ತುಂಟರಗಾಳಿ
ಸಿನಿಗನ್ನಡ
ಚಿತ್ರರಂಗದಲ್ಲಿ ಈಗ ಮಾತೆತ್ತಿದರೆ ಪ್ಯಾನ್ ಇಂಡಿಯಾ ಸಿನಿಮಾ, ಹೈ ಬಜೆಟ್ ಚಿತ್ರ, ಟೆಕ್ನಿಕಲಿ ಬ್ರಿಲಿಯಂಟ್, ಹೊಸ ಅಲೆಯ ಚಿತ್ರಗಳು ಅಂತೆ ಮಾತುಗಳು ಶುರುವಾಗಿದೆ.
ಕೆಲವರಂತೂ ಮಿತಿಮೀರಿದ ಉತ್ಸಾಹದಲ್ಲಿ ಮಾಮೂಲಿ ಲವ್ ಸ್ಟೋರಿ, ಫ್ಯಾಮಿಲಿ ಸ್ಟೋರಿಗಳು ಇರೋ ಸಿನಿಮಾಗಳು ಓಡೋದೇ ಇಲ್ಲ ಅಂತ ಷರಾ ಬರೆದುಬಿಟ್ಟಿದ್ದಾರೆ. ನಿಮ್ಮಲ್ಲಿ ಅದೇ ಕಾಲೇಜ್ ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್ ಸಿನಿಮಾಗಳು ಇದ್ದರೆ ಅವನ್ನೆಲ್ಲ ಮೂಲೆಗೆ ಎತ್ತಿಡಿ ಅಂತ ಆದೇಶ ಹೊರಡಿಸಿಬಿಟ್ಟಿದ್ದಾರೆ. ಇವೆಲ್ಲ, ಇತ್ತೀಚೆಗೆ ದೊಡ್ಡ ಬಜೆಟ್ನ, ಮಿತಿ ಮೀರಿದ ಅಬ್ಬರ ಇರೋ ಸಿನಿಮಾಗಳು ಬಂದಿದ್ದರ ಸೈಡ್ ಎಫೆಕ್ಸ್ ಎನ್ನಬಹುದು. ಸಾಮಾನ್ಯ ಪ್ರೇಕ್ಷಕರು ಇಂತಹ ಚಿತ್ರಗಳ ಅಬ್ಬರ ನೋಡಿ ಹೀಗೆ ಮರುಳಾಗೋದು ಆಶ್ಚರ್ಯವೇನಲ್ಲ. ಆದರೆ ಅದು ಸತ್ಯ ಅಲ್ಲ.
ಸಿನಿಮಾರಂಗದಲ್ಲಿ ಏನೇ ಪ್ರಯೋಗಗಳಾಗಲೀ, ಎಷ್ಟೇ ಹೈ ಬಜೆಟ್ ಸಿನಿಮಾಗಳು, ಏನೇ ಸೋ ಕಾಲ್ಡ್ ‘ಕಂಟೆಂಟ್ ಬೇ’ ಸಿನಿಮಾಗಳು ಬಂದರೂ ಮಾನವೀಯತೆ ಟಚ್ ಇರೋ ಹ್ಯೂಮ್ಯಾನಿಟಿ ಓರಿಯೆಂಟೆಡ್ ಸಿನಿಮಾಗಳಿಗೆ ಎಂದಿಗೂ ಸಾವಿಲ್ಲ. ಸಿನಿಮಾ ನೋಡೋ ಸಾಮಾನ್ಯ ಪ್ರೇಕ್ಷಕ ಯಾವತ್ತೂ ಸಿನಿಮಾಗೆ ಎಷ್ಟು ದುಡ್ಡು ಹಾಕಿದ್ದೀಯಾ, ಏನೇನು ಸರ್ಕಸ್ ಮಾಡಿದ್ದೀರಾ ಅಂತ ಕೇಳಲ್ಲ, ಅವನಿಗೆ ಸಿನಿಮಾ ಇಷ್ಟ ಆದ್ರೆ ಅಷ್ಟೇ ಸಾಕು.
ಅಂದಿನ ಬಂಗಾರದ ಮನುಷ್ಯ, ನಾಗರಹಾವು ಚಿತ್ರಗಳಿಂದ ಹಿಡಿದು ನಂತರದ ನಂಜುಂಡಿ ಕಲ್ಯಾಣ, ರಾಮಾಚಾರಿ, ಯಜಮಾನ, ಜನುಮದ ಜೋಡಿ, ಮುಂಗಾರು ಮಳೆಯಂಥ ಸಿನಿಮಾಗಳನ್ನು, ಅಯ್ಯೋ, ಕಡಿಮೆ ಬಜೆಟ್ ನಲ್ಲಿ ಮಾಡಿದ್ದೀರಾ ಅಂತ ಅವನು ಯಾವತ್ತೂ ತಿರಸ್ಕಾರ ಮಾಡಿಲ್ಲ. ಇನ್ನು ಮುಂದೆಯೂ ಅದು ಹಾಗೇ ಇರುತ್ತದೆ. ಹಾಗಾಗಿ, ಅಯ್ಯೋ, ದೊಡ್ಡ ಬಜೆಟ್ ಇದ್ದೋರ ಸಿನಿಮಾಗಳು ಮಾತ್ರ ಗೆಲ್ತಾವೆ ಅಂತ ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ.
ಆದರೆ ಈಗಿನ ಪ್ರೇಕ್ಷಕರಿಗೆ ಗಂಭೀರವಾದ ಜೊತೆಗೆ ಪ್ರಾಮಾಣಿಕವಾದ ಕಂಟೆಂಟ್ ಕೊಡಬೇಕಿದೆ. ವಿಜಯ್ ಪ್ರಸಾದ್
ಅವರಂಥ ನಿರ್ದೇಶಕರು ಅದನ್ನು ಮಾಡಲು ಪ್ರಯತ್ನ ಪಡ್ತಾ ಇದ್ದರೂ ಮಿತಿಮೀರಿದ ಅಶ್ಲೀಲತೆ ಬಳಸುವ ಮೂಲಕ ತಮ್ಮನ್ನ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಅದನ್ನು ಬಿಟ್ಟು, ಪ್ರಾಮಾಣಿಕವಾಗಿ ಒಳ್ಳೆಯ ಸಿನಿಮಾ ಮಾಡುವ ಕಡೆಗೆ ಗಮನ ಕೊಟ್ಟರೆ ಇವತ್ತಿಗೂ ಸಣ್ಣ ಬಜೆಟ್ ಚಿತ್ರಗಳೂ ಕೋಟಿ ಕೋಟಿ ಬಾಚುವ ಸಾಧ್ಯತೆಗಳಂತೂ ಖಂಡಿತಾ ಇವೆ.
ಲೂಸ್ ಟಾಕ್
ರಿಷಬ್ ಶೆಟ್ಟಿ (ಕಾಲ್ಪನಿಕ ಸಂದರ್ಶನ)
ಏನ್ರೀ, ಕಾಂತಾರ ದೊಡ್ಡ ಹಿಟ್ ಆಗಿ, ನೀವು ದೊಡ್ಡ ಸ್ಟಾರ್ ಆಗಿಬಿಟ್ಟಿದ್ದೀರಾ?
-ಏನೋ, ಎಲ್ಲಾ ಅಭಿಮಾನಿ ‘ದೈವ’ರುಗಳ ಆಶೀರ್ವಾದ
ಸರಿ, ಕನ್ನಡ ಚಿತ್ರರಂಗದಲ್ಲಿ ಮಂಗಳೂರು ಕಡೆಯವರು, ತುಳು ಕಡೆಯವರ ಹಾವಳಿ ಜಾಸ್ತಿ ಆಗಿ, ಅವರವರಿಗೆ ಮಾತ್ರ ಅವಕಾಶ ಕೊಟ್ಕಂಡು ಅವರೇ ಬೆಳಿತಾರೆ. ಅಂತ ಆಪಾದನೆ ಇದೆಯಲ್ಲ?
-ಇದೆಲ್ಲ ಸುಳ್ಳು, ಅವರು ತುಳುವರು ಅಷ್ಟೇ, ತುಳಿಯುವವರು ಅಲ್ಲ ಕಣ್ರೀ. ತಳ ಮಟ್ಟದಿಂದ ಬೆಳೆದು ಬಂದವರು, ತುಳಿದು ಬದುಕೋ ತಳಿ ಅಲ್ಲ.
ಸರಿ, ರಕ್ಷಿತ್, ರಿಶಭ್, ರಾಜ್ ಶೆಟ್ಟಿಗಳು ಸೇರಿಕೊಂಡು ಆರ್ ಆರಆರ್ ಸಿನಿಮಾ ಮೀರಿಸೋ ಲೆವೆಲ್ಲಿಗೆ ಸದ್ದು ಮಾಡ್ತಾ
ಇದ್ದೀರಂತೆ?
-ಅಯ್ಯೋ, ಸುಮ್ನೆ ಇರ್ರೀ, ಹಿಂಗೆ ಹೇಳಿದ್ರೆ ಅದು ಹಾರರ್ ಸ್ಟೋರಿ ಥರ ಕೇಳಿಸುತ್ತೆ.
ಸರಿ, ಈಗ ರಾಜ್ ಬಿ ಶೆಟ್ಟಿ ಅವರ ಜೊತೆ ರಮ್ಯಾ ಕೂಡಾ ಸೇರ್ಕೊಂಡಿದ್ದಾರೆ, ಸಿನಿಮಾ ಮಾಡೋಕೆ?
-ಅದಕ್ಕೇನೀಗ, ಆರ್ಆರ್ಆರ್ ಜತೆ ಇನ್ನೊಂದ್ ಆರ್ ಅಂತನಾ? ಗೆದ್ದ ಕೋಣದ ಬಾಲ ಹಿಡಿಯೋದು ಕಾಮನ್ ಅಲ್ವೇ
ತಗಳಪ್ಪ, ಹೋಗ್ಲಿ ಬಿಡಿ, ಈಗ ನೀವು ಏನೋ ರಾಜಕೀಯವಾಗಿ ಹೇಳಿಕೆ ಕೊಟ್ರಿ ಅಂತ ನಿಮ್ಮ ಸಿನಿಮಾ ಚೆನ್ನಾಗಿಲ್ಲ ಅಂತ ಕೆಲವರು ಅಪಸ್ವರ ತೆಗೀತಾ ಇದ್ದಾರಲ್ಲ?
-ಅದಕ್ಕೇನ್ ಮಾಡೋಕಾಗುತ್ತೆ, ಅದೇನೋ ಅಂತಾರಲ್ಲ, ಚಿಂತೆ ಇಲ್ಲದವನಿಗೆ ಕಾಂತಾರ ಸಿನಿಮಾದಲ್ಲೂ ನಿದ್ದೆ ಅಂತೆ.
ನೆಟ್ ಪಿಕ್ಸ್
ಮಧ್ಯರಾತ್ರಿ ಖೇಮು ಆಟೋ ಓಡಿಸಿಕೊಂಡು ಮನೆಗೆ ಹೋಗುತ್ತಿದ್ದ. ದಾರಿಯಲ್ಲಿ ಒಬ್ಬ ಹೆಂಗಸು ನಿಂತ್ಕೊಂಡು ಕೈ ತೋರಿಸಿ ಅಡ್ಡ ಹಾಕಿದಳು. ಹೆಣ್ಣುಮಗಳು ಅಂತ ಗಾಡಿ ನಿಲ್ಲಿಸಿದ ಖೇಮು. ಅವಳ ಮುಖ ಯಾಕೋ ತಚುಂಬಾ ಗಂಭೀರವಾಗಿತ್ತು. ಅಲ್ಲದೆ, ಕಂಪ್ಲೀಟ್ ವೈಟ್ ಸೀರೆ ಹಾಕಿಕೊಂಡಿದ್ದಳು. ಮೈಮೇಲೆ ಒಂದೂ ಆಭರಣ ಇರಲಿಲ್ಲ. ಈ ರೋಡಲ್ಲಿ ದೆವ್ವಗಳ ಕಾಟ ಅಂತ ಗೊತ್ತಿದ್ರೂ ಯಾಕಪ್ಪಾ ನಿಲ್ಲಿಸಿದೆ ಅಂತ ಒಳಗೊಳಗೇ ಹೆದರಿಕೊಂಡ ಖೇಮು. ಆದರೆ ಆ ಹೆಣ್ಣು ಅಣ್ಣಾ ತುಂಬಾ ತಡ ಆಗಿದೆ ಕರ್ಕೊಂಡ್ ಹೋಗಿ ಅಂದಾಗ, ಇಲ್ಲ ಅನ್ನೋಕಾಗದೆ ಕೂರಿಸಿಕೊಂಡ. ಹಿಂದೆ ಕೂತಿರೋದು ದೆವ್ವ ಅನ್ನೋ ಭಯದ ಗಾಡಿ ಓಡಿಸುತ್ತಿದ್ದ ಖೇಮು. ತಗ್ಗು ದಿನ್ನೆ, ಹಂಪ್ಗಳ ಮೇಲೂ ಅವನಿಗೆ ಗಮನ ಇರಲಿಲ್ಲ.
ಬೇಗ ಮನೆಗೆ ತಲುಪಿದರೆ ಸಾಕು ಅಂತ ಸ್ಪೀಡಾಗಿ ಹೋಗುತ್ತಿದ್ದ ಖೇಮು. ಸ್ವಲ್ಪ ದೂರ ಹೋದ ಮೇಲೆ ಸುಮ್ಮನೆ ಅನುಮಾನದಿಂದ ಹಿಂದೆ ತಿರುಗಿ ನೋಡಿದರೆ, ಹುಡುಗಿಯ ಮುಖದಲ್ಲಿ ಒಂದಿಷ್ಟು ಕೆಂಪನೆ ಬಣ್ಣ ಕಾಣುತ್ತಿತ್ತು. ಅದು ರಕ್ತ
ಅಂತ ಗೊತ್ತಾಯಿತು ಖೇಮುಗೆ. ಮತ್ತೆ ಮುಂದೆ ಹೋಗಿ, ಮತ್ತೆ ತಿರುಗಿ ನೋಡಿದ. ಹೀಗೆ ಪ್ರತಿ ಸಾರಿ ತಿರುಗಿ ನೋಡಿದಾಗಲೂ ಆಕೆಯ ಮುಖದ ಮೇಲಿನ ರಕ್ತ ಜಾಸ್ತಿ ಆಗ್ತಾ ಬಂತು.
ಖೇಮುಗೆ ಹಾರ್ಟ್ ಅಟ್ಯಾಕ್ ಆಗೋದೊಂದ್ ಬಾಕಿ. ಕೊನೆಗೆ ಆಕೆಯ ಮುಖ ಸಂಪೂರ್ಣ ರಕ್ತ ಆಗಿದ್ದನ್ನು ನೋಡಿ, ಥಟ್ಟನೆ ಆಟೋ ನಿಲ್ಲಿಸಿ, ದಯವಿಟ್ಟು ನನ್ನ ಬಿಟ್ಟು ಬಿಡು, ನನಗೆ ಹೆಂಡ್ತಿ ಮಕ್ಳಿzರೆ. ಅಂದ. ಅದಕ್ಕೆ ಆಕೆ ಗಂಭೀರವಾಗಿ ಸ್ವಲ್ಪ ಸಿಟ್ಟಿನಿಂದಲೇ ಹೇಳಿದಳು, ‘ಅಯ್ಯೋ, ನಿನ್ ಮುಖ ಮುಚ್ಚಾ, ಅವಾಗಿಂದ ಅಷ್ಟೊಂದ್ ಸ್ಪೀಡಾಗಿ ಓಡಿಸ್ತಾ ಇದೀಯಾ. ಹಂಪ್, ತಗ್ಗು ಬಂದಾಗ ಸಡನ್ ಆಗಿ ಬ್ರೇಕ್ ಹಾಕ್ತೀಯಾ, ಪ್ರತಿ ಸಾರಿ ನೀನು ಬ್ರೇಕ್ ಹಾಕಿದಾಗಲೂ ನನ್ನ ಮುಖ ಮುಂದಿನ ಮೆಟಲ್ ಬಾರ್ಗೆ ಹೊಡೆದುಕೊಂಡು ಹಿಂಗೆ ರಕ್ತ ಬರ್ತಾ ಇದೆ. ಬೇಗ ಆಸ್ಪತ್ರೆಗೆ ಕರ್ಕೊಂಡ್ ಹೋಗು’
ಲೈನ್ ಮ್ಯಾನ್
ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಸಂಘದ ಹೆಸರು
-ಅಖಿಲ ಕರ್ನಾಟಕ ನಿಖಿಲ ಅಭಿಮಾನಿಗಳ ಸಂಘ
ಕನ್ನಡಿಗರು ವಿಶಾಲ ಹೃದಯದವರಾಗಿರೋದು ತಪ್ಪೇ
-ಯಾಕಂದ್ರೆ ಹಾರ್ಟ್ ಎನ್ ಲಾರ್ಜ್ ಆದ್ರೆ ಯಾರಿಗಾದ್ರೂ ಕಷ್ಟನೇ..
ಹೊಸದಾಗಿ ಕಿವಿಗೆ ಶ್ರವಣ ಸಾಧನ ಹಾಕಿಸಿಕೊಂಡವರಿಗೆ ಏನಂತ ಹೇಳಬೇಕು?
-ಹ್ಯಾಪಿ ನ್ಯೂ ‘ಇಯರ್’
ಲೇಡಿಸ್ ಟೈಲರ್ಗಳಿಗೆ ಒಂದು ಹೆಸರು
-‘ಹುಕ್ಕಿನ’ ಮನುಷ್ಯ
ಇನ್ನೊಬ್ಬರನ್ನ ಕನ್ವಿ ಮಾಡೋ ಕೆಲಸಕ್ಕೆ ಬಹುಮಾನ ಕೊಟ್ಟರೆ ಅದಕ್ಕೆ ಏನಂತಾರೆ?
-ಸಮಾಧಾನಕರ ಬಹುಮಾನ
ಕುಡಿದು ‘ಹೈ’ ಆಗಿರುವವರ ಹಾಡು
-‘ಇಳಿಸು’ ಬಾ, ತಾಯಿ ಇಳಿಸು ಬಾ
‘ಇಸ್ಪೀಟ್ ಕಾರ್ಡ್’ ಗಳನ್ನು ರಾಶಿ ಹಾಕಿ, ಅದರಲ್ಲಿ ಒಂದನ್ನು ಎತ್ತಿಕೋ ಅಂತ ಹೇಳೋದು
-‘ಎಲೆ’ಕ್ಷನ್
ವಯಸ್ಸಾದ ಸಕ್ಕೂಬಾಯಿಯನ್ನು ಏನಂತಾರೆ?
-‘ಸುಕ್ಕೂ’ ಬಾಯಿ
ದೇವಸ್ಥಾನದಲ್ಲಿ ಉರುಳು ಸೇವೆ ಮಾಡುವವನು
-‘ರೋಲ’ ಮಾಡೆಲ್
ಜೈಲಲ್ಲಿ ನೇಣಿಗೇರಿಸುವ ಕೆಲಸ ಮಾಡುವವನದು
-‘ಉರುಳು’ ಸೇವೆ