Thursday, 12th December 2024

ಉಕ್ರೇನಿಗರನ್ನು ನೋಡಿ ದೇಶಪ್ರೇಮ ಕಲಿಯಬೇಕಿದೆ

ಶಿಶಿರ ಕಾಲ

shishirh@gmail.com

ಹಿಂದೆಲ್ಲ ಯುದ್ಧವೆಂದರೆ ಬಿಲ್ಲು ಬಾಣ ಇತ್ಯಾದಿ ಇಟ್ಟುಕೊಂಡು ಎರಡು ಸೇನೆಗಳು ಹೊಡೆದಾಡುತ್ತಿದ್ದವು. ಯಾವುದೇ ಯುದ್ಧ ಒಳ್ಳೆಯದು ಎನ್ನುವಂತೆ ಇಲ್ಲ. ಆದರೆ ಆ ಕಾಲದ ಯುದ್ಧಕ್ಕೆ ಅದರದೇ ಆದ ಕೆಲವು ನಿಯಮಗಳಿದ್ದವು. ಒಬ್ಬನ ಜತೆ ಇನ್ನೊಬ್ಬ ಬಡಿದಾಡುವಾಗ ಹಿಂದಿನಿಂದ ಇನ್ನೊಬ್ಬ ದಾಳಿ ಮಾಡುತ್ತಿರಲಿಲ್ಲ.

ಸ್ವತಃ ರಾಜನೇ ಸಾಯುವ ಹಂತದಲ್ಲಿ ಹೊಡೆದಾಡುತ್ತಿದ್ದರೂ ಈ ನಿಯಮ ವನ್ನು ಮೀರುತ್ತಿರಲಿಲ್ಲ. ಸೂರ್ಯಾಸ್ತವಾದ ಕೂಡಲೇ ಯುದ್ಧ ನಿಲ್ಲುತ್ತಿತ್ತು. ಅದಾದ ಮೇಲೆ ಯಾವುದೇ ಮಸಲತ್ತು ನಡೆಯುತ್ತಿರಲಿಲ್ಲ. ಹೆಂಗಸರು, ಮಕ್ಕಳನ್ನು ಯುದ್ಧದಿಂದ ಆಚೆಯಿಡಲಾಗುತ್ತಿತ್ತು. ಅಮಾನವೀಯತೆಯ ಮಧ್ಯೆ ಅಂದಷ್ಟು ಮಾನವೀಯ ಸಂಗತ ನಿಯಮಗಳಿದ್ದವು. ಆ ಕಾರಣ ಕ್ಕಾಗಿಯೇ ಶ್ರೀರಾಮ ಮರೆಯಲ್ಲಿ ನಿಂತು ವಾಲಿಗೆ ಬಾಣ ಬಿಟ್ಟದ್ದು ಸರಿಯಲ್ಲವೆನ್ನುವವಾದ ಇಂದಿಗೂ ಕೇಳುವುದಿದೆ. ಆದರೆ ಇಂದಿನ ದಿನದಲ್ಲಿ ಆ ಪ್ರಶ್ನೆಯನ್ನು ಕೇಳುವ ಯಾವ ಹಕ್ಕನ್ನೂ ನಾವ್ಯಾರೂ ಉಳಿಸಿಕೊಂಡಿಲ್ಲ.

ಏಕೆಂದರೆ ನಮ್ಮ ಇಂದಿನ ಕಾಲದ ಯುದ್ಧದಲ್ಲಿ, ಕಳೆದೊಂದು ಶತಮಾನ ದಿಂದೀಚೆಯ ಆಧುನಿಕ ಯುದ್ಧದಲ್ಲಿ everything is fair. ಎಲ್ಲವೂ ಯುದ್ಧದಲ್ಲಿ ಸರಿಯೇ. ಇಂದಿನ ಯುದ್ಧದಲ್ಲಿ ಮೋಸ, ತಂತ್ರಗಾರಿಕೆಗಿಂತ ಭಿನ್ನವಲ್ಲ. ಮೊದಲೆಲ್ಲ ದೊಡ್ಡ ರಾಜರು ಚಿಕ್ಕಪುಟ್ಟ ರಾಜ್ಯದ ಮೇಲೆ ದಾಳಿಯೇಳುತ್ತಿದ್ದುದು ಕಡಿಮೆಯೇ. ತಂಟೆಗೆ ಬಂದರೆ ಮಾತ್ರ ಸುಮ್ಮನಿರುತ್ತಿರಲಿಲ್ಲ. ಒಂದಿಷ್ಟು ಕಪ್ಪ ಪಡೆದು ಹೆಚ್ಚಿನದಾಗಿ ಅವರವರಿಗೇ ಆಡಳಿತ ಬಿಟ್ಟಿರುತ್ತಿದ್ದರು.

ಆದರೆ ಕ್ರಮೇಣ ಇವೆಲ್ಲ ಬದಲಾಯಿತು. ಈಗ ಒಂದು ದೇಶ ಬಲಿಷ್ಠವಲ್ಲ, ಚಿಕ್ಕದು ಎಂದಾದರೆ ಅದು ಪಕ್ಕದ, ಸಮೀಪದ ದೊಡ್ಡ ದೇಶಕ್ಕೆ ಸಲಾಮು ಹೊಡೆದುಕೊಂಡೇ ಇರ ಬೇಕು. ಆ ಚಿಕ್ಕ ದೇಶದ ಪ್ರಧಾನಿ ಯಾವುದಾದರೂ ಇನ್ನೊಂದು ದೇಶಕ್ಕೆ ಹೋಗ ಬೇಕೆಂದರೆ ದೊಡ್ಡ ದೇಶದ ಪ್ರಧಾನಿ ಮುನಿಸಿಕೊಂಡಾನು ಎಂದೆಲ್ಲ ಲೆಕ್ಕಾಚಾರ ಹಾಕಿಕೊಂಡೇ ಮುಂದುವರಿಯ ಬೇಕು. ಗಟ್ಟಿ ದೇಶಕ್ಕೆ ಸಹಮತವಿಲ್ಲ ಎಂದಾದರೆ ಸುಮ್ಮನೆ ಆ ದೇಶದ ಯುದ್ಧವಿಮಾನವೊಂದು ಚಿಕ್ಕದೇಶದ ಸರಹದ್ದನ್ನೊಮ್ಮೆ ಹೊಕ್ಕಿ ಹೊರಬಿದ್ದು ಸಂದೇಶವನ್ನು ಮಾತಿಲ್ಲದೆ ರವಾನಿಸಿಯಾಗಿರುತ್ತದೆ. ಅದಕ್ಕೂ ಮೀರಿದರೆ ಮುಂದಿನದು ಒಂದೆರಡು ಸುತ್ತು ಮಾತುಕತೆ, ಆರ್ಥಿಕವಾಗಿ ಕತ್ತುಹಿಚುಕುವ ಕೆಲಸ ಇಲ್ಲವೆ ಯುದ್ಧ.

ಅದೂ ಎಥಿಕ್ಸ್ ಕಳೆದುಕೊಂಡ ಯುದ್ಧ. ಅದು ಘೋರ. ಇಂದಿನ ಯುದ್ಧ ಆಧುನಿಕ ಎನ್ನುವುದಕ್ಕಿಂತ ಅಮಾನವೀಯ ಎನ್ನುವುದೇ ಸರಿ. ಒಟ್ಟಾರೆ ನವ್ಯಯುದ್ಧ ಕಳೆದೊಂದು ಶತಮಾನದ ಅತ್ಯಂತ ಘೋರ ಆವಿಷ್ಕಾರ. ಹೀಗೆ ಶುರುವಾದ ಯುದ್ಧವೂ ಒಂದು ನಿಗದಿತ ಸಮಯ ದವರೆಗೆ ಮಾತ್ರ ಉಳಿದ, ಸಂಬಂಧವಿಲ್ಲದ ದೇಶಗಳಲ್ಲಿ ಲೆಕ್ಕಾಚಾರದಲ್ಲಿ ಮತ್ತು ಚಾಲ್ತಿಯಲ್ಲಿರುತ್ತದೆ. ನಂತರದಲ್ಲಿ ಅದು ನಡೆಯುತ್ತಿದೆಯಂತೆ ಎಂದು ಮಾತ್ರ ನಮ್ಮ ಅರಿವಿನಲ್ಲಿರುತ್ತದೆಯೇ ವಿನಾ ಮುಂದೆ ಏನಾಯ್ತು, ಏನಾಗುತ್ತಿದೆ ಎನ್ನುವ ಕಿಂಚಿತ್ ಕಾಳಜಿಯೂ ಈ ಉಳಿದ ದೇಶಕ್ಕೆ ಉಳಿಯುವುದಿಲ್ಲ.

ಅಂದು ದೇಶದ ಮಹತ್ವಘಟ್ಟದ ಘಟನೆ ಇತಿಹಾಸ ಸೇರುವ ಧಾವಂತದಲ್ಲಿರುತ್ತದೆ. ಉಕ್ರೇನಿನ ಯುದ್ಧವನ್ನೇ ತೆಗೆದುಕೊಳ್ಳಿ. ಶುರುವಾಗಿದ್ದೇ ಆಗಿದ್ದು, ಇದು ಪ್ರಪಂಚವನ್ನೇ ಸುಟ್ಟುಬಿಡುವ ಯುದ್ಧ, ಮೂರನೇ ಮಹಾಯುದ್ಧ ಎಂದೆ ವರದಿಗಳ ಮಳೆಗಾ ಲವೇ ಬಂದಪ್ಪಳಿಸಿತು. ನಂತರದ ನಾಲ್ಕನೇ ವಾರಕ್ಕೇ ಉಳಿದ ದೇಶಗಳ ಒಂದು ರಾಜಕೀಯ ವರ್ಗ ಬಿಟ್ಟರೆ ಉಳಿದವರೆಲ್ಲ ನಿರಮ್ಮಳವಾಗಿ ಮರೆತೇಬಿಟ್ಟರು. ಯುದ್ಧ ಹಾಳು, ಅಮಾನವೀಯ ಎಂಬಿತ್ಯಾದಿಯೆಲ್ಲ ಸರಿ. ಆದರೆ ಮುಂದಿನ ಭವಿಷ್ಯದ ದಿಕ್ಕನ್ನು ನಿರ್ದೇಶಿಸುವ ಕಾರಣದಿಂದ ಅದನ್ನು ಕಡೆಗಣಿಸುವಂತಿಲ್ಲ.

ಮುಂದಿನದೆಲ್ಲ ಅರ್ಥವಾಗಬೇಕೆಂದರೆ ಇಂದಿನzಲ್ಲ ನೋಡುತ್ತಲೇ ಇರಬೇಕಲ್ಲ. ಅಲ್ಲದೆ ಯುದ್ಧದಂದು ಹುಟ್ಟುವ
ಅನಾಮತ್ತು ದೇಶಪ್ರೇಮವನ್ನು ಗುರುತಿಸಿಲ್ಲವೆಂದರೆ ಹೇಗೆ? ಉಕ್ರೇನ್ ಮೊನ್ನೆ ಬುಧವಾರ, ಆಗಸ್ಟ್ 24ರಂದು, ಯುದ್ಧದ ನಡುವೆಯೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡಿದೆ. ಉಕ್ರೇನ್-ರಷ್ಯಾ ಯುದ್ಧ ಶುರುವಾಗಿ ಕೂಡ ಮೊನ್ನೆಗೆ ಸರಿಯಾಗಿ ಆರು ತಿಂಗಳಾಗಿದೆ. ಪುಟಿನ್ ಯುದ್ಧ ಆರಂಭಿಸಿದಾಗ ಉಕ್ರೇನ್ ಅನ್ನು ಮಂಡಿಯೂರಿಸಲು 6 ತಿಂಗಳು ಬೇಕಾಗುತ್ತದೆ ಎನ್ನುವ ಅಂದಾಜಿದ್ದಂತಿದೆ. ಅದರಂತೆ ಇನ್ನೇನು ಅಲ್ಲಿ ಚಳಿಗಾಲ ಮುಗಿಯುತ್ತದೆ ಎನ್ನುವಾಗ ಯುದ್ಧವನ್ನು ಆರಂಭಿಸಿದ್ದು. ಪುಟಿನ್ ಲೆಕ್ಕಾಚಾರದಂತೆ ಈ ಯುದ್ಧ ಆರು ತಿಂಗಳಲ್ಲಿ *ಮೊಕ್ಲಿಕ್* ಆಗಿಬಿಡಬೇಕಿತ್ತು.

ಉಕ್ರೇನ್ ಸ್ವಾತಂತ್ರ್ಯೋತ್ಸವದ ದಿನದಂದೇ ಮತ್ತೊಮ್ಮೆ ಸ್ವಾತಂತ್ರ್ಯ ಕಳೆದುಕೊಳ್ಳುವಂತಾಗಬೇಕಿತ್ತು. ಆದರೆ ಈ
ಯುದ್ಧ ಯಾವಾಗ ಹೇಗೆ ಮುಗಿದೀತು ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ದಿನಗಳೆದಂತೆ ಜಟಿಲವಾಗುತ್ತಲೇ ಇದೆ. ವಿಶ್ವಯುದ್ಧ ವೆರಡು ಮುಗಿದಂದಿನಿಂದ ಈಚೆ ಬ್ರಿಟನ್ ಮತ್ತು ಅಮೆರಿಕ ಗೂಢಚಾರರು ರಷ್ಯಾದಲ್ಲಿ ಗೂಢಚರ್ಯೆ ಮಾಡಿದಷ್ಟು ಬಹುಶಃ ಕೆಲವೇ ದೇಶಗಳು ಇನ್ನೊಂದು ದೇಶದ ಮೇಲೆ ಮಾಡಿವೆ, ಮಾಡುತ್ತಿವೆ. ರಷ್ಯಾದಲ್ಲಿ ಏನೇ ಚಿಕ್ಕದೊಂದು ಘಟನೆಯಾದರೂ ಅದನ್ನು ಕ್ಷಣಾರ್ಧದಲ್ಲಿ ಅಮೆರಿಕದ ಅಧ್ಯಕ್ಷನ ಕಿವಿಯಲ್ಲಿ ಆತನ ನ್ಯಾಷನಲ್ ಸೆಕ್ಯುರಿಟಿಯ ಅಧಿಕಾರಿಗಳು ಉಸುರಿರುತ್ತಾರೆ. ಅಮೆರಿಕದ ಅದೆಷ್ಟೋ ಚುನಾವಣೆಗಳು ದಿಕ್ಕನ್ನು ಬದಲಿಸುವುದು ರಷ್ಯಾದ ಜತೆ ಆ ಪಕ್ಷ ಹೇಗೆ ವ್ಯವಹರಿಸಿದೆ ಎನ್ನುವ ವಿಷಯದ ಮೇಲೆ.

ಉಕ್ರೇನ್ ಯುದ್ಧ -ಬ್ರವರಿಯಲ್ಲಿ ಆರಂಭವಾದರೂ ಅಮೆರಿಕನ್ ಸಿಐಎ ಮತ್ತು ಬ್ರಿಟಿಷ್ ಇಂಟೆಲಿಜೆನ್ಸ್ ಎಮಐ6 ಆರು
ತಿಂಗಳಿಂದ ಉಕ್ರೇನ್ ಅನ್ನು ಎಚ್ಚರಿಸುತ್ತಲೇ ಇದ್ದವು. ಆಗೆಲ್ಲ ರಷ್ಯಾ ಅಧಿಕಾರಿಗಳನ್ನು ಬಿಡಿ, ಸ್ವತಃ ಉಕ್ರೇನ್ ಅಧ್ಯಕ್ಷ ಕೂಡ
ಅದು ಅಸಾಧ್ಯದ್ದು ಎಂದೇ ಹೇಳಿಕೊಂಡು ಓಡಾಡುತ್ತಿದ್ದ. ಫೆಬ್ರವರಿ 21ಕ್ಕೆ ಪುಟಿನ್ ಟಿವಿಯಲ್ಲಿ ಬಂದು ತನ್ನ ಪಡೆಗಳಲ್ಲಿ
ಯುದ್ಧ ಮಾಡಿದರೆ ಹೇಗೆ ಎಂದು ಓಪನ್ ಆಗಿ ಕೇಳಿದಾಗಲೇ ಇದು ಸದ್ಯದ ನಡೆಯಬಹುದು ಎಂದು ಜಗತ್ತು ಗುರುತಿಸಿದ್ದು. ಪುಟಿನ್ ತನ್ನ ಪಡೆಗಳಲ್ಲಿ ಅವರ ಅಭಿಪ್ರಾಯ ಕೇಳುತ್ತಿದ್ದ.

ಹಿಂಜರಿತದ ಉತ್ತರ ಕೊಡುತ್ತಿದ್ದ ಕೆಲವು ಮಂಡೆ ಸಮ ಇರುವವರನ್ನು ಟಿವಿ ಪರದೆಯ ಮೇಲೆಯೇ ಅವಮಾನಿಸುತ್ತಿದ್ದ. ಈ ಘಟನೆ ಆದ 3 ದಿನದಲ್ಲಿ ಯುದ್ಧ ಶುರುವಾಗಿದ್ದು. ರಷ್ಯಾ ತನ್ನೆಲ್ಲ ಸೈನಿಕರನ್ನು, ಮಿಸೈಲ್ ಅನ್ನು ಗಡಿಯಲ್ಲಿ ತಂದು ನಿಲ್ಲಿಸಿದ್ದು. ಆಗ ಕೂಡ ಅಮೆರಿಕ ಮೊದಲಾದ ದೇಶ ತಮ್ಮ ಅಪಾನವಾಯುವಿನಿಂದಲೇ ಇದೆಲ್ಲ ನಿಂತುಬಿಡುತ್ತದೆ ಎಂದುಕೊಂಡಂತಿತ್ತು. ಆದರೆ ದಿನ ನಾಲ್ಕರೊಳಗೆ ಯುದ್ಧ ಶುರುವಾಗಿಹೋಗಿತ್ತು. ಅಂದು ಜಗತ್ತೆಲ್ಲ ಮಾತನಾಡುತ್ತಿದ್ದ ಏಕೈಕ ವಿಷಯ ಅದೊಂದೇ.

ಆದರೆ ಅಲ್ಲಿ ನಾವು ಗ್ರಹಿಸಬೇಕಾದದ್ದು ದೇಶಕ್ಕೆ ದೇಶವೇ ಅದು ಹೇಗೆ ಯುದ್ಧವೊಂದಕ್ಕೆ ತಯಾರಾಗಿ ನಿಂತುಬಿಟ್ಟಿತು ಎನ್ನುವು ದನ್ನು. ಯುದ್ಧಕ್ಕಿಂತ ಮೊದಲು ಉಕ್ರೇನ್‌ನ ಗಡಿಯಲ್ಲಿನ ಕೆಲವು ಪ್ರದೇಶದ ಮಂತ್ರಿಗಳು, ಮೇಯರ್‌ಗಳಿಗೆ ರಷ್ಯಾದ ಜತೆ ಸೇರಿಕೊಳ್ಳಬೇಕೆಂಬ ಆಸೆಯಿತ್ತು. ಪ್ರತ್ಯೇಕತಾವಾದ ಆಯಾ ಪ್ರದೇಶಗಳಲ್ಲಿ ತಕ್ಕಮಟ್ಟಿಗೆ ಜನಪ್ರಿಯವೂ ಆಗಿತ್ತು. ಆದರೆ ಯಾವತ್ತು ಯುದ್ಧ ಎಂದು ಒಂದು ಶುರುವಾಯಿತೋ, ಈ ಮಂತ್ರಿಗಳಿಂದ ಮೇಯರ್ ಆದಿಯಾಗಿ ಎಲ್ಲ ಪ್ರತ್ಯೇಕತಾವಾದಿಗಳು ಉಕ್ರೇನ್ ಪರವಾಗಿಯೇ ನಿಂತು ಬಿಟ್ಟರು. ಇದನ್ನು ಖುದ್ದು ಪುಟಿನ್ ಕೂಡ ಅಂದಾಜಿಸಿರಲಿಲ್ಲ.

ಗಡಿಯಲ್ಲಿನ ಭಾಗ ಸುಲಭದಲ್ಲಿ ನಮ್ಮದಾಗಿಬಿಡುತ್ತದೆ ಎಂದೇ ಅಂದುಕೊಂಡಿದ್ದ ಪುಟಿನ್‌ಗೆ ಇದು ಮೊದಲ ಮತ್ತು ಅತ್ಯಂತ
ದೊಡ್ಡ ಹಿನ್ನಡೆ. ಯುದ್ಧವಾದಾಗ, ಅದರಲ್ಲಿಯೂ ಯುದ್ಧ ತೀರಾ ಬಲಿಷ್ಠ ದೇಶದೊಂದಿಗೆ ಶುರುವಾದಾಗ ದುರ್ಬಲ, ಚಿಕ್ಕದೇಶದ
ಪ್ರಧಾನಿ, ಅಧ್ಯಕ್ಷ ತಕ್ಷಣ ದೇಶಬಿಟ್ಟು, ಜಾಗ ಖಾಲಿಮಾಡಿ ಹೋಗುವ ಇತಿಹಾಸ ಕಂಡಿದ್ದೇವೆ. ಕೆಲವೊಮ್ಮೆ ಆಂತರಿಕ ಅವ್ಯವಸ್ಥೆ ಯಾದಾಗಲೇ ಓಡಿಹೋಗುವುದಿದೆ- ಶ್ರೀಲಂಕಾ ಮತ್ತು ಗೊಟಬಯ ರಾಜಪಕ್ಸ ಇತ್ತೀಚಿನ ಉದಾಹರಣೆ. ಆದರೆ
ವೋಲೊದಿಮರ್ ಜ್ಹೆಲೇನ್ಸ್ಕಿ ಮತ್ತು ಆತನ ಎಲ್ಲ ಮಂತ್ರಿವರ್ಗ ಮತ್ತು ವಿರೋಧ ಪಕ್ಷದವರು ವ್ಯತಿರಿಕ್ತವಾಗಿ ವ್ಯವಹರಿಸಿದ್ದು,
ಕದಲದೇ ಅಲ್ಲಿಯೇ ನಿಂತು ಗಟ್ಟಿತನವನ್ನು ತೋರಿಸಿದ್ದು, ಅಂತಹ ಸ್ಥಿತಿಯಲ್ಲಿ ಅನುಕರಣೀಯ.

ಜ್ಹೆಲೇನ್ಸ್ಕಿ ಪೂರ್ವಾಶ್ರಮದಲ್ಲಿ ನಟ, ಹಾಸ್ಯಗಾರ. ಆತನಿಗೆ ನಟನೆಂಬ ಕಾರಣಕ್ಕೆ ಆನ್ ಲೈನ್ ಹಿಂಬಾಲಕರು ಬಹಳಷ್ಟಿದ್ದರು. ‘ಭ್ರಷ್ಟಾಚಾರದ ವಿರುದ್ಧ ನಾನು’ ಎಂದು ಚುನಾವಣೆಗೆ ನಿಂತು ಹೇಳಿದಾಗ ಅವರೆಲ್ಲ ಈತನನ್ನು ನಂಬಿ ಎಲ್ಲಿಲ್ಲದ ಅಂತರದಲ್ಲಿ ಗೆಲ್ಲಿಸಿದ್ದು. ಹೀಗೆ ರಾಜಕಾರಣದ ಹಿನ್ನೆಲೆಯಿಲ್ಲದ ಅಧ್ಯಕ್ಷನ ಮುಂದೆ ಕೋವಿಡ್ ಬಂದು ನಿಂತಿತು. ಅದು ಏನು ಎತ್ತ ಎಂದು ನೋಡುತ್ತಿರುವಾಗಲೇ ಯುದ್ಧ ಶುರುವಾಗಿದ್ದು. ಸುಸೂತ್ರವಾಗಿ ಆಡಳಿತ ನಡೆಸುವುದಕ್ಕೆ ಜ್ಹೆಲೇನ್ಸ್ಕಿ ಗೆ ಸಮಯವೇ ಸಿಕ್ಕಿಲ್ಲ. ಹೀಗಿರುವ ಜ್ಹೆಲೇನ್ಸ್ಕಿ ನಿಂತು ಈ ಯುದ್ಧವನ್ನು ಮುನ್ನಡೆಸುತ್ತಾನೆ, ರಾಜಧಾನಿ ಕೀವ್‌ನಲ್ಲಿಯೇ ಉಳಿದುಕೊಳ್ಳುತ್ತಾನೆ ಎನ್ನುವುದನ್ನೂ ಪುಟಿನ್ ಊಹಿಸಿಕೊಂಡಿರಲಿಲ್ಲ.

ಯುದ್ಧ ಶುರುವಾಗುವುದಕ್ಕಿಂತ ಮೊದಲು ತೀರಾ ಹೇಸಿಗೆಯೆನ್ನಿಸುವಷ್ಟು ಒಡಕು ಉಕ್ರೇನ್‌ನಲ್ಲಿತ್ತು. ಆದರೆ ಯುದ್ಧ ಇಡೀ ದೇಶವನ್ನು, ಜನರನ್ನು, ರಾಜಕಾರಣಿಗಳನ್ನು ಒಗ್ಗೂಡಿಸಿತ್ತು. ಈ ಒಗ್ಗಟ್ಟೇ ಯುದ್ಧ ಇಷ್ಟುಕಾಲ ಮುಂದುವರಿಯಲಿಕ್ಕೆ ಕಾರಣ ವಾಗಿದ್ದು. ಯುದ್ಧ ವಾಹನಗಳು ಬರುತ್ತಿವೆಯಂತೆ ಎಂದು ತಿಳಿದಾಕ್ಷಣ, ಪ್ರತ್ಯೇಕತಾವಾದವನ್ನು ಮಾಡುತ್ತಿದ್ದ ಗಡಿಯ ಅದೇ ಜನ ಮನೆಯಿಂದ ಸಿಮೆಂಟ್ ತಂದು ರಸ್ತೆ ಗಳಲ್ಲಿ ಅಡ್ಡಗೋಡೆಗಳನ್ನು ಕಟ್ಟಿದರು, ಕಂದಕಗಳನ್ನು ನಿರ್ಮಿಸಿದರು, ಊರುಗಳನ್ನು ಸೇರಿಸುವ ಬ್ರಿಡ್ಜ್‌ಗಳನ್ನು ರಷ್ಯಾ ಸೇನೆಗೆ ಮುಂದುವರಿಯಲು ಕಷ್ಟವಾಗುವಂತೆ ಮುರಿದು ಬೀಳಿಸಿದರು. ತಮ್ಮ ಹೆಂಡತಿ ಮಕ್ಕಳನ್ನು ಬೇರೆಡೆಗೆ ಕಳುಹಿಸಿ, ಅಲ್ಲಿಯೇ ಯುದ್ಧಕ್ಕೆಂದೇ ಉಳಿದುಕೊಂಡರು.

ಇನ್ನು ಯಥೇಚ್ಛ ಹೆಂಗಸರು ಯುದ್ಧಕ್ಕೆ, ಯುದ್ಧಕ್ಕೆ ನಿಂತ ಗಂಡನಿಗೆ ಸಾಥ್ ಕೊಡಲು ಉಳಿದುಕೊಂಡರು. ಇದೆಲ್ಲ ರಾಷ್ಟ್ರಾಧ್ಯಕ್ಷನ
ಒಂದು ಕರೆಗೆ ಆ ದೇಶ ಸ್ಪಂದಿಸಿದ ರೀತಿ. ಒಂದು ದೇಶದ ಜನ ರೆಲ್ಲ ಈ ರೀತಿ, ಇಷ್ಟು ಕಡಿಮೆ ಸಮಯದಲ್ಲಿ, ಒಂದೆರಡೇ
ದಿನಗಳಲ್ಲಿ ಯುದ್ಧವೊಂದಕ್ಕೆ ಸಜ್ಜಾಗಿದ್ದು ಇತ್ತೀಚಿನ ಇತಿ ಹಾಸದಲ್ಲಿಯಂತೂ ಇಲ್ಲ. ಉಕ್ರೇನ್‌ನ ಜನರಿಗೆ ಇದೆಲ್ಲ ಹೊಸತಲ್ಲ ಹೌದು.

1790ರಿಂದ 1917ರವರೆಗೆ ಉಕ್ರೇನ್ ರಷ್ಯಾದ ಆಡಳಿತ ದಲ್ಲಿಯೇ ಇದ್ದದ್ದು. ಯಾವಾಗ ರಷ್ಯಾ ಕ್ರಾಂತಿ ಶುರುವಾಯಿತೋ ಆಗ, 1918ರಲ್ಲಿ ಉಕ್ರೇನ್ ‘ಸ್ವತಂತ್ರ ರಾಷ್ಟ್ರ’ ಎಂದು ಘೋಷಿಸಿಕೊಂಡಿತು. ನಂತರ 1921ರಲ್ಲಿ ಸೋವಿಯತ್ ಯೂನಿಯನ್ ಸ್ಥಾಪನೆಯಾಗಿ ಇಂದಿನ ಉತ್ತರ, ಪೂರ್ವ ಉಕ್ರೇನ್ ಅವರ ವಶವಾಯಿತು. ನಾಲ್ಕೇ ವರ್ಷದ ಸ್ವಾತಂತ್ರ್ಯ. ಎರಡನೇ ವಿಶ್ವಯುದ್ಧದ ಸಮಯವಾಗುವಾಗ ಸಂಪೂರ್ಣ ಸೋವಿಯತ್ ಕೈವಶವಾಯಿತು. ಅದಕ್ಕಿಂತ ಮೊದಲೂ ರಾಜಕೀಯ ದಾಳವಾದ ಇತಿಹಾಸ ಉಕ್ರೇನ್‌ಗೆ ಇದೆ.

ನಂತರದಲ್ಲಿ 1991ರಲ್ಲಿ ಮತ್ತೊಮ್ಮೆ ಉಕ್ರೇನ್‌ಗೆ ಸ್ವಾತಂತ್ರ್ಯ ಸಿಕ್ಕಿದ್ದು-ಪಡೆದುಕೊಂಡಿದ್ದು. ಅದಾದ ನಂತರ ಇನ್ನೊಮ್ಮೆ ಯುದ್ಧವೇ ನಡೆಯುತ್ತದೆಯೇನೋ, ರಷ್ಯಾ ಇನ್ನೊಮ್ಮೆ ಈ ದೇಶವನ್ನು ಒಳಮಾಡಿಕೊಳ್ಳುತ್ತದೆಯೇನೋ ಎನ್ನುವಷ್ಟು ಹಂತ ತಲುಪಿದ್ದು 2014ರಲ್ಲಿ. ಆಗ ನಮ್ಮ ಈಶಾನ್ಯ ಭಾರತವನ್ನು, ‘ಚಿಕನ್ ನೆಕ್’ ಅನ್ನು ಹೋಲುವ ಪ್ರದೇಶವಾದ ಕ್ರಿಮಿಯಾ ವನ್ನು ರಷ್ಯಾ ವಶಪಡಿಸಿಕೊಂಡಿದ್ದು. ಅಲ್ಲಿಂದ ಇಲ್ಲಿಯವರೆಗೂ ಉಕ್ರೇನ್ ಪೂರ್ವದ ಗಡಿಯಗುಂಟ ಒಂದಿಂದು ಸಂಘರ್ಷ ನಡೆಯುತ್ತಲೇ ಇದೆ.

ಹಾಗಾಗಿ ಇದು ಹೊಸತಲ್ಲ. ಈ ಯುದ್ಧವನ್ನು ಹಿಂಬಾಲಿಸುವಾಗ ಅತ್ಯಂತ ತಟ್ಟಿದ್ದು ಮಾರಿಯೋಪೋಲ್ ಎನ್ನುವ ಶಹರಿನ ಮೇಲೆ ನಡೆದ ದಾಳಿಯ ಭೀಕರತೆ. ರಷ್ಯಾ ಅಲ್ಲಿನ ಎತ್ತೆತ್ತರದ ಅಪಾರ್ಟ್‌ಮೆಂಟುಗಳ ಮೇಲೆ, ಮನೆಗಳ ಮೇಲೆ ದಾಳಿ ಮಾಡಿತ್ತು. ಬಿಲ್ಡಿಂಗುಗಳು ಸುಟ್ಟು ಕರಕಲಾಗುವ ಮೊದಲು ರಕ್ತದಿಂದಲೇ ಕೆಂಪಾಗಿತ್ತು. ಅಂತಾರಾಷ್ಟ್ರೀಯ ಮೀಡಿಯಾಗಳು ಇದೆಲ್ಲವನ್ನು ಲೈವ್ ಬಿತ್ತರಿಸಿದ್ದವು. ದಾಳಿಯ ನಂತರ ಕರ್ರಗಾಗಿ ಸಾಲಲ್ಲಿ ನಿಂತ ಬಿಲ್ಡಿಂಗುಗಳ ವಿಡಿಯೋವನ್ನು ಬಿತ್ತರಿಸು ವಂತೆ ಸ್ವತಃ ರಷ್ಯಾ ನೋಡಿಕೊಂಡಿತು.

ಇದು ಪಕ್ಕಾ ಇಡೀ ದೇಶವನ್ನು, ಜಗತ್ತನ್ನು ಹೆದ ರಿಸುವ ಒಂದು ಟ್ಯಾಕ್ಟಿಕ್ ಆಗಿತ್ತು. ರಷ್ಯಾ ಮಾರಿಯೋಪೋಲ್‌ನ ಆಸ್ಪತ್ರೆ ಯನ್ನೂ ಬಿಡಲಿಲ್ಲ. ಎಡೆ ಶೆಲ್ ದಾಳಿಗಳಾದವು. ಆದರೆ ಮಾರಿಯೋಪೋಲ್‌ನ ಬದುಕುಳಿದವರಲ್ಲಿ ಯಾರೂ ಅಲ್ಲಿಂದ ಕದಲಿಲ್ಲ. ಇಂದು ಮಾರಿಯೋಪೋಲ್ ಸಂಪೂರ್ಣ ರಷ್ಯಾ ವಶವಾದರೂ ಇವರೆಲ್ಲ ಸುತ್ತುವರಿದ ರಷ್ಯಾದ ಜತೆ ತಕ್ಕಮಟ್ಟಿಗೆ ಬಡಿದಾಡುತ್ತಲೇ ಇದ್ದಾರೆ. ಅದೆಲ್ಲದರ ನಡುವೆ ಹೋರಾಟದಲ್ಲಿ ಸಾಯುವ ಜನರ ಶವವನ್ನೂ ಹೂಳುತ್ತಿದ್ದಾರೆ.

ಕೆಲವು ಸಾವಿರ ಸೈನಿಕರು ಹೊರಜಗತ್ತಿನ ಸಂಬಂಧವೇ ಕಡಿದುಹೋದರೂ ಅಲ್ಲಿಯೇ ಹೋರಾಡುತ್ತಲೇ ಇದ್ದಾರೆ. 
ಉಕ್ರೇನಿಗರು ಬುದ್ಧಿವಂತರು. ಅವರು ಹಲವು ಭಾರತೀಯ ಮತ್ತು ಅಮೆರಿಕದ ಐಟಿ ಕಂಪನಿಗಳಿಗೆ ಈ ಯುದ್ಧಕ್ಕಿಂತ
ಮೊದಲು ಒಳ್ಳೆಯ ಪ್ರತಿಸ್ಪರ್ಧೆ ಕೊಡುತ್ತಿದ್ದರು. ಇಸ್ರೇಲಿನಂತೆ ಉಕ್ರೇನ್ ಕೂಡ ತನ್ನ ರಕ್ಷಣಾ ತಂತ್ರeನದಲ್ಲಿ ವೇಗದಲ್ಲಿ
ಬೆಳೆಯುತ್ತಿತು. ಸ್ವಾತಂತ್ರ್ಯ ಸಿಕ್ಕಿ ಮೂರು ದಶಕದಲ್ಲಿಯೇ ಅತ್ಯಂತ ಹೆಚ್ಚು ಬದಲಾವಣೆ ಕಂಡ, ಬೆಳವಣಿಗೆ ಹೊಂದಿದ
ದೇಶ ಉಕ್ರೇನ್.

ಇದೆಲ್ಲದಕ್ಕೆ ಕಾರಣ ಪಕ್ಕದಲ್ಲಿದ್ದ ರಷ್ಯಾ ಮತ್ತು ಘರ್ಷಣೆಯ ಇತಿಹಾಸ. ಇನ್ನೊಂದಿಷ್ಟು ವರ್ಷ ಬಿಟ್ಟಿದ್ದರೆ ರಷ್ಯಾಗೆ ಇಷ್ಟು ಒಳಹೊಕ್ಕಲೂ ಸಾಧ್ಯವಾಗದಷ್ಟು ಗಟ್ಟಿಯಾಗಿ ಬಿಡುತ್ತಿದ್ದರೇನೋ. ಇದೆಲ್ಲ ಬೆಳವಣಿಗೆಗೆ ನಿರಂತರವಾಗಿ ಕಾರಣವಾಗಿದ್ದು ಉಕ್ರೇನಿಗರ ದೇಶಪ್ರೇಮವಲ್ಲದೆ ಇನ್ನೊಂದಲ್ಲ. ಯುದ್ಧ ಶುರುವಾದಾಗ ದೇಶ ಪಲಾಯನ ಮಾಡುತ್ತಿದ್ದಾರೆ ಎಂದು ಕೆಲವು ಅಡ್ಡನಾಡಿ ಪತ್ರಿಕೆಗಳು, ಮೀಡಿಯಾಗಳು ವರದಿ ಮಾಡಿದ್ದು ನೀವು ನೋಡಿರಬಹುದು. ಅದಕ್ಕೆ ವ್ಯತಿರಿಕ್ತವಾಗಿ ಪರದೇಶದಲ್ಲಿ ಇದ್ದವರು ಯುದ್ಧಕ್ಕೆಂದೇ, ದೇಶಕ್ಕೆ ಹೋರಾಡಲೆಂದೇ ವಾಪಸಾದವರಿದ್ದಾರೆ.

ಯುದ್ಧ ಆರಂಭವಾದಾಗಿನಿಂದ ದೇಶಬಿಟ್ಟು ಹೋದವರ ಸಂಖ್ಯೆ ಸುಮಾರು ಒಂದು ಕೋಟಿ. ಹಾಗೆ ದೇಶಬಿಟ್ಟು ಹೋದವರಲ್ಲಿ ಹೆಂಗಸರು ಮಕ್ಕಳೇ ಜಾಸ್ತಿ. ಅದೇ ಸಮಯದಲ್ಲಿ ಸುಮಾರು ೪೦ ಲಕ್ಷ ಮಂದಿ ಯುದ್ಧಕ್ಕೆಂದು, ಅಥವಾ ಮರಳಿ ತಾವು ದೇಶಕ್ಕೆ ಬೇಕೆಂದು ವಾಪಸಾಗಿದ್ದಾರೆ. ಇದು ಕ್ರೇನಿಗರ ನೆಲದ ಮತ್ತು ದೇಶದ ಮೇಲಿನ ಪ್ರೀತಿ ಎಂದಲ್ಲದೆ ಇನ್ನು ಹೇಗೆ ವಿಶ್ಲೇಷಿಸು ವುದು? ಚಳಿಗಾಲ ಬರುತ್ತಿದೆ, ತನ್ನ ಹೋರಾಡುವ ಗಂಡನಿಗೆ ಸಹಾಯವಾಗಬೇಕೆಂದು ಮಕ್ಕಳನ್ನು ಬೇರೆ ದೇಶದ ಸಂಬಂಧಿಕರಲ್ಲಿ, ಅನಾಥಾಶ್ರಮಗಳಲ್ಲಿ ಬಿಟ್ಟು, ಇನ್ನೆಂದೂ ಕಾಣುತ್ತೇವೆಯೋ ಇಲ್ಲವೋ ಎಂದು ಒಂದು ಕೊನೆಯ ವಿಶ್ ಮಾಡಿ ಬಂದವರ ಸಂಖ್ಯೆ ಕೆಲವು ಲಕ್ಷದಲ್ಲಿದೆ.

ಸರಕಾರಕ್ಕೆ ಅಲ್ಲಿನ ಸೈನಿಕರಿಗೆ ಊಟದ ವ್ಯವಸ್ಥೆ ಮಾಡಬೇಕಾಗಿಯೇ ಬಂದಿಲ್ಲ, ಏಕೆಂದರೆ ಆಯಾ ಪ್ರದೇಶದ ಜನರೇ ಅದನ್ನು ನೋಡಿಕೊಂಡಿದ್ದಾರೆ. ಉಕ್ರೇನ್ ಯುದ್ಧ ಸೈನಿಕರ ನಡುವೆ ಮಾತ್ರ ನಡೆಯುವ ಯುದ್ಧವಲ್ಲ. ಪ್ರಜೆಗಳೇ ಕತ್ತಿ, ಬಂದೂಕು ಹಿಡಿದು ಹೋರಾಟಕ್ಕೆ ನಿಂತ ವಿಶಿಷ್ಟ ಯುದ್ಧ. ದೇಶಪ್ರೇಮ ಇಂದಿನ ಜಮಾನದಲ್ಲಿ ಅಳಿದುಹೋದ ಟ್ರೆಂಡ್ ಎನ್ನುವಂತಾಗಿ ರುವಾಗ ಅದಕ್ಕೆ ವ್ಯತಿರಿಕ್ತವಾಗಿ ಉಕ್ರೇನಿಗರು ವಿಶೇಷವೆನ್ನಿಸುತ್ತಾರೆ.

ಶಿಕ್ಷಕರು, ಎಂಜಿನಿಯರುಗಳು, ಡಾಕ್ಟರುಗಳು, ಮರಗೆಲಸದವರು, ಕೃಷಿಕರು, ಉದ್ಯಮಿಗಳು, ಶ್ರೀಮಂತರು, ಬಡವರು,
ಚಿಗುರು ಮೀಸೆಯ ಕಾಲೇಜು ಹುಡುಗರು, ಹುಡುಗಿಯರು, ವೃದ್ಧರು, ವಾಹನ ಚಾಲಕರು, ಹೋಟೆಲ್ ಸಪ್ಲೇಯರ್‌ಗಳು,
ರಸ್ತೆ ಬೀದಿ ಸ್ವಚ್ಛಮಾಡುವವರು, ಕಾರ್ಖಾನೆಯ ಕೆಲಸಗಾರರು- ಹೀಗೆ ಎಲ್ಲರೂ ಈಗ ಉಕ್ರೇನ್‌ನಲ್ಲಿ ಸೈನಿಕರೇ.

ದೇಶಪ್ರೇಮವೆಂದರೆ ಉಕ್ರೇನಿಗರನ್ನು ನೋಡಿ ಕಲಿಯುವಂತೆ ವ್ಯವಹರಿಸುತ್ತಿದ್ದಾರೆ, ಹೋರಾಡಿ ದೇಶಪ್ರೇಮವೆಂದರೆ
ಏನೆಂದು ಜಗತ್ತಿಗೆ ತೋರಿಸುತ್ತಿದ್ದಾರೆ. ಅದರ ಜತೆ ರಾಜಕಾರಣಿಗಳು ಹೇಗೆ ದೇಶದ ವಿಷಯ ಬಂದಾಗ ಒಂದಾಗಬೇಕು ಎನ್ನುವ ಪಾಠವನ್ನು ಕೂಡ ಉಳಿದ ನಮ್ಮಂತಹ ದೇಶದ ರಾಜಕಾರಣಿಗಳಿಗೆ ಮಾಡುತ್ತಿದ್ದಾರೆ.