Friday, 22nd November 2024

ಬೇರು ಸಹಿತ ಕೀಳಿಸಿಕೊಂಡ ಬಿಳಿ ಕಿಸ್ಕಾರ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ನಮ್ಮ ಹಳ್ಳಿಮನೆಯ ಹಿಂಭಾಗದಲ್ಲಿದ್ದ ಒಂದು ತೋಡಿನ ಬದಿಯಲ್ಲಿ ಆ ಅಪರೂಪದ ಗಿಡವಿತ್ತು. ಒಂದು ದಿನ ಅದಾರೋ ಒಬ್ಬ ವ್ಯಕ್ತಿ ಬಂದು, ಆ ಗಿಡ ಅಲ್ಲಿದ್ದ ಮಾಹಿತಿ ಸಂಗ್ರಹಿಸಿ, ಅದನ್ನು ಬುಡಸಹಿತ ಕಿತ್ತು, ಬೇರನ್ನು ಮಾತ್ರ ಸಂಗ್ರಹಿಸಿ ತನ್ನ ಜೋಳಿಗೆಗೆ ಸೇರಿಸಿ ಕೊಂಡ. ಈಗ ಆ ಗಿಡವೇ ನಮ್ಮೂರಿನಲ್ಲಿ ಇಲ್ಲ!

ನಮ್ಮ ಹಳ್ಳಿ ಮನೆಯೆದುರು ಸುಮಾರು ಒಂದು ಕಿ.ಮೀ. ಉದ್ದದ ಗದ್ದೆಬೈಲಿದೆ. ಒಂದು ದಿನ ಬೇರೆ ಊರಿನ ವ್ಯಕ್ತಿಯೊಬ್ಬ ಆ ಬೈಲಿನುದ್ದಕ್ಕೂ ನಡೆದುಕೊಂಡು ಬಂದಿದ್ದ. ಮಾಸಲು ಪಂಚೆ, ಶರ್ಟು, ತಲೆಗೊಂದು ಮುಂಡಾಸು ಧರಿಸಿದ್ದ ಆತನನ್ನು ಕಂಡು ನಾಯಿಗಳು ಬೊಗಳು ತ್ತಿದ್ದವು. ಅವುಗಳನ್ನು ಓಡಿಸಲು ಅವನ ಕೈಯಲ್ಲೊಂದು ಕೋಲು ಇತ್ತು. ಶಾಸ್ತ್ರ ಹೇಳುತ್ತೇನೆ, ನಾಟಿ ಔಷಧ ಕೊಡುತ್ತೇ, ಗದ್ದೆ ಕೆಲಸ ಮಾಡಿ ಕಾಲು ಸೆಳೆತ, ನೋವು ಬಂದವರಿಗೆ ತೈಲ ಕೊಡುತ್ತೇನೆ, ನರಗಳು ಪುಷ್ಟಿಯಾಗುವ ಔಷಧ ತನ್ನ ಬಳಿ ಇದೆ ಎಂದೆಲ್ಲಾ ಪಟಪಟನೆ ಮಾತನಾಡುತ್ತಿದ್ದ ಅವನನ್ನು ಕುತೂಹಲದಿಂದ ನಮ್ಮ ಹಳ್ಳಿಯವರು ಕೇಳಿಸಿಕೊಳ್ಳುತ್ತಿದ್ದರು.

ಅದ್ಯಾವ ರೀತಿಯಲ್ಲಿ ಆತ ನಮ್ಮವರಿಂದ ಮಾಹಿತಿ ಸಂಗ್ರಹಿಸಿದನೋ ಗೊತ್ತಿಲ್ಲ, ಅದೊಂದು ಗಿಡವನ್ನು ಹುಡುಕುತ್ತಾ ನಮ್ಮ ಮನೆಯ ಹಿಂಭಾಗದಲ್ಲಿದ್ದ ತೋಡಿನತ್ತ ನಡೆದ. ಆಗ ನಮ್ಮ ಮನೆಯಲ್ಲಿ ಏಳೆಂಟು ಬಾಲ್ (ಬಾಲ) ಗಂಟಿಗಳಿದ್ದವು. ಅವು ಪ್ರತಿದಿನ ಬೆಳಗ್ಗೆ ಹಟ್ಟಿ ಯಿಂದ ಹೊರಬಿದ್ದು, ಅದೇ ತೋಡಿನ ದಾರಿಯುದ್ದಕ್ಕೂ ಸಾಗಿ, ಅದರಾಚೆ ಇದ್ದ ಸೇಡಿಮಣ್ಣಿನ ಇಪ್ಪತ್ತು ಅಡಿ ಎತ್ತರದ ದರೆಯನ್ನು ಹತ್ತಿ, ಗಾಡಿ, ಗುಡ್ಡಗಳತ್ತ ಸಾಗುತ್ತಿದ್ದವು. ಸೊಪ್ಪಿನ ಅಣೆ, ಬೋಳುಗುಡ್ಡೆಯು ಅವುಗಳ ಮೇವಿನ ತಾಣ.

ಅವು ಸಾಗುತ್ತಿದ್ದ ಆ ತೋಡಿನ ಎರಡೂ ಬದಿಗಳಲ್ಲಿ ಮುಂಡುಕನ ಗಿಡಗಳು ದಟ್ಟವಾಗಿ, ಬೇಲಿಯ ರೀತಿ ಬೆಳೆದು, ತಮ್ಮ ಮುಳ್ಳು ಮುಳ್ಳು ಎಲೆಗಳನ್ನು ನೇತಾಡಿಸಿಕೊಂಡು ನಿಂತಿದ್ದವು. ಕೆಲವು ಕುರುಚಲು ಗಿಡಗಳೂ ಅಲ್ಲಿ ಬೆಳೆದಿದ್ದವು. ಸುತ್ತಲೂ ಮರಗಿಡಗಳಿಂದ ಆವೃತವಾಗಿ, ನಸುಗತ್ತಲೆ ತುಂಬಿದ್ದ ಆ ತೋಡಿನತ್ತ ಸಾಗಿದ ಆ ವ್ಯಕ್ತಿಯು, ಒಂದು ಗಿಡವನ್ನು ಗುರುತಿಸಿ, ನಮ್ಮ ಮನೆಯಿಂದ ಹಾರೆ ತೆಗೆದುಕೊಂಡು ಹೋಗಿ, ಆ ಗಿಡದ ಬುಡವನ್ನು ಅಗೆಯತೊಡಗಿದ.

ಗುಂಡಿ ಮಾಡಿ, ಗಿಡವನ್ನು ಪೂರ್ತಿ ಕಿತ್ತು, ಅದರ ಬೇರನ್ನು ಸಂಗ್ರಹಿಸಿ, ತನ್ನ ಜೋಳಿಗೆಗೆ ಸೇರಿಸಿದ. ಅದರ ಬೇರು ಮಾಸಲು ಬಿಳಿ ಬಣ್ಣದ್ದಾಗಿತ್ತು. ಆ ಗಿಡವೇ ಬಿಳಿ ಕಿಸ್ಕಾರ. ಅದೊಂದು ಅಪರೂಪದ ಗಿಡ. ನಮ್ಮ ಹಳ್ಳಿಯವರಿಗೆ ಗೊತ್ತಿತ್ತು – ಬಿಳಿ ಕಿಸ್ಕಾರದ ಬೇರಿನಲ್ಲಿ ಔಷಧಿಯ ಗುಣಗಳಿವೆ ಎಂದು. ಆದರೆ, ಆ ಹೊತ್ತು ಅಲ್ಲಿದ್ದವರೆಲ್ಲರೂ ಮುಗ್ಧರು – ಎಷ್ಟು ಮುಗ್ಧರೆಂದರೆ, ‘ಆ ಗಿಡ ಮಾತ್ರ ಕೀಳಬೇಡ ಮಾರಾಯ, ಅದು ಅಪರೂಪದ ಗಿಡ’ ಎಂದು ಆತನನ್ನು ಗದರಿಸಿ ಹೇಳಲಾಗದಷ್ಟು ಮುಗ್ಧರು. ಆ ಗಿಡವು ತೋಡಿನ ಮುಂಡುಕನ ಗಿಡಗಳ
ಮರೆಯಲ್ಲಿ ಇದೆ ಎಂದು ಆತನಿಗೆ ಯಾಕೆ ಹೇಳಬೇಕು ಎಂದು ಸಹ ತರ್ಕಿಸಲಾಗದಷ್ಟು ಅಮಾಯಕರು ಅಲ್ಲಿದ್ದವರು. ಆ ಅಪರೂಪದ ಬಿಳೀ
ಕಿಸ್ಕಾರ ಗಿಡದ ಬೇರನ್ನು ಪೂರ್ತಿ ಕಿತ್ತು ತನ್ನ ಜೋಳಿಗೆಗೆ ಸೇರಿಸಿದ ಆ ವ್ಯಕ್ತಿ, ಅಂತಹದೇ ಇತರ ಗಿಡಗಳನ್ನು ಹುಡುಕಲು ಬೈಲು ದಾರಿ ಹಿಡಿದು ಮುಂದಿನ ಹಳ್ಳಿಗೆ ನಡೆದ.

ಕಿಸ್ಕಾರ ಎಂದರೆ ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿಯದೇ ಇರಬಹುದು. ಕೇಪಳ ಎಂದೂ ಅದನ್ನು ಕರೆಯುವುದುಂಟು. ಅದರ ಸುಧಾರಿತ ತಳಿ ಎನಿಸಿದ ಇಕ್ಸೋರಾ ಗಿಡವು, ನಮ್ಮ ನಾಡಿನ ಕೈತೋಟಗಳಲ್ಲಿ ಅಲಂಕಾರಿಕ ಸಸ್ಯವಾಗಿ ಪರಿಚಿತ. ಆ ಗಿಡ ಬಿಡುವ ಗೊಂಚಲು ಗೊಂಡಲು ಕೆಂಪು ಹೂವುಗಳು, ಚೂಪಾದ ಮೊಗ್ಗುಗಳ ನೋಟ ನಿಜಕ್ಕೂ ಚಂದ! ನಮ್ಮೂರಿನ ಕಾಡು, ಗುಡ್ಡೆ, ದಾರಿಯಂಚಿನಲ್ಲಿ ಬೆಳೆಯುವ ಕಿಸ್ಕಾರವು ಒಂದು ಸಣ್ಣ ಪೊದೆಗಿಡ. ಒಂದೆರಡು ಅಡಿ ಬೆಳೆಯುವುದು ಸಾಮಾನ್ಯ. ಕೆಂಪು ಹೂವಿನ ಪುಟ್ಟ ಗೊಂಚಲು, ಕೆಂಪು ಪುಟಾಣಿ
ಹಣ್ಣುಗಳು. ಕಡಲೆ ಗಾತ್ರದ ಕಿಸ್ಕಾರ ಹಣ್ಣುಗಳನ್ನು ಆರಿಸಿ ತಿನ್ನುವುದೆಂದರೆ ಮಕ್ಕಳಿಗೆ ಖುಷಿ. ಕಿಸ್ಕಾರ ಎಂದರೆ ಕೆಂಪು ಹೂವು ಎಂಬುದು ಸಾಮಾನ್ಯ ಅಭಿಪ್ರಾಯ.

ಬಿಳೀ ಹೂ ಬಿಡುವ ಕಿಸ್ಕಾರದ ಪ್ರಭೇದವೂ ಅಲ್ಲಲ್ಲಿ ಕಾಣಿಸುತ್ತಿದ್ದವು. ಆದರೆ ಅವು ಸಾಕಷ್ಟು ಅಪರೂಪ. ಎಷ್ಟು ಅಪರೂಪವೆಂದರೆ, ಬಿಳಿ ಕಿಸ್ಕಾರದ ಹೂ ಕಂಡ ಕೂಡಲೆ, ಇಡೀ ಗೊಂಚಲನ್ನು ಕೀಳದೇ, ಒಂದೆರಡು ಹೂವುಗಳನ್ನು ಮಾತ್ರ ಜಾಗ್ರತೆಯಿಂದ ಕಿತ್ತು ಗಂಡಸರು ಹೆಮ್ಮೆಯಿಂದ ಕಿವಿಗೆ ಸಿಕ್ಕಿಸಿಕೊಳ್ಳುತ್ತಿದ್ದರು, ಹೆಂಗಸರು ತುರುಬಿಗೆ ಏರಿಸುತ್ತಿದ್ದರು!

ಆಗೊಮ್ಮೆ, ಈಗೊಮ್ಮೆ ಗುಡ್ಡೆಬದಿಯಲ್ಲಿ ಕಾಣಸಿಗುತ್ತಿದ್ದ ಬಿಳಿ ಕಿಸ್ಕಾರ ಗಿಡದ ಬೇರಿನಲ್ಲಿ ಔಷಧಿಯ ಗುಣಗಳಿವೆ ಎಂದು ನಮ್ಮ ಹಳ್ಳಿ ಯವರಿಗೆ ಮೊದಲಿನಿಂದಲೂ ಗೊತ್ತಿತ್ತು. ಆದರೆ, ಅದು ಯಾವುದಕ್ಕೆ ಔಷಧ ಎಂದು ನಮ್ಮ ಮನೆಯವರಿಗಂತೂ ಸ್ಪಷ್ಟವಿರಲಿಲ್ಲ. ಆ ದಿನ ನಮ್ಮ ಹಳ್ಳಿಗೆ ಬಂದಿದ್ದ ಆ ವ್ಯಕ್ತಿಯು ಬಿಳಿ ಕಿಸ್ಕಾರದ ಬೇರನ್ನು ಸಂಗ್ರಹಿಸಿದಂತೆಯೇ, ಎಲ್ಲಾ ಊರುಗಳಲ್ಲೂ ಅದರ ಬೇರಿನ ಬೇಟೆ ನಡೆದಿರಲೇಬೇಕು. ಏಕೆಂದರೆ, ಈಗ ನಮ್ಮೂರಿನ ಹಾಡಿ, ಹಕ್ಕಲು, ಗುಡ್ಡೆಗಳಲ್ಲಿ ಬಿಳಿ ಕಿಸ್ಕಾರದ ಗಿಡಗಳೇ ಕಾಣೆಯಾಗಿವೆ!

ಹುಡುಕಿ ಹುಡುಕಿ ಬೇರು ಸಮೇತ ಗಿಡಗಳನ್ನು ಕೀಳುತ್ತಾ ಹೋದರೆ, ಎಲ್ಲಿ ತಾನೆ ಬದುಕಿ ಉಳಿದಾವು ಆ ಕಾನನದ ಕುಸುಮಗಳು!
ಬಿಳಿಕಿಸ್ಕಾರದ ಕಥೆಯಂತೂ ಹೀಗೆ ಆಯಿತು, ತೀರಾ ಸಾಮಾನ್ಯ ಎನಿಸಿದ್ದ ಕೆಂಪು ಕಿಸ್ಕಾರದ ನೋಟವೇ ಈಗೀಗ ಕಡಿಮೆಯಾಗುತ್ತಾ ಬಂದಿದೆ. ಬುಲ್‌ಡೋಜರ್‌ನಿಂದ ನೆಲ ಮಟ್ಟ ಮಾಡಿಸುವುದು, ಗುಡ್ಡೆ ಹಕ್ಕಲುಗಳನ್ನೆಲ್ಲಾ ರಬ್ಬರ್ ತೋಟ ಮಾಡಿಸುವುದು, ಕುರುಚಲು ಗಿಡಗಳೆಲ್ಲಾ ಕ್ಷುಲ್ಲಕ ಎಂಬ ಭಾವನೆ ಸಾರ್ವತ್ರಿಕವಾಗಿರುವುದು, ಸಿಕ್ಕ ಸಿಕ್ಕ ಜಾಗಗಳಲ್ಲೆಲ್ಲಾ ಕಳೆ ಸ್ವರೂಪಿ ಅಕೇಶಿಯಾ ನಡೆತೋಪನ್ನು ಸೃಷ್ಟಿಸುವುದು – ಇಂತಹ ಚಟುವಟಿಕೆಗಳ ನಡುವೆ, ಪುರಾಣಿ ಹೂ ಬಿಡುವ ಕಿಸ್ಕಾರಕ್ಕೆ ಎಲ್ಲಿದೆ ತಾವು? ಇದು ಕೇವಲ ಕಿಸ್ಕಾರ ಗಿಡದ ಕಥೆ ಮಾತ್ರವಲ್ಲ, ಇಲ್ಲಿ ಕಿಸ್ಕಾರವು ಸಾಂಕೇತಿಕ ಅಷ್ಟೆ. ಅಂತಹ ಹಲವು ಗಿಡಗಳು ಈಚಿನ ದಶಕಗಳಲ್ಲಿ ಆಧುನಿಕ ಮಾನವನ ವಿವೇಚನಾರಹಿತ ಚಟುವಟಿಕೆಗಳಿಗೆ ಗ್ರಾಸವಾಗಿವೆ!

ನಮಗೆ ಪಿ.ಎಸ್.ಕಾರಂತ ಎಂಬ ಪ್ರಿನ್ಸಿಪಾಲರಿದ್ದರು. (ಈಗ ದಿವಂಗತರು) ಅವರು ಬಾಟನಿ ಪಾಠಗಳ ಮಧ್ಯೆ, ಸರ್ಪಗಂಧಿ (ರಾವೋ ಲಿಯಾ ಸರ್ಪೆಂಟೈನಾ) ಗಿಡದ ದುರಂತವನ್ನು ಹೇಳುತ್ತಿದ್ದರು. ನಮ್ಮ ದೇಶದ ಕಾಡುಗಳಲ್ಲಿ ಸಾಕಷ್ಟು ಸಾಮಾನ್ಯವಾಗಿ ಬೆಳೆಯುತ್ತಿದ್ದ ಪೊದೆ ಸರ್ಪಗಂಧಿ; ಪುರಾತನ ಕಾಲದಿಂದ ನಾಗರಹಾವು ಕಡಿತಕ್ಕೆ, ಮನೋವಿಕಾರಕ್ಕೆ ಔಷಧಿಯನ್ನಾಗಿಯೂ ಬಳಸುತ್ತಿದ್ದರು. ಆದರೆ, ಆ ಗಿಡದ ಬೇರಿನಲ್ಲಿ ರಕ್ತದೊತ್ತಡ ಶಮನಗೊಳಿಸುವ ಔಷಧಿಯ ಗುಣಗಳಿವೆ ಎಂದು ಪಾಶ್ಚಾತ್ಯ ಜಗತ್ತು ಗುರುತಿಸಿದ್ದೇ ತಡ, ಆ ಸಸ್ಯದ ಅಸ್ತಿತ್ವಕ್ಕೇ ಕುತ್ತು ಬಂತು! 1952ರಲ್ಲಿ ಈ ಸಸ್ಯದಲ್ಲಿರುವ ರಿಸರ್ಪಿನ್ ಎಂಬ ಸಂಯುಕ್ತವು ರಕ್ತದೊತ್ತಡಕ್ಕೆ ಔಷಧ ಎಂದು ಅಮೆರಿಕದ ವಿಜ್ಞಾನಿಯೊಬ್ಬ ಸಂಶೋಧಿಸಿದ.

ಅದರಿಂದ ಮಾತ್ರೆ ತಯಾರಿಸುವ ಉದ್ದಿಮೆ ಆರಂಭವಾಯಿತು. ಆಗ ನೋಡಿ, ನಮ್ಮ ದೇಶದ ಕಾಡುಗಳಲ್ಲಿದ್ದ ಈ ಗಿಡವನ್ನು ಬೇರು ಸಹಿತ ಕಿತ್ತು, ಅಮೆರಿಕಕ್ಕೆ ಸಾಗಿಸುವ ದಂಧೆಗೆ ಚಾಲನೆ ದೊರಕಿತು. ಈ ಗಿಡವು ನಮ್ಮ ದೇಶದಲ್ಲಿ ಮಾತ್ರ (ಸ್ವಲ್ಪ ಮಟ್ಟಿಗೆ ದಕ್ಷಿಣ ಏಷ್ಯಾದ ಇತರ ದೇಶಗಳಲ್ಲೂ) ಕಾಣಸಿಗುವ ಗಿಡ. ಪಾಶ್ಚಾತ್ಯ ಜಗತ್ತು ಇದು ಬೇಕು ಎಂದಾಕ್ಷಣ, ಬೇರು ಸಹಿತ ಕಿತ್ತು, ಅದು ಇನ್ನೇನು ನಿರ್ನಾಮವಾಗುವ ಸ್ಥಿತಿ ತಂದಿಟ್ಟಿರುವ ನಮ್ಮ ಜನರ ಯೋಚನಾಕ್ರಮವನ್ನು ಏನೆಂದು ಕರೆಯಬೇಕು? ಹಿಂದೆ ಅದು ತನ್ನ ಪಾಡಿಗೆ ಬೆಳೆಯುತ್ತಿದ್ದ ಜಾಗ ಗಳಲ್ಲಿ ಈಗ ಅಕೇಶಿಯಾ ಕಾಡು ತುಂಬಿದೆ.

1970ರ ದಶಕದಲ್ಲಿ, ಮಳೆಗಾಲದಲ್ಲಿ ನಮ್ಮ ಹಳ್ಳಿ ಗದ್ದೆ, ತೋಡುಗಳ ಬಳಿ ಪೆಟ್ರೊಮ್ಯಾಕ್ಸ್ ಲೈಟುಗಳ ಮೆರವಣಿಗೆ ಆಗಾಗ ನಡೆಯು ತ್ತಿತ್ತು. ವಿಶೇಷವೇ ನಿಲ್ಲ – ಅಲ್ಲಿರುವ ದೊಡ್ಡ ಗಾತ್ರದ ಕಪ್ಪೆಗಳನ್ನು ಹಿಡಿಯುವ ಕೆಲಸದಲ್ಲಿ ನಿರತರಾದವರ ಮೆರವಣಿಗೆ ಅದು. ಪ್ರತಿವರ್ಷ ಮಳೆಗಾಲದಲ್ಲಿ ಆರೆಂಟು ಬಾರಿ, ರಾತ್ರಿ ಹೊತ್ತೇ ಈ ರೀತಿ ಕಪ್ಪೆ ಹಿಡಿಯುವವರನ್ನು ಕಂಡು, ನಮಗೆ ಅಚ್ಚರಿ ಎನಿಸುತ್ತಿತ್ತು. ಆದರೆ, ಆ ಕಪ್ಪೆಗಳನ್ನು ಅವರೇಕೆ ಹಿಡಿಯುತ್ತಾರೆ, ವಿದ್ಯುತ್ ಸಂಪರ್ಕವೇ ಇಲ್ಲದಿದ್ದ ನಮ್ಮೂರಿನ ಬಯಲುಗಳಲ್ಲಿ ಪ್ರಖರ ಪೆಟ್ರೊಮ್ಯಾಕ್ಸ್ ದೀಪ ಹಿಡಿದು ಅವರೇಕೆ ರಾತ್ರಿಯಿಡೀ ಸಂಚರಿಸುತ್ತಾರೆ ಎಂದು ನಮ್ಮ ಹಿರಿಯರಿಗೂ ಹೆಚ್ಚಿನ ಮಾಹಿತಿ ಇರಲಿಲ್ಲ.

ಕೊನೆಗೆ, ನಮ್ಮ ಅದೇ ಪ್ರಿನ್ಸಿಪಾಲರು, ಅಂದರೆ ಪಿ.ಎಸ್. ಕಾರಂತರು ಆ ಪ್ರಖರ ದೀಪಗಳ ರಹಸ್ಯ ಹೇಳಿದರು – ಕಪ್ಪೆಗಳನ್ನು ಹಿಡಿದು, ಅವುಗಳ ಕಾಲುಗಳನ್ನು ಯುರೋಪ್ ದೇಶಗಳಿಗೆ ಕಳಿಸುತ್ತಾರೆ, ಅಲ್ಲಿ ಅದು ತಿಂಡಿಯ ರೂಪದಲ್ಲಿ ಬಳಕೆಯಾಗುತ್ತದೆ ಎಂದು. ಆ ರೀತಿ ಅಸಂಖ್ಯ ಕಪ್ಪೆಗಳನ್ನು ಹಿಡಿದು ಸಾಗಿಸಿದ್ದರಿಂದ, ಕೃಷಿಗೆ ಹಾನಿಯಾಗುತ್ತದೆ ಎಂದು ಎಚ್ಚರಗೊಂಡ ನಮ್ಮ ದೇಶವು, ಆ ನಂತರ ಕಪ್ಪೆಗಳನ್ನು ಆ ಉದ್ದೇಶಕ್ಕೆ ರಫ್ತು ಮಾಡುವುದನ್ನು ನಿಷೇಧಿಸಿತು.

ಆದರೆ, ಅದಾಗಲೇ ಸಾಕಷ್ಟು ಹಾನಿಯಾಗಿರಲೇ ಬೇಕು – ಕೃಷಿಗೆ ಮಾರಕವಾಗಿರುವ ಕೀಟಗಳನ್ನೇ ಹಿಡಿದು ತುನ್ನುವ ಕಪ್ಪೆಗಳ ಸಂತತಿ ಯನ್ನು ನಾಶಪಡಿಸಿದರೆ, ಕೃಷಿಕರಿಗೆ ಉಳಿಗಾಲವುಂಟೆ? ಇದೇ ಸಮಯದಲ್ಲಿ ನಮ್ಮ ಹಳ್ಳಿಯಲ್ಲಿ ನಡೆಯುತ್ತಿದ್ದ ಇನ್ನೊಂದು ವಿದ್ಯಮಾನ ವೂ ಇದನ್ನು ಹೋಲುತ್ತಿತ್ತು. ಒಮ್ಮೊಮ್ಮೆ ನಮ್ಮ ಹಿರಿಯರು ಎಚ್ಚರಿಸುತ್ತಿದ್ದರು ‘ಮಕ್ಕಳೇ, ಹಾಡಿಬದಿಗೆ ಹೋಗಬೇಡಿ. ಹಾವು ಹಿಡಿಯು ವವರು ಅಲ್ಲಿ ಹಾವುಗಳನ್ನು ಸಾಯಿಸಿ ಬಿಸಾಟು ಹೋಗಿದ್ದಾರೆ’.

ನಿಜ, ಆಗೆಲ್ಲಾ ಹಾವು ಹಿಡಿಯುವವರು ನಮ್ಮ ಹಳ್ಳಿಯ ತೋಡುಗಳಲ್ಲಿ, ಬಾವಿಗಳಲ್ಲಿ ಇದ್ದ ಕೇರೆ ಹಾವು, ಒಳ್ಳೆ ಹಾವುಗಳನ್ನು ಹಿಡಿದು, ಪಕ್ಕದ ಹಾಡಿ ಹಕ್ಕಲುಗಳಲ್ಲಿ ಅವುಗಳ ಚರ್ಮ ಸುಲಿದು, ತೆಗೆದುಕೊಂಡು ಹೋಗುತ್ತಿದ್ದುದು ಸಾಮಾನ್ಯ ಸಂಗತಿ. ಅವರು ಬಿಸುಟು ಹೋದ ಹಾವಿನ ಅಸ್ತಿಪಂಜರಗಳು ಬಹುದಿನಗಳ ತನಕ ಅಲ್ಲಿ ಬಿದ್ದಿರುತ್ತಿದ್ದವು. ಹಾವು ಹಿಡಿಯುವವರು ಬೇರೆ ಊರಿನವರು, ಸ್ಥಳೀಯರಾಗಿರಲಿಲ್ಲ. ಆದರೆ, ಆ ರೀತಿ ಅವರು ಪಾಪದ ಹಾವುಗಳನ್ನು ಹಿಡಿದು, ಸಾಯಿಸುವುದನ್ನು ಕಂಡರೂ, ಅದನ್ನು ನಮ್ಮೂರಿನವರು ವಿರೋಧಿಸುತ್ತಿ
ರಲಿಲ್ಲ; ಮಾಹಿತಿಯ ಕೊರತೆಯೋ ಅಥವಾ ಗದರಿಸಲು ಸಂಕೋಚವೋ ಏನೊ.

ಕೇರೆ ಹಾವುಗಳು ಇಲಿಗಳನ್ನು ತಿಂದು, ಇಲಿಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿರಿಸಿ, ಕೃಷಿಕರಿಗೆ ಸಹಾಯ ಆಡುತ್ತಿದ್ದ ಹಿನ್ನೆಲೆಯಲ್ಲಿ, ಆ ರೀತಿ ಹಾವುಗಳನ್ನು ಹಿಡಿದು ಸಾಯಿಸುವುದು ಸರಿಯಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುವ ವಿಚಾರ. 1980ರ ದಶಕದ ನಂತರ, ಈ ಚಟುವಟಿಕೆಯನ್ನೂ ನಮ್ಮ ದೇಶದಲ್ಲಿ ನಿಷೇಧಿಸಲಾಯ್ತು. ನಾನಿಲ್ಲಿ ಹಂಚಿಕೊಂಡಿರುವ ವಿಚಾರಗಳು ಸುಮಾರು 1970ರ ದಶಕದ್ದು. ಆ ನಂತರದ ಒಂದೆರಡು ದಶಕಗಳಲ್ಲಿ ನಮ್ಮ ಹಳ್ಳಿಯ ಸುತ್ತ ಮುತ್ತ ಒಂದು ಮಾನವಕೃತ ಪ್ರಾಕೃತಿಕ ದುರಂತವೇ ನಡೆದುಹೋಗಿದೆ. 1980ರ ದಶಕದಲ್ಲಿ ನಮ್ಮ ಸರಕಾರದ ಇಲಾಖೆಗಳು, ಎಲ್ಲೆಡೆ ಅಕೇಶಿಯಾ ಗಿಡಗಳನ್ನು ನೆಡತೊಡಗಿದವು.

ಜತೆಗೆ, ಕೃಷಿಕರಿಗೆ ಅಕೇಶಿಯಾ ಗಿಡಗಳನ್ನು ಪರಿಚಯಿಸಿ, ಅದರ ಕೆಲವು ಪ್ರಭೇದಗಳನ್ನು ನೆಟ್ಟರೆ ಮುಂದೆ ಅಪಾರ ಹಣಗಳಿಸಬಹುದು ಎಂದು ಇಲಾಖೆಗಳು ಪ್ರಚಾರ ಮಾಡತೊಡಗಿದವು. ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಅಕೇಶಿಯಾ ಗಿಡಗಳನ್ನು ಹಂಚಿ, ಹಾಡಿ, ಹಕ್ಕಲು, ಗುಡ್ಡ, ದಾರಿ ಬದಿಗಳಲ್ಲಿ ನೆಡಿಸಿದರು. ಎಲ್ಲೆಲ್ಲಾ ಕುರುಚಲು ಕಾಡು, ಹಕ್ಕಲು, ಹಾಡಿ, ಖಾಲಿ ಜಾಗಗಳಿದ್ದವೊ ಅಲ್ಲೆಲ್ಲಾ ಅಕೇಶಿಯಾ
ಗಿಡಗಳು ವೇಗವಾಗಿ ಬೆಳೆಯತೊಡಗಿದವು.

ಬಹುಬೇಗನೆ ಬೆಳೆಯುವ, ವೇಗವಾಗಿ ಹರಡುವ, ತನ್ನ ಬುಡದಲ್ಲಿ ಬೇರಾವ ಗಿಡಗಳೂ ಬೆಳೆಯದಂತೆ ನೋಡಿಕೊಳ್ಳುವ ಅಕೇಶಿಯಾವು ಕಳೆಸ್ವರೂಪಿ. ಒಂದು ಅಕೇಶಿಯಾ ಮರವಿದ್ದರೆ, ಅದರ ಬುಡ ದಲ್ಲೆ ಶೀಘ್ರದಲ್ಲಿ ಸಾಕಷ್ಟು ಅಕೇಶಿಯಾ ಗಿಡಗಳು ಕಳೆಯ ರೀತಿ ಹುಟ್ಟಿ ಕೊಳ್ಳುತ್ತವೆ! ನಮ್ಮೂರಲ್ಲಿ ಮುಂಚೆ ಹಕ್ಕಲು, ಬ್ಯಾಣ, ಹಾಡಿಗಳಿದ್ದ ಅದೆಷ್ಟೋ ಪ್ರದೇಶಗಳಲ್ಲಿ, ಇಂದು ಅಕೇಶಿಯಾ ನೆಡುತೋಪು ಅಥವ ಮರಗಳ ಸಾಲುಗಳಿವೆ.

ಆ ಅಕೇಶಿಯಾ ಮರಗಳನ್ನು ಕಡಿದು ಮಾರಿ, ನಮ್ಮ ಹಳ್ಳಿಯ ಕೃಷಿಕರು ನಾಲ್ಕು ಕಾಸು ಮಾಡಿಕೊಂಡದ್ದು ನಿಜ. ಆದರೆ, ಅವು ಬೆಳೆದಿರುವ
ಜಾಗದಲ್ಲಿ, ಹಿಂದೆ ಇದ್ದ ಸ್ಥಳೀಯ ಗಿಡ, ಮರ, ಬಳ್ಳಿಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಕಿಸ್ಕಾರ, ಬುಕ್ಕಿ, ಕಾರಿ, ಚೀಂಪಿ, ದಾರುಹುಳಿ, ಬೆಳಮಾರು, ಗರ್ಚನ ಮೊದಲಾದ ಪೊದೆಗಿಡಗಳು, ಬೋಗಿ, ದೂಪ, ದುಗಳುದೂಪ, ಅಂಡಾರು, ರಾಮಪತ್ರೆ, ನೇರಳೆ, ಸಳ್ಳೆ, ಹಿರಾಲು ಬೋಗಿ ಮೊದಲಾದ ಮರಗಳು ನಿಧಾನವಾಗಿ ನಮ್ಮೂರಿನಿಂದ ಣ್ಮರೆಯಾಗುವ ಹಾದಿ ಹಿಡಿದಿವೆ. ಇದನ್ನೇ ತಾನೆ ‘ಅವನತಿ’ ಎನ್ನುವುದು?