ಅಭಿಮತ
ರಮಾನಂದ ಶರ್ಮಾ
ramanandsharma28@gmail.com
ಕಳೆದ ಒಂದೆರಡು ವಾರಗಳಿಂದ ಕೊಂಕಣ ರೈಲು ಸೌಲಭ್ಯ ಉತ್ತರ ಕನ್ನಡ ಜಿಲ್ಲೆಯವರಿಗೂ ನ್ಯಾಯಯುತವಾಗಿ ದೊರಕಲಿ, ಕೊಂಕಣ ರೈಲು ನಿಗಮ ಭಾರತೀಯ ರೈಲಿನಲ್ಲಿ ವಿಲೀನವಾಗಲಿ ಎನ್ನುವ ಟ್ವಿಟರ್ ಆಭಿಯಾನ ನಡೆದಿದ್ದು, ಈ ಅಭಿಯಾನದ ಫಲವಾಗಿ ಕೋವಿಡ್- ಕರೋನಾ ನೆಪದಲ್ಲಿ ರದ್ದು ಮಾಡಿದ್ದ
ಬೆಂಗಳೂರು- ಕಾರವಾರ ಮಧ್ಯದ ಎರಡು ರೈಲುಗಳು ಪುನರಾರಂಭವಾಗಾಲಿವೆ ಮತ್ತು ವಿಸ್ಟಾಡೋಮ್ ಕೋಚ್‌ಗಳು ಕಾರವಾರದವರೆಗೂ ಬರಲಿವೆ.
ಈ ಅಭಿಯಾನ ‘ಮಾಡು ಇಲ್ಲವೇ ಮಡಿ’ ಎನ್ನುವ ಛಲದಲ್ಲಿ ನಡೆದಿದ್ದು, ಇದರಲ್ಲಿ ಯಾವುದೇ ರಾಜಕೀಯ ಪಕ್ಷದ ನೆರಳು ಕಾಣದೇ ಪಕ್ಷಾತೀತವಾಗಿ ಕರಾವಳಿ ಜಿಲ್ಲೆಗಳಿಗೆ ಕೊಂಕಣ ರೈಲು ಮತ್ತು ಭಾರತೀಯ ರೈಲಿನಲ್ಲಿ ನ್ಯಾಯಯುತವಾಗಿ ದೊರಕಬೇಕಾದ ರೈಲು ಸಂಪರ್ಕ ಮತ್ತು ಸೌಲಭ್ಯದ ಬಗೆಗೆ ಸಂಬಂಧಪಟ್ಟವರ ಗಮನ ಸೆಳೆಯುವದಾಗಿದ್ದು, ಹೋರಾಟಗಾರರು ಅರಂಭಿಕ ಯಶಸ್ಸನ್ನು ಪಡೆದಿದ್ದಾರೆ. ಅದರೂ ಕ್ರಮಿಸುವ ದೂರ ದಣಿವಾಗುವಷ್ಟು ಅಂತರದಲ್ಲಿ ಇದೆ.
ಏನಿದು ಸಮಸ್ಯೆ?
ಕೊಂಕಣ ರೈಲು ನಿಗಮ ೧೯೯೦ರಲ್ಲಿ ಭಾರತೀಯ ರೇಲ್ವೆ (ಶೇ.೫೧), ಮಹಾರಾಷ್ಟ್ರ (ಶೇ.೨೨- ೩೮೨ ಕಿ.ಮೀ), ಕರ್ನಾಟಕ (ಶೇ.೧೫-೨೭೩ ಕಿ.ಮೀ), ಕೇರಳ (ಶೇ.೬) ಮತ್ತು ಗೋವಾ (ಶೇ.೬-೧೦೫ ಕಿ.ಮೀ) ರಾಜ್ಯದ ಪಾಲುಗಾರಿಕೆಯಲ್ಲಿ ಸ್ಥಾಪಿತವಾದ ಜಂಟಿ ಉದ್ಯಮ. ಒಂದು ಬದಿಯಲ್ಲಿ ಸಹ್ಯಾದ್ರಿ ಹಸಿರು ಶೃಂಗಗಳು ಮತ್ತು ಇನ್ನೊಂದು ಬದಿಯಲ್ಲಿ ನೀಲಿ ಸಮುದ್ರದ ಮಧ್ಯ ಮಂಗಳೂರಿನಿಂದ ಮುಂಬೈವರೆಗೆ ೭೬೦ ಕಿಮೀ ಉದ್ದ ಇರುವ ೯೨ ಸುರಂಗ ಮಾರ್ಗ ಮತ್ತು ೨೦೦೦ ಸೇತುವೆಗಳು ಇರುವ ರೈಲು ಮಾರ್ಗ.
ದೇಶದ ಅತ್ಯದ್ಭುತ ಎಂಜಿನಿಯರಿಂಗ್ ಕೌಶಲ್ಯಎನ್ನುವ ಈ ಯೋಜನೆ ಅಂದಿನ ಯೋಜನಾ ಅಯೋಗದ ಮುಖ್ಯಸ್ಥ ರಾಮಕೃಷ್ಣ ಹೆಗಡೆ, ರೈಲು ಮಂತ್ರಿ ಜಾರ್ಜ್ ಫೆರ್ನಾಂಡೀಸ್, ಅರ್ಥಿಕ ಸಚಿವ ಮಧು ದಂಡವತೆ, ಪ್ರಧಾನಿ ವಿ.ಪಿ.ಸಿಂಗ್‌ರ ಜಂಟಿ ಪ್ರಯತ್ನದ ಕೂಸು. ರೈಲು ಯೋಜನೆಗಳು ಪೂರ್ಣಗೊಂಡು ರೈಲು ಓಡಲು ದಶಕಗಳೇ ಬೇಕು ಎನ್ನುವ ವಾಸ್ತವ ಇರುವಾಗ ಕೇವಲ ಎರಡು ವರ್ಷದ ವಿಳಂಬದ ನಂತರ ೧೯೯೮ರಲ್ಲಿ ಎಂಟೇ ವರ್ಷಗಳಲ್ಲಿ ಈ ಹೊಸ ಮಾರ್ಗದಲ್ಲಿ ರೈಲು ಓಡಿದ್ದು ಭಾರತೀಯ ರೈಲು ಇತಿಹಾಸದಲ್ಲಿ ಒಂದು ವಿಕ್ರಮ ಮತ್ತು ಮೈಲಿಗಲ್ಲು.
ವೆಚ್ಚ, ಮೂಲ ಅಂದಾಜಿನ ಶೇ.೨೨೨ರಷ್ಟು ಹೆಚ್ಚಾಗಿದ್ದು, ೩೫೦೦ ಕೋಟಿ ರು. ವ್ಯಯವಾಗಿದೆ. ಕೇರಳ ರಾಜ್ಯದಲ್ಲಿ ಈ ಮಾರ್ಗ ಹರಿಯದಿದ್ದರೂ, ಈ ಮಾರ್ಗ ದಿಂದ ಕೇರಳ ರಾಜ್ಯದಲ್ಲಿ ಅಗುವ ಅರ್ಥಿಕ ಅಭಿವೃದ್ದಿ ಮತ್ತು ಪ್ರವಾಸೋದ್ಯಮದ ದೃಷ್ಟಿಯಲ್ಲಿ ಈ ರಾಜ್ಯವನ್ನು ಈ ಯೋಜನೆಯಲ್ಲಿ ಪಾಲುಗಾರನ್ನಾಗಿ ಮಾಡಲಾಗಿದೆ. ಒಂದು ಮಾಹಿತಿಯ ಪ್ರಕಾರ ಕೊಂಕಣ ರೈಲು ಮಾರ್ಗ ದಲ್ಲಿ ಸುಮಾರು ೩೦-೪೦ ಜೋಡಿ ರೈಲುಗಳು ದಿನಾಲೂ ಸಂಚರಿಸುತ್ತಿವೆ.
ಕೊಂಕಣ ರೈಲಿನ ನಿರ್ಮಾಣದಲ್ಲಿ ಕರ್ನಾಟಕದ ಪಾಲು ಶೇ.೧೫ ಇರುತ್ತಿದ್ದು, ಈ ರಾಷ್ಟ್ರೀಯ ಯೋಜನೆಯ ಸಾಕಾರಕ್ಕಾಗಿ ಸಾವಿರಾರು ಕುಟುಂಬಗಳು ತಮ್ಮ ಮನೆ-ಮಠಗಳನ್ನು ಕಳೆದು ಕೊಂಡಿವೆ. ಕಳೆದುಕೊಂಡ ಅಸ್ತಿ-ಪಾಸ್ತಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪರಿಹಾರ ಸಿಗದಿರುವುದರೊಂದಿಗೆ, ಈ ಪರಿಹಾರಕ್ಕೂ ಹಲವರು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು. ಈ ನಿಗಮದಲ್ಲಿ ಕರಾವಳಿಯವರಿಗೆ ಉದ್ಯೋಗವೂ ಸಾಕಷ್ಟು ದೊರಕಲಿಲ್ಲ. ಕೆಲವು ಕೆಳಮಟ್ಟದ ಉದ್ಯೋಗ ದಲ್ಲಿಯೇ ಅವರು ತೃಪ್ತಿ ಪಡೆಯಬೇಕಾಯಿತು ಎನ್ನುವ ಮಾತು ಕೇಳಿ ಬರುತ್ತಿದೆ. ಈ ಆನ್ಯಾಯ ಮತ್ತು ಪಕ್ಷಪಾತದಿಂದ ಕೊಂಕಣ ರೈಲು ಮಾರ್ಗದ ಮೂಲಕ ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಿಗೆ ರೈಲು ಸಂಪರ್ಕ ನೀಡುವ ನಿಟ್ಟಿನಲ್ಲೂ ಮುಂದುವರಿಯಿತು.
ಕೊಂಕಣ ರೂಟ್‌ನ ಮೂಲಕ ಬೆಂಗಳೂರಿನಿಂದ ಕಾರವಾರಕ್ಕೆ ರೈಲು ತರಲು ಕರಾವಳಿಗರು ನ್ಯಾಯಾಲಯದದಲ್ಲಿ ಸುದೀರ್ಘ ಹೋರಾಟ ಮಾಡಬೇಕಾಯಿತು. ಸದ್ಯ ಬೆಂಗಳೂರಿನಿಂದ ಕಾರವಾರಕ್ಕೆ ಇರುವ ಎರಡೂ ರೈಲುಗಳು ನ್ಯಾಯಾಲಯದ ಕೃಪೆಯಿಂದ ದೊರಕಿದ್ದು, ಕೊಂಕಣ ರೈಲು ನಿಗಮ ಇದು ತಮ್ಮ ಕರ್ತವ್ಯ ಮತ್ತು ಆದ್ಯತೆ ಎಂದು ಎಂದೂ ಭಾವಿಸಲೇ ಇಲ್ಲ ಎನ್ನುವ ಅರೋಪ ಕೇಳಿ ಬರುತ್ತಿದೆ. ಬೆಂಗಳೂರಿನಿಂದ ಕಾರವಾರಕ್ಕೆ ಬರುವ ಒಂದು ರೈಲನ್ನು ಕೇರಳದ ಕಣ್ಣೂರಿಗೆ ತಳಿಕು ಹಾಕಿ ಕೊಂಕಣ ರೈಲು ನಿಗಮ ಕಾರವಾರವನ್ನು ಮರೆತಿಲ್ಲ ಎಂದು ಬಿಂಬಿಸಲಾಯಿತು. ಕೊಂಕಣ ಸುತ್ತಿ ಮೈಲಾರ ಎನ್ನುವಂತೆ ಮೈಸೂರು ಮೂಲಕ ಕಾರವಾರಕ್ಕೆಹೋಗುವ ರೈಲನ್ನು ಪಡೀಲ್ ಮೂಲಕ ಸಂಚರಿಸುವಂತೆ ಮಾಡುವಾಗ ಕರಾವಳಿ ಜನರು ಏಳು ಕೆರೆ ನೀರು ಕುಡಿಯಬೇಕಾಯಿತು.
ಈ ಭೇದ ಭಾವದ ತೀರಾ ಇತ್ತೀಚಿನ ಉದಾಹರಣೆ ವಿಸ್ಟಾಡೋಮ್ ಕೋಚ್‌ಗಳು. ಮಂಗಳೂರುವರೆಗೆ ಬಂದ ಈ ಕೋಚ್‌ಗಳು ಕಾರವಾರ ತಲುಪಲೇ ಇಲ್ಲ.
ಈ ರೈಲು ಮಾರ್ಗ ಕರ್ನಾಟಕದಲ್ಲಿ ೨೭೩ ಕಿಮೀ ಇದ್ದರೂ, ಒಂದೇ ಒಂದು ವಾಟರ್ ಸ್ಟೇಷನ್ ಇಲ್ಲ. ನಿಲ್ದಾಣಗಳ ನಿರ್ವಹಣೆ ಬಗೆಗೆ ಇತ್ತೀಚೆಗೆ ಕುಮಟಾ
ನಿಲ್ದಾಣಕ್ಕೆ ಭೇಟಿ ನೀಡಿದ ಶಾಸಕರೊಬ್ಬರು ಕೊಂಕಣರೈಲು ನಿಗಮದ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು ಮಾಧ್ಯಮದಲ್ಲಿ ಭಾರಿ ಸುದ್ದಿಯಾಗಿತ್ತು.
ಬೆಂಗಳೂರಿನಿಂದ ಕಾರವಾರಕ್ಕೆ ಬಸ್ಸಿನಲ್ಲಿ ಸುಮಾರು ಹತ್ತು ತಾಸು ಪ್ರಯಾಣ. ಅದೇ ರೈಲಿನಲ್ಲಾದರೇ ೧೪-೧೫ ತಾಸು. ಅದೂ ಸಮಯಕ್ಕೆ ಸರಿಯಾಗಿ ತಲುಪಿದರೆ ಮಾತ್ರ. ಇದು ಎಂದೂ ಸಮಯಕ್ಕೆ ಸರಿಯಾಗಿ ತಲುಪುವುದಿಲ್ಲ ಎನ್ನುವುದು ಬಹಿರಂಗ ಸತ್ಯ. ತೀವ್ರಗತಿಯಲ್ಲಿ ಸಾಗುವ ಇಂದಿನ ಜೀವನದಲ್ಲಿ ೬೦೦ ಕಿಮೀ ಪ್ರಯಾಣಿಸಲು ೧೫ ತಾಸು ವ್ಯಯಿಸುವ ವ್ಯವಧಾನ ಯಾರಿಗಿದೆ? ಈ ರೈಲು ೧೦-೧೨ ತಾಸು ಸಮಯದಲ್ಲಿ ಕ್ರಮಿಸುವ ವ್ಯವಸ್ಥೆ ಮಾಡಿದರೆ, ಈ ರೈಲುಗಳಿಗೆ ಇನ್ನೂ ೬-೮ ಬೋಗಿಗಳನ್ನು ಹಚ್ಚಬೇಕಾಗುತ್ತದೆ ಎನ್ನುವ ಸತ್ಯ ಈ ನಿಗಮಕ್ಕೆ ತಿಳಿಯದಿರುವುದು ತೀರಾ ಆಶ್ಚರ್ಯ. ಇರುವ ರೈಲುಗಳ ವೇಳಾ ಪಟ್ಟಿಯೂ ಕೂಡಾ ಜನಸ್ನೇಹಿಯಾಗದೇ, ಕೊಂಕಣ ರೈಲು ನಿಗಮದ ಪ್ರೇಮಿಯಾಗಿರುವುದು ಇನ್ನೊಂದು ದುರಂತ ಎಂದು ಬಹುತೇಕ ಪ್ರಯಾಣಿಕರು ಅಭಿಪ್ರಾಯ ವ್ಯಕ್ತ ಮಾಡುತ್ತಾರೆ.
ಕರೋನಾ ಸಮಯದಲ್ಲಿ ಕೊಂಕಣ ಮಾರ್ಗದ ರೈಲುಗಳು ಸೇರಿ ಹಲವು ರೈಲುಗಳನ್ನು ರದ್ದು ಮಾಡಿರುವುದರಲ್ಲಿ ಅರ್ಥವಿಲ್ಲದಿಲ್ಲ. ಅದರೆ, ರೈಲು ಪ್ರಯಾಣಕ್ಕೆ ಸರಕಾರ ಅನುಮತಿ ನೀಡಿದಾಗ ಕೊಂಕಣ ರೈಲು ನಿಗಮವು ಕರಾವಳಿಯ ಕಾರವಾರ ರೈಲನ್ನು ನಿರ್ಲಕ್ಷಿಸಿದ್ದು ಏಕೆ? ಎನ್ನುವುದು ಚಿದಂಬರ ರಹಸ್ಯವಾಗಿದೆ. ದುರ್ದೈವವೆಂದರೆ ಕರಾವಳಿಯ ಸಂಸದರು ತಮ್ಮ ಕೆಲಸಗಳನ್ನು ಬಿಟ್ಟು ಈ ರೈಲುಗಳಿಗಾಗಿ ರೈಲು ಮಂತ್ರಿ ಬಳಿ ದೌಡಾಯಿಸಬೇಕಾಯಿತು. ಕರಾವಳಿಗರು
ಹೋರಾಟದ ಮಾರ್ಗ ಹಿಡಿಯಬೇಕಾಯಿತು. ಮಾಧ್ಯಮಗಳು ಮುಖಪುಟಕ್ಕೆ ಬರಬೇಕಾಯಿತು. ಈ ರೈಲು ನಿಗಮ ಕರಾವಳಿಗರ ಆಶೋತ್ತರಗಳಿಗೆ ಸ್ಪಂದಿಸದೇ, ಈ ರೈಲುಗಳನ್ನು ಪುನರಾರಂಭಗೊಳಸದಿರಲು ಈ ರೈಲುಗಳು ನಷ್ಟ ಅನುಭವಿಸುವುದೇ ಕಾರಣ ಎನ್ನುವ ಹಾಸ್ಯಾಸ್ಪದ ಉತ್ತರ ನೀಡಿತಂತೆ.
ಸಾರ್ವಜನಿಕ ರಂಗದ ಉದ್ಯಮಗಳು ಮುಖ್ಯ ಉದ್ದೇಶ ಸಾರ್ವಜನಿಕ ಸೇವೆಯೇ ಹೊರತು ಲಾಭವಲ್ಲ ಎನ್ನುವ ವಾಸ್ತವನ್ನು ಅವರು ತಿಳಿಯದಿರುವುದು ದುರದೃಷ್ಟ ಎಂದು ಕರಾವಳಿಗರು ಕಿಡಿಕಾರುತ್ತಾರೆ. ಏಪ್ರಿಲ್ ೨೦೨೧ರಲ್ಲಿ ಈ ಮಾರ್ಗದ ಹಗಲು ರೈಲಿಗೆ ಕೇವಲ ಶೇ.೧ ಮತ್ತು ರಾತ್ರಿ ರೈಲಿಗೆ ಶೇ.೧೭ ದಟ್ಟಣೆ ಇದೆ ಎಂದು ನಿಗಮವು ರೈಲು ಇಲಾಖೆಗೆ ಪತ್ರ ಬರೆದು ಈ ರೈಲುಗಳನ್ನು ರದ್ದು ಮಾಡುವಂತೆ ಕೋರಿತ್ತಂತೆ. ಸ್ಪಷ್ಟತೆ ಇಲ್ಲದ, ಜನರಿಗೆ ಮಂಕುಬೂದಿ ಸೂಸುವ ಈ ನಿಗಮದ ಗೊಂದಲಕಾರಿ ನಿಲುವು ಕರಾವಳಿಗರಿಗೆ ದಂಗು ಬಡಿಸಿದೆ.
ಮಂಗಳೂರು ನಿಲ್ದಾಣ ದಕ್ಷಿಣ ರೈಲ್ವೇ ಪಾಲಘಾಟ್ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದು ಮಂಗಳೂರು ಭಾಗದ ರೈಲು ಆಶೋತ್ತಗಳಿಗೆ
ಸ್ಪಂದಿಸುತ್ತಿಲ್ಲ ಎನ್ನುವ ಅರೋಪ ಲಾಗಾಯ್ತನಿಂದ ಇದೆ. ಅಕಸ್ಮಾತ್ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇಯಲ್ಲಿ ವಿಲೀನ ಗೊಳಿಸಿದರೆ ಮಂಗಳೂರಿನಲ್ಲಿ
ರೈಲ್ವೇ ವಿಭಾಗ ಕಚೇರಿ ಸ್ಥಾಪಿಸುವ ಪ್ರಯತ್ನ ಮುನ್ನೆಲೆಗೆ ಬಂದು ನೈಋತ್ಯ ರೇಲ್ವೆ ವಲಯಕ್ಕೆ ಸೇರುವ ಸಾಧ್ಯತೆ ಇದೆ ಇರುವುದರಿಂದ ದಕ್ಷಿಣ ರೈಲ್ವೇ ವಲಯ ಇಂತಹ ಕ್ರಮವನ್ನು ವಿರೋಧಿಸುತ್ತದೆ ಎಂದು ಹೇಳಲಾಗುತ್ತದೆ.
ಮೆಟ್ರೋ ಮ್ಯಾನ್ ಶ್ರೀಧರನ್ ತಾಂತ್ರಿಕವಾಗಿ ಇದು ಅಸಾಧ್ಯ ಮತ್ತು ಕೊಂಕಣ ರೈಲ್ವೇ ಸುಮಾರು ೨೩೦೦೦ ಕೋಟಿ ಸಾಲದಿಂದ ಮುಕ್ತವಾಗುವವರೆಗೆ
ಸಾಧ್ಯವಾಗದು ಎನ್ನುವ ಆಭಿಪ್ರಾಯ ನೀಡಿದ್ದಾರಂತೆ. ಹಾಗೆಯೇ ಕೇಂದ್ರ ಸರಕಾರವು ಇದನ್ನು ಅಷ್ಟು ಸುಲಭವಾಗಿ ಒಪ್ಪದು ಎನ್ನುವ ಮಾತೂ ಕೇಳಿ ಬರುತ್ತಿದೆ. ವಿಪರ್ಯಾಸವೆಂದರೆ ನಮ್ಮ ಸಂಸದರೊಬ್ಬರು ಒಕ್ಕೂಟ ವ್ಯವಸ್ಥೆಯಲ್ಲಿ ಇಂಥಹ ಸೇರ್ಪಡೆಯನ್ನು ತಳ್ಳಿ ಹಾಕಿzರಂತೆ. ಕನ್ನಡಿಗರು ಇದನ್ನು ಗೋಕುಲಾಷ್ಟಮಿಗೂ ಗ-ರ ಸಾಹೇಬರಿಗೂ ಏನು ಸಂಬಂಧ ಎನ್ನುತ್ತಿದ್ದಾರೆ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎನ್ನುವಂತೆ ಕೊಂಕಣ ರೈಲಿನ ಸೌಲಭ್ಯ ಕನ್ನ ಡಿಗರಿಗೆ ಮರೀಚಿಕೆಯಾಗಿ ಕಾಣುತ್ತಿದೆ.
ವಿಪರ್ಯಾಸವೆಂದರೆ ಕರಾವಳಿ ಕರ್ನಾಟಕದ ರೈಲು ಸೌಲಭ್ಯದ ಸಮಸ್ಯೆ ರಾಜಧಾನಿ ಬೆಂಗಳೂರಿನಲ್ಲಿ ಸದ್ದು ಮಾಡುವುದೇ ಇಲ್ಲ. ರಾಜಧಾನಿಯಲ್ಲಿ ಮೆಟ್ರೋ
ರೈಲು ಮತ್ತು ಸಬರ್ಬನ್ ರೈಲುಗಳು ಮಾತ್ರ ಉಚ್ಚ ಸ್ಥಾಯಿಯಲ್ಲಿ ಸದ್ದು ಮಾಡುತ್ತವೆ. ರೈಲ್ವೇ ಸಚಿವ ಸುರೇಶ ಅಂಗಡಿಯವರ ಅಕಾಲಿಕ ನಿಧನದ ನಂತರ
ಕರ್ನಾಟಕದ ರೈಲು ಸೌಲಭ್ಯದ ಬೇಡಿಕೆಗಳು ಸ್ಪಂದನೆ ಇಲ್ಲದೇ ಅನಾಥವಾಗಿವೆ. ಸದಾನಂದಗೌಡರು ರೈಲು ಮಂತ್ರಿಯಾಗಿದ್ದಾಗ ಉತ್ತರ ಕನ್ನಡ ಜಿಲ್ಲೆಯ ರೈಲು
ಅಭಿವೃದ್ದಿಗೆ ೪೦೦೦ ಕೋಟಿಯನ್ನು ತೆಗೆದಿರಿಸಲಾಗಿದೆ ಎಂದು ಹೇಳಿದ್ದು, ಈ ಜಿಲ್ಲೆಯ ಜನರು ಸಂಭ್ರಮಿಸಿದ್ದರು. ಅವರೇ ಅನುಮತಿ ನೀಡಿದ ತಾಳಗುಪ್ಪಾ- ಸಿದ್ದಾಪುರ ರೈಲು ಹಳಿ ಏರಲೇ ಇಲ್ಲ.
ಹಾವೇರಿ -ಸಿರ್ಸಿ , ತಾಳಗುಪ್ಪಾ-ಸಿದ್ದಾಪುರ- ಹುಬ್ಬಳ್ಳಿ ರೈಲು ಯೋಜನೆಗಳು, ‘ಮನಸ್ಸಿದ್ದರೆ ರೈಲ್ವೇ, ಇಲ್ಲದಿದ್ದರೆ ಸರ್ವೆ’ ಎನ್ನುವ ಮಾಜಿ ರೈಲು ಮಂತ್ರಿ ಮಧು ದಂಡವತೆಯವರ ಮಾತನ್ನು ನೆನಪಿಗೆ ತರುತ್ತವೆ. ಕೋವಿಡ್ ನೆವದಲ್ಲಿ ರೆಡ್ ಸಿಗ್ನಲ್‌ಗೆ ಒಳಗಾಗಿದ್ದ ಅಳ್ನಾವರ- ದಾಂಡೇಲಿ ರೈಲಿಗೆ ಇನ್ನೂ ಗ್ರೀನ್ ಸಿಗ್ನಲ್ ಸಿಗಲಿಲ್ಲ. ಅರ್ಧ ಶತಮಾನದಿಂದ ಹಸಿರು ಸಿಗ್ನಲ್‌ಗೆ ಕಾಯುತ್ತಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ, ಪರಿಸರವಾದಿಗಳು ಇರಿಸಿದ ವ್ಯಾಜ್ಯಗಳ
ಚಕ್ರವ್ಯೂಹದಲ್ಲಿ ಸಿಲುಕಿದೆ. ಜನಪ್ರತಿನಿಧಿಗಳ ನಿರ್ಲಕ್ಷವೋ, ಹೋರಾಟದ ಕೆಚ್ಚು ತೋರಿಸದ ಉತ್ತರ ಕನ್ನಡಿಗರ ನಿರ್ಲಿಪ್ತ ಮನೋಭಾವವೋ, ಇಲ್ಲಿ ರೈಲು
ಯೋಜನೆಗಳು ಹಳಿ ಏರುವುದಿಲ್ಲ. ರೈಲು ಯೋಜನೆಗಳಿಗೂ ಈ ಜಿಗೂ ಹಾವು ಮುಂಗಲಿ ಸ್ನೇಹ ಎಂದು ಅನಿಸುತ್ತದೆ.