Sunday, 15th December 2024

ಇಂಕಾದವರಿಗೆ ವರ – ಜಗತ್ತಿಗೆ ಶಾಪ ಕೋಕಾ

ಹಿಂದಿರುಗಿ ನೋಡಿದಾಗ

ಒಂದು ವರವು ಶಾಪವಾದ ಕಥೆಗೆ ಅತ್ಯುತ್ತಮ ಉದಾಹರಣೆ ಕೋಕಾ ಮರ. ಒಂದು ಸಂಸ್ಕೃತಿಯ ನಿರ್ಮಾಣದಲ್ಲಿ ನೆರವಾಗಿದ್ದ
ಕೋಕಾ ಮರವು, ಇಂದು ಇಡೀ ಜಗತ್ತಿನ ಯುವಜನತೆಯನ್ನು ಮಾರಕ ಮಾದಕದ್ರವ್ಯಗಳ ಚಟಕ್ಕೆ ತುತ್ತಾಗಿಸಿ, ಮೃತ್ಯುಮುಖ ವನ್ನಾಗಿಸಿದೆ.

ಬುದ್ಧಿವಂತ ಮಾನವ (ಹೋಮೋ ಸೆಪಿಯನ್ಸ್) ತನ್ನ ಬುದ್ಧಿಶಕ್ತಿಯಿಂದ ಚಾಕುವನ್ನು ತಯಾರು ಮಾಡಿದ. ೯೦% ರಷ್ಟು  ಚಾಕು ವಿನಿಂದ ಹಣ್ಣು, ತರಕಾರಿ, ಮೀನು, ಮಾಂಸ ವನ್ನು ಹೆಚ್ಚಿ ತಿಂದರು. 10% ಜನರು ಅದೇ ಚಾಕುವನ್ನು ಬಳಸಿಕೊಂಡು ಇತರ ರನ್ನು ಹೆದರಿಸಿದರು, ಹೊಡೆದಾಡಿ ಅವರಿಗೆ ಗಾಯಗಳನ್ನು ಮಾಡಿದರು, ಕೊನೆಗೆ ಅವರನ್ನು ಕೊಂದೇ ಬಿಟ್ಟರು. ಇದರಲ್ಲಿ ಚಾಕುವಿನದಾಗಲಿ ಅಥವ ಚಾಕುವನ್ನು ನಿರ್ಮಿಸಿದವನ ತಪ್ಪಾಗಲಿ ಎಲ್ಲಿದೆ? 10%ರಷ್ಟು ಮನುಕುಲ ವೈರಿಗಳು 90% ಜನರ ಬದುಕನ್ನು ದುಸ್ತರ ಗೊಳಿಸುತ್ತಿರುವುದು ಒಂದು ದೊಡ್ಡ ವಿಪರ್ಯಾಸವಾಗಿದೆ.

ದಕ್ಷಿಣ ಅಮೆರಿಕದ ಅಯ್ಮಾರ ಭಾಷೆಯಲ್ಲಿ ಖ್ಹೋಕಾ ಎಂದರೆ ಮರ. ಈ ಹೆಸರು ಕಾಲಕ್ರಮೇಣ ಕೋಕಾ ಎಂದು ಬದಲಾಗಿದೆ. ಇದು ಸ್ವಾಭಾವಿಕವಾಗಿ ದಕ್ಷಿಣ ಅಮೆರಿಕ, ಮೆಕ್ಸಿಕೊ, ಇಂಡೋನೇಶಿಯ ಮತ್ತು ವೆಸ್ಟ್ ಇಂಡೀಸ್‌ಗಳಲ್ಲಿ ಬೆಳೆಯುತ್ತದೆ. ದ. ಅಮೆರಿಕದ ಆಂಡೀಸ್ ಪರ್ವತ ಶ್ರೇಣಿಯಲ್ಲಿ ೪೫೦೦-೬೦೦೦ ಎತ್ತರದ ಪ್ರದೇಶಗಳಲ್ಲಿ ಇದು ಸೊಗಸಾಗಿ ಬೆಳೆಯುತ್ತದೆ. ಈಗ ಇದರ ಕೃಷಿ ಅರ್ಜೆಂಟೀನ, ಬೊಲೀವಿಯ, ಬ್ರೆಜ಼ಿಲ್, ಕೊಲಂಬಿಯ, ವೆನಿಜ಼ೂಲ, ಯೂಕಡರ್ ಮತ್ತು ಪೆರು ದೇಶಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.

ಅಲ್ಲಿ ಇದೊಂದು ವಾಣಿಜ್ಯ ಬೆಳೆಯಾಗಿ ಅಪಾರ ಲಾಭ ತರುತ್ತಿದೆ. ನೈಸರ್ಗಿಕವಾಗಿ ಕೋಕಾ ಮರವು 15-20 ಅಡಿ ಬೆಳೆಯುತ್ತದೆ. ಕೃಷಿಗೆ ಒಳಪಟ್ಟಿರುವ ಕೋಕಾ ಮರವನ್ನು 6 ಅಡಿಗಿಂತ ಎತ್ತರ ಬೆಳೆಯಲು ಬಿಡುವುದಿಲ್ಲ. ಮರವು ಗಿಡ್ಡವಾಗಿದ್ದಷ್ಟು ಅದರಿಂದ ಎಲೆಯನ್ನು ಸಂಗ್ರಹಿಸುವುದು ಸುಲಭ! ಚಹದ ಎಲೆಗಳನ್ನು ಹೋಲುವ ಕೋಕಾ ಎಲೆಗಳನ್ನು ವರ್ಷಕ್ಕೆ ನಾಲ್ಕು ಬಾರಿಗೆ ಕಟಾವು
ಮಾಡಬಹುದು. ಕೃಷಿಗೆ ಒಳಪಡಿಸಿದ ಕೋಕಾ ಮರಗಳು ಸುಮಾರು 50 ವರ್ಷಗಳ ಕಾಲ ಬದುಕುತ್ತವೆ.

ಎರಿಥ್ರೋಕ್ಸೈಲೇಸಿಯೇ ಎನ್ನುವುದು ಒಂದು ಸಸ್ಯವಂಶದ ಹೆಸರು. ಇದರಲ್ಲಿ ಎರಿಥ್ರೋಕ್ಸೈಲಮ್ ಎಂಬ ಕುಲ. ಈ ಕುಲದಲ್ಲಿ ಸುಮಾರು 100 ಪ್ರಭೇದಗಳಿವೆ. ಇವುಗಳಲ್ಲಿ ಎರಡು ಪ್ರಭೇದಗಳಲ್ಲಿ ಮಾತ್ರ, ಎರಿಥ್ರೋಕ್ಸೈಲಮ್ ಕೋಕಾ ಮತ್ತು ಎರಿಥ್ರೋ ಕ್ಸೈಲಮ್ ಗ್ರಾನಟೆನ್ಸ್, ಕೊಕೇನ್ ಇರುತ್ತದೆ. ಇದರಲ್ಲಿ ಮೊದಲ ಪ್ರಭೇದವು ಶ್ರೇಷ್ಠವಾದದ್ದು. ಇದನ್ನು ಬೊಲೀವಿಯನ್ ಕೋಕಾ ಅಥವಾ ಹೌನುಕೋ ಕೋಕಾ ಎಂದು ಗುರುತಿಸುವುದುಂಟು.

ಕೋಕಾದಲ್ಲಿ ಒಟ್ಟು 4 ವರ್ಗಗಳಿಗೆ ಸೇರಿದ 18 ಆಲ್ಕಲಾಯಿಡುಗಳೆಂಬ ರಾಸಾಯನಿಕಗಳು ಇರುತ್ತವೆ. ಇವುಗಳಲ್ಲಿ ಪ್ರಖ್ಯಾತ ಹಾಗೂ ಕುಖ್ಯಾತವಾದದ್ದು ಕೊಕೇನ್. 1860ರಲ್ಲಿ ಆಲ್ಬರ್ಟ್ ನಯ್ಮನ್ (1834-1861) ಎಂಬ ವಿಜ್ಞಾನಿ ಈ ಕೊಕೇನನ್ನು
ಪ್ರತ್ಯೇಕಿಸಿದ. ಒಂದು ಸಾಮಾನ್ಯವಾದ ಕೋಕಾ ಎಲೆಯಲ್ಲಿ 0.1 0.9% ಕೊಕೇನ್ ಇರುತ್ತದೆ. ದಕ್ಷಿಣ ಅಮೆರಿಕದಲ್ಲಿ ಕನಿಷ್ಠ ಕ್ರಿ.ಪೂ. 8000 ವರ್ಷಗಳಿಂದ ಜನವಸತಿಯಿದ್ದು, ನಾವು ಎಲೆ, ಅಡಿಕೆ, ಸುಣ್ಣ ಹಾಕಿಕೊಂಡು ಮೆಲ್ಲುವಂತೆ, ಅವರು ಕೋಕಾ ಎಲೆಗೆ ಸುಣ್ಣವನ್ನು ಹಚ್ಚಿ ಮೆಲ್ಲುತ್ತಿದ್ದುದಕ್ಕೆ ಆಧಾರ ದೊರೆತಿದೆ.

ಕ್ರಿ.ಪೂ.3000 ವರ್ಷಗಳಷ್ಟು ಹಳೆಯ ಕಾಲದ, ಉತ್ತರ ಚಿಲಿಯ ಮಮ್ಮಿಗಳ ಜೊತೆಯಲ್ಲಿ ಕೋಕಾ ಎಲೆಯ ಅವಶೇಷಗಳು ಕಂಡಿವೆ. ಪೆರುವಿನಲ್ಲಿ ಕ್ರಿ.ಪೂ. 2000 ವರ್ಷಗಳಷ್ಟು ಹಿಂದಿನ ಸುಣ್ಣದ ಡಬ್ಬಿಗಳು ದೊರೆತಿವೆ. ಮೋಷೆ ಸಂಸ್ಕೃತಿ (ಕ್ರಿ.ಶ.100-ಕ್ರಿ.ಶ.700) ಹಾಗೂ ಇಂಕಾ ಸಂಸ್ಕೃತಿಗಳ (1438-1572) ಅವಧಿಯ ಉತ್ಖನನಗಳಲ್ಲಿ ಕೋಕಾ ಉಪಯೋಗದ ಬಗ್ಗೆ ಮಾಹಿತಿ ದೊರೆತಿವೆ.

ಮಮ್ಮಿಗಳ ಜೊತೆಯಲ್ಲಿ ಚಿನ್ನದ ರೇಕುಗಳಿಂದ ಮಾಡಿದ ಚೀಲಗಳಲ್ಲಿ ಕೋಕಾ ಎಲೆಗಳಿದ್ದವು. ಮಡಕೆ ಮುಂತಾದ ಕುಂಬಾರ ವಸ್ತುಗಳ ಮೇಲಿರುವ ಚಿತ್ರಗಳಲ್ಲಿ, ದವಡೆಯಲ್ಲಿ ಕೋಕಾ ತಂಬುಲವನ್ನು ಅಡಚಿಕೊಂಡಿರುವ ಮನುಷ್ಯರ ಚಿತ್ರಗಳಿವೆ. ಚಿನ್ನ ಬೆಳ್ಳಿ ಬಿಡಿ, ಬೆಲೆಬಾಳುವ ರತ್ನ, ಪಚ್ಚೆ, ನೀಲಗಳ ಕಲ್ಲುಗಳಲ್ಲಿ ಮಾಡಿದ ಸುಣ್ಣದ ಡಬ್ಬಿಗಳು ಹಾಗೂ ಸುಣ್ಣವನ್ನು ತೆಗೆಯಲು ಬಳಸುತ್ತಿದ್ದ ಚಿನ್ನದ ಕಡ್ಡಿಗಳು ಇತ್ಯಾದಿಗಳು ದೊರೆತಿವೆ.

ಹೀಗೆ ಸುಮಾರು 10000 ವರ್ಷಗಳಿಂದ ಕೋಕಾ ಉಪಯೋಗದಲ್ಲಿದೆ. ಇಂದಿನ ಪೆರು ಕಣಿವೆಯ ಹಾಗೂ ಘಟ್ಟದ ಸುತ್ತ
ಮುತ್ತಲಿನ ಪ್ರದೇಶದಲ್ಲಿ ಇಂಕಾ ಸಾಮ್ರಾಜ್ಯ ಅಥವಾ ತವಾಂತಿಸೂಯು ಸ್ಥಾಪನೆಯಾಯಿತು. ತವಾಂತಿನ್ ಎಂದರೆ ನಾಲ್ಕರ ಒಂದು ಗುಂಪು. ಸೂಯು ಎಂದರೆ ಪ್ರಾಂತ. ನಾಲ್ಕು ಪ್ರಾಂತಗಳ ಸಮುಚ್ಚಯ ಇಂಕಾ ಸಾಮ್ರಾಜ್ಯ. ಇವರು ಸುಮಾರು ೧೨ನೆಯ ಶತಮಾನದಿಂದ ಈ ಪ್ರದೇಶದಲ್ಲಿ ಬೀಡುಬಿಟ್ಟಿರುವರು.

ಪಾರಂಪರಿಕ ನಂಬಿಕೆಯನ್ವಯ, ಕೋಕಾ ಮೂಲತಃ ಓರ್ವ ಸುಂದರ ಹೆಣ್ಣು. ಆದರೆ ಈಕೆ ಮಹಾ ವ್ಯಭಿಚಾರಿಣಿಯಾಗಿದ್ದಳು. ಇದು ಇಡೀ ಇಂಕಾ ಸಮಾಜಕ್ಕೆ ತಿಳಿಯಿತು. ಕೂಡಲೇ ಅವರು ಆಕೆಯನ್ನು ಅರ್ಧಕ್ಕೆ ಕತ್ತರಿಸಿದರು. ಕತ್ತರಿಸಿದ ದೇಹವನ್ನು, ಮಣ್ಣಿನಲ್ಲಿ ಬೀಜವನ್ನು ಹೂಳುವಂತೆ ಹೂತರು. ಅಲ್ಲಿ ಒಂದು ಸಸಿಯೊಡೆಯಿತು. ಮರವಾಗಿ ಬೆಳೆಯಿತು. ಅದುವೇ ಕೋಕಾ ಮರ. ಕೋಕಾ ಮರದ ಎಲೆಗಳನ್ನು ಕೇವಲ ಪುರುಷರು ಮಾತ್ರ ಸಂಗ್ರಹಿಸುತ್ತಿದ್ದರು. ಅವನ್ನು ಒಣಗಿಸಿ ತಮ್ಮ ಸೊಂಟದ ಚೀಲದಲ್ಲಿ ಇರಿಸಿಕೊಳ್ಳುತ್ತಿದ್ದರು. ತಮ್ಮ ಮಡದಿಯೊಂದಿಗೆ ಸಂಭೋಗ ನಡೆಸಿದ ನಂತರ, ಆ ಚೀಲದಲ್ಲಿದ್ದ ಎಲೆಯನ್ನು
ತೆಗೆದು ತಿನ್ನುತ್ತಿದ್ದರು. ಹೀಗೆ ಅವರು ಅಳಿದ ಸುಂದರಿಗೆ ಗೌರವ ಸಲ್ಲಿಸುತ್ತಿದ್ದರು.

ಅಯಮಾರನ್ ಬುಡಕಟ್ಟಿನ ನಂಬಿಕೆಯನ್ವಯ ಕುನ್ಹೋ ಎನ್ನುವ ದೈವವು ಬಿರುಗಾಳಿ ಹಾಗೂ ಮಂಜಿನ ಅಧಿದೇವತೆ.
ಒಂದು ಸಲ ಆ ದೈವಕ್ಕೆ ವಿಪರೀತ ಕೋಪ ಬಂತು. ಕೋಕಾ ಮರವನ್ನು ಬಿಟ್ಟು ಉಳಿದ ಎಲ್ಲ ಸಸ್ಯರಾಶಿಯನ್ನು ಸುಟ್ಟುಹಾಕಿತು. ಆಗ ಅಯಮಾರ ಬುಡಕಟ್ಟಿನವರು ಕೇವಲ ಕೋಕಾ ಎಲೆಯನ್ನು ತಿನ್ನಬೇಕಾಯಿತು. ಕೋಕಾ ಎಲೆಯು ಅವರ ಹಸಿವನ್ನು ಹಿಂಗಿಸಿತು. ದಾಹವನ್ನು ಅಡಗಿಸಿತು. ಚಳಿಯನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಿತು. ಇನ್ನೊಂದು ದಂತಕಥೆಯು ಪ್ರಚಲಿತದಲ್ಲಿದೆ.

ಇಂಕಾ ಸಾಮ್ರಾಜ್ಯ ಸ್ಥಾಪಿಸಿದ್ದು ದೇವರ ಮಗನಾಗಿದ್ದ ಮಾಂಕೊ ಕೇಪಕ್ ಹಾಗೂ ಈತನ ಸೋದರಿ ಹಾಗೂ ಮಡದಿಯಾಗಿದ್ದ
ಮಾಮಾ ಓಯೆಲೊ. ಇವರಿಬ್ಬರು ಕೃಷಿಯ ತಂತ್ರಜ್ಞಾನವನ್ನು ಭೂಮಿಗೆ ತಂದು ಇಂಕಾ ಸಾಮ್ರಾಜ್ಯದ ಎಲ್ಲ ಪ್ರಜೆಗಳಿಗೆ ಕಲಿಸಿದರು. ಕೋಕಾ ಮರವನ್ನೂ ಅವರೇ ತಂದದ್ದು. ಇಂಕಾ ಪ್ರಜೆಗಳು ಮೈಮುರಿದು ಕೃಷಿ ಕೆಲಸದಲ್ಲಿ ತೊಡಗ ಬೇಕಾಗಿತ್ತು. ಹಾಗಾಗಿ ಅವರು ಕೋಕಾ ಎಲೆಗಳನ್ನು ತಿಂದರೆ, ಕೃಷಿಯಲ್ಲಿ ತೊಡಗಲು ಅಗತ್ಯವಾದ ಶಕ್ತಿ, ಉತ್ಸಾಹವು ದೊರೆಯುತ್ತದೆ, ಹಸಿವು, ಬಾಯಾರಿಕೆಯೂ ಆಗುವುದಿಲ್ಲ, ಎಲ್ಲ ಕ್ಲೇಶಗಳನ್ನು ಕಳೆಯುತ್ತದೆ ಎಂದು ಕೋಕಾ ಮರವನ್ನು ಎಲೆಗಳನ್ನು ಬಳಸುವ ವಿಧಾನ ಗಳನ್ನು ಕಲಿಸಿದರು. ಅಂದಿನಿಂದ ಇಂಕಾ ಜನರು ಕೋಕಾ ಎಲೆಯನ್ನು ಸೇವಿಸತೊಡಗಿದರು.

ಅಮೆರಿಕದ ಪ್ರಜೆಗಳು ಕೋಕಾ ಮರವನ್ನು ಪವಿತ್ರವೆಂದು ಭಾವಿಸಿದ್ದರು. ಧಾರ್ಮಿಕ ಆಚರಣೆಗಳಲ್ಲಿ ಜನರನ್ನು ದೀಕ್ಷಾಬದ್ಧ ರನ್ನಾಗಿಸುವ ಮೊದಲು ಅವರಿಗೆ ಕೋಕಾ ಎಲೆಗಳನ್ನು ನೀಡುತ್ತಿದ್ದರು. ಇಂಕಾ ಮತ್ತು ಇತರ ಬುಡಕಟ್ಟುಗಳ ನಡುವೆ ಯುದ್ಧ ಗಳು ನಡೆಯುತ್ತಿದ್ದವು. ಯುದ್ಧಗಳ ಕಾರಣ ಅವರು ಕೃಷಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಲು ಆಗುತ್ತಿರಲಿಲ್ಲ. ಆಗ ಅವರೆಲ್ಲ ಕೋಕಾ ಎಲೆಗಳನ್ನು ಆಹಾರವನ್ನಾಗಿ ಬಳಸುತ್ತಿದ್ದರು.

100 ಗ್ರಾಂ ಕೋಕಾ ಎಲೆಗಳನ್ನು ತಿಂದರೆ ಅವರಿಗೆ 305 ಕ್ಯಾಲರಿ ಶಕ್ತಿ ದೊರೆಯುತ್ತದೆ. 18.9 ಗ್ರಾಂ ಪ್ರೋಟೀನ್, 46.2 ಗ್ರಾಂ
ಕಾರ್ಬೋಹೈಡ್ರೇಟ್, ಒಬ್ಬ ಮನುಷ್ಯನ ದೈನಂದಿನ ಅಗತ್ಯಕ್ಕೆ ಬೇಕಾಗುವ ಕ್ಯಾಲ್ಷಿಯಂ, -ಸರಸ್, ಕಬ್ಬಿಣ, ವಿಟಮಿನ್ ಎ, ಬಿ, ಸಿ ಮತ್ತು ಇಲ್ಲೇ ಮುಂತಾದವು ಲಭಿಸುತ್ತಿತ್ತು. ಹಾಗಾಗಿ ಕೋಕಾ ಎಲೆಗಳು ಅವರ ಹೊಟ್ಟೆಯನ್ನು ತುಂಬುವುದರ ಜೊತೆಯಲ್ಲಿ, ಅವರಿಗೆ ಸೌಮ್ಯ ಸ್ವರೂಪದ ಉದ್ದೀಪಕವಾಗಿ (ಸ್ಟಿಮ್ಯುಲೆಂಟ್) ಅವರ ದೇಹ ಮತ್ತು ಮನಸ್ಸಿನಲ್ಲಿ ನವ ಉಲ್ಲಾಸವನ್ನು ತುಂಬು ತ್ತಿತ್ತು. ಲೈಂಗಿಕ ಪ್ರಚೋದನೆ ಉಂಟು ಮಾಡುತ್ತಿತ್ತು.

ಹಸಿವನ್ನು ಹಿಂಗಿಸಿ, ದಾಹವನ್ನು ಅಡಗಿಸಿ, ಎಷ್ಟೇ ಕಷ್ಟಕರವಾದ ದೈಹಿಕ ಕೆಲಸವಾಗಿರಲಿ, ಅದನ್ನು ಅನಾಯಾಸವಾಗಿ ಮಾಡಿ ಮುಗಿಸುವ ಶಕ್ತಿ ನೀಡುತ್ತಿತ್ತು. ಆಶ್ಚರ್ಯಕರ ವಿಚಾರವೆಂದರೆ, ಅವರು ದೂರವನ್ನು ಅಳೆಯಲು ಕೋಕಾ ಎಲೆಯನ್ನು ಬಳಸು ತ್ತಿದ್ದರು. ಒಂದು ಸಲ ಕೋಕಾ ತಂಬುಲವನ್ನು ಬಾಯಿಯಲ್ಲಿ ಹಾಕಿಕೊಂಡು ಅಗೆಯುತ್ತಾ ನಡೆಯಲಾರಂಭಿಸಿದರೆ, ಅದನ್ನು ಜಗಿದು ಮುಗಿಸಲು ಅವರಿಗೆ ಸುಮಾರು 40 ನಿಮಿಷಗಳು ಬೇಕಾಗುತ್ತಿತ್ತು.

ಅಷ್ಟು ಹೊತ್ತಿನಲ್ಲಿ ಅವರು ಎರಡು ಮೈಲಿ ದೂರ ನಡೆದಿರುತ್ತಿದ್ದರು. ನಾವು ಚಹದ ಎಲೆಗಳಿಂದ ಚಹವನ್ನು ಮಾಡಿ ಕುಡಿಯು ವಂತೆ, ಇಂಕಾ ಜನರು ಕೋಕಾ ಎಲೆಗಳನ್ನು ಬಳಸಿ, ಕೋಕಾ ಡಿಕಾಕ್ಷನ್ ಅಥವ ಕೋಕಾ ಚಹವನ್ನು ಮಾಡುತ್ತಿದ್ದರು. ಈ ಚಹ ವನ್ನು ಕುಡಿದರೆ ಹೊಟ್ಟೆನೋವು, ವಾಕರಿಕೆ, ಅಜೀರ್ಣ, ಹೊಟ್ಟೆನೋವು, ಮಲಬದ್ಧತೆ ಮತ್ತು ಭೇದಿ ಮುಂತಾದ ಉದರ ಸಮಸ್ಯೆಗಳೆಲ್ಲ ಪರಿಣಾಮಕಾರಿಯಾಗಿ ನಿವಾರಣೆಯಾಗುತ್ತಿದ್ದವು.

ಇಂಕಾ ಜನರಿಗೆ ಹಲ್ಲುನೋವು ಒಂದು ಸಮಸ್ಯೆಯೇ ಆಗಿರಲಿಲ್ಲ. ಕೋಕಾ ಎಲೆಗಳನ್ನು ಜಗಿಯುತ್ತಿದ್ದರೆ ಸಾಕು, ಹಲ್ಲು ನೋವೆಲ್ಲ ಮಾಯವಾಗಿ ಬಿಡುತ್ತಿತ್ತು. ಪರ್ವತದ ಮೇಲೆ ಕೆಲಸ ಮಾಡುವಾಗ ಅಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಿರುತ್ತಿತ್ತು. ಚಳಿ ತೀವ್ರ ವಾಗಿದ್ದು, ತುಂಬಾ ಹಸಿವಾಗುತ್ತಿತ್ತು. ಕೋಕಾ ಎಲೆ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುತ್ತಿತ್ತು. 1979ರಲ್ಲಿ ಕೆಲವು ಅಧ್ಯಯನಗಳು ನಡೆದವು. ಕೋಕಾ ಎಲೆಗಳನ್ನು ಸೇವಿಸಿದಾಗ, ಅದರಲ್ಲಿರುವ ರಾಸಾಯನಿಕಗಳು ನಮ್ಮ ಶರೀರದ ಹೊರ ವಲಯದಲ್ಲಿದ್ದ ರಕ್ತನಾಳಗಳನ್ನು ಸಂಕುಚಿಸುತ್ತಿದ್ದವು.

ಹಾಗಾಗಿ ಶರೀರದಿಂದ ಹೊರಹೋಗುವ ಶಾಖದ ಪ್ರಮಾಣವು ಕಡಿಮೆಯಾಗಿ ಮೈ ಬೆಚ್ಚಗೆ ಇರುತ್ತಿತ್ತು. ಕೋಕಾ ಎಲೆಗಳು ರಕ್ತ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸುತ್ತಿತ್ತು. ಹಾಗಾಗಿ ಹಸಿವೇ ಆಗುತ್ತಿರಲಿಲ್ಲ. ಕೋಕಾ ಮರಗಳು ಕೇವಲ ಶ್ರೀಮಂತರದಾಗಿದ್ದವು.
ಅವರು ಹೊಲ, ಗದ್ದೆಗಳಲ್ಲಿ ಕೆಲಸವನ್ನು ಮಾಡುವ ಕಾರ್ಮಿಕರಿಗೆ ಕೋಕಾ ಎಲೆಗಳನ್ನು ನೀಡಿ, ಅವರಿಂದ ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಹಾಗೆಯೇ ಯುದ್ಧದಲ್ಲಿ ಭಾಗಿಯಾಗುವ ಸೈನಿಕರಿಗೂ ಕೋಕಾ ಎಲೆಗಳನ್ನು ವಿಶೇಷವಾಗಿ ನೀಡು ತ್ತಿದ್ದರು. ಅವರು ದಣಿವೇ ಇಲ್ಲದಂತೆ ವೀರಾವೇಶವಾಗಿ ಹೋರಾಡುತ್ತಿದ್ದರು.

ಜೊತೆಗೆ ಯುದ್ಧಗಳಲ್ಲಿ ಆಗಬಹುದಾಗಿದ್ದ ಸಣ್ಣ ಪುಟ್ಟ ಗಾಯಗಳ ನೋವೇ ಆಗುತ್ತಿರಲಿಲ್ಲ. ಪೆರುವಿನಲ್ಲಿ, ಇಂಕಾ ಸಾಮ್ರಾಜ್ಯದ
ರಾಜಧಾನಿ ಕುಸ್ಕೋ ಇದೆ. ಇದು ಬೆಟ್ಟದ ಮೇಲಿದೆ. ರಾಜಧಾನಿಯ ಸುತ್ತ ಬೃಹತ್ ಬಂಡೆಗಳಿಂದ ಮಾಡಿದ 6 ಮೀಟರ್ ಎತ್ತರದ ಕೋಟೆಯಿದೆ. ಈ ಕೋಟೆಯನ್ನು ಕೇವಲ 100-200 ಟನ್ ತೂಗುವ ಬಂಡೆಗಳಿಂದ ನಿರ್ಮಿಸಿರುವರು. ಎರಡು ಕಲ್ಲುಗಳ ನಡುವೆ ಗಾರೆಯಿಲ್ಲ.

ಸಿಮೆಂಟಿಲ್ಲ. ಅವನ್ನು ಎಷ್ಟು ಅಚ್ಚುಕಟ್ಟಾಗಿ ಕಡೆದಿರುವರು ಎಂದರೆ, ನಡುವೆ ಕಾಗದವನ್ನೂ ತೂರಿಸುವಷ್ಟು ಎಡೆಯಿಲ್ಲ.
ಇವರು ಇಷ್ಟು ಅಚ್ಚುಕಟ್ಟಾಗಿ ಕೋಟೆ ಕಟ್ಟಲು ಅಗತ್ಯವಾಗಿದ್ದ ಶಕ್ತಿಯನ್ನು ಕೋಕೋ ಎಲೆಗಳು ನೀಡಿದ್ದವು. ವಿಶ್ವದ ಕೆಲವೇ ಕೆಲವು ಭೂಭಾಗಗಳಲ್ಲಿ ಬೆಳೆಯುತ್ತಿದ್ದ ಕೋಕಾ ಮರವು ಇಂದು ವಿಶ್ವದಾದ್ಯಂತ, ಭಾರತವನ್ನೂ ಒಳಗೊಂಡಂತೆ, ಎಲ್ಲ ಪ್ರಮುಖ ದೇಶಗಳಲ್ಲಿ ಬೆಳೆಯುತ್ತಿದೆ.

ಕೋಕಾ ಮರವನ್ನು ಪೆರುವಿನಿಂದ ಯೂರೋಪಿಯನ್ನರಿಗೆ ಪರಿಚಯಿಸಿದ್ದು ಸ್ಪ್ಯಾನಿಶ್ ಜನರು. ಆನಂತರ ಕೋಕಾ ವಿಶ್ವದ ಎಲ್ಲೆಡೆ ಹರಡಿತು.