Thursday, 12th December 2024

ಕೋಣನನ್ನು ಕುರಿತು ಕಾವ್ಯ ತಟ್ಟಿದ ಕುಟ್ಟಿಕವಿಯ ಕಥೆಯಿದು

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಗೋವಿನ ಬಗೆಗಾದರೆ- ಆಕಳು ಅಥವಾ ಎತ್ತು ಲಿಂಗಭೇದವಿಲ್ಲದೆ- ನಮ್ಮಲ್ಲಿ ಪೂಜ್ಯಭಾವವಿದೆ. ಪುರಾಣ ಕಥೆಗಳಲ್ಲಿ ಅವುಗಳ ಉಲ್ಲೇಖವಿದೆ. ಎಮ್ಮೆ ಕೋಣಗಳಿಗೆ
ಆ ಭಾಗ್ಯವಿಲ್ಲ. ಇದ್ದರೂ ಯಮನ ವಾಹನ ಎಂದು ಒಂಥರದ ಅಂಜಿಕೆ. ಅಂಥಾದ್ರಲ್ಲಿ ‘ಮಹಿಷ ಶತಕ’ದಲ್ಲಿ ಕೋಣನ ಗುಣಗಾನ ಮಾಡುವ ನೂರು ಶ್ಲೋಕಗಳಿವೆ ಯೆಂದರೆ ಅಚ್ಚರಿಯ ವಿಷಯವೇ.

ಅಣ್ಣಾವ್ರು ಸಂಪತ್ತಿಗೆ ಸವಾಲ್ ಚಿತ್ರಕ್ಕಾಗಿ ಅಭಿನಯಿಸಿ ಹಾಡಿದ ಎಮ್ಮೆ ಹಾಡು ‘ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ ಎಮ್ಮೆ ನಿನಗೆ ಸಾಟಿಯಿಲ್ಲ…’ ನಮಗೆಲ್ಲ ಅಚ್ಚುಮೆಚ್ಚಿನದು. ಅತಿಪರಿಚಿತ ಕೂಡ. ಅದೇ ಕಾರಣಕ್ಕೆ ಅತಿಪರಿಚಯಾದವe ಎಂಬ ಮಾತಿನಂತೆ ಆ ಹಾಡಿನಲ್ಲೇನಿದೆ ವಿಶೇಷ ಎಂದು ಒಂದು ಬಗೆಯ ತಾತ್ಸಾರ ಕೂಡ.

ಎಷ್ಟೆಂದರೂ ಅದೊಂದು ಚಿತ್ರಗೀತೆ. ‘ಬಿಸಿಲುಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆ…’, ‘ಗುಣದಲ್ಲಿ ನೀ ಉಪಕಾರಿ ಮಾನವಗೆ ನೀ ಸಹಕಾರಿ… ಕಸವನ್ನೇ ತಿಂದರೂ ಕೊನೆಗೆ ಹಾಲನ್ನೇ ನೀಡುವೆ ನಮಗೆ…’ ಎಂದು ಕೆಲವೇಕೆಲವು ಸಾಲುಗಳಲ್ಲಿ ಸರಳ ಶಬ್ದಗಳಲ್ಲಿ ಎಮ್ಮೆಯ ಗುಣಗಾನ ಅಷ್ಟೇ. ಆದರೆ ಈಗ ಇದನ್ನು ನೋಡಿ: ಕೋಣನನ್ನು ಕುರಿತು ಒಂದು ಘನಕಾವ್ಯ. ಅದೂ ಸಂಸ್ಕೃತ ಶ್ಲೋಕಗಳ ರೂಪದಲ್ಲಿ. ಒಂದೆರಡಲ್ಲ ಬರೋಬ್ಬರಿ ನೂರು ಶ್ಲೋಕ ಗಳು. ಆದ್ದರಿಂದ ‘ಮಹಿಷ ಶತಕ’ ಎಂದು ಹೆಸರು. ಶ್ಲೇಷಾರ್ಥ ಚಂದ್ರಿಕಾ ಎಂದು ಅದರ ವ್ಯಾಖ್ಯಾನ. ಬರೆದ ಕವಿಗೆ ಶ್ಲೇಷಕವಿ ಸಾರ್ವಭೌಮ ಎಂಬ ಬಿರುದು… ಇದನ್ನೆಲ್ಲ ಕೇಳಿದರೆ ಆಶ್ಚರ್ಯವಾಗುತ್ತದೆ. ಹೀಗೂ ಉಂಟೇ! ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ.

ಆಶ್ಚರ್ಯಕ್ಕೆ ಇನ್ನೊಂದು ಕಾರಣ ವೆಂದರೆ ಗೋವಿನ ಬಗೆಗಾದರೆ- ಆಕಳು ಅಥವಾ ಎತ್ತು ಲಿಂಗ ಭೇದವಿಲ್ಲದೆ- ನಮ್ಮಲ್ಲಿ ಪೂಜ್ಯಭಾವವಿದೆ. ಪುರಾಣಕಥೆಗಳಲ್ಲಿ ಅವುಗಳ ಉಲ್ಲೇಖವಿದೆ. ಎಮ್ಮೆ ಕೋಣಗಳಿಗೆ ಆ ಭಾಗ್ಯವಿಲ್ಲ. ಇದ್ದರೂ ಯಮನ ವಾಹನ ಎಂದು ಒಂಥರದ ಅಂಜಿಕೆ. ಅಂಥಾ ದ್ರಲ್ಲಿ ‘ಮಹಿಷ ಶತಕ’ದಲ್ಲಿ ಕೋಣನ ಗುಣಗಾನ ಮಾಡುವ ನೂರು ಶ್ಲೋಕಗಳಿವೆಯೆಂದರೆ ಅಚ್ಚರಿಯ ವಿಷಯವೇ.

ಸಾಹಿತ್ಯಪ್ರಕಾರದಲ್ಲಿ ಶತಕ ಎಂದೊಡನೆ ನಮಗೆ ಮೊದಲು ನೆನಪಾಗುವುದು, ಕನ್ನಡ ಸಂದರ್ಭದಲ್ಲಾದರೆ ಸೋಮೇಶ್ವರ ಶತಕ; ಸಂಸ್ಕೃತ ಸಂದರ್ಭದಲ್ಲಾದರೆ ಭರ್ತೃಹರಿಯ ನೀತಿ ಶತಕ, ಶೃಂಗಾರ ಶತಕ, ವೈರಾಗ್ಯ ಶತಕ. ತಲಾ ನೂರು ಸುಭಾಷಿತಗಳ ಮೂರು ಕಟ್ಟುಗಳು. ಅವೇ ಅತ್ಯಂತ ಪುರಾತನವಾದುವು ಕೂಡ. ಆಮೇಲೆ ಕೆಲವು ಕಡಿಮೆ ಪ್ರಸಿದ್ಧಿಯವು ಇವೆ: ವಿವಿಧ ಶೃಂಗಾರ ಸನ್ನಿವೇಶಗಳನ್ನು ಚಿತ್ರಿಸುವ ಅಮರು ಶತಕ, ಬಾಣನ ಚಂಡೀ ಶತಕ, ಮಯೂರನ ಸೂರ್ಯ ಶತಕ, ನೀತಿಬೋಧಕವಾದ ಭಲ್ಲಟ ಶತಕ, ವೇದಾಂತ ದೇಶಿಕರ ದಯಾ ಶತಕ ಇತ್ಯಾದಿ.

ಆಧುನಿಕ ಕಾಲದಲ್ಲಿ ಅಂದರೆ 17ನೆಯ ಶತಮಾನದಿಂದೀಚೆಗೆ ರಚಿತವಾದ ಕೆಲವು ವಿಚಿತ್ರ ರೀತಿಯವೂ ಇವೆ: ಪಲಾಂಡು(ಈರುಳ್ಳಿ) ಶತಕ, ಕಾಕ(ಕಾಗೆ) ಶತಕ, ಕಾನನ(ಅರಣ್ಯ) ಶತಕ, ಅಧರ(ತುಟಿ) ಶತಕ, ರೋಮ ಶತಕ, ಕುಚ ಶತಕ, ಕಲಿವಿಡಂಬನ ಶತಕ, ಯಮ ಪ್ರಣಾಮ ಶತಕ (ಕಂಸನ ಬಾಧೆಯನ್ನು ತಾಳಲಾರದೆ ಪ್ರಜೆಗಳು ಯಮನನ್ನು ಪ್ರಾರ್ಥಿಸುವುದು ಇದರ ವಸ್ತು), ಕೊನೆಗೆ ಕಾಫೀ ಶತಕ ಅಂತೊಂದು ಕೂಡ ಇದೆಯಂತೆ. ‘ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ| ತಾನಿ ಸರ್ವಾಣಿ ನಶ್ಯನ್ತಿ ಕಾಫೀಪಾನಾತ್ಪದೇ ಪದೇ|’ ಅಂತ ಅದರಲ್ಲೊಂದು ಶ್ಲೋಕ. ಮಹಿಷ ಶತಕ ಸಹ ಹೀಗೆಯೇ. ವಿಡಂಬನಾತ್ಮಕವಾದ ಹಾಸ್ಯರಸಪ್ರಧಾನ ಕಾವ್ಯ. ಇದನ್ನು ಬರೆದ ಕವಿಯ ಹೆಸರು ವಾಂಛೇಶ್ವರ. ಸರಿಸುಮಾರು 17ನೆಯ ಶತಮಾನದವನು. ಆತನಿಗೆ ಕುಟ್ಟಿಕವಿ ಎಂಬ ಹೆಸರು
ಬಂದದ್ದೂ ಒಂದು ಸ್ವಾರಸ್ಯಕರ ಕಥೆ.

ತಂಜಾವೂರಿನ ಮೂರು ಜನ ನಾಯಕ ರಾಜರ ಕಾಲದಲ್ಲಿ ಸುಮಾರು 60 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿದ್ದ, ಪ್ರಸಿದ್ಧ ವಿದ್ವಾಂಸರೂ ಮಹಾಕವಿಯೂ ಆಗಿದ್ದ, ಗೋವಿಂದ ದೀಕ್ಷಿತರ ಮರಿಮಗ (ಮಗಳ ಮಗಳ ಮಗ) ವಾಂಛೇಶ್ವರ. ತಂಜಾವೂರಿನಲ್ಲಿ ಆಳಿಕೆ ನಡೆಸುತ್ತಿದ್ದ ಭೋಸ್ಲೆ ಮನೆತನದ ಶಹಾಜೀರಾಜ 1691ರಲ್ಲಿ ಕಾವೇರಿ ತೀರದಲ್ಲಿ ಅಗ್ರಹಾರವನ್ನು ಕಟ್ಟಿಸಿ ಅಲ್ಲಿ 47 ಸರ್ವಮಾನ್ಯ ವೃತ್ತಿಗಳನ್ನು ಕಲ್ಪಿಸಿ ವಾಂಛೇಶ್ವರ ಕವಿಯ ತಂದೆಗೂ ಒಂದು ವೃತ್ತಿಯನ್ನು ಕೊಟ್ಟನು. ಜತೆಗೇ ಶಹಾಜೀರಾಜನ ಆಸ್ಥಾನದಲ್ಲಿ ಮಂತ್ರಿಪದವಿ ಕೂಡ.

ಒಮ್ಮೆ ಶಹಾಜಿಯು ಮಧುರೈ ಮೀನಾಕ್ಷೀ ದೇವಿಯ ದರ್ಶನಕ್ಕೆ ಹೋಗಿದ್ದಾಗ ವಾಂಛೇಶ್ವರನೂ ತನ್ನ ತಂದೆಯೊಡನೆ ಅಲ್ಲಿಗೆ ಹೋಗಿದ್ದನು. ಸ್ವತಃ ಕವಿಯೂ ವಿದ್ವಾಂಸ ನೂ ಆಗಿದ್ದ ಶಹಾಜೀರಾಜನು ದೇವಿಯನ್ನು ನೋಡಿ ‘ಪುರಿಮ ಧುರಂ ಗಿರಿಮಧುರಂ ಗರಿಮಧುರಂಧರ ನಿತಂಬ ಭಾರಾಢ್ಯಮ್| ಸ್ಥೂಲಕುಚಂ ನೀಲಕಚಂ ಬಾಲಕಚಂದ್ರಾಂಕಿತಂ ತೇಜಃ||’ ಎಂದು ದೇವಿಯ ಪ್ರಾರ್ಥನಾಪದ್ಯ ರಚಿಸಿ ಹಾಡಿದನು.

ಇನ್ನೂ ಬಾಲಕನಾಗಿದ್ದ ವಾಂಛೇಶ್ವರನು ಅದನ್ನು ಕೇಳಿ ಒಡನೆಯೇ ತಾನೂ ಒಂದು ಪದ್ಯ ರಚಿಸಿದನು: ‘ಹೃದಿ ತರಸಾ ವಿದಿತರಸಾ ತದಿತರಸಾಹಿತ್ಯ
ವಾಙ್ನಮೇ ಲಗತಿ| ಕವಿಲೋಕೇ ನವಿಲೋಕೇ ಭುವಿ ಲೋಕೇಶಸ್ಯ ಶಾಹಜೇರುಪಮಾಮ್||’ (ಅರ್ಥ: ಇಷ್ಟೊಂದು ರಸಭಾವ ತುಂಬಿದ ಪದ್ಯದ ಮುಂದೆ ಬೇರೇನೂ ನನಗೆ ತೋಚುತ್ತಿಲ್ಲ. ಕವಿತ್ವ ದಲ್ಲಿ ಶಹಾಜೀರಾಜನನ್ನು ಮೀರಿಸುವ ವ್ಯಕ್ತಿಯೂ ಕಾಣುತ್ತಿಲ್ಲ) ಎಂದು. ಚೋಟುದ್ದದ ಬಾಲಕ ಇಷ್ಟು ಚಂದದ ಆಶುಕವಿತೆ
ರಚಿಸಿದ್ದನ್ನು ಕಂಡ ರಾಜ ವಿಸ್ಮಿತನಾದನಷ್ಟೇ ಅಲ್ಲ, ಅವನಿಗೆ ‘ಕುಟ್ಟಿ ಕವಿ’ ಎಂಬ ಉಪಾಧಿಯನ್ನಿತ್ತ. ಅಂತಹ ಕುಟ್ಟಿಕವಿ ಕೋಣನನ್ನು ಕುರಿತು ಕಾವ್ಯವನ್ನೇಕೆ ಬರೆದ? ಅದೂ ಒಂದು ಸ್ವಾರಸ್ಯಕರ ಕಥೆ.

ಶಹಾಜಿಯ ಕಿರಿಯ ತಮ್ಮ ತುಕೋಜಿಯ ಮರಣಾನಂತರ ತುಕೋಜಿಯ ಮಕ್ಕಳಲ್ಲಿ ರಾಜ್ಯದ ಉತ್ತರಾಧಿಕಾರಕ್ಕಾಗಿ ಜಗಳವಾಯಿತು. ನಾಲ್ಕು ವರ್ಷಗಳವರೆಗೆ ಅವರು ಸ್ವಲ್ಪಸ್ವಲ್ಪ ಕಾಲ ರಾಜ್ಯವಾಳಿದರು. ಕೊನೆಗೆ 1739ರಲ್ಲಿ ತುಕೋಜಿಯ ಉಪಪತ್ನಿಯ ಮಗನಾದ ಪ್ರತಾಪಸಿಂಹನು ರಾಜನಾದನು. ಈ ಪ್ರತಾಪ ಸಿಂಹನು ಚಿಕ್ಕವಯಸ್ಸಿನವನೂ ಅವಿಚಾರಿಯೂ ಆಗಿದ್ದುದರಿಂದ ದುಷ್ಟರು ಇವನ ಸ್ನೇಹಿತರಾಗಿ ಉನ್ನತಾಧಿಕಾರವನ್ನು ಪಡೆದು ಹಳೆಯ ಮಂತ್ರಿಗಳನ್ನೂ ವಿದ್ವಾಂಸರನ್ನೂ ಓಡಿಸಿ ಅವರ ಸ್ವತ್ತನ್ನೆಲ್ಲ ದೋಚಿ ದರು. ರಾಜದರ್ಶನವನ್ನು ಪಡೆದು ಅವನಿಗೆ ಸದ್ಬೋಧೆ ಮಾಡಲು ಸಾಧ್ಯವಾಗದಿದ್ದುದರಿಂದ, ಕಾಲಾನು ಕಾಲದಲ್ಲಿ ತನ್ನ ಕಾವ್ಯವು ರಾಜನನ್ನು ತಲುಪಿ ಅವನಿಗೆ ಒಳ್ಳೆಯ ಬುದ್ಧಿ ಬಂದೀತೆಂದು ಕುಟ್ಟಿಕವಿ ಯೋಚಿಸಿದನು. ಸಂಸ್ಕೃತದಲ್ಲಿ, ಮುಖ್ಯವಾಗಿ ಸುಭಾಷಿತಗಳಲ್ಲಿ ಒಂದು ಪ್ರಸಿದ್ಧ ರೀತಿಯಾದ ‘ಅನ್ಯೋಕ್ತಿ’ ರೀತಿಯಲ್ಲಿ (ಅಂದರೆ ಪ್ರಾಣಿ, ಪಕ್ಷಿ, ಅಥವಾ ಪ್ರಕೃತಿಯಲ್ಲಿನ ಯಾವುದೇ ವಸ್ತುವನ್ನುದ್ದೇಶಿಸಿ ಮಾತನಾಡುವುದು, ಆದರೆ ಉದ್ದೇಶವಿರುವುದು ಯಾರೋ ಒಬ್ಬ ಮನುಷ್ಯನಿಗೆ ಆ ಮಾತುಗಳು ನಾಟಬೇಕು ಎಂದು) ಕೋಣನ ಸ್ತುತಿಯ ಲೇಪ ಕೊಟ್ಟು ರಾಜಪರಿವಾರನಿಂದಾರೂಪವಾದ ‘ಮಹಿಷ ಶತಕ’ವನ್ನು ರಚಿಸಿದನು.

ರಾಜನನ್ನು ಹೊಗಳಿದಂತೆಯೂ ಇರಬೇಕು, ಅದೇವೇಳೆ ರಾಜನನ್ನು ಸುತ್ತುವರಿದಿದ್ದ ದುಷ್ಟರನ್ನು ಮಾತಿನಲ್ಲೇ ತಿವಿದಂತೆಯೂ ಇರಬೇಕು ಎಂಬ ಧ್ಯೇಯದಿಂದ ಕೋಣ ಕೇಂದ್ರೀಕೃತ ಶ್ಲೋಕಗಳನ್ನು ಕಟ್ಟುತ್ತ  ಹೋದನು. ‘ಶಹಾಜಿಯಂಥ ರಾಜರೂ ಆನಂದರಾಯಮುಖಿಯಂಥ ವಿದ್ವನ್ಮಂತ್ರಿಗಳೂ ಗತಿಸಿಹೋಗಿದ್ದಾರೆ. ವಿಷಬುದ್ಧಿಯುಳ್ಳ ದುಷ್ಟರು ರಾಜಸಭಾಸದರಾಗಿದ್ದಾರೆ. ಆದ್ದರಿಂದ ನಾನು ಪ್ರಪಂಚವನ್ನು ಕಾಪಾಡುವ ಕೃಷಿಗೆ ಶರಣು ಹೋಗುತ್ತೇನೆ. ಶ್ರೀಧರಾರ್ಯನಂಥ
ಮಹಾಪಂಡಿತ ವಿದ್ಯಾವಿಕ್ರಯ ಮಾಡುವ ವ್ಯಾಪಾರಿ ಆಗಬೇಕಾಯಿತು. ಷಡ್ದರ್ಶನೀ ವಲ್ಲಭನೆಂದು ಖ್ಯಾತನಾದ ಅಂಬು ದೀಕ್ಷಿತ ನಿಗೆ ಅನ್ನವೂ ಚಿನ್ನದಷ್ಟು ತುಟ್ಟಿಯಾಯಿತು. ಕುಟ್ಟಿಕವಿಯಾದತಾನು ದುಷ್ಟ ಶ್ರೀಮಂತರ ಮನೆಬಾಗಿಲಲ್ಲಿ ತೂಕಡಿಸುತ್ತಿರ ಬೇಕಾಯಿತು. ಇದೆಲ್ಲವೂ ಕೋಣರಾಜನ ಸೇವೆ ಮಾಡದೆ ಇದ್ದು ದರ ಫಲ. ಎಲೈ ಮಿತ್ರನೇ ವಿದ್ಯೆಗೆ ಇಲ್ಲಿ ಗೌರವವಿಲ್ಲದಿದ್ದರೆ ಗೌರವವಿರುವೆಡೆಗೆ ಹೋಗುವೆನೆಂದು ಜ್ವರದ ಬೀಡಾದ ಶ್ರೀರಂಗ ಪಟ್ಟಣಕ್ಕೆ ಹೋಗಬೇಡ. ಈ ಕೋಣರಾಜನನ್ನು ಬಿಟ್ಟುಹೋಗುವ ಸಾಹಸ ಮಾಡಿದರೆ ಲಕ್ಷ್ಮಿಯು ಇನ್ನೂ ದೂರದಲ್ಲಿರುವಾಗಲೇ ಯಮನ ಕೋಣನ ಕುತ್ತಿಗೆಯ ಘಂಟೆಯ ಸದ್ದು ಸಮೀಪಿಸಿ ರುತ್ತದೆ…’ ಅಂತೆಲ್ಲ ಸ್ವಗತದ ರೀತಿಯಲ್ಲಿ ಕೆಲವು ಆರಂಭಿಕ ಶ್ಲೋಕಗಳು.

ಅನಂತರ ‘ನನ್ನನ್ನು ಕಾಪಾಡುವುದರಿಂದ ನನ್ನ ಪ್ರಭುವಾದ ರಾಜಶ್ರೀ ಮಹಿಷರನ್ನು ಸ್ತುತಿಸುತ್ತೇನೆ. ಪಶುವಾದ ಕೋಣನ ಗುಣಮಹಾತ್ಮ್ಯಕ್ಕಾಗಿ ಅದರ ವರ್ಣನೆ ಮಾಡುತ್ತಿಲ್ಲ. ನನಗೆ ದ್ರೋಹ ಮಾಡಿದ ಅಧಿಕಾರಿಗಳ ಮೇಲಿನ ಕೋಪದಿಂದ ಅವರ ನಿಂದಾರೂಪವಾದ ಈ ವಾಗ್ದಂಡವನ್ನು ಅವರ ಪ್ರಭುಗಳ ಮೇಲೂ
ಪ್ರಯೋಗಿಸುತ್ತಿದ್ದೇನೆ. ಈ ಮಹಿಷ ಪ್ರಬಂಧವನ್ನು ಕೇಳಿ ಗುಣಗ್ರಾಹಿಗಳಾದ ರಾಜರು ಧರ್ಮದಿಂದ ಪ್ರಜಾಪಾಲನೆ ಮಾಡಲಿ’ ಎಂದು ಹೇಳಿ, ಮುಂದಿನ ಶ್ಲೋಕಗಳಲ್ಲಿ ಕೋಣನನ್ನು ಸಂಬೋಧಿಸಿ ಬರೆಯುತ್ತಾನೆ.

‘ರಾಜನ ಸ್ವಭಾವ ಒಳ್ಳೆಯದೇ. ಆದರೆ ಅವನ ಮಂತ್ರಿಗಳಿಗೆ ಬುದ್ಧಿ ಸಾಲದು. ಅವರನ್ನು ವಂಚಿಸಿ ದುಷ್ಟರು ಎಲ್ಲರನ್ನೂ ದೋಚುತ್ತಿದ್ದಾರೆ. ನನಗೆ ಕೌಪೀನ ಮಾತ್ರ ಉಳಿದಿದೆ, ನಿನಗೆ ಅದೂ ಇಲ್ಲ… ಎಲೈ ಮಹಿಷರಾಜ! ಹುಲ್ಲು ತಿನ್ನಿಸಿ, ನೀರಿನಲ್ಲಿ ಮುಳುಗಿಸಿ, ಮೈಯುಜ್ಜಿ ನಿನ್ನ ಸೇವೆ ಮಾಡಿದ್ದೇನೆ. ನಾನು ಬೇಡುವುದಿಷ್ಟೇ.
ನಿನ್ನನ್ನು ವಾಹನವಾಗಿ ಮಾಡಿಕೊಂಡಿರುವ ಯಮನನ್ನು ಬೇಗ ಈ ದ್ರೋಹಿ ಸುಭೇದಾರರ ಸಮೀಪಕ್ಕೆ ಕರೆದುಕೊಂಡು ಹೋಗು. ನಿನಗೆ ಹಸಿವಾದಾಗ ನೀರಸವಾದ ಒಣಹುಲ್ಲನ್ನು ತಿನ್ನುವ ಬದಲು ಇವರನ್ನು ತಿಂದು ಲೋಕೋಪಕಾರ ಮಾಡು… ಮಹಿಷರಾಜ!

ನೀನು ನಿಜವಾಗಿಯೂ ಸ್ತೋತ್ರಾರ್ಹ. ಧನಮತ್ತರಾದ ದುರ್ಗುಣಿ ರಾಜರ ಸ್ತುತಿಯಿಂದಾಗಿ ಹಳಸಿಹೋಗಿರುವ ಮಾತುಗಳಿಂದಲೇ ನಿನ್ನನ್ನು ಸ್ತುತಿಸುತ್ತಿದ್ದೇನೆ. ದಯಮಾಡಿ ನನ್ನನ್ನು ಕ್ಷಮಿಸು… ನಿನ್ನನ್ನು ಆಶ್ರಯಿಸಿದವರಿಗೆ ಸ್ವಪ್ನದಲ್ಲಿಯೂ ದಾರಿದ್ರ್ಯ ಬಾಧೆಯಿಲ್ಲ. ಅವರ ಉಗ್ರಾಣದಲ್ಲಿ ಧನಧಾನ್ಯಗಳು ತುಂಬಿರುತ್ತವೆ…
ನಿನ್ನ ಕೊಟ್ಟಿಗೆಯೇ ಅರಮನೆ. ಸಗಣಿಯೇ ಕಸ್ತೂರಿ. ನೀನು ಎಬ್ಬಿಸಿದ ನಿನ್ನ ಮೈಯ ಧೂಳೇ ಬಟ್ಟೆಗಳಿಗೆ ಸುವಾಸನೆ ನೀಡುವ ಪುಡಿ. ಜನರಿಗೆ ನಿಷ್ಕಾರಣವಾಗಿ ಉಪಕಾರ ಮಾಡುವುದರಿಂದ ಅತ್ಯಂತ ಶ್ರೇಷ್ಠನಾದ ನಿನಗೆ ಸಂಬಂಧಪಟ್ಟವುಗಳೆಲ್ಲ ಭೂಷಣ ಗಳೇ… ದಡ್ಡರ ವಿಷಯವನ್ನು ಪ್ರಸ್ತಾವಿಸುವಾಗ ಜನರು
ಮೊದಲು ನಿನ್ನ ಹೆಸರೆತ್ತುತ್ತಾರೆ. ಆ ದಡ್ಡರಿಗೆ ನಿನ್ನ ಮಹಿಮೆ ತಿಳಿಯದು. ನಾನಿದನ್ನು ಸಹಿಸಲಾರೆ.

ನೀನೇ ಧಾನ್ಯೋತ್ಪತ್ತಿಗೆ ಮೂಲ ಕಾರಣನಾಗಿರುವೆ. ದೇವತೆಗಳ ಹವಿಸ್ಸಿಗೂ ನೀನೇ ಮೂಲ. ನಿತ್ಯವೂ ಜಲಾಹಾರ ಪರ್ಣಾಹಾರಗಳಿಂದಲೇ ನೀವು ಜೀವಿಸು ತ್ತಿರುವೆ. ನಿನ್ನ ವಾಸವೂ ಪರ್ಣಶಾಲೆಯಲ್ಲಿ. ಮಲಗುವುದು ಭೂಮಿಯ ಮೇಲೆ. ದಿನವೂ ಎರಡು ಮೂರು ಬಾರಿ ಸ್ನಾನ ಮಾಡುವೆ. ಅಂದಮೇಲೆ ಋಷಿ ಸಮಾನನಲ್ಲವೇ ನೀನು! ಎರಡಾನೆ ಯ ಪ್ರಮಾಣದ ಶರೀರವನ್ನು ಹೊಂದಿ ಅಸಮಾನಬಲನಾದ ನೀನು ಎಂಥ ಕಠಿಣ ಭೂಮಿಯನ್ನೂ ನೇಗಿಲಿನಿಂದ ಚೆನ್ನಾಗಿ ಭೇದಿ ಸುವುದರಲ್ಲಿ ಅಗ್ರಗಣ್ಯ. ನಿನ್ನನ್ನು ನೋಡುವವರು ಇದು ಭೂಮಿಯಲ್ಲಿ ಚಲಿಸುತ್ತಿರುವ ನೀಲಪರ್ವತವೋ! ಕಾಲುಗಳುಳ್ಳ ಮೋಡವೋ! ಎಂದು ಆಶ್ಚರ್ಯಪಡುತ್ತಾರೆ.

ನಿನ್ನ ಮಹಾತ್ಮ್ಯವನ್ನು ವರ್ಣಿಸಹೊರಟರೆ ಶಬ್ದಗಳು ನಾಮುಂದು ತಾಮುಂದೆಂದು ಹೊಳೆಯುತ್ತವೆ. ಯಾವುದನ್ನು ಸ್ವೀಕರಿಸಲಿ ಯಾವುದನ್ನು ಬಿಡಲಿ?’
ಕೋಣನ ಮುಂದೆ ಅಕ್ಷರಶಃ ಕಿನ್ನರಿ ನುಡಿಸುತ್ತಾನೆ ಕುಟ್ಟಿಕವಿ. ಆದರೆ ನಿಜವಾದ ರಂಗೇರುವುದು ದ್ವಿತೀಯಾರ್ಧದ ಐವತ್ತು ಶ್ಲೋಕಗಳಲ್ಲಿ. ಶ್ಲೇಷೆ (ಪದವಿನೋದ) ಚಮತ್ಕಾರದಿಂದಲೇ ಕವಿಯು ಕೋಣನ ಸ್ತುತಿ ಮಾಡುತ್ತಾನೆ. ಕೆಲವು ಪದ್ಯಗಳಲ್ಲಿ ಕೋಣನನ್ನು ಮಗು, ವೇದಾವಧಾನಿ, ಮಾಧ್ವಗುರು, ಯೋಗಿ, ಯಜ್ಞದೀಕ್ಷಿತ, ಇಂದ್ರ, ಮನ್ಮಥ, ಸಾಲಿಗ್ರಾಮ ಮುಂತಾದುವುಗಳಿಗೆ ಹೋಲಿಸಿದರೆ ಇತರ ಪದ್ಯಗಳಲ್ಲಿ ನೀನೇ ಶ್ರೀವೈಷ್ಣವಾಗ್ರೇಸರ, ಪರಬ್ರಹ್ಮ, ಸಮುದ್ರ, ಹನೂಮಾನ್, ಕಾರ್ತವೀರ್ಯಾರ್ಜುನ, ಭರತಾಚಾರ್ಯ, ಮತ್ಸ್ಯಾದಿ ದಶಾವತಾರಗಳು, ವಿರೂಪಾಕ್ಷ, ಅರ್ಜುನ, ದ್ರೋಣ ಇತ್ಯಾದಿ ಸ್ವರೂಪನೆಂದು ಕೋಣನ ಪ್ರಶಂಸೆ. ಪದವಿನೋದ ಚಮತ್ಕಾರದ ಸ್ಯಾಂಪಲ್‌ಗಾಗಿ ಈ ಒಂದು ಶ್ಲೋಕವನ್ನು ನೋಡೋಣ.

ಇದರಲ್ಲಿ ಕೋಣನನ್ನು ಮಗುವಿಗೆ ಹೋಲಿಸಲಾಗಿದೆ. ‘ಧಾತ್ರ್ಯುತ್ಸಂಗತಲೇ ವಿಮುಂಚಸಿ ಮುಹುರ್ವಿಣ್ಮೂತ್ರಮಸ್ತತ್ರಪಂ| ಧತ್ಸೇ ನಾಪ್ಯಪಲಾಲಮಾಸ್ಯಮನಿಶಂ ಸ್ನೇಹೇನ ಸಂವರ್ಧ್ಯಸೇ| ಶಂಖಂವ್ಯಾಪಿ ಪಯಃಪಿಬಸ್ಯ ನುದಿನಂ ತಸ್ಮಾದದಂತಂ ಮುಖೇ| ವತ್ಸ ಶ್ರೀಮಹಿಷೇಂದ್ರ ಬಾಲಕಮಿವ ತ್ವಾಂ ವೀಕ್ಷ್ಯ ನಂದಾ ಮ್ಯಹಂ||’ – ಮಗುವು ತನ್ನನ್ನು ಎತ್ತಿಕೊಂಡ (ಧಾತ್ರೀ) ತಾಯಿಯ ಅಥವಾ ದಾದಿಯ ಮೇಲೆ ರಾತಂಕವಾಗಿ ಪುನಃ ಪುನಃ ಮಲಮೂತ್ರ ವಿಸರ್ಜನೆ
ಮಾಡು ವಂತೆ, ನೀನು ಭೂಮಿಯ (ಧಾತ್ರೀ) ತೊಡೆಯ ಮೇಲೆ ಅಂದರೆ ಕೊಟ್ಟಿಗೆಯ ಮಧ್ಯದಲ್ಲೇ ವಿಸರ್ಜನೆ ಮಾಡುತ್ತೀಯೆ.

ಮಗುವಿನ ಬಾಯಿ ಯಾವಾಗಲೂ ಜೊಲ್ಲಿಲ್ಲದೆ (ಅಪಲಾಲ = ಅಪ + ಲಾಲ) ಇರುವುದಿಲ್ಲ. ನಿನ್ನ ಬಾಯಿ ಯಾವಾಗಲೂ ಒಣಹುಲ್ಲು ಇಲ್ಲದೆ (ಅ + ಪಲಾಲ) ಇರುವುದಿಲ್ಲ. ಮಗು ದಿನವೂ ಶಂಖದಲ್ಲಿ ತುಂಬಿರುವ ಹಾಲು (ಪಯಃ) ಕುಡಿಯುವಂತೆ ನೀನು ಹಣೆಯ ಮೂಳೆ (ಶಂಖ)ವರೆಗೂ ವ್ಯಾಪಿಸುವಂತೆ ನೀರು (ಪಯಃ) ಕುಡಿಯುವೆ. ಮಗು ಎಣ್ಣೆ (ಸ್ನೇಹ)ನೀರು ಹಾಕುವುದರಿಂದ ಬೆಳೆಯುವಂತೆ ನೀನು ಪ್ರೀತಿಯಿಂದ (ಸ್ನೇಹದಿಂದ) ಬೆಳೆಯುತ್ತೀಯೆ. ಮಗುವಿನ ಬಾಯಿಯಲ್ಲಿ ಹಲ್ಲಿಲ್ಲದೆ (ಅ-ದಂತ) ಇರುವಂತೆ, ಬಾಯಿಯಲ್ಲಿ ಸದಾ ಅಗಿಯುತ್ತಿರುವ (ಅದಂತಂ) ನಿನ್ನನ್ನು ನೋಡಿ, ವತ್ಸ! ಶ್ರೀಮಹಿ ಷೇಂದ್ರ! ಮಗುವನ್ನು ನೋಡಿದಂತೆ ನಾನು ಸಂತೋಷಪಡುತ್ತೇನೆ.

ಇದೇ ರೀತಿ ವೇದಾವಧಾನಿಯೊಡನೆ ಹೋಲಿಕೆ. ಆತ ನಾನಾ ವಿಧವಾದ ವೇದ (ಕಾಂಡ) ಭಾಗಗಳನ್ನು ಬಾಯಿಪಾಠ ಮಾಡಿ ದಂತೆ ನೀನು ಬಗೆಬಗೆಯ ಕಾಳುಕಡ್ಡಿ (ಕಾಂಡ)ಗಳನ್ನು ಬಾಯಿಯಲ್ಲಿಟ್ಟುಕೊಳ್ಳುತ್ತೀ. ಆತ ಪದಕ್ರಮ ಪಾಠಗಳನ್ನು ಉಚ್ಚರಿಸುವಂತೆ ನೀನು ಹೆಜ್ಜೆಹೆಜ್ಜೆಗೂ ಮೂತ್ರಿಸುತ್ತ (ಉಚ್ಚರನ್) ಹೋಗುತ್ತೀಯೆ. ಅವನು ವೇದದ ಅಂಗಗಳನ್ನು ಕಲಿಯಲಿಕ್ಕೆ ಶ್ರಮ ಹಾಕಿದರೆ ನೀನು ದೇಹದ (ಅಂಗ) ಅವಯವಗಳಲ್ಲಿ ಆಯಾಸ ಮಾಡಿಕೊಳ್ಳುತ್ತೀಯೆ. ಮತ್ತೊಂದು ಶ್ಲೋಕದಲ್ಲಿ ಅವಧೂತನೊಡನೆ ಹೋಲಿಕೆ. ಆತನಂತೆ ನೀನೂ ಚಳಿಬಿಸಿಲುಗಳನ್ನು ಸಹಿಸಿಕೊಂಡು ದಿಗಂಬರ ನಾಗಿ ಇರುತ್ತೀ. ಆತ ಉಸಿರೆಳೆದು ಪ್ರಾಣಾಯಾಮ ಮಾಡುತ್ತ ಯಮ-ನಿಯಮ ಮುಂತಾದುವುಗಳಲ್ಲಿ ಆರೂಢನಾದಂತೆ ನೀನು ಪ್ರಾಣಗಳನ್ನು ಎಳೆದುಕೊಂಡು ಹೋಗುವ ಯಮನಿಂದ
ನಿಯತವಾಗಿ (ನಿಯಮೇನ) ಆರೂಢನಾಗಿರುತ್ತೀ.

ಇನ್ನೊಂದು ಶ್ಲೋಕದಲ್ಲಿ ಸಾಲಿಗ್ರಾಮದ ಹೋಲಿಕೆ: ಅದು ನೀಲವರ್ಣದ ಗಟ್ಟಿ ಮೂರ್ತಿ, ಅಂತೆಯೇ ನಿನ್ನದೂ ನೀಲವರ್ಣದ ಗಟ್ಟಿ ಶರೀರ. ಜನರು ನಿತ್ಯವೂ ಸಾಲಿಗ್ರಾಮಕ್ಕೆ ಅಭಿಷೇಕ ಮಾಡುವಂತೆ ನಿನ್ನನ್ನೂ ತೊಳೆಯುತ್ತಾರೆ. ಐದು ಅಥವಾ ಆರು ಚಕ್ರಗಳುಳ್ಳ ಸಾಲಿಗ್ರಾಮವು ಸ್ವೀಕಾರಾರ್ಹ (ಗ್ರಾಹ್ಯ) ಆಗಿರುವಂತೆ ನೀನು ಐದಾರು ನಾಣ್ಯ (ಚಕ್ರ)ಗಳಿಂದ (ಗ್ರಾಹ್ಯ) ಕೊಳ್ಳಲ್ಪಡುತ್ತೀಯೆ. ಸಾಲಿಗ್ರಾಮವು ಸಂಸಾರಮೋಕ್ಷಗಳೆರಡನ್ನೂ (ಬಂಧ, ಮೋಕ್ಷ) ಉಂಟುಮಾಡುವಂತೆ ನೀನೂ ನೇಗಿಲಿಗೆ ಕಟ್ಟುವುದು (ಬಂಧ) ಮತ್ತು ಬಿಚ್ಚುವುದು (ಮೋಕ್ಷ) ಎರಡನ್ನೂ ಹೊಂದುತ್ತೀಯೆ. ಅದು (ಸುಕ್ಷೇತ್ರ) ಅನೇಕ ದೇವತಾ ಮೂರ್ತಿರೂಪದಿಂದ ಸಂಪತ್ತನ್ನು ಕೊಡುವಂತೆ ನೀನು (ಸುಕ್ಷೇತ್ರ) ಒಳ್ಳೆಯ ಗದ್ದೆಯಲ್ಲಿ ಸಸ್ಯಶೋಭೆಯನ್ನುಂಟುಮಾಡುತ್ತೀಯೆ.

ಸಾಲಿಗ್ರಾಮವು ಉತ್ತಮ ಶ್ರದ್ಧೆಯಿಂದ (ಮಹತಾ + ಜ್ಞಾನೇನ) ಪೂಜಿಸಲ್ಪಡುವಂತೆ ನೀನು (ಮಹತಾ + ಅಜ್ಞಾನೇನ) ಬಹಳ ಮೂಢನಾಗಿರುವುದರಿಂದ (ಪೂಜ್ಯ) ಎಚ್ಚರಿಕೆಯಿಂದ ಗಮನಿಸಲ್ಪಡುತ್ತೀಯೆ! ಒಂದೇ ಪದಕ್ಕೆ ಇರುವ ವಿವಿಧ ಅರ್ಥಗಳನ್ನು ಕವಿ ದುಡಿಸಿಕೊಂಡಿರುವ ರೀತಿ ಅದ್ಭುತ. ಮಹಿಷ ಶತಕದ
ಕೊನೆಯ ಪದ್ಯಗಳಲ್ಲಿ ಕುಟ್ಟಿಕವಿಯು ಪ್ರತಾಪವೇ ಮೂರ್ತಿವೆತ್ತಂತಿರುವ ಪ್ರತಾಪಸಿಂಹರಾಜನು ಶತ್ರುಗಳನ್ನು ಜಯಿಸಿ ಪ್ರಜಾನುರಾಗಿಯೂ, ಅರೋಗ ದೃಢಕಾಯನೂ ದೀರ್ಘಾಯುವೂ ಆಗಲೆಂದು ಹರಸಿ, ರಾಜನೂ ಆತನ ಸನ್ಮಂತ್ರಿಗಳೂ ಪ್ರಜೆಗಳೂ ಪಶುಗಳೂ ಸುಖವಾಗಿರಲೆಂಬ ಮಂಗಳಾಶಾಸನದಿಂದ
ಕಾವ್ಯವನ್ನು ಮುಗಿಸುತ್ತಾನೆ.

ಸ್ಕೃತ ಭಾಷೆಯನ್ನು ಸಮುದ್ರದಂತೆ ‘ರತ್ನಾಕರ’ ಎಂದು ಪರಿಗಣಿಸುವುದು ಇದೇ ಕಾರಣಕ್ಕೆ. ಇದರ ಗರ್ಭದಲ್ಲಿ ಅಡಗಿರುವ ಮುತ್ತುರತ್ನಗಳು ಅದೆಷ್ಟೋ. ಪ್ರೊ.ಗರ್ಗೇಶ್ವರಿ ವೆಂಕಟಸುಬ್ಬಯ್ಯ ಎಂಬ ವಿದ್ವಾಂಸರು ಬರೆದ ‘ಶಾಸ್ತ್ರಕುತೂಹಲ’ ಗ್ರಂಥದಲ್ಲಿ (ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ) ಸಮುದ್ರದಿಂದ ಒಂದು
ಕುಕ್ಕೆಯಲ್ಲಿ ಹಿಡಿಯುವಷ್ಟು ಮುತ್ತುರತ್ನಗಳನ್ನು ಎತ್ತಿ ತಂದಿದ್ದರೆ, ಅದರಲ್ಲಿರುವ ‘ಮಹಿಷ ಶತಕ’ ಎಂಬ ಸುದೀರ್ಘ ಸವಿವರ ಲೇಖನವನ್ನು ಓದಿದಾಗ ನನಗೆ ಆ ಕುಕ್ಕೆಯಿಂದ ಒಂದು ಮುಷ್ಟಿ ಯಷ್ಟು ತುಂಬಿಸಿಕೊಂಡ ಅನುಭವ. ಆ ಒಂದು ಮುಷ್ಟಿಯಿಂದ ನಿಮ್ಮೊಡನೆಯೂ ಒಂದಿಷ್ಟನ್ನು ಹಂಚಿಕೊಂಡದ್ದನ್ನಷ್ಟೇ ನಾನಿಲ್ಲಿ
ಮಾಡಿದ್ದೇನೆ.