ಅಭಿಮತ
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@gmail.com
ಸಮಾಜದಲ್ಲಿ ಕೆಲ ಸೂಕ್ಷ್ಮ ವಿಚಾರಗಳಿರುತ್ತವೆ. ಅದರ ತಂಟೆಗೆ ಸಂಭಾವಿತ ರಾಜಕಾರಣಿಗಳು ಹೋಗಬಾರದು. ಯೋಧರು, ವಸ್ತುನಿಷ್ಠ ಪತ್ರಕರ್ತರು, ಆರ್‌ಎಸ್ಸೆಸ್‌ನಂಥ ಸಂಸ್ಥೆಗಳು ಮತ್ತು ಹೆಣ್ಣುಮಕ್ಕಳು ಈ ವ್ಯಾಪ್ತಿಗೆ ಬರುತ್ತಾರೆ. ದೇವೇಗೌಡರಂಥ ಮುತ್ಸದ್ದಿ ಮಗನಾಗಿ ನೀವಿದನ್ನು ನೆನಪಿಸಿಕೊಳ್ಳಿ.
ನೋಡಿ, ಮೊನ್ನೆ ಮೊನ್ನೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಎಂಥ ಪ್ರಾಮಾಣಿಕ ಮಾತನ್ನಾಡಿದ್ದಾರೆ- ‘ನಾಚಿಕೆಯಾಗಬೇಕು ನಮಗೆಲ್ಲ. ಕೇವಲ ಒಂದುಲಕ್ಷ ಎರಡುಲಕ್ಷ ದಾನ ಮಾಡಿದ್ದನ್ನೇ ಪ್ರಚಾರ ಮಾಡಿಕೊಂಡು ಊರಿಗೆಲ್ಲ ತೋರಿಸಿಕೊಳ್ಳುತ್ತೇವೆ. ಆ ಪುಣ್ಯಾತ್ಮ ಪುನೀತ್ ರಾಜ್ ಕುಮಾರ್ ಎಷ್ಟೆ ದಾನವನ್ನು ಬಲಗೈಲಿ ಕೊಟ್ಟು ಎಡಗೈಗೆ ಗೊತ್ತಾಗದಂತೆ ಮಾಡಿದ್ದಾರೆ.
ಇದೇ ನಿಜವಾದ ದಾನ’ ಎಂದಿದ್ದಾರೆ. ಪುನೀತರಿಂದ ಯಾವುದೇ ರೀತಿಯಲ್ಲಿ ಸಹಾಯ ಪಡೆಯದ ಜನರು ಎಲ್ಲ ಕೆಲಸವನ್ನು ಬಿಟ್ಟು ಪಾರ್ಥಿವ ಶರೀರ ನೋಡಿ ಕಣ್ಣೀರು ಸುರಿಸಿ ಹೋದರ, ಅವರು ಬಿಟ್ಟು ಹೋದ ಚಪ್ಪಲಿಗಳ ರಾಶಿಯೇ ಒಂದು ಲಾರಿ ತುಂಬು ವಷ್ಟಿತ್ತು. ಇನ್ನು ಅವರ ಸಮಾಧಿ ಬಳಿಯಂತೂ ಸಧ್ಯಕ್ಕೆ ನಿಲ್ಲದ ಜನಜಾತ್ರೆಯಾಗಿದೆ. ಇದೇ ಅಲ್ಲವೇ ಸಾರ್ಥಕ ಬದುಕು ಎಂಬುವುದು. ಸರಿಯಾಗಿ ಹೇಳಬೇಕೆಂದರೆ ಕುಮಾರ ಸ್ವಾಮಿಯವರಿಗೂ ಅಂಥ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುವ ಅವಕಾಶ ವಿದೆ. ಮಣ್ಣಿನಮಗ ಎನಿಸಿದ್ದೀರಿ, ಬಡವರ ಬಂಧು, ರೈತರ ಬಂಧು ಎಂದೆ ಕರೆಸಿಕೊಂಡಿದ್ದೀರಿ.
ಕೆಲವರಿಗೆ ತಿಳಿಯುವಷ್ಟು ದಾನಧರ್ಮಗಳನ್ನು ಖಂಡಿತಾ ನೀವು ಮಾಡಿರುತ್ತೀರಿ. ಎಲ್ಲಕ್ಕಿಂತ ಮಿಗಿಲಾಗಿ ರಾಜಕೀಯದ ಅನೇಕ ನಾಯಕರಿಗೆ ನೆರವಾಗಿದ್ದೀರಿ. ಆದರೆ ಅದನ್ನೆಲ್ಲ ಬಟಾಬಯಲು ವೇದಿಕೆಗಳಲ್ಲಿ ಬಾಯಿಗೆ ಬಂದಂತೆ ನಾನುಕೊಟ್ಟೆ ನಾನು ಮಾಡಿದೆ ನನ್ನಿಂದಲೇ ಇವನು ಎಂದೆಲ್ಲ ಹೇಳಿಕೊಳ್ಳುವುದಿದೆಯಲ್ಲ ಅದು ನಿಜಕ್ಕೂ ಮಾಡಿದ ದಾನ, ಸಹಾಯ, ತೋರಿದ ವಿಶ್ವಾಸ ಎಲ್ಲವನ್ನೂ ಕರಗಿಸಿಬಿಡುತ್ತದೆ.
ಕುಮಾರಸ್ವಾಮಿಯವರೇ, ಎಲ್ಲರನ್ನೂ ಬ್ರದರ್ ಎಂದೇ ಸಂಬೋಧಿಸಿ ಆತ್ಮೀಯತೆ ಮೆರೆಯುವ ನಿಮ್ಮ ಹೃದಯವಂತಿಕೆ ಪ್ರಶ್ನಾತೀತ. ಒಬ್ಬ ಸಾಮಾನ್ಯ ಒಕ್ಕಲಿಗತನದಲ್ಲಿರುವ ನೈಜ ಗ್ರಾಮೀಣತೆಯ ಭಾವನಾತ್ಮಕ ಸಂವೇದನೆ ನಿಮ್ಮಲ್ಲಿದೆ. ಹೆಂಗರಳಿ ನಂಥ ಪ್ರೀತಿ ಮಮಕಾರವೂ ಇದೆ. ಆದರೆ ಅಷ್ಟೇ ವೇಗವಾದ ಉದ್ವೇಗ ಸಿಟ್ಟು ಹಗೆತನ ನಿಮಗಾಗದವರನ್ನು ಜರಿಯುವ
ದ್ವೇಷಿಸುವ ಗುಣಗಳೂ ಹೇರಳವಾಗಿದ್ದು ಅದೇ ನಿಮ್ಮ ಪಾಲಿನ ಶತ್ರುವಾಗಿದೆ. ದೇವೇಗೌಡರಂಥ ಮುತ್ಸದ್ದಿಯ ಮಗನಾಗಿರುವ ನಿಮಗೆ ಹೇಳಬೇಕಾಗಿಲ್ಲ. ಒಬ್ಬ ರಾಜಕಾರಣಿಗೆ ಇರಬೇಕಾದ ಮೊದಲ ಗುಣವೆಂದರೆ ತಮ್ಮನ್ನು ಜರಿಯುವವರನ್ನೂ ಪ್ರೀತಿಸು ವುದು. ಮತ್ತು ಸಮಾಜದಲ್ಲಿ ಕೆಲವೊಂದು ವಿಚಾರಗಳಿರುತ್ತದೆ ಅದರ ತಂಟೆಗೆ ಸಂಭಾವಿತ ರಾಜಕಾರಣಿಗಳು ಹೋಗಬಾರದು.
ಯೋಧರು, ವಸ್ತುನಿಷ್ಠ ಪತ್ರಕರ್ತರು, ಆರ್‌ಎಸ್ಸೆಸ್ ನಂಥ ಸಂಸ್ಥೆಗಳು ಮತ್ತು ಹೆಣ್ಣು ಮಕ್ಕಳು…. ನೋಡಿ, ನೀವು ಮೊದಲಿಗೆ ಅಂದು ಹೊಟ್ಟೆಪಾಡಿಗಾಗಿ ಸೈನ್ಯ ಸೇರುತ್ತಾರೆ ಎಂದು ವಿವೇಕರಹಿತ ಹೇಳಿಕೆ ನೀಡುತ್ತೀರಿ. ಯೋಧರು ಭಯೋತ್ಪಾದಕರ ಹೆಣ
ಉರುಳಿಸಿದಾಗ ಭಾರತೀಯರು ಸಂಭ್ರಮಿಸಿದರೆ ಇಲ್ಲಿನ ಮುಸಲ್ಮಾನರಿಗೆ ನೋವಾಗುತ್ತದೆ ಎಂದಿರಿ, ಅಳಲು ತೋಡಿಕೊಳ್ಳಲು ಬಂದ ಹೆಣ್ಣು ಮಗಳಿಗೆ ಎಲ್ಲಿ ಮಲಗಿದ್ದೀಯಮ್ಮಾ ಎಂದು ಲೇವಡಿ ಮಾಡಿದಿರಿ, ಮೊನ್ನೆ ಮುಖ್ಯಮಂತ್ರಿಯಾಗಿದ್ದಾಗ ಕಷ್ಟ ಹೇಳಿಕೊಳ್ಳಲು ಬಂದ ಕಾರ್ಮಿಕರಿಗೆ ‘ಮೋದಿಗೆ ಓಟು ಹಾಕಿ ಸಮಸ್ಯೆಗೆ ನನ್ನ ಹತ್ತಿರ ಏಕೆ ಬರುತ್ತೀರಿ’ ಎಂದು ಗದರಿದಿರಿ.
ಇನ್ನು ನಿಮ್ಮ ಬಳಿಯೂ ಸುದ್ದಿವಾಹಿನಿಯೊಂದು ಇದೆ. ಹಾಗಂತ ಮಾಲೀಕರೆಲ್ಲರೂ ಪತ್ರಕರ್ತರಾಗಲು ಸಾಧ್ಯವಿಲ್ಲ. ಸುದ್ದಿ ವಾಹಿನಿಯ ಮಾಲೀಕನಾದ ಮಾತ್ರಕ್ಕೆ ಮತ್ತೊಬ್ಬ ಪತ್ರಕರ್ತರ ವಾಹಿನಿಯನ್ನು ನೀವು ಅಸಹ್ಯವಾಗಿ ಬಯ್ದು ಮೈಕ್ ‘ಕಿತ್ತಾಕಿ’ ಬರುವುದು, ಪ್ರಾಮಾಣಿಕವಾಗಿ ವರದಿ ಬರೆದ ಪತ್ರಕರ್ತರ ಮೇಲೆ ಹಗೆಸಾಧಿಸುವುದು, ದ್ವೇಷಿಸುವುದು ನಿಮ್ಮಂಥವರಿಗೆ ಭೂಷಣ ವಲ್ಲ.
ಮೊನ್ನೆ ಆರೆಸ್ಸೆಸ್ ಬಗ್ಗೆ ಆಡಿದ ಮಾತುಗಳಂತೂ ಜನ ಕುಮಾರಸ್ವಾಮಿಗೆ ಏನಾಗಿದೆ ಎಂದು ಆಶ್ಚರ್ಯಪಟ್ಟಿದ್ದರು. ಆರೆಸ್ಸೆಸ್ ಅಂದರೆ ಏನೆಂದು ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಕೇಳಿದರೆ ಸಾಕಿತ್ತು. ಇದೆ ನಿಮ್ಮ ಇಮೇಜನ್ನು ಹಾಳು ಮಾಡಿತೇ ಹೊರತು, ಆರೆಸ್ಸೆಸ್‌ಗಂತೂ ಒಳ್ಳೆಯ ಮೈಲೇಜ್ ದೊರಕಿಸಿಕೊಟ್ಟಿತು. ಇನ್ನು ಅಲ್ಪಸಂಖ್ಯಾತರನ್ನು ನೀವು ಕುರಿಗಳ ಮಂದೆಯಂತೆ ಭಾವಿಸುವುದು. ‘ಹೇಯ, ಟುರ್ರರ್ರ್’ ಎಂದು ಒಂದು ಕಡೆ ಕಡ್ಡಿ ಬೀಸಿದ ಕೂಡಲೇ ಮುಸಲ್ಮಾನರೆಲ್ಲರೂ ತಮ್ಮ ಪಕ್ಷದ ಕಡೆಗೆ ಸಾಗಿಬಿಡುತ್ತಾರೆ ಎಂದು ಏಕೆ ಭಾವಿಸುತ್ತೀರಿ.
ಮುಸಲ್ಮಾನರನ್ನು ಸುಮ್ಮನೇ ಬಿಟ್ಟುಬಿಡಿ, ಅವರಿಗೂ ಎಲ್ಲರ ಯೋಗ್ಯತೆಯನ್ನು ಅಳೆಯುವ ಜ್ಞಾನವಿದೆ. ‘ನೋಡ್ರಪ್ಪ, ನಮಗೆ ಮತನೀಡಿ ನಾವು ನಿಮ್ಮ ಕೈ ಬಿಡುವುದಿಲ್ಲ’ ಎಂದರಷ್ಟೇ ಸಾಕು. ಅದನ್ನು ಬಿಟ್ಟು ನೀವು ಇಲ್ಲಿ ಇವರಿಗೆ ಮತಹಾಕಿ, ಅಲ್ಲಿ
ಅವರಿಗೆ ಮತಹಾಕಿ ಎಂದು ಹೇಳಿದಿರಲ್ಲ, ಸಿಂದಗಿ ಮತ್ತು ಹಾನಗಲ್‌ನಲ್ಲಿ ನೀವು ಗಳಿಸಿದ ಮುಸಲ್ಮಾನರ ಮತಗಳೆಷ್ಟು? ಇಂಥದ್ದೇ ವರ್ತನೆಗಳನ್ನು ತೋರಿದ ನೀವು ಗಳಿಸಿಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚಾಯಿತಲ್ಲವೇ? ಎದೆಯ ಮೇಲೆ ಕೈ ಇರಿಸಿಕೊಂಡು ಹೇಳಿ ಕುಮಾರಸ್ವಾಮಿಗಳೇ!
ನಿಜವಲ್ಲವೇ? ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡಬೇಕು ನಮ್ಮ ಮಕ್ಕಳೂ ಒಳ್ಳೆಯ ರಾಜಕಾರಣಿಗಳಾಗಬೇಕು ಜನ ನಮ್ಮನ್ನು
ಪ್ರೀತಿಸಬೇಕು ಎಂದೆ ನಿಮಗೆ ಆಸೆಯಿರುವುದು ಸಹಜ. ಆದರೆ ನೀವು ಬುದ್ಧಿವಂತ ರಾಜಕಾರಣಿಗಿಂತ ಚಂಡಿ ಹಿಡಿದ ಪುಟ್ಟ
ಮರಿಗೌಡನಂತೆ ಆಕ್ರಮಣಕ್ಕಿಳಿಯುವುದಿದೆಯ ಅದೇ ನೋಡಿ ನಿಮ್ಮ ವ್ಯಕ್ತಿತ್ವಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಮಾಡುತ್ತಿದ್ದೆ. ಮಕ್ಕಳನ್ನು ರಾಜಕಾರಣಕ್ಕೆ ತರಲಿರುವ ನೀವು ಅವರಿಗೆ ಮೊದಲ ಮಾದರಿ ವ್ಯಕ್ತಿ ಎನಿಸಿಕೊಳ್ಳಬೇಕು.
ಮಾರ್ಗದರ್ಶಕರಾಗಿ ನಿಲ್ಲಬೇಕು. ಆದರೆ ಮೊನ್ನೆ ನೋಡಿ, ನೀವು ಆರೆಸ್ಸೆಸ್ ಅನ್ನು ನಿರಂತರವಾಗಿ ಟೀಕಿಸುತ್ತಿದ್ದರೆ ಅತ್ತ ನಿಖಿಲ್
ಆರೆಸ್ಸೆಸ್ ಜತೆ ಹೋಲಿಸಿಕೊಳ್ಳುವಷ್ಟು ನಾವು ದೊಡ್ಡವರಲ್ಲ, ಆರೆಸ್ಸೆಸ್ ನೂರುವರ್ಷದಷ್ಟು ದೊಡ್ಡ ಇತಿಹಾಸವಿರುವ ಸಂಸ್ಥೆ, ಅದನ್ನು ನಾವೆಲ್ಲ ಗೌರವಿಸುತ್ತೇವೆ ಎಂದರಲ್ಲ, ಆಗ ಜನರು ನಿಖಲ್ ತಿಳಿವಳಿಕೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ತಂದೆಗೆ ತಕ್ಕ ಮಗ ಎಂದು ಹೊಗಳುವ ಅವಕಾಶವನ್ನೇ ಹಾಳುಮಾಡಿಕೊಂಡಿದ್ದೀರಿ.
ನಿಜಕ್ಕೂ ನಿಖಿಲ್ ಇಂಥ ಪ್ರಾಮಾಣಿಕತೆ ನೇರವಂತಿಕೆಯನ್ನು ಬೆಳೆಸಿಕೊಂಡು ಹೋದರೆ ರಾಜಕಾರಣದಲ್ಲಿ ಅವರಿಗೆ ಖಂಡಿತಾ ಒಳ್ಳೆಯ ಭವಿಷ್ಯ ರೂಪುಗೊಳ್ಳುತ್ತದೆ. ಈ ವಿಚಾರದಲ್ಲಿ ನಿಮ್ಮನ್ನು ಪ್ರಶಂಸಿಸಲೇ ಬೇಕು ಒಳ್ಳೆಯ ಮಗನನ್ನು ಪಡೆದಿದ್ದೀರಿ ಮತ್ತು ಬೆಳೆಸಿದ್ದೀರಿ. ನೀವು ಮಾತ್ರ ಅದ್ಯಾಕೆ ಹೀಗೆ ಆಗಿದ್ದಿರೋ ತಿಳಿಯೊಲ್ತು. ಇನ್ನು, ನೀವು ನಿಮ್ಮ ಸಮಕಾಲೀನ ಡಿಕೆಶಿಯವರ ಜತೆಯಲ್ಲಿ ಪೈಪೋಟಿಗಿಳಿಯುವುದನ್ನು ಬಿಟ್ಟು, ನಿಮ್ಮ ಸಮುದಾಯದವರೇ ಆದ ಎಸ್.ಎಂ.ಕೃಷ್ಣ ಅವರತ್ತ ನೋಡಿ. ಎಂಥ ಜಂಟಲಮನ್ ರಾಜಕಾರಣಿ ಅವರು.
ಆಕ್ಸ್ ಫರ್ಡ್‌ನಲ್ಲಿ ಕಲಿತವರಾದರೂ ಈಗಲೂ ಅವರೇನಾದರು ಮನಸ್ಸು ಮಾಡಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ
ಜನ ಅವರನ್ನು ಗೆಲ್ಲಿಸಿಬಿಡುತ್ತಾರೆ. ಆ ಮಟ್ಟದ ಸಭ್ಯ ಸುಸಂಸ್ಕೃತ ರಾಜಕಾರಣಿಯಾಗಿದ್ದಾರೆ. ಹೀಗಿರುವಾಗ ಪಕ್ಕಾ ಲೋಕಲ್
ಆಗಿರುವ ನೀವು, ಕುಮಾರಣ್ಣ ಕುಮಾರಣ್ಣ ಎಂದು ನಿಮ್ಮ ಸುತ್ತ ಸುತ್ತುವರಿಯುವ ಜನಗಳಿರುವಾಗ ನಿಮಗೇಕೆ ಹೀಗೆ ಆಗುತ್ತಿದೆ. ‘ಹುಲಿ ಬಂದರೆ ಗಾಂಭೀರ್ಯ ಇರುತ್ತೆ, ಚಿರತೆ ಬಂದರೆ ವೇಗ ಇರುತ್ತೆ’ ಸರಿ. ಆದರೆ ‘ಅಜ್ಜಿ ಇಲ್ಲದ ಮನೆಯಿಲ್ಲ, ಮಜ್ಜಿಗೆ ಇರದ ಊಟವಿಲ್ಲ, ಕುಮಾರಣ್ಣ ಇರದ ರಾಜ್ಯವಿಲ್ಲ’ ಎಂದು ಹಿಗ್ಗಾಮಗ್ಗಾ ನಿಮ್ಮನ್ನು ರಾಕೆಟ್ ಹತ್ತಿಸುವ ಭ್ರಮೆಯಲ್ಲಿರುವ ಭಟ್ಟಂಗಿ ಗಳನ್ನು ಅಧಿಕಪ್ರಸಂಗಿಗಳನ್ನು ಮೊದಲು ದೂರವಿಡಿ.
ಇಂಥವರಿಂದಲೇ ದಿನೇದಿನೇ ನಿಮ್ಮ ಮತ್ತು ನಿಮ್ಮ ಪಕ್ಷದ ಇಮೇಜ್ ಕೆಳಗುಂದುತ್ತಿದೆಯೇ ಹೊರತು ಬೇರೇನೂ ಆಗುತ್ತಿಲ್ಲ. ಕುಮಾರಣ್ಣ ಎಂಬುದು ನಿಮ್ಮ ಕೂಗಳತೆಯಲ್ಲಿಂದ ಕೇಳಿಸುವುದಕ್ಕಿಂತ ರಾಜ್ಯದ ಮುಲೆಮೂಲೆಯಿಂದ ಕೇಳಿಬರಬೇಕು. ಅಂಥ ತಾಕತ್ತು ಬೇರೆಯವರಲಿಲ್ಲ ನಿಮ್ಮ ಇದೆ. ನೀವು ಏಕಾಂತದಲ್ಲಿ ಕೂತು ಯೋಚಿಸಿನೋಡಿ, ಮಾತೆತ್ತಿದರೆ ಅತಿಯಾಗಿ ಅಲ್ಪ ಸಂಖ್ಯಾ ತರನ್ನು ಓಲೈಸಿಕೊಳ್ಳಲು ನಿಲ್ಲುವ ನೀವು, ನಿಮ್ಮ ಪಕ್ಷದ ಮತ್ತು ನಿಮ್ಮ ಕುಟುಂಬದ ಮೂಲ ಮತದಾರರಾಗಿರುವ ಒಕ್ಕಲಿಗ ರಿಂದಲೇ ನೀವು ದೂರವಾಗುತ್ತಿದ್ದೀರಿ.
ಮೊದಲೆ ಊರಿಗೊಬ್ಬನೇ ಗೌಡ ಎಂಬಂತೆ ದೇವೇಗೌಡರೇ ಒಕ್ಕಲಿಗ ಸಮುದಾಯದ ಅಧಿಪತಿ ಎಂದು ನಂಬಿಕೊಂಡಿದ್ದರು. ಆದರೆ ಈಗ ನೀವು ಸಾಗುತ್ತಿರುವ ಮಾರ್ಗ ಹೇಗಾಗಿದೆ ಎಂದರೆ ಒಕ್ಕಲಿಗ ನಾಯಕ ಎಂಬ ಕವಚವನ್ನೂ ಕಳಚಿಕೊಳ್ಳುತ್ತಿದೀರ ಮಾತ್ರ ವಲ್ಲದೇ, ಇನ್ನಾವುದೇ ಜಾತಿಗೂ ಅಕ್ಕರೆಯ ವ್ಯಕ್ತಿಯಾಗಿ ಪರಿಗಣಿಸುವಂಥ ಚಹರೆಯನ್ನೂ ಬೆಳೆಸಿಕೊಂಡಿಲ್ಲ. ಅತ್ತ
ಸಿದ್ದರಾಮಯ್ಯರನ್ನು ನೋಡಿ ಲಿಂಗಾಯತ ಬ್ರಾಹ್ಮಣ ಕುರುಬರಲ್ಲದಿದ್ದರೂ ಅಲ್ಪಸಂಖ್ಯಾತರ ದಲಿತರ ನಾಯಕ ಎಂದಾದರು
ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ನೀವು ನಿಮ್ಮದೇ ಸಮುದಾಯದ ಭದ್ರಕೋಟೆಯಿಂದ ಹೊರಬಂದ ಬಾಹುಬಲಿಯಂತೆ ಆಗು ತ್ತಿದ್ದೀರಿ.
ಸಿದ್ದರಾಮಯ್ಯರನ್ನು ಬಿಡಿ, ಕುರುಬ ಸಮುದಾಯ ನಿಮ್ಮತ್ತ ತಿರುಗಿನೋಡುವಂತೆ ಏನಾದರು ಮಾಡಿದ್ದೀರ ಎಂದು ನೋಡಿದರೆ ಅಲ್ಲೂ ಶೂನ್ಯ. ಇನ್ನು ವೀರಶೈವ ಲಿಂಗಾಯಿತರ ಪಾತ್ರವಿಲ್ಲದೇ ರಾಜ್ಯದಲ್ಲಿ ಆಡಳಿತ ಹಿಡಿಯಲು ಸಾಧ್ಯವೇ ಇಲ್ಲ. ಹಾಗಂತ ಉತ್ತರ ಕರ್ನಾಟಕವೆಂಬುದು ನಿಮಗಂತೂ ದೂರದ ಬೆಟ್ಟವೇ ಸರಿ. ಇನ್ನು ದಲಿತರು ನೀವಂದುಕೊಂಡಂತೆ ಇಲ್ಲ ಬಿಡಿ. ಅವರಿಗೆ ಈಗಾಗಲೇ ದರಿದ್ರ ವೋಟ್ಬ್ಯಾಂಕ್ ಕುತಂತ್ರಗಳು ಅರಿವಾಗಿ ಬಹುಪಾಲು ಬಿಜೆಪಿಯನ್ನು ಪರೀಕ್ಷಿಸುವ ಹಾದಿಯಲ್ಲಿದ್ದಾರೆ.
ಇನ್ನು ಹಿಂದುಳಿದ ಇತರೆ ಜಾತಿಗಳಿಗೆ ಅವರದೇ ಅದ ನಾಯಕರು ತಲೆಯೆತ್ತಿದ್ದಾರೆ. ಕೊನೆಗೆ ನಿಮ್ಮ ಮನೆತನದ ಒಳಿತಿಗಾಗಿ ನಿಮ್ಮ ಕುಟುಂಬ ಕೈಗೊಳ್ಳುವ ವೈದಿಕ ಕಾರ್ಯಗಳನ್ನು ನಡೆಸುವ ಬ್ರಾಹ್ಮಣ ಸಮುದಾಯವನ್ನು ಎಂದಾದರು ನೀವು ಒಲಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿದ್ದೀರಾ ಎಂದು ನೋಡಿದರೆ ಅವರತ್ತ ತಿರುಗಿಯೂ ನೋಡುವುದಿಲ್ಲ.
ಆದರೆ ಮಂಡ್ಯ ರಾಮನಗರ ಚನ್ನಪಟ್ಟಣ ಹಾಸನ ನಾಲ್ಕು ಜಿಲ್ಲೆಗಳನ್ನೇ ರಾಜ್ಯ ಎಂದು ಭಾವಿಸಿಕೊಂಡು ಇಲ್ಲಿಯವರೆಗೂ
ಸಾಗಿ ಬಂದಿದ್ದೀರಿ. ಆದರೆ ಫಲಿತಾಂಶ ಮಾತ್ರ ದಿನೇದಿನೇ ಕೆಳಗುಂದುತ್ತಿದೆ ಹೊರತು ಬಲಿಷ್ಠಗೊಳ್ಳುವ ಲಕ್ಷಣಗಳೇ ಕಾಣದಂತೆ ಮಾಡಿದೆ ಮೊನ್ನೆ ನಡೆದ ಉಪಚುನಾವಣೆಯ ಅಂಕಿಅಂಶಗಳು. ಕುಮಾರಸ್ವಾಮಿಯವರೇ, ಈಗ ನೀವು ಮಾಡಬಹುದಾದ ಮತ್ತು ತರಬಹುದಾದ ಒಳ್ಳೆಯ ಬದಲಾವಣೆಯೆಂದರೆ, ನೀವು ನಿಮ್ಮ ನಿಖಿಲ್ ಮತ್ತು ಪ್ರಜ್ವಲ್ ಅವರನ್ನು ಸ್ವತಂತ್ರವಾಗಿ ಮುಂದೆ
ಬಿಡಿ. ಅವರ ಮೇಲೆ ನಿಮ್ಮ ರಾಜಕಾರಣದ ಪೂರ್ವಗ್ರಹವನ್ನು, ದಾರಿತಪ್ಪಿರುವ ಡೋಂಗಿ ಜಾತ್ಯತೀತತೆಯನ್ನು ಹೇರಬೇಡಿ. ಪಕ್ಷವನ್ನು ಬೆಳೆಸುವುದಕ್ಕಿಂತ ರಾಜ್ಯಕ್ಕೆ ಮತ್ತು ದೇಶಕ್ಕೆ ಪೂರಕವಾಗಿ, ಬ್ರಾಹ್ಮಣರಿಂದ ಬುಡಕಟ್ಟಿನ ಮಂದಿಯವರೆಗೂ, ಬೀದರ್ ನಿಂದ ಕೋಲಾರದವರೆಗೂ ಜನರ ಮನಸನ್ನು ತಲುಪುವಂತೆ ಜನಾನುರಾಗಿ ರಾಜಕಾರಣವನ್ನು ಮಾಡಲು ಹೇಳಿಕೊಡಿ. ನೀವು ಮತ್ತು ರೇವಣ್ಣ ಇಬ್ಬರೂ ಮಕ್ಕಳಿಗೆ ನೆರಳಾಗಿ ನಿಂತು ಸಹಕರಿಸಿ.
ಇನ್ನು ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಯ್ತು. ನಿಮ್ಮ ಆರೋಗ್ಯದತ್ತ ಹೆಚ್ಚು ಗಮನ ಕೊಡಿ. ಎಲ್ಲರನ್ನೂ ಪ್ರೀತಿಸಿ. ಎಲ್ಲಕ್ಕಿಂತ ಮಿಗಿಲಾಗಿ ದೇಶದ ಸಾರ್ವಭೌಮತೆಯ ಪರವಾಗಿ ನಿಲ್ಲಿ. ದೇಶದ್ರೋಹಿಗಳನ್ನು ಮುಲಾಜಿಲ್ಲದೇ ಖಂಡಿಸಿ, ಯಾವುದೇ ಜಾತಿಗೆ ಬ್ರಾಂಡ್ ಆಗಬೇಡಿ, ಯಾವುದೇ ಕೋಮಿಗೆ ಬ್ಯಾಂಡ್ ಬಾರಿಸಬೇಡಿ.
ದಳ ಎಂಬುದು ಉದುರಿಹೋಗುವ ಹೂವಿನ ದಳಗಳಾಗದೆ, ನಾಡಿನ ಏಳಿಗೆಗಾಗಿ ಕಟಿಬದ್ಧವಾಗಿ ನಿಲ್ಲುವ ಸೈದ್ಧಾಂತಿಕ ದಳವಾಗಿ ನಿಲ್ಲಲಿ. ಮೊನ್ನೆ ನಿಮ್ಮ ಪಕ್ಷದ ಹೀನಾಯ ಸ್ಥಿತಿಯನ್ನು ಮತ್ತು ನಿಮ್ಮ ಪರಿಸ್ಥಿತಿಯನ್ನು ಕಂಡು ಇಷ್ಟೆಲ್ಲ ಹೇಳಬೇಕೆನಿಸಿತು. ಸರಿ ಎನಿಸಿದರೆ ತಲೆಗೆ ಹಾಕಿಕೊಳ್ಳಿ ಇಲ್ಲದಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ! ಒಟ್ಟಿನಲ್ಲಿ ಇನ್ನಾದರೂ ಬದಲಾಗಿ ಕುಮಾರಸ್ವಾಮಿಯವರೇ!