ಸ್ಮರಣೆ
ವಿಜಯ್ ದರ್‌ಡ
ಅವರು ಸದಾ ಒಂದು ರಿಂಗ್ ಧರಿಸಿರುತ್ತಿದ್ದರು. ಅದು ಅತ್ಯಂತ ಬೆಲೆಬಾಳುವ ಅಪರೂಪದ ರಿಂಗ್. ಅದರ ಬಗ್ಗೆ ಕೇಳಿದಾಗ ನಗುತ್ತಾ, ಇದನ್ನು ನನಗೆ ಬಹ್ರೇನಿನ ರಾಜ ಉಡುಗೊರೆಯಾಗಿ ಕೊಟ್ಟಿದ್ದನ್ನು ಹೇಳಿದ್ದರು. ಈ ರೀತಿ ಖಾಸಗಿಯಾಗಿ ಅನೇಕ ವಿಷಯಗಳ ಬಗ್ಗೆ ನಾವು ಆಗಾಗ್ಯೆ ಚರ್ಚಿಸುವುದಿತ್ತು.
ಮಾಧುರ್ಯ ಸಾಮ್ರಾಜ್ಞಿಯ ಖಜಾನೆಯಲಿದ್ದ ಅಗಣಿತ ಮಧುರ ಹಾಡುಗಳನ್ನು ನಾವೆಲ್ಲ ಕೇಳಿ ಆನಂದಿಸಿದ್ದೇವೆ. ಅವರ ಕುರಿತು ಬರೆಯಬೇಕೆಂದರೆ, ಮನಸ್ಸು ಆರ್ದ್ರವಾಗುತ್ತದೆ, ಪೆನ್ನು ಕಂಪಿಸುತ್ತದೆ. ಲತಾ ಮಂಗೇಶ್ಕರ್ ‘ನೈಟಿಂಗೇಲ್ ಆಫ್ ಇಂಡಿಯಾ’ ಎಂದು ಕರೆಸಿಕೊಂಡವರು. ಜತೆಗೆ ಅವರೊಬ್ಬ ಅದ್ಭುತ ವ್ಯಕ್ತಿ,
ಸರಳತೆಯ ಮಕುಟಮಣಿ. ಅವರ ನೆನಪು ಶಾಶ್ವತವಾಗಿ ಉಳಿಯಲಿದೆ. ಅವರ ಬಗ್ಗೆ ಬರೆಯ ಹೊರಟರೆ ಶಬ್ದಗಳು ಸೋಲುತ್ತವೆ. ಏನು ಹೇಳಲಿ, ಏನು ಬರೆಯಲಿ? ಭಾರತ ಮಾತ್ರವಲ್ಲ ವಿಶ್ವದೆಡೆ ಅವರ ಇಂಪಾದ ದನಿಯ ಹಾಡುಗಳು ಎಡೆ ಪಸರಿಸಿವೆ.
ಮಾಧುರ್ಯದ ವಿಚಾರಕ್ಕೆ ಬಂದರೆ ಆಕೆ ಮಾತೆ ಸರಸ್ವತಿಯ ವರಪುತ್ರಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆಕೆಯ ದನಿಯಲ್ಲಿದ್ದ ಪರಿಶುದ್ಧತೆ ಮತ್ತು ಪ್ರಾಮಾಣಿಕತೆ ಬೆಲೆಕಟ್ಟಲಾಗದ್ದು. ಬಿಸ್ಮಿ ಖಾನ್ ಅವರ ಸಂದರ್ಶನವೊಂದು ನನಗೆ ಈಗಲೂ ನೆನಪಿದೆ. ಸಂದರ್ಶನದ ವೇಳೆ ಖಾನ್ ಹೀಗೆ ಹೇಳಿದ್ದರು – ನಾನು ಲತಾ ಅವರ ಹಾಡುಗಳನ್ನು ಯಾವಾಗಲೂ ತಲ್ಲೀನನಾಗಿ ಕೇಳುತ್ತಿದೆ. ಹಾಡಿನ ಯಾವುದಾದರೊಂದು ಜಾಗದಲ್ಲಿ ಅಪಸ್ವರ ಬರಬಹುದೇ, ತಪ್ಪಾಗಬಹುದೇ ಎಂದು ನಿರೀಕ್ಷಿಸುತ್ತಿದೆ. ಆದರೆ ಆಕೆಯಷ್ಟು ಪರ್ಫೆಕ್ಟ್ ಗಾಯಕಿಯನ್ನು ನಾನು ನೋಡಿಯೇ ಇಲ್ಲ. ಲತಾಜೀ ಭಾರತದ ಅತ್ಯಮೂಲ್ಯ ರತ್ನ.
ಮೊದಲ ಬಾರಿಗೆ ನಾನು ಲತಾಜೀಯವರನ್ನು ಕಾಣಲು ಹೋಗಿದ್ದು ೧೯೮೦ರಲ್ಲಿ. ಮುಂಬಯಿಯ ಅವರ ಮನೆ ‘ಪ್ರಭು ಕುಂಜ್’ಗೆ ಖ್ಯಾತ ಕವಿ ಸುರೇಶ ಭಟ್ ಅವರೊಂದಿಗೆ ನಾನು ಹೋಗಿದೆ. ರಕ್ಷಾಬಂಧನದ ದಿನ ಬರುವ ಸೋದರನ ಮೇಲೆ ತೋರುವ ಪ್ರೀತಿಯನ್ನು ನನಗವರು ತೋರಿದರು. ಕವಿ ಸುರೇಶ್ ಭಟ್‌ರಂತೂ ಆಕೆಯ ಸ್ವಂತ ಸೋದರನಂತೆಯೇ ಇದ್ದರು. ಮೊದಲ ಭೇಟಿಯಲ್ಲಿಯೇ ಸಿಕ್ಕ ಪ್ರೀತಿ ವಿಶ್ವಾಸದ ಸೆಲೆ ನಮ್ಮ ಸ್ನೇಹ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಿತು. ಆಗಾಗ್ಗೆ ಭೇಟಿಯಾಗುತ್ತಿದೆ.
೨೦೦೫ರಲ್ಲಿ ಒಮ್ಮೆ ಆಕೆ ಕರೆಮಾಡಿ ‘ನಾಗಪುರಕ್ಕೆ ಬಂದಿದ್ದೇನೆ, ನನ್ನನ್ನು ಭೇಟಿ ಮಾಡಲು ನಿಮಗೆ ಸಾಧ್ಯವೇ?’ ಎಂದು ಕೇಳಿದ್ದರು. ಅವರ ಸರಳತೆ ನನಗೆ ತುಂಬಾ ಇಷ್ಟ. ‘ದೀದೂ, ನಾನು ಬರುತ್ತೇನೆ’ ಅಂದರೆ. ಅದಕ್ಕವರು ‘ನಾನು ಅಲ್ಲ ನಾವು’ ಎಂದು ತಿದ್ದಿದರು. ಅರ್ಥವಾಗಲಿಲ್ಲ ಎಂದು ತಬ್ಬಿಬ್ಬಾಗಿ ಹೇಳಿದೆ. ‘ನಿಮ್ಮ ಅರ್ಧಾಂಗಿಯನ್ನೂ ಕರೆತನ್ನಿ’ ಎಂದು ಆಗ್ರಹಿಸಿದರು. ಜ್ಯೋತ್ಸ್ನಾ, ಲತಾರನ್ನು ಭೇಟಿ ಮಾಡಿ ನಾವು ಪ್ರಾರಂಭಿಸಲಿರುವ ‘ಜವಾಹರಲಾಲ್ ದರಡಾ ಸಂಗೀತ ಕಲಾ ಅಕಾಡೆಮಿ’ ಬಗ್ಗೆ ವಿವರಿಸಿದ್ದಳೆಂಬುದು ನನಗೆ ನಂತರ ತಿಳಿದು ಬಂತು. ನಾವಿಬ್ಬರೂ ಭೇಟಿ ಮಾಡಲು ಹೋದೆವು.
ನಾವು ಅವರ ಅತ್ಯಾಪ್ತ ಕುಟುಂಬದ ಸದಸ್ಯರೇನೋ ಎಂಬಷ್ಟು ಪ್ರೀತಿಯಿಂದ ನಮ್ಮನ್ನು ಸ್ವಾಗತಿಸಿ ಪ್ರೀತಿ ವಿಶ್ವಾಸದ ಬಿಸುಪನ್ನು ತುಂಬಿದರು. ಜ್ಯೋತ್ಸ್ನಾ
ಅವರನ್ನು ಮನೆಗೆ ಊಟಕ್ಕೆ ಕರೆದಳು. ‘ನಾನೀಗ ಬೇರೆ ಕೆಲಸಗಳಲ್ಲಿ ವ್ಯಸ್ತಳಾಗಿದ್ದೇನೆ, ಬರುವೆ’ ಎಂದು ಲತಾಜೀ ತಿಳಿಸಿದ್ದರು. ನಮ್ಮೊಂದಿಗೆ ಸುಮಾರು ಒಂದುಗಂಟೆ ಕಳೆದರು. ನಮ್ಮ ಮನೆಯಲ್ಲಿ ತಯಾರಿಸಿದ ಲತಾಜೀಗೆ ಇಷ್ಟವಾಗುವ ಕೆಲವು ತಿನಿಸುಗಳನ್ನು ಜ್ಯೋತ್ಸ್ನಾ ತಂದಿದ್ದಳು. ಲತಾಜೀ ರುಚಿ ನೋಡಿ ತುಂಬಾ ಚೆನ್ನಾಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಅವರ ನಿಷ್ಕಲ್ಮಶ ನಗು ಇನ್ನೂ ನನ್ನ ಮನದಲ್ಲಿ ಹಾಗೇ ಅಚ್ಚೊತ್ತಿದಂತಿದೆ. ವಿನೋಬಾ ಭಾವೆಯವರ ಚಿತ್ರಸಂಪುಟವಿರುವ ಒಂದು ಪುಸ್ತಕವನ್ನು ನಾನು ಅಂದು ಅವರಿಗೆ ಕೊಟ್ಟೆ. ಆಕೆ ತುಂಬಾ ಖುಷಿಪಟ್ಟು ಆ ಪುಸ್ತಕಕ್ಕೆ ನಮಿಸಿ ಜೋಪಾನವಾಗಿ ಎತ್ತಿಟ್ಟುಕೊಂಡರು. ಜವಾಹರಲಾಲ್ ದರಡಾ ಸಂಗೀತ ಅಕಾಡೆಮಿ ಸ್ಥಾಪಿಸಿ ದ್ದಕ್ಕೆ ಜ್ಯೋತ್ಸ್ನಾಳನ್ನು ಶ್ಲಾಘಿಸಿದರು. ಬಾಬೂಜಿ ನನಗೆ ತುಂಬಾ ಪರಿಚಿತರು, ಅವರೊಂದಿಗೆ ಉತ್ತಮ ಬಾಂಧವ್ಯ ಇತ್ತು ಎಂದು ಹೇಳುತ್ತ ೧೯೫೯ರ ನಾಗಪುರ ಕಾಂಗ್ರೆಸ್ ಅಧಿವೇಶನದ ದಿನಗಳನ್ನು ಮತ್ತು ಅಲ್ಲಿ ಹಾಡಿದ ಘಟನೆಗಳನ್ನು ದೀದಿ ನೆಪಿಸಿಕೊಂಡರು.
೧೯೯೯ರಲ್ಲಿ ಲತಾಜಿ ಸಂಸತ್ತಿಗೆ(ರಾಜ್ಯಸಭೆ) ನಾಮನಿರ್ದೇಶಿತಗೊಂಡ ನಂತರದಲ್ಲಿ ನಾವು ನಿರಂತರ ಭೇಟಿಯಾಗುತ್ತಲೇ ಇದ್ದೆವು. ಆಕೆ ಎಂದೂ ಹಾಜರಾತಿ
ತಪ್ಪಿಸದೇ ಸಂಸತ್ ಕಲಾಪದಲ್ಲಿ ಭಾಗವಹಿಸುತ್ತಿದ್ದರು. ಯಾವುದೇ ಭತ್ಯೆಗಳು ತಮಗೆ ಬೇಡವೆಂದು ಮೊದಲೇ ತಿಳಿಸಿದ್ದರು ಕೂಡ. ಬಿಡುವಿನ ವೇಳೆಯಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಕುಳಿತು ನಾವು ಅನೇಕ ಬಾರಿ ಜೊತೆಯಾಗಿ ಕಾಫೀ ಸವಿದಿದ್ದೇವೆ. ಅದೊಂದು ದಿನ ಆಕೆ ಮಾತನಾಡುತ್ತ, ನಿಮ್ಮ ಎಂ.ಪಿ.-ಂಡಿನಿಂದ ಮಂಗೇಶ್ಕರ್ ಆಸ್ಪತ್ರೆಗೆ ಅನುದಾನ ಕೊಡುತ್ತೀರಾ? ಎಂದು ಕೇಳಿದರು.
ನಾನು ತಕ್ಷಣ ಒಪ್ಪಿದೆ. ಪುಣೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಶುಶ್ರೂಷೆ ಕೊಡುವ ಅಪರೂಪದ ಆಸ್ಪತ್ರೆಯದು. ‘ನೀವು ೨೫ ಲಕ್ಷ ಕೊಡಿ ಸಾಕು, ನಾನು ಅದನ್ನು ಹಿಂತಿರುಗಿಸುತ್ತೇನೆ’ ಎಂದರು. ‘ದೀದೀ ನಮ್ಮ ನಡುವೆ ವ್ಯಾಪಾರ ವ್ಯವಹಾರ ಬೇಡ. ನೀವೊಂದು ಘನ ಉದ್ದೇಶಕ್ಕಾಗಿ ನೆರವು ಕೇಳಿದ್ದೀರಿ’ ಅಂದೆ. ಸಹಜ ಸುಂದರವಾದ ನಗುವಿನಿಂದ ಆಕೆ, ಬೇಕಾದಾಗ ನಾನೇ ಕೇಳುತ್ತೇನೆ ಎಂದರು. ನಾನು ತಡವಿಲ್ಲದೇ ಅವರಿಗೆ ಚೆಕ್ ಕಳುಹಿಸಿದೆ. ತಕ್ಷಣ ನನಗೆ ಮುಂಬಯಿಯಿಂದ ಕರೆ ಬಂತು – ಮಧುರ ದನಿಯಲ್ಲಿ ‘ಭಾವೂ ಧನ್ಯವಾದ್’ ಎಂದು ಹೇಳಿದ್ದರು ದೀದಿ.
ಒಮ್ಮೆ ಸೆಂಟ್ರಲ್ ಹಾಲ್‌ನಲ್ಲಿ ಕುಳಿತಿದ್ದಾಗ ದೀದಿ – ಈ ರಾಜಕೀಯ ಪಕ್ಷಗಳ ಮುಖಂಡರು ಸಂಸತ್ತಿನೊಳಗೆ ಅಷ್ಟೊಂದು ಉಗ್ರ ಜಗಳಗಳನ್ನಾಡುತ್ತಾರೆ, ಹೊರ ಬಂದ ನಂತರ ಜತೆಜತೆಗೆ ಹೆಗಲಮೇಲೆ ಕೈಹಾಕಿ ಕಾಫೀ-ಟೀ ಕುಡಿಯುತ್ತಾರಲ್ಲ, ಏನಿದರ ಮರ್ಮ ಎಂದು ನನ್ನಲ್ಲಿ ಪ್ರಶ್ನಿಸಿದ್ದರು. ಇದು ನಮ್ಮ ಉದ್ಯಮ ಕ್ಷೇತ್ರದಲ್ಲಿ ಸಾಧ್ಯವಾಗದು, ಅಲ್ಲಿ ವೈರತ್ವವಿದ್ದರೆ ಒಬ್ಬರ ಮುಖ ಒಬ್ಬರು ನೋಡುವುದಿಲ್ಲ ಎಂದಿದ್ದರು. ಬಾಲಿವುಡ್ ಕ್ಷೇತ್ರದ ಪರಿಸ್ಥಿತಿ ಅವರ ಮಾತಿನಲ್ಲಿ ಅಂದು ವ್ಯಕ್ತವಾಗಿತ್ತು.
ಏ ಮೇರೆ ವತನ್ ಕೇ ಲೋಗೋ – ಹಾಡಿನ ಹಿಂದಿನ
ಕಥೆಯನ್ನು ವಿವರಿಸಿ ಎಂದು ನಾನೊಮ್ಮೆ ಕೇಳಿದೆ. ಆಗ ನೀವು ಮತ್ತು ಕಂಪೋಸರ್ ಸಿ.ರಾಮಚಂದ್ರ ನಡುವೆ ಹೊಂದಾಣಿಕೆ ಇರಲಿಲ್ಲವೆಂದು ಕೇಳಿದೆ, ಹಾಗಿದ್ದಾಗ ರೆಕಾರ್ಡಿಂಗ್ ಹೇಗಾಯ್ತು ಎಂದು ಕೇಳಿದೆ. ದಂತಕಥೆಗಳನ್ನು ಹೆಚ್ಚು ದಿನ ಮುಚ್ಚಿಡಲಾಗುವುದಿಲ್ಲ ಎಂದು ನಗುತ್ತ ಹೇಳಿದ ದೀದಿ, ಕವಿ ಪ್ರದೀಪ್ ಅವರು ಹಾಡು ಬರೆದು ಇದನ್ನು ಲತಾಮಂಗೇಶ್ಕರ್ ಮೂಲಕವೇ ಹಾಡಿಸಬೇಕೆಂದು ಶರತ್ತು ಹಾಕಿದ್ದರಂತೆ. ನೀವು ಈ ಹಾಡಿಗೆ ಸಂಗೀತ ಸಂಯೋಜಿಸಿ ಲತಾ ಹಾಡಿದರೆ, ಆ ಹಾಡು ವಿಶ್ವವಿಖ್ಯಾತವಾಗುತ್ತದೆ ಎಂದವರು ಹೇಳಿದ್ದರಂತೆ.ಅವರು ಹೇಳಿದಂತೆ ಆಗಿಬಿಡ್ತು ನೋಡಿ.
ಅವರು ಸದಾ ಒಂದು ರಿಂಗ್ ಧರಿಸಿರುತ್ತಿದ್ದರು. ಅದು ಅತ್ಯಂತ ಬೆಲೆಬಾಳುವ ಅಪರೂಪದ ರಿಂಗ್. ಅದರ ಬಗ್ಗೆ ಕೇಳಿದಾಗ ನಗುತ್ತಾ, ಇದನ್ನು ನನಗೆ ಬಹ್ರೇನಿನ ರಾಜ ಉಡುಗೊರೆಯಾಗಿ ಕೊಟ್ಟಿದ್ದನ್ನು ಹೇಳಿದ್ದರು. ಈ ರೀತಿ ಖಾಸಗಿಯಾಗಿ ಅನೇಕ ವಿಷಯಗಳ ಬಗ್ಗೆ ನಾವು ಆಗಾಗ್ಯೆ ಚರ್ಚಿಸುವುದಿತ್ತು. ಸಂಬಂಧಗಳನ್ನು ಸುಮಧುರವಾಗಿಸುವ ಕಲೆ ಅವರಲ್ಲಿ ಚೆನ್ನಾಗಿತ್ತು. ನನ್ನ ಪತ್ನಿ ಜ್ಯೋತ್ಸ್ನಾ ಇಹಲೋಕ ತ್ಯಜಿಸಿದಾಗ, ಲತಾಜೀ ನನಗೆ ಕರೆಮಾಡಿ ದೊಡ್ಡಕ್ಕನಂತೆ ಸಾಂತ್ವನದ ಮಾತುಗಳನ್ನಾಡಿದ್ದರು. ದೀದಿಯ ಅಗಲಿಕೆ ಕೇವಲ ನನಗೆ ವೈಯಕ್ತಿಕ ನಷ್ಟವಲ್ಲ, ಅದು ನಮ್ಮೆಲ್ಲರಿಗೆ, ಅಗಲುವಿಕೆಯಿಂದ ಮತ್ತೆ ಮರಳಿ ಬರಲು ಸಾಧ್ಯವೇ ಇಲ್ಲದ
ಒಂದು ಅದ್ಭುತ ಯುಗದ ಕೊಂಡಿ ಕಳಚಿದಂತಾಗಿದೆ. ಪ್ರಣಾಮಗಳು ದೀದಿ.