Sunday, 15th December 2024

ಮಕ್ಕಳ ಕಲರವ ಮರಳಿ ಮಾರ್ದನಿಸಲಿ

ಅಭಿಮತ

ಭಾರತಿ ಎ ಕೊಪ್ಪ

ಪುಟ್ಟಪುಟ್ಟ ಹೆಜ್ಜೆಯನಿಟ್ಟು ಹೊಸ ಬ್ಯಾಗು, ಹೊಸ ಛತ್ರಿಯನು ಹಿಡಿದು ಮೊದಲ ದಿನ ಶಾಲೆಗೆ ಬಂದ ಪುಟಾಣಿ ವಿದ್ಯಾರ್ಥಿ ಗಳನ್ನು ಸ್ವಾಗತಿಸುವ ಶಿಕ್ಷಕರ ಸಂಭ್ರಮ ಅವರ್ಣನೀಯ. ಕುಟುಂಬದ ಸದಸ್ಯರೊಂದಿಗೆ ಸದಾ ಕಾಲಕಳೆಯುತ್ತಿದ್ದ ಮಗು, ಮೊದಲ ಬಾರಿ ಶಾಲೆಗೆ ಬಂದಾಗ ಬಿಟ್ಟೂ ಬಿಡದೆಯೇ ಎಂದು ಅಳುವುದೂ ಉಂಟು.

ಅಳುವ ತನ್ನ ಪುಟಾಣಿ ವಿದ್ಯಾರ್ಥಿಯ ಮೇಲೆ ಒಂದಿನಿತೂ ಅಸಹನೆ ತೋರದೆ, ಶಾಲಾ ಪರಿಸರದತ್ತ ಆಕರ್ಷಿಸಿ, ಆ ಮಗುವಿನ
ಮೊಗದಲ್ಲಿ ನಗು ಮೂಡಿಸಿ, ಸಾರ್ಥಕ ಭಾವ ತಳೆಯುವವರೇ ಶಿಕ್ಷಕರು. ಮುಗ್ಧ ಮಗುವಿನ ನಗುವಿನೊಂದಿಗೆ ಶಾಲೆಯೊಳಗೆ
ಪ್ರವೇಶಿಸಿ, ಬಾಲ್ಯ ಸಹಜ ತುಂಟತನ ಮಾಡುವ ಪುಟಾಣಿಗಳನ್ನು ತಿದ್ದಿ ತೀಡುತ್ತಾ, ಅವರಲ್ಲಿ ಅನೇಕ ಕ್ರಿಯಾಶೀಲ ಚಟುವಟಿಕೆ ಗಳನ್ನು ಮಾಡಿಸುವ ಮೂಲಕ ಸೃಜನಶೀಲತೆಯನ್ನು ಬೆಳೆಸುವ ತುಡಿತ ನಮ್ಮ ಶಿಕ್ಷಕರದ್ದಾಗಿದೆ.

ಆದರೆ ನಿರಂತರವಾಗಿ ಈ ಎರಡು ಶೈಕ್ಷಣಿಕ ವರ್ಷದ ಶಾಲಾರಂಭದ ಸಂಭ್ರಮದ ಸುದಿನಗಳನ್ನು ಕರೋನಾ ಕಸಿದುಕೊಂಡಿರು ವುದು ದಿಟವಾಗಿಯೂ ಖೇದಕರ ಸಂಗತಿ.ಶಿಕ್ಷಕ ಮತ್ತು ಎಳೆಯ ವಿದ್ಯಾರ್ಥಿಗಳ ನಡುವೆ ಇರುವ ಭಾವನಾತ್ಮಕ ಸಂಬಂಧ ಬಲು
ದೊಡ್ಡದು. ಹಗಲಿನ ಅತಿ ಹೆಚ್ಚು ಸಮಯವನ್ನು ಶಿಕ್ಷಕರೊಂದಿಗೆ ಕಳೆಯುವ ಮಗುವು ತನ್ನೆ ಭಾವನೆಗಳನ್ನು, ಮನೆಯ
ವಿಚಾರವನ್ನು, ಓರಗೆಯವರ ಸಮಾಚಾರವನ್ನು!

ಹೀಗೆ ಎಲ್ಲವನ್ನೂ ಶಿಕ್ಷಕರೊಂದಿಗೆ ಹಂಚಿಕೊಳ್ಳುವ ಸಂಭ್ರಮವೇ ಬೇರೆ.ಹಾಗೆಯೇ ಶಾಲೆಯಲ್ಲಿ ನಡೆದ ಎಲ್ಲಾ ವಿಷಯಗಳನ್ನು ಅಮ್ಮನೊಂದಿಗೆ ಹಂಚಿಕೊಳ್ಳುವ ಪರಿ ವರ್ಣಿಸಲು ಅಸಾಧ್ಯ. ಆದರೆ ಕರೋನಾ ಸಂಕಟದಿಂದ ಶಿಕ್ಷಕ – ವಿದ್ಯಾರ್ಥಿಗಳ ಬಾಂಧವ್ಯಕ್ಕೆ ಅಲ್ಪವಿರಾಮ ಬಿದ್ದಿದೆ. ಆದರೂ ಶಿಕ್ಷಕರು ಮಕ್ಕಳನ್ನು ತಲುಪುವ ನವನವೀನ ವಿಧಾನಗಳತ್ತ ಮುಖ ಮಾಡು ತ್ತಿದ್ದಾರೆ. ಆಧುನಿಕ ಆಂಡ್ರಾಯ್ಡ ಸೆಲ್ ಫೋನ್‌ಗಳನ್ನು ಹೊಂದಿರುವಂಥ ಮಕ್ಕಳನ್ನು ತಲುಪಲು ಶಿಕ್ಷಕರು ಒಂದಿಷ್ಟು ತಂತ್ರಜ್ಞಾನ ಆಧಾರಿತ ಶಿಕ್ಷಣದ ಮೂಲಕ ಪ್ರಯತ್ನ ಪಡುತ್ತಿದ್ದಾರೆ.

ಯೂಟ್ಯೂಬ್ ಪಾಠಗಳು, ವಿಡಿಯೋ ಪಾಠ, ವೆಬಿನಾರ್ ಮೂಲಕ ಪಾಠ, ಕಾನರೆನ್ಸ್ ಕಾಲ್ ಮೂಲಕ ಪಾಠ, ಹೀಗೆ ಹತ್ತು ಹಲವು
ವಿಧಾನಗಳು ಶಿಕ್ಷಣದ ನಿರಂತರತೆಯನ್ನು ಕಾಪಾಡುವಲ್ಲಿ ಸಂಜೀವಿನಿಯಂತೆ ಬಳಕೆಯಾಗುತ್ತಿವೆ. ಆದರೆ ನೆಟ್‌ವರ್ಕ್
ಲಭ್ಯತೆಯು ಕಡಿಮೆ ಇರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸೆಲ್-ನ್‌ನನ್ನು ಬಳಸದಿರುವ ಪೋಷಕರ ಮನೆಯಲ್ಲಿನ ವಿದ್ಯಾರ್ಥಿಗಳನ್ನು ತಲುಪುವುದು ಸವಾಲಾಗಿಯೇ ಉಳಿದಿದೆ ಎಂಬುದು ಬೇಸರದ ಸಂಗತಿ. ಕಳೆದ ವರ್ಷ ವಿದ್ಯಾಗಮ ಎಂಬ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ತಲುಪುವ ಪ್ರಯತ್ನ ಮಾಡಲಾಗಿತ್ತಾದರೂ ಕರೋನಾದ ಅಟ್ಟಹಾಸ ಹೆಚ್ಚಾದ ಕಾರಣ ಆ ಪ್ರಯತ್ನವೂ ಪ್ರಯಾಸವಾಯಿತು.

ಯಾವುದೇ ತಂತ್ರಜ್ಞಾನದ ವ್ಯವಸ್ಥೆಯೇ ಇಲ್ಲದ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಶಿಕ್ಷಕರು ವಿಭಿನ್ನವಾಗಿ ಯೋಚಿಸುವ ತುಡಿತ ದಲ್ಲಿದ್ದಾರೆ ಎಂದರೆ ತಪ್ಪಾಗಲಾರದು. ಭಾರತದ ಪುರಾತನ ಜನಮನದ ಜೀವನಾಡಿಯಾದ ಅಂಚೆ ವ್ಯವಸ್ಥೆ ಪತ್ರ ಬರೆಯುವುದರ ಮೂಲಕ ಪಾಠ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಯೋಚನೆಯ ಯೋಜನೆಯು ಕೂಡ ಈ ಸಂದಿಗ್ಧತೆಗೆ ಪರ್ಯಾಯವಾಗ ಬಹುದಷ್ಟೇ ಹೊರತು ಸೂಕ್ತ ಪರಿಹಾರವಾಗಲಾರದು.

ಸಮುದಾಯದ ಜನರು ಶಿಕ್ಷಣ ವ್ಯವಸ್ಥೆಯೊಂದಿಗೆ ಹೆಜ್ಜೆ ಹಾಕುವಂತಾದರೆ, ಕರೋನಾದ ನಡುವೆಯೂ ಕಲಿಕಾ ನಿರಂತರತೆ ಯನ್ನು ಕಾಪಾಡಬಹುದು. ಶಿಕ್ಷಕರು ಒಂದಿನಿತು ಪಾಠಕ್ಕೆ ಸಂಬಂಧಿಸಿದ ಅಭ್ಯಾಸ ಪುಸ್ತಕ, ಬರವಣಿಗೆಗಳನ್ನು ತಯಾರಿಸಿಕೊಟ್ಟು, ಗ್ರಾಮದಲ್ಲಿನ ಆಸಕ್ತ ಜನರ ಮೂಲಕ, ಅವರ ನೆರೆಹೊರೆಯ ವಿದ್ಯಾರ್ಥಿಗಳಿಗೆ ಅದನ್ನು ತಲುಪಿಸಿದರೆ, ನಂತರ ಮಕ್ಕಳ ಬರವಣಿಗೆಯನ್ನು ಮೌಲ್ಯಮಾಪನಕ್ಕಾಗಿ ಮತ್ತೆ ಅವರಿಂದಲೇ ತರಿಸಿಕೊಂಡು ಒಂದು ಸುರುಳಿಯಾಕಾರದ ಕಲಿಕೆಗೆ ಪ್ರಯತ್ನಿಸಿ ದರೆ, ಗ್ರಾಮದ ಜನರು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯದಲ್ಲಿ ಕೊಂಡಿಯಾಗಿ ನಿಲ್ಲಬಹುದಾಗಿದೆ.

ಮಕ್ಕಳ ಶಿಕ್ಷಣವು ಕರೋನಾದ ಕರಿನೆರಳಿನಲ್ಲಿ ಕುಂದಬಾರದು ಎಂಬ ಆಶಯಕ್ಕೆ ಇಡೀ ಸಮುದಾಯವು ಒಟ್ಟಾಗಿ ಸ್ಪಂದಿಸ ಬೇಕಿದೆ. ಭವಿಷ್ಯದ ದೇಶವನ್ನು ಕಟ್ಟುವ ಕುಡಿಗಳನ್ನು ಆತ್ಮವಿಶ್ವಾಸದಿಂದ ಪುಟಿದೇಳುವಂತೆ ಮನೋಬಲವನ್ನ ತುಂಬುವ ಕೆಲಸವು ಹಿರಿಯರಿಂದಾಗಬೇಕಿದೆ. ಎಷ್ಟೇ ಆಧುನಿಕ ತಂತ್ರಜ್ಞಾನಗಳು ಶೈಕ್ಷಣಿಕ ರಂಗದಲ್ಲಿ ಬಂದರೂ, ಶಿಕ್ಷಕ ವಿದ್ಯಾರ್ಥಿಗಳ ಮುಖಾಮುಖಿ ನಡೆಯುವ ಸಂಹವನವು ಆತ್ಮೀಯ ಮನೋಭೂಮಿಕೆಗಳಿಗೆ ಸಂವಾದಿಯಾಗಲಾರದು. ಕರೋನಾದ ಕಂಟಕ ಕಳೆದು, ವಿದ್ಯಾಮಂದಿರದಲ್ಲಿ ಮಕ್ಕಳ ಕಲರವವು ಮರಳಿ ಮಾರ್ದನಿಸಲಿ, ಶಿಕ್ಷಕರ ಕ್ರಿಯಾಶೀಲತೆಯ ಬಿಂಬಗಳು ಕಾಣುವ ಆ ದಿನಗಳು ಮತ್ತೆ ಮರುಕಳಿಸಲಿ ಎಂಬ ಆಶಯವು ಸರ್ವರzಗಿದೆ.