Thursday, 14th November 2024

ಬೇರೆ ಬೇಕಿಲ್ಲ, ಸಿಂಹ ಕೂತಿದ್ದೇ ಆಗಲಿದೆ ಸಿಂಹಾಸನ !

ಪರಿಶ್ರಮ 

ಪ್ರದೀಪ್‌ ಈಶ್ವರ್‌

parishramamd@gmail.com

ಒಬ್ಬರಲ್ಲ ಇಬ್ಬರಲ್ಲ ಬದುಕಿನ ಯಶಸ್ಸಿನ ಸಾಮ್ರಾಜ್ಯವನ್ನ ಕಂಡ ಎಷ್ಟೋ ಮಂದಿ ಸೋಲನ್ನ ದಾಟಿಯೇ ಬಂದವರು. ಗೆಲುವಿಗೆ ಸನಿಹ ವಾದವರು, ಸೋಲು ಬರಬಾರದು ಎಂದು ನಿರೀಕ್ಷೆ ಮಾಡಬೇಡಿ. ಸೋಲು ಬಂದೆ ಬರುತ್ತದೆ. ಗೆಲುವಿನ ಮನೆಗೆ ಸೋಲೇ ಹೊಸ್ತಿಲು. ಆ ಹೊಸ್ತಿಲು ದಾಟಿದರೇನೇ ಗೆಲುವಿನ ಮನೆಯನ್ನ ಪ್ರವೇಶಿಸಿ, ಆರಾಮಾಗಿ ಜೀವಿಸಲು ಸಾಧ್ಯ.

ಸೋಲು, ಗೆಲುವು, ಹತಾಶೆ, ಒಂಟಿತನ, ಬೇಸರದ ನಡುವೆಯೂ ಏನೋ ಸಾಧಿಸಬೇಕೆಂಬ ಉತ್ಸಾಹ. ನಾಲ್ಕು ಜನ ಮೆಚ್ಚುವಂತೆ ಬದುಕಬೇಕೆಂಬ ಮಹದಾಸೆ. ಏನೂ ಸಾಧಿಸಲಾಗದೇ ಉಳಿದು ಹೋಗುವ ಅಸಹಾಯಕತೆ. ಸೋಲಿಗೆ ಹೆದರಿ ಕಂಗಾಲಾಗಿ ಬಿಡುವ ಮನಃಸ್ಥಿತಿ. ಎಲ್ಲವು ಬದುಕಿನ ಪಯಣ ದಲ್ಲಿ ಸಹಜ. ಅನಿವಾರ್ಯ ಕೂಡ.

ಸೋಲಿನ ಅನುಭವವಾಗದೇ ಗೆಲುವನ್ನ ಕಂಡವರು ತೀರ ಕಡಿಮೆ. ಗೆಲುವಿನ ಪಟ್ಟಕ್ಕೆ ಪ್ರಯತ್ನ ಪಡುವವನು ಸೋಲಿನ ತೀವ್ರತೆಯನ್ನು ಎದುರಿಸಲು ಸಿದ್ಧರಿರಬೇಕು. ಬಹಳಷ್ಟು ಜನರ ಜೀವನದಲ್ಲಿ ಗೆಲುವು ಅಪ್ಪಿಕೊಳ್ಳುವ ಮುನ್ನ ಸೋಲು ಚುಂಬನ ಕೊಟ್ಟು ಹೊರಟು ಬಿಡುತ್ತದೆ. ಸೋಲಿನ ಹೊಸ್ತಿಲು ದಾಟಿದರೇನೇ, ಗೆಲುವಿನ ಅರಮನೆ ಸಿಗುವುದು ಎಂಬ ಸತ್ಯ ಅರಿಯದೆ, ಚಿಕ್ಕ ಸೋಲಿಗೆ ಹೆದರಿ ಪ್ರಯತ್ನವನ್ನೇ ನಿಲ್ಲಿಸಿಬಿಡುತ್ತಾರೆ.

ಆಕಾಶದೆತ್ತರಕ್ಕೆ ಬೆಳೆಯಬೇಕಾದವನನ್ನು ಅರ್ಧ ದಾರಿಯ ಸೋಲು ನಿಲ್ಲಿಸಿಬಿಡುತ್ತೆ. ಎಷ್ಟೇ ಕಷ್ಟವಾದರೂ ಬದುಕಿತೋರಿಸಬೇಕು. ಹಾಗೆ ನೋಡಿದರೆ ಪ್ರತಿ ಸೋಲೂ ಬದುಕನ್ನ ನೋಡುವ ದೃಷ್ಟಿಕೋನ ಬದಲಿಸಿಬಿಡುತ್ತೆ. ಜಗತ್ತಿನ ಯಾವ ವಿಶ್ವವಿದ್ಯಾಲಯವು ಕಲಿಸಲಾಗದ ಪಾಠವನ್ನ ಸೋಲು ಕಲಿಸುತ್ತದೆ. ಗೆಲುವುದೇನಿದೆ ಬಿಡಿ, ಎಲ್ಲರು ನಮ್ಮವರೇ ಎಂದೆನಿಸಿಬಿಡುತ್ತೆ. ಸೋಲಿದೆಯಲ್ಲ, ಅದು ಮಾತ್ರ ನಿಜವಾಗ್ಲೂ ನಮ್ಮವರರು ಎಂದು
ಅರ್ಥಮಾಡಿಸುತ್ತದೆ.

ಆಕಾಶಕ್ಕೆ ಏಣಿ ಹಾಕಲು ಹೊರಟವನಿಗೆ ಪಾತಾಳಕ್ಕೆ ಬಿದ್ದಾಗಲೂ ಏಳುವ ಸಾಮರ್ಥ್ಯವಿರಬೇಕು. ಸ್ವಂತಿಕೆಯನ್ನ ನಂಬುವ ತಾಕತ್ತಿರಬೇಕು. ಗೆಲ್ಲಲು ಹೊರಟ ಎಷ್ಟೋ ಮಂದಿ ಸೋಲಿಗೆ ಅಂಜಿಬಿಡುತ್ತಾರೆ. ಕಣ್ಣೀರ‍್ಹಾಕಿ ಕಣ್ಣೀ ರನ್ನೇ ನೋಯಿಸಿಬಿಡುತ್ತಾರೆ. ಸೋಲಿನ ರಸ್ತೆಯಲ್ಲಿ ನಡೆದಾಗಲೇ ಗೆಲುವಿನ ಗಮ್ಯ ತಲುಪಲು ಸಾಧ್ಯ. ಇಲ್ಲಿ ಆಕಾಶಕ್ಕೆ ಎತ್ತಿಬಿಡುವ ಅಭಿಮಾನ, ಪಾತಾಳಕ್ಕೆ ತಳ್ಳಿಬಿಡುವ ಅವಮಾನವಿರುತ್ತೆ. ಅವಶ್ಯಕತೆಗೆ ಮೀರಿ ಸಿಗುವ ಅಧಿಕಾರದ ಗೌರವ, ಅಧಿಕಾರ ಹೋದ ಮೇಲೆ ಮನೆಯ ವರಾಂಡದಲ್ಲಿರುವ ನಾಯಿಗೆ ಬೇಡವಾಗುವಷ್ಟು ಒಂಟಿತನವಿರುತ್ತೆ. ಸಂಪಾದನೆ ಜಾಸ್ತಿ ಇದ್ದಾಗ, ಅತಿಯಾಗಿ ಪ್ರೀತಿ ತೋರಿಸುವ ಸಂಬಂಧಿಕರು, ಸಂಪಾದನೆ ಕಡಿಮೆಯಾದಾಗ ಅತಿಯನ್ನ ಮಿತಿಮಾಡಿ ಪ್ರೀತಿಗೆ ಒಂದು ಗತಿ ತೋರಿಸುವ ಸಂಬಂಧಿಕರನ್ನ ನೋಡಬೇಕಾಗುತ್ತದೆ.

ಇತ್ತೀಚಿಗೆ ಎಲ್ಲರೂ ಮಾಸ್ಕ್ ಧರಿಸುವುದನ್ನ ನೋಡಿರುತ್ತೇವೆ, ಆದರೆ ಶತಮಾನಗಳಿಂದ ಸಾಕಷ್ಟು ಮಂದಿ ಮುಖವಾಡಗಳನ್ನ ಧರಿಸಿದ್ದಾರೆ. ಹೊಟ್ಟೆ ತುಂಬ ತಿಂದು ವ್ಯರ್ಥವಾಗಿ ಕಳೆದ ಸಮಯವನ್ನು, ತಿನ್ನಲು ಸಮಯವೇ ಇಲ್ಲದ ದಿನಗಳನ್ನು, ಕಣ್ಣೀರು ಹಾಕಿಸುವ ಸೋಲನ್ನು, ಕನಸಿಗೆ ಜೀವ ತುಂಬವ
ಗೆಲುವನ್ನು. ನಾವು ಬದುಕಿದರೆ ಬದುಕಿಗೆ ಅರ್ಥಬರಬೇಕು. ನಾವು ಸತ್ತರೇ, ಸಾವಿಗೆ ಪರಮಾರ್ಥವಿರಬೇಕು.

ಅರ್ಥ- ಪರಮಾರ್ಥವಿಲ್ಲದೇ ಬದುಕಿದರೆ, ಆ ಬದುಕು ವ್ಯರ್ಥವಾಗುತ್ತದೆ. ಸಹನೆಯ ಅತಿದೊಡ್ಡ ಸೈನ್ಯ, ಧೈರ್ಯವೇ ಅತಿದೊಡ್ಡ ಬಲ. ಗೆಲುವನ್ನ ಪಡೆಯಲೇಬೇಕೆಂದು ಹೊರಟವರು ಆತ್ಮವಿಶ್ವಾಸದ ಜತೆ, ಚದುರದ ಏಕಾಗ್ರತೆಯನ್ನು ಪಡೆದಿರಬೇಕು. ಅವಮಾನವಾದಾಗ ತಲೆಕೆಡಿಸಿಕೊಳ್ಳಬಾರದು.
ಹಣ್ಣು ಬಿಡುವ ಮರಕ್ಕೆ ಜನ ಕಲ್ಲು ಹೊಡೆಯುತ್ತಾರೆ. ಬೆನ್ನು ಹಿಂದೆ ಮಾತನಾಡುವವರು ನಮ್ಮ ಹಿಂದೆಯೇ ಉಳಿದುಹೋಗ್ತಾರೆ. ಕಾಲೆಳೆಯುವವರು, ಕಾಲಿನ ಕೆಳಗೆ ಉಳಿದುಬಿಡ್ತಾರೆ. ಒಂದು ಸಂಗತಿ ಸ್ಪಷ್ಟವಾಗಿ ನೆನಪಿಡಿ.

ಸಿಂಹ ಕುಳಿತುಕೊಳ್ಳಲು ಸಿಂಹಾಸನವೇ ಬೇಕಿಲ್ಲ, ಕೂತಿದ್ದೇ ಸಿಂಹಾಸನವಾಗಿ ಬಿಡುತ್ತೆ. ನಾವು ಹುಟ್ಟಿದಾಗ ತಾಯಿ ಸಂತೋಷಪಡಬೇಕು, ತಂದೆ ಸಂಭ್ರಮಪಡಬೇಕು, ಸಮಾಜ ನಮ್ಮ ಗೆಲುವನ್ನ ಆಚರಿಸಬೇಕು, ಸತ್ತರೆ ಸ್ಮಶಾನವೇ ಕಣ್ಣಿರು ಹಾಕಬೇಕು. ಸೋಲಿನಸುಳಿಯಿಂದ ಆಚೆ ಬರಲು ಬಹಳಷ್ಟು ಜನ ತುಂಬ ಕಷ್ಟ ಪಡುತ್ತಾರೆ. ಒಂದು ಸೋಲನ್ನು ದಾಟಿ ಮತ್ತೊಂದು ಗೆಲವನ್ನ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಒಂದು ಸೋಲಿಗೆ ತತ್ತರಿಸಿ ಹೋಗಿ ಬದುಕನ್ನೇ ಹಾಳು ಮಾಡಿಕೊಂಡಂತಹ ಎಷ್ಟೋ ಜೀವಗಳು, ಈ ಪ್ರಪಂಚದಲ್ಲಿಇವೆ. ಆದರೆ ಸಾವಿರಾರು ಸೋಲುಗಳ ನಂತರ ಒಂದು ಅದ್ಭುತ ವಾದ ಯಶಸ್ಸನ್ನ ಕಂಡ ಮಹನೀಯರೂ ಇಲ್ಲಿ ಇದ್ದಾರೆ.

ಬದುಕಿನಲ್ಲಿ ಸೋಲು, ಗೆಲುವು ಏನೇ ಇರಲಿ ಧೃತಿಗೆಡದ ಆತ್ಮವಿಶ್ವಾಸ ಮಾತ್ರ ಗೆಲುವಿನಿಂದ ಗೆಲುವಿಗೆ ನಮ್ಮನ್ನ ಕೊಂಡೊಯುತ್ತದೆ. ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ರಹತಾ ಎಂಬ ಊರದು. ಆ ಊರಿನ ಒಂದು ಸರಕಾರಿ ಶಾಲೆಯಲ್ಲಿ ಓದಿದ್ದ ಹುಡುಗ ಅಭಿಷೇಕ್. ಅಪ್ಪ ಅಮ್ಮ ತರಕಾರಿ
ವ್ಯಾಪಾರ ಮಾಡ್ತಿದ್ರು, ಒಂದು ದಿನ ಅಪ್ಪನ ಅನಾರೋಗ್ಯದಿಂದ ಪ್ರಪಂಚದಿಂದ ತೊರೆದರು. ಅಮ್ಮ ಕಷ್ಟದ ಆ ಹುಡುಗನನ್ನ ಸಾಕಿ ಬೆಳೆಸಿದರು. ನಂತರ ದ್ವಿತೀಯ ಪಿಯುಸಿ ಪರೀಕ್ಷೆ ನಂತರ ವೈದ್ಯಕೀಯ ಪ್ರವೇಶ ಪರೀಕ್ಷೆ ಯನ್ನು ಬರೆದ. ಆದರೆ ಆತನ ದುರದುಷ್ಟವೇನೋ ಆತ ಯಶಸ್ಸು ಕಾಣಲಿಲ್ಲ. ಅದೇ ಸಂದರ್ಭದಲ್ಲಿ ಆತ ಏನೋ ಸಾಧಿಸಬೇಕೆಂಬ ಅಚಲ ವಿಶ್ವಾಸವನ್ನು ಧೃತಿಗೆಡದೆ ಕಾಪಾಡಿಕೊಂಡ.

ಒಂದಲ್ಲ ಎರಡಲ್ಲ ಸತತವಾಗಿ ಮೂರು ಪ್ರಯತ್ನದಲ್ಲಿ ಸೋತ. ಮೂರು ಪ್ರಯತ್ನದಲ್ಲಿ ಸೋತ ನಂತರವೂ ಆತ ವೈದ್ಯನಾಗಬೇಕೆಂಬ ನಂಬಿಕೆ ಕಳೆದು ಕೊಳ್ಳಲಿಲ್ಲ. ಆತ ಅದೇ ಸಂದರ್ಭದಲ್ಲಿ ತಾಯಿಯನ್ನೂ ಕಳೆದುಕೊಂಡ. ಆನಂತರ ಕೂತು ಮತ್ತೊಂದು ಪ್ರವೇಶ ಪರೀಕ್ಷೆಗೆ ಸಿದ್ಧವಾಗಲು ಬಯಸಿದ. ಕೂಲಿ ಕೆಲಸ ಮಾಡಿಕೊಂಡೇ ನಾಲ್ಕನೇ ಭಾರಿ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದು ರಾಷ್ಟ್ರಮಟ್ಟದಲ್ಲಿ ೪೩ನೇ ರ‍್ಯಾಂಕ್ ಪಡೆದ. ಪ್ರತಿಷ್ಠಿತ ಏಮ್ಸ
ವಿದ್ಯಾಸಂಸ್ಥೆಯಲ್ಲಿ ಸೀಟ್ ಗಳಿಸಿದ. ಹಾಗೂ ಸಂಪೂರ್ಣ ವಾಗಿ ಸರಕಾರವೇ ಆತನ ವೆಚ್ಚವನ್ನು ಭರಿಸುತ್ತಿದೆ. ಅಪ್ಪ ಅಮ್ಮನ ಸಾವು, ಮಧ್ಯಮವರ್ಗದ ಕುಟುಂಬ ಇಷ್ಟರ ನಡುವೆ ಆತ ಏಮ್ಸ ಪರೀಕ್ಷೆಯನ್ನ ಪಾಸ್ ಮಾಡಿದ್ದು ಆತನ ಆತ್ಮವಿಶ್ವಾಸಕ್ಕೆ ಸಾಕ್ಷಿ.

ಯಕಶ್ಚಿತ್ ೨೨ರ ಪ್ರಾಯದ ಹುಡುಗರಿಗೇ ಸೋಲನ್ನ ಎದುರಿಸುವ ತಾಕತ್ತು, ಶಕ್ತಿ, ತಾಳ್ಮೆ ಅಷ್ಟರಮಟ್ಟಿಗೆ ಇರಬೇಕಾದರೆ, ಬದುಕಿನಲ್ಲಿ ಸಾಕಷ್ಟು ಅನುಭವಗಳನ್ನ ಕಂಡ ಬಹಳಷ್ಟು ಮಂದಿಗೆ ಏಕೆ ಸೋಲನ್ನ ಎದುರಿಸುವ ಶಕ್ತಿ ಇಲ್ಲ? ಗೆಲುವಿನ ಬಗ್ಗೆ ಯೋಚಿಸುವ ನಂಬಿಕೆ ಏಕಿಲ್ಲ? ಯುವಕ-ಯುವತಿಯರಲ್ಲಿ ಒಂದು ಮನವಿ ಜೀವನದಲ್ಲಿ ಗೆಲ್ಲುತ್ತೇವೆ ಎಂಬ ಭರವಸೆ, ಸೋತರು ಸೋಲಿನಿಂದ ಪಾಠ ಕಲಿಯುತ್ತೇವೆ ಎಂಬ ಒಂದು ವಿಶ್ವಾಸ ವಿದ್ದರೆ, ಏನು ಬೇಕಾದರೂ ಸಾಧಿಸಬಹುದು. ಒಂದಲ್ಲ, ಎರಡಲ್ಲ, ಸಾವಿರ ಭಾರಿ ಸೋತರೂ ಗೆದ್ದೇ ಗೆಲ್ಲಬೇಕೆಂಬ ಭರವಸೆ ಮಾತ್ರ ನಿಲ್ಲಬಾರದು.

ಇನ್ನೊಂದು ಉದಾಹರಣೆ ನೋಡಿ. ರಾಜಸ್ಥಾನದ ಸಬಲ್‌ಪೂರ್ ಎಂಬ ಹಳ್ಳಿ. ಆ ಹುಡುಗ ಬದುಕಿನಲ್ಲಿ ಅತಿ ದೊಡ್ಡ ಕನಸನ್ನ ಕಂಡಿದ್ದ. ತಂದೆ ಬಡಕುಟುಂಬದ ಹುಟ್ಟಿ ಬೆಳೆದೋರು. ತಾಯಿಯೂ ಅನಕ್ಷರಸ್ಥಳೇ. ಗೆದ್ದೇ ಗೆಲ್ಲಬೇಕೆಂಬ ಅದಮ್ಯವಿಶ್ವಾಸ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಸಾಽಸಬೇಕು, ಪ್ರಪಂಚಕ್ಕೆ ತನ್ನ ಸಾಮರ್ಥ್ಯ ಏನೆಂದು ತೋರಿಸಬೇಕು ಎಂಬ ಬಯಕೆ ಮತ್ತು ತುಡಿತ ಅವನಲ್ಲಿ ಸದಾ ಕಾಡುತ್ತಿತ್ತು. ದೇಶದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದ.

ಸತತವಾಗಿ ಆರು ಪ್ರಯತ್ನಗಳಲ್ಲಿ ಸೋತುಬಿಟ್ಟ. ಎರಡು ಬಾರಿ ದೆಹಲಿಗೆ ಹೋದ. ಸೋತು ಮರಳಿ ಮನೆಗೆ ಬಂದ. ಗೆದ್ದೇ ಗೆಲ್ಲಬೇಕು ಎಂಬ ಬಯಕೆ ಇದ್ದರೂ ಸೋಲಿನ ನೆನಪು ಕಾಡುತ್ತಿತ್ತು. ಕೊನೆಗೂ ಏಳನೇ ಪ್ರಯತ್ನದಲ್ಲಿ ಆ ಹುಡುಗ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ; ೩೩೦ನೇ ರ‍್ಯಾಂಕ್‌ನೊಂದಿಗೆ. ನಿರಂತರ ೮ ರಿಂದ ೯ ವರ್ಷಗಳ ತಪಸ್ಸು, ಪ್ರಯತ್ನ, ಸೋಲಿಗೆ ಅಂಜದ ಎದೆಗಾರಿಕೆ ಅವ ನನ್ನ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣನಾಗುವಂತೆ ಮಾಡಿತು.

ಪ್ರಯತ್ನ, ಪ್ರಾಮಾಣಿಕತೆ ಮತ್ತು ಪರಿಶ್ರಮದ ಜತೆ ಸೋಲಿಗೆ ಅಂಜದ ಎದೆಗಾರಿಕೆ ಇದ್ದರೆ ಮಾತ್ರ, ಎದೆ ಎತ್ತರಕ್ಕೆ ಬೆಳೆದವರು ಬಾನೆತ್ತರಕ್ಕೆ ಬೆಳೆಯಲು
ಸಾಧ್ಯ. ಖಟ.. ಒಬ್ಬರಲ್ಲ ಇಬ್ಬರಲ್ಲ ಬದುಕಿನ ಯಶಸ್ಸಿನ ಸಾಮ್ರಾಜ್ಯವನ್ನ ಕಂಡ ಎಷ್ಟೋ ಮಂದಿ ಸೋಲನ್ನ ದಾಟಿಯೇ ಬಂದವರು. ಗೆಲುವಿಗೆ ಸನಿಹವಾದವರು, ಸೋಲು ಬರಬಾರದು ಎಂದು ನಿರೀಕ್ಷೆ ಮಾಡಬೇಡಿ. ಸೋಲು ಬಂದೆ ಬರುತ್ತದೆ. ಗೆಲುವಿನ ಮನೆಗೆ ಸೋಲೇ ಹೊಸ್ತಿಲು. ಆ ಹೊಸ್ತಿಲು ದಾಟಿದರೇನೇ ಗೆಲುವಿನ ಮನೆಯನ್ನ ಪ್ರವೇಶಿಸಿ, ಆರಾಮಾಗಿ ಜೀವಿಸಲು ಸಾಧ್ಯ.

ಕಷ್ಟವೋ, ಸುಖವೊ, ದುಃಖವೋ, ದುಮ್ಮಾನವೋ, ಹೊಗಳಿಕೆಯೋ, ತೆಗಳಿಕೆಯೋ, ಐಶ್ವರ್ಯವೋ, ಆಶ್ಚರ್ಯವೋ, ಏಕಾಂತವೋ , ಒಂಟಿತನವೋ ಪ್ರತಿಯೊಬ್ಬರಿಗೂ ಗೆಲುವು ಬೇಕೇಬೇಕು. ಸೋಲಿಗೆ ಅಂಜದಿರಿ, ಹೆದರದಿರಿ. ಗೆಲುವಿಗೆ ಹತ್ತಿರವಾಗುತ್ತೀರ. ನಿಮ್ಮ ಗೆಲುವಿನ ಪಯಣ ಯಶಸ್ವಿಯಾಗಲಿ, ಸೋಲಿನ ನೋವು ಜತೆ ಯಾಗಲಿ. ಆದರೆ ಅದರಿಂದ ಪಾಠ ಮಾತ್ರ ಕಲಿಯಿರಿ. ನೋವು ನೋವಿನ ಪಾಡಿಗೆ ಇದ್ದುಬಿಡಲಿ. ನೋವು ಮರೆಯಾಗಲಿ ಯಶಸ್ಸು ಸನಿಹವಾಗಲಿ. ನಿಮ್ಮ ಯಶಸ್ಸಿನ ಪಯಣಕ್ಕೆ ಶುಭವಾಗಲಿ.