Tuesday, 10th September 2024

ಕಾನೂನಿನ ಅಜ್ಞಾನಕ್ಕೆ ಕ್ಷಮೆಯಿಲ್ಲ

‘ಬಿಗ್‌ಬಾಸ್’ ಸ್ಪರ್ಧಿಯೊಬ್ಬರು ಹುಲಿಯುಗುರಿನ ಸರ ಧರಿಸಿದ್ದು ಸಮಾಜಕ್ಕೆ ತಪ್ಪುಸಂದೇಶ ರವಾನಿಸಿತ್ತು. ತಕ್ಷಣವೇ ಕಾಯಪ್ರವೃತ್ತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಅವರನ್ನು ಬಂಧಿಸಿದ ಬಳಿಕ, ಈ ಆರೋಪವೀಗ ಹಲವು ಗಣ್ಯರ ಮೇಲೂ ಬಂದಿದೆ. ಮತ್ತೊಂದೆಡೆ, ‘ಮನೆಯಲ್ಲಿ ನಮ್ಮ ತಾತ-ಮುತ್ತಾತನ ಕಾಲದಿಂದ ಜಿಂಕೆಕೊಂಬು, ಕಾಡೆಮ್ಮೆಯ ಕೊಂಬಿನ ಬಾಚಣಿಗೆ ಇದೆ.

ಅವನ್ನು ಇಟ್ಟುಕೊಳ್ಳುವುದು ಅಪರಾಧವೇ?’ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇಂಥ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ನಾಡದೇವಿ ಚಾಮುಂಡೇಶ್ವರಿಯ ವಾಹನ ಎನ್ನಲಾಗುವ ಹುಲಿಯ ಉಗುರು, ಕೋರೆಹಲ್ಲಿನಿಂದಾಗಲಿ ಅಥವಾ ದುರ್ಗಾ ಮಾತೆಯ ವಾಹನ ಸಿಂಹದ ಉಗುರಿ
ನಿಂದಾಗಲಿ ಲಾಕೆಟ್ ಮಾಡಿಸಿಕೊಂಡು ಎದೆಗೆ ತಾಗುವಂತೆ ಧರಿಸಿದ್ದರೆ ಸದಾ ಸುರಕ್ಷತೆ ಇರುತ್ತದೆ, ಅಜೇಯರಾಗಿರುತ್ತೇವೆ, ಅದೃಷ್ಟ ಖುಲಾಯಿಸುತ್ತದೆ ಎಂಬ ತಪ್ಪುಕಲ್ಪನೆ ಹಲವರಲ್ಲಿದೆ. ಹೀಗಾಗಿ ಸಾವಿರಾರು ರುಪಾಯಿ ಕೊಟ್ಟು ಈ ಉಗುರು ಖರೀದಿಸುವವರಿದ್ದಾರೆ. ಇಂಥವರು ಸಿಗುತ್ತಾರೆಂದೇ ಕಳ್ಳಬೇಟೆಗಾರರು ಅಳಿವಿನಂಚಿನಲ್ಲಿರುವ ಹುಲಿಗಳನ್ನು ಬೇಟೆಯಾಡುತ್ತಾರೆ.

ಅಂದರೆ ಕಳ್ಳಬೇಟೆಗೆ ಖರೀದಿದಾರರು ಪರೋಕ್ಷವಾಗಿ ಪ್ರೋತ್ಸಾಹಿಸಿದಂತಾಗುತ್ತದೆ. ಹುಲಿಯ ಉಗುರು ಧರಿಸಿದ ಮಾತ್ರಕ್ಕೆ ಅಜೇಯರಾಗು ವಂತಿದ್ದಿದ್ದರೆ, ಅದರ ಸರ ಧರಿಸಿದ್ದ ಕಾಡುಗಳ್ಳ ವೀರಪ್ಪನ್ ಬೀದಿಹೆಣವಾಗುತ್ತಿರಲಿಲ್ಲ. ಆನೆಯ ದಂತ ಮತ್ತು ಬಾಲದ ಕೂದಲು, ಜಿಂಕೆ ಅಥವಾ ಸಾರಂಗದ ಕೊಂಬಿನ ವಿಚಾರದಲ್ಲೂ ಈ ತಪ್ಪುಕಲ್ಪನೆಯಿದೆ. ಜಿಂಕೆಯ ಕೊಂಬನ್ನು ಮರದ ಫಲಕಕ್ಕೆ ಅಳವಡಿಸಿ ಅಲಂಕಾರಿಕವಾಗಿ ತೂಗುಹಾಕಿರುವುದನ್ನು ಗ್ರಾಮೀಣ ಭಾಗದ ಕೆಲವೊಂದು ಹಳೆಯ ಮನೆಗಳಲ್ಲಿ ಇಂದಿಗೂ ಕಾಣಬಹುದು.

ಜಿಂಕೆ/ಸಾರಂಗದ ಕೊಂಬಿನ ಕೆಳಗೆ ಓಡಾಡಿದರೆ ಅದೃಷ್ಟ ಬರುತ್ತದೆ ಎಂಬ ನಂಬಿಕೆ ಕೆಲವರಲ್ಲಿದೆ. ಇಂಥ ಕೊಂಬುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆಯ ಜಾರಿಗೂ ಮುನ್ನ ಇಟ್ಟುಕೊಂಡಿದ್ದಲ್ಲಿ ಅವುಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ದೃಢೀಕರಣ ಮಾಡಿಸಿ, ನೋಂದಾಯಿಸಿ ನಂತರ ಇಟ್ಟುಕೊಳ್ಳಲು ಅವಕಾಶ ನೀಡಲಾಗಿತ್ತು. ನೋಂದಾಯಿಸದಿದ್ದರೆ ಅದು ವನ್ಯಜೀವಿಗಳ ಅಂಗಾಂಗದ ಅಕ್ರಮ ಸಂಗ್ರಹಣೆಯೆನಿಸಿ ಅಪರಾಧವಾಗುತ್ತದೆ. ಅದೇ ರೀತಿ, ಆನೆಯದ ದಂತವನ್ನು ಕತ್ತರಿಸಿ ಮರದ ಹಲಗೆಗೆ ಹುದುಗಿಸಿದ (ಇನ್‌ಲೇ) ದೇವತಾ ಮೂರ್ತಿಗಳು, ಅಲಂಕಾರಿಕ ವಸ್ತುಗಳನ್ನು ಕೆಲವರ ಮನೆಯಲ್ಲಿ ಕಾಣಬಹುದು. ಇಂಥ ಐವರಿ ಇನ್‌ಲೇ ಕೌಶಲಕ್ಕೆ, ದಂತದಿಂದ ಕೆತ್ತಿದ ವಿಗ್ರಹಗಳಿಗೆ ಹಿಂದೆ ಮೈಸೂರು ಖ್ಯಾತಿ ಪಡೆದಿತ್ತು. ಈಗ ಆನೆಯ ದಂತದಿಂದ ತಯಾರಿಸಿದ ವಸ್ತುವನ್ನು ಇಟ್ಟುಕೊಳ್ಳುವುದು ಅಪರಾಧ.

ಆದರೆ ಕಾಯಿದೆ ಜಾರಿಗೂ ಹಿಂದಿನಿಂದ ಇಂಥ ಮೂರ್ತಿ/ಅಲಂಕಾರಿಕ ವಸ್ತುಗಳು ಮನೆಯಲ್ಲಿದ್ದರೆ ಅವುಗಳ ದೃಢೀಕರಣ ಮತ್ತು ನೋಂದಣಿ
ಕಡ್ಡಾಯ. ಇಲ್ಲಿ ‘ನಮಗೆ ಕಾನೂನಿನ ಅರಿವಿರಲಿಲ್ಲ’ ಎಂದು ಹೇಳಲಾಗುವುದಿಲ್ಲ. ಕಾರಣ, ‘ಕಾನೂನಿನ ಅರಿವಿಲ್ಲ ಎಂಬುದಕ್ಕೆ ಕ್ಷಮೆಯಿಲ್ಲ’. ನ್ಯಾಯಾಧೀಶರು ಈ ಬಗ್ಗೆ ಪರಾಮರ್ಶಿಸಿ ಸೂಕ್ತ ತೀರ್ಪು ನೀಡುತ್ತಾರೆ. ಆನೆಬಾಲದ ಕೂದಲನ್ನು ಸುತ್ತಿ ರೂಪಿಸಿದ ಉಂಗುರ ಧರಿಸಿದರೆ ಕೆಲಸ
ಸಿಗುತ್ತದೆ, ವ್ಯಾಪಾರದಲ್ಲಿ ಲಾಭವಾಗುತ್ತದೆ, ಬೇಗ ಮದುವೆಯಾಗುತ್ತದೆ ಎಂಬೆಲ್ಲಾ ಮಾತುಗಳನ್ನು ನಂಬಿದವರು ತಿಳಿದೋ ತಿಳಿಯದೆಯೋ
ಸಾವಿರಾರು ರುಪಾಯಿ ಕೊಟ್ಟು ಇಂಥ ಉಂಗುರವನ್ನು ಖರೀದಿಸಿ ಧರಿಸುವುದಿದೆ.

ವಿಮಾನ ನಿಲ್ದಾಣಗಳಲ್ಲಿನ ತಪಾಸಣೆಯ ವೇಳೆ, ಇಲ್ಲವೇ ಈ ಬಗ್ಗೆ ಮಾಹಿತಿಯಿರುವ ಯಾರಾದರೂ ದೂರು ನೀಡಿ ಅದು ವನ್ಯಜೀವಿಯ ಅಂಗಾಂಗದ ಭಾಗವೆಂದು ಸಾಬೀತಾದರೆ ಸೆರೆವಾಸ ಖಚಿತ. ವರ್ಷಗಳ ಹಿಂದೆ ಜಿಂಕೆಕೊಂಬು ಹೊಂದಿದ್ದ ಕಾರ್ಕಳ ಮೂಲದ ಮಹಿಳಾ ಪ್ರಯಾಣಿಕರನ್ನು ೨೦೧೮ರಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಹಲವು ಧಾರ್ಮಿಕರ ಮನೆಗಳಲ್ಲಿ, ಆಶ್ರಮ-ಮಠಗಳಲ್ಲಿ ಧ್ಯಾನ ಮಾಡುವಾಗ, ಜಪ-ತಪ ಆಚರಿಸುವಾಗ ಹಾಸಿಕೊಳ್ಳಲು ಹುಲಿ ಅಥವಾ ಜಿಂಕೆಯ ಚರ್ಮವನ್ನು ಬಳಸುತ್ತಾರೆ. ಆದರೆ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಹೀಗೆ ಯಾವುದೇ ವನ್ಯಜೀವಿಯ ಚರ್ಮವನ್ನು ಇಟ್ಟುಕೊಳ್ಳುವುದು ಅಪರಾಧ. ಮಾತ್ರವಲ್ಲ, ವನ್ಯಜೀವಿಗಳ ಚರ್ಮದಿಂದ ತಯಾರಿಸಿದ ಜಾಕೆಟ್, ಪರ್ಸ್, ವ್ಯಾನಿಟಿ ಬ್ಯಾಗ್ ಇತ್ಯಾದಿಯನ್ನು ಇಟ್ಟುಕೊಳ್ಳುವುದೂ ಅಪರಾಧವೇ. ಕಾಡೆಮ್ಮೆ/ಜಿಂಕೆಯ ಕೊಂಬು, ಆನೆದಂತ ಅಥವಾ ಯಾವುದೇ ವನ್ಯಜೀವಿಯ ದೇಹಭಾಗ, ಚರ್ಮದಿಂದ ಮಾಡಿದ ಟ್ರೋಫಿಗಳನ್ನು ನೀಡುವುದು, ಅವನ್ನು ಪಡೆದು ಇಟ್ಟುಕೊಳ್ಳುವುದು, ಪುನಗು ಬೆಕ್ಕಿನಿಂದ ತೆಗೆದ ಪುನುಗುದ್ರವ್ಯ, ಕಸ್ತೂರಿ ಮೃಗದಿಂದ ಸಂಗ್ರಹಿಸುವ ಪರಿಮಳ ದ್ರವ್ಯ ಇತ್ಯಾದಿಯನ್ನು ಖರೀದಿಸುವುದು ಕೂಡ ಕಾಯಿದೆಯಡಿ ಅಪರಾಧವಾಗುತ್ತದೆ.

ದೇಶದ ಕೆಲವೆಡೆ ಅಕ್ರಮವಾಗಿ ಶಿಕಾರಿ ಏರ್ಪಡಿಸಿ, ಗೆದ್ದವರಿಗೆ ವನ್ಯಜೀವಿ ಕೊಂಬಿನ ಟ್ರೋಫಿಗಳನ್ನು ಕೊಡುತ್ತಾರೆ ಎಂಬ ಆರೋಪವಿದೆ. ವಿವಿಧ ಪ್ರಭೇದದ ಪ್ರಾಣಿ ಮತ್ತು ಸಸ್ಯಸಂಕುಲದ ಸಂರಕ್ಷಣೆಗೆ, ವನ್ಯಜೀವಿಗಳ ವಾಸಸ್ಥಾನಗಳ ಸಮರ್ಪಕ ನಿರ್ವಹಣೆಗೆ ಹಾಗೂ ವನ್ಯಜೀವಿಗಳ, ನಿರ್ದಿಷ್ಟ ಸಸ್ಯಗಳ ಮತ್ತು ವನ್ಯೋತ್ಪನ್ನಗಳ ಮಾರಾಟದ ನಿಯಂತ್ರಣ ಮತ್ತು ನಿಗ್ರಹಕ್ಕೆ ಕಾನೂನಾತ್ಮಕ ಚೌಕಟ್ಟು ಒದಗಿಸುತ್ತದೆ ವನ್ಯಜೀವಿ ಸಂರಕ್ಷಣಾ ಕಾಯಿದೆ. ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿ- ಸಸ್ಯಸಂಕುಲದ ಸಂರಕ್ಷಣೆಗೆ ಈ ಕಾಯಿದೆ ಅನಿವಾರ್ಯ ಮತ್ತು ಅತ್ಯಗತ್ಯ.

ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ ಮತ್ತು ೧೯೮೬, ೧೯೯೧, ೨೦೦೨ ಮತ್ತು ೨೦೨೨ರ ತಿದ್ದುಪಡಿ ಕಾಯಿದೆ ಪ್ರಕಾರ ಕಾಡುಪ್ರಾಣಿಗಳ ಚರ್ಮ, ದಂತ, ಉಗುರು, ಕೂದಲು ಇಟ್ಟುಕೊಳ್ಳುವುದೇ ಮಹಾಪರಾಧ. ೩ರಿಂದ ೭ ವರ್ಷ ಸಜೆ ಅಥವಾ ೨೫ ಸಾವಿರದಿಂದ ೧ ಲಕ್ಷ ರು.ವರೆಗೆ ದಂಡ ವಿಧಿಸಲು ಅವಕಾಶವಿರುತ್ತದೆ. ಎರಡನೇ ಬಾರಿ ತಪ್ಪಾದರೆ, ಅದು ದುಪ್ಪಟ್ಟಾಗುತ್ತದೆ ಎಚ್ಚರ! ವನ್ಯಜೀವಿ, ಅರಣ್ಯ ಸೇರಿ ದಂತೆ ಸ್ವಾಭಾವಿಕ ಪರಿಸರದ ಸಂರಕ್ಷಣೆ ಮತ್ತು ಸುಧಾರಣೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ ಎನ್ನುತ್ತದೆ ಸಂವಿಧಾನದ ೫೧ ಎ (ಜಿ) ವಿಧಿ.

ಮಾನವನ ಭೋಗಲೋಲುಪತೆಗೆ ಇಂದು ಹಲವು ಪ್ರಾಣಿ ಮತ್ತು ಸಸ್ಯಪ್ರಭೇದಗಳು ಕಣ್ಮರೆಯಾಗಿವೆ. ಕರ್ನಾಟಕದಲ್ಲೂ ನೂರಾರು ಚೀತಾ
ಇದ್ದವು ಎನ್ನುತ್ತದೆ ಇತಿಹಾಸ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಜರ್ನಲ್‌ನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ೧೭೯೯ರಲ್ಲಿ ಟಿಪ್ಪು ಸುಲ್ತಾನ್
೧೬ ಚೀತಾಗಳನ್ನು ಸಾಕಿದ್ದರು. ೧೮೧೫ರಲ್ಲಿ ಮೈಸೂರು ಅರಸರು ಎ.ಎಚ್. ಕೋಲ್ ಎಂಬ ಬ್ರಿಟಿಷ್ ಪ್ರಜೆಗೆ ಚಿರತೆ ನೀಡಿದ್ದರು. ೧೯೦೧ರಲ್ಲಿ ದಕ್ಷಿಣ
ಕನ್ನಡದಲ್ಲಿ ಬಹುಮಾನ ಪಡೆಯಲು ೪ ಚೀತಾಗಳ ಹತ್ಯೆ ಮಾಡಲಾಗಿತ್ತು. ಬಳ್ಳಾರಿ, ಚಿಕ್ಕಮಗಳೂರಿನಲ್ಲೂ ಚೀತಾ ಪತ್ತೆಯಾಗಿದ್ದರ ದಾಖಲೆಯಿದೆ.
ಆದರೆ ಇಂದು ಕರ್ನಾಟಕದಲ್ಲಷ್ಟೇ ಅಲ್ಲ ಭಾರತದಲ್ಲೇ ಚೀತಾಗಳ ನಾಮಾ ವಶೇಷವಾಗಿದ್ದು, ವಿದೇಶದಿಂದ ತರುವ ಪರಿಸ್ಥಿತಿಯಿದೆ.

ದೇಶದ ಹಲವು ಕಾಡುಗಳಲ್ಲಿದ್ದ ‘ಮೃಗರಾಜ’ ಸಿಂಹವಿಂದು ಗುಜರಾತ್‌ನ ಗಿರ್ ಪ್ರಾಂತ್ಯದಲ್ಲಿ, ಮೃಗಾಲಯಗಳಲ್ಲಷ್ಟೇ ಕಾಣಸಿಗುತ್ತದೆ. ೧೯೦೦ರಲ್ಲಿ, ಭಾರತದಲ್ಲಿ ಸುಮಾರು ೩೦-೪೦ ಸಾವಿರ ಹುಲಿಗಳಿದ್ದವು ಎಂದು ಅಂದಾಜಿಸಲಾಗಿತ್ತು; ಈ ಸಂಖ್ಯೆ ೧೯೭೨ರಲ್ಲಿ ಕೇವಲ ೧೮೦೦ಕ್ಕೆ ಕುಸಿದಿತ್ತು. ಹುಲಿಗಳು ಅಳಿವಿನಂಚಿನಲ್ಲಿರುವುದನ್ನು ಮನಗಂಡು ೫೦ ವರ್ಷಗಳ ಹಿಂದೆ ಅನುಷ್ಠಾನಕ್ಕೆ ತರಲಾದ ‘ಹುಲಿ ಯೋಜನೆ’ಯಡಿಹುಲಿಗಳ ಸಂತತಿಯ ಸಂರಕ್ಷಣೆಗೆ ಪ್ರಯತ್ನಗಳಾಗಿದ್ದು, ರಾಜ್ಯದಲ್ಲಿ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿ ರಂಗನಾಥ ದೇವಸ್ಥಾನ ಮತ್ತು ಭದ್ರಾ ಸೇರಿ ೫ ಹುಲಿಧಾಮಗಳನ್ನು ಘೋಷಿಸಲಾಗಿದೆ. ೨೦೨೩ರ ಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು ೫೬೩ ಹುಲಿಗಳಿದ್ದು, ದೇಶದಲ್ಲೇ ೨ನೇ ಸ್ಥಾನದಲ್ಲಿದೆ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂ.೧ ಸ್ಥಾನದಲ್ಲಿದೆ.

ಈ ಭೂಮಂಡಲದಲ್ಲಿರುವ ವನ್ಯಜೀವಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ನಮ್ಮ ಆಸೆ, ಐಷಾರಾಮಿ ಜೀವನ, ಮೂಢನಂಬಿಕೆಗಳಿಗೆ ವನ್ಯಜೀವಿಗಳ ಬೇಟೆಯಾಗುವುದಕ್ಕೆ ನಾವು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣರಾಗಬಾರದು. ಯಾವುದೇ ವನ್ಯಜೀವಿಯಿಂದ ತಯಾರಿಸಿದ ಉತ್ಪನ್ನವನ್ನು ಖರೀದಿಸುವುದಿಲ್ಲ, ಧರಿಸುವುದಿಲ್ಲ ಎಂದು ಸಂಕಲ್ಪಿಸಿದರೆ, ವನ್ಯಜೀವಿಗಳ ಸಂರಕ್ಷಣೆಗೆ ನಾವೂ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *