ವಿದ್ಯಮಾನ
ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ
ಹಿಂದಿನ ಕಾಂಗ್ರೆಸ್ ಸರಕಾರವು ಚುನಾವಣೆಗೆ ಹೋಗುವ ಸ್ವಲ್ಪ ಮುಂಚಿತವಾಗಿ, ನಿಷೇಧಿತ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (ಪಿಎಫ್ ಐ) ಹಲವು ಸದಸ್ಯರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟಿದ್ದಕ್ಕಾಗಿ ಜನರಿಂದ ಟೀಕೆಗೊಳಗಾಗಿತ್ತು. ಸರಕಾರದ ಈ ಕ್ರಮ ಬಹುಸಂಖ್ಯಾತ ಹಿಂದೂಗಳ ಬೇಸರಕ್ಕೆ ಕಾರಣ ವಾಗಿ, ಚುನಾವಣೆಯಲ್ಲಿ ಕಾಂಗ್ರೆಸ್ಗೆ ದೊಡ್ಡ ಪೆಟ್ಟನ್ನೂ ನೀಡಿತ್ತು.
ದಶಕಗಳಿಂದಲೂ ಅಲ್ಪಸಂಖ್ಯಾತರ ತುಷ್ಟೀಕರಣದ ಆರೋಪಗಳನ್ನು ಹೊತ್ತುಕೊಂಡೇ ಬಂದಿರುವ ಕಾಂಗ್ರೆಸ್ನ ಮೇಲೆ ಅಂಥದ್ದೇ ಮತ್ತೊಂದು ಆರೋಪ ಬರುವಂತಾಗುವುದಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಅನುವು ಮಾಡಿ ಕೊಟ್ಟಿದೆ. 2022ರ ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ 43 ಕರಣಗಳನ್ನು ಗೃಹ ಸಚಿವ ಪರಮೇಶ್ವರ
ನೇತೃತ್ವದ ಸಂಪುಟ ಉಪಸಮಿತಿಯ ಶಿಫಾರಸಿನ ಮೇರೆಗೆ ಹಿಂಪಡೆಯಲು ಸರಕಾರವು ಕಳೆದ ವಾರ ನಿರ್ಧರಿಸಿರು
ವುದೇ ಇದಕ್ಕೆ ಸಾಕ್ಷಿ. ಈ 43 ಪ್ರಕರಣಗಳಲ್ಲಿ, ಪೂರ್ವನಿಯೋಜಿತವೆಂದು ಹೇಳಲಾಗುವ, 2022ರಲ್ಲಿ ಹುಬ್ಬಳ್ಳಿ
ಯಲ್ಲಿ ನಡೆದಿದ್ದ ಗಂಭೀರ ಸ್ವರೂಪದ ಗಲಭೆ ಪ್ರಕರಣವೂ ಸೇರಿರುವುದು ವಿವಾದಕ್ಕೆ ಕಾರಣವಾಯಿತು.
ಈ ಪ್ರಕರಣವನ್ನು ಹಿಂತೆಗೆದುಕೊಳ್ಳುವ ನಿರ್ಧಾರವು, ಕಾಂಗ್ರೆಸ್ ಸರಕಾರವು ಸಾಮಾಜಿಕ ನ್ಯಾಯವನ್ನು ಬಲಿಕೊಟ್ಟು ಕೇವಲ ಮುಸ್ಲಿಂ ಸಮುದಾಯದ ಪರವಾಗಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ವಿಪಕ್ಷಗಳು ಆರೋಪಿಸಿದವು. ಇದಕ್ಕೆ, “ಸರಿಯಾದ ಪ್ರಕ್ರಿಯೆಯ ಪ್ರಕಾರವೇ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದೆ
ಮತ್ತು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಇಂಥ ಹಲವು ಪ್ರಕರಣಗಳನ್ನು ಹಿಂತೆಗೆದುಕೊಂಡ
ನಿದರ್ಶನಗಳಿವೆ” ಎಂಬುದು ಕಾಂಗ್ರೆಸ್ನ ಸಮರ್ಥನೆ.
ರಾಜ್ಯ ಜೆಡಿಎಸ್ ಮತ್ತು ಬಿಜೆಪಿ ನಾಯಕರುಗಳು ಸರಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು,
“ಕರ್ನಾಟಕ ದಲ್ಲಿ ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ಉತ್ತುಂಗವನ್ನು ತಲುಪಿದ್ದು, ಅದು ಭಯೋತ್ಪಾ ದಕರನ್ನು
ಬೆಂಬಲಿಸುವವರ ಪಕ್ಷವಾಗುತ್ತಿದೆ” ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇರವಾಗಿ ಟೀಕಿಸಿದ್ದಾರೆ.
ಆದರೆ, ಸರಕಾರದ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ
ಪರಮೇಶ್ವರ ಅವರು, “ಪ್ರತಿಭಟನಾಕಾರರ ವಿರುದ್ಧ ಉದ್ದೇಶಪೂರ್ವಕವಾಗಿ ಅಥವಾ ಸುಳ್ಳು ಪ್ರಕರಣಗಳನ್ನು
ದಾಖಲಿಸಿದಾಗಲೆಲ್ಲಾ ಸಂಪುಟ ಉಪಸಮಿತಿಯು ಅಂಥ ಪ್ರಕರಣಗಳನ್ನು ಪರಿಶೀಲಿಸಿ, ಹಿಂತೆಗೆದುಕೊಳ್ಳುವಂತೆ
ಕ್ಯಾಬಿನೆಟ್ಗೆ ಶಿಫಾರಸು ಮಾಡಿರುವ ಉದಾಹರಣೆಗಳಿವೆ.
ಇಂಥ ನಿರ್ಧಾರವನ್ನು ಕೈಗೊಳ್ಳುತ್ತಿರುವುದರಲ್ಲಿ ನಮ್ಮ ಸರಕಾರವೇ ಮೊದಲಿನದಲ್ಲ; ಹಿಂದಿನ ಬಿಜೆಪಿ ಸರಕಾರವೂ ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧದ ಅನೇಕ ಪ್ರಕರಣಗಳನ್ನು ಹಿಂತೆಗೆದುಕೊಂಡಿ
ದ್ದಿದೆ. ವ್ಯವಸ್ಥೆಯೇ ಹೀಗಿರುವಾಗ ನಮ್ಮ ಸರಕಾರದ ಮೇಲಷ್ಟೇ ಆರೋಪಮಾಡುವುದು ಸರಿಯಲ್ಲ” ಎನ್ನುವ ಮೂಲಕ ಸರಕಾರದ ನಡೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. “ನಾವು ವ್ಯವಸ್ಥೆಯ ಚೌಕಟ್ಟಿ ನೊಳಗೇ ಕೆಲಸ ಮಾಡಿದ್ದೇವೆ. ಅಲ್ಪಸಂಖ್ಯಾತರ ವಿರುದ್ಧವಿರುವ ಪ್ರಕರಣಗಳನ್ನಷ್ಟೇ ಅಲ್ಲದೆ, ರೈತರು, ವಿದ್ಯಾರ್ಥಿಗಳು ಮತ್ತು ವಿವಿಧ ಆಂದೋಲನಗಳಲ್ಲಿ ಭಾಗವಹಿಸಿದ ಸಾಮಾನ್ಯ ನಾಗರಿಕರುಗಳ ಮೇಲಿನ ಅನೇಕ ಪ್ರಕರಣ ಗಳನ್ನೂ ಹಿಂಪಡೆಯಲು ತೀರ್ಮಾನಿಸಿದ್ದೇವಲ್ಲಾ!” ಎನ್ನುವುದು ಗೃಹಮಂತ್ರಿಗಳ ಸ್ಪಷ್ಟೀಕರಣ.
ಆದರೆ, “ಹುಬ್ಬಳ್ಳಿಯ ಪ್ರಕರಣವು ಇತರ ಸಣ್ಣಪುಟ್ಟ ಹೋರಾಟಗಳ ಜತೆಗೆ ಸಮೀಕರಿಸುವಂಥದ್ದಲ್ಲ; ಗಂಭೀರ
ಸ್ವರೂಪದ ಈ ಪ್ರಕರಣವನ್ನು ಪ್ರತ್ಯೇಕವಾಗಿ ನೋಡಬೇಕು” ಎಂಬುದು ರಾಜ್ಯದ ಜನರ ಆಗ್ರಹ. ಹಿಂಪಡೆಯಲು ನಿರ್ಧರಿಸಿರುವ 2022ರ ಹುಬ್ಬಳ್ಳಿಯ ಗಲಭೆ ಪ್ರಕರಣ ಮತ್ತು ಅಂಥದೇ ಇತರ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ಹೇಳಿದರೆ ಓದುಗರಿಗೆ ಅದರ ಗಂಭೀರತೆಯ ಅರಿವಾಗಬಹುದು. ಏಪ್ರಿಲ್ 16ರಂದು, ಅಭಿಷೇಕ್ ಹಿರೇಮಠ್ ಎನ್ನುವವರ ಸಾಮಾಜಿಕ ಜಾಲತಾಣದ ಪೋಸ್ಟ್ನಿಂದ ಪ್ರಚೋದನೆಗೊಳಗಾದ ಮುಸಲ್ಮಾನರ ದೊಡ್ಡ ಗುಂಪೊಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿತು. ನಂತರ, ಹಿರೇಮಠ್ ರ ಬಂಧನದ ಹೊರತಾಗಿಯೂ, “ಪೊಲೀಸರು ಈ ಪ್ರಕರಣದಲ್ಲಿ ಕ್ಷಿಪ್ರವಾಗಿ ಮತ್ತು ನಿಷ್ಠುರವಾಗಿ ವರ್ತಿಸುತ್ತಿಲ್ಲ” ಎಂಬ ಸಬೂಬು ಹೇಳಿ ಸುಮಾರು 150 ಪ್ರತಿಭಟನಾಕಾರರನ್ನು ಒಳಗೊಂಡಿದ್ದ ಈ ಗುಂಪು ಹಿಂಸಾಚಾರಕ್ಕೆ ಮುಂದಾಯಿತು. ಪೊಲೀಸ್ ಠಾಣೆಗೆ ಕಲ್ಲುತೂರುವಿಕೆ, ಪೊಲೀಸ್ ವಾಹನಗಳನ್ನು ಜಖಂಗೊಳಿಸುವಿಕೆ, ಹನುಮಾನ್ ದೇಗುಲ ಮತ್ತು ಆಸ್ಪತ್ರೆ ಸೇರಿದಂತೆ ಸನಿಹದ ಕಟ್ಟಡಗಳ ಮೇಲಿನ ದಾಳಿ ಇತ್ಯಾದಿಗಳ ಮೂಲಕ ಆ ಪ್ರದೇಶವು ಉದ್ವಿಗ್ನಗೊಳ್ಳಲು ಕಾರಣವಾಯಿತು.
ವಿವಾದಾತ್ಮಕ ಧರ್ಮಗುರು ಮೌಲಾನಾ ವಾಸಿಂ ಮಾಡಿದ ಪ್ರಚೋದನಕಾರಿ ಭಾಷಣದಿಂದ ಉತ್ತೇಜಿತವಾದ ಗುಂಪು
ಪೊಲೀಸರ ಮೇಲೆ ತೀವ್ರ ಆಕ್ರಮಣ ಮಾಡಿದ್ದರಿಂದಾಗಿ ಅವರಲ್ಲನೇಕರು ಗಂಭೀರವಾಗಿ ಗಾಯಗೊಂಡರು;
ಅನಿಲ್ ಕಂಡೇಕರ್ ಮತ್ತು ಮಂಜುನಾಥ್ ಎಂಬಿಬ್ಬರು ಪೇದೆಗಳು ಮಾರಣಾಂತಿಕ ಹಲ್ಲೆಗೊಳಗಾಗಿ ಸ್ವಲ್ಪದರಲ್ಲೇ
ಪಾರಾಗಿದ್ದರು. ಗಲಭೆಗಳಿಗೆ ಚಿತಾವಣೆ ನೀಡುವಲ್ಲಿ ‘ರಾಝಾ ಅಕಾಡೆಮಿ’ ಎಂಬ ತೀವ್ರಗಾಮಿ ಇಸ್ಲಾಮಿಸ್ಟ್
ಸಂಘಟನೆಗೆ ಸಂಬಂಽಸಿದ ಹಲವು ಸದಸ್ಯರು ಮತ್ತು ‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್’ (ಎಐಎಂಐಎಂ) ನಾಯಕರ ಪಾತ್ರವಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂತು.
ಹುಬ್ಬಳ್ಳಿ ಘಟನೆಯಂತೆಯೇ, 2019ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಾಲ್ಮೀಕಿ ಜಯಂತಿಯ
ಆಚರಣೆಯ ಸಂದರ್ಭದಲ್ಲಿ ಪೊಲೀಸರ ಮೇಲಾದ ಮತ್ತೊಂದು ಹಲ್ಲೆ ಪ್ರಕರಣ, ದಾವಣಗೆರೆ ಜಿಲ್ಲೆಯ
ಹರಿಹರದಲ್ಲಿ 2022ರಲ್ಲಿ ಹಿಜಾಬ್ ಪರ-ವಿರೋಧಿ ಪ್ರತಿಭಟನೆಯ ವೇಳೆ ಹಿಜಾಬ್ ಎಳೆದ ಆರೋಪದ
ಮೇಲೆ ಪದವಿ ಓದುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯ ಮೇಲೆ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಪ್ರಕರಣ
ಮತ್ತು ಎಐಎಂಐಎಂ ನಾಯಕ ಜಹೀರುದ್ದೀನ್ ಅನ್ಸಾರಿ ನೇತೃತ್ವದ ಹಿಜಾಬ್ ಪರ ಪ್ರತಿಭಟನಾಕಾರರ ವಿರುದ್ಧ
ಕಲಬುರಗಿ ಜಿಲ್ಲೆಯ ಆಳಂದದಲ್ಲಿ 2022ರಲ್ಲಿ ದಾಖಲಾದ ಪ್ರಕರಣ ಇವನ್ನೂ ಹಿಂಪಡೆಯಲು ಕ್ಯಾಬಿನೆಟ್
ನಿರ್ಧರಿಸಿದೆ. 2008ರಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ನಾರಾಯಣಗೌಡರ ವಿರುದ್ಧ, ರೇಲ್ವೆ
ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದ ಮತ್ತು ಕೇಬಲ್ ನೆಟ್ವರ್ಕ್ ಕಚೇರಿಯ
ಮೇಲಿನ ದಾಳಿಗೆ ಸಂಬಂಧಿಸಿ ದಾಖಲಾಗಿದ್ದ ಪ್ರಕರಣವೂ ಈ ಪ್ರಸ್ತಾವನೆಯಲ್ಲಿ ಸೇರಿವೆ.
ಇದು ಇಷ್ಟಕ್ಕೇ ನಿಲ್ಲುವುದಿಲ್ಲ. 2020ಲ್ಲಿ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಭಯಾನಕ ಗಲಭೆ ಯಲ್ಲಿ ಬಂಧಿತರಾಗಿರುವವರನ್ನು ಬಿಡುಗಡೆಗೊಳಿಸಿ ಆ ಪ್ರಕರಣವನ್ನು ಹಿಂಪಡೆಯಲೂ ಕಾಂಗ್ರೆಸ್ ಸರಕಾರ
ಯತ್ನಿಸುತ್ತಿದೆ ಎನ್ನಲಾಗುತ್ತಿದೆ. 2020ರ ಆಗಸ್ಟ್ 11ರಂದು, ಆ ಕ್ಷೇತ್ರದ ಅಂದಿನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿಕ ಎನ್ನಲಾಗುವ ನವೀನ್ ಎಂಬಾತ ಮುಸಲ್ಮಾನರ ಕುರಿತಾಗಿ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಅದನ್ನು ವಿರೋಧಿಸಿ, ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳ ಮುಂದೆ ಜಮಾಯಿಸಿದ್ದ ಸಾವಿರಾರು ಜನರ ಗುಂಪು, ನವೀನ್ನನ್ನು ಬಂಧಿಸಿ ತಮಗೊಪ್ಪಿಸುವಂತೆ ಆಗ್ರಹಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿತ್ತು.
ಅದು ತೀವ್ರಗೊಂಡು ಠಾಣೆಯ ಮೇಲೆ ದಾಳಿಯಾಗಿ ಪೊಲೀಸರ ಮತ್ತು ಸಾರ್ವಜನಿಕರ ವಾಹನಗಳಿಗೆ ಬೆಂಕಿಯಿಡ ಲಾಗಿತ್ತು. ನಂತರ ಸದರಿ ನವೀನ್ನ ಸಂಬಂಧಿಕರು ಎನ್ನುವ ಕಾರಣಕ್ಕೆ ಅಖಂಡ ಶ್ರೀನಿವಾಸಮೂರ್ತಿ ಯವರ ಮನೆಮೇಲೂ ದಾಳಿ ನಡೆಸಿ ಬೆಂಕಿ ಹಚ್ಚಲಾಗಿತ್ತು. ವಿಪಕ್ಷಗಳ ವರಾತದಿಂದಾಗಿ ಅಂದು ಈ ಪ್ರಕರಣವನ್ನು ರಾಜ್ಯ ಸರಕಾರವು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವರ್ಗಾಯಿಸಿತ್ತು. ತನಿಖೆ ನಡೆಸಿದ್ದ ಎನ್ಐಎ 400ಕ್ಕೂ ಹೆಚ್ಚು ಜನರನ್ನು ಬಂಧಿಸಿತ್ತು.
“ಈ ಘಟನೆಗೆ ಸಂಬಂಧಿಸಿ ಅನೇಕ ಅಮಾಯಕರನ್ನು ಬಂಧಿಸಲಾಗಿದೆ, ಹಾಗಾಗಿ ಸರಕಾರ ಇವರುಗಳ ಮೇಲಿನ ಮೊಕದ್ದಮೆಯನ್ನು ಕೂಡಲೇ ವಾಪಸ್ ಪಡೆಯಬೇಕು” ಎಂದು ಮೈಸೂರಿನ ಶಾಸಕ ತನ್ವೀರ್ ಸೇಠ್ ಅವರು ಕೆಲ ಕಾಲದ ನಂತರ ಸರಕಾರಕ್ಕೆ ಪತ್ರ ಬರೆದಿದ್ದರು. ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದ ಮೂವರು ಪ್ರಮುಖ ಆರೋಪಿಗಳು ಕಾಂಗ್ರೆಸ್ ನಾಯಕರ ಆಪ್ತರಾಗಿದ್ದು, ಅವರನ್ನು ರಕ್ಷಿಸಲು ತನ್ವೀರ್ ಸೇಠ್ ಯತ್ನಿಸು ತ್ತಿದ್ದಾರೆ ಮತ್ತು ಅವರ ಮನವಿಯ ಮೇರೆಗೆ ಈ ಆರೋಪಿಗಳನ್ನು ರಕ್ಷಿಸಲು ಕಾಂಗ್ರೆಸ್ ಮುಂದಾಗಿದೆ ಎಂಬುದು ಬಿಜೆಪಿಯ ದೂರು. “ಪ್ರಕರಣದಲ್ಲಿ ಕೆಲವರ ವಿರುದ್ಧ ಸುಳ್ಳು ದೋಷಾರೋಪಣೆ ಮಾಡಲಾಗಿದೆ ಎಂದು ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.
ಹಾಗಾಗಿ ನಾವು ಆ ಪತ್ರದಲ್ಲಿರುವ ವಿಚಾರದ ಪರಿಶೀಲನೆಯ ಹೊಣೆಯನ್ನು ಸಂಪುಟ ಉಪಸಮಿತಿಗೆ ವಹಿಸಿದ್ದೇವೆ. ಸಮಿತಿ ಸಲ್ಲಿಸುವ ವರದಿಯನ್ನು ಆಧರಿಸಿ ನಾವು ಸಂಪುಟಸಭೆಯಲ್ಲಿ ಚರ್ಚಿಸುತ್ತೇವೆ” ಎಂಬುದು ಕಾಂಗ್ರೆಸ್ನ ಪ್ರತಿಕ್ರಿಯೆ. ಈಗ ವಿಧಾನಸಭೆಗೆ ಉಪಚುನಾವಣೆ ನಡೆಯಲಿರುವ ಶಿಗ್ಗಾಂವ್, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಬಾಹುಳ್ಯವಿದ್ದು, ಆ ಮತದಾರರನ್ನು ಓಲೈಸಲೆಂದೇ ತೀವ್ರ ವಿರೋಧದ ನಡುವೆಯೂ ಇಂಥ ಗಂಭೀರ ಪ್ರಕರಣಗಳನ್ನು ಹಿಂಪಡೆಯಲು ಕರ್ನಾಟಕ ಸರಕಾರ ಮುತುವರ್ಜಿ ವಹಿಸಿದೆ ಎಂಬ ಆರೋಪ ಕೇಳಿಬರುತ್ತಿದೆ. ಗಲಭೆಯಾದ ಇಂಥ ಸ್ಥಳಗಳಲ್ಲಿ ವರ್ಷಗಳು ಕಳೆದರೂ ಭಯದ ವಾತಾವರಣ ಹಾಗೇ ಉಳಿದುಬಿ ಡುತ್ತದೆ. ಸಾರ್ವಜನಿಕರ ಆಸ್ತಿಪಾಸ್ತಿಗಳು ನಾಶವಾಗಿ ಸರಕಾರಕ್ಕೆ ದೊಡ್ಡಮಟ್ಟದ ನಷ್ಟವಾಗುತ್ತದೆ. ಮಾತ್ರವಲ್ಲದೆ, ಇಂಥ ಗಲಭೆಗಳು ನಡೆದಾಗ ಪ್ರಾಣದ ಹಂಗು ತೊರೆದು ಹೋರಾಡುವ ಪೊಲೀಸ್ ಅಧಿಕಾರಿಗಳ
ಮನೋಸ್ಥೈರ್ಯ ಕುಸಿದುಬಿಡುತ್ತದೆ ಎಂಬುದನ್ನು ಸರಕಾರ ಗಮನಿಸಬೇಕಿದೆ.
ಗಲಭೆ ಪ್ರಕರಣವನ್ನು ಹಿಂತೆಗೆದುಕೊಳ್ಳುವುದರಿಂದ ಸಮಾಜಘಾತುಕರಿಗೆ ಪ್ರೋತ್ಸಾಹ ದೊರೆತಂತಾಗಿ, ಇಂಥ ಹಿಂಸಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಮುಂದೊಂದು ದಿನ ಯಾರ ಹತೋಟಿಗೂ ಸಿಗದಂತಾಗುತ್ತವೆ. ಸದ್ಯ, ಮಣಿಪುರದಲ್ಲಿ ಏನಾಗುತ್ತಿದೆ ಎಂಬುದು ನಮ್ಮ ಕಣ್ಣ ಮುಂದಿದೆ. ದಿನ ಬೆಳಗಾದರೆ ಕೋಮುಗಲಭೆಯಾಗುತ್ತಿದ್ದ ಉತ್ತರ ಪ್ರದೇಶದಲ್ಲಿ, ಅಲ್ಲಿನ ಸರಕಾರದ ನಿಷ್ಠುರ ಧೋರಣೆಯಿಂದಾಗಿ ಕಳೆದ 10 ವರ್ಷಗಳಲ್ಲಿ ಕೋಮುಗಲಭೆಗಳು ಶೂನ್ಯ ಮಟ್ಟಕ್ಕೆ ತಲುಪಿರುವ ಮಾದರಿಯೂ ದೇಶದ ಮುಂದಿದೆ.
ರಾಜ್ಯದ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು ಮುಂತಾದೆಡೆ ಕೋಮುಗಲಭೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ. ಹೀಗಾಗಿ, ಕಾನೂನನ್ನು ಕೈಗೆತ್ತಿಕೊಳ್ಳುವಂಥ ಮತ್ತು ಹಿಂಸಾತ್ಮಕ ದಾಳಿಗಿಳಿಯುವಂಥ ಯತ್ನಗಳನ್ನು ಹತ್ತಿಕ್ಕಲು ಹೊಸ ಕಾನೂನು ತರುವುದು ಸೇರಿದಂತೆ ಸಾಧ್ಯವಾದ ಎಲ್ಲ ಕ್ರಮಕ್ಕೂ ರಾಜ್ಯ ಸರಕಾರ ಮುಂದಾಗಬೇಕಿದೆ. ಅದನ್ನು ಬಿಟ್ಟು, ಪ್ರಕರಣವನ್ನೇ ಹಿಂತೆಗೆದುಕೊಳ್ಳಲು ಸರಕಾರವೇ ಮುಂದಾದರೆ, ಸಮಾಜದಲ್ಲಿ ‘ಗಲಭೆಕೋರ ಚಿತ್ತಸ್ಥಿತಿಗಳು’ ಇನ್ನೂ ಬೆಳೆಯಲು ಸರಕಾರವೇ ನೀರು- ಗೊಬ್ಬರ ಹಾಕಿದಂತಾಗುತ್ತದೆ. “ಹಿಂದೆ ಬೇರೆ ಸರಕಾರಗಳೂ ಹೀಗೇ ಮಾಡಿರುವುದರಿಂದ ನಾವೂ ಹಾಗೇ ಮಾಡುತ್ತೇವೆ” ಎನ್ನುವುದು ಖಂಡಿತ ಸರಿಯಾದ ಸಮರ್ಥನೆಯಾಗುವುದಿಲ್ಲ, ಜನರು ಅದನ್ನು ಒಪ್ಪುವುದೂ ಇಲ್ಲ.
ಕಾನೂನನ್ನು ಕೈಗೆತ್ತಿಕೊಂಡು ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ತೀವ್ರಕ್ರಮ ಜರುಗಿಸುವಲ್ಲಿ ಶ್ರಮವಹಿಸದೇ ಅವರನ್ನು ಬಚಾವ್ ಮಾಡಲು ಹೆಚ್ಚು ಆಸಕ್ತಿ ತೋರಿದರೆ, ಸಮಾಜಕ್ಕೆ ಅತ್ಯಂತ ಕೆಟ್ಟ ಸಂದೇಶ
ರವಾನೆಯಾಗುತ್ತದೆ, ಸಾಮಾಜಿಕ ಶಾಂತಿ ಮತ್ತು ಸ್ವಾಸ್ಥ್ಯ ಹದಗೆಡುತ್ತವೆ ಎನ್ನುವ ಪರಿಜ್ಞಾನ ಸರಕಾರಗಳಿಗೆ ಇರಬೇಕಾಗುತ್ತದೆ. ಅಷ್ಟಕ್ಕೂ, ಇಂಥ ಪ್ರಕರಣಗಳಲ್ಲಿ ಮೊಕದ್ದಮೆ ಎದುರಿಸುತ್ತಿರುವವರು ಅಮಾಯಕರೋ
ಅಲ್ಲವೋ ಎಂಬುದನ್ನು ತೀರ್ಮಾನಿಸಲು ನ್ಯಾಯವ್ಯವಸ್ಥೆಯಂತೂ ಇದ್ದೇ ಇದೆ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
ಇದನ್ನೂ ಓದಿ: Vinayak M Bhatta, Amblihonda Column: ನೀ ನನಗಾದರೆ ನಾ ನಿನಗೆ, ನನ್ನ ಸುದ್ದಿಗೆ ಬಂದರೆ…