Sunday, 15th December 2024

ಕಾಂಗ್ರೆಸ್ ಮಗ್ಗಲು ಮುಳ್ಳಾದ ಸಮನ್ವಯತೆಯ ಕೊರತೆ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಯಾವುದೇ ರಾಜಕೀಯ ಪಕ್ಷವಾಗಲಿ, ಪಕ್ಷ ಸಂಘಟನೆ, ಕಾರ್ಯಕರ್ತರ ಸಂಖ್ಯೆ, ನಾಯಕರ ದಂಡು ಹಾಗೂ ಜನರ ನಾಡಿಮಿಡಿತ ಅರಿಯುವುದು ಮುಖ್ಯ. ಆದರೆ ಈ ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಪಕ್ಷ ಅಧಿಕಾರದ ಗದ್ದುಗೆ ಏರಬೇಕೆಂದರೆ, ಆ ಪಕ್ಷದ ನಾಯಕರ ನಡುವಿನ ‘ಸಮನ್ವಯತೆ’ ಅತ್ಯಗತ್ಯ.

ಒಂದು ವೇಳೆ ಸಮನ್ವಯತೆ ಇಲ್ಲದೇ, ಸಂಘಟನೆ, ನಾಯಕರ ದಂಡು, ಲಕ್ಷಾಂತರ ಕಾರ್ಯಕರ್ತರ ಸಂಖ್ಯೆಯಿದ್ದರೂ, ‘ಹೊಳೆಯಲ್ಲಿ ಹುಣಸೆ ತೊಳೆದಂತೆ’ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಅದರಲ್ಲಿಯೂ ಚುನಾವಣಾ ಸಮಯದಲ್ಲಿ ಈ ಸಮನ್ವ ಯತೆಯ ಕೊರತೆಯಿಂದ, ಫಲಿತಾಂಶಗಳೇ ಅದಲು ಬದಲಾಗುವು ಸಾಧ್ಯತೆ ಹೆಚ್ಚಿರು ತ್ತದೆ. ಸಮನ್ವಯತೆಯ ಮಾತು ಜೆಡಿಎಸ್‌ನಲ್ಲಿ ಹೆಚ್ಚು ಪ್ರಸ್ತುತ ಎನಿಸುವುದಿಲ್ಲ ಏಕೆಂದರೆ, ಅಲ್ಲಿ ಇಡೀ ಪಕ್ಷದ ಆಡಳಿತ ದೇವೇಗೌಡ ಕುಟುಂಬದಲ್ಲಿಯೇ ಗಿರಕ್ಕಿ ಹೊಡೆಯುವುದರಿಂದ ಹೆಚ್ಚು ಸಮಸ್ಯೆ ಯಾಗುವುದಿಲ್ಲ.

ಆದರೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಈ ಸಮನ್ವಯತೆಯ ಅಗತ್ಯ ಹೆಚ್ಚಿರುತ್ತದೆ. ಆದರೆ ಕಾಂಗ್ರೆಸ್‌ನಲ್ಲಿ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿ ದರೆ, ಈ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಅದರಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಗಳು ಎದ್ದಾಗ, ಆ ಪಕ್ಷದಲ್ಲಿ ಕಾಡುವ ಸಮನ್ವಯತೆಯ ಕೊರತೆ ಇನ್ಯಾವ ಪಕ್ಷದಲ್ಲಿಯೂ ಸದ್ಯಕ್ಕೆ ಸಿಗುವುದಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ಬಳಿಕ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡುವಿನ ಸಮನ್ವಯತೆಯ ಕೊರತೆ ಪಕ್ಷ ಹಲವು ಸಮಯದಲ್ಲಿ ಮುಜುಗರವನ್ನು ಉಂಟು ಮಾಡಿದ ಉದಾಹರಣೆಗಳಿವೆ.

ಅದರಲ್ಲಿಯೂ ಇತ್ತೀಚಿನ ದಿನದಲ್ಲಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಸಂಬಂಽಸಿದಂತೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರದ್ದು ಭಿನ್ನ ನಿಲುವುಗಳಿರುತ್ತದೆ. ಅದು ಕೇವಲ ಪಕ್ಷದ ವೇದಿಕೆಗೆ ಸೀಮಿತವಾಗದೇ, ಬಹಿರಂಗ ಹೇಳಿಕೆ ಕೊಡುವುದರಿಂದ, ಬಿಜೆಪಿ ಪಕ್ಷಕ್ಕೂ ಇದರಿಂದ ಲಾಭವಾಗುತ್ತಿದೆ. ಸಿದ್ದರಾಮಯ್ಯ ವಿರುದ್ಧ ಆರೋಪ ಬಂದರೆ, ಡಿಕೆ ಸೈಲೆಂಟ್ ಆದರೆ, ಡಿ.ಕೆ.ಶಿವಕುಮಾರ್ ವಿರುದ್ಧ ಈಗನ್‌ಟನ್ ವಿಷಯದಲ್ಲಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದಾಗಲೂ, ಸಿದ್ದರಾಮಯ್ಯ ‘ತನಗೂ ಅದಕ್ಕೂ ಸಂಬಂಧವಿಲ್ಲ’ ಎನ್ನುವಂತೆ ವರ್ತಿಸಿದ್ದು ಪಕ್ಷದಲ್ಲಿ ‘ಎಲ್ಲವೂ ಸರಿಯಿಲ್ಲ’ ಎನ್ನುವುದನ್ನು ಸ್ಪಷ್ಟಪಡಿಸಿದೆ.

ಇನ್ನು ಕೆಲ ದಿನಗಳ ಹಿಂದೆ ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದ್ದ ಹಿಜಾಬ್ ವಿವಾದದಲ್ಲಿ, ಹಿಜಾಬ್ ಪರವಾಗಿ ಸಿದ್ದರಾಮಯ್ಯ ಬ್ಯಾಟ್ ಬೀಸಿದರೆ, ಡಿ.ಕೆ.ಶಿವಕುಮಾರ್ ಮಾತ್ರ, ಈ ವಿಷಯದಲ್ಲಿ ತಟಸ್ಥ ನಿಲವು ತಾಳಿದರು. ಈ ಇಬ್ಬರು ನಾಯಕರು ಭಿನ್ನ ನಿಲವು  ತಾಳಿದ್ದ ರಿಂದ, ಹಿಜಾಬ್ ವಿಷಯದಲ್ಲಿ ಯಾವ ರೀತಿಯ ತೀರ್ಮಾನಕ್ಕೆ ಬರಬೇಕು ಎನ್ನುವ ಗೊಂದಲಕ್ಕೆ ಪಕ್ಷದ ಕಾರ್ಯಕರ್ತರು ಬಿದ್ದಿದ್ದು ಸುಳ್ಳಲ್ಲ. ಇದಾದ ಬಳಿಕ ಕಳೆದ ವಾರ ಕರ್ನಾಟಕದಲ್ಲಿ ಸದ್ದು ಮಾಡಿದ, ‘ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಬೇಕು’ ಎನ್ನುವ ವಿಷಯ
ಪ್ರಸ್ತಾಪವಾಗುತ್ತಿದ್ದಂತೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇದನ್ನು ಬಹಿರಂಗವಾಗಿಯೇ ವಿರೋಧಿಸಿ, ಇದರ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಆದರೆ ತತ್ವಿರುದ್ಧ ಎನ್ನುವಂತೆ ಸಿದ್ದರಾಮಯ್ಯ ಅವರು, ಭಗವದ್ಗೀತೆ ಅಳವಡಿಸಿದರೆ ನಮ್ಮ ವಿರೋಧವಿಲ್ಲ ಎನ್ನುವ ಮೂಲಕ ಪುನಃ,
ಸಮನ್ವಯತೆ ಕೊರತೆಯಿದೆ ಎನ್ನುವುದನ್ನು ಸಾರಿದರು. ಈ ಹೇಳಿಕೆಗಳ ವಿರೋಧಾಭಾಸದಿಂದ ಪಕ್ಷದ ಸಿದ್ಧಾಂತದಲ್ಲಿಯೇ ಅನುಮಾನ ಹುಟ್ಟಿಸುವಂತಾಗುತ್ತಿದೆ. ಒಬ್ಬರು ಬೇಕು ಎಂದಾಗ, ಇನ್ನೊಬ್ಬರು ಬೇಡ ಎಂದರೆ, ಎರಡೂ ಕಡೆಯ ಮತಗಳು ಕಳೆದುಕೊಳ್ಳುವಂತೆ ಮಾಡುತ್ತದೆ. ಇದಿಷ್ಟೇ ಅಲ್ಲದೇ, ಪಕ್ಷದ ಕಾರ್ಯಕರ್ತರಿಗೂ ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ಗೊಂದಲ ಕಾಡುತ್ತದೆ. ಅದರ ಲ್ಲಿಯೂ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಸಾಮರಸ್ಯವಿಲ್ಲ ಎನ್ನುವ ಪುಕಾರಗಳ ನಡುವೆ ಈ ರೀತಿಯ ವಿರೋಧಾ ಭಾಸ ಹೇಳಿಕೆಗಳನ್ನು ನೀಡುವುದರಿಂದ, ‘ನಾವೆಲ್ಲ ಒಂದೇ’ ಎಂದು ಹೇಳಿಕೊಂಡು ಓಡಾಡುವ ಕಾಂಗ್ರೆಸ್ ನಾಯಕರ ಮಾತುಗಳನ್ನು ನಂಬಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಏಳುವುದು ಸಹಜ.

ಕೇವಲ ಯಾವುದೋ ಒಂದು ವಿಷಯದ ಮೇಲಿನ ಪ್ರತಿಕ್ರಿಯೆಗೆ ಇದು ಸೀಮಿತವಾಗಿಲ್ಲ. ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಾಗೂ ಹಳೇ ಮೈಸೂರು ಭಾಗದಲ್ಲಿ ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ, ರಾಜ್ಯ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ವೇಳೆಯೂ ಇದು ಸಾಬೀತಾಗಿತ್ತು. ಮೊದಲ ಹಂತದಲ್ಲಿ ನಡೆದ ಪಾದಯಾತ್ರೆಯಲ್ಲಿ, ಕೆಪಿಸಿಸಿ ಅಧ್ಯಕ್ಷರ ಹಾಗೂ ಪ್ರತಿಪಕ್ಷ ನಾಯಕರು ಒಂದೇ ಫ್ರೇಂನಲ್ಲಿರುವ ಫೋಟೋ ಸಿಗುವುದು ಕಷ್ಟ ಎನ್ನುವ ವಾತಾವರಣ ಸೃಷ್ಟಿ ಯಾಗಿತ್ತು.

ಏಕಾಂಕಿಯಾಗಿ ಪಾದಯಾತ್ರೆಗೆ ಸಂಘಟಿಸಲು ಮುಂದಾಗಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಬಳಿಕ ನಾಮ್ ಕೆವಸ್ತೆಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದೂ ಜನರ ಮುಂದಿದೆ. ಈ ಎಲ್ಲವನ್ನು ಗಮನಿಸಿದಾಗ, ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಎಷ್ಟೇ ಬಾರಿ, ‘ನಾವಿಬ್ಬರೂ ಒಂದಾಗಿದ್ದೇವೆ’ ಎಂದು ಹೇಳಿದರೂ ಅದನ್ನು ಒಪ್ಪಲು ಮಾತ್ರ ಸಾಧ್ಯವಾಗುತ್ತಿಲ್ಲ. ಪದಾಧಿಕಾರಿಗಳ ನೇಮಕಾತಿ ವಿಷಯದಲ್ಲಿ ಆಗುತ್ತಿರುವ ಈ ಸಮನ್ವಯತೆ ಕೊರತೆಯಿಂದಲೇ ಈವರೆಗೆ ನೇಮಕವಾಗಿಲ್ಲ.

ದಿನೇಶ್ ಗುಂಡೂರಾವ್ ಕಾಲದಿಂದಲೂ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಹಗ್ಗಜಗ್ಗಾಟ ನಡೆಯುತ್ತಿದೆ. ಆದರೆ ಡಿಕೆಶಿ ಅಧ್ಯಕ್ಷರಾದ ಬಳಿಕ, ಸಿದ್ದರಾಮಯ್ಯ ಅವರದ್ದು ಒಂದು ಪಟ್ಟಿ ಹಾಗೂ ಡಿ.ಕೆ.ಶಿವಕುಮಾರ್ ಅವರದ್ದು ಒಂದು ಪಟ್ಟಿ ಮಾಡಿಕೊಂಡು ದೆಹಲಿಗೆ ಹೋಗುತ್ತಾರೆ. ಆದರೆ ಎರಡೂ ಪಟ್ಟಿಯನ್ನು ಸೇರಿಸಿ ಒಂದು ಪಟ್ಟಿಯನ್ನು ಸಿದ್ಧಪಡಿಸುವುದಕ್ಕೆ ಮಾತ್ರ ಇಬ್ಬರೂ ಒಪ್ಪುವುದಿಲ್ಲ. ಆದ್ದರಿಂದಲೇ ಪದಾಧಿಕಾರಿಗಳ ನೇಮಕ ದಿನದಿಂದ ದಿನಕ್ಕೆ ಹಿಂದಕ್ಕೆ ಹೋಗುತ್ತಲೇ ಇದೆ. ಇದರ ಹೊಡೆತ ಬೀಳುತ್ತಿರುವುದು ಮಾತ್ರ ಪಕ್ಷ ಸಂಘಟನೆಗೆ ಎಂದರೆ ತಪ್ಪಲ್ಲ.

ಈ ರೀತಿಯ ಸಮನ್ವಯತೆ ಕೊರತೆ ಈ ಹಿಂದೆ ಕಾಂಗ್ರೆಸ್‌ನಲ್ಲಿ ಇರಲಿಲ್ಲವೇ ಎಂದರೆ, ‘ಇತ್ತು’ ಎನ್ನುವ ಉತ್ತರ ಸಹಜ. ಆದರೆ ಈಗಿನ ಪ್ರಮಾಣದಲ್ಲಿ ಸಮನ್ವಯತೆಯ ಕೊರತೆ ಬಹಿರಂಗವಾಗಿ ಕೇಳಿಬರುತ್ತಿರಲಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವ ಮೊದಲು ಜನಾರ್ಧನ ಪೂಜಾರಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೆಲವು ನಾಯಕರು, ರಾಜ್ಯ ಕಾಂಗ್ರೆಸ್‌ನ ನಿರ್ಣಯವನ್ನು ಕೈಗೊಳ್ಳು ತ್ತಿದ್ದರು. ಸಿದ್ದರಾಮಯ್ಯ ಅವರು ಪಕ್ಷಕ್ಕೆ ಬಂದು ಅಧಿಕಾರಕ್ಕೆ ಪಕ್ಷವನ್ನು ತರುತ್ತಿದ್ದಂತೆ, ರಾಜ್ಯ ಕಾಂಗ್ರೆಸ್‌ನ ಸಂಪೂರ್ಣ ಹಿಡಿತ ಸಿದ್ದರಾ ಮಯ್ಯ ಅವರಿಗೆ ಸಿಕ್ಕಿತ್ತು.

ಚುನಾವಣೆಗೆ ಮೊದಲೇ, ಪ್ರತಿಪಕ್ಷದ ನಾಯಕರಾಗಿ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದ ಅವರು ಬಳಿಕ ಮುಖ್ಯಮಂತ್ರಿಯಾದ ಬಳಿಕ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ. ಪರಮೇಶ್ವರ ಅವರು ಕಾರ್ಯನಿರ್ವಹಿಸುತ್ತಿದ್ದರು. ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷ ರಾಗಿದ್ದರೂ, ಬಹುತೇಕ ತೀರ್ಮಾನವನ್ನು ಸಿದ್ದರಾಮಯ್ಯ ಅವರು ತಗೆದುಕೊಳ್ಳುತ್ತಿದ್ದರು. ಪರಮೇಶ್ವರ ಅವರು ಸಿದ್ದರಾಮಯ್ಯ ಅವರ ಮಾತಿಗೆ ಅಥವಾ ನಡೆಗೆಂದು ವಿರೋಧ ವ್ಯಕ್ತಪಡಿಸಲಿಲ್ಲ. ಆದ್ದರಿಂದ ಡಾ.ಜಿ.ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಇರುವ ತನಕ, ಕಾಂಗ್ರೆಸ್‌ನಲ್ಲಿ ಎರಡು ಶಕ್ತಿ ಕೇಂದ್ರಗಳು ಉದಯಿಸಲೇ ಇಲ್ಲ. ಪಕ್ಷ ಸಂಘಟನೆಯಾಗಲಿ, ಸರಕಾರದ ಭಾಗವಾಗಲಿ ಎರಡರ ತೀರ್ಮಾನ ಗಳನ್ನು ಸಿದ್ದರಾಮಯ್ಯ ಅವರೇ ತಗೆದುಕೊಳ್ಳುತ್ತಿದ್ದರು.

ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರು ಸಹ ಪರಮೇಶ್ವರ್ ಅವರ ಹಾದಿಯಲ್ಲಿಯೇ ಸಾಗಿದ್ದರು. ದಿನೇಶ್ ಗುಂಡೂರಾವ್ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಏರಿದ ಡಿ.ಕೆ.ಶಿವಕುಮಾರ್ ಅವರು, ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡೇ ಅಧ್ಯಕ್ಷ ಸ್ಥಾನಕ್ಕೆ ಏರಿದ್ದರಿಂದ ಸಹಜವಾಗಿಯೇ ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಸಂಘಟನೆಗೆ ಮುಂದಾದರು. ಇದರೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ರಾಷ್ಟ್ರೀಯ ನಾಯಕರೊಂದಿಗೆ ಹಾಗೂ ರಾಜ್ಯದಲ್ಲಿ ತಮ್ಮದೇಯಾದ ಹಿಡಿತವನ್ನು ಹೊಂದಿರುವುದರಿಂದ, ಒಬ್ಬರಿಗೆ ಒಬ್ಬರು ತಗ್ಗುವ ಪ್ರಮೇಯ ಉದ್ಭವಿಸಲಿಲ್ಲ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರದ
ಗದ್ದುಗೆ ಏರುತ್ತಿದ್ದಂತೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಎರಡು ಶಕ್ತಿ ಕೇಂದ್ರಗಳ’ ನಿರ್ಮಾಣವಾಯಿತು.

ಇದರಿಂದಾಗಿಯೇ ಈ ಸಮನ್ವಯತೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಸದ್ಯದ ಪರಿಸ್ಥಿತಿ ಕರ್ನಾಟಕ ಬಿಜೆಪಿ ಅಥವಾ ದೇಶದ ಬಿಜೆಪಿ ಪಾಲಿಗೆ ಈ ಸಮಸ್ಯೆಯಿಲ್ಲ. ರಾಷ್ಟ್ರ ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ತೆಗೆದು ಕೊಳ್ಳುವ ತೀರ್ಮಾನವೇ ಅಂತಿಮ. ಇದಕ್ಕೆ ಕೆಲವರು ಆಕ್ಷೇಪವ್ಯಕ್ತಪಡಿಸಿದರೂ, ಅದನ್ನು ದೊಡ್ಡ ಧ್ವನಿ ಹೇಳುವ ಸದ್ಯಕ್ಕೆ ಆಗುತ್ತಿಲ್ಲ. ಇನ್ನು ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಅವರು ಈಗಲೂ ಮಾಸ್ ನಾಯಕನಾಗಿಯೇ ಇದ್ದಾರೆ. ಬಸವರಾಜ ಬೊಮ್ಮಾಯಿ ಅವರು ಅವರ ಅಣತಿಯಲ್ಲಿಯೇ ಹೋಗುತ್ತಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಾವಾಯಿತು, ತಮ್ಮ ಕೆಲಸವಾಯಿತು ಎನ್ನುವ ಮನ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಕಾಂಗ್ರೆಸ್‌ನಲ್ಲಿರುವ ಈ ಸಮನ್ವಯಗತೆಯ ಕೊರತೆ ಬಿಜೆಪಿ ಕಾಡುತ್ತಿಲ್ಲ.

ಮುಂದಿನ ವರ್ಷ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕಾಂಗ್ರೆಸ್ ಗೆ ಸದ್ಯಕ್ಕೆ ಉತ್ತರಮ ವಾತಾವರಣವಿದೆ. ಆಡಳಿತ ಪಕ್ಷ ಬಿಜೆಪಿಯಲ್ಲಿಯೂ, ಮುಂದಿನ ಚುನಾವಣೆಯ ಸಾರಥಿ ಯ್ಯಾರು ಎನ್ನುವ ಗೊಂದಲ ಮುಗಿದಿಲ್ಲ. ಇನ್ನು ಜೆಡಿಎಸ್ ತನಗೆ ಬೇಕಿರುವುದೇ 40 ಸೀಟು ಎನ್ನುವ ಸ್ಥಿತಿಯಲ್ಲಿ ನಡೆದುಕೊಳ್ಳುತ್ತಿದೆ. ದೇಶದೆಲ್ಲೆಡೆ ಅಧಿಕಾರ ಕಳೆದುಕೊಳ್ಳುತ್ತಿರುವ
ಕಾಂಗ್ರೆಸ್‌ಗೆ ಆಶಾದಾಯಕವಾಗಿರುವ ಕರ್ನಾಟಕದಲ್ಲಿ, ರಾಜಕೀಯ ಲಾಭ ಪಡೆದು ಅಽಕಾರದ ಚುಕ್ಕಾಣಿ ಹಿಡಿಯುವ ಬಗ್ಗೆ ಯೋಚಿಸದೇ, ಈ ರೀತಿ ಗುಂಪುಗಾರಿಕೆ ಮಾಡಿಕೊಂಡು ಸಾಗಿದರೆ ಇದರ ಲಾಭ ನೇರವಾಗಿ ಬಿಜೆಪಿಗೆ ಆಗಲಿದೆ ಎನ್ನುವುದು ಸ್ಪಷ್ಟ.