Thursday, 12th December 2024

ಲಾಖೋ ಲೋಗೋನ್‌ ಮೇ ಏಕ್‌ ಲತಾ

ರಾವ್ ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಲತಾಗೆ ಆಶಾ ಪ್ರತಿಸ್ಪರ್ಧಿಯೇ. ತಂಗಿಯ ಬಗ್ಗೆ ಆಕೆಗಿದ್ದ ತಾತ್ಸಾರವೆಷ್ಟೆಂದರೆ, ಪ್ರೌಢಿಮೆಯಲ್ಲೂ ಆಶಾ ಹಾಡುತ್ತಿದ್ದ ಶೋಗಳಿಂದ ಲತಾ ದೂರವಿರುತ್ತಿದ್ದರು.
ಇದು ಆಶಾರನ್ನು ಕೆರಳಿಸಿತ್ತು. ಕಷ್ಟದ ದಿನಗಳನ್ನು ಕಂಡ ಆಶಾರಿಗೆ ಒದಗಿಬಂದ ಅವಕಾಶ ಓ.ಪಿ. ನಯ್ಯರ್ ಲತಾರನ್ನು ಕಡೆಗಣಿಸಿದ್ದರಿಂದ ದೊರಕಿತು.

ನಾನು ಅತಿ ಇಷ್ಟಪಡುವ ಎರಡು ವಿಷಯಗಳು ಸಂಗೀತ ಮತ್ತು ಕ್ರಿಕೆಟ್. ಈ ಎರಡು ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿ ಭಾರತ ರತ್ನ ಗೌರವಕ್ಕೆ ಪಾತ್ರರಾದ ಲತಾ ಮಂಗೇಶ್ಕರ್ ಮತ್ತು ಸಚಿನ್ ತೆಂಡುಲ್ಕರ್ ಇಬ್ಬರೂ ಮುಂಬಯಿಗರೇ.

ಸಚಿನ್‌ಗೆ ಭಾರತ ರತ್ನ ಪ್ರಾಪ್ತವಾದದ್ದಕ್ಕೆ ಕೆಲವರ ತಕರಾರಿದೆ. ಆತನನ್ನು ನಾನು ಕ್ರಿಕೆಟ್ ಕಾರಣಕ್ಕೂ, ಕ್ರಿಕೆಟೇತರ ಕಾರಣಕ್ಕೂ ಮೆಚ್ಚಿಕೊಂಡಿದ್ದೇನೆ. ಅದು ಬೇರೆಯ ವಿಚಾರ. ನಮ್ಮವರೇ ಆದ ಶತಾವಧಾನಿ ಗಣೇಶರಿಗೆ (ನಮ್ಮವರೇ ಎಂಬ ಕಾರಣಕ್ಕಲ್ಲ) ಭಾರತ ರತ್ನ ಎಂದೋ ಲಭ್ಯವಾಗಬೇಕಿತ್ತು. ಲತಾ ಮತ್ತು ಸಚಿನ್ ಗೆ ಭಾರತ ರತ್ನ ನೀಡಿದ್ದನ್ನು ಪ್ರಶ್ನಿಸುವುದು ಕಷ್ಟ, ಗಣೇಶರಿಗೆ ನೀಡದಿದ್ದುದನ್ನು ಪ್ರಶ್ನಿಸದಿರು ವುದೂ ಅಷ್ಟೇ ಕಷ್ಟ.

ಲತಾರ ೭೫ನೆಯ ಜನ್ಮದಿನದಂದು ನಾನು ಬರೆದ ಇಂಗ್ಲಿಷ್ ಅಂಕಣದಲ್ಲಿ ಲತಾರನ್ನು ಸೀಮಿತ ಗಾಯಕಿ ಎಂದು ಕರೆದಿದ್ದೆ. ವಿವಾದವನ್ನು ಸೃಷ್ಟಿಸಲು ಹಾಗೆ ಬರೆದದ್ದಲ್ಲ. ಕುಚೇಷ್ಟೆಗೆ ಬರೆದು ವಿವಾದ ಸೃಷ್ಟಿಸುವುದು ನನ್ನ ಜಾಯಮಾನಕ್ಕೆ ಒಗ್ಗದ ವಿಚಾರ. ರೇಡಿಯೋವಷ್ಟೆ ನಮ್ಮ ಮುಖ್ಯ ಮನರಂಜನಾ ಸಾಧನವಾದ ದಿನಗಳಲ್ಲಿ ನಮ್ಮ ನೆಚ್ಚಿನ ಗಾಯಕ-ಗಾಯಕಿಯರ, ಗೀತ ರಚನಕಾರರ, ಸಂಗೀತ ಸಂಯೋಜಕರ ಹೆಸರುಗಳನ್ನು ಉದ್ಘೋಷಕರ ಬಾಯಲ್ಲಿ ಕೇಳುವುದೂ ಅವರೆಲ್ಲರ ಒಟ್ಟು ಪ್ರಯತ್ನದಿಂದ ರಚಿತವಾದ ಹಾಡುಗಳನ್ನು ಕೇಳು ವಷ್ಟೇ ಖುಷಿ ತಂದುಕೊಂಡುತ್ತಿತ್ತು. ನಮ್ಮ ಕಣ್ಣಿಗೇ ಕಂಡಿರದ ಅವರೆಲ್ಲರ ದನಿಗಳೂ ಅಶರೀರ ವಾಣಿಯಂತೆ ಕೇಳಿಬರುತ್ತಿದ್ದವು.

ಲತಾ ನಮಗಿನ್ನೂ, ಉಳಿದವ ರಂತೆ, ಅಗೋಚರ ವ್ಯಕ್ತಿ. ಕಿಶೋರ್, ರಫಿ, ಮನ್ನಾಡೆ, ಮುಖೇಶ್, ಲತಾ, ಆಶಾ ಎಲ್ಲರೂ ನಮ್ಮಿಂದ ಸಲುಗೆಯಿಂದ ಕರೆಸಿ ಕೊಂಡವರೇ. ಆ ಎಲ್ಲ ಅಗೋಚರರನ್ನು ಕೇಳ-ಕೇಳುತ್ತಲೇ ಶೋತೃಗಳಾದ ನಮಗೂ ಒಂದಷ್ಟು ಸಂಗೀತ ಜ್ಞಾನ ಲಭಿಸಿತು. ಗಾಯಕರಿಬ್ಬರನ್ನು ತುಲನೆ ಮಾಡುವ ಸಾಮರ್ಥ್ಯವೂ ಬೆಳೆಯಿತು. ಮನ ರಂಜನಾ ಮಾಧ್ಯಮಗಳು ಹೆಚ್ಚಾದಂತೆ ಅಪರೂಪಕ್ಕೆ ಕೇಳಸಿಗುತ್ತಿದ್ದ ಹಾಡುಗಳು ಕಂಡಕಂಡಲ್ಲಿ ಸಿಗಲಾರಂಭಿ ಸಿದವು. ಸಂಗೀತದ ತತ್ವಾರ ಇಲ್ಲವಾಯಿತು. ರೇಡಿಯೋ ನಿಲಯಕ್ಕೆ ಬೇಡಿಕೆ ಸಲ್ಲಿಸಿ ಇಷ್ಟಪಟ್ಟ ಹಾಡನ್ನು ಕೇಳಬೇಕಾದ ಪರಿಸ್ಥಿತಿ ಮಾಯವಾಗಿ ಗಗನಕುಸುಮ ವಾಗಿದ್ದ ಸಂಗೀತ ಸದಾ ಕಾಲ ಬೆರಳತುದಿಯಲ್ಲಿ ಸಿಗುವಂತಾಗಿ ಅಗ್ಗವಾಯಿತು!

ಒಂದು ಒಳ್ಳೆ ಹಾಡು ಮೂಡಿಬರುವುದಕ್ಕೆ ಕಂಗಾಲಾಗಿ ಕುಳಿತಿರುತ್ತಿದ್ದ ಕಾಲ ಮಾಯವಾಯಿತು. ಒಂದು ಸುಶ್ರಾವ್ಯ ಹಾಡನ್ನು ಕೇಳಲು ಐದಾರು ಸಾಧಾರಣ ಹಾಡುಗಳನ್ನೋ, ಇಷ್ಟವಿಲ್ಲದ ಹಾಡುಗಳನ್ನೋ ಕೇಳಬೇಕಾದ ದರ್ದು ಇಲ್ಲವಾಯಿತು. ಸಂಗೀತವನ್ನು ವಿತರಿ ಸುವ ಹಲವಾರು ಮಾಧ್ಯಮಗಳು, ಸಾಧನಗಳು
ಮೈದಳೆದು ನಮಗಿಷ್ಟವಾದ ಹಾಡುಗಳನ್ನಷ್ಟೇ, ನಮಗೆ ಅನುಕೂಲವಾದ ಸಮಯದಲ್ಲಿ, ಬೇರಾರಿಗೂ ತೊಂದರೆಯಾಗದ ರೀತಿಯಲ್ಲಿ ಆಲಿಸುವ ಕೇಳುವ ಸ್ವಾತಂತ್ರ್ಯ ನಮ್ಮದಾಗಿದೆ. (ಉಳಿದೆಲ್ಲ ಸ್ವಾತಂತ್ರ್ಯದ ದುರ್ಬಳಕೆಯಂತೆ ಈ ಸ್ವಾತಂತ್ರ್ಯದ ದುರುಪಯೋಗವೂ ಆಗುತ್ತಿದೆ.)

ಈ ಸ್ವಾತಂತ್ರ್ಯದ ಪ್ರಯೋಜನ ಪಡೆದುಕೊಂಡು ಕಲಾಭಿರುಚಿಯನ್ನು ಶೃತಿಗೊಳಿಸಿಕೊಂಡು ಸಂಗೀತದ ಆಸ್ವಾದನೆಯನ್ನೂ ಒಂದು ಉತ್ತಮ ಸ್ತರಕ್ಕೆ ಏರಿಸುವ ಅವಕಾಶ ಮುಕ್ತವಾಗಿದೆ. ಈ ರೀತಿ ಪಕ್ವವಾದ ನವಯುಗದ ಕಲಾರಸಿಕತೆ ಕೇಳುಗರ ಕಿವಿಗಳನ್ನು ಹೆಚ್ಚು ಹೆಚ್ಚು ಸೂಕ್ಷ್ಮಗೊಳಿಸಿದೆ. ದಿನನಿತ್ಯ ಆವಿಷ್ಕಾರಗೊಳ್ಳು ತ್ತಿರುವ ಶಬ್ದ ಸಂಸ್ಕರಣಾ ತಂತ್ರಜ್ಞಾನವೂ ಇದರೊಂದಿಗೆ ಮೇಳೈಸಿ ಶುದ್ಧ ಸಂಗೀತ ಹೊಸ ಅರ್ಥವನ್ನೇ ಪಡೆದುಕೊಂಡಿದೆ.

ಸಮೃದ್ಧ ಸಂಗೀತದ ಈ ಯುಗ ತನ್ನದೇ ಹೊಸ ಸವಾಲನ್ನು ತಂದೊಡ್ಡಿದೆ. ಅದು ಆಯ್ಕೆಯ ಸವಾಲು. ನವಯುಗದಲ್ಲಿ ಅಲಭ್ಯವಾದ ಹಲವು ಸರಕುಗಳಲ್ಲಿ ಸಮಯವೇ ಮೊದಲು. ಲಭ್ಯವಾಗುವ ತುಸುವೇ ಬಿಡುವಿನಲ್ಲಿ ಸಂಗೀತವನ್ನು ಸವಿಯಬೇಕಾದರೆ ಆಯ್ಕೆ ಕುರಿತು ನಿಶ್ಚಿತತೆ ಬೇಕು. ಹಾಗೆ ದೃಢ ಮನಸ್ಸಿನಿಂದ ನಾನು ಮಾಡುವ ಆಯ್ಕೆ ಆಶಾ ಬೋನ್ಸ್ಲೆ, ಇದೀಗ ಗತಿಸಿದ ಆಕೆಯ ಅಕ್ಕ ಅಲ್ಲ.

ನೀವು ಈಗ ಓದುತ್ತಿರುವ ಲೇಖನ ಸಿದ್ಧವಾದದ್ದು ನಿನ್ನೆ (ಫೆಬ್ರವರಿ ೭ರಂದು). ಭಾರತೀಯ ಕ್ರಿಕೆಟ್ ಮತ್ತು ಹಿಂದಿ ಸಿನಿಮಾ ಸಂಗೀತ ಇವೆರಡೂ ವಿಷಯಗಳ ಬಗ್ಗೆ ಗಟ್ಟಿಯಾಗಿ ಬರೆಯುತ್ತಿದ್ದ ಹಿರಿಯ ಪತ್ರಕರ್ತ ರಾಜು ಭರತನ್ ನಿಧನರಾಗಿದ್ದು ಇದೇ ದಿನ, ಎರಡು ವರ್ಷಗಳ ಹಿಂದೆ. ಈ ಎರಡು ವಿಷಯಗಳ ಬಗ್ಗೆ ಅವರು ತಾವು ಸೇವೆ ಸಲ್ಲಿಸಿದ ಇಲ್ಲಸ್ಟ್ರೇಟೆಡ್ ವೀಕ್ಲಿ ಪತ್ರಿಕೆಗೆ ಬರೆಯುತ್ತಿದ್ದ ಲೇಖನಗಳನ್ನು ಸವಿದಿದ್ದೇನೆ.

ಆಶಾರನ್ನು ಅವರು ಆಕೆಯ ಕಷ್ಟ ಸಹಿಷ್ಣುವೆಂದು ಬಣ್ಣಿಸುತ್ತಾರೆ. ಲತಾ ಅಲಭ್ಯವಾದ ಸಂದರ್ಭದಲ್ಲಿ ನಿರ್ಮಾಪಕರು ಹೋಗುತ್ತಿದ್ದುದು ಗೀತಾ ದತ್ ಅಥವಾ ಶಂಷಾದ್ ಬೇಗಮ್ ಬಳಿಗೆ. ಆರಂಭದಲ್ಲಿ ಆಶಾಗೆ ಆಯ್ಕೆ ಐಷಾರಾಮಿ ವಸ್ತುವಾಗಿತ್ತು. ಪಾಲಿಗೆ ಬಂದದ್ದು ಪಂಚಾಮೃತ ಎಂದು ಕಣ್ಣಿಗೊತ್ತಿಕೊಂಡು ಹಾಡ ಬೇಕಾದ ಪರಿಸ್ಥಿತಿ. ಸಚಿನ್ ತೆಂಡುಲ್ಕರ್‌ನನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಲತಾರಿಗೆ ಮೇರು ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ ಜತೆ
ಹೊಂದಿಕೊಳ್ಳ ಲಾಗದೇ ಅವರಿಂದ ೫ ವರ್ಷ ದೂರವಾಗಿದ್ದರು. ಆಶಾರ ಅದೃಷ್ಟ ಖುಲಾಯಿಸಲು ಅಷ್ಟು ಸಾಕಾಗಿತ್ತು. ಅದು ಆಕೆಯ ಬದುಕಿನ ನಿರ್ಣಾಯಕ ಘಟ್ಟ.

ಅರವತ್ತರ ಮತ್ತು ಎಪ್ಪತ್ತರ ದಶಕಗಳಲ್ಲಿ, ಪ್ರತಿ ಹಾಡಿಗೆ ಲತಾ ಗಳಿಸುತ್ತಿದ್ದ ಸಂಭಾವನೆ ೫೦೦ ರುಪಾಯಿಯಾದರೆ, ಆಕೆಯ ದುರ್ಬಲ ಪ್ರತಿಸ್ಪರ್ಧಿ ತಂಗಿಗೆ ಸಿಗುತ್ತಿದ್ದುದು ಕೇವಲ ನೂರು, ನೂರೈವತ್ತು. ಹೌದು, ಬಾಲ್ಯದಿಂದಲೂ, ಲತಾಗೆ ಆಶಾ ಪ್ರತಿಸ್ಪಽಯೇ. ತಂಗಿಯ ಬಗ್ಗೆ ಆಕೆಗಿದ್ದ ತಾತ್ಸಾರವೆಷ್ಟೆಂದರೆ, ಪ್ರೌಢಿಮೆಯಲ್ಲೂ ಆಶಾ ಹಾಡುತ್ತಿದ್ದ ಶೋಗಳಿಂದ ಲತಾ ದೂರವಿರುತ್ತಿದ್ದರು. ಇದು ಆಶಾರನ್ನು ಕೆರಳಿಸಿತ್ತು. ಇಂತಹ ಕಷ್ಟದ ದಿನಗಳನ್ನು ಕಂಡ ಆಶಾರಿಗೆ ಒದಗಿಬಂದ ಮತ್ತೊಂದು ಅವಕಾಶ ಪಂಜಾಬ್ ಮೂಲದ ಓ.ಪಿ. ನಯ್ಯರ್ ಲತಾರನ್ನು ಕಡೆಗಣಿಸಿದ್ದರಿಂದ ದೊರಕಿತು.

ಇಜಾಝತ್ ಚಿತ್ರಕ್ಕೆ ಆಶಾ ಹಾಡಿದ ಒಂದು ಹಾಡು ಲತಾ ಹಾಡುವುದಕ್ಕಿಂತ ಚೆನ್ನಾಗಿತ್ತು ಎನ್ನುತ್ತಾರೆ, ಭರತನ್. ನಯ್ಯರ್ ಮತ್ತು ಎಸ್.ಡಿ. ಬರ್ಮನ್ ಆಶಾ ರಿಗೆ
ಹೆಸರನ್ನು ತಂದುಕೊಟ್ಟರಾದರೂ ಆಕೆಯನ್ನು ಒಂದು ಅದ್ಭುತವಾಗಿ ರೂಪಿಸಿದ್ದು ಆಕೆಯನ್ನು ತದನಂತರದಲ್ಲಿ ವರಿಸಿದ ಆರ್.ಡಿ. ಬರ್ಮನ್. ಪಂಚಮ್ ದಾ ಎಂದು ಪ್ರಸಿದ್ಧರಾಗಿ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ ಮರಿ ಬರ್ಮನ್ ಕೂಡಾ ಮೊದಮೊದಲು ಲತಾರನ್ನೇ ಅವಲಂಬಿಸಿದ್ದರು. ಹಿಂದಿ ಹೀರೊಯಿನ್ ಎಂದರೆ ಶ್ವೇತ ವಸ ಧಾರಿ ಎಂಬಂತಿದ್ದ ದಿನಗಳಲ್ಲಿ ಅವರ ಕಂಠಸಿರಿಯಲ್ಲಿನ ಗಾಂಭೀರ್ಯಕ್ಕೂ, ಹೀರೊಯಿನ್‌ಗಳ ಇಮೇಜಿಗೂ ತಾಳೆಯಾಗುತ್ತಿತ್ತು ಎನ್ನುತ್ತಾರೆ ಭರತನ್.

ಪಂಚಮ್ ದಾ ನೀಡಿದ ಕಂಠ ಕಸರತ್ತುಗಳೆಲ್ಲ ವನ್ನೂ ಲೀಲಾಜಾಲವಾಗಿ ನಿಭಾಯಿಸಿದ ಆಶಾರಿಗೆ ಕ್ಯಾಬರೆ ಹಾಡುಗಳನ್ನು ಹಾಡುವ ಇರಾದೆ ಇರಲಿಲ್ಲ. ಆಕೆ ಹಾಡದಿದ್ದರೆ ತಾನು ಸಂಗೀತ ಸಂಯೋಜಿಸುವುದಿಲ್ಲ ಎಂದು ಪಂಚಮ್ ಪಟ್ಟು ಹಿಡಿದದ್ದರಿಂದ ಆಶಾ ಒಪ್ಪಿದರು. (ನನ್ನನ್ನೂ ಸೇರಿದಂತೆ) ಎಪ್ಪತ್ತು ಮತ್ತು ಎಂಭತ್ತರ ದಶಕದ ಪೀಳಿಗೆಗೆ ಆಶಾ ಪ್ರಿಯವಾದರು. ಇದು ಅಕ್ಕ-ತಂಗಿಯರಿಬ್ಬರ ಚರಿತ್ರೆಯನ್ನೂ ದಾಖಲಿಸಿರುವ ಭರತನ್ ಅವರ ಮಾತು. ತಾವು ಲತಾರ
ಅಭಿಮಾನಿಯಾದರೂ, ಕಾಲಾಂತರದಲ್ಲಿ ಆಶಾರ ಪ್ರತಿಭೆಗೆ ಮಾರುಹೋಗಿದ್ದನ್ನೂ ಹೇಳಿದ್ದಾರೆ.

ದಶಕದ ಹಿಂದೆ, ನೊಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯರಾದ ರವೀಂದ್ರನಾಥ್ ಟಾಗೋರ್ ಸರ್ವೇ ಸಾಧಾರಣ ನಾಟಕಕಾರ ಎಂದು ಹೇಳಿ ಗಿರೀಶ್ ಕಾರ್ನಾಡ್ ವಿವಾದ ಸೃಷ್ಟಿಸಿದ್ದರು. ಆದರೆ, ಇಂಗ್ಲಿಷ್ ಸಾಹಿತ್ಯದ ಪ್ರಖರ ಹಾಗೂ ನಿಷ್ಪಕ್ಷಪಾತ ವಿಮರ್ಶಕ ಪ್ರೊ. ಸಿ.ಡಿ. ನರಸಿಂಹಯ್ಯ ಟಾಗೋರರನ್ನು ಅಸಾಧಾರಣ ಕವಿಯೆಂದೇನೂ ಪರಿಗಣಿಸಿರಲಿಲ್ಲ. ಅದನ್ನು ನನ್ನ ಬಳಿಯೂ ಒಮ್ಮೆ ಹೇಳಿದ್ದರು. ನಾನು ಟಾಗೋರರ ಲೇಖನಿಯ ಪರಿಚಯ ಸೀಮಿತವಾಗಿದ್ದು ಮತ್ತು ಅದನ್ನೂ ನಾನು ಮೂಲ ಬಂಗಾಳಿಯಲ್ಲಿ ಓದಿಲ್ಲವಾದ್ದರಿಂದ ಆ ಬಗ್ಗೆ ಏನೂ ಹೇಳಲಾರೆ.

ಲತಾರ ಬಗ್ಗೆ ನನ್ನ ಅಭಿಪ್ರಾಯವನ್ನು ಹೇಳುವಾಗಲೂ, ಲತಾ-ಆಶಾರನ್ನು ಹತ್ತಿರದಿಂದ ನೋಡಿದ್ದ ಭರತನ್‌ರ ಅಭಿಪ್ರಾಯವನ್ನು ಹೆಚ್ಚು ಅವಲಂಬಿಸಲಾರೆ.
ಹರೇ ರಾಮ್ ಹರೇ ಕೃಷ್ಣ ಚಿತ್ರದ (ಆರ್.ಡಿ. ಬರ್ಮನ್) ಕಾಂಚೀ ರೇ ಹಾಡಿನಲ್ಲಿ ಬಸ್ ಚುಪ್ ಹೀ ರೆಹನಾ ಎಂಬ ಸಾಲಿನ ಕಡೆಯ ಶಬ್ದವನ್ನು ಹಾಡುವಾಗ ಲತಾ ಏದುಸಿರು ಪಟ್ಟಂತಿದೆ. ಇದು ಆಶ್ಚರ್ಯವೇ. ಆದರೆ ಮೆಹಬೂಬ ಚಿತ್ರದ (ಆರ್ .ಡಿ. ಬರ್ಮನ್) ಮೇರೇ ನೈನಾ ಹಾಡಿನಲ್ಲೂ ಅಥವಾ ಶರ್ಮಿಲೀ (ಎಸ್.ಡಿ. ಬರ್ಮನ್) ಚಿತ್ರದ ಮೇಘಾ ಛಾಯೆ ಹಾಡಿನಲ್ಲೂ ಅದಕ್ಕಿಂತಲೂ ಮೇಲಿನ ಶ್ರುತಿಯನ್ನು ಹಾಡುವಾಗ ಮಾಧುರ್ಯಕ್ಕೆ ಅಪಚಾರವಾಗಿಲ್ಲ. ಇದಕ್ಕೆ ವಿವರಣೆ ಏನೋ? ಮಾಧುರ್ಯದ ದೃಷ್ಟಿಯಿಂದಲೂ, ಬಹುಮುಖತೆಯ ಮಾನದಂಡದಿಂದಲೂ ಆಶಾರನ್ನು ಲತಾ ಸರಿಗಟ್ಟುವುದಿಲ್ಲ.

ಅನುಕರಣೆ, ಹೊಗಳಿಕೆಯ ಪರಾಕಾಷ್ಠೆ, ಎನುತ್ತಾನೆ ಕಥೆಗಾರ ಆಸ್ಕರ್ ವೈಲ್ಡ್. ನಾನು ಅನುಕರಿಸುವುದಾದರೆ, ಆಶಾರನ್ನು ಅನುಕರಿಸಲಿಷ್ಟಪಡುತ್ತೇನೆ. ಲತಾ ಇಷ್ಟವಿಲ್ಲವೆಂತಲ್ಲ, ಅವರ ಕೆಲವೇ ಹಾಡುಗಳನ್ನು ಇಷ್ಟಪಡುತ್ತೇನೆ. ಆಶಾರ ಬಗ್ಗೆ ನನ್ನ ಅತ್ಯಭಿಮಾನವನ್ನು ತಿಳಿದ ಸ್ನೇಹಿತರೊಬ್ಬರು ನಾನೇಕೆ (ಗಂಡು ದನಿಯ)
ಆಶಾರ ಹಾಡುಗಳನ್ನು ಹಾಡಿ ಅವರಿಗೆ ಕಳಿಸಬಾರದೆಂಬ ಸಲಹೆ ನೀಡಿದ್ದರು. ಹೌದು, ನಾನು ಆ ಸಲಹೆಯನ್ನು ಅನುಷ್ಠಾನಕ್ಕೆ ತರಲು ಕಾತುರನಾಗಿದ್ದೇನೆ. ಲತಾ ಹಾಡುಗಳನ್ನು ಶಿಳ್ಳೆಹಾಕುತ್ತಾ ಆನಂದಿಸುತ್ತೇನೆ.

ಮದರಾಸಿನಲ್ಲಿ ಒಮ್ಮೆ ತಂಗಿದ್ದ ಹೊಟೆಲ್‌ನಲ್ಲಿ ಶವರ್ ಅಡಿಯಲ್ಲಿ ನಿಂತು ಲತಾರ ಹಾಡನ್ನು ಶಿಳ್ಳೆ ಹಾಕುತ್ತಿದ್ದೆ. ಅದು ನನಗೆ ಪಕ್ಕದ ಕೊಠಡಿಯಲ್ಲಿದ್ದ
ಬೆಂಗಾಲಿಯೊಬ್ಬನ ಪರಿಚಯ ದೊರಕಿಸಿತ್ತು. ಲತಾರ ಅನೇಕ ಹಾಡುಗಳಿಗೆ ಭಾವಬೆಸುಗೆಯ ಸಾಮರ್ಥ್ಯವಿದೆ, ಸಂಶಯವಿಲ್ಲ. ಆಶಾರ ದನಿಯಲ್ಲಿಯಂತೆ ಭ್ರಮಾಲೋಕಕ್ಕೆ ಕೊಂಡೊಯ್ಯುವ ತಾಕತ್ತಿಲ್ಲ. ಉಹೂಂ, ಜಬ್ ಜಬ್ -ಲ್ ಖಿಲೆ ಚಿತ್ರದ (ಕಲ್ಯಾಣ್ ಜೀ ಆನಂದ್ ಜೀ) ಮೋಹಕಮಯ ಏ ಸಮಾ ಹಾಡಿಗೂ ಇಲ್ಲ.
ನನ್ನ ಇಂಗ್ಲಿಷ್ ಅಂಕಣದಲ್ಲಿ, ಎಂ.ಎಸ್. ಸುಬ್ಬಲಕ್ಷ್ಮಿ ಅವರ ಪರವಶತೆ ಲತಾ ಅವರ ಗಾಯನದಲ್ಲಿಲ್ಲ ಎಂಬುದನ್ನು ಪ್ರಸ್ತಾಪಿಸಿದ್ದೆ.

ಹೌದು, ಪಂಡಿತ್ ಭೀಮಸೇನ್ ಜೋಶಿ ಅವರ ಜತೆ ಲತಾ ಹಾಡಿರುವ ರಾಮ-ಶ್ಯಾಮರ ಭಜನೆಗಳ ಕ್ಯಾಸೆಟ್ಟು ಅದಕ್ಕೆ ಆಧಾರ. ಸುಬ್ಬಮ್ಮನವರ ತಲ್ಲೀನತೆ, ಆಧ್ಯಾತ್ಮಿಕ ಆಯಾಮ ಲತಾಗಿಲ್ಲ. ನನ್ನ ಈ ಅಭಿಪ್ರಾಯಗಳು ಪೂರ್ವಗ್ರಹದಿಂದ ಕೂಡಿದ್ದಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿನ್ನೆ ನನ್ನ ಕ್ಯಾರವಾನ್‌ನಲ್ಲಿ ಅಡಕವಾಗಿರುವ ಲತಾರ ಹಾಡುಗಳನ್ನು ಕೇಳಲು ಉತ್ಸುಕನಾದೆ.

ಒಂದು ಹತ್ತು ಹಾಡುಗಳನ್ನು – ಫಾರ್ವರ್ಡ್ ಮಾಡಿದ ಮೇಲೆ ನನಗಿಷ್ಟವಾದ ಒಂದು ಹಾಡು ಸಿಕ್ಕಿತು. ಅಛಾ ತೊ ಹಮ್ ಚಲ್ತೆ ಹೈ (ಆನ್ ಮಿಲೊ ಸಜ್ನಾ, ಲಕ್ಷ್ಮಿಕಾಂತ್ ಪ್ಯಾರೇಲಾಲ). ಹೋಗಿಬನ್ನಿ ಲತಾಜೀ ಅಂತ ನನ್ನಿಂದ ಬೀಳ್ಕೊಡುಗೆ ಪಡೆಯಲೆಂದೇ ಬಂದ ಹಾಡೇನೋ ಅನ್ನಿಸಿತು. ಮನಸ್ಸು ತಡೆಯಲಿಲ್ಲ. ನಡುರಾತ್ರಿ, ಅಮರ್ ಪ್ರೇಮ್ ಚಿತ್ರದ ಬಡಾ ನಟ್ಕಟ್ ಹೈ (ಆರ್.ಡಿ. ಬರ್ಮನ್) ಹಾಡನ್ನು ಕೇಳುತ್ತಾ ಮಲಗಿದೆ. ಚುಪ್ಕೆ ಚುಪ್ಕೆ ಚಿತ್ರದ (ಎಸ್.ಡಿ.ಬರ್ಮನ್) ಶೀರ್ಷಿಕಾ ಹಾಡನ್ನು ಕೇಳುವ ಮೊದಲೇ ಮಂಪರು ಬಂದಿತ್ತು.

ಇಂದು ಬೆಳಗ್ಗೆ, ರೇಡಿಯೊನಲ್ಲಿ ನಾನು ಮಲಗುವ ಮುನ್ನ ಆಗಾಗ್ಗೆ ಕೇಳುವ ಚಂದಾ ಓ ಚಂದಾ  ಲಾಖೋನ್ ಮೇ ಏಕ್, ಆರ್.ಡಿ. ಬರ್ಮನ್) ಮತ್ತು ನಾನು ಹಲವಾರು ಬಾರಿ ವಿಸಲ್ ಮಾಡುತ್ತಲೇ ಮೈಮರೆಯುವ ಅನ್ಪಡ್ ಚಿತ್ರದ (ಮದನ್ ಮೋಹನ್) ನಿತ್ಯ ಹಸಿರಿನ ಆಪ್ ಕೀ ನಜ್ರೋನ್ ನೇ ಸಮ್ಝಾ ಹಾಡು ಮನವನ್ನು ಮುಟ್ಟಿತು. ನಾನೇ ಅನ್ಪಡ್ (ನಿರಕ್ಷರ ಕುಕ್ಷಿ) ಎನಿಸಿತು. ಕೋವಿಡ್ ಸೋಂಕು ತಗುಲಿದ್ದು ಲತಾರಿಗೋ, ನನಗೋ ಸಂಶಯ ಬಂತು. ಕೋವಿಡ್ ಸೋಂಕಿತರು ಆಘ್ರಅಣಿಸುವ ಶಕ್ತಿಯನ್ನು ಕಳೆದುಕೊಳ್ಳುವಂತೆ, ನಾನೇನಾದರೂ ಲತಾರ ಸುಶ್ರಾವ್ಯತೆಯನ್ನು ಆಸ್ವಾದಿಸುವ ಸಾಮರ್ಥ್ಯ ಕಳೆದುಕೊಂಡೆನೇ?
ಹತ್ತು ಇನ್ನಿಂಗ್ಸ್‌ನಲ್ಲಿ ಒಂದು ಸೊನ್ನೆ ಗಳಿಸಿದ್ದಕ್ಕೆ ಸಚಿನ್ ತೆಂಡುಲ್ಕರ್‌ನನ್ನು ತಿರಸ್ಕರಿಸಲಾದೀತೇ? ಬಳುವಳಿ ಪಡೆದ ದುಬಾರಿ ಕಾರಿಗೆ ಕರ ಪಾವತಿಸಲು
ಹಿಂದೇಟು ಹಾಕಿದ್ದಕ್ಕೂ, ಅವನ ಆಟಕ್ಕೂ ಸಂಬಂಧ ಕಲ್ಪಿಸಲಾಗದು.