Saturday, 12th October 2024

ರೈತರ ಅಭಿವೃದ್ದಿಗೆ ಕಿಸಾನ್‌ ಕಾರ್ಡ್‌

ಅಭಿಮತ

ಶ್ರೀಗೌರಿ ಎಸ್.ಜೋಶಿ

ಭಾರತದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಪ್ರತಿ ಬಜೆಟ್‌ನಲ್ಲಿಯೂ ಕೃಷಿ
ಕ್ಷೇತ್ರ 5ಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ದೇಶದ ಶೇ.60ರಷ್ಟು ಜನರು ಕೃಷಿ ಕ್ಷೇತ್ರದ ಮೇಲೆ ಅವಲಂಬಿತರಾಗಿದ್ದಾರೆ.

ಮಾತ್ರವಲ್ಲ ನಮ್ಮ ಒಟ್ಟು ಜಿಡಿಪಿಯ ಶೇ.18ರಷ್ಟು ಪಾಲು ಸಂದಾಯವಾಗು ವುದು ಈ ಕೃಷಿ ಕ್ಷೇತ್ರದ ಮೂಲಕ. ಹೀಗಾಗಿ ಪ್ರತಿ ಹೆಜ್ಜೆಯಲ್ಲಿಯೂ ರೈತರ ಹಿತ ಕಾಪಾಡುವುದು ಸರಕಾರದ ಆದ್ಯ ಕರ್ತವ್ಯ. ಅದಕ್ಕಾಗಿಯೇ ಸಾಕಷ್ಟು ವಿನೂತನ ಯೋಜನೆ ಗಳನ್ನು, ಮಸೂದೆಗಳನ್ನು ರೈತರಿಗಾಗಿ ಜಾರಿಗೊಳಿಸ ಲಾಗುತ್ತದೆ. ಹೀಗೆ ಜಾರಿಗೊಂಡ ಯೋಜನೆಗಳಲ್ಲಿ ಮುಖ್ಯವಾದದ್ದು ಕಿಸಾನ್ ಕಾರ್ಡ್ ಯೋಜನೆ. ಆರ್.ವಿ.ಗುಪ್ತಾ ಸಮಿತಿಯ ಶಿಫಾರಸಿನ ಮೇರೆಗೆ ‘ನಬಾರ್ಡ್’ ಈ ಯೋಜನೆಯನ್ನು ರೂಪಿಸಿತ್ತು. ಈ ಯೋಜನೆಯನ್ನು 1988ರಲ್ಲಿಯೇ ಜಾರಿಗೊಳಿಸಲಾಗಿದ್ದರೂ, ರೈತರ ಅಗತ್ಯತೆ ಮತ್ತು ಸಮಸ್ಯೆಗಳಿಗೆ ಪೂರಕವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಕಿಸಾನ್ ಕಾರ್ಡ್ ಯೋಜನೆಯನ್ನು ರೂಪಿಸಿದ ಮುಖ್ಯ ಉದ್ದೇಶವೆಂದರೆ, ರೈತರು ಬ್ಯಾಂಕ್‌ನಿಂದ ಅತ್ಯಂತ ಸುಲಭ ರೀತಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆಯುವಂತೆ ಮಾಡು ವುದು. ಜತೆಗೆ ಲೇವಾದೇವಿಗಾರರ ಅತ್ಯಂತ ದುಬಾರಿ ಬಡ್ಡಿದರಗಳಿಂದ, ಕಡಿಮೆ ಮರುಪಾವತಿ ಅವಧಿಗಳಿಂದ ಅವರನ್ನು ರಕ್ಷಿಸು ವುದು ಈ ಯೋಜನೆಯ ಮುಖ್ಯ ಉದ್ದೇಶ. ಅಲ್ಲದೇ, ಸಾಲ ಮರುಪಾವತಿಗೆ ಸಾಕಷ್ಟು ರಿಯಾಯಿತಿಯನ್ನು, ಅವಧಿಯನ್ನು ಕೂಡ ನೀಡಲಾಗುತ್ತದೆ. ಹೀಗಾಗಿ ರೈತರು ಬ್ಯಾಂಕ್ ಮುಖಾಂತರ ಅತ್ಯಂತ ಪಾರದರ್ಶಕವಾಗಿ ಹಾಗೂ ಸರಳ ರೀತಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಎಲ್ಲಾ ರಾಷ್ಟ್ರಿಕೃತ, ಖಾಸಗಿ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಈ ಯೋಜನೆ ಲಭ್ಯವಿದೆ. 2019ರಿಂದ ಮೀನುಗಾರಿಕೆ, ಪಶುಪಾಲನೆ ಯನ್ನೂ ಕಿಸಾನ್ ಕಾರ್ಡ್ ಅಡಿಯಲ್ಲಿ ಸೇರಿಸಲಾಗಿದ್ದು, ಎಲ್ಲಾ ಬಗೆಯ ಆರ್ಥಿಕ ಸಹಾಯಗಳು ಲಭ್ಯವಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್: ಈ ಯೋಜನೆಯಲ್ಲಿ ಕ್ರೆಡಿಟ್ ಕಾರ್ಡನ್ನು ಇತ್ತೀಚೆಗೆ ಸೇರಿಸಲಾಗಿದೆ. ಲೋನ್ ಪಡೆಯುವ ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದ್ದು, ಅದನ್ನು ಎಟಿಎಂನಂತೆ ಬಳಸಬಹುದಾಗಿದೆ. ಅಂದರೆ ಬ್ಯಾಂಕ್‌ನಿಂದ ಸಾಲ ಮಂಜೂರಾಗಿ ಅವರ ಲೋನ್ ಖಾತೆಗೆ ಜಮೆಯಾಗಿರುತ್ತದೆ. ರೈತರು ತಮಗೆ ಬೇಕಾದಾಗ ಬೇಕಾದಷ್ಟು ಹಣವನ್ನು ಲೋನ್
ಖಾತೆಯಿಂದ ಕಾರ್ಡ್ ಬಳಸಿ ಪಡೆದುಕೊಳ್ಳಬಹುದಾಗಿದೆ. ಹೀಗೆ ಅಗತ್ಯವಿದ್ದ ಸಂದರ್ಭದಲ್ಲಿ ಬೇಕಾದಷ್ಟು ಹಣವನ್ನು ಮಾತ್ರ ಪಡೆಯುವ ಅವಕಾಶವನ್ನು ಕ್ರೆಡಿಟ್ ಕಾರ್ಡ್ ಕಲ್ಪಿಸುತ್ತದೆ.

ಯಾರು ಕಿಸಾನ್ ಕಾರ್ಡ್ ಪಡೆಯಬಹುದು?: ಕೃಷಿ ಹಾಗೂ ಕೃಷಿ ಸಂಬಂಧಿ ಚಟುವಟಿಕೆಗಳಾದ ಪಶುಪಾಲನೆ, ಹೈನುಗಾರಿಕೆ, ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ಕೃಷಿಕರೂ ಕಿಸಾನ್ ಕಾರ್ಡ್ ಪಡೆಯಬಹುದು. ಕಾರ್ಡ್ ಪಡೆಯಲು ಕನಿಷ್ಠ ವಯೋಮಿತಿ 18 ವರ್ಷ. ಕಿಸಾನ್ ಕಾರ್ಡ್ ಲೋನ್ ಪಡೆಯುತ್ತಿರುವವರು ಹಿರಿಯ ನಾಗರಿಕರಾಗಿದ್ದರೆ, ಒಬ್ಬ ಸಹ ಸಾಲಗಾರರನ್ನು
ಹೊಂದಿರಲೇಬೇಕು. ಲೋನ್ ಪಡೆಯುವ ಸಂದರ್ಭದಲ್ಲಿ ಅಧಿಕೃತ ಗುರುತಿನ ಚೀಟಿ (ಪಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆ, ಪಾಸ್‌ಪೋರ್ಟ್) ಯನ್ನು ಬ್ಯಾಂಕ್‌ಗೆ ಸಲ್ಲಿಸಬೇಕು.

ಕಿಸಾನ್ ಕಾರ್ಡ್‌ನ ಲಾಭಗಳೇನು?: ಬೆಳೆ ಹಾಗೂ ಲಾಭದ ಆಧಾರದಲ್ಲಿ ರೈತರು ಸಾಲವನ್ನು ಪಡೆಯಬಹುದು. ಬೆಳೆಸಾಲದ ಜತೆಗೆ ಕೃಷಿ ಸಂಬಂಧಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಕೂಡ ಸಾಲ ನೀಡಲಾಗುತ್ತದೆ. ವಿಮೆಯ ಸೌಲಭ್ಯವೂ ಇದ್ದು,
ಸಾವು ಅಥವಾ ಶಾಶ್ವತ ಅಂಗವಿಕಲತೆಯಾದಾಗ 50000ರು. ಮತ್ತು ಇತರ ಹಾನಿಗಳ ಸಂದರ್ಭದಲ್ಲಿ 25000 ರು.ಗಳ ಪರಿಹಾರವನ್ನು ಕಾರ್ಡ್‌ದಾರರು ಪಡೆಯಬಹುದಾಗಿದೆ. ಕಾರ್ಡ್‌ದಾರರು ಈ ಯೋಜನೆ ಅಡಿಯಲ್ಲಿ ಉಳಿತಾಯ ಖಾತೆಯನ್ನು
ಹೊಂದಬಹುದಾಗಿದ್ದು, ಆಕರ್ಷಕ ಬಡ್ಡಿಯನ್ನು ಪಡೆಯಬಹುದಾಗಿದೆ.

ಗೊಬ್ಬರ ಹಾಗೂ ಬೀಜಗಳ ಖರೀದಿಯ ಸಮಯದಲ್ಲಿ ಸಹಾಯವನ್ನು ನೀಡಲಾಗುತ್ತದೆ. 3 ವರ್ಷಗಳವರೆಗೆ ಕ್ರೆಡಿಟ್ ಸೌಲಭ್ಯ
ಲಭ್ಯವಿದ್ದು, ಸುಗ್ಗಿಯ ಬಳಿಕ ಸಾಲವನ್ನು ಮರುಪಾವತಿಸುವ ಅವಕಾಶವಿದೆ. ಕ್ರೆಡಿಟ್ ಕಾರ್ಡ್ ಸೌಲಭ್ಯವು ಬೇಕಾದಾಗ, ಬೇಕಾ ದಷ್ಟು ಹಣವನ್ನು ಪಡೆಯುವ ಅವಕಾಶವನ್ನು ಕಲ್ಪಿಸುತ್ತದೆ. ಲೋನ್ ಹಣ ಪಡೆಯಲು ಬ್ಯಾಂಕ್ ಸರತಿಯಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಅವಶ್ಯಕತೆಯಿಲ್ಲ.

ಅತ್ಯಂತ ದುಬಾರಿ ಸಾಲ ಮತ್ತು ಬಡ್ಡಿದರಗಳ ಚಕ್ರವ್ಯೂಹಕ್ಕೆ ರೈತರು ಸಿಲುಕುವುದನ್ನು ಈ ಯೋಜನೆಯು ತಪ್ಪಿಸುತ್ತದೆ. ಸಾಲ ವನ್ನು ಮರು ಪಾವತಿಸಲು ವಿವಿಧ ರಿಯಾಯಿತಿಗಳನ್ನು, ಅವಧಿ ವಿಸ್ತರಣೆಯನ್ನು ನೀಡಲಾಗುತ್ತದೆ. ನೈಸರ್ಗಿಕ ವಿಕೋಪ
ಗಳು, ಬೆಳೆಹಾನಿ ಸಂದರ್ಭದಲ್ಲಿ ಇದು ರೈತರಿಗೆ ತುಂಬಾ ಸಹಾಯ ಮಾಡುತ್ತದೆ. ನೈಸರ್ಗಿಕ ವಿಪತ್ತುಗಳು, ಬೆಳೆಹಾನಿ ಸಮಯ ದಲ್ಲಿ ಬೆಳೆವಿಮೆಯನ್ನು ಪಡೆಯಬಹುದು.

ಎಲ್ಲ ಬಗೆಯ ಕೃಷಿ ಅಗತ್ಯತೆಗಳಿಗೆ ಇದು ಏಕರೂಪದ ಸಾಲ ಸೌಲಭ್ಯವಾಗಿದ್ದು, ರೈತರಲ್ಲಿ ಗೊಂದಲಗಳನ್ನು ನಿವಾರಿಸುತ್ತದೆ. ಸಾಲ ಮರು ಪಾವತಿಯು ಬೆಳೆಗಳು ಹಾಗೂ ಅದರ ಮಾರಾಟದ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಗರಿಷ್ಠ 3 ಲಕ್ಷದ ವರೆಗೆ ರೈತರು ಸಾಲ ಪಡೆಯಬಹುದಾಗಿದೆ.

ಹೀಗೆ ರೈತರ ಅಭಿವೃದ್ಧಿಗಾಗಿ ಹಾಗೂ ಅನುಕೂಲಕ್ಕಾಗಿ ಸರಕಾರವು ಕಿಸಾನ್ ಕಾರ್ಡ್ ಯೋಜನೆಯನ್ನು ರೂಪಿಸಿದ್ದು, ಕಾಲದ ಅಗತ್ಯತೆಗಳಿಗೆ ತಕ್ಕಂತೆ ಅದನ್ನು ಮರು ರೂಪಿಸಲಾಗಿದೆ. ಬಡ್ಡಿ, ಚಕ್ರಬಡ್ಡಿಗಳ ವ್ಯೂಹದಿಂದ ಪಾರಾಗಲು ಹಾಗೂ ಪಾರದರ್ಶಕ ಸಾಲ ಸೌಲಭ್ಯ ಪಡೆಯಲು ಕೃಷಿಕರು ಕಿಸಾನ್ ಕಾರ್ಡ್ ಪಡೆಯಬೇಕು. ಎಲ್ಲಾ ಬ್ಯಾಂಕ್‌ಗಳಲ್ಲಿ ಈ ಯೋಜನೆಯಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು.