Monday, 25th November 2024

Kiran Upadhyay Column: ಬಿದಿರಿನ ಗಳ, ಇವರಿಗೆ ಮನೆಯಂಗಳ !

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

dhyapaa@gmail.com

ವಿಯೆಟ್ನಾಮ್ ದೇಶದ ಹೆಸರು ಕೇಳದಿರುವವರು ವಿರಳ. ಒಮ್ಮೆ ಅಲ್ಲಿಗೆ ಭೇಟಿ ನೀಡಿದರೆ ಕ್ಷಣಾರ್ಧದಲ್ಲಿಯೇ ಹೃದಯಂಗಮವಾಗಿಬಿಡುತ್ತದೆ. ಏಷ್ಯಾ ಖಂಡದ ಭೂಪಟದಲ್ಲಿ ನೋಡಿದರೆ ಚೀನಾದ ದಕ್ಷಿಣದಲ್ಲಿ, ಗಿಡದಲ್ಲಿ ಜೋತುಬಿದ್ದ ಉದ್ದ ಮೆಣಸಿನಕಾಯಿಯಂತೆ ಇರುವ ದೇಶ.
ಚೀನಾದೊಂದಿಗಿನ ವಿಯೆಟ್ನಾಮ್ ಸಂಬಂಧ ಅಷ್ಟಕ್ಕಷ್ಟೇ. ಯಾವ ಪಾಪದ ಫಲವೋ ಏನೋ ದೇಶದ ಉತ್ತರ ಮತ್ತು ದಕ್ಷಿಣದ ನಡುವೆ
ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ದೇಶಗಳ ಸಹಾಯದೊಂದಿಗೆ 1955ರಿಂದ 1975ರವರೆಗೆ 2 ದಶಕಗಳ ಕಾಲ ಕಂಡು ಕೇಳರಿಯದ ಯುದ್ಧದಿಂದ 35 ಲಕ್ಷ ಪ್ರಜೆಗಳನ್ನು ಕಳೆದುಕೊಂಡು ನುಗ್ಗುನುಸಿಯಾಗಿದ್ದ ದೇಶ.

ಇದರ ಯುದ್ಧದ ವಿಷಯ ಇಟ್ಟುಕೊಂಡೇ 10 ಮಹಾಗ್ರಂಥ ಬರೆಯಬಹುದು. ಇಷ್ಟಾಗಿಯೂ ಆ ದೇಶ ಎದ್ದು ನಿಂತ ರೀತಿಯೇ ಅದು ಆಪ್ತವಾಗು ವುದಕ್ಕೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಈಗ ನಾನು ಉಲ್ಲೇಖಿಸುತ್ತಿರುವುದು ಕಲೆ ಮತ್ತು ಸಂಸ್ಕೃತಿಯ ವಿಷಯವಾದ್ದರಿಂದ ಅಲ್ಲಿನ ಯುದ್ಧದ ಬಗ್ಗೆ ಹೇಳದಿರುವುದೇ ಒಳಿತು. ವಿಯೆಟ್ನಾಮ್‌ನಲ್ಲಿ ಹು ಚಿ ಮಿನ್ಹ್ ಎಂಬ ನಗರವಿದೆ. ವಿಯೆಟ್ನಾಮ್‌ನ ರಾಜಧಾನಿ ಹನೋಯ್ ಆದರೂ ಹು ಚಿ ಮಿನ್ಹ್ ಎ ವಿಭಾಗದಲ್ಲೂ ಅದಕ್ಕಿಂತ ದೊಡ್ಡ ನಗರ.

ಮುಂಚೆ ಸಾಯ್ಗೋನ್ ಎಂದು ಕರೆಯಲ್ಪಡುತ್ತಿದ್ದ ನಗರಕ್ಕೆ 1976ರಲ್ಲಿ ಅಂದಿನ ಪ್ರಭಾವಿ ನಾಯಕ ಹು ಚಿ ಮಿನ್ಹ್‌ನ ಹೆಸರಿನಿಂದ ಮರುನಾಮ ಕರಣ ಮಾಡಲಾಯಿತು. ಆ ನಗರದ ಹೃದಯಭಾಗದಲ್ಲಿ ಒಂದು ಒಪೇರಾ ಹೌಸ್ ಇದೆ. ಇದಕ್ಕೆ ಸಾಯ್ಗೋನ್ ಒಪೇರಾ ಹೌಸ್ ಅಥವಾ ಮುನ್ಸಿಪಲ್ ಥಿಯೇಟರ್ ಎಂದು ಹೆಸರು. 122 ವರ್ಷದ ಇತಿಹಾಸವಿರುವ ಈ ಕಣ್ಸೆಳೆಯುವ ಕಟ್ಟಡದ ರೂವಾರಿ ಒಬ್ಬ ಫ್ರೆಂಚ್ ಆರ್ಕಿಟೆಕ್ಟ್. ಒಳಗೆ 2 ಬಾಲ್ಕನಿಯೊಂದಿಗೆ ಸುಮಾರು 470 ಜನ ಕುಳಿತುಕೊಳ್ಳಬಹುದಾದ, ಪ್ರತಿಧ್ವನಿ ರಹಿತ ಸಭಾಂಗಣ. ಯಾವ ಮೂಲೆಯಲ್ಲಿ ಕುಳಿತರೂ ಸ್ಪಷ್ಟ ವಾಗಿ ಗೋಚರಿಸುವ ರಂಗಸ್ಥಳ. 1900ರಲ್ಲಿ ಫ್ರೆಂಚ್ ತಾರೆಯರು ಇಲ್ಲಿ ಮೊದಲ ಕಾರ್ಯಕ್ರಮ ನೀಡಿದ್ದರೂ, ವಿಯೆಟ್ನಾಮ್ ಕಲಾವಿದರಿಗೆ ತಮ್ಮ ಮೊದಲ ಪ್ರದರ್ಶನ ನೀಡಲು ಅವಕಾಶ ಸಿಕ್ಕಿದ್ದು ಮಾತ್ರ 18 ವರ್ಷಗಳ ನಂತರ. ಪ್ರತಿನಿತ್ಯ ಕಾರ್ಯಕ್ರಮ ನೀಡುವ ಪ್ರಪಂಚದ ಕೆಲವೇ ಒಪೇರಾ ಹೌಸ್‌ಗಳಲ್ಲಿ ಇದೂ ಒಂದು.

ಸಾಮಾನ್ಯವಾಗಿ ನಾನು ಯಾವುದೇ ದೇಶಕ್ಕೆ ಹೋದರೂ ಅಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿ, ಅದಕ್ಕೆ
ಸಮಯ ಹೊಂದಿಸಿಕೊಳ್ಳುತ್ತೇನೆ. ಆ ದೇಶದ ಕಲೆ, ಸಂಸ್ಕೃತಿಯನ್ನು ತಿಳಿಯಲು ಇದಕ್ಕಿಂತ ಉತ್ತಮ ಅವಕಾಶ ಸಿಗಲಾರದು. ದೇಶದ ಕಟ್ಟಡಗಳು, ಐತಿಹಾಸಿಕ ಸ್ಥಳಗಳು, ವಿಶೇಷತೆಗಳನ್ನೆಲ್ಲ ಹೇಗೂ ನೋಡುತ್ತೇವೆ. ಬಹುತೇಕ ಎಲ್ಲಾ ಪ್ರವಾಸಿಗರೂ ಮಾಡುವುದು ಅದನ್ನೇ. ನಮಗೆ ತಿಳಿದಿರುವ ಪ್ರಪಂಚದಲ್ಲಿಯೇ ಎಲ್ಲಾ ದೇಶಗಳೂ ಇವೆಯಾದರೂ, ಪ್ರತಿ ದೇಶದಲ್ಲೂ ಒಂದು ಪ್ರಪಂಚವಿರುತ್ತದೆ. ಅದೇ ಕಲಾಪ್ರ
ಪಂಚ. ಕಲೆ ಅಷ್ಟು ವಿಶಾಲವಾಗಿರುವುದರಿಂದಲೇ ಅದಕ್ಕೆ ಕಲಾಪ್ರಪಂಚ ಎನ್ನುವುದು.

ನಾವು ಒಂದು ದೇಶಕ್ಕೆ ಹೋದಾಗ ಅದರೊಳಗಿನ ಪ್ರಪಂಚವನ್ನು ನೋಡದೇ ಅಲ್ಲಿಯ ರಸ್ತೆ, ಬೀಚು, ಕಟ್ಟಡಗಳನ್ನು ನೋಡಿ ಹಿಂದಿರುಗಿದರೆ
ಹೇಗೆ? ಇದರಿಂದ ಮೇಲ್ನೋಟಕ್ಕೆ ಆ ದೇಶದ ಗುಣ ಲಕ್ಷಣಗಳನ್ನು ತಿಳಿದುಕೊಳ್ಳಬಹುದು, ನಾಡಿಮಿಡಿತವನ್ನಲ್ಲ. ಕೆಲ ವರ್ಷದ ಹಿಂದೆ ನಾನು ವಿಯೆಟ್ನಾಮ್‌ನ ಹು ಚಿ ಮಿನ್ಹ್ ಸಿಟಿಗೆ ಹೋದಾಗ ಅಲ್ಲಿಯ ಒಪೇರಾ ಹೌಸ್ ನೋಡಲು ಹೋಗಿದ್ದೆ. ಅವತ್ತು ಅಲ್ಲಿ ನಡೆಯಲಿದ್ದ ಕಾರ್ಯಕ್ರಮದ ಭಿತ್ತಿಚಿತ್ರ ಕಂಡ ನಂತರ ಅದನ್ನು ನೋಡಿಯೇ ಹಿಂದಿರುಗುವುದೆಂದು ನಿರ್ಧರಿಸಿದೆ.

‘ವಿಯೆಟ್ನಾಮ್ ಬಾಂಬೂ ಸರ್ಕಸ್’ ಎಂಬ ಅದರಲ್ಲಿನ ಅಡಿಬರಹ ನನ್ನ ಕುತೂಹಲ ಹೆಚ್ಚಿಸಿತ್ತು. ನಾನು ನೋಡಲು ಕುಳಿತ ಪ್ರದರ್ಶನದ ಹೆಸರು ’A O Show’. ಸುಮಾರು ಒಂದೂ ಕಾಲು ಗಂಟೆಯ ಕಾರ್ಯಕ್ರಮ. ಹಳ್ಳಿಯ ಜನಜೀವನದಿಂದ ಆರಂಭವಾಗಿ ನಗರೀಕರಣಗೊಳ್ಳುವವರೆಗಿನ
ಪ್ರದರ್ಶನ. ಕೋಳಿ ಕೂಗುವ ಧ್ವನಿಯೊಂದಿಗೆ ಆರಂಭವಾಗುವ ಈ ಪ್ರದರ್ಶನದಲ್ಲಿ ಹಳ್ಳಿಯ ಹಾಡುಗಳು, ವಾದ್ಯ, ನೃತ್ಯಗಳು ನಗರೀಕರ
ಣಗೊಳ್ಳುವ ಹಂತಕ್ಕೆ ಬರುವಾಗ ಎಲ್ಲವೂ ಸಮಕಾಲೀನವಾಗಿ ಬದಲಾಗುತ್ತವೆ.

ಈ ಸಂದರ್ಭದಲ್ಲಿನ ಹಳ್ಳಿಯಲ್ಲಿ ನೆಲೆಸಿದವರ ಪಾಡು, ಗೊಂದಲಗಳನ್ನು ಬಿಂಬಿಸಲಾಗಿದೆ. ಅದರಲ್ಲಿ ಬರುವ ಹಾಸ್ಯ ಅರ್ಥವಾಗದಿದ್ದರೂ, ಹಾಸ್ಯ ಕ್ಕಾಗಿಯೇ ಕೆಲವು ಚಿಕ್ಕ ಸಂಭಾಷಣೆಯನ್ನು ಸೇರಿಸಲಾಗಿದೆಯೆಂದು ಅಕ್ಕಪಕ್ಕದವರು ನಕ್ಕಾಗ ಅರ್ಥವಾಗುತ್ತದೆ. ಪ್ರದರ್ಶನದುದ್ದಕ್ಕೂ ಬಿದಿರಿನ ಬುಟ್ಟಿಗಳು ಉರುಳಿ ಬರುತ್ತವೆ, ಬಿದಿರಿನ ದೋಣಿಗಳು ತೇಲಿಬರುತ್ತವೆ.

ಇಲ್ಲಿ ಬರುವ ಸೇತುವೆ, ಜಾರುಬಂಡಿ, ಮನೆ, ಗುಡ್ಡ, ಬೆಂಕಿ ಎಲ್ಲವೂ ಬಿದಿರಿನವೇ. ಸಣ್ಣ ಬಿದಿರಿನ ಬುಟ್ಟಿಯಿಂದ ಹಿಡಿದು 15 ಅಡಿಯ
ಗಳದೊಂದಿಗೆ ಕಲಾವಿದರು ನಿರರ್ಗಳವಾಗಿ ಆಡುವುದನ್ನು ನೋಡುವಾಗ ಎಂಥವರಿಗೂ ಮಾಂಚನವಾಗಬೇಕು. ವೇದಿಕೆಯಲ್ಲಿ ಕಲಾವಿದರು 15 ಅಡಿಯ 10-12 ಗಳಗಳಿಂದ ಕಲಾಕೃತಿ ನಿರ್ಮಿಸುತ್ತಾರೆ. ಅದರ ಮೇಲೆ ನಡೆಯುತ್ತಾರೆ, ಕುಣಿಯುತ್ತಾರೆ, ಅಕ್ರೋಬ್ಯಾಟಿಕ್ ಚಲನವಲನ ತೋರಿಸುತ್ತಾರೆ, ಸಲೀಸಾಗಿ ಚಾಕ ಚಕ್ಯತೆ ತೋರಿಸುತ್ತಾರೆ. ಇಷ್ಟರ ನಡುವೆ 15 ಅಡಿ ಎತ್ತರದ ಬಾಲ್ಕನಿಯ ಪ್ರೇಕ್ಷಕರ ನಡುವಿಂದ ಒಬ್ಬ ಕೆಳಗೆ ಜಿಗಿಯುತ್ತಾನೆ. ಎಲ್ಲವೂ ಲೋಪವಿಲ್ಲದೆ ಅಚ್ಚುಕಟ್ಟಾಗಿ ನಡೆಯುತ್ತದೆ. ಇದೆಲ್ಲವನ್ನೂ ಕಣ್ಣು ಮಿಟುಕಿಸದೆಯೇ ನೋಡುತ್ತ ಕುಳಿತಿರ ಬೇಕು ಅಷ್ಟೇ.

ಮೊದಲನೆಯ ಪ್ರದರ್ಶನ ಎಷ್ಟು ಅದ್ಭುತವಾಗಿತ್ತೆಂದರೆ ಅದು ಮುಗಿಯುವುದಕ್ಕಿಂತ ಮುಂಚೆಯೇ ನಾನು ಮುಂದಿನ ಪ್ರದರ್ಶನಕ್ಕೂ
ಟಿಕೆಟ್ ಬುಕ್ ಮಾಡಿಕೊಂಡೆ. ಎರಡನೆಯ ಪ್ರದರ್ಶನದ ಹೆಸರು ‘The Dar’. ಇದು ಕೂಡ ಸಂಪೂರ್ಣ ಬಿದಿರಿನ ಗಳ ಮತ್ತು ಸಲಕರಣೆ ಗಳೊಂದಿಗೆ ವಿಯೆಟ್ನಾಮ್‌ನ ದಕ್ಷಿಣ ಭಾಗದ ಗುಡ್ಡಗಾಡು ಜನರ ನಿತ್ಯಜೀವನದ ಪರಿಯನ್ನು ತೋರ್ಪಡಿಸುವ ಪ್ರಯೋಗ. ಇದರಲ್ಲಿ
ಬಳಸಿದ ಸಂಗೀತ ನೂರಕ್ಕೆ ನೂರರಷ್ಟು ಜನಪದ. ಅದಕ್ಕೆ ಪೂರಕವಾಗಿ ನಗಾರಿ, ತಾಳ, ಕೋಣದ ಕೊಂಬಿನಿನ ಕಹಳೆ ಬಿದಿರನ್ನು ಬಳಸಿ ಸಿದ್ಧಪಡಿಸಿದ ವಾದ್ಯಗಳು. ಅದಕ್ಕೊಪ್ಪುವ ಉಡುಗೆ-ತೊಡುಗೆ. ಸಮಯೋಚಿತ ಧ್ವನಿ ಮತ್ತು ಬೆಳಕಿನ ಏರಿಳಿತ. ಅದರೊಂದಿಗೆ, ಗುಡ್ಡಗಾಡು ಜನಾಂಗದವರ ಹಾಡುಗಳು, ಕೇಕೆ ಸದ್ದು. ಹಿಂಡಿದರೆ ಒಂದು ಗ್ರಾಂ ಕೊಬ್ಬು ಕೂಡ ಸಿಗದಂಥ ಮೈಕಟ್ಟಿನ ಕಲಾವಿದರ ಆಂಗಿಕ ಅಭಿನಯ, ಮುಖದ ಹಾವ-ಭಾವ ಎಲ್ಲವೂ ವರ್ಣನಾತೀತವೇ. ಒಂದಕ್ಷರ ವಿಯೆಟ್ನಾಮೀಸ್ ಭಾಷೆ ಬರದಿದ್ದರೂ ಕಥೆಯ ಸಾರಾಂಶ, ನಾಯಕ ನಾಯಕಿಯರ
ಪ್ರೇಮ ಸಪ, ಆಗಾಗ ಬಂದುಹೋಗುವ ಖಳನಾಯಕ, ಪ್ರಕೃತಿಯ ವೈಪರೀತ್ಯ ಎಲ್ಲವೂ ನನಗರ್ಥವಾಗಿತ್ತು.

ಇಂಥ ಪ್ರದರ್ಶನಗಳನ್ನು ಕಂಡಾಗ ಕಲೆಗೆ ಯಾವುದೇ ಬೇಲಿಯಿಲ್ಲ ಎಂದು ಇನ್ನಷ್ಟು ಮನದಟ್ಟಾಗುತ್ತದೆ. ಸಂಗೀತ, ನೃತ್ಯ, ಸರ್ಕಸ್, ಜಿಗ್ಲಿಂಗ್ ಇವುಗಳಲ್ಲಿ ಯಾವುದಾದರೂ ಒಂದನ್ನೇ ಗಂಟೆಗಟ್ಟಲೆ ಕುಳಿತುಕೊಂಡು ಆಸ್ವಾದಿಸಬಹುದು. ಒಂದೊಂದು ಕಲೆಗೂ ಅದರದ್ದೇ ಆದ ವಿಶಿಷ್ಟತೆ ಯಿದೆ, ಮಹತ್ವವಿದೆ. ಸಂಗೀತ ಕೇಳಲು ಕಿವಿಯಿದ್ದರೆ ಸಾಕು, ಕಣ್ಣುಮುಚ್ಚಿ ನಮಗರಿವಿಲ್ಲದ ಲೋಕದಲ್ಲಿ ವಿಹರಿಸಬಹುದು. ಜಿಗ್ಲಿಂಗ್, ಅಕ್ರೋಬಾಟ್, ಸರ್ಕಸ್‌ಗಳು ನೋಡಿ ಆನಂದಿಸುವಂಥವು. ಸಂಗೀತ ಇದರ ಜತೆಗಿದ್ದರೆ ಇನ್ನಷ್ಟು ಆಹ್ಲಾದಕರವಾಗಿರುತ್ತದೆ. ಇವೆಲ್ಲ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಸಿಗುತ್ತವೆಂದರೆ ಕೇಳಬೇಕೆ? ಪ್ರೇಕ್ಷಕನಿಗೆ ಫುಲ್ ಪೈಸಾ ವಸೂಲ್. ಸ್ವರ್ಗಕ್ಕೆ ಒಂದೂವರೆ ಗೇಣು ಮಾತ್ರ ಬಾಕಿ!

ವಿಶೇಷವೆಂದರೆ ಪ್ರದರ್ಶನದ ನಂತರ ಕಲಾವಿದರೇ ಮಹಾದ್ವಾರದ ಬಳಿ ಬಂದು ಒಳಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ಪ್ರೇಕ್ಷಕರಿಗೆ‌ ಚಪ್ಪಾಳೆ ತಟ್ಟುತ್ತಾ ನಿಂತಿರುತ್ತಾರೆ. ಅಲ್ಲಿ ಪ್ರೇಕ್ಷಕರಿಗೆ ಕಲಾವಿದರೊಂದಿಗೆ ಭಾವಚಿತ್ರ ತೆಗೆದುಕೊಳ್ಳುವುದಕ್ಕೂ ಅವಕಾಶವಿದೆ. ಕಲಾವಿದರನ್ನು ಅಭಿನಂದಿಸಿ ನಾನು ಅದರ ಯಶಸ್ಸಿನ ರೂವಾರಿಯನ್ನು ಭೇಟಿಯಾಗದೇ ಬರುವ ಮಾತೇ ಇರಲಿಲ್ಲ.

ಅದೃಷ್ಟವಶಾತ್ ಈ ಎರಡೂ ಪ್ರದರ್ಶನದ ನಿರ್ದೇಶಕ ತುಆನ್ ಲೆ ಅಂದು ಅಲ್ಲಿಯೇ ಇದ್ದ. ಪರಿಚಯವಾದ ಕೆಲವೇ ಕ್ಷಣಗಳಲ್ಲಿ ಕಲಾವಿದರ ಸಂಬಳ ಹೇಳುವಷ್ಟು ಆಪ್ತನಾದ. ಹಾಗೆಯೇ ಅವನಲ್ಲಿ ಮಾತಿಗಿಳಿದಾಗ ಬಹಳಷ್ಟು ವಿಷಯಗಳು ಹೊರಬಂದವು. ನಾನು ಆತನಲ್ಲಿ ಮೊದಲು ಕೇಳಿದ ಪ್ರಶ್ನೆಯೆಂದರೆ ‘A O Show ಅಂದರೆ ಏನು ಎಂದು. ಅದಕ್ಕೆ ಅವನು, ಅದಕ್ಕೇನೂ ಅರ್ಥವಿಲ್ಲ, ಸರಳೀಕರಿಸದ ‘Ahhh Ohhh Show’ ಎಂದ! ಅದ್ಯಾಕೆ ಆ ಹೆಸರಿಟ್ಟರೋ? ‘The Dar’ ಅಂದರೆ going round in cirles ಎಂದ.

ಅಲ್ಲಿಗೆ ಸಮಾಧಾನವಾಯಿತು. ಹಾಗಾದರೆ ಎಲ್ಲಾ ಪ್ರದರ್ಶನಗಳಲ್ಲೂ ಬಿದಿರನ್ನೇ ಬಳಸುತ್ತಾರಾ? ಇಲ್ಲ, ಅಸಂಖ್ಯಾತ ಹಳ್ಳಿಯ ರೈತರ ಭಾವನೆಗ
ಳನ್ನು ಬಿಂಬಿಸುವ ‘Mist’ ಎಂಬ ಪ್ರದರ್ಶನದಲ್ಲಿ ನಿಯೋ ಕ್ಲಾಸಿಕ್, ಕಂಟೆಂಪರರಿ, ಬ್ಯಾಲೆ ನೃತ್ಯಕ್ಕೆ ಮತ್ತು ಬೆಳಕಿನ ವೈವಿಧ್ಯಕ್ಕೆ ಮಹತ್ವ
ನೀಡಲಾಗಿದೆಯಂತೆ. ‘Lang Toi’ (ನನ್ನ ಹಳ್ಳಿ) ಎಂಬ ಉತ್ತರ ವಿಯೆಟ್ನಾಮ್‌ನ ಹಳ್ಳಿಯ ಸಂಪ್ರದಾಯ ಮತ್ತು ನಾವೀನ್ಯದ ಮಿಶ್ರಣವಾದ
ಪ್ರದರ್ಶನದಲ್ಲಿ ಬಿದಿರಿನ ಕೆಲವೇ ಉಪಕರಣಗಳೊಂದಿಗೆ ಸಂಗೀತ ಮತ್ತು ಜಿಗ್ಲಿಂಗ್‌ಗೆ ಪ್ರಾಮುಖ್ಯ ಇದೆಯಂತೆ. ಮಧ್ಯ ವಿಯೆಟ್ನಾಮ್
ನ ಸ್ಥಳೀಯ ಜೀವನ ಕಥೆಗಳು, ಆಚರಣೆಗಳು, ತತ್ತ್ವಜ್ಞಾನ, ಚಿಂತನೆಗಳನ್ನು ಹೇಳುವ, ಹಳೆಯ ಚಿಂತೆಗಳನ್ನು ಬಿಟ್ಟು, ಭವಿಷ್ಯದಲ್ಲಿ ಮಾನವೀ
ಯತೆಯ ಸಾರ್ವತ್ರಿಕ ಸಂದೇಶ ಸಾರುವ ‘Palao’ ಪ್ರದರ್ಶನದಲ್ಲಿ ಬಿಳಿ ಮತ್ತು ಕೆಂಪು ಉದ್ದನೆಯ ಬಟ್ಟೆಯೊಂದಿಗೆ ಅಕ್ರೋಬ್ಯಾಟಿಕ್ಸ್,
ಸಮಕಾಲೀನ ನೃತ್ಯದೊಂದಿಗೆ ಜನಾಂಗೀಯ ವಾದ್ಯಗಳನ್ನು ನುಡಿಸಿ, ಅಧ್ಯಾತ್ಮಿಕ ಸಂಗೀತಕ್ಕೆ ಪ್ರಾಧಾನ್ಯ ಇದೆಯಂತೆ.

ತುಆನ್ ಲೆ ಮೂಲತಃ ಜಿಗ್ಲಿಂಗ್ ಕಲಾವಿದ. ೬ನೇ ವಯಸ್ಸಿನ ಮೊದಲ ಪ್ರದರ್ಶನ ನೀಡಿದವ. ಬಾಲ್ಯದಲ್ಲಿ ಇದೇ ಒಪೇರಾ ಹೌಸ್ ನಲ್ಲಿಯೇ ಆತ ಕಾರ್ಯಕ್ರಮ ನೀಡಿದ್ದನಂತೆ. ಚೆಂಡು, ದಾಂಡು, ಸೀಸೆಗಳ ಜಿಗ್ಲಿಂಗ್ ಮಾಡುತ್ತಿದ್ದರೂ, ಅವನಿಗೆ ಇಷ್ಟವಾದದ್ದು ಮತ್ತು ಹೆಸರು ತಂದುಕೊಟ್ಟದ್ದು ಟೋಪಿಯ ಜಿಗ್ಲಿಂಗ್. ಒಂದೇ ಬಾರಿಗೆ 7 ಟೋಪಿಯೊಂದಿಗೆ ಆತ ಸರಸ ವಾಡುತ್ತಿದ್ದ. ಸುಮಾರು 10 ವರ್ಷ ಯುರೋಪಿನ ಕೆಲವು ದೇಶಗಳಲ್ಲಿ ಜಿಗ್ಲಿಂಗ್ ಮಾಡಿಕೊಂಡಿದ್ದವ. ಜತೆಗೆ ಆತ ಒಳ್ಳೆಯ ಕೊರಿಯೋಗ್ರಫರ್, ಕೆಲವು ವಾದ್ಯಗಳನ್ನು ನುಡಿಸಬಲ್ಲ ಸಂಗೀತಕಾರನೂ ಹೌದು. ಉತ್ತಮ ನಿರ್ದೇಶಕ ಎಂಬುದರಲ್ಲಿ ಎರಡು ಮಾತೇ ಇಲ್ಲ.

ಕಳೆದ 10 ವರ್ಷ ದಿಂದ ವಿಯೆಟ್ನಾಮ್‌ನಲ್ಲಿ ಮಿತ್ರರೊಂದಿಗೆ ತಂಡ ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದಾನೆ. 2012ರಲ್ಲಿ ಇನ್ನೂ 5 ಮಿತ್ರರೊಂದಿಗೆ ಲೂನ್ ಪ್ರೊಡಕ್ಷನ್ ಎಂಬ ಸಂಸ್ಥೆ ಕಟ್ಟಿಕೊಂಡು ನಿರಂತರ ಕಾರ್ಯಕ್ರಮ ನೀಡುತ್ತಿದ್ದಾನೆ.

ಅದರಲ್ಲಿ ಇಬ್ಬರು ನೃತ್ಯ ನಿರ್ದೇಶಕರು, ಒಬ್ಬ ಸಂಗೀತ ನಿರ್ದೇಶಕ, ಇನ್ನೊಬ್ಬ ಕ್ರಿಯೇಟಿವ್ ಡೈರೆಕ್ಟರ್ ಇನ್ನೊಬ್ಬ ಉದ್ಯಮಿ. ಲೂನ್ ಪ್ರೊಡಕ್ಷನ್
ನಲ್ಲಿರುವ ಒಬ್ಬೊಬ್ಬರೂ ಒಂದೊಂದು ರತ್ನವೇ. ಪ್ರತಿನಿತ್ಯ ವಿಯೆಟ್ನಾಮ್‌ನ ಒಂದಿಂದು ಕಡೆ ಇವರ ಕಾರ್ಯಕ್ರಮ ಇದ್ದೇ ಇರುತ್ತದೆ.
ಹನೋಯ, ಸಾಯ್ಗೋನ್, ಹೋಯ್ ಅನ್ ನಗರಗಳಲ್ಲದೆ ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್, ಯುರೋಪ್‌ನ ಕೆಲವು ರಾಷ್ಟ್ರಗಳು ಸೇರಿ ದಂತೆ ಒಟ್ಟು 17 ದೇಶಗಳಲ್ಲಿ ಈ ಸಂಸ್ಥೆಯ ತಂಡ ಕಲಾಪ್ರೌಢಿಮೆ ಮೆರೆದು ಈಗ‌ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ. 2015ರಿಂದ 2017ರವರೆಗೆ ಸತತ 3 ವರ್ಷ ಯುರೋಪ್ ದೇಶಗಳಲ್ಲಿ ಪ್ರದರ್ಶನ ನೀಡಿದ ಶ್ರೇಯ ಈ ತಂಡದ್ದು.

ಪ್ರತಿ ತಂಡದಲ್ಲೂ ಸುಮಾರು 20 ಸ್ಟೇಜ್ ಪರ್ಫಾರ್ಮರ್ಸ್, 8-10 ಸಂಗೀತಗಾರರು, 5-6 ಸಹಾಯಕರಿರುತ್ತಾರೆ. ಲಾಂಗ್ ತೋಯ್ ಎಂಬ ಒಂದು ಪ್ರದರ್ಶನದಲ್ಲಿ 20 ಜನ ಸಂಗೀತಗಾರರು, ವಾದ್ಯದವರೂ ಇದ್ದಾರೆ. ಒಂದು ತಂಡದಲ್ಲಿ 35-40 ಕಲಾವಿದರಿರುತ್ತಾರೆ. ಸಂಸ್ಥೆಯಲ್ಲಿ ಸುಮಾರು 200 ಕಲಾವಿದರಿದ್ದಾರೆ. ಒಂದು ಪ್ರದರ್ಶನವನ್ನು ರಂಗದಲ್ಲಿ ಪ್ರಸ್ತುತ ಪಡಿಸುವುದಕ್ಕಿಂತ ಮುಂಚೆ ಇವರು ಅಭ್ಯಾಸ ನಡೆಸುವ ಅವಧಿ ಬರೋಬ್ಬರಿ ಎರಡು ವರ್ಷ!

ಅದೂ ಇವರೆಲ್ಲ ಅಕ್ರೋಬಾಟಿಕ್ಸ್, ಡಾನ್ಸ್, ಸ್ಟಂಟ್‌ಗಳಲ್ಲಿ ಪರಿಣತಿ ಪಡೆದ ಮೇಲೆ! ಕೇವಲ ಒಂದು ಕಾರ್ಯಕ್ರಮಕ್ಕೆ 2 ವರ್ಷದ ಅಭ್ಯಾಸ
ಮಾಡಿರಬೇಕಾದರೆ ಕಲಾವಿದರ ಬದ್ಧತೆ ಎಷ್ಟಿರಬಹುದು, ಆ ಕಾರ್ಯಕ್ರಮದ ಮೌಲ್ಯ ಹೇಗಿರಬಹುದು ಊಹಿಸಿ. ಸಣ್ಣ ತಪ್ಪಾದರೂ ಪ್ರಾಣಕ್ಕೇ ಅಪಾಯ! ಅದಕ್ಕೇ ಇರಬೇಕು, ಪ್ರದರ್ಶನವಿರಲಿ, ಇಲ್ಲದಿರಲಿ, ಸಿದ್ಧತೆಯಿರಲಿ, ಅಭ್ಯಾಸದ ಸಮಯವಾಗಲಿ, ಇವರಿಗೆಲ್ಲ ಸಂಬಳ ಇದೆ. ಇವರಲ್ಲಿ ತಿಂಗಳಿಗೆ ಒಂದೂವರೆಯಿಂದ ಎರಡೂವರೆ ಸಾವಿರ ಡಾಲರ್ ಸಂಬಳ ಪಡೆಯುವ ಕಲಾವಿದರಿದ್ದಾರೆ. ಅಲ್ಲದೆ, ಇವರ ಊಟೋಪಚಾರ, ವಸತಿ, ದೊಡ್ಡ ಮೊತ್ತದ ಇನ್ಶೂರೆನ್ಸ್ ಎಲ್ಲವನ್ನೂ ಸಂಸ್ಥೆ ವಹಿಸಿಕೊಳ್ಳುತ್ತದೆ. ವೇದಿಕೆಯಲ್ಲಿ ಪ್ರದರ್ಶನ ನೀಡುವ ಕಲಾವಿದರಿಗೆ ಅಪಘಾತದ ಸಂಭವನೀಯತೆ ಹೆಚ್ಚಿರುವುದರಿಂದ ಅವರಿಗೆ ದೊಡ್ಡ ಮೊತ್ತದ ಸಂಬಳ ಮತ್ತು ವಿಮೆ ಇರುತ್ತದೆ. ಬಾಲ್ಕನಿಯಿಂದ ಒಬ್ಬ ಹಾರಿದ ಎಂದು ಹೇಳಿದೆನಲ್ಲ, ಅವನಿಗೆ ತಿಂಗಳಿಗೆ 4000 ಡಾಲರ್ ಸಂಬಳವಂತೆ, ಈಗಾಗಲೇ 2 ಬಾರಿ ಪ್ರಾಣಾಪಾಯದಿಂದ ಪಾರಾಗಿದ್ದಾ ನಂತೆ!

ನಾನು ಲೆ ಯೊಂದಿಗೆ ಹರಟುತ್ತಿದ್ದಾಗ ಲೂನ್ ಪ್ರೊಡಕ್ಷನ್ ಪುರಾತನ ನಗರ ಹೋಯ್ ಅನ್ ನಗರದಲ್ಲಿ ಇತ್ತೀಚೆಗೆ ಸ್ಥಾಪಿಸಿದ ಕಲಾಮಂದಿರದ
ಚಿತ್ರಗಳನ್ನು ತೋರಿಸಿದ. ಇದಕ್ಕೆ ‘”Lune Center for Performing Arts’ ಅಂತ ಹೆಸರಿಟ್ಟರೂ ಇದು ‘ಬಾಂಬೂ ಥಯೇಟರ್’ ಎಂದೇ ಪ್ರಸಿದ್ಧಿಯಾಗಿದೆಯಂತೆ. ಇದರ ವಿಶೇಷತೆಯೆಂದರೆ, ನೆಲದಿಂದ ಹಿಡಿದು ಚಾವಣಿಯವರೆಗೆ ಎಲ್ಲವೂ ಮರ ಮತ್ತು ಬಿದಿರಿನಿಂದಲೇ ಮಾಡಲ್ಪಟ್ಟಿದ್ದು. ಮಹಾದ್ವಾರ, ತೂಗುದೀಪಗಳು ಪ್ರತಿಯೊಂದು ಚಿತ್ರದಲ್ಲೂ ಬಿದಿರೋ ಬಿದಿರು. ಮಹಾದ್ವಾರದ ಪಕ್ಕದಲ್ಲಿರುವ ರಿಸೆಪ್ಷನ್ ಏರಿಯಾದ ಚಿತ್ರ ನೋಡಿದಾಗ ಕರ್ನಾಟಕದ ನೆನಪಾಗದೇ ಇರಲಾರದು. ಅಲ್ಲಿಯ ಗೋಡೆಗೆ ಬಳಿದ ಹಳದಿ ಮತ್ತು ಚಾವಣಿಯ ಕೆಂಪು ಬಣ್ಣ ಚಿತ್ರದಲ್ಲಿ ಕರ್ನಾಟಕದ ಧ್ವಜದಂತೆ ಕಾಣುತ್ತಿತ್ತು!

ಇದನ್ನೂ ಓದಿ: kiranupadhyaycolumn