Thursday, 12th December 2024

ಭೂಕುಬೇರರ ಅಸಲಿಯತ್ತು- ಇವರಿಗೆ ಮಾತ್ರ ಗೊತ್ತು

ಶಿಶಿರ ಕಾಲ

shishirh@gmail.com

ದುಡ್ಡು ಎಲ್ಲದಕ್ಕೂ ಪರಿಹಾರ ಅನ್ನೋರು ಒಂದಿಷ್ಟ್ ಮಂದಿ. ದುಡ್ಡು ನೆಮ್ಮದಿ, ಪ್ರೀತಿ ಕೊಡೋಲ್ಲ ಎನ್ನುವವರೂ ಅವರೇ. ಹಲವರಲ್ಲಿ ಹೆಚ್ಚಿನ ದುಡ್ಡು ಎಂದರೆ ಅದು ಹೆಚ್ಚಿನ ಸಮಸ್ಯೆ ಎಂದೇ ಗಟ್ಟಿ ನಂಬಿಕೆಯಿದೆ. ಶ್ರೀಮಂತಿಕೆ ಸಮಸ್ಯೆಯನ್ನು ಹೊತ್ತು ಕೊಂಡೇ ಬರುತ್ತದೆ ಎಂಬ ವಾದ. ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ, ಆದರೆ ಇಂದಿನ ವಿದ್ಯೆ ದುಡಿಮೆಯ ಕೇಂದ್ರಿತ, ಹಾಗಾಗಿ ದುಡ್ಡು ಅದೆಲ್ಲದರ ಮುತ್ತಜ್ಜ ಎಂದೆಲ್ಲ.

ಹೆಚ್ಚಿನ ದುಡ್ಡು, ಗಳಿಕೆ ಒಂದಿಷ್ಟು ಆಯಾ ಕಾಲದ ಸಮಸ್ಯೆಗೆ ಪರಿಹಾರವಾದೀತೇ ವಿನಃ ಅದು ಸಮಸ್ಯೆಯೇ ಇಲ್ಲದಂತೆ ಬದುಕು ಕಟ್ಟಿಕೊಡುವುದಿಲ್ಲ ಎನ್ನುವುದು ನಮಗೆಲ್ಲ ಗೊತ್ತು. ತನಗೆ ಗೋಚರವಾಗುವ ಶ್ರೀಮಂತ ತನ್ನಷ್ಟೇ ಸುಖಿಯೆ ಅಥವಾ ಅಲ್ಲವೇ ಎನ್ನುವ ಜಿಜ್ಞಾಸೆ ಬಡವನಾದವನಿಗೆ ಸಾರ್ವಕಾಲಿಕ. ಸ್ಟೇಟಸ್, ಶ್ರೀಮಂತಿಕೆ ಇವೆಲ್ಲವೂ ಸಾಪೇಕ್ಷ. ಬಸ್ಸಿನಲ್ಲಿ ಓಡಾಡುವವನಿಗೆ ದುಡ್ಡಿದ್ದರೆ ಕಾರು ತನ್ನ ಸಮಸ್ಯೆಯ ಪರಿಹಾರವೆಂದೆನಿಸುತ್ತದೆ. ಕಾರು ಖರೀದಿಸಿದವನು ವಿಮಾನವೇರು ವಷ್ಟು ದುಡಿದರೆ ತನ್ನ ಸಮಸ್ಯೆ ನೀಗೀತು ಎಂದುಕೊಳ್ಳುತ್ತಾನೆ.

ವಿಮಾನದಲ್ಲಿ ಎಕೊನಾಮಿ ಕ್ಲಾಸಿನವನು ಬ್ಯುಸಿನೆಸ್ ಕ್ಲಾಸಿನ ಸೀಟುಗಳನ್ನು ಹಾದುಹೋಗುವಾಗ ಅದರತ್ತ ಆಸೆ ಕೂಡಿದ ಅಸೂಯೆಯಿಂದ ನೋಡಿ ಸೀಟನ್ನು ಸವರುತ್ತಾನೆ. ಇನ್ನು ಬಿಸಿನೆಸ್ ಕ್ಲಾಸಿನಲ್ಲಿ ಕೂತವನು ಕಿಟಕಿಯ ಹೊರಗೆ ಇರುವ ಪ್ರೈವೇಟ್ ವಿಮಾನವನ್ನು ಕಂಡು ಅಷ್ಟು ಶ್ರೀಮಂತಿಕೆ ತನಗೆ ಬೇಕೆಂದುಕೊಳ್ಳುತ್ತಾನೆ. ಹೀಗೆ, ಶ್ರೀಮಂತಿಕೆ ಹೋಲಿಕೆಯಲ್ಲಿ ಎಲ್ಲರೂ ಬಡವರೇ. ಹಾಗಾದರೆ ಜಗತ್ತಿನ ಅಗ್ರ ಶ್ರೀಮಂತನಾದರೆ ಇದೆಲ್ಲ ಸಮಸ್ಯೆ, ಹೊಟ್ಟೆ ಯುರಿ ಎಲ್ಲವೂ ನೀಗೀತೇ? ಎಲಾನ್ ಮಸ್ಕ ಮೊದಲ ಸ್ಥಾನದಲ್ಲಿದ್ದಾಗ, ಇಷ್ಟು ಶ್ರೀಮಂತಿಕೆ ಏನನ್ನಿಸುತ್ತದೆ ಎಂದು ಕೇಳಿದರೆ, ಒಂದು ಹಂತದ ನಂತರ ಹಣ ಕೇವಲ ಸಂಖ್ಯೆ ಎಂದು ವೇದಾಂತ ಹೇಳಿಬಿಡುತ್ತಾನೆ.

ಫೋರ್ಬ್ಸ್ ಪತ್ರಿಕೆಯ ಹೆಸರು ಇಂದು ಜನಜನಿತ. ಈ ಪತ್ರಿಕೆಯಲ್ಲಿ ಅದೇನು ಬರುತ್ತದೆಯೋ, ಇಲ್ಲವೋ, ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿ ಮಾತ್ರ ಅಲ್ಲಿಯೇ ಬರೋದು ಅನ್ನೋದು ನಮಗೆ ಗೊತ್ತು. ಮೊದಲ ಸ್ಥಾನ ಇವರಂತೆ, ಏಳನೇ ಸ್ಥಾನ ಅವರಂತೆ, ಆತ ಎರಡನೇ ಸ್ಥಾನಕ್ಕೆ ಇಷ್ಟು ಕಡಿಮೆ ಸಮಯ ದಲ್ಲಿ ಏರಿದ್ದು ಹೇಗೆ? ಹೀಗೆ. ಇದೆಲ್ಲದರ ಜೊತೆ ಈ ಪರಮ ಶ್ರೀಮಂತರ ಬದುಕು ಹೇಗಿರುತ್ತದೆ ಎನ್ನುವುದರ ಬಗ್ಗೆ ಒಂದು ಕುತೂಹಲವಂತೂ ಹುಟ್ಟು ತ್ತದೆ. ಅದರ ಬೆನ್ನು ಹತ್ತಿ ಇಂಟರ್ನೆಟ್‌ ನಲ್ಲಿ ಹುಡುಕಿದಾಗ ಅಲ್ಲೊಂದು ಇಲ್ಲೊಂದು ಝಲಕ್ ಮಾತ್ರ ಸಿಗುತ್ತದೆ.

ಅಸಲಿಗೆ ಆಗರ್ಭ ಶ್ರೀಮಂತನ ಆಂತರ್ಯ ಹೇಗಿರುತ್ತದೆ, ಆತನ ತೀರಾ ಖಾಸಗೀ ಬದುಕಿನ ಅವತರಿಣಿಕೆಗಳೇನು ಇವೆಲ್ಲ ಬಹುಮಟ್ಟಿಗೆ ಗೌಪ್ಯವೇ. ನಾನು ಇಲ್ಲಿ ಹೇಳುತ್ತಿರುವುದು ಬಿಲಿಯನ್ ಗಟ್ಟಲೆ ಹಣವಿರುವವರ ಕುರಿತೇ ವಿನಃ ನೂರು ಚಿಲ್ಲರೆ ಕೋಟಿಯ ಬಡವರ ಬಗ್ಗೆ ಅಲ್ಲ. ಪನಾಮಾ ಪೇಪರ್ಸ್ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಹೇಗೆ ಬಿಲಿಯನೇರ್ ಶ್ರೀಮಂತರು ಶೆಲ್ ಕಂಪನಿಗಳ ಮೂಲಕ ತಮ್ಮ ಹಣವನ್ನು ಸರಕಾರೀ ಕಣ್ಣಿನಿಂದ ಅಡಗಿಸಿಟ್ಟು ತೆರಿಗೆ ವಂಚಿಸುತ್ತಾರೆ ಎಂಬಿತ್ಯಾದಿ. ಸುಮಾರು ಹನ್ನೊಂದು ಲಕ್ಷ ಪುಟದಷ್ಟು ಅತಿ ಶ್ರೀಮಂತರಿಗೆ ಸಂಬಂಧಪಟ್ಟ ಮಾಹಿತಿಗಳು ೨೦೧೬ರಲ್ಲಿ ಲೀಕ್ ಆಗಿದ್ದವು.

ಅದುವೇ ಪನಾಮಾ ಪೇಪರ್ಸ್. ಸುಮಾರು ಎರಡೂವರೆ ಲಕ್ಷ ಶೆಲ್ ಕಂಪನಿಗಳ ಮಾಹಿತಿಗಳು ಬಹಿರಂಗವಾಗಿದ್ದವು. ಇದು ಜಗತ್ತಿನಾದ್ಯಂತ ಎಲ್ಲಿಲ್ಲದ ಚರ್ಚೆಗೊಳಗಾಯ್ತು. ಬಿಲಿಯನೇರ್ ಶ್ರೀಮಂತರೆಲ್ಲ ಸಾಮೂಹಿಕವಾಗಿ ಕಂಗಾಲಾದ ಸಮಯ ಅದು. ಇನ್ನೇನು ವಿಶ್ವದ ಅರ್ಧಕ್ಕರ್ಧ ಆಗರ್ಭ ಶ್ರೀಮಂತ ರೆಲ್ಲ ಜೈಲುಪಾಲಾಗುತ್ತಾರೆ ಎಂದು ಜಗತ್ತಿನ ಮಧ್ಯಮವರ್ಗದವರೆಲ್ಲ ಬೆರಗುಗಣ್ಣಿನಲ್ಲಿ ನೋಡಿದ್ದೇ ಬಂತು. ಆಮೇಲೆ ಅವೆಲ್ಲ ಏನಾದವು, ಅವುಗಳನ್ನು ಆಯಾ ದೇಶದ ಸರಕಾರ ಆ ಹೆಸರುಗಳನ್ನು ಇಟ್ಟುಕೊಂಡು ಏನು ಮಾಡಿತು? ಆರು ವರ್ಷದ ನಂತರ ನೋಡಿದರೆ ಎಲ್ಲ ಟುಸ್ಸು.

ಪನಾಮಾ ಪೇಪರ್ಸ್, ಪೆಂಡೊರಾ ಪೇಪರ್ಸ್ ಇವೆಲ್ಲದರ ಮೂಲಕ ಅಷ್ಟು ಪ್ರಮಾಣದ ಅತಿ ಗೌಪ್ಯ ಶ್ರೀಮಂತರ ಬಗೆಗಿನ ಮಾಹಿತಿಗಳು ಹೊರಬಂದ ವಲ್ಲ. ಅವೆಲ್ಲ ಬಹಿರಂಗವಾಗಿದ್ದು ಹೇಗೆ? ಮೊದಲು ನಾನು ಅಂದುಕೊಂಡದ್ದು, ಇದು ಯಾರೋ ಹ್ಯಾಕರ್‌ಗಳು ಕಂಪ್ಯೂಟರಿನೊಳಕ್ಕೆ ಹೊಕ್ಕು ಬಹಿರಂಗಪಡಿಸಿದ್ದಿರಬೇಕು ಎಂದು. ಆದರೆ ಅಸಲಿಗೆ ಇದೆಲ್ಲವನ್ನು ಹೊರ ಹಾಕಿದ್ದು ವೆಲ್ತ್ ಮ್ಯಾನೇಜ್ಮೆಂಟ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಉದ್ಯೋಗಿಗಳು.

ದುಡ್ಡು ಒಂದು ಹಂತ ಮೀರಿ ಬಂದಾಗ ಕ್ರಮೇಣ ಹೊಂದಿರುವ ವ್ಯಕ್ತಿಗೆ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಇಂದಿನ ಶ್ರೀಮಂತರೆಂದರೆ ಅವರದು ಯಾವುದೋ ಒಂದಿಷ್ಟು ಕಂಪೆನಿಗಳಿರುತ್ತವೆ. ಆ ಕಂಪನಿಗಳ ವ್ಯವಹಾರ ನೋಡಿಕೊಳ್ಳಲು ಅಕೌಂಟಿಂಗ್ ಟೀಮ್ ಇರುತ್ತದೆ. ಆದರೆ ಆ ಅಕೌಂಟಿಂಗ್ ಟೀಮ್ ಮಾಲೀಕನ ಸ್ವಂತದ ಹಣಕಾಸನ್ನು ನೋಡಿಕೊಳ್ಳುವುದಿಲ್ಲ. ಬದಲಿಗೆ ಆ ಕೆಲಸವನ್ನು ಮಾಡುವುದು ವೆಲ್ತ್ ಮ್ಯಾನೇಜ್ಮೆಂಟ್ ಕಂಪೆನಿಗಳು, ವೆಲ್ತ್ ಮ್ಯಾನೇಜರ್‌ಗಳು. ಅವರ ಕೆಲಸವೇ ಶ್ರೀಮಂತರ ಹಣವನ್ನು ನೋಡಿಕೊಳ್ಳುವುದು, ಅದನ್ನು ಹೂಡಿಕೆ ಮಾಡುವುದು, ಗಳಿಕೆ ಮತ್ತು ಖರ್ಚಿನ ಲೆಕ್ಕವಿಡುವುದು, ಟ್ಯಾಕ್ಸ್ ಕಡಿಮೆಯಾಗುವಂತೆ ಹಣವನ್ನು ತೊಡಗಿಸುವುದು ಇತ್ಯಾದಿ.

ಬಿಲಿಯನೇರ್ ಗಳು ಯಥೇಚ್ಛ ಹಣ ಕೊಟ್ಟು ಈ ಸೌಲಭ್ಯವನ್ನು ಪಡೆಯುತ್ತಾರೆ. ಇದು ಅನಿವಾರ್ಯ. ಅಂತಹ ವೆಲ್ತ್ ಮ್ಯಾನೇಜರ್ ಗಳೇ ಪನಾಮಾ ಪೇಪರ್ಸ್ ಅನ್ನು ಲೀಕ್ ಮಾಡಿದ್ದು. ಕಾರಣ ವೇನೆಂದು ಗೊತ್ತಿಲ್ಲ. ಒಂದೋ ಅಸೂಯೆ ಇರಬಹುದು, ಅಥವಾ ಈ ಬಿಲಿಯನೇರ್‌ಗಳ ಅವ್ಯವಹಾರ ಗಳನ್ನು ನೋಡಿ ರೋಸಿ ಹೋಗಿರಬೇಕು. ಈ ವೆಲ್ತ್ ಮ್ಯಾನೇಜರ್‌ ಗಳಲ್ಲಿ ಕೆಲವರು ಆಗೀಗ ಪುಸ್ತಕ ಬರೆದು ಈ ಶ್ರೀಮಂತರ ಒಳ ಮರ್ಮಗಳನ್ನು ಹೊರಹಾಕುತ್ತಾರೆ. ಅವುಗಳನ್ನು ಓದುವಾಗ ಹೊಸತೊಂದು ಜಗತ್ತು ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.

ಅವರೆಲ್ಲ ಶ್ರೀಮಂತರ ಹೆಸರು ಹೇಳುವುದಿಲ್ಲ. ಆದರೆ ನಿಜ ಕಥೆಗಳನ್ನು ನಮ್ಮೆದುರು ಹರಡಿ ಇಡುತ್ತಾರೆ. ವೆಲ್ತ್ ಮ್ಯಾನೇಜರ್‌ ಗಳೆಂದರೆ ಕೇವಲ ಮದುವೆ ಮನೆಯಲ್ಲಿ ಸೂಟ್ಕೇಸ್ ಇಟ್ಟುಕೊಂಡು ಹಣದ ವ್ಯವಹಾರ ನೋಡಿಕೊಳ್ಳುವ ಬಾವನೆಂಟ ಅಲ್ಲ. ಅಥವಾ ಅದು ಕೇವಲ ಕ್ರೆಡಿಟ್ ಡೆಬಿಟ್ ಹೊಂದಿಸಿ ಜೀರೋ ವ್ಯತ್ಯಾಸ ತೋರಿಸಿ ಲೆಕ್ಕವಿಡುವ ಅಕೌಂಟಂಟ್ ಕೆಲಸ ಕೂಡ ಅಲ್ಲ. ಅವರು ಹೆಚ್ಚು ಕಡಿಮೆ ಶ್ರೀಮಂತನ ಇನ್ನೊಂದು ಆತ್ಮದಂತೆ. ಆತನ ಅಷ್ಟೂ ಹಣ ಸಂಪತ್ತಿನ ಎಲ್ಲ ಜವಾಬ್ದಾರಿಯೂ ಇವರದೇ. ಶ್ರೀಮಂತನ ಸಾಛಾ ಲೆಕ್ಕಾಚಾರದ ವ್ಯವಹಾರದ ಜೊತೆ ಕಳ್ಳವ್ಯವಹಾರಕ್ಕೂ ಇವರದೇ ನಿಗಾ. ವೆಲ್ತ್ ಮ್ಯಾನೇಜರ್ ಆದವನು ತನ್ನ ಕ್ಲೈಂಟ್ ನ ಇದು ಕಪ್ಪು ಹಣ, ಅದು ಬಿಳಿ ಹಣ, ಇನ್ನೊಂದು ನೀಲಿ ಹಣ ಎಂದೆಲ್ಲ ಭೇದಭಾವ ಮಾಡುವಂತಿಲ್ಲ. ಆತನ ಕೆಲಸ ಶ್ರೀಮಂತನ ಅಷ್ಟೂ ಹಣ, ಸಂಪತ್ತನ್ನು, ವ್ಯವಹಾರವನ್ನು ನೋಡಿಕೊಳ್ಳುವುದು. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವುದು.

ಅದಕ್ಕೆ ಎದುರಾಗುವ ತೊಡಕುಗಳನ್ನು ಕಾನೂನಿನ ಮೂಲಕ ಅಥವಾ ಆಚೆ ವ್ಯವಹರಿಸಿ ನಿವಾರಿಸುವುದು. ಎಲ್ಲಿಂದಲೋ ಬಂದ ಹಣ ಇನ್ನೆಲ್ಲಿಯದೋ ಎಂದು ತೋರಿಸುವುದು. ಯಾವುದೋ ಗೂಂಡಾಗೆ ಕೊಡುವ ಹಣ, ಇನ್ಯಾವುದೋ ಅಕ್ರಮ ಸಂಬಂಧಕ್ಕೆ ಕೊಡುವ ಹಣ ಇವೆಲ್ಲವನ್ನೂ ವ್ಯವಸ್ಥಿತವಾಗಿ ಮರೆಮಾಚುವುದು, ಹೀಗೆ. ಈ ವೆಲ್ತ್ ಮ್ಯಾನೇಜರ್‌ಗಳ ಕೆಲಸ ಇಷ್ಟಕ್ಕೇ ಸೀಮಿತವೆಂದು ಇಲ್ಲ. ಇವರು ಕ್ಲೈಂಟ್ ಹೇಳಿದ್ದು, ಹೇಳಿದ ಸಮಯಕ್ಕೆ ಮಾಡಿ ಕೊಡಬೇಕು. ನಿಮಗೆ ಈಗ ವೆಲ್ತ್ ಮ್ಯಾನೇಜರ್ ಎಂದರೆ ಏನು ಎನ್ನುವ ಅಂದಾಜು ಬಂದಿರಬೇಕು. ಒಟ್ಟಾರೆ ವೆಲ್ತ್ ಮ್ಯಾನೇಜರ್ ಆದವನು ಯಾವುದೇ ಕೆಲಸಕ್ಕೆ ತಯಾರಾಗಿರಬೇಕು.

ಶ್ರೀಮಂತ ಬಯಸಿದಲ್ಲಿ ಬೇಕಾದಲ್ಲಿ ಅದನ್ನು ಒದಗಿಸಬೇಕು. ಎಲ್ಲವೂ ಒಂದು ಸರ್ವಿಸ್. ಒಂದೊಂದು ಸರ್ವಿಸ್‌ಗೂ ಇಂತಿಷ್ಟು ಶುಲ್ಕ. ವೆಲ್ತ್ ಮ್ಯಾನೇಜರ್ ಆದವನು ಶ್ರೀಮಂತನ ಹೆಂಡತಿಗಿಂತ ಜಾಸ್ತಿ ಅವನ ಬಗ್ಗೆ ತಿಳಿದಿರುತ್ತಾನೆ. ಬಿಲಿಯನೇರ್‌ಗಳ ಒಳ ಅಸಲಿಯತ್ತು ಗೊತ್ತಿರುವುದು ಇವರಿಗೆ ಮಾತ್ರ. ಅದಕ್ಕೆ ಕಾರಣವೂ ಇದೆ, ಅನಿವಾರ್ಯ ಕೂಡ ಹೌದು. ಶ್ರೀಮಂತನಿಗೆ ಸಂಬಂಧಿಸಿದ್ದೆಲ್ಲ ಅವನ ಹಣಕ್ಕೆ ಸಂಬಂಧಿಸಿದ್ದು, ಹಣಕ್ಕೆ ಸಂಬಂಧಿಸಿದ ಪ್ರತಿಯೊಂದೂ ಇವರಿಗೆ ಸಂಬಂಧಿಸಿದ್ದು.

ಇವರು ಶ್ರೀಮಂತನ ಮತ್ತು ಕುಟುಂಬದ ಮಾನ ಕಾಪಾಡುವ ಕೆಲಸವನ್ನೂ ಮಾಡಬೇಕು. ಏಕೆಂದರೆ ಮಾನ ಹೋಯಿತೆಂದರೆ ಅದರ ನೇರ ಪರಿಣಾಮ ಆತನ ಆರ್ಥಿಕತೆಯ ಮೇಲಾಗುತ್ತದೆ. ಶ್ರೀಮಂತನಿಗೆ ಅನ್ಯ ಸಂಬಂಧಗಳಿದ್ದರೆ, ಇನ್ನೊಂದು ದೇಶ ದಲ್ಲಿ ಮತ್ತೊಂದು ಸಂಸಾರವಿದ್ದರೆ ಅದೆಲ್ಲ ವೆಲ್ತ್ ಮ್ಯಾನೇಜರ್ ನಿಭಾಯಿಸಬೇಕು, ಆಗೀಗ ಅದೆಲ್ಲದರ ಅಪಾಯದ ಮಟ್ಟವನ್ನು ಅಭ್ಯಾಸ ಮಾಡಿ ವರದಿ ಕೊಡಬೇಕು. ಅದರಲ್ಲಿ ಯಾವುದೋ ಒಂದು, ಯಾವುದೋ ಸಮಯಕ್ಕೆ ಶ್ರೀಮಂತನ ಆರ್ಥಿಕ ಅಪಾಯಕ್ಕೆ ಕಾರಣವಾಗಬಹುದು. ಆತನ ಮಕ್ಕಳಿಗೆ ಡ್ರಗ್ಸ್ ಚಟವಿದ್ದರೆ, ಅವನಿಗೆ ಏನಾದರೂ ಶೋಕಿಗಳಿದ್ದರೆ ಅದು ಕೂಡ ತಿಳಿದಿರಬೇಕು, ಅವಶ್ಯವಿದ್ದಲ್ಲಿ ಸಹಾಯಕ್ಕಾಗಬೇಕು.

ಬಿಲಿಯನೇರ್ ಶ್ರೀಮಂತನೊಬ್ಬ ಡಿವೋರ್ಸ್‌ಗೆ ತಯಾರಾಗುತ್ತಿದ್ದಾನೆ ಎಂದರೆ ಅದನ್ನು ಆತ ಮೊದಲು ಹೇಳಬೇಕಾದದ್ದು ಅವನ ಹೆಂಡತಿಗಲ್ಲ, ಬದಲಿಗೆ ಈ ವೆಲ್ತ್ ಮ್ಯಾನೇಜರ್‌ಗೆ. ಏಕೆಂದರೆ ಡೈವೋರ್ಸ್ ಪಡೆಯುವುದಕ್ಕಿಂತ ಮೊದಲು ತನ್ನ ಹಣವನ್ನೆಲ್ಲ ಅಡಗಿಸಿ, ಬೇರೆ ದೇಶದಲ್ಲಿಟ್ಟು ತಯಾರಾಗಬೇಕು. ಇಲ್ಲದಿದ್ದರೆ ಕಾನೂನಿನ ಪ್ರಕಾರ ಅರ್ಧ ಆಸ್ತಿ ಹೆಂಡತಿಗೆ ಹೋಗುತ್ತದೆ. ಹೀಗಿರುವಾಗ ಬಿಲಿಯನೇರ್ ಒಬ್ಬ ವಿಚ್ಛೇದನ ಪಡೆಯುತ್ತಿದ್ದಾನೆ ಎಂದರೆ ವೆಲ್ತ್ ಮ್ಯಾನೇಜರ್ ಎಲ್ಲಿಲ್ಲದ ತಯಾರಿಯನ್ನು ವರ್ಷಗಟ್ಟಲೆ ನಡೆಸುತ್ತಾರೆ. ಎಲ್ಲವೂ ಅತ್ಯಂತ ಗೌಪ್ಯವಾಗಿ.

ಅದಾಗಿ ಅವರು ಗ್ರೀನ್ ಸಿಗ್ನಲ್ ಕೊಟ್ಟ ನಂತರವೇ ಶ್ರೀಮಂತ ತನ್ನ ಹೆಂಡತಿಯ ಎದುರು ವಿಚ್ಛೇದನೆಯ ವಿಚಾರ ಮೊದಲ ಬಾರಿ ಪ್ರಸ್ತಾಪಿಸುವುದು. ಇಷ್ಟು ಶ್ರೀಮಂತ ಯಾರ‍್ಯಾರನ್ನೋ ವೆಲ್ತ್ ಮ್ಯಾನೇಜರ್ ಆಗಿ ನೇಮಿಸಿಕೊಂಡು ಬಿಡುವುದಿಲ್ಲ. ತನ್ನ ಸರ್ವಸ್ವವನ್ನೂ ಒಬ್ಬ ವ್ಯಕ್ತಿಯ ಮುಂದೆ ಇಟ್ಟು, ಹೆಂಡತಿ ಮಕ್ಕಳಿಗೂ ತಿಳಿಯದ ಅತಿ ಗೌಪ್ಯ ಮಾಹಿತಿಗಳನ್ನು ಹೇಳಿ, ತನ್ನ ಹಣವನ್ನು ನಿಭಾಯಿಸಲು ಬಿಡುವುದೆಂದರೆ ಅದು ಆ ಶ್ರೀಮಂತನ ಜೀವವನ್ನೇ ಇನ್ನೊಬ್ಬನ ಕೈಗೆ ಕೊಟ್ಟ ಹಾಗೆ.

ಆ ಕಾರಣಕ್ಕೆ ಶ್ರೀಮಂತನಾದವನು ತನ್ನ ವೆಲ್ತ್ ಮ್ಯಾನೇಜರ್ ಅನ್ನು ನೇಮಿಸಿಕೊಳ್ಳುವುದಕ್ಕಿಂತ ಮೊದಲು ಒಂದಿಷ್ಟು ಪರೀಕ್ಷೆಗೆ ಒಡ್ಡುವುದು ಸಾಮಾನ್ಯ ಅಭ್ಯಾಸ. ಆ ಪರೀಕ್ಷೆಯ ಭಾಗವಾಗಿ ಕ್ಲೈಂಟ್‌ನ ಯಾವುದೇ ಅತಾರ್ಕಿಕ, ಅಸಾಧ್ಯವಾದ ಬೇಡಿಕೆಯನ್ನು ಪೂರೈಸಬೇಕು. ಆಗೀಗ ಬಿಲಿಯನೇರ್‌ಗಳು ಈ ವೆಲ್ತ್ ಮ್ಯಾನೇಜರ್‌ಗಳಿಗೆ ಅತ್ಯಂತ ಕಷ್ಟದ ಕೆಲಸ ಕೊಟ್ಟು ಆತ ಎಷ್ಟು ಸಮರ್ಥ ಎಂದು ಪರೀಕ್ಷಿಸುವುದೂ ಇದೆ.

ಸಾಮಾನ್ಯವಾಗಿ ಇಷ್ಟು ಶ್ರೀಮಂತರಾದಲ್ಲಿ ಅವರ ವ್ಯವಹಾರ ನಾಲ್ಕಾರು ದೇಶ ದಲ್ಲಿರುತ್ತದೆ. ಹಾಗಾಗಿ ಎಲ್ಲೆಲ್ಲಿ ವ್ಯವಹಾರ, ಹಣವಿದೆಯೋ ಅಲ್ಲೆಲ್ಲ ಆರ್ಥಿಕ ಅಪಾಯದ ಸಾಧ್ಯತೆಯಿದೆ. ಆ ಕಾರಣಕ್ಕೆ ವೆಲ್ತ್ ಮ್ಯಾನೇಜರ್ ಆದವನು ಕೇವಲ ಲೆಕ್ಕಾಚಾರ, ಕಾನೂನು ಬಲ್ಲವನಾಗಿದ್ದರೆ ಪ್ರಯೋಜನವಿಲ್ಲ. ಆತನಿಗೆ ಹಲವು ದೇಶಗಳ ವ್ಯವಹಾರ ಪ್ರeಯಿರಬೇಕು, ಹತ್ತಾರು ದೇಶಗಳಲ್ಲಿ ಅಲ್ಲಿನ ಮಂತ್ರಿ, ಶ್ರೀಮಂತರ ಕನೆಕ್ಟ್ ಇರಬೇಕು. ನಾಲ್ಕಾರು ದೇಶದ ಸರ್ವೋಚ್ಚ ನಾಯಕರ ಗುರುತಿದ್ದರೆ ತುಂಬಾ ಒಳ್ಳೆಯದು.

ತನ್ನ ಕ್ಲೈಂಟ್‌ನ ಯಾವುದೇ ಸಮಸ್ಯೆಗೆ ಅವರ ಬಳಿ ಪರಿಹಾರವಿರಬೇಕು. ಇಲ್ಲವೆನ್ನುವ ಪದ ಅವರು ಹೇಳುವಂತೆಯೇ ಇಲ್ಲ. ಇಲ್ಲವೆಂದರೆ ಆ ಶ್ರೀಮಂತ ಇನ್ನೊಬ್ಬ ವೆಲ್ತ್ ಮ್ಯಾನೇಜರ್ ಅನ್ನು ನೇಮಿಸಿಕೊಂಡು ಇವರನ್ನು ಮನೆಗೆ ಕಳಿಸಿ ಬಿಡುತ್ತಾನೆ. ಗಾರ್ಡಿಯನ್ ಪತ್ರಿಕೆಯಲ್ಲಿ ಎಲೆನೋರ್ ಎಂಬ ವೆಲ್ತ್ ಮ್ಯಾನೇಜರ್ ತನ್ನ ಅನುಭವವನ್ನು ಸರಣಿಯಲ್ಲಿ ಈಗ ಕೆಲವು ವರ್ಷದ ಹಿಂದೆ ಬರೆದಿದ್ದಳು. ಒಮ್ಮೆ ಆಕೆಯ ಶ್ರೀಮಂತ ಕ್ಲೈಂಟ್ ಒಬ್ಬ ಯಾವುದೋ ಒಂದು ದೇಶದಲ್ಲಿ ಹೋಟೆಲ್ ಒಂದರಲ್ಲಿ ಇದ್ದನಂತೆ. ಅಲ್ಲಿ ಆತನ ತಾಯಿ ಕೊಟ್ಟ ಬ್ರೇಸ್ಲೆಟ್ ಕಾಣೆಯಾಗಿದೆ. ಆತ ಹುಡುಕಿಸಿ ಕೊಡಲು ಸೀದಾ ಫೋನ್ ಮಾಡಿದ್ದು ಎಲೆನೋರ್‌ಗೆ. ಆಕೆ ಆ ದೇಶದ ಆ ಊರಿನ ಹೆಸರು ಕೇಳಿದ್ದು ಅದೇ ಮೊದಲು.

ವೆಲ್ತ್ ಮ್ಯಾನೇಜ್ಮೆಂಟ್ ಕೆಲಸದಲ್ಲಿ ಇಲ್ಲವೆನ್ನುವ ಮಾತಿಗೆ ಅವಕಾಶವೇ ಇಲ್ಲ. ತಕ್ಷಣ ಆಕೆ ಕಾರ್ಯಪ್ರವೃತ್ತರಾಗಿ, ತನ್ನ ಸಂಬಂಧಗಳನ್ನು ಬಳಸಿಕೊಂಡು, ಆ ದೇಶದ, ರಾಜ್ಯದ ಪೊಲೀಸ್ ಅಧಿಕಾರಿಯವರೆಗೆ ತಲುಪಿ ಕೊನೆಗೆ ಹುಡುಕಿಸಿ ಕೊಟ್ಟಳಂತೆ. ಈ ರೀತಿ ಚಿತ್ರವಿಚಿತ್ರ ಬೇಡಿಕೆಗಳನ್ನೂ ವೆಲ್ತ್ ಮ್ಯಾನೇಜರ್ ಈಡೇರಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಮೇಲ್ದರ್ಜೆಯ ವೆಲ್ತ್ ಮ್ಯಾನೇಜರ್ ಗಳು ನಾಲ್ಕಾರು ಅತ್ಯಂತ ಶ್ರೀಮಂತರ ವ್ಯವಹಾರವನ್ನು ಏಕಕಾಲಕ್ಕೆ ನೋಡಿ ಕೊಳ್ಳುತ್ತಿರುತ್ತಾರೆ.

ಅವರಿಗೆ ಹತ್ತಾರು ಬಿಲಿಯನೇರ್‌ಗಳ ಜೊತೆ ಒಡನಾಟವಿರುತ್ತದೆ. ಇದು ಕೂಡ ಅತ್ಯಂತ ಮುಖ್ಯ, ಇರಲೇ ಬೇಕಾದ ಗುಣವಿಶೇಷದಲ್ಲಿ ಒಂದು. ಉದಾ ಹರಣೆಗೆ ಒಬ್ಬ ಬಿಲಿಯನೇರ್ ಏನೋ ಒಂದು ಚಿಕ್ಕ (!) ಆರ್ಥಿಕ ಸಂಕಷ್ಟಕ್ಕೆ ಒಳಗಾದ ಎಂದುಕೊಳ್ಳಿ. ಆಗ ತನ್ನಲ್ಲಿರುವ ಹಡಗನ್ನೋ, ವಿಮಾನವನ್ನೋ ಮಾರಾಟ ಮಾಡಲು ಮುಂದಾದರೆ ಅದನ್ನು ಬಹಿರಂಗ ಪಡಿಸುವಂತಿಲ್ಲ. ಏಕೆಂದರೆ ಬಿಲಿಯನೇರ್ ಒಬ್ಬ ತನ್ನ ಸ್ವಂತದ ವಸ್ತುವನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾನೆ ಎನ್ನುವ ಸುದ್ದಿ ಹೊರ ಬಂದರೆ ಆತನ ಕಂಪನಿಯ ಷೇರು ನೆಲಕಚ್ಚಬಹುದು.

ಇನ್ನೊಂದು ವ್ಯವಹಾರ, ಡೀಲ್ ಮುರಿದುಬೀಳಬಹುದು. ಹಾಗಾಗಿ, ಮತ್ತು ಯಾವುದೇ ಊಹಾಪೋಹಕ್ಕೆ ಎಡೆಮಾಡಿಕೊಡದೇ ಅಷ್ಟು ದೊಡ್ಡ ವ್ಯವಹಾರ ಆಗಬೇಕು. ಇದು ಎಲ್ಲಿಯೂ ಹೊರ ಜಗತ್ತಿಗೆ ತಿಳಿಯುವಂತಿಲ್ಲ. ಇದು ವೆಲ್ತ್ ಮ್ಯಾನೇಜರ್ ನ ಕೆಲಸ. ಆತ ಈ ರೀತಿ ಬಿಲಿಯನೇರ್ ಗಳ ನಡುವೆ ನಡೆಯುವ ದೊಡ್ಡ ಮೊತ್ತದ ವ್ಯವಹಾರವನ್ನು ಹೆಚ್ಚಾಗಿ ಅತ್ಯಂತ ಗೌಪ್ಯತೆಯಿಂದ ನಡೆಸಿಕೊಡಬೇಕು. ಇಷ್ಟು ಶ್ರೀಮಂತರ ಸಂಪತ್ತು ಅವರ ಮಕ್ಕಳಿಗೆ ಹೋಗುವಾಗ, ಅದನ್ನು ಹಂಚುವ ಕೆಲಸವೂ ವೆಲ್ತ್ ಮ್ಯಾನೇಜರ್‌ಗಳದ್ದೇ. ಕೆಲವೊಮ್ಮೆ ಒಬ್ಬ ಮಗ ಅಥವಾ ಮಗಳೆಡೆಗೆ ಶ್ರೀಮಂತನಿಗೆ ಅಷ್ಟಾಗಿ ಒಲವು ಇಲ್ಲವೆಂದಿಟ್ಟುಕೊಳ್ಳಿ. ಅವನಿಗೆ ಚಿಕ್ಕ ಪಾಲು ಕೊಡಬೇಕು.

ಆದರೆ ಆತ ಕೇಸ್ ಮಾಡದಂತೆ ನೋಡಿಕೊಳ್ಳಬೇಕು. ಈ ಕೆಲಸವೂ ವೆಲ್ತ್ ಮ್ಯಾನೇಜರ್‌ಗಳದ್ದೇ. ಬಹಳಷ್ಟು ದೇಶಗಳಲ್ಲಿ ಕೇಸ್ ಫೈಲ್ ಆಗಿಬಿಟ್ಟರೆ ವೈಯಕ್ತಿಕ ಆಸ್ತಿಯ ಎಲ್ಲ ಗೌಪ್ಯ ವಿಚಾರಗಳೂ ಸಾರ್ವಜನಿಕವಾಗಿ ಬಿಡುತ್ತದೆ. ಅದು ಶ್ರೀಮಂತನ ವ್ಯವಹಾರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ತೀರಾ ಖಾಸಗೀ ವಿಚಾರಗಳಲ್ಲಿ, ಡೈವೋರ್ಸ್, ವಿಲ್, ಅಕ್ರಮ ಗಿಫ್ಟ್ ಹೀಗೆ ಎಲ್ಲ ವ್ಯವಹಾರದ ದೆಖ್ರೆಕಿಯೂ ಇವರದೇ.

ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಒಂದು ಡಾಲರ್ ಟ್ಯಾಕ್ಸ್ ಕೂಡ ತುಂಬುವುದಿಲ್ಲ, ಇದು ಸುಳ್ಳಾದರೆ ಟ್ಯಾಕ್ಸ್ ರಿಟರ್ನ್ಸ್ ಬಹಿರಂಗಪಡಿಸಿ ಎಂದು ಹಿಲರಿ ಕ್ಲಿಂಟನ್ ಆರೋಪಿಸಿದ್ದಳು. ಅದಕ್ಕೆ ಟ್ರಂಪ್, ನಾನು ಬುದ್ಧಿವಂತ, ಹಾಗಾಗಿಯೇ ಟ್ಯಾಕ್ಸ್ ತುಂಬದಂತೆ ವ್ಯವಹಾರ ನೋಡಿಕೊಳ್ಳುತ್ತೇನೆ, ನನ್ನ ವೆಲ್ತ್ ಮ್ಯಾನೇಜರ್ ಚೆನ್ನಾಗಿದ್ದಾರೆ ಎಂದಿದ್ದ. ಈಗ ಅದಾಗಿ ಆರೇಳು ವರ್ಷದ ನಂತರ, ಈಗ ಡೊನಾಲ್ಡ್ ಟ್ರಂಪ್ ಮೇಲೆ ಕ್ರಿಮಿನಲ್ ಕೇಸ್ ಆಗಿದೆ. ಅದು ಆದದ್ದು ಆತನ ವೆಲ್ತ್ ಮ್ಯಾನೇಜರ್ ಮಾಡಿದ ಪ್ರಮಾದದಿಂದ. ಟ್ರಂಪ್‌ನ ಪರವಾಗಿ ಅಡಲ್ಟ್ ಚಲನಚಿತ್ರದ ನಟಿಯೊಬ್ಬಳಿಗೆ ಹಣ ಸಂದಾಯವಾಗಿದೆ. ಆ ಕೊಟ್ಟ ಹಣದ ಲೆಕ್ಕ ಮುಚ್ಚಿಡುವಲ್ಲಿ ಎಡವಿದ್ದರಿಂದ ಈಗ ಎಲ್ಲ ಅವ್ಯವಹಾರ ಹೊರಬಂದಿದೆ. ಅದು ಎಲೆಕ್ಷನ್‌ಗೆ ಎತ್ತಿದ ಹಣದಿಂದ ಅಕ್ರಮ ಸಂದಾಯವಾಗಿರುವುದರಿಂದ ಟ್ರಂಪ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಒಟ್ಟಾರೆ ಬಿಲಿಯನೇರ್‌ಗಳ ಪ್ರಾಣಪಕ್ಷಿಇರೋದು ವೆಲ್ತ್ ಮ್ಯಾನೇಜರ್ ಬಳಿ. ಇದು ಅತ್ಯಂತ ನಂಬಿಕೆಯಲ್ಲಿ, ಗೌಪ್ಯವಾಗಿ ನಡೆಯುವ, ಆರ್ಥಿಕ ಕಸರತ್ತು. ಆದರೆ ಇಂದು ಇವೆಲ್ಲ ಅಷ್ಟಕ್ಕೇ ಸೀಮಿತವಾಗಿಲ್ಲ. ಇನ್ನು ಈ ಶ್ರೀಮಂತರೆಲ್ಲರ ಖಾಸಗಿ ಬದುಕು ಹೇಗಿರುತ್ತದೆ ಎಂದು ತಿಳಿಯಬೇಕೆಂದರೆ Brooke Harrington ಬರೆದಿರುವ Capital without borders : Wealth Managers and One Percent ಪುಸ್ತಕ ಓದಬೇಕು. ಇಲ್ಲಿ ಒನ್ ಪರ್ಸೆಂಟ್ ಎಂದರೆ ಈ ಬಿಲಿಯನೇರ್ ಶ್ರೀಮಂತರು. ಆಕೆ ಸುಮಾರು ಎಂಬತ್ತೈದು ವೆಲ್ತ್ ಮ್ಯಾನೇಜರ್‌ಗಳನ್ನು ಸಂದರ್ಶಿಸಿ ಆ ಮೂಲಕ ಭೂಕುಬೇರರ ಒಳ ಬದುಕನ್ನು ಹೆಣೆದು ಕೊಟ್ಟಿದ್ದಾಳೆ. ಆ ಜಗತ್ತೇ ಬೇರೆ!