ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಕಳೆದ ವಾರ ಹೆಣ್ಣು ಹೆತ್ತವರು ಮದುವೆಗಾಗಿ ಕನ್ಯೆಯರು ಕಾಯುತ್ತಿದ್ದ ಅವರನ್ನು, ಅವರ ಕಡೆಯವರನ್ನು ಮೆಚ್ಚಿಸಲು ಪಡುತ್ತಿದ್ದ ಬವಣೆಗಳ ಕುರಿತು ಬರೆದಿದ್ದೆ.
ಅವು 1970-80ರ ದಿನಗಳು. ಹೆಣ್ಣಿನ ಸಂಖ್ಯೆ ಜಾಸ್ತಿ ಇತ್ತು. ಹತ್ತು ಗಂಡುಗಳಿಗೆ ಹದಿನೆಂಟು ಹೆಣ್ಣುಗಳಿದ್ದ ದಿನಗಳವು ಎನಿಸು ತ್ತದೆ. ಈಗ ಹತ್ತು ಗಂಡುಗಳು, ನಾಲ್ಕು ಹೆಣ್ಣುಗಳನ್ನು ಆರಿಸಿಕೊಳ್ಳಬೇಕಾಗಿದೆ. ಹೀಗಾಗಿ ಹೆಣ್ಣುಗಳಿಗೆ ಎಲ್ಲಿಲ್ಲದ ಡಿಮ್ಯಾಂಡು.
‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು’ ಎಂದು ಹಾಡುವುದು ಮುಗಿದುಹೋದ ಕಾಲ. ಮತ್ತೆ ಬರುವುದೋ ಇಲ್ಲವೋ ಎಂಬುದು ಕೂಡ ಭೂತಕಾಲ, ಭೂತದಂತೆ ಅಂಜಿಸುತ್ತಿರುವ ಕಾಲವೂ ಹೌದು. ನನ್ನ ಗುರುಗಳಾದ ಬೀಚಿಯವರು ಒಂದು ಕಾದಂಬರಿಯಲ್ಲಿ ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ಬೇಕಾಗುವುದು ಪ್ರಕೃತಿ ನಿಯಮ. ಆದರೆ ಹೆಣ್ಣಿಗೆ ಗಂಡುಗಳು, ಗಂಡಿಗೆ ಹೆಣ್ಣುಗಳು ಬೇಕಾಗುವುದು ಕೃತಿ ನಿಯಮ ಎಂದಿದ್ದಾರೆ. ಈಗ ನಡೆದಿರುವುದು ಇದೆ ಆಗಿದೆ.
ಯೂಟ್ಯೂಬ್, ಗೂಗಲ್ ಬಂದ ಮೇಲಂತೂ, ಪದವಿಪೂರ್ವ ಶಿಕ್ಷಣ ಇರುವಂತೆ, ವಯೋಪೂರ್ವ ಶಿಕ್ಷಣವನ್ನು ಮೀಸೆ ಮೂಡದ ಕಿರಿಯರೂ ಪಡೆಯುತ್ತಿದ್ದಾರೆ. ನಾವು ಚಿಕ್ಕವರಿದ್ದಾಗ ಹೆಣ್ಣು ಮಕ್ಕಳನ್ನು ಅಕ್ಕಾ, ಅಮ್ಮ, ತಂಗಿ, ಅವ್ವ ಎಂದೆಲ್ಲ ಸಂಭೋದಿಸು ತ್ತಿದ್ದೆವು. ಈಗೇನಿದೆ? ಪೀಸು, ಫಿಗರ್, ಮಾಲು, ಬ್ಯೂಟಿ, ಕುದುರಿ, ಡವ್ ಎಂದೆಲ್ಲ ಹದಿನೈದು ವರ್ಷ ತುಂಬದ ಪೋರರು ಎದುರು ಹಾದುಹೋಗುವ ಹುಡುಗಿಯರನ್ನು ಕೂಗುವುದು, ಗುರುತಿಸುವುದು, ಗೋಳಾಡಿಸುವುದನ್ನು ಮಾಡುತ್ತಾರೆ.
ನಾನು ಆರ್‌ಎಸ್‌ಎಸ್‌ನ ಶಾಖೆಗಳಿಗೆ ಹೋಗುತ್ತಿದ್ದಾಗ, ಅಲ್ಲಿನ ಬೌದ್ಧಿಕವೆಂಬ ಉಪನ್ಯಾಸಗಳಲ್ಲಿ, ಆರ್‌ಎಸ್‌ಎಸ್ ಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡಗೆವಾರರ ಬಗೆಗಿನ ಜೀವನ ಚರಿತ್ರೆ ಬಗ್ಗೆ ಹೇಳುವಾಗ, ಅವರು ಯುವಕರ ಬಗೆಗಿನ ಚಾರಿತ್ರ್ಯ ಶುದ್ಧಿ ಬಗ್ಗೆ ತೆಗೆದುಕೊಳ್ಳುತ್ತಿದ್ದ ಎಚ್ಚರಿಕೆಯ ಘಟನೆಯೊಂದನ್ನು ಹೇಳುತ್ತಿದ್ದರು. ಅದು ಹೀಗಿದೆ.
ಅದು ಸಂಘದ ಆರಂಭದ ದಿನಗಳು. ಅಂದರೆ 1925-26ನೇ ಇಸವಿ. ದೈಹಿಕ ಸದೃಢತೆಯ ಜತೆಜತೆಗೆ ಮಾನಸಿಕ, ವಿಶೇಷವಾಗಿ ಚಾರಿತ್ರಿಕ, ಶೀಲದ ಕುರಿತಾಗಿಯೂ ಯುವಕರಲ್ಲಿ ಜಾಗೃತಿ, ಬ್ರಹ್ಮಚರ್ಯ ಪಾಲನೆಗಳ ಬಗ್ಗೆ ನಿಷ್ಠೆ ಬೆಳೆಸಿಕೊಳ್ಳಬೇಕಾಗಿತ್ತು. ಒಬ್ಬ ಶೀಲವಂತ, ಚಾರಿತ್ರ್ಯ ಶುದ್ಧಿಯ ಯುವಕ ಮಾತ್ರ ದೇಶವನ್ನು ಗೌರವದ ಸ್ಥಾನಕ್ಕೆ ಒಯ್ಯಬಲ್ಲನೆಂಬುದು ಹೆಡಗೆವಾರರ ನಂಬಿಕೆ ಯಾಗಿತ್ತು.
ಹೀಗಾಗಿ ತನು, ಮನ, ಧನಗಳಲ್ಲೂ ಎಚ್ಚರಿಕೆಯ ಶೀಲವಂತಿಕೆ ಯುವಕರಲ್ಲಿ ತುಂಬುವುದು ಅವಶ್ಯವೆನ್ನುತ್ತಿದ್ದರು. ಹೀಗಾಗಿ ಆರ್‌ಎಸ್‌ಎಸ್ ಎಂದಿಗೂ ಹೆಣ್ಣು ಮಕ್ಕಳನ್ನು ಶಾಖೆ ನಡೆಯುವ ಸ್ಥಳಗಳಲ್ಲಾಗಲಿ, ಸಭೆ, ಸಮಾರಂಭಗಳಲ್ಲಾಗಲಿ, ತರುಣ ಶಿಬಿರ ಗಳಲ್ಲಾಗಲಿ ಬರಗೊಡುತ್ತಿರಲಿಲ್ಲ. ಹೆಣ್ಣು ಮಕ್ಕಳನ್ನು ಇಂದಿಗೂ ಮಾತೆಯರು ಎಂದೇ ಆರ್‌ಎಸ್‌ಎಸ್‌ನಲ್ಲಿ ಗೌರವ ಸೂಚಕ ವಾಗಿ ಕರೆಯಲಾಗುತ್ತದೆ.
ಸಂಘದ ಕವಾಯತುಗಳೆಲ್ಲ ಮುಗಿದ ಮೇಲೆ ಹದಿನೈದು ನಿಮಿಷಗಳ ಬೌದ್ಧಿಕ ಎಂಬ ಉಪನ್ಯಾಸ ಕಾರ್ಯಕ್ರಮವಿರುತ್ತದೆ. ಇದು ಪ್ರತಿನಿತ್ಯ ನಡೆಯುವ ಒಂದು ಗಂಟೆಯ ಶಾಖಾ ತರಗತಿಯಲ್ಲಿ ಇಂದಿಗೂ ಕಡ್ಡಾಯ. ಆ ಬೌದ್ಧಿಕಕ್ಕೆ ಬಂದಿದ್ದ ಅಥವಾ ಸಂಘದ ಒಬ್ಬ ಕಾರ್ಯಕರ್ತನೇ ಮಾತನಾಡುವಾಗ, ಕಥೆಯೊಂದನ್ನು ಹೇಳುವಾಗ, ಒಬ್ಬ ಹೆಣ್ಣು ಮಗಳ ಉದಾಹರಣೆ ತೆಗೆದು ಕೊಳ್ಳು ವಾಗ ‘ಆಗ ಆ ರಮಣಿಯು’ ಎಂದನಂತೆ. ಆ ರಮಣಿ ಎಂಬ ಮೂರಕ್ಷರಗಳ ಪದಕ್ಕೆ ಕೆಲವು ಯುವ ಸ್ವಯಂಸೇವಕರ ಮುಖದಲ್ಲಿ ಬದಲಾವಣೆ, ತುಂಟ ನಗು, ಹುಬ್ಬು ಹಾರಿಸುವಿಕೆಯನ್ನು ಗುರುತಿಸಿದ ಹೆಡಗೆವಾರರು, ಶಾಖಾ ಕಾರ್ಯಕ್ರಮ ಮುಗಿದ ಮೇಲೆ, ಬೌದ್ಧಿಕ ನೀಡಿದ ಯುವ ಸ್ವಯಂ ಸೇವಕನನ್ನು ಏಕಾಂತಕ್ಕೆ ಕರೆದು, ಆ ರಮಣಿ ಪದದ ಬದಲಿಗೆ ಅಲ್ಲಿ ದೇವತೆ ಅಥವಾ ಮಾತೆ ಎಂಬ ಶಬ್ದವನ್ನು ಇನ್ನುಮುಂದೆ ಬಳಸಬೇಕೆಂದು ಎಚ್ಚರಿಸಿದರಂತೆ, ಅದೂ ಮೃದುವಾದ ಎಚ್ಚರಿಕೆ.
ಇದು ಆರ್.ಎಸ್.ಎಸ್ ಎಂಬ ಸಂಸ್ಥೆ ಯುವಕರನ್ನು ಬೆಳೆಸುತ್ತಿದ್ದ, ತಿದ್ದುತ್ತಿದ್ದ ರೀತಿ. ರಾಷ್ಟ್ರ ಎಂಬುದು ದೇವರಿದ್ದಂತೆ. ಅದಕ್ಕೆ ದೇಹವೆಂಬ ಈ ಸುಂದರ ಹೂವನ್ನು ಕಾಮ, ಕ್ರೋಧ, ಆಸೆ, ಮೋಹಗಳೆಂಬ ದುಂಬಿಗಳು ಮುಟ್ಟಿ ಬಿಡುವುದಕ್ಕೆ ಬಿಡದೇ, ಬಾಡುವ ಮುನ್ನವೇ ಅರ್ಪಿಸಬೇಕೆಂಬುದು ಅವರ ವಿಚಾರ ನಿಷ್ಠೆ ಆಗಿತ್ತು. ಸಂಘದಲ್ಲಿ ಇಂದಿಗೂ ಬ್ರಹ್ಮಚಾರಿಗಳ ಪರಂಪರೆಯೇ ಇದೆ. ಇರಲಿ, ನಾನೀಗ ಬ್ರಹ್ಮಚರ್ಯವನೊಲ್ಲೆನೆಂಬ, ಮದುವೆಯೇ ಬೇಕೆಂಬ ಗಂಡುಗಳ ವಿಷಯಕ್ಕೆ ಬರುತ್ತೇನೆ.
ಓದು, ವಿದ್ಯೆ, ರೂಪ ಎಲ್ಲದರಲ್ಲೂ ಮುಂದಿರುವ ಇಂದಿನ ಸೀವರ್ಗ, ಗಂಡಸಿಗೆ ಎದುರಿಸಲೇಬೇಕಾದ ಒಂದು ಛಾಲೆಂಜಿಂಗ್ ಟಾಸ್ಕ್ ಆಗಿದೆ. ಕಾಲು ತೊಳೆದು ಕನ್ಯಾದಾನ ಮಾಡುತ್ತಿದ್ದ ಕಾಲ ಹೋಗಿ, ಕನ್ಯೆಯರ ಕಾಲಿಗೆ ಬಿದ್ದು, ದಾಪುಗಾಲಿಡುತ್ತಾ ಹೋಗಿ, ಅವರ ಕಾಲನ್ನೇ ಇವರು ತೊಳೆಯುವ ಕಾಲ ಬಂದಿದೆ. ಕನ್ಯೆ ನೋಡಲು ಹೋದಾಗ, ನಿನ್ನ ಹೆಸರೇನಮ್ಮಾ? ಎಲ್ಲಿಯವರೆಗೂ ಓದಿದೀಯಾ? ಅಡುಗೆ ಮಾಡಲು ಬರುತ್ತಾ? ಹಾಡು ಹೇಳು? ಎಂಬುದೆಲ್ಲಾ ಕನಸ್ಸಿನಂತಾಗಿ, ಏನೂ ಬರದಿದ್ರೂ ಪರವಾಗಿಲ್ಲಮ್ಮ, ನನ್ನ ಮಗ ನಿನ್ನ ಚೆನ್ನಾಗಿ ನೋಡ್ಕೋತಾನೆ, ನಾವು ನಿನ್ನ ಚೆನ್ನಾಗಿ ನೋಡ್ಕೋತಿವಮ್ಮಾ, ನಿನ್ನ ದಮ್ಮಯ್ಯ, ನಮ್ಮ ಹುಡುಗನ್ನ ಒಪ್ಕೋಳಮ್ಮ ಎಂದು ಕೈ ಮುಗಿಯುವ ಕಾಲ ಬಂದು ಬಿಟ್ಟಿದೆ.
ಊರಿಗೆ ಹೋಗಿ ತಿಳಿಸುತ್ತೇವೆ ಎನ್ನುವುದು ಹೋಗಿ, ನಿನಗೂ ಒಪ್ಪಿಗೆ ಆಗಿದಿಯೇನಮ್ಮ? ಮತ್ಯಾವ ಗಂಡೂ ನೋಡಬೇಡಿ, ನಮ್ಮ
ಹುಡುಗನ ಮಾನ, ಪ್ರಾಣ, ಉದ್ಯೋಗ ಎಲ್ಲ ನಿನ್ನ ಕೈಲಿ ಇದೆಯಮ್ಮಾ ಎಂದು ಗೋಗರೆಯುವ ಕಾಲ ಬಂದು ಬಹಳ ದಿನಗಳಾ ದವು. ಕೆಲವು ಹೆಣ್ಣುಗಳಂತೂ ಗಂಡಿನ ಮುಖಕ್ಕೆ ಹೊಡೆದ ಹಾಗೆ ಉತ್ತರಿಸುತ್ತಿದ್ದಾರೆ. ಆತನನ್ನೆ ಪ್ರಶ್ನೆ ಮಾಡುತ್ತಿದ್ದಾರೆ. ಗಂಡೇನಾ ದರೂ ತಲೆತಿರುಕನಂತೆ ಮಾತನಾಡಿದರೆ, ದರ್ಪ ತೋರಿದರೆ, ಓ.. ಮ್ಯಾನ್ ಗೆಟ್ ಲಾಸ್ಟ್ ಎನ್ನುತ್ತಿದ್ದಾರೆ ಕೂಡಾ.
ಕೆಲವು ಹೆಣ್ಣುಗಳಂತೂ ತಮ್ಮನ್ನು ಗಂಡು ನೋಡಲು ಬಂದಾಗ ಧರ್ಮ, ಶೋಷಣೆ, ಕಾನೂನುಗಳ ಬಗ್ಗೆ ಮೈಕು ಇಲ್ಲದೇ, ಮೇಜು ಗುದ್ದದೆ, ಕಂಪ್ಲೀಟ್ ನಲವತ್ತೆದು ನಿಮಿಷದ ಒಂದು ಗಂಟೆಯ ಕ್ಲಾಸ್ ಅಥವಾ ಭಾಷಣವನ್ನೇ ಮಾಡುತ್ತಿದ್ದಾರೆ. ನನ್ನ ಪರಿಚಯದ ಒಂದು ಹುಡುಗಿ ಒಬ್ಬಳಿದ್ದಾಳೆ. ಅವಳನ್ನು ಎಂಟು ವರ್ಷದವಳಿದ್ದಾಗಿನಿಂದ ನೋಡುತ್ತಿದ್ದೇನೆ. ಈಗವಳಿಗೆ ಇಪ್ಪತ್ತೆ ದು ದಾಟಿದೆ. ಆಕೆ ಎಂಟು ವರ್ಷದವಳಿದ್ದಾಗಲೇ ಯಾರಾದರೂ ಮಾತನಾಡಿಸಿದರೆ ನಾಚಿಕೊಳ್ಳುತ್ತಿದ್ದಳು.
ಪ್ರೀತಿಗೆ ಕೈಡಿದು ಭುಜ ಮುಟ್ಟಿ ಮಾತನಾಡಿಸಿದರೆ ದೂರ ಹೋಗಿ ಹೊಟ್ಟೆ ಮುಟ್ಟಿ ನೋಡಿಕೊಳ್ಳುತ್ತಿದ್ದಳು ಆ ಅಮಾಯಕ ಹುಡುಗಿ. ಮುಂದೆ ಗಂಡಸು ಹೋಗುತ್ತಿದ್ದರೆ, ಅವನು ಓಣಿ ತಿರುಗಿದ ಮೇಲೆ ಆ ದಾರಿಯಲ್ಲಿ ಹೋಗುತ್ತಿದ್ದಳು ಅಥವಾ ಅವನ ಹೆಜ್ಜೆ ಗುರುತುಗಳು ದಾರಿಯ ಧೂಳಿನಲ್ಲಿ ಅಳಿಸಿದ ಮೇಲೆ, ಆ ದಾರಿಯಲ್ಲಿ ಹೋಗುತ್ತಿದ್ದ ಹುಡುಗಿ, ಈಗ ಗಂಡಸಿನ ಎದುರೇ ನಿಂತು, ಅವನು ತಲೆತಗ್ಗಿಸಿದರೆ, ಹತ್ತಿರ ಹೋಗಿ ತೋರುಬೆರಳಿಂದ ಅವನ ಗದ್ದ ಹಿಡಿದೆತ್ತಿ, ‘ಏ.. ಮ್ಯಾನ್, ಲುಕ್ ಎಟ್ ಮಿ,
ಆಂಡ್ ಟಾಕ್’ ಎನ್ನುತ್ತಿದ್ದಾಳೆ.
ಆ ಹುಡುಗಿ ತುಂಬಾ ದಿನಗಳ ಮೇಲೆ ಇತ್ತೀಚೆಗೆ ನನ್ನ ಭೇಟಿಗೆ ಬಂದಿದ್ದಳು. ಎರಡು ಕಣ್ಣುಗಳನ್ನು ಬಿಟ್ಟರೆ, ಉಳಿದೆಲ್ಲ ವನ್ನೂ
ಬಗೆಬಗೆಯ ಬಟ್ಟೆಗಳಿಂದ ಬಿಗಿಯಾಗಿ ಸುತ್ತಿಕೊಂಡಿದ್ದಳು. ಫುಲ್ ಬ್ಯಾಂಡೇಜ್ ಆದ ರೋಗಿಯಂತೆ, ಈಜಿಪ್ಟ್‌ನ ಮಮ್ಮಿಯಂತೆ ಕಾಣುತ್ತಿದ್ದಳು. ಯಾರಮ್ಮ ನೀನು? ಎಂದು ಕೇಳಿದ್ದಕ್ಕೆ ಬಾಯಿ ಮೇಲಿನ ಬಟ್ಟೆ, ಆ ಬಟ್ಟೆಯ ಮೇಲಿನ ಮಾಸ್ಕ್ ಸರಿಸಿ, ನಾನು ಅಂಕಲ್ ಎಂದು ಹೆಸರು ಹೇಳಿದಳು.
ನಲವತ್ತು ಡಿಗ್ರಿಯ ಬಿಸಿಲಲ್ಲಿ, ಕನಿಷ್ಠ ಮೈಮೇಲೆ ನಲವತ್ತು ಮೀಟರ್ ಬಗೆಬಗೆಯ ಬಟ್ಟೆ ಸುತ್ತಿಕೊಂಡಿದ್ದಳು. ಕಿಡ್ಸ್‌ಕ್ಯಾಂಪ್‌ಗಳ ಮುಂದೆ ಮಕ್ಕಳ ಸ್ವಾಗತಕ್ಕೆ ಗೊಂಬೆಗಳಿರುವುದಿಲ್ಲವೇ? ಹಾಗೆ ಕಾಣುತ್ತಿದ್ದಳು. ಉಭಯ ಕುಶಲೋಪರಿಗಳೆಲ್ಲ ಅಸ್ಪಷ್ಟ, ಅಂದರೆ
ಬಟ್ಟೆಯ ಹಿಂದಿನ ಬಾಯಿಂದಲೇ ಆದವು. ‘ಎಷ್ಟು ಸುತ್ತಿಕೊಂಡಿ ಯಮ್ಮ ಬಟ್ಟೆಗಳನ್ನ, ಮುಖ, ತಲೆ ಮೇಲಿನ ಬಟ್ಟೆಗಳಾದರೂ ತೆಗಿ, ಸೆಖೆಯಾಗುವುದಿಲ್ಲವೇ? ಎಂಥ ಬಿಸಿಲಿದೆ ಎಂದೆ, ಶುರುವಾಯಿತು. ಅವಳ ದಬದಭೆಯಂತಹ ವಾಗ್ಬಾಣಗಳು. ನೋ.. ನೋ.. ಅಂಕಲ್, ನಾನು ಗಂಡಸಿನ ಮುಂದೆ ಹೀಗೆ ಇರ್ತಿನಿ.
ನೀವಾದ್ರೂ ಸರಿ, ನಮ್ಮ ತಂದೆಯಾದ್ರೂ ಸರಿ ಎಂದಳು. ‘ಯಾಕಮ್ಮ’ ಎಂದೆ. ಗಂಡು ಎಂದರೆ ಕಾಮ ಪಿಶಾಚಿ ಅಂಕಲ್, ಹೆಣ್ಣಿನ ಪ್ರತಿಯೊಂದು ಭಾಗವೂ ಅವನ ಆಸೆಗಳನ್ನು ಕೆರಳಿಸುತ್ತದೆ. ಹಣೆಯ ಕುಂಕುಮವನ್ನೂ ಕೂಡಾ ಅವನು ಕಾಯಿಸಬಲ್ಲ.
ಪುರುಷನೆಂದರೆ ಬೆಂಕಿ, ನಾವು ಸೀಯರು ಬೆಣ್ಣೆಯಿದ್ದಂತೆ ಎಂದು ತಿಳಿದಿದ್ದಾನೆ ಅವನು. ಇಂದಿನ ಬಲಾತ್ಕಾರ, ಕೊಲೆ, ಸುಲಿಗೆ ಗಳೆಲ್ಲ ಅವನ ತೃಷೆಗಳಿಂದಾಗಿಯೇ ಹೆಣ್ಣೆಂದರೆ ಅವನ ಭೋಗವಸ್ತುವಲ್ಲ, ನಮಗೂ ಧ್ಯೇಯ, ಆದರ್ಶ ಗಳಿವೆ, ಗಂಡಸಿನ ಮಿದುಳಿನ ತೂಕ, ಗಾತ್ರಕ್ಕಿಂತ ಹೆಂಗಸಿನ ಮಿದುಳಿನ ತೂಕ, ಗಾತ್ರಗಳು ಹೆಚ್ಚಿವೆ.
ನಾವು ಅವನ ಭೋಗವಸ್ತುವಲ್ಲ. ಅವನಿಗೆ ಅನ್ನ ಮಾಡುವ ಆಳುಗಳಲ್ಲ. ಅವನ ಮಕ್ಕಳನ್ನು ಹೊತ್ತು ತಿರುಗುವ ವಾಹನಗಳಲ್ಲ. ಗಂಡು ಜಾತಿಯನ್ನು ಮೆಟ್ಟಿ, ಮೆಟ್ಟಿನಿಂದ ನಿಂತು ಹೊಡೆಯಬಲ್ಲ ಶಕ್ತಿಯಿದೆ ನನಗೆ ಎಂದಳು. ನನಗೆ ಗಾಬರಿಯಾಯಿತು. ಮದುವೆ ತಡವಾದುದಕ್ಕೋ ಏನೋ ಈ ಹುಡುಗಿಗೆ ಬುದ್ಧಿ ಸ್ಥಿಮಿತ ತಪ್ಪಿದೆ ಎನಿಸಿತು. ಇವೆಲ್ಲ ಮಾತು, ಭಾಷಣಕ್ಕೆ ಚೆಂದ ಮಗಳೆ, ಒಳ್ಳೆ ಗಂಡು ಸಿಕ್ಕರೆ ಹೇಳುತ್ತೇನೆ, ಮದುವೆಯಾದರೆ ಎಲ್ಲಾ ಸರಿಹೋಗುತ್ತದೆ.
ದೇವರಂಥಾ ಗಂಡಸರೂ ಇದ್ದಾರಮ್ಮ ಎಂದೆ. ತಕ್ಷಣ ಬಂದಿದ್ದವು ಅಂಕಲ್ ಗಂಡುಗಳು, ಇನ್ನೂ ಬರುತ್ತಲೇ ಇವೆ. ಬಂದವರಿಗೆಲ್ಲ ನೀರಿಳಿಸಿ ಕಳಿಸಿದ್ದೇನೆ, ಸಾಫ್ಟ್ವೇರ್‌ಗಳಂತೆ, ಅಮೆರಿಕಾದಲ್ಲಿದ್ದಾರಂತೆ, ದೊಡ್ಡ ಮನೆತನವಂತೆ, ಒಬ್ಬನೇ ಮಗನಂತೆ, ಮಿಲಿಯನ್ ಗಟ್ಟಲೇ ಆಸ್ತಿಯಂತೆ, ಏನೇನೋ ಕೊಚ್ಚಿಕೊಂಡವು. ನಾನು ಒಂದೇ ಪ್ರಶ್ನೆ ಕೇಳಿದೆ. ಮದುವೆಯೇ ಆಗಬೇಕೆಂಬ ನಿನ್ನ ಉದ್ದೇಶವೇ
ನನಗೆ ಹಿಡಿಸುತ್ತಿಲ್ಲ, ಹೇಳು ನೀನೇಕೆ ಮದುವೆ ಆಗಬೇಕೆನ್ನುವೇ? ಎಂದೆ. ಅವನು ಬ್ಬೆ..ಬ್ಬೆ..ಬ್ಬೆ ಎನ್ನುತ್ತಾ, ‘ನಿನ್ನ ರೂಪ ಮೆಚ್ಚಿದ್ದೇನೆ’ ಎಂದ ಹುಚ್ಚ. ‘ಈ ರೂಪ ಎರಡು – ಮೂರು ವರ್ಷದ ಮೇಲೆ ಇರುವುದಿಲ್ಲ, ಆಗ ನನ್ನನ್ನು ಬಿಟ್ಟು ಬಿಡುತ್ತಿಯಾ? ಎಂದೆ, ‘ಇಲ್ಲ’ ಎಂದ.
ಆಗ ನನ್ನ ಮಕ್ಕಳಿಗೆ ತಾಯಿ ಆಗಿರುತ್ತಿ, ನಮ್ಮ ತಂದೆ – ತಾಯಿಗೆ ಮೆಚ್ಚಿನ ಸೊಸೆಯಾಗಿರುತ್ತಿ ಎಂದ. ಆಗ ನಾನು ನನ್ನದೆಂಬುದು ಏನೂ ಉಳಿಸಿಕೊಳ್ಳದೇ ತಾಯಿ, ಸೊಸೆ ಆಗಲು ನಾನು ಹುಟ್ಟಿದ್ದೇನೆಂದು ಭಾವಿಸಿದೆಯಾ? ನೆವರ್ ಎಂದೆ. ‘ನೀನೇನು ಆಗಬೇಕೆನ್ನು ಹೇಳು, ನಾನು ಸಹಕರಿಸುತ್ತೇನೆ, ನನಗೆ ನೀನು ಜತೆ ಇರಬೇಕಷ್ಟೆ ಎಂದ. ಆಗ ನಾನೆಂದೆ, ‘ಬರೀ ಜತೆಗಿರಲು ನಾನೇ ಏಕೆ ಬೇಕು? ನಿನಗೆ ನಾನು ಬೇಕಿಲ್ಲ, ನನ್ನ ಈ ಯೌವ್ವನ ಬೇಕು, ನನ್ನ ಧ್ಯೇಯ, ಗುರಿ, ತತ್ವಗಳು ಬೇಕಿಲ್ಲ, ಅಲ್ಲವೇ? ಎಂದೆ.
ಅವನು ಹೇಳಿ ಮೇಡಂ ನಿಮ್ಮ ತತ್ವ, ಧ್ಯೇಯ, ಗುರಿಗಳೇನು ನಾನೂ ಅವುಗಳಿಗೆ ಸ್ಪಂದಿಸುವೆ ಎಂದ. ನಾನು ನನ್ನ ತತ್ವ, ಗುರಿ, ಧ್ಯೇಯಗಳಿಗೆ ಸ್ಪಂದಿಸಲು ನೀನು ಯಾರೋ? ನಿನಗೆ ನಿನ್ನದೇ ಆದ ಗುರಿ, ತತ್ವಗಳೇ ಇಲ್ಲ ಎಂದ ಹಾಗಾಯಿತು. ನನಗೆ ನನ್ನ ಗುರಿ ಮುಟ್ಟಲು ಯಾರ ಸಹಾಯವೂ ಬೇಕಿಲ್ಲ. ಅವನ್ನು ನಾನು ಸಾಧಿಸಬೇಕಾಗಿದೆ. ಎಂದೆ. ‘ಅವನು ಪೆಚ್ಚಾಗಿ ಮತ್ತೆ ನಾನೇನು ಮಾಡಲಿ ಈಗ? ಎಂದು ಅಲವತ್ತುಕೊಂಡ, ನಾನು ಎದ್ದುಹೋಗು’ ಎಂದೆ. ಅವನು ಓಡಿಯೇ ಹೋದ.
ಈ ಹುಡುಗಿಯ ಮುಂದೆ ಕೂರಲು ನನಗೇ ಭಯವೆನಿಸಲಾರಂಭಿಸಿತು. ‘ನಿನ್ನ ಮುಂದಿನ ಗುರಿ ಏನಮ್ಮಾ?’ ಎಂದೆ. ‘ನಿಮ್ಮ ಜತೆ ನನ್ನನ್ನೂ ಭಾಷಣಕ್ಕೆ ಕರೆದುಕೊಂಡು ಹೋಗಿ ಅಂಕಲ್, ಜಡ್ಡುಗಟ್ಟಿರೋ ಈ ಸಮಾಜವನ್ನು, ಕೊಬ್ಬಿರುವ ಈ ಪುರುಷರನ್ನು ಮಟ್ಟ ಹಾಕುವ ವಿಚಾರಗಳು ನನ್ನಲ್ಲಿವೆ. ಆದರೆ ನೀವು ಕರೆದೊಯ್ಯುವುದಿಲ್ಲ ಅಂಕಲ್, ಏಕೆಂದರೆ, ನನ್ನ ಒಂದು ಭಾಷಣ ಕೇಳಿದರೆ, ಜನ ನಿಮ್ಮನ್ನು ಕರೆಸುವುದಿಲ್ಲ. ನಿಮಗೆ ಬೇಡಿಕೆ ಕುಂದುತ್ತದೆ ಎಂಬ ಭಯ ನಿಮಗಿದೆ. ಏಕೆಂದರೆ, ನೀವೂ ಈ ಕೊಬ್ಬಿರುವ ಗಂಡು ಜಾತಿಯೇ ತಾನೆ? ಎಂದು ಗಹಗಸಿ ನಕ್ಕಳು’ ನಿನಗ್ಯಾವದಾದರೂ ಪುಸ್ತಕ ಬೇಕಿದ್ದರೆ ಹೇಳಮ್ಮಾ ಕೊಡುತ್ತೇನೆ ಎಂದು ನನ್ನ ಲೈಬ್ರರಿಯ ಕಪಾಟುಗಳ ಬಾಗಿಲು ತೆರೆದು ನಿಂತೆ, ಅದಕ್ಕವಳು ಮತ್ತೆ ಲನ್ ನಗೆ ನಕ್ಕು ‘ಇವೆಲ್ಲ ಓದಿದರೆ ನಾನು
ಪುಸ್ತಕ ಬರೆದವರ ವಿಚಾರಗಳನ್ನು ಹೇಳುವವಳಾಗುತ್ತೇನೆ ನಿಮ್ಮಂತೆ.
ನನ್ನ ವಿಚಾರಗಳನ್ನು ಹೇಳಲು ಹುಟ್ಟಿರುವವಳು ನಾನು ಎಂದು ಹೊರಡಲು ಅನುವಾದಳು. ಕ್ರೈ ಡೈರಿ, ವಾರೆಂಟ್, ಆಪ್ ಕೀ ಅದಾಲತ್, ಸಿ.ಐ.ಡಿ ಧಾರಾವಾಹಿಗಳನ್ನು ಹೆಚ್ಚು ನೋಡುತ್ತಾಳೆ ಎನಿಸಿ, ಹೀಗೂ ಉಂಟೆ? ಎಂದುಕೊಂಡೆ. ಹಾಗೆಯೇ ‘ಹೀಗೂ ಉಂಟೆ’ ಕಾರ್ಯಕ್ರಮದ ನಿರೂಪಕ ನಾರಾಯಣಸ್ವಾಮಿಗೆ ಈ ಹುಡುಗಿಯ ವಿಳಾಸ ಕೊಡಬೇಕೆಂದುಕೊಂಡೆ. ಏಕೆಂದರೆ ಇಂತಹ ಹುಡುಗಿಯರು ಈಗೀಗ ಹೀಗೂ ಉಂಟೆ ಹುಡುಗಿಯರು ಎನ್ನುವ ಸಾಲಿಗೆ ಸೇರುತ್ತಿದ್ದಾರೆ.