Sunday, 15th December 2024

ಲಕ್ಷದ್ವೀಪ ಮೇಲೋ, ಮಾಲ್ಡೀವ್ಸ್ ಮೇಲೋ ?

ಶಶಾಂಕಣ

shashidhara.halady@gmail.com

ತನ್ನ ಪಾಡಿಗೆ ತಣ್ಣನೆ ಮಲಗಿದ್ದ ಪುಟ್ಟ ಮೀನುಗಾರಿಕಾ ಗ್ರಾಮ ಎನಿಸಿರುವ ಮರವಂತೆ ಒಮ್ಮೆಗೇ ಸುದ್ದಿಯಲ್ಲಿದೆ! ಮರವಂತೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಒಂದು ಪಕ್ಕದಲ್ಲಿ ಸಮುದ್ರ, ಇನ್ನೊಂದು ಪಕ್ಕದಲ್ಲಿ ಸೌಪರ್ಣಿಕಾ ನದಿಯ ದೃಶ್ಯವು ಬಹು ಸುಂದರ. ಆ ನದಿಯ ನಡುವೆ ಇರುವ ದ್ವೀಪಗಳ ಬದುಕು ಮಧುರ, ಅಲ್ಲೆಲ್ಲಾ ಹರಡಿರುವ ತೆಂಗಿನ ತೋಟವು ಆಪ್ತ ಅನುಭವ ನೀಡುತ್ತದೆ.

ಮರವಂತೆಯಿಂದ ಸ್ವಲ್ಪ ದೂರವಿರುವ ಕಾಂಡ್ಲ ಕಾಡಿನ ನಡುವೆ ದೋಣಿಯಲ್ಲಿ ಸಾಗುವ ಅನುಭವವೇ ಅನನ್ಯ- ಹೀಗೆ ನಾನಾ ರೀತಿಯಲ್ಲಿ ಮರ
ವಂತೆಯ ಪ್ರಾಕೃತಿಕ ಸೌಂದರ್ಯವನ್ನು ಹೊಗಳುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ. ಮರವಂತೆ ಮಾತ್ರವಲ್ಲ, ಮುರುಡೇಶ್ವರ, ಕಾಪು, ಪಣಂಬೂರು ಮೊದಲಾದ ಸಮುದ್ರತೀರಗಳು ಬಹು ಸುಂದರ ಎಂದು, ಒಮ್ಮೆಗೇ ನೆನಪಿಸಿಕೊಂಡವರಂತೆ ಹಲವರು ಚಿತ್ರ
ಗಳನ್ನು ಹಂಚಿಕೊಳ್ಳುತ್ತಿದ್ದಾರೆ!

ಇದಕ್ಕೂ ನಾಲ್ಕಾರು ದಿನಗಳ ಮುಂಚೆ ಮುನ್ನೆಲೆಗೆ ಬಂದದ್ದು ಲಕ್ಷದ್ವೀಪಗಳ ಸೌಂದರ್ಯ! ಕೊಚ್ಚಿಯಿಂದ ಸುಮಾರು ೩೦೦ ಕಿ.ಮೀ.ದೂರದಲ್ಲಿರುವ
ಆ ಸುಂದರ ದ್ವೀಪಸಮೂಹವು ಪ್ರವಾಸಿಗರ ನೆಚ್ಚಿನ ತಾಣವಾಗಬಲ್ಲದು ಎಂಬಂಥ ಹಲವು ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
ಒಂದೆರಡು ವರ್ಷಗಳಿಗೂ ಮುಂಚೆ ಲಕ್ಷದ್ವೀಪವನ್ನು ಸಂದರ್ಶಿಸಿದ ಕೆಲವರು ಪೋಸ್ಟ್ ಮಾಡಿದ್ದ ವಿಡಿಯೋಗಳನ್ನು ಕಳೆದ ಒಂದೆರಡು ವಾರಗಳಲ್ಲಿ
ಲಕ್ಷಾಂತರ ಜನ ನೋಡಿದರು! ಇದಕ್ಕೆ ಕಾರಣ, ಪ್ರಧಾನ ಮಂತ್ರಿಯವರು ಲಕ್ಷದ್ವೀಪದ ಬೀಚ್‌ನಲ್ಲಿ ಓಡಾಡಿದ, ಅಲ್ಲಿನ ಸಮುದ್ರದಲ್ಲಿ ಸ್ಕ್ಯೂಬಾ
ಡೈವಿಂಗ್ ಮಾಡಿದ ಚಿತ್ರಗಳು ಪ್ರಚಾರಗೊಂಡದ್ದು.

ಅದಕ್ಕೆ ಪ್ರತಿಯಾಗಿ, ಅದೇಕೋ ಮಾಲ್ಡೀವ್ಸ್‌ನ ಕೆಲವು ತಿಳಿಗೇಡಿ ರಾಜಕಾರಣಿಗಳು, ಲಕ್ಷದ್ವೀಪವನ್ನು ಟೀಕಿಸುವ ಅರ್ಥದ ಹೇಳಿಕೆ ನೀಡಿ, ಈ ವಿದ್ಯ ಮಾನಕ್ಕೆ ಇನ್ನಷ್ಟು ಪ್ರಚಾರವನ್ನು ಕಲ್ಪಿಸಿದರು! ಇದಕ್ಕೆ ಪ್ರತಿಯಾಗಿ ಲಕ್ಷದ್ವೀಪದ ದಿಕ್ಕಿನಲ್ಲೇ, ಇನ್ನೂ ೪೦೦ ಕಿ.ಮೀ. ಸಾಗಿದರೆ ದೊರೆಯುವ ಮಾಲ್ಡೀವ್ಸ್ ದೇಶದ ಪ್ರವಾಸೋದ್ಯಮಕ್ಕೆ ಸರಿಸಮನಾದ ಪ್ರವಾಸೋದ್ಯಮವನ್ನು ಲಕ್ಷದ್ವೀಪದಲ್ಲೂ ಮಾಡಬಹುದು ಎಂಬ, ತುಸು ಅತಿರಂಜಿತ ಪ್ರಚಾರವೂ ಮಾಧ್ಯಮಗಳಲ್ಲಿ ಪ್ರಕಟಗೊಂಡಿತು!

ಇದರಿಂದಾಗಿ ಬೀಚ್, ಪ್ರವಾಸ, ಸ್ಕ್ಯೂಬಾ ಡೈವಿಂಗ್, ರೆಸಾರ್ಟ್, ಲಕ್ಷ ದ್ವೀಪ, ಮಾಲ್ಡೀವ್ಸ್ ಇವುಗಳ ಚರ್ಚೆ ಸಾಕಷ್ಟು ನಡೆದು, ಲಕ್ಷಾಂತರ ಜನಸಾಮಾನ್ಯ ರಿಗೆ ಲಕ್ಷದ್ವೀಪದ ಕುರಿತು ಒಮ್ಮೆಗೇ ಅಪಾರ ಕಾಳಜಿ ಉಕ್ಕಿದ್ದಂತೂ ನಿಜ! ನಮ್ಮ ದೇಶದವರೆಲ್ಲರಿಗೂ ಲಕ್ಷದ್ವೀಪದ ಹೆಸರು ಚಿರಪರಿಚಿತ; ಅದೇ ರೀತಿ ಅಂಡಮಾನ್, ನಿಕೊಬಾರ್ ದ್ವೀಪಗಳ ಹೆಸರು ಸಹ. ಏಕೆಂದರೆ, ಪ್ರಾಥಮಿಕ ಪಠ್ಯಗಳಲ್ಲಿ ಈ ದ್ವೀಪಗಳ ಹೆಸರು ಪದೇ ಪದೆ ಮರುಕಳಿಸಿ, ಆ ಕುರಿತು ಪರೀಕ್ಷಾ ಪ್ರಶ್ನೆಗಳೂ ಇರುವುದರಿಂದ, ಲಕ್ಷದ್ವೀಪ ಎಂದರೆ ಎಲ್ಲರಿಗೂ ಒಂದು ರೀತಿಯ ಕೌತುಕ, ಕುತೂಹಲ.

ನಮ್ಮ ದೇಶದ ಸಮುದ್ರದ ಒಂದು ದಿಕ್ಕಿನಲ್ಲಿ ಅಂಡಮಾನ್ ನಿಕೊಬಾರ್ ದ್ವೀಪಗಳಿದ್ದರೆ, ಇನ್ನೊಂದು ದಿಕ್ಕಿನಲ್ಲಿ ಲಕ್ಷದ್ವೀಪಗಳಿವೆ. ಹಾಗೆ ನೋಡಿದರೆ, ಅಂಡಮಾನ್ ದ್ವೀಪಸಮೂಹಕ್ಕಿಂತ, ಲಕ್ಷದ್ವೀಪಕ್ಕೆ ಪುರಾತನ ಇತಿಹಾಸವಿದೆ; ಬ್ರಿಟಿಷರು ಅಂಡಮಾನ್‌ನಲ್ಲಿ ಕುಪ್ರಸಿದ್ಧ ಜೈಲನ್ನು ಸ್ಥಾಪಿಸಿ, ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿದ್ದರಿಂದಾಗಿ ಅಂಡಮಾನ್ ದ್ವೀಪ ಸಮೂಹ ಪ್ರಸಿದ್ಧವಾಯಿತು. ಜತೆಗೆ, ಅಂಡಮಾನ್ ಮತ್ತು ನಿಕೊಬಾರ್ ದ್ವೀಪ ಸಮೂಹದಲ್ಲಿ ದಟ್ಟವಾದ ಕಾಡು, ಅತ್ಯುತ್ತಮ ಸಮುದ್ರ ತೀರಗಳು, ನಾನಾ ರೀತಿಯ ಜಲಚರಗಳು, ವೈವಿಧ್ಯಮಯ ಹಳ್ಳಿಗಳು ಇರುವುದರಿಂದ, ಪ್ರವಾಸೋದ್ಯಮದ ದೃಷ್ಟಿಯಲ್ಲೂ ಈಚಿನ ವರ್ಷಗಳಲ್ಲಿ ಅಂಡಮಾನ್ ದ್ವೀಪಗಳು ಪ್ರವರ್ಧಮಾನಕ್ಕೆ ಬಂದವು.

ಇತ್ತ, ಲಕ್ಷದ್ವೀಪಗಳು ತುಸು ಅಲಕ್ಷ್ಯಕ್ಕೆ ಒಳಗಾಗಿದ್ದಂತೂ ನಿಜ. ಅದಕ್ಕೆ ಕಾರಣಗಳನ್ನೂ ಹುಡುಕಬಹುದು. ನಮ್ಮ ದೇಶದ ವೈಶಾಲ್ಯಕ್ಕೆ ಹೋಲಿಸಿದರೆ,
ಅಷ್ಟೇಕೆ, ಅಲ್ಲೇ ಪಕ್ಕದಲ್ಲಿರುವ (೩೫೦ ಕಿ.ಮೀ.) ಮಾಲ್ಡೀವ್ಸ್ ದೇಶಕ್ಕೆ ಹೋಲಿಸಿದರೆ, ಲಕ್ಷದ್ವೀಪದ ಕೇಂದ್ರಾಡಳಿತ ಪ್ರದೇಶವು ತೀರಾ ಚಿಕ್ಕದೆನಿಸುವ ಭೂ ಪ್ರದೇಶ. ಕೇವಲ ೩೬ ದ್ವೀಪಗಳನ್ನು ಹೊಂದಿರುವ ಲಕ್ಷದ್ವೀಪವು, ಕೇರಳದಿಂದ ಕೇವಲ ೨೦೦ ಪ್ಲಸ್ ಕಿ.ಮೀ. ದೂರದಲ್ಲಿದ್ದರೂ, ನಡುನೀರಿನಲ್ಲಿರುವುದ
ರಿಂದಾಗಿ ತುಸು ಹೊರಗಿನ ಪ್ರದೇಶವೇ ಎನ್ನ ಬಹುದು. ಆದರೆ ರಕ್ಷಣಾ ದೃಷ್ಟಿಯಿಂದ ಬಹಳ ಪ್ರಮುಖ. ಹೆಸರು ಲಕ್ಷ ದ್ವೀಪ ಎಂದಿದ್ದರೂ, ಗಾತ್ರ ಚಿಕ್ಕದು; ಜನಸಂಖ್ಯೆ ೬೪,೦೦೦. ವಿಸ್ತೀರ್ಣ ೩೨.೬೨ ಚದರ ಕಿ.ಮೀ. ಹತ್ತು ದ್ವೀಪಗಳಲ್ಲಿ ಮಾತ್ರ ಜನ ವಸತಿ; ಉಳಿದೆಲ್ಲ ದ್ವೀಪಗಳು ನಿರ್ಜನ. ಒಂಬತ್ತು ದ್ವೀಪ ಗಳಲ್ಲಿನ ಜನರ ಮಾತು ಜೆಸೇರಿ (ಅರಬ್ಬಿ ಮಲ ಯಾಳಂ). ದಕ್ಷಿಣ ತುದಿಯ ಮಿನಿಕಾಯ್ ದ್ವೀಪ ದಲ್ಲಿನ ಜನರ ಮಾತು ಽವೇಹಿ.

ವಿಶೇಷವೆಂದರೆ, ಪಕ್ಕದ ಮಾಲ್ಡೀವ್ಸ್ ದ್ವೀಪದ ಅಧಿಕೃತ ಭಾಷೆಯಾದ ಽವೇಹಿಯು, ನಮ್ಮ ದೇಶದ ಮಿನಿಕಾಯ್ ದ್ವೀಪದ ಸುಮಾರು ೧೦,೦೦೦ ಜನರ ಮಾತೃಭಾಷೆ! ಲಕ್ಷದ್ವೀಪದ ಅಭಿವೃದ್ಧಿ, ಅಲ್ಲಿನ ಬೀಚ್‌ಗಳಲ್ಲಿ ಪ್ರವಾಸ ಮೊದಲಾದ ವಿಚಾರದ ಕುರಿತು ಚರ್ಚಿಸುವಾಗ, ಒಂದು ಕುತೂಹಲಕಾರಿ ವಿಷಯ ಗಮನಕ್ಕೆ ಬರುತ್ತದೆ. ಲಕ್ಷದ್ವೀಪದ ಭಾಗಗಳು ಒಂದು ಕಾಲ ದಲ್ಲಿ ಮೈಸೂರು ರಾಜ್ಯದ ಭಾಗಗಳಾಗಿದ್ದವು! ೧೬ನೇ ಶತಮಾನದಲ್ಲಿ ಕಣ್ಣಾನೂರು ರಾಜ್ಯಕ್ಕೆ ಸೇರಿದ್ದ ಕೆಲವು ದ್ವೀಪಗಳು, ೧೭೮೭ರಲ್ಲಿ ಮೈಸೂರು ರಾಜ್ಯದ ಭಾಗ ಗಳಾದವು. ದಕ್ಷಿಣ ಭಾರತದ ಕೆಲವು ಭಾಗಗಳ ಮೇಲೆ ಆಧಿಪತ್ಯ ಹೊಂದಿದ್ದ ಟಿಪ್ಪುಸುಲ್ತಾನನು, ಲಕ್ಷ ದ್ವೀಪದ ೫ ದ್ವೀಪಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ.

೧೭೯೯ರಲ್ಲಿ ಬ್ರಿಟಿಷರು ಟಿಪ್ಪುವನ್ನು ಸೋಲಿಸಿದ ನಂತರ, ಇವು ದಕ್ಷಿಣ ಕನ್ನಡದ ಕಾಸರಗೋಡು ತಾಲೂಕಿನ ಭಾಗಗಳಾಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗ, ಮದರಾಸು ರಾಜ್ಯದ ಭಾಗವಾಗಿದ್ದ ಈ ದ್ವೀಪಗಳನ್ನು ಪಾಕಿಸ್ತಾನದವರು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದರು ಎಂಬ ವಿಷಯ ಸಾಕಷ್ಟು ಕುತೂಹಲಕಾರಿ; ಪಾಕಿಸ್ತಾನದ ನೌಕೆಯು ಅಲ್ಲಿಗೆ ಬರುವ ಮುಂಚೆಯೇ ನಮ್ಮ ದೇಶದ ನೌಕಾದಳದ ಪ್ರತಿನಿಽಗಳು ಲಕ್ಷದ್ವೀಪದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದರು ಎನ್ನಲಾಗಿದೆ.

೧೯೬೪ರ ತನಕ ಇವು ಕೇರಳದ ಕೋಜಿಕೋಡ್‌ನ ಭಾಗಗಳಾಗಿದ್ದವು. ೧೯೬೪ರಲ್ಲಿ ಕವರತ್ತಿ ದ್ವೀಪವು ಲಕ್ಷದ್ವೀಪದ ರಾಜಧಾನಿ ಎನಿಸಿತು. ಅಲ್ಲಿ
ಭಾರತೀಯ ನೌಕಾದಳದ ‘ಐಎನ್‌ಎಸ್ ದ್ವೀಪ ರಕ್ಷಕ್’ ನೌಕಾನೆಲೆಯು ೩೦.೪.೨೦೧೨ರಂದು ಅಸ್ತಿತ್ವಕ್ಕೆ ಬಂದಿದ್ದು, ರಕ್ಷಣಾ ದೃಷ್ಟಿಯಿಂದ ಈ ಪ್ರದೇಶದ
ಭೌಗೋಳಿಕ ಪ್ರಾಮುಖ್ಯವನ್ನು ಎತ್ತಿ ತೋರಿಸುತ್ತದೆ. ಮಾಲ್ಡೀವ್ಸ್ ದ್ವೀಪಗಳು ಸಹ ಇದಕ್ಕೆ ಹೋಲಿಸುವಂಥ ಇತಿಹಾಸ ಹೊಂದಿವೆ. ಕೇರಳ, ಮಾಲ್ಡೀವ್ಸ್ ,
ಲಕ್ಷದ್ವೀಪ, ಮದರಾಸ್ ಮೊದಲಾದ ಭಾಗಗಳ ಮೇಲೆ ಅಧಿಕಾರ ಹೊಂದಿದ್ದ ಬ್ರಿಟಿಷರು, ೧೯೪೭ರಲ್ಲಿ ನಮ್ಮ ದೇಶವನ್ನು ತೊರೆದರೂ, ಮಾಲ್ಡೀವ್ಸ್ ನ
ಮೇಲೆ ೧೯೬೫ರ ತನಕ ಹಿಡಿತ ಸಾಧಿಸಿದ್ದರು.

ಲಕ್ಷ ದ್ವೀಪದ ಹೆಸರಿಗೂ, ಮಾಲ್ಡೀವ್ಸ್ ದೇಶದ ಹೆಸರಿಗೂ ಹೋಲಿಕೆ ಇದೆ. ‘ಮಾಲೆ ದ್ವೀಪ’ ಎಂಬ ಹೆಸರು ಮಾಲ್ಡೀವ್ಸ್ ಆಗಿದ್ದು, ಇದರ ಮೂಲ ಸಂಸ್ಕೃತ. ಲಕ್ಷ ದ್ವೀಪ, ಮಾಲ್ಡೀವ್ಸ್ ಸರಣಿಯ ದ್ವೀಪಗಳ ಇತಿಹಾಸವು ಮೂರು ಸಾವಿರ ವರ್ಷಕ್ಕಿಂತಲೂ ಹಿಂದಿನದು. ಸಿಂಧೂ ನದಿ ಕಣಿವೆಯ ನಾಗರಿಕತೆಯ
ಕಾಲದಲ್ಲೇ, ಗುಜರಾತಿನಿಂದ ಜನರು ಮಾಲ್ಡೀವ್ಸ್ ಗೆ ಪಯಣಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಅಶೋಕನ ಕಾಲದಲ್ಲಿ ಶ್ರೀಲಂಕಾ ಮತ್ತು ಮಾಲ್ಡೀವ್ಸ್
ನಲ್ಲಿ ಬೌದ್ಧ ಧರ್ಮ ಪ್ರವರ್ಧಮಾನದಲ್ಲಿತ್ತು. ೧೧ನೇ ಶತಮಾನದ ತನಕವೂ ಮಾಲ್ಡೀವ್ಸ್ ಅನ್ನು ಆಳುತ್ತಿದ್ದವರು ನಮ್ಮ ದೇಶದ ಮೂಲದ ರಾಜರುಗಳು.
ಸುಮಾರು ೧೧ನೇ ಶತಮಾನದ ಹೊತ್ತಿಗೆ, ಈ ಎಲ್ಲಾ ದ್ವೀಪಗಳ ಜನರು ಮುಸ್ಲಿಮರಾಗಿ ಪರಿವರ್ತನೆ ಗೊಂಡರು.

ಮಾಲ್ಡೀವ್ಸ್‌ನಲ್ಲಿ ಏನೇ ರಾಜಕೀಯ ವಿಪ್ಲವಗಳು ನಡೆದರೂ, ನಮ್ಮ ದೇಶದವರು ಕುತೂಹಲದಿಂದ ಗಮನಿಸುವುದಕ್ಕೆ ಐತಿಹಾಸಿಕ ಕಾರಣಗಳೂ ಇವೆ.
ಹಾಗೆ ನೋಡಿದರೆ, ಬ್ರಿಟಿಷರ ಆಽಪತ್ಯದ ತನಕವೂ, ಮಾಲ್ಡೀವ್ಸ್ ಮೇಲೆ ಭಾರತದ ಹಿಡಿತ, ಪ್ರಭಾವ ಇತ್ತು. ಮಾಲ್ಡೀವ್ಸ್‌ನ ಸಂಸ್ಕೃತಿಯ ಮೇಲೆ ನಮ್ಮ
ದೇಶದ ಸಂಸ್ಕೃತಿಯ ಪ್ರಭಾವ ಗಾಢವಾಗಿದೆ. ೧೦ನೇ ಶತಮಾನದಲ್ಲಿ ರಾಜರಾಜ ಚೋಳನು ಇಲ್ಲಿ ಪ್ರಭಾವ ಹೊಂದಿದ್ದ. ಇಂದಿಗೂ ಮಾಲ್ಡೀವ್ಸ್‌ನ ಕರೆನ್ಸಿ
ರುಪಯ್ಯ; ಮಾಲ್ಡೀವ್ಸ್‌ನ ಭಾಷೆಯಾದ ಽವೇಹಿಯು, ಇಂಡೋ ಆರ್ಯನ್ ಭಾಷೆಗಳಲ್ಲಿ ಒಂದು. ಮಾಲ್ಡೀವ್ಸ್‌ನಲ್ಲಿ ನಡೆದ ಉತ್ಖನನದಲ್ಲಿ ಬೌದ್ಧ ಶಿಲ್ಪಗಳು, ದೇಗುಲಗಳ ಅವಶೇಷಗಳು ದೊರಕಿವೆ.

ತಮ್ಮ ದೇಶಕ್ಕೆ ೩೦೦೦ ವರ್ಷಕ್ಕೂ ಹಿಂದಿನ ಇತಿಹಾಸವಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಾಲ್ಡೀವ್ಸ್ ಜನರು, ಆ ಪುರಾತನ ಕಲಾಕೃತಿಗಳನ್ನು,
ಅವಶೇಷಗಳನ್ನು ಜೋಪಾನವಾಗಿ ಸಂಗ್ರಹಿಸಿ, ಮಾಲೆಯಲ್ಲಿದ್ದ ನ್ಯಾಷನಲ್ ಮ್ಯೂಸಿಯಂನಲ್ಲಿ ಪ್ರದರ್ಶಿಸಿದ್ದರು. ಆದರೆ, ೨೦೧೨ರ ಫೆಬ್ರವರಿಯ ಒಂದು ದಿನ, ಹತ್ತಾರು ಸ್ಥಳೀಯ ಯುವಕರು ಮ್ಯೂಸಿಯಂಗೆ ನುಗ್ಗಿ, ಅಲ್ಲಿದ್ದ ಎಲ್ಲಾ ಹಳೆಯ ಕಲಾ ಕೃತಿಗಳನ್ನು ನಾಶ ಮಾಡಿದರು! ೬ನೇ ಶತಮಾನದ
ಅಪರೂಪದ ಬುದ್ಧನ ಮೂರ್ತಿಯನ್ನೂ ಸೇರಿಸಿ, ಒಟ್ಟು ೩೦ ಕಲಾಕೃತಿಗಳನ್ನು ಪುಡಿಪುಡಿ ಮಾಡಿದರು.

ಆ ವಿಕೃತಿ ಹೇಗಿತ್ತು ಎಂದರೆ, ಅವುಗಳನ್ನು ಮರುಜೋಡಿಸಲು ಸಹ ಅಸಾಧ್ಯವಾಗಿತ್ತು. ಅಂಥ ವಿಗ್ರಹಗಳು ತಮ್ಮ ದೇಶದಲ್ಲಿ ಇರಬಾರದು ಎಂದು ಆ ಯುವಕರು ಹೇಳಿದ್ದರಂತೆ! ಮಾಲ್ಡೀವ್ಸ್‌ನ ಹೆಮ್ಮೆಯ ನ್ಯಾಷನಲ್ ಮ್ಯೂಸಿಯಂನ್ನು ನಿರ್ಮಿಸಿ ಕೊಟ್ಟಿದ್ದು ಚೀನಾ! ಹಿಂದೆ ನಮ್ಮ ದೇಶದ ಭಾಗವಾಗಿದ್ದ, ನಮ್ಮ ದೇಶದ ಸಂಸ್ಕೃತಿಯನ್ನು ಹೊಂದಿದ್ದ ಮಾಲ್ಡೀವ್ಸ್ ದೇಶದ ಕುರಿತು ಚರ್ಚಿಸುವಾಗಲೆಲ್ಲಾ, ಚೀನಾದ ಹೆಸರು ಬರಲೇಬೇಕು. ಈಚಿನ ದಶಕಗಳಲ್ಲಿ ಚೀನಾವು, ಮಾಲ್ಡೀವ್ಸ್‌ನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದು, ಅದಕ್ಕಾಗಿ ಸಾಕಷ್ಟು ಸಾಲವನ್ನೂ ನೀಡಿದೆ ಮತ್ತು ರಾಜತಾಂತ್ರಿಕವಾಗಿ ಆ ದೇಶದ
ಮೇಲೆ ಗಾಢವಾದ ಪ್ರಭಾವವನ್ನೂ ಬೀರಿದೆ.

ಮಾಲ್ಡೀವ್ಸ್ ಒಂದು ಪುಟ್ಟ ದೇಶ. ಎಷ್ಟು ಪುಟ್ಟದು ಎಂದರೆ, ನಮ್ಮ ದೇಶದ ಕೆಲವು ತಾಲೂಕಿಗಳಿಗಿಂತಲೂ ಪುಟ್ಟದು! ಮಾಲ್ಡೀವ್ಸ್‌ನ ಜನಸಂಖ್ಯೆ ೫,೧೫,೧೩೨, ಅಂದರೆ ಮೈಸೂರಿಗಿಂತ ಕಡಿಮೆ ಜನರು ಅಲ್ಲಿದ್ದಾರೆ. ಆದರೆ ಅಲ್ಲಿಗೆ ಪ್ರತಿವರ್ಷ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸುಮಾರು ೧೮ ಲಕ್ಷ! ಅವರ ಪೈಕಿ ಸುಮಾರು ೨ ಲಕ್ಷ ಜನ ನಮ್ಮ ದೇಶದಿಂದಲೇ ಪ್ರವಾಸ ಹೋಗುತ್ತಾರೆ! ಈ ಎಲ್ಲಾ ಅಂಕಿ ಅಂಶಗಳು ಈ ಒಂದೆರಡು ವಾರಗಳಿಂದ ಸಾಕಷ್ಟು ಚರ್ಚೆಗೆ ಒಳಗಾಗಿವೆ ಎಂಬುದು ಬೇರೆ ವಿಷಯ. ಮಾಲ್ಡೀವ್ಸ್ ದೇಶದವರು ತಮ್ಮಲ್ಲಿನ ಸುಂದರ ಸಮುದ್ರ ತೀರಗಳನ್ನು ಬಂಡವಾಳ ಮಾಡಿಕೊಂಡು, ಪ್ರವಾಸೋದ್ಯಮಕ್ಕೆ ಬಳಸಿಕೊಂಡು, ಅದಕ್ಕಾಗಿ ಬಹಳಷ್ಟು ಕೆಲಸವನ್ನೂ ಮಾಡಿದ್ದಾರೆ.

ಅಂಥದ್ದೇ ಬೀಚ್‌ಗಳು ನಮ್ಮ ದೇಶದಲ್ಲೂ ಇವೆ (ಅಂಡಮಾನ್, ಕೇರಳ, ಮರವಂತೆ ಇತ್ಯಾದಿ). ಆದರೆ, ಬೀಚ್ ಟೂರಿಸಂ ಅಲ್ಲಿನಂಥ ಸೌಲಭ್ಯಗಳನ್ನು ನಮ್ಮಲ್ಲಿ ದೊಡ್ಡ ಮಟ್ಟದಲ್ಲಿ ಕಲ್ಪಿಸಿಲ್ಲವೆಂದೇ ಹೇಳಬಹುದು. ಹೋಲಿಕೆಗೆ ಗಮನಿಸಿದರೆ, ಅಂಡಮಾನ್ ದ್ವೀಪಸಮೂಹಕ್ಕೆ ಭೇಟಿ ನೀಡುವ ವಾರ್ಷಿಕ ಪ್ರವಾಸಿಗರ ಸಂಖ್ಯೆ ಒಂದೂವರೆ ಲಕ್ಷ ಮಾತ್ರ. ಮಾಲ್ಡೀವ್ಸ್‌ನಲ್ಲಿ ಪ್ರವಾಸೋದ್ಯಮವು ಬಹುದೊಡ್ಡ ಆದಾಯದ ಮೂಲವೂ ಹೌದು. ಯುರೋಪ್, ರಷ್ಯಾ ಮತ್ತು ಭಾರತದಿಂದ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ಬಂದು, ಇಲ್ಲಿನ ರೆಸಾರ್ಟ್‌ಗಳಲ್ಲಿ ತಂಗುತ್ತಾರೆ, ಆ ದೇಶದ ಆರ್ಥಿಕತೆಗೆ ಬಲ ತುಂಬುತ್ತಾರೆ.

ಪ್ರವಾಸೋದ್ಯಮಕ್ಕಾಗಿ ಆ ದೇಶದವರು ‘ರೆಸಾರ್ಟ್ ದ್ವೀಪ’ ಎಂಬ ಪರಿಕಲ್ಪನೆಯನ್ನು ರೂಪಿಸಿ, ಕಾನೂನಿನ ವಿನಾಯತಿಗಳನ್ನು ನೀಡಿದ್ದಾರೆ! ಧಾರ್ಮಿಕ
ಕಾರಣಗಳಿಗಾಗಿ, ಆ ದೇಶದಲ್ಲಿ ಜನರು ಮದ್ಯ  ಸೇವಿಸುವಂತಿಲ್ಲ, ಕೆಲವು ರೀತಿಯ ಮನರಂಜನೆಯಲ್ಲಿ ಪಾಲ್ಗೊಳ್ಳುವಂತಿಲ್ಲ; ಆದರೆ ರೆಸಾರ್ಟ್
ದ್ವೀಪಗಳಲ್ಲಿ, ಎಲ್ಲಾ ರೀತಿಯ ಮನರಂಜನೆಗೂ, ಪಾನೀಯಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಇದು ತಪ್ಪು ಎಂದು ಹೇಳುತ್ತಿಲ್ಲ, ಬದಲಿಗೆ, ದೇಶದ
ಆದಾಯ ಹೆಚ್ಚಿಸಲು, ಪ್ರವಾಸೋದ್ಯಮಕ್ಕೆ ಪ್ರಚಾರ ನೀಡಲು ಇಂಥ ವಿಶಿಷ್ಟ ಕಾನೂನುಗಳನ್ನು ಅಲ್ಲಿನವರು ಮಾಡಿದ್ದಾರೆ ಎಂಬ ವಿಚಾರ ಗಮನಾರ್ಹ.

ಲಕ್ಷದ್ವೀಪ ಮತ್ತು ಮಾಲ್ಡೀವ್ಸ್‌ಗೆ ಹೋಲಿಕೆ ಮಾಡಿ ಕೆಲವು ವಲಯಗಳಲ್ಲಿ ಈಚೆಗೆ ಚರ್ಚೆ ನಡೆಯುತ್ತಿರುವುದರಿಂದ, ಇಷ್ಟೆಲ್ಲಾ ವಿಚಾರ ಮುನ್ನೆಲೆಗೆ ಬಂತು. ಹಾಗೆ ನೋಡಿದರೆ, ಲಕ್ಷದ್ವೀಪ ಮತ್ತು ಮಾಲ್ಡೀವ್ಸ್‌ಗೆ ಹೋಲಿಕೆಯೇ ತಪ್ಪು. ೬೪,೦೦೦ ಜನಸಂಖ್ಯೆ ಹೊಂದಿರುವ ಒಂದು ಪುಟ್ಟ ಕೇಂದ್ರಾಡಳಿತ ಪ್ರದೇಶವನ್ನು, ಸ್ವತಂತ್ರ ದೇಶವೆನಿಸಿದ ಮಾಲ್ಡೀವ್ಸ್‌ಗೆ ಹೋಲಿಸುವುದಾದರೂ ಹೇಗೆ? ವಿಸ್ತೀರ್ಣದಲ್ಲೂ ಅಷ್ಟೆ, ಲಕ್ಷ ದ್ವೀಪವು ತುಂಬಾ ಚಿಕ್ಕದು. ಲಕ್ಷದ್ವೀಪದಲ್ಲೂ ಪ್ರವಾಸೋದ್ಯಮವನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ಸಲಹೆಯನ್ನು ಕೆಲವರು ಕೊಟ್ಟಿದ್ದಾರೆ; ಆದರೆ, ಅಲ್ಲಿನ ಸೂಕ್ಷ್ಮ ಪರಿಸರ, ಹವಳದ ದಿಬ್ಬಗಳು, ಪುಟ್ಟ ಭೂಪ್ರದೇಶ, ಸೀಮಿತ ಮೂಲ ಸೌಕರ್ಯಗಳು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಪ್ರವಾಸೋದ್ಯಮದ ‘ಅಭಿವೃದ್ಧಿ’ಗೆ ಒತ್ತು ಕೊಡುವುದು ಸೂಕ್ತ.

ಅಲ್ಲಿ ದೊಡ್ಡ ಗಾತ್ರದ ಕಟ್ಟಡಗಳನ್ನು ನಿರ್ಮಿಸುವುದು ಕಷ್ಟ. ಬಹುಶಃ ಕ್ರೂಸ್ ಪ್ರವಾಸೋದ್ಯಮವು ಅಲ್ಲಿಗೆ ಸೂಕ್ತ; ಆಗ ಹೊರಗಿನಿಂದ ಬರುವವರು ಹಗಲಿಡೀ, ದ್ವೀಪಗಳಲ್ಲಿ ಪ್ರವಾಸ ಮಾಡಿ, ರಾತ್ರಿ ಕ್ರೂಸ್‌ಗೆ ಮರಳಿ, ಅಲ್ಲೇ ತಂಗಬಹುದು. ಆ ಮೂಲಕ, ಆ ಸೂಕ್ಷ್ಮಪರಿಸರದ ದ್ವೀಪಗಳ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತಡ ಹೇರದೇ, ಪ್ರವಾಸೋದ್ಯಮವನ್ನು ಬೆಳೆಸಲು ಸಾಧ್ಯ. ಕಳೆದ ವಾರದಿಂದ ನಡೆಯುತ್ತಿರುವ ವ್ಯಾಪಕ ಚರ್ಚೆಯಿಂದಾಗಿ, ನಮ್ಮ ಮರವಂತೆ, ಅಂಡಮಾನ್, ಮುರುಡೇಶ್ವರ ಮೊದಲಾದ ಪ್ರವಾಸಿ ತಾಣಗಳ ಹೆಸರುಗಳು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬರುವಂತಾಗಿದ್ದಂತೂ ನಿಜ.