ವಿದೇಶವಾಸಿ
ಕಿರಣ್ ಉಪಾಧ್ಯಾಯ ಬಹ್ರೈನ್
dhyapaa@gmail.com
ಕೆಲವು ದಾದಿಯರಿಗೆ ಅರುಣಾ ಸಹೋದರಿಯಾಗಿದ್ದಳು. ಕೆಲವರಿಗೆ ತಾಯಿಯಂತಾಗಿದ್ದರೆ ಇನ್ನು ಕೆಲವರಿಗೆ ಮಗಳಂತಾಗಿದ್ದಳು. ಹೊರಗಿನ ಪ್ರಪಂಚದಲ್ಲಿ ಅಷ್ಟೆಲ್ಲ ನಡೆಯುತ್ತಿದ್ದರೂ ಅರುಣಾ ಮಾತ್ರ ಅದ್ಯಾವು ದನ್ನೂ ಗ್ರಹಿಸಲಾಗದೆ ತನ್ನ ನೋವಿನ ಪ್ರಪಂಚದಲ್ಲಿಯೇ ಮುಳುಗಿ ಬಳಲುತ್ತಿದ್ದಳು.
ಕೆಇಎಂ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ಅರುಣಾಳ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಮತ್ತು ಕಳ್ಳತನದ ಆರೋಪದ ಮೇಲೆ ಸೋಹನ್‌ಲಾಲ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದ್ದರು.
ಶೀಘ್ರಗತಿಯಲ್ಲಿ ವಿಚಾರಣೆ ನಡೆದು ತೀರ್ಪೂ ಹೊರ ಬಂತು. ನ್ಯಾಯಾಲಯ ಸೋಹನ್‌ಲಾಲ್‌ಗೆ ಕೇವಲ 7 ವರ್ಷ ಗಳ ಶಿಕ್ಷೆ ವಿಧಿಸಿತು. ಮಾರಣಾಂತಿಕ ಹಲ್ಲೆ ನಡೆಸಿದ್ದಕ್ಕಾಗಿ 7 ವರ್ಷ, ಕಳ್ಳತನದ ಆರೋಪಕ್ಕೆ 7 ವರ್ಷ ಎಂದು ಶಿಕ್ಷೆ ವಿಧಿಸಿತು.
ಲೆಕ್ಕದಂತೆ 14 ವರ್ಷವಾಗಬೇಕಿತ್ತು ತಾನೆ? ಆದರೆ ಹಾಗಾಗಲಿಲ್ಲ. ಎರಡೂ ಶಿಕ್ಷೆಯನ್ನು ಒಟ್ಟಿಗೇ ಅನುಭವಿಸಿದ ಸೋಹನ್‌ಲಾಲ್ 1980ರಲ್ಲಿ ಜೈಲಿನಿಂದ ಹೊರಗೆ ಬಂದಿದ್ದ. ಬಿಡುಗಡೆಯಾದ ನಂತರ ಯಾರ ಕೈಗೂ ಸಿಗಲಿಲ್ಲ, ಯಾರಿಗೂ ಮುಖ ತೋರಿಸಲಿಲ್ಲ, ಯಾರ ಕಣ್ಣಿಗೂ ಬೀಳಲಿಲ್ಲ. ಅವನಿಂದ ಅತ್ಯಾಚಾರ ಮತ್ತು ಹಗೆ ಒಳಗಾಗಿದ್ದ
ಅರುಣಾ ಮಾತ್ರ ಅದೇ ಆಸ್ಪತ್ರೆಯ ಅದೇ ಹಾಸಿಗೆಯ ಮೇಲೆ ಎಂದಿನಂತೆಯೇ ತರಕಾರಿ ತುಂಡಿನಂತೆ ಬಿದ್ದು ಕೊಂಡಿದ್ದಳು.
ಆಸ್ಪತ್ರೆಯ ದಾದಿಯರು ಮಾತ್ರ ಶ್ರದ್ಧೆಯಿಂದ ಅರುಣಾಳಿಗೆ ಸ್ನಾನ ಮಾಡಿಸುತ್ತಿದ್ದರು. ಪ್ರತಿ ತುತ್ತನ್ನೂ ಬಲವಂತ ವಾಗಿ ತಿನ್ನಿಸುತ್ತಿದ್ದರು. ಸುಮಾರು 10 ವರ್ಷಗಳ ಕಾಲ ಅರುಣಾಳ ಮನೆಯವರು ನೋಡಲು ಬರುತ್ತಿದ್ದರು. ಅರುಣಾಳ ಸಹೋದರಿ ಆಗಾಗ ಬಂದು ಆಕೆಯ ಬಳಿ ಕುಳಿತುಕೊಳ್ಳುತ್ತಿದ್ದಳು. ಒಂದು ಕಾಲದಲ್ಲಿ ಒಟ್ಟಿಗೆ ಆಟವಾ ಡುತ್ತಿದ್ದ, ಓಡಾಡುತ್ತಿದ್ದ, ಊಟ ಮಾಡುತ್ತಿದ್ದ, ಅರುಣಾಳ ಸಹೋದರಿಯ ಮಗಳೊಬ್ಬಳು ಆಸ್ಪತ್ರೆಗೆ ಬಂದು ಅರುಣಾಳ ಹಾಸಿಗೆಯನ್ನು ಸ್ವಚ್ಛ ಮಾಡುವುದು ಅವಳಿಗೆ ಊಟ ತಿನಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದಳು. ಇನ್ನೊಬ್ಬ ಸಹೋದರಿಯ ಮಗನೂ ಅರುಣಾಳನ್ನು ನೋಡಲು ಆಗಾಗ ಬರುತ್ತಿದ್ದ. ಒಂದು ದಶಕದ ನಂತರ ಕ್ರಮೇಣ ಅವರ ಬರುವಿಕೆಯೂ ನಿಂತುಹೋಗಿತ್ತು.
ಅವರೆಲ್ಲ ಉದ್ಯೋಗ ನಿಮಿತ್ತ ಮುಂಬೈ ಬಿಟ್ಟು ಬೇರೆ ಬೇರೆ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿಗೆ ಅರುಣಾಳ
ಸಂಪೂರ್ಣ ದೇಕರೇಕಿ ಆಸ್ಪತ್ರೆಯಲ್ಲಿರುವ ದಾದಿಯರ ಮೇಲೆ ಬಿತ್ತು. ಅವರು ನಿಶ್ಚಿಂತೆಯಿಂದ ಆ ಕೆಲಸ ವನ್ನು ಮಾಡುತ್ತಿದ್ದರು. ಅರುಣಾಳನ್ನು ನೋಡಿಕೊಳ್ಳುವುದರಲ್ಲಿ, ಅವಳ ಸೇವೆ ಮಾಡುವುದರಲ್ಲಿ ಆಸ್ಪತ್ರೆಯ ದಾದಿಯರಿಗೆ ಕಿಂಚಿತ್ತೂ ಬೇಸರವಿರಲಿಲ್ಲ. ಬದಲಾಗಿ ಕೆಲವು ದಾದಿಯರು ಅವಳನ್ನು ಪ್ರತಿನಿತ್ಯ ಮಾತನಾಡಿಸುತ್ತಿದ್ದರು- ಅರುಣಾ ಳಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ. ಕೆಲವು ದಾದಿಯರಿಗೆ ಅರುಣಾ ಸಹೋದರಿ ಯಾಗಿದ್ದಳು. ಕೆಲವರಿಗೆ ತಾಯಿಯಂತಾಗಿದ್ದರೆ ಇನ್ನು ಕೆಲವರಿಗೆ ಮಗಳಂತಾಗಿದ್ದಳು. ಹೊರಗಿನ ಪ್ರಪಂಚದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಅರುಣಾ ಮಾತ್ರ ಇದ್ಯಾವುದನ್ನೂ ಗ್ರಹಿಸಲು ಸಾಧ್ಯವಾಗದೆ ತನ್ನ ನೋವಿನ ಪ್ರಪಂಚ ದಲ್ಲಿಯೇ ಮುಳುಗಿ ಬಳಲುತ್ತಿದ್ದಳು.
ಅರುಣಾಳಿಗೆ 60 ವರ್ಷ ಆಗುತ್ತಿದ್ದಂತೆ ವಯಸ್ಸೂ ತನ್ನ ಪ್ರಭಾವವನ್ನು ತೋರಿಸುತ್ತಿತ್ತು. ಮೊದಲ 25 ವರ್ಷ ಲವಲವಿಕೆಯಿಂದ ಬದುಕಿದ ಅರುಣಾ, ಅದಕ್ಕಿಂತಲೂ ಹೆಚ್ಚು ವರ್ಷ ಜೀವನೋತ್ಸಾಹದ ಲವಲೇಶವೂ ಇಲ್ಲದೆ ಒಂದೇ ಕಡೆ ಬಿದ್ದುಕೊಂಡಿದ್ದಳು. ಸುಮಾರು 35 ವರ್ಷಗಳವರೆಗೆ ಸೂರ್ಯನ ಕಿರಣದ ಒಂದು ಎಳೆಯೂ ಅವಳನ್ನು ಸೋಂಕಲಿಲ್ಲ. ಸೋಂಕುಗಳು ಮಾತ್ರ ಭರಪೂರ ತಟ್ಟಿದ್ದವು. ಆಕೆಯ ವಸಡುಗಳಿಗೆ ಸೋಂಕು ತಾಗಿದ್ದ ರಿಂದ ಹಲ್ಲು ಉಜ್ಜಿಸಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಹಲ್ಲುಗಳು ಹುಳುಕಾಗಿ ಹಾಸಿಗೆಯಲ್ಲಿ ಬೀಳುತ್ತಿದ್ದವು. ಘಟನೆ ನಡೆದಾಗಿನಿಂದ ಕಣ್ಣಂತೂ ಕಾಣುತ್ತಿರಲಿಲ್ಲ, ಈಗ ಗಂಟೆಗಟ್ಟಲೆ ಕಣ್ಣು ರೆಪ್ಪೆಗಳೂ ಮುಚ್ಚಿ ಕೊಳ್ಳುತ್ತಿರ ಲಿಲ್ಲ.
ತಲೆಯಲ್ಲಿ ಹೊಟ್ಟು ಕಟ್ಟಿಕೊಳ್ಳುತ್ತಿತ್ತು. ಕೈ, ಕಾಲು, ಬೆರಳುಗಳು ಮರಗಟ್ಟಿತ್ತು. ಬೆಳೆದ ಉಗುರುಗಳನ್ನು ಕತ್ತರಿಸಲು ಆಸ್ಪತ್ರೆಯ ದಾದಿಯರು ಅರುಣಾಳ ಬೆರಳನ್ನು ಬಲವಂತವಾಗಿ ಬಿಡಿಸಿಕೊಳ್ಳಬೇಕಿತ್ತು. ಕೊಳವೆ ಮಾರ್ಗವಾಗಿ ಸತತ
ಮೂರೂವರೆ ದಶಕಕ್ಕೂ ಹೆಚ್ಚು ಕಾಲ ಮೂಗಿನಿಂದ ಆಹಾರ, ಔಷಧ ಕೊಡುತ್ತಿದ್ದುದರ ಪರಿಣಾಮವಾಗಿ, ಆಗಾಗ ಮಲಬದ್ಧತೆ, ಅತಿಸಾರ ಆಗುತ್ತಿತ್ತು. ದೇಹದಲ್ಲಿ ಇಷ್ಟೆಲ್ಲ ನಡೆಯುತ್ತಿರುವಾಗ ಆಕೆ ನೋವು ಅನುಭವಿಸು ತ್ತಿದ್ದಳು ಆದರೆ ಹೇಳಿಕೊಳ್ಳಲು ಮಾತ್ರ ಆಗುತ್ತಿರಲಿಲ್ಲ. ಅಂತಿಮವಾಗಿ, ಅರುಣಾಳಿಗೆ 66 ವರ್ಷ ವಯಸ್ಸಾದಾಗ ನ್ಯುಮೋನಿಯಾ ಅಂಟಿ ಕೊಂಡಿತು. ಆಕೆಯನ್ನು ತುರ್ತು ಚಿಕಿತ್ಸೆಯ ವಿಭಾಗಕ್ಕೆ ಸೇರಿಸಿ, ವೆಂಟಿಲೇಟರ್ ಅಳವಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸುಮಾರು 42 ವರ್ಷಕ್ಕೂ ಹೆಚ್ಚು ಕಾಲ ಒಳಗೊಳಗೇ ವಿಲವಿಲನೆ ಒದ್ದಾಡಿದ ಜೀವವೊಂದು ಕೊನೆಗೂ ಮುಕ್ತಿ ಪಡೆ ಯಿತು. 18 ಮೇ 2015ರಂದು, ಕ್ರೂರ ವಿಧಿಯ ಕರುಳು ಕರಗಿತು. ಬದುಕಿದ್ದೂ ಶವದಂತಿದ್ದ ಅರುಣಾ ಶಾಶ್ವತವಾಗಿ ಇಹಲೋಕ ತ್ಯಜಿಸಿದ್ದಳು.
ಇಲ್ಲಿ ಇಷ್ಟೆಲ್ಲ ನಡೆಯುತ್ತಿರುವಾಗ, ಇದಕ್ಕೆಲ್ಲ ಕಾರಣನಾದ ಸೋಹನ್‌ಲಾಲ್ ಎಲ್ಲಿದ್ದ? ಆ ಸಂದರ್ಭದಲ್ಲಿ ಅದು ಯಾರಿಗೂ ತಿಳಿದಿರಲಿಲ್ಲ. ಕೆಲವರು ಆತ ಸತ್ತು ಹೋಗಿದ್ದಾನೆ ಎಂದರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು.
ಇನ್ನು ಕೆಲವರು ಆತ ಬದುಕಿದ್ದಾನೆ ಆದರೆ ತಲೆಮರೆಸಿ ಕೊಂಡಿzನೆ ಎಂದರು. ಕೆಲವರಂತೂ ಆತ ಮಾರು ವೇಷದಲ್ಲಿ ಆಸ್ಪತ್ರೆಯ ಅಕ್ಕಪಕ್ಕದಲ್ಲಿಯೇ ಓಡಾಡು ತ್ತಿರಬಹುದು ಎಂದೂ ಹೇಳಿದರು. ಅವನನ್ನು ಹುಡುಕುವ ಪ್ರಯತ್ನವೂ
ನಡೆ ಯಿತು. ಆದರೆ ಆತ ಮಾತ್ರ ಹಲವು ವರ್ಷ ಗಳವರೆಗೆ ಯಾರ ಕಣ್ಣಿಗೂ ಕಾಣಿಸಿಕೊಳ್ಳಲಿಲ್ಲ.
ಪ್ರತಿ ಕಥೆಯಲ್ಲಿರುವಂತೆ ಈ ಕಥೆಯಲ್ಲಿಯೂ ಒಂದು ತಿರುವು ಇದೆ. ಅರುಣಾ ಮರಣದ ನಂತರ ಧನೇಶ್ ಚೌಹಾನ್ ಹೆಸರಿನ ಮರಾಠಿ ಪತ್ರಿಕೆಯ ಪತ್ರಕರ್ತನೊಬ್ಬ ಸೋಹನ್‌ಲಾಲ್‌ನನ್ನು ಪತ್ತೆಹಚ್ಚಿದ. ಆಗ ಸೋಹನ್‌ಲಾಲ್ ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ಸುಮಾರು ೬೦ ಕಿ.ಮೀ. ದೂರದಲ್ಲಿ ತನ್ನ ಪೂರ್ವಜರು ಕಟ್ಟಿಸಿದ ಮನೆಯಲ್ಲಿ
ವಾಸಿಸುತ್ತಿದ್ದ. ಆಗ ಅವನಿಗೂ ೬೦ ವರ್ಷ ದಾಟಿ ಹೋಗಿತ್ತು. ಆದ್ದರಿಂದ ಆತನ ನೆನಪು ಕ್ಷೀಣಿಸತೊಡಗಿತ್ತು. ಎಲ್ಲಿಯವರೆಗೆ ಎಂದರೆ ಆತನಿಗೆ ತಾನು ಅರುಣಾಳೊಂದಿಗೆ ವರ್ತಿಸಿದ ರೀತಿ, ಆ ದಿನಾಂಕ ಇತ್ಯಾದಿ ಮರೆತು ಹೋಗಿತ್ತು. ಆದರೆ ಆತನಿಗೆ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಆತ ಪಶ್ಚತ್ತಾಪ ಪಡುತ್ತಿದ್ದ. ಅದೆಲ್ಲ ಸಿಟ್ಟಿನ ಭರದಲ್ಲಿ ನಡೆದು ಹೋಯಿತು ಎಂದು ಹೇಳುತ್ತಿದ್ದ.
ಆತನ ಪ್ರಕಾರ, ಆತ ಕಳ್ಳತನ ಮಾಡಲಿಲ್ಲ, ಆಭರಣ ಕದಿಯಲಿಲ್ಲ, ಬಲಾತ್ಕಾರವನ್ನೂ ಮಾಡಲಿಲ್ಲ. ಅದು ಬಹುಶಃ
ಬೇರೆ ಯಾರಾದರೂ ಮಾಡಿರಬಹುದು ಎಂದು ಹೇಳುತ್ತಿದ್ದ. ಜೈಲಿನಿಂದ ಹೊರಗೆ ಬಂದ ನಂತರ ಉತ್ತರ ಪ್ರದೇಶ ದಲ್ಲಿರುವ ತನ್ನ ಮಾವನ ಮನೆಗೆ ಹೋಗಿ ಉಳಿದಿದ್ದ. ದಿನಕ್ಕೆ 25 ಕಿ.ಮೀ. ಸೈಕಲ್ ತುಳಿದು, ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಪ್ರತಿನಿತ್ಯ 250 ರುಪಾಯಿ ದುಡಿಯುತ್ತಿದ್ದ.
ಜೈಲಿಗೆ ಹೋಗುವಾಗ ಸೋಹನ್‌ಲಾಲ್‌ಗೆ ಒಂದು ಗಂಡು, ಒಂದು ಹೆಣ್ಣು ಮಗು ಇತ್ತು. ಆತ ಜೈಲಿನಲ್ಲಿ ಇರುವಾ ಗಲೇ ಆತನ ಹೆಣ್ಣುಮಗು ಸತ್ತುಹೋಗಿತ್ತು. ಸೋಹನ್‌ಲಾಲ್ ಅದನ್ನು ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಎಂದು ತಿಳಿದಿದ್ದ. ಜೈಲಿನಿಂದ ಹೊರಗೆ ಬಂದ ನಂತರವೂ ಸದಾ ಮಂಕು-ಮಂಕಾಗಿ ಕುಳಿತಿರುತ್ತಿದ್ದ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ತನ್ನ ಹೆಂಡತಿಯ ಬಳಿಯೂ ಹೋಗುತ್ತಿರಲಿಲ್ಲ, ಅವಳ ಮೈ ಮುಟ್ಟುತ್ತಿರಲಿಲ್ಲ.
ಬಿಡುಗಡೆಯಾದ 14 ವರ್ಷದ ನಂತರ ಆತನಿಗೆ ಎರಡನೆಯ ಗಂಡುಮಗು ಹುಟ್ಟಿತ್ತು. ಸೋಹನ್‌ಲಾಲ್‌ನ ಇಬ್ಬರೂ ಗಂಡುಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹಿರಿಯ ಮಗನಿಗೆ ತಾಯಿ ಈ ಘಟನೆಯ ಕುರಿತಾಗಿ ಮೊದಲೇ
ಹೇಳಿದ್ದಳು. ಎರಡನೆಯ ಮಗನಿಗೆ 12 ವರ್ಷ ವಾದಾಗ ಈ ವಿಷಯವನ್ನು ತಿಳಿಸಿದ್ದಳು. ಹಿರಿಯ ಮಗ ಸೋಹನ್ ಲಾಲ್‌ನೊಂದಿಗೆ ಹೊಂದಿಕೊಂಡಿದ್ದ. ಆದರೆ ಎರಡನೆಯ ಮಗನಿಗೆ ಸೋಹನ್ ಲಾಲ್ ಬಗ್ಗೆ ಸ್ವಲ್ಪವೂ ಅಭಿಮಾನ ವಿರಲಿಲ್ಲ. ಆತ ತಂದೆಯೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಆತನ ಪ್ರಕಾರ, ತಂದೆ ಕನಿಷ್ಠಪಕ್ಷ ತನ್ನನ್ನು ಶಾಲೆಗೂ ಕಳುಹಿಸಲಿಲ್ಲ, ಓದು ಬರಹ ತನ್ನಿಂದ ದೂರವಾಗಲು, ಸ್ವಂತ ಹೆಸರು ಬರೆಯಲು ಕೂಡ ಬರದೇ ಇರಲು ತನ್ನ ಅಪ್ಪನೇ ಕಾರಣ ಎಂಬುದು ಆತನ ನಿಲುವಾಗಿತ್ತು.
ಇಷ್ಟೆಲ್ಲ ಹೇಳಿದ ನಂತರ ಪಿಂಕಿ ವೀರಾನಿಯ ಕುರಿತಾಗಿ ಹೇಳದಿದ್ದರೆ ಈ ಲೇಖನ ಅಪೂರ್ಣ. ಪಿಂಕಿ ವಿರಾನಿ ಒಬ್ಬ ಸಮಾಜಸೇವಾಕರ್ತೆ. ಮಾನವ ಹಕ್ಕು ಹೋರಾಟಗಾರ್ತಿ. ಅರುಣಾಳ ಪರಿಸ್ಥಿತಿ ನೋಡಲಾಗದೆ ೨೦೧೧ರಲ್ಲಿ ಪಿಂಕಿ ದೇಶದ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗಿ ಅರುಣಾಳಿಗೆ ದಯಾಮರಣ ನೀಡಬೇಕೆಂದು ಕೇಳಿಕೊಂಡಿ ದ್ದಳು. ಅರುಣಾಳಿಗೆ ಘನತೆಯಿಂದ ಬದುಕುವ ಹಕ್ಕಿದೆ, ಅದು ಸಾಧ್ಯವಾಗದಿದ್ದರೆ ಘನತೆಯಿಂದ ಸಾಯುವ ಹಕ್ಕೂ ಇದೆ. ಬೇರೆಯವರ ಸಲುವಾಗಿ ಅಥವಾ ಬೇರೆಯವರು ನೋಡಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಜೀವಂತವಾಗಿ ಇಡಬಾರದು ಎಂಬುದು ಪಿಂಕಿಯ ವಾದವಾಗಿತ್ತು. ಪಿಂಕಿಯ ಈ ನಿರ್ಧಾರದಿಂದ ಆಸ್ಪತ್ರೆಯ ದಾದಿಯರು ಸಿಟ್ಟುಗೊಂಡಿದ್ದರು.
ಅವರು ಇದನ್ನು ತೀವ್ರವಾಗಿ ವಿರೋಧಿಸಿದರು. ನ್ಯಾಯಾಲಯ ಅಂದಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲ ಕೃಷ್ಣನ್ ನೇತೃತ್ವದ ವಿಶೇಷ ಪೀಠವನ್ನು ಸ್ಥಾಪಿಸಿತು. ಆ ಪೀಠ ದೇಶದಲ್ಲಿ ನಿಷ್ಕ್ರಿಯ ದಯಾ ಮರಣಕ್ಕಾಗಿ ಕೆಲವು ಕಾನೂನು ಮಾರ್ಗಸೂಚಿಗಳನ್ನು ಹಾಕಿಕೊಟ್ಟಿತು. ಪಿಂಕಿ ವಿರಾನಿಯ ಅಪೇಕ್ಷೆಯಂತೆ ಅರುಣಾಳಿಗೆ ದಯಾ ಮರಣವನ್ನು ನಿರಾಕರಿಸಿತು. ಅಂದು ಆಸ್ಪತ್ರೆಯಲ್ಲಿ ಹಬ್ಬದ ಸಂಭ್ರಮವಿತ್ತು. ದಾದಿಯರು ಸಿಹಿ ಹಂಚಿ ಸಂಭ್ರಮಿಸಿ ದರು. ’ಇದು ಅರುಣಾಳ ಮರುಜನ್ಮ’ ಎಂದು ಸಂತೋಷಪಟ್ಟಿದ್ದರು. ಪಿಂಕಿ ವಿರಾನಿ ಈ ಘಟನೆಯ ವಿವರಗಳನ್ನು ಹೇಳುವ ARUNA’S STORY ಕೃತಿಯನ್ನು ರಚಿಸಿದರು.
ಅಂದು ಪಿಂಕಿಗೆ ಜಯ ಸಿಗಲಿಲ್ಲ. ಆದರೆ ಮುಂದೆ ಇದು ದೇಶದ ದಯಾಮರಣದ ಕಾನೂನು ತಿದ್ದುಪಡಿಯಲ್ಲಿ ಮಹತ್ತರ ಪಾತ್ರವಹಿಸಿತು. 2018ರಲ್ಲಿ, ಅರುಣಾ ಮರಣದ 3 ವರ್ಷದ ನಂತರ, ಭಾರತದ ಸರ್ವೋಚ್ಚ ನ್ಯಾಯಾಲಯ ನಿಷ್ಕ್ರಿಯ ದಯಾ ಮರಣವನ್ನು ಕಾನೂನುಬದ್ಧಗೊಳಿಸುವ ಐತಿಹಾಸಿಕ ತೀರ್ಪನ್ನು ನೀಡಿತು. ಆ ಸಮಯದಲ್ಲಿ ವಿಶ್ವದ 6 ದೇಶಗಳಲ್ಲಿ ಮಾತ್ರ ಈ ಕಾನೂನು ಇತ್ತು. ಭಾರತ ಏಷ್ಯಾದ ಏಕೈಕ ಹಾಗೂ ವಿಶ್ವದ ಏಳನೆಯ ದೇಶವಾಯಿತು.
ಒಟ್ಟಾರೆ ಹೇಳುವುದಾದರೆ, ಈ ವಿಷಯ ದಲ್ಲಿ ಬಲಾತ್ಕಾರಕ್ಕೆ, ಹಗೆ ಒಳಗಾದವಳಿಗೆ ಮರಣವೂ ಇಲ್ಲ, ಇದಕ್ಕೆಲ್ಲ ಕಾರಣ ನಾದವನಿಗೆ ಮರಣ ದಂಡನೆಯೂ ಇಲ್ಲ, ಕೊನೆ ಪಕ್ಷ ಕಠಿಣ ಶಿಕ್ಷೆಯೂ ಇಲ್ಲ. ಇದಕ್ಕೆ ಬಲಿಯಾದವಳನ್ನು ಈ ಲೋಕದ ಸಂಕೋಲೆಯಿಂದ ಕಳಚಿ ಕಳುಹಿಸಲು ಯೋಚಿಸಿ, ದಯಾಮರಣ ಕಲ್ಪಿಸುವಂತೆ ಕೇಳಿದರೆ ಅದೂ
ಇಲ್ಲ! ಈ ನೋವಿನ ಘಟನೆಯ ಕುರಿತು ಯೋಚಿಸಿದಾಗ, ಇಹಲೋಕದ ಪರಿವೆಯೇ ಇಲ್ಲದೆ ಬಿದ್ದುಕೊಂಡಿದ್ದ, ನೋವನ್ನು ಅನುಭವಿಸಿದ ಅರುಣಾಳ ಬಗ್ಗೆ ಕಣ್ಣೀರು ಹಾಕುವುದೇ? ಅವಳನ್ನು ಆ ಸ್ಥಿತಿಗೆ ತಳ್ಳಿದವನಿಗೆ 7 ವರ್ಷ ಮಾತ್ರ ಶಿಕ್ಷೆ ಆಯಿತು ಎಂದು ನ್ಯಾಯಾ ಲಯದ ಮೇಲೆ, ಕಾನೂನು ವ್ಯವಸ್ಥೆಯ ಮೇಲೆ ಕೋಪಗೊಳ್ಳುವುದೇ?
ಅಷ್ಟಕ್ಕೇ ಅಪರಾಧಿಯ ಸ್ಥಾನದಲ್ಲಿದ್ದವ ಪ್ರಾಯಶ್ಚಿತ್ತ ಪಟ್ಟುಕೊಂಡ ಎಂದು ಸಮಾಧಾನಪಡುವುದೇ? ಅಥವಾ ಈ ಘಟನೆಯಿಂದ ದೇಶದ ಕಾನೂನಿನಲ್ಲಿ ಒಂದು ಮಹತ್ವದ ತೀರ್ಪು ಬಂದಿತು ಎಂದು ಸಂತೋಷಪಟ್ಟು ಕೊಳ್ಳುವುದೇ?
ಒಂದು ಅಂಕಿ-ಅಂಶದ ಪ್ರಕಾರ ಭಾರತದಲ್ಲಿ ಪ್ರತಿನಿತ್ಯ 70 ಅತ್ಯಾಚಾರದ ಪ್ರಕರಣ ದಾಖಲಾಗುತ್ತದೆ. ಇನ್ನು ದಾಖಲಾಗದೇ ಇರುವ ಸಂಖ್ಯೆ ಎಷ್ಟೋ?! ದೇಶಕ್ಕೆ ಸ್ವಾತಂತ್ರ್ಯ ದಕ್ಕಿ 8 ದಶಕವಾಗುತ್ತಾ ಬಂತು, ಜತೆಜತೆಗೆ ಈ ಕಳಂಕವೂ ಅಂಟಿಕೊಂಡೇ ಬಂತು. ಇದಕ್ಕೆ ಮುಕ್ತಿ ಎಂದು? ಇದಕ್ಕೆ ಕೊನೆಯೇ ಇಲ್ಲವೇ? ಹಾಗಾದರೆ ಇದು ಭಾರತದಲ್ಲಿ ಮಾತ್ರ ನಡೆಯುವಂಥದ್ದೇ ಅಂದರೆ ಖಂಡಿತ ಅಲ್ಲ.
ಫ್ರಾನ್ಸ್‌ನಂಥ ಮುಂದುವರಿದ ದೇಶದಲ್ಲೂ ಈ ರೀತಿಯ ವಿಕೃತಿ ಇಂದಿಗೂ ನಡೆದಿದೆ. ನೀವು ಕೇಳಿರಬಹುದು,
ಇತ್ತೀಚೆಗಷ್ಟೇ ಫ್ರಾನ್ಸ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೇ ಮತ್ತಿನ ಮುದ್ದು ಕೊಟ್ಟು ಎಪ್ಪತ್ತಕ್ಕೂ ಹೆಚ್ಚು ಜನರಿಂದ
ಆಕೆಯ ಮೇಲೆ ಬಲಾತ್ಕಾರ ಮಾಡಿಸಿದ. ಸಾಲದು ಎಂಬಂತೆ ಅದನ್ನೆಲ್ಲ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಕೊಳ್ಳುತ್ತಿದ್ದ. ಅವನ ಮಗಳಿಗೆ ವಿಷಯ ತಿಳಿದು ನ್ಯಾಯಾಲಯದ ಮೊರೆ ಹೋದಾಗ, ಬಲಾತ್ಕಾರ ಮಾಡಿದ ಐವತ್ತಕ್ಕೂ ಹೆಚ್ಚು ಜನ ತಮ್ಮ ತಪ್ಪನ್ನು ಒಪ್ಪಿಕೊಂಡರು. ಅಲ್ಲಿಗೆ ಈ ವಿಕೃತ ರಾಕ್ಷಸ ರೋಗಕ್ಕೆ ಯಾವುದೇ ಗಡಿ ಇಲ್ಲ ಎಂದಾಯಿತು. ಆದರೆ ಮನುಷ್ಯರೆಂದು ಕರೆಸಿಕೊಳ್ಳುವ ನಾವು ಇದನ್ನು ಕೊನೆಗಾಣಿಸುವುದಕ್ಕೆ ಗಡುವನ್ನಂತೂ ಹಾಕಿಕೊಳ್ಳಲೇ
ಬೇಕು.