಾಗಿ ಗಾಂಧೀಜಿಗೆ ಭಾರೀ ಮುಖಭಂಗವಾಯಿತು. ಸಾರ್ವಜನಿಕವಾಗಿ ಕುಡಿದು ಅನುಚಿತವಾಗಿ
ವರ್ತಿಸಿದ ಆಪಾದನೆ ವಿರುದ್ಧ ಕೋರ್ಟ್ ಹರಿಲಾಲನಿಗೆ ದಂಡ ವಿಧಿಸಿತು. ಹರಿಲಾಲ ತನ್ನ ತಂದೆಯ ವಿರೋಧಿಗಳಿಗೆ ‘ದಾಳ’ವಾದ. ತನ್ನ ತಂದೆಯ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಲಾರಂಭಿಸಿದ. ವೇಶ್ಯೆಯರ ಸಂಗಕ್ಕೆ ಬಿದ್ದ.
ಇಸ್ಲಾಮಿಗೆ ಮತಾಂತರವಾಗಿ ‘ಅಬ್ದುಲ್ಲಾ ಗಾಂಧಿ’ ಆದ. ಗಾಂಧಿ ಹೆಸರು ಬಳಸಿಕೊಂಡು ಉದ್ಯಮಿಗಳು, ಶ್ರೀಮಂತರಿಂದ ಹಫ್ತಾ ವಸೂಲಿ ಮಾಡಲಾರಂಭಿಸಿದ. ಗಾಂಧೀಜಿಯವರಂತೆ ಹೆಸರು ಮಾಡಲಾಗಲಿಲ್ಲ. ಅವರ ಚಿಂತನೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಜನಪ್ರಿಯ ನಾಗಬಹುದು ಎಂಬುದು ಅವನಿಗೆ ಅನಿಸಿದ್ದರಿಂದ ಅವರು ಪ್ರತಿಪಾದಿಸುವ ಎಲ್ಲ ತತ್ತ್ವ, ಆದರ್ಶಗಳಿಗೆ ಪ್ರತಿಯಾಗಿ ವರ್ತಿಸಲಾರಂಭಿಸಿದ.
ಗಾಂಧಿ ಒಂದು ದಿಕ್ಕಾದರೆ, ಹರಿಲಾಲನೇ ಮತ್ತೊಂದು. ಗಾಂಧಿ ಎಂಬ ಹೆಸರೇ ಅವನಿಗೆ ಮುಳುವಾಯಿತು. ಆ ಹೆಸರಿನ ಭಾರದಲ್ಲೇ ಆತ ಜರ್ಝರಿತನಾದ. ದೊಡ್ಡವರ ಮಕ್ಕಳಾಗಿ ಹುಟ್ಟುವುದು ಬಹಳ ಕಷ್ಟ. ತಂದೆಯ ನೆರಳು ಕತ್ತಲಾಗಿ ಕಾಡಬಹುದು. ತಂದೆಯ ವಿಖ್ಯಾತಿಯೇ ವಿಷವಾಗಬಹುದು. ಸಂಜಯ ಮಂಜ್ರೇಕರ ಎಲ್ಲ ಸಾಮರ್ಥ್ಯ, ಅರ್ಹತೆಗಳಿದ್ದೂ ಅಪರಿಪೂರ್ಣ ಆಟಗಾರನಾಗಿಯೇ ಉಳಿದು ಬಿಟ್ಟ. ಅವನ ಕ್ರಿಕೆಟ್ ವೃತ್ತಿ ಜೀವನ ಹಠಾತ್ ಕೊನೆಗೊಂಡಿತು.