ಮಾಹಿತಿ
ರಘು ಕೋಟ್ಯಾನ್
ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ಆವರಣ ಒಳಗೆ ಮೂರು ಪ್ರಮುಖ ದೇವಾಲಯಗಳಿವೆ. ಪುರಾಣದ ಪ್ರಕಾರ ಕೃಷ್ಣನಿಗೆ ಅರ್ಪಿತವಾದ ದೇವಾಲಯವನ್ನು ಮೊದಲ ಬಾರಿಗೆ ಅವನ ಮೊಮ್ಮಗ ವಜ್ರನಾಭನು ನಿರ್ಮಿಸಿದನು ಎಂದು ಹೇಳಲಾಗುತ್ತೆ. ೧೦೧೭ ಅಥವಾ ೧೦೧೮ ರಲ್ಲಿ ಘಜ್ನಿಯ ಮಹಮ್ಮದ್ ದಾಳಿ ಮಾಡಿ ಮೊದಲ ಬಾರಿಗೆ ಲೂಟಿ ಮಾಡಿದನು. ಅವನು ದೇವಾಲಯವನ್ನು ಸುಟ್ಟುಹಾಕಲು ಮತ್ತು ಕೆಡವಲು ಆದೇಶಿಸಿದನು. ದೇವಾಲಯದಲ್ಲಿದ್ದ ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯ ಸಂಪತ್ತುಗಳನ್ನು ಲೂಟಿ ಮಾಡಿ ಅದನ್ನು ನೂರು ಒಂಟೆಗಳ ಮೇಲೆ ಸಾಗಿಸಿದನು ಎಂದು ಹೇಳಲಾಗುತ್ತದೆ.
ನಂತರ ೧೧೫೦ರಲ್ಲಿ ಗಹಡವಲ ರಾಜನ ಸಾಮಂತನಾಗಿದ್ದ ಜಜ್ಜ ಎಂಬ ವ್ಯಕ್ತಿಯು ಅಲ್ಲಿ ಅದ್ಭುತವಾದ ವಿಷ್ಣು ದೇವಾಲಯವನ್ನು ನಿರ್ಮಿಸಿದನೆಂದು ಉತ್ಕನನದ
ಮೇಲೆ ಸ್ಥಳದಲ್ಲಿ ದೊರೆತ ಸಂಸ್ಕೃತದ ಕಲ್ಲಿನ ಶಾಸನವು ಉಲ್ಲೇಖಿಸುತ್ತದೆ. ನಂತರ ಮೊಘಲ್ ಚಕ್ರವರ್ತಿ ಜಹಾಂಗೀರ್ ಆಳ್ವಿಕೆಯಲ್ಲಿ ೧೬ನೇ ಶತಮಾನದಲ್ಲಿ ದೆಹಲಿ ಸುಲ್ತಾನ್ ಸಿಕಂದರ್ ಲೋಧಿ ಮಥುರಾದ ಆ ದೇವಾಲಯವನ್ನು ನಾಶಪಡಿಸಿದ ಬಗ್ಗೆ ತಾರಿಖ್-ಇ-ದೌದಿಯಲ್ಲಿ ಉಲ್ಲೇಖವಿದೆ. ಜಹಾಂಗೀರ್ ಆಳ್ವಿಕೆಯಲ್ಲಿ ೧೬೧೮ ರಲ್ಲಿ ಓರ್ಚಾದ ರಾಜ ವೀರ್ ಸಿಂಗ್ ದೇವಬುಂದೇಲಾ ಮೂವತ್ಮೂರು ಲಕ್ಷ ವೆಚ್ಚದಲ್ಲಿ ಪುನಃ ಅಲ್ಲಿ ದೇವಾಲಯವನ್ನು ನಿರ್ಮಿಸಿದ. ಕೊನೆಯಾದಾಗಿ ಮೊಘಲರ ಅತ್ಯಂತ ಕ್ರೂರ ರಾಜ ಮತಾಂಧನದಂತ ಔರಂಗಜೇಬನು ಮಥುರಾದ ಮೇಲೆ ದಾಳಿ ಮಾಡಿ ಆ ಕೇಶವದೇವ ದೇವಾಲಯವನ್ನು ೧೬೭೦ರಲ್ಲಿ ಧ್ವಂಸಮಾಡಿ ಅದರ ಜಾಗದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಿದನು.
೧೮೦೪ರಲ್ಲಿ ಮಥುರಾವು ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿತು. ಈಸ್ಟ್ ಇಂಡಿಯಾ ಕಂಪನಿಯು ಅಲ್ಲಿನ ಭೂಮಿಯನ್ನು ಹರಾಜು ಹಾಕಿತು ಮತ್ತು ಬನಾರಸ್‌ನ ಶ್ರೀಮಂತ ವ್ಯಾಪಾರಿ ರಾಜ ಪಟ್ನಿಮಲ್ ಇದನ್ನು ಖರೀದಿಸಿದರು. ರಾಜ ಪಟ್ನಿಮಲ್ ಆ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ಬಯಸಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ. ಕಾಲಾನಂತರ ಆ ಜಾಗ ಅನುವಂಶೀಯವಾಗಿ ಅವನ ವಂಶಸ್ಥರಿಗೆ ವರ್ಗಾಯಿಸಲ್ಪಿಟ್ಟಿತು. ಅನಂತರ ರಾಜ ಪಟ್ನಿಮಲ್ ವಂಶಸ್ಥರಾಗಿದ್ದಂತ ಕೃಷ್ಣ ದಾಸ್ ಕಾಲದಲ್ಲಿ ಮುಸ್ಲಿಮರು ಶಾಹಿ ಈದ್ಗಾ ಇರುವ ೧೩.೩೭ ಎಕರೆ ಜಮೀನಿನ ಆ ಜಾಗದ ಒಡೆತನದ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು.
ಆದರೆ ೧೯೩೫ರಲ್ಲಿ ಅಲಹಾಬಾದ್ ಹೈಕೋರ್ಟ್ ಕೃಷ್ಣ ದಾಸ್ ಪರವಾಗಿ ತೀರ್ಪು ನೀಡಿತು. ೭ ಫೆಬ್ರವರಿ ೧೯೪೪ರಲ್ಲಿ ರಾಜಕಾರಣಿ ಮತ್ತು ಶಿಕ್ಷಣ ತಜ್ಞ ಮದನ್ ಮೋಹನ್ ಮಾಳವೀಯ ಅವರು ಕೈಗಾರಿಕೋದ್ಯಮಿ ಜುಗಲ್ ಕಿಶೋರ್ ಬಿರ್ಲಾ ಅವರ ಒಟ್ಟಾಗಿ ಸೇರಿ ೧೩ ಸಾವಿರ ರು. ಗಳಿಗೆ ಕೃಷ್ಣ ದಾಸ್ ಅವರಿಂದ ಆ ಭೂಮಿಯನ್ನು ಖರೀದಿಸಿದರು. ನಂತರ ಮಾಳವೀಯರ ಮರಣದ ಬಳಿಕ ಜುಗಲ್ ಕಿಶೋರ್ ಬಿರ್ಲಾ ಅವರು ಮಂದಿರ ನಿರ್ಮಾಣಕ್ಕಾಗಿ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಎಂಬ ಹೆಸರಿನ ಟ್ರಸ್ಟ್ ಅನ್ನು ರಚಿಸಿದರು.
ಅದು ೨೧ ಫೆಬ್ರವರಿ ೧೯೫೧ ರಂದು ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನವಾಗಿ ನೋಂದಾಯಿಸಲ್ಪಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ಮಸೀದಿ ಬಿಟ್ಟು ಪಕ್ಕದ ಸ್ಥಳದಲ್ಲಿ ಮಂದಿರ ನಿರ್ಮಾಣ ಕಾರ್ಯ ೧೯೫೩ರಲ್ಲಿ ಭೂಮಿಯನ್ನು ನೆಲಸಮಗೊಳಿಸುವುದರೊಂದಿಗೆ ಪ್ರಾರಂಭವಾಗಿ ಫೆಬ್ರವರಿ ೧೯೮೨ರಲ್ಲಿ ಪೂರ್ಣಗೊಂಡಿತು. ಮೂಲ ದೇವಾಲಯದ ಸಭಾ ಮಂಟಪ ಮೇಲೆ ಶಾಹಿ ಈದ್ಗಾವನ್ನು ನಿರ್ಮಿಸಲಾಗಿದೆ. ಶ್ರೀ ಕೃಷ್ಣನು ಜನಿಸಿದನೆಂದು ನಂಬಲಾದ ಸೆರೆಮ ನೆಯ ಸ್ಥಳ ಅದೆಂದು ಪರಿಗಣಿಸ ಲಾಗಿದೆ. ೧೯೯೨ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಮನೋಹರ್ ಲಾಲ್ ಶರ್ಮಾ ಎಂಬವರು ೧೯೬೮ರ ಕಾಂಗ್ರೆಸ್ ನಾಯಕರು ಮಾಡಿದಂತ ಒಪ್ಪಂದವನ್ನು ಪ್ರಶ್ನಿಸಿ ಮಥುರಾ ಜಿಲ್ಲಾ ನ್ಯಾಯಾಲಯ ದಲ್ಲಿ ಅರ್ಜಿ ಸಲ್ಲಿಸಿದರು. ಆದರೆ ಪೂಜಾಸ್ಥಳಗಳ ವಿಶೇಷ ನಿಬಂಧನೆ
ಕಾಯಿದೆ ೧೯೯೧ ರ ಪ್ರಕಾರ ನ್ಯಾಯಾಲಯ ತೀರ್ಪುನೀಡಿ ಸೆಪ್ಟೆಂಬರ್ ೩೦, ೨೦೨೦ರಂದು ಮೇಲ್ಮನವಿಯನ್ನು ರದ್ದು ಗೊಳಿಸಿತು. ಬಳಿಕ ಅರ್ಜಿದಾರರು ಭಾರತದ ಸಂವಿಧಾನದ ೨೫ನೇ ವಿಧಿಯ ಅಡಿಯಲ್ಲಿ ತಮ್ಮ ಮೂಲಭೂತ ಧಾರ್ಮಿಕಹಕ್ಕುಗಳ ದೃಷ್ಟಿಯಿಂದ ದಾವೆಯನ್ನು ಸಲ್ಲಿಸಿದ ಮೇಲೆ ಮೇ ೨೦೨೨ರಲ್ಲಿ ಮಥುರಾ ಜಿಲ್ಲಾ ನ್ಯಾಯಾಲಯ ಪ್ರಕರಣವನ್ನು ನಿರ್ವಹಿಸಬಹುದು ಎಂದು ತೀರ್ಪು ನೀಡಿತು.
ಅದರ ನಂತರ ಗುರುವಾರ ಅಲಹಾಬಾದ್ ಹೈಕೋರ್ಟ್ ಶ್ರೀ ಕೃಷ್ಣ ಜನ್ಮಭೂಮಿಯ ಸಂಪೂರ್ಣ ಸರ್ವೇಗೆ ಅನುಮತಿ ನೀಡಿತು.