Monday, 23rd September 2024

Kiran Upadhyay Column: ಬಗೆಬಗೆಯ ಬಯಕೆ ಸಿರಿಯ ಕಂಡು…

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

dhyapaa@gmail.com

ಒಂದು ಮಗುವಿನ ಮುಂದೆ ಚಿನ್ನಾಭರಣ, ಹಣ, ಮಿಠಾಯಿ, ಆಟಿಕೆಯನ್ನು ಇಟ್ಟರೆ ಮಗುವು ಆಭರಣ, ಹಣ ಬಿಟ್ಟು ಆಟಿಕೆಯನ್ನೋ, ಮಿಠಾಯಿಯನ್ನೋ ಆರಿಸಿಕೊಳ್ಳುತ್ತದೆ. ವಯಸ್ಕ ವ್ಯಕ್ತಿಯ ಮುಂದೆ ಇದೇ ವಸ್ತುಗಳನ್ನಿಟ್ಟರೆ ಆತನಿಗೆ ಹಣ ಮತ್ತು ಚಿನ್ನ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತವೆ. ಇದೆ ಆಯಾ ಸಂದರ್ಭದಲ್ಲಿ, ಯಾರ‍್ಯಾರಿಗೆ ಯಾವ್ಯಾವ ಅವಶ್ಯಕತೆ ಇರುತ್ತದೋ ಅದಕ್ಕನುಗುಣವಾಗಿ ಉಂಟಾಗುವ ಬಯಕೆಗಳು. ಮನೆಯಿಲ್ಲದವನಿಗೆ ಮನೆ, ಬಟ್ಟೆಯಿಲ್ಲದವನಿಗೆ ಬಟ್ಟೆ, ಉದ್ಯೋಗವಿಲ್ಲದವನಿಗೆ ಉದ್ಯೋಗ, ಹಸಿದವನಿಗೆ ಊಟ ಅವಶ್ಯಕವಾಗಿಯೂ, ಆಕರ್ಷಕವಾಗಿಯೂ ಕಾಣಿಸುತ್ತವೆ.

ಪ್ರತಿಯೊಬ್ಬನ ದೃಷ್ಟಿಕೋನವೂ ಬಯಕೆಯೂ ಬೇರೆ ಬೇರೆಯಾಗಿರುವುದರಿಂದಲೇ ಈ ಲೋಕದಲ್ಲಿ ವಿವಿಧ ಬಗೆಯ ಜನರಿದ್ದಾರೆ. ಅದಕ್ಕೆ ತಕ್ಕಂತೆ ವೈವಿಧ್ಯಮಯ ವಸ್ತುಗಳೂ ಮಾರಾಟವಾಗುತ್ತವೆ. ಎಲ್ಲರ ಬಯಕೆಗಳೂ ಒಂದೇ ರೀತಿಯದ್ದಾಗಿರುವುದಿಲ್ಲ. ಕ್ರೀಡಾಪಟುವಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕೆಂಬ ಬಯಕೆಯಿದ್ದರೆ, ರಾಜಕಾರಣಿಗೆ ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕು ಅಥವಾ ಪ್ರಧಾನಮಂತ್ರಿಯಾಗಬೇಕು ಎಂಬ
ಬಯಕೆ ಇರುತ್ತದೆ. ಹಾಗಾದರೆ ಆಟಿಕೆಯನ್ನು ಆರಿಸಿಕೊಳ್ಳುವ ಮಗುವಿನ ಬಯಕೆ ಶಾಶ್ವತವಲ್ಲ.

ಇದನ್ನೂ ಓದಿ: Kiran Upadhyay Column: ಮರಣವೂ ಇಲ್ಲ, ದಂಡನೆಯೂ ಇಲ್ಲ !

ಮಗುವಿದ್ದಾಗ ತಾನು ಆಡಲು ಬಯಸಿದ ಆಟಿಕೆಯನ್ನು ಪಡೆಯಲು ಅದು ಏನೆಲ್ಲ ಕಸರತ್ತು ಮಾಡುತ್ತದೆ. ಆ
ಕ್ಷಣದಲ್ಲಿ ಮಗುವಿಗೆ ಅದು ಪ್ರಮುಖವಾಗಿರುತ್ತದೆ. ಕ್ರಮೇಣ ಮಗು ಬೆಳೆದು ದೊಡ್ಡದಾದಾಗ ಆಟಿಕೆಗಾಗಿ ಜಗಳಾಡು ವುದು, ಹಠ ಮಾಡುವುದು ಅದಕ್ಕೆ ಮೂರ್ಖತನವೆಂದು ಅನಿಸುತ್ತದೆ. ಆಟಿಕೆಯ ಬಯಕೆ ಬದಲಾಗಿ ನಿಜವಾದ ವಸ್ತುವನ್ನು ಪಡೆಯ ಬೇಕೆಂಬ ಬಯಕೆ ಹೆಚ್ಚಾಗುತ್ತದೆ. ಆಟಿಕೆಯ ಕಾರಿನ ಬದಲು ಐಷಾರಾಮಿ ಕಾರು, ಹೀಗೆ. ಹೋಗಲಿ ಸ್ವಂತ ಮನೆಯಾದ ಮೇಲೆ ಅದರದರೂ ಸಮಾಧಾನ ವಿದೆಯೆಂದರೆ ಹಾಗೂ ಇಲ್ಲ. ಅಲ್ಲಿಯೂ ಬಯಕೆಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಯೌವನದಲ್ಲಿ ಮನೆ ಕಟ್ಟುವಾಗ, ಮಲಗುವ ಕೋಣೆ ಮೊದ
ಲನೇ ಮಹಡಿಯಲ್ಲಿದ್ದರೆ ಚೆನ್ನ ಎಂದು ಅಲ್ಲಿ ನಿರ್ಮಿಸಿಕೊಂಡಿರುತ್ತೇವೆ.

ವಯಸ್ಸಾದಂತೆ ಮೊಣಕಾಲು ನೋವು ಆರಂಭವಾಗಿ ಮೆಟ್ಟಿಲು ಹತ್ತುವುದು ದುಸ್ತರ ಎನಿಸಿದಾಗ, ನೆಲಮಹಡಿ ಯಲ್ಲಿಯೇ ಮಲಗುವ ಕೋಣೆ ಇರಬೇಕಿತ್ತು ಎನಿಸುತ್ತದೆ. ಸಾಧ್ಯವಾದರೆ ಅದನ್ನು ಬದಲಾಯಿಸಿಕೊಳ್ಳುತ್ತೇವೆ. ಎಷ್ಟೋ ಬಾರಿ, ಹಳ್ಳಿಯಲ್ಲಿದ್ದವರಿಗೆ ಪಟ್ಟಣದಲ್ಲಿ ಮನೆ ಮಾಡಿಕೊಂಡಿರಬೇಕೆಂಬ ಬಯಕೆಯಾಗುತ್ತದೆ. ಕ್ರಮೇಣ ಪಟ್ಟಣ ಬೆಳೆದು ಶಹರವಾದಾಗ, ಅಲ್ಲಿಯ ಜನಜಂಗುಳಿ, ಅತಿಯಾದ ವಾಹನಗಳು, ಶಬ್ದಮಾಲಿನ್ಯ, ವಾಯು ಮಾಲಿನ್ಯಗಳನ್ನೆಲ್ಲ ಕಂಡು ಹಳ್ಳಿಯೇ ಒಳಿತು ಅನಿಸುತ್ತದೆ. ಒಂದು ವೇಳೆ ಹಳ್ಳಿಯಲ್ಲೇ ಮನೆ ಮಾಡಿಕೊಂಡು ಉಳಿದ ನಂತರ ಅಲ್ಲಿ ಮಕ್ಕಳಿಗೋ ಮೊಮ್ಮಕ್ಕಳಿಗೋ ಬೇಕಾಗುವ ಶಿಕ್ಷಣ ವ್ಯವಸ್ಥೆ, ಸಮೀಪದಲ್ಲಿ ಆಸ್ಪತ್ರೆ ಇರದಿದ್ದರೆ, ಮೊಬೈಲ್ ನೆಟ್‌ವರ್ಕ್ ಬರದಿದ್ದರೆ, ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿದ್ದರೆ, ಧಾರಾವಾಹಿ ನೋಡಲು ಆಗದಿದ್ದರೆ ಏನು ಗತಿ? ಎಲ್ಲವೂ ಸರಿಯಾಗಿದ್ದು ಊರಿನ ಕೊನೆಯಲ್ಲಿರುವ ಮನೆಯಲ್ಲಿ ಚಿರತೆಯೊಂದು ಕರುವನ್ನು ಕಚ್ಚಿ ಕೊಂಡು ಹೋಯಿತು ಎಂದರೆ ಮತ್ತೆ ಪಟ್ಟಣವೇ ಒಳ್ಳೆಯದು, ಅಲ್ಲಿಯೇ ಹೋಗಿ ಉಳಿಯುವುದು ಒಳಿತು ಎಂಬ ಬಯಕೆ ಮೂಡಿದರೂ ಆಶ್ಚರ್ಯವಿಲ್ಲ.

ಎಷ್ಟೋ ಬಾರಿ ‘ನನಗೆ ಒಂದೇ ಬಯಕೆ ಇದೆ, ಅದೊಂದು ಈಡೇರಿದರೆ ಬೇರೇನನ್ನೂ ಬಯಸುವುದಿಲ್ಲ’ ಎಂದು ಹೇಳಿಕೊಳ್ಳುತ್ತೇವೆ. ಆದರೆ ಅದು ಆ ಒಂದು ಬಯಕೆ ಈಡೇರುವವರೆಗೆ ಮಾತ್ರ. ಮನುಷ್ಯನ ಮನಸ್ಸು ಚಂಚಲ, ಅದರದ್ದೇ ಆದ ಮಾದರಿಯಲ್ಲಿ, ಒಂದೆಡೆಯಿಂದ ಇನ್ನೊಂದೆಡೆಗೆ ಅಲೆದಾಡುತ್ತಲೇ ಇರುತ್ತದೆ. ಒಂದು ಆಸೆ ಮುಗಿಯುತ್ತಿದ್ದಂತೆಯೇ ನಾವು ಇನ್ನೊಂದರ ಬೆನ್ನು ಹತ್ತಿ ಓಡಲಾರಂಭಿಸುತ್ತೇವೆ. ವರ್ಷಾನುಗಟ್ಟಲೆ ಬಯಸಿದ ವಸ್ತು ಅಥವಾ ಸ್ಥಾನ ದಕ್ಕಿದಾಗ ಅದನ್ನು ಕೆಲವು ತಿಂಗಳೂ ಅನುಭವಿಸುವುದಿಲ್ಲ, ಖುಷಿ ಪಡುವುದಿಲ್ಲ. ಬಯಸಿ
ದ್ದನ್ನು ಪಡೆದ ಸಂತೃಪ್ತಿ ಕೆಲವೇ ಕ್ಷಣಗಳದ್ದಾಗಿರುತ್ತದೆ.

ಏಕೆಂದರೆ, ಬಯಸಿದ್ದನ್ನು ಪಡೆದ ಮರುಕ್ಷಣದಿಂದ ನಮ್ಮಲ್ಲಿಯೇ ಸುಪ್ತವಾಗಿ ಬಿದ್ದಿದ್ದ ಇನ್ಯಾವುದೋ ಬಯಕೆ ಚಿಗುರೊಡೆದು ಅದರ ಬೆನ್ನುಹತ್ತಿ ಓಡಲಾರಂಭಿಸುತ್ತದೆ. ಅಂದರೆ, ನಮ್ಮ ಬಯಕೆಗೆ ಕೊನೆಯೆಂಬುದೇ ಇಲ್ಲ. ನಮ್ಮ ಬಯಕೆ ಈಡೇರಲು ೨ ಅಂಶಗಳು ಪ್ರಮುಖವಾಗಿರುತ್ತವೆ. ಒಂದು, ನಮ್ಮ ಮನಸ್ಥಿತಿ. ಇನ್ನೊಂದು, ನಮ್ಮ ಹೊರಗಿನ ವಾತಾವರಣ. ಆದರೆ, ಎರಡೂ ವಸ್ತುಗಳು ಸ್ಥಿರವಲ್ಲ.

ಅವನ್ನು ಹತೋಟಿಯಲ್ಲಿಡುವುದು ಸಾಧ್ಯವಿಲ್ಲ. ಬಯಕೆ ಎಂಬುದು ಆ ಕ್ಷಣಕ್ಕೆ ಸಂಬಂಧಪಟ್ಟದ್ದಾದರೂ, ಅದೇ ಜೀವನದ ಮುಖ್ಯ ಉದ್ದೇಶವಾಗಿ ಮಾರ್ಪಟ್ಟರೂ ಕೆಲವೊಮ್ಮೆ ನಮ್ಮ ಬಯಕೆ ಈಡೇರು ವುದಿಲ್ಲ. ಎಷ್ಟೋ ಸಲ ನಾವು ಸರಿಯಾಗಿ ಯೋಚಿಸದೆಯೇ ಯಾವುದು ಮುಖ್ಯವಲ್ಲವೋ, ಪ್ರಯೋಜನ ಕಾರಿಯಲ್ಲವೋ ಅಥವಾ ಅವಶ್ಯವಲ್ಲವೋ ಅದರ ಹಿಂದೆ ಓಡುತ್ತೇವೆ. ಆದರೆ ಗುರಿ ತಲುಪಿದಾಗ, ‘ನಮ್ಮ ಗುರಿ ಇದಲ್ಲವಾಗಿತ್ತು’ ಎಂದು ಪಶ್ಚಾತ್ತಾಪ ಪಡುವುದೂ ಇದೆ. ಇದು ದೀಪದ ಆಕರ್ಷಣೆಗೆ ಒಳಗಾಗುವ ಮಗುವಿನಂತೆ. ಮಗುವಿಗೆ ದೀಪ ಸುಂದರ ವಾಗಿ ಕಾಣುತ್ತದೆ. ಬೇಕೋ-ಬೇಡವೋ, ಅದನ್ನು ಹಿಡಿಯಲು ಹೋಗುತ್ತದೆ.

ಕೈಸುಟ್ಟುಕೊಂಡು ಅಳುತ್ತದೆ. ಹಾಗೆಯೇ ನಾವು ದೊಡ್ಡವರಾದ ಮೇಲೂ ಎಷ್ಟೋ ಬಾರಿ ಉದ್ಯೋಗ ಮಾಡುತ್ತಾ,
ಉದ್ದಿಮೆ ಆರಂಭಿಸಿ ಅಥವಾ ಇನ್ಯಾವುದೋ ನಿರ್ಣಯ ತೆಗೆದುಕೊಂಡು, ಕೆಲವು ದಿನದ ನಂತರ ನಮ್ಮ ನಿರ್ಣಯ ಸರಿಯಾಗಿರಲಿಲ್ಲ ಎನಿಸುವುದಿದೆ. ಒಬ್ಬಾತ ಖಾಲಿ ಜಾಗದಲ್ಲಿ ಮನೆ ನಿರ್ಮಿಸಿ ಸಂತಸದಲ್ಲಿರುತ್ತಾನೆ ಅಂದುಕೊಳ್ಳಿ. ಕಾಲಕ್ರಮೇಣ ಆತನ ಮನೆಯ ಪಕ್ಕದಲ್ಲಿ ಒಂದು ಹಿಟ್ಟಿನ ಗಿರಣಿ ಆರಂಭವಾಗುತ್ತದೆ. ಇನ್ನೊಂದು ಪಕ್ಕದಲ್ಲಿ ಮೋಟಾರ್‌ ಬೈಕ್ ರಿಪೇರಿಯ ಗ್ಯಾರೇಜ್ ಆರಂಭವಾಗುತ್ತದೆ.

ಮನೆಯ ಮುಂದೆ ವಾಹನ ಸಂಚಾರ ಹೆಚ್ಚಾಗುತ್ತದೆ. ಎದುರು ಮನೆಯ ನಾಯಿ ಸದಾ ಬೊಗಳುತ್ತಿರುತ್ತದೆ.
ಸುತ್ತಲಿನ ವಾತಾವರಣ ಬದಲಾಗಿ ಉಸಿರು ಕಟ್ಟಿದ ಅನುಭವವಾಗುತ್ತದೆ. ತಾನಿಲ್ಲಿ ಮನೆ ಕಟ್ಟಬಾರದಾಗಿತ್ತು ಎನಿಸುತ್ತದೆ. ತಾನೇ ಬಯಸಿದ ಜಾಗದಲ್ಲಿ ಕಟ್ಟಿದ ಮನೆಯಲ್ಲಿ ಆತ ಕಿರಿಕಿರಿ ಅನುಭವಿಸುತ್ತಾನೆ. ನಮ್ಮ ಬಯಕೆ ಗಳನ್ನು ಪೂರೈಸಿಕೊಳ್ಳುವ ಹಂತದಲ್ಲಿ ನಾವು ನಮ್ಮ ಅಕ್ಕ ಪಕ್ಕದಲ್ಲಿ ಆಗುತ್ತಿರುವ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದಿಲ್ಲ, ನಮ್ಮ ಬಯಕೆಯ ಬಗ್ಗೆಯೇ ಯೋಚಿಸುತ್ತಿರುತ್ತೇವೆ. ಆಗ ನಾವು ಹಿಂದೆ ಗಳಿಸಿದ್ದಕ್ಕೆ ಯಾವುದೇ ಅರ್ಥವಿಲ್ಲದಂತಾಗುತ್ತದೆ. ಏಕೆಂದರೆ ನಮ್ಮ ಸಂಪೂರ್ಣ ಲಕ್ಷ್ಯ ಮುಂದೆ ಗಳಿಸಬೇಕಾದುದ್ದರ ಕಡೆಗೆ ಇರುತ್ತದೆಯೇ ವಿನಾ, ಹಿಂದೆ ಗಳಿಸಿದ್ದರ ಕಡೆಗೆ ಇರುವುದೇ ಇಲ್ಲ.

ನಮ್ಮ ಬಯಕೆಗಳು ಪೂರ್ಣಗೊಂಡ ನಂತರ ಅದನ್ನು ಬೇಗ ಮರೆಯುತ್ತೇವೆ. ಪೂರ್ಣಗೊಳ್ಳದ ಬಯಕೆಗಳೇ
ನಮ್ಮನ್ನು ಕಾಡುತ್ತಿರುತ್ತವೆ. ಅಪೂರ್ಣ ಬಯಕೆ ನಮ್ಮ ದೇಹದಲ್ಲಿನ ಒಂದು ಸಣ್ಣ ಗಾಯವಿದ್ದಂತೆ. ಅದರ ಮೇಲೇ ನಮ್ಮ ಗಮನ ಇರುತ್ತದೆಯೇ ವಿನಾ, ಆರೋಗ್ಯದಿಂದಿರುವ ದೇಹದ ಇನ್ನಿತರ ಭಾಗದ ಕಡೆಗಲ್ಲ. ಕಾಲಿನ ಒಂದು ಬೆರಳಿನಲ್ಲಿ ನೋವಾದರೂ ನಮ್ಮ ಗಮನ ಅದರ ಕಡೆಗೆ ಇರುತ್ತದೆಯೇ ವಿನಾ, ಆರೋಗ್ಯವಾಗಿರುವ ಉಳಿದ ೯ ಬೆರಳುಗಳ ಕಡೆಗೂ ಅಲ್ಲ, ಎರಡು ಕಾಲಿನ ಕಡೆಗೂ ಅಲ್ಲ. ಇದನ್ನೇ ಭೌತಿಕ ಜಗತ್ತಿಗೆ ಹೋಲಿಸಿದರೆ, ಈಡೇರದ ಬಯಕೆಗಳನ್ನು ಹಿಂಬಾಲಿಸಿ, ಇದುವರೆಗೆ ಈಡೇರಿದ ವಿಷಯದ ಕಡೆಗೆ ನಾವು ಸಂಪೂರ್ಣ ಗಮನ ಹರಿಸದೆ
ಮುಂದುವರಿಯುತ್ತೇವೆ.

ಬೇಕಾದಷ್ಟು ಶ್ರೀಮಂತಿಕೆ ಇದ್ದರೂ, ಬೇಕಾದ ವಸ್ತುಗಳಿದ್ದರೂ, ನಮ್ಮ ಜತೆಯಲ್ಲಿ ಖುಷಿ ಕೊಡುವ ವ್ಯಕ್ತಿಗಳಿದ್ದರೂ ಅದನ್ನು ಅನುಭವಿಸುವುದಿಲ್ಲ. ಬದಲಾಗಿ ಮುಂದೆ ಗಳಿಸಬೇಕಾದುರ ಬಯಕೆಯಲ್ಲಿಯೇ ಇರುತ್ತೇವೆ. ಈ ಪ್ರಪಂಚ ದಲ್ಲಿ ಪ್ರತಿಯೊಬ್ಬನೂ ತಾನು ಏನನ್ನಾದರೂ ಸಾಧಿಸಬೇಕು ಎಂದು ಬಯಸುತ್ತಾನೆ.

ಆದರೆ ಎಷ್ಟೋ ಸಲ ಆ ಬಯಕೆ ಈಡೇರದೆ ನಿರಾಶನೂ ಆಗುತ್ತಾನೆ. ನಿರಂತರವಾಗಿ ಈಡೇರದ ಬಯಕೆಯ ಬಂಧಿ ಯಾಗಿರುವುದರಿಂದ ವರ್ತಮಾನದ ಬದುಕನ್ನು ಆಸ್ವಾದಿಸದೇ ಕಳೆಯುತ್ತಾನೆ. ಇದಕ್ಕೆ ಒಂದು ಉದಾಹರಣೆ ಹೇಳಿ ಬಿಡುತ್ತೇನೆ. ಒಬ್ಬ ಸಂಸಾರಸ್ಥ ಬಾಡಿಗೆಯ ಮನೆಯಲ್ಲಿದ್ದಾನೆ ಎಂದುಕೊಳ್ಳಿ. ಅವನಿಗೆ ಸ್ವಂತ ಮನೆ ಕಟ್ಟಿ ಅದರಲ್ಲಿ ವಾಸ ಮಾಡಬೇಕು ಎಂಬ ಬಯಕೆಯಾಗುತ್ತದೆ, ತಪ್ಪಲ್ಲ.

ಹೀಗಾಗಿ ಆತ ಒಂದು ಜಾಗ ಖರೀದಿಸಿ ಮನೆಯ ನಿರ್ಮಾಣಕ್ಕೆ ತೊಡಗುತ್ತಾನೆ. ಆ ಸಂದರ್ಭದಲ್ಲಿ ಆತ ಬೆಳಗ್ಗೆ ಬೇಗನೆ ಎದ್ದು, ಹೊಸಮನೆ ಕಟ್ಟಿಸುತ್ತಿರುವ ಜಾಗಕ್ಕೆ ಹೋಗಿ, ಅಲ್ಲಿಯ ದೇಖ-ರೇಖಿ ನೋಡಿಕೊಂಡು, ಕೆಲಸಗಾರರಿಗೆ ಆ ದಿನದ ಕೆಲಸ ಹೇಳಿ, ಬೇಕಾದ ಹಣ, ವಸ್ತುಗಳನ್ನು ಪೂರೈಸಿ, ತನ್ನ ಕೆಲಸಕ್ಕೆ ಹೋಗುತ್ತಾನೆ. ಕೆಲಸದಿಂದ ಹಿಂದಿರು ವಾಗ ಪುನಃ ಮನೆ ಕಟ್ಟುತ್ತಿರುವ ಜಾಗಕ್ಕೆ ಹೋಗಿ, ಅಂದಿನ ಕೆಲಸಗಳನ್ನೆಲ್ಲ ವೀಕ್ಷಿಸಿ, ನಾಳಿನ ಕೆಲಸವನ್ನು ವಿವರಿಸಿ, ಸಾಧ್ಯವಾದರೆ ಅಂದು ಕಟ್ಟಿದ ನಾಲ್ಕು ಕಲ್ಲಿಗೆ ನೀರುಣಿಸಿ, ರಾತ್ರಿ ಮಡದಿ-ಮಕ್ಕಳು ಮಲಗಿದ ನಂತರ ಅಥವಾ ಮಲಗುವ ವೇಳೆಗೆ ಮನೆಗೆ ಹಿಂದಿರು ಗುತ್ತಾನೆ. ಆತ ಕಟ್ಟುತ್ತಿರುವ ಮನೆ ತಿಂಗಳೊಪ್ಪತ್ತಿನಲ್ಲಿ ಮುಗಿದರೆ ಅಡ್ಡಿಯಿಲ್ಲ. ಕಾರಣಾಂತರಗಳಿಂದ ಇದೇ ರೀತಿ ಕೆಲವು ವರ್ಷ ಮುಂದುವರಿದರೆ? ಸಣ್ಣ ಮಕ್ಕಳು ದೊಡ್ಡವರಾಗಿ ಬೆಳೆದಿರುತ್ತಾರೆ, ಮಡದಿಗೂ ವಯಸ್ಸಾಗಿರುತ್ತದೆ, ಸ್ವತಃ ಆತನೂ ಕುಗ್ಗಿರುತ್ತಾನೆ.

ಆತ ಕಟ್ಟಿಸಿದ ಸ್ವಂತ ಮನೆಗೆ ಹೋಗಿ ಉಳಿದುಕೊಳ್ಳಬಹುದು, ಆದರೆ ಈ ನಡುವೆ ಆತ ತನ್ನ ಸಂಸಾರದೊಂದಿಗೆ ಕಳೆ
ಯಬಹುದಾದ ಮಧುರ ಕ್ಷಣಗಳಿಂದ ವಂಚಿತನಾಗಿರುತ್ತಾನೆ. ಆ ಕ್ಷಣಗಳಲ್ಲಿ ಬಹುಶಃ ಮಕ್ಕಳಿಗೆ ತಂದೆ ಕಟ್ಟಿಸು ತ್ತಿರುವ ಮನೆಗಿಂತ ತಂದೆ ತಮ್ಮ ಜತೆ ಕಳೆಯಬೇಕಾಗಿದ್ದ ಸಮಯ ಹೆಚ್ಚು ಅವಶ್ಯವಾಗಿರುತ್ತದೆ. ಕೆಲವು ಸಮಯದ ನಂತರ ತಂದೆಗೂ ಹೀಗೇ ಅನಿಸಿದರೂ ಆಶ್ಚರ್ಯವಿಲ್ಲ, ಇರಲಿ. ಆತ ಆ ಮನೆಗೆ ಹೋಗಿ ಉಳಿದ ನಂತರವೂ ಸಂತೋಷವಾಗಿರುತ್ತಾನೆ ಎಂದುಕೊಳ್ಳಬೇಕಾಗಿಲ್ಲ. ಆ ಕಾಲದಲ್ಲಿ ಮಕ್ಕಳು ಬೆಳೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗಬೇಕಾಗಬಹುದು. ಮಡದಿಯ ಅವಶ್ಯಕತೆಯೂ ಬದಲಾಗಬಹುದು, ಸ್ವತಃ ಆತನ ಬಯಕೆಯೂ ಬದಲಾಗಬಹುದು.

ನಮ್ಮ ಬಯಕೆಯು ಮನದಲ್ಲಿ ಮಹತ್ವಾಕಾಂಕ್ಷೆಯನ್ನು ಮೂಡಿಸುತ್ತದೆ. ಮಹತ್ವಾಕಾಂಕ್ಷೆ ಸದಾ ಭವಿಷ್ಯತ್ತಿ ನಲ್ಲಿಯೇ ಇರುತ್ತದೆಯೇ ಹೊರತು ಭೂತದಲ್ಲಿಯೂ, ವರ್ತಮಾನದಲ್ಲಿಯೂ ಅಲ್ಲ. ಒಂದು ವಿಚಾರ ತಿಳಿದಿರಲಿ, ಭವಿಷ್ಯ ಯಾವತ್ತೂ ಸ್ಥಿರವಲ್ಲ. ಭವಿಷ್ಯವನ್ನು ಕಡಾಕಡಿ ಹೇಳಲು ಸಾಧ್ಯವಿಲ್ಲ. ಭವಿಷ್ಯ ಯಾವತ್ತೂ ದೂರ ದಲ್ಲಿರುವ ಬೆಟ್ಟದಂತೆ, ಚಲಿಸುವ ಮೋಡದಂತೆ. ನಾವೆಷ್ಟೇ ಪ್ರಯತ್ನಿಸಿದರೂ ಭವಿಷ್ಯವನ್ನು ಸ್ವಾಧೀನ ಪಡಿಸಿ ಕೊಳ್ಳಲು ಸಾಧ್ಯವೇ ಇಲ್ಲ.

ಹಾಗಾದರೆ ಏನು ಸಾಧಿಸಿದಂತಾಯಿತು? ನಂತರ ಆತನಿಗೆ ತಾನು ಮನೆಯ ಹಿಂದೆ ಸಮಯ ವ್ಯರ್ಥ ಮಾಡುವು ದಕ್ಕಿಂತ ಮಕ್ಕಳ ಜತೆಗೆ ಹೆಚ್ಚಿನ ಸಮಯವನ್ನು ಕಳೆಯಬಹುದಾಗಿತ್ತು ಎನಿಸಿದರೆ ತಪ್ಪೇನಿಲ್ಲ, ಆದರೆ ಆಗ ಅದನ್ನು ಆಲೋಚಿಸಿ ಯಾವ ಪ್ರಯೋಜನವೂ ಇಲ್ಲ. ಮನೆ ಕಟ್ಟುವ ಬಯಕೆ ಉಂಟಾಯಿತು ಅಂದುಕೊಳ್ಳಿ ಆಗ ನಮ್ಮೆ ಶಕ್ತಿ ಆ ಬಯಕೆಯ ಸುತ್ತಲೇ ಸುತ್ತುತ್ತಿರುತ್ತದೆ. ನಮ್ಮೆಲ್ಲಾ ವಿಚಾರಗಳೂ, ನಿರ್ಣಯಗಳೂ ಆ ಮನೆಯ ಸುತ್ತಲೇ ಇರುವು ದರಿಂದ, ಜೀವನದ ಇತರ ವರ್ತಮಾನಗಳನ್ನು ಮರೆತುಬಿಡುತ್ತೇವೆ.

ಹಾಗಾದರೆ ಬಯಕೆಗಳಿಲ್ಲದೆ ಬದುಕಲು ಸಾಧ್ಯವೇ? ಬಯಕೆಯೇ ಇಲ್ಲದ ಬದುಕು ಬೆಂಗಾಡು. ಆಸ್ಪತ್ರೆಯಲ್ಲಿ ಮಲಗಿದ ರೋಗಿಯೂ ತಾನು ಬೇಗ ಗುಣಮುಖನಾಗಿ ಮನೆಗೆ ಹೋಗಬೇಕೆಂದು ಬಯಸುತ್ತಾನೆ. ಅದೇ ಒಬ್ಬ ಮನುಷ್ಯ ತನಗೆ ರೋಗವೇ ಬರಬಾರದು, ತಾನು ಸಾಯಲೂಬಾರದು ಎಂದು ಬಯಸಿದರೆ? ಆದ್ದರಿಂದ ನಮ್ಮ ಬೇಕು ಬೇಡಗಳನ್ನು ನಿರ್ಣಯಿಸಿ ಬಯಕೆಗಳನ್ನು ಗಾಳಿಸಬೇಕು, ಸಾಣಿಸಬೇಕು.

ಇನ್ನು, ಬಹಳಷ್ಟು ಜನ ತಮ್ಮ ಬಯಕೆಯ ಗುರಿ ತಲುಪುವುದೇ ಪ್ರಮುಖವೆಂದು ತಪ್ಪಾಗಿ ಭಾವಿಸುತ್ತಾರೆ. ಬಯಕೆಯ ಪರ್ವತದ ಶಿಖರ ತಲುಪುವ ತವಕದಲ್ಲಿ ಆರಂಭ ಮತ್ತು ಅಂತ್ಯದ ನಡುವಿನಲ್ಲಿರುವ ಪ್ರಯಾಣದ ದಾರಿಯೆಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ತಲುಪುವ ಗುರಿಗಿಂತ ಪ್ರಯಾಣದ ಹಾದಿ ಇನ್ನೂ ಸೊಗಸಾಗಿರಬಾರದೇಕೆ? ದಾರಿ ಯುವುದಕ್ಕೂ ಸಿಗುವ ಸುಂದರ ದೃಶ್ಯ, ಮರೆಯಲಾಗದ ಅನುಭವ, ಗುರಿಗಿಂತಲೂ ವಿಶಿಷ್ಟವಾಗಿರಬಾರದೇಕೆ? ಆದ್ದರಿಂದ ಗುರಿಯೆಡೆಗೆ ತಲುಪುವಾಗ ಪ್ರಯಾಣದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಎಷ್ಟೋ ಬಾರಿ ನಮ್ಮ ಬದುಕೇ ಸುಂದರವಾದ ಕ್ಷಣಗಳನ್ನು ನಮಗೆ ಉಡುಗೊರೆಯಾಗಿ ನೀಡುತ್ತದೆ. ಬದುಕು ಸುಂದರ ಪ್ರಯಾಣವಷ್ಟೇ ಅಲ್ಲ ಅತಿದೊಡ್ಡ ಬಹುಮಾನವೂ ಆಗುತ್ತದೆ.