ದಿವ್ಯಾನುಭೂತಿ
ನಂದಿತೇಶ್ ನಿಲಯ್
ಚುನಾವಣಾ ಸಂಬಂಧಿತ ಚರ್ಚೆಗಳಿಂದ ಕೊಂಚ ಬಿಡುವು ಮಾಡಿಕೊಂಡು, ಬಾಲರಾಮ ನೆಲೆಸಿರುವ ಅಯೋಧ್ಯೆಯ ಕಡೆಗೆ ಒಮ್ಮೆ ಹೋಗಿಬರೋಣ ಬನ್ನಿ. ಕಳೆದ ಜನವರಿ ೨೨ರಂದು ಇಲ್ಲಿನ ರಾಮಮಂದಿರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಉದ್ಘಾಟಿಸುತ್ತಾ, ‘ಈ ರಾಮ, ಎಲ್ಲರಿಗೂ ಸೇರಿದ ರಾಮ’ ಎಂದು ಹೇಳಿದರು.
ಹೇಳಿ ಕೇಳಿ ಇದು ಚುನಾವಣಾ ಪರ್ವ; ಪವಿತ್ರವಾಗಿರುವ ಸಂಗತಿಗಳಿಂದ ಮೊದಲ್ಗೊಂಡು ಲೌಕಿಕ ನೆಲೆಯ ಬಾಬತ್ತುಗಳವರೆಗಿನ ಹಲವು ವಸ್ತು-ವಿಷಯಗಳನ್ನು ವಾದಕ್ಕೆಳೆಯುವುದು, ಅವುಗಳ ಕುರಿತಾಗಿ ತೀವ್ರವಾಗಿ ಚರ್ಚಿಸುವುದು-ಪ್ರಶ್ನಿಸುವುದು ಈ ಘಟ್ಟ
ದಲ್ಲಿ ಇದ್ದಿದ್ದೇ. ಚುನಾವಣಾ ಪ್ರಚಾರದ ಭರಾಟೆಯಲ್ಲಿರುವವರು, ಮೋದಿಯವರ ಮೇಲಿನ ಮಾತುಗಳನ್ನೂ ಕೊಂಚ ಆಳಕ್ಕಿ ಳಿದು ಅವಲೋಕಿಸಿದರೆ ಹಾಗೂ ಆ ಮಾತಿನಲ್ಲಿರುವ ಸತ್ವವನ್ನು ಒರೆಗೆ ಹಚ್ಚಿದರೆ ಒಳಿತು ಎನಿಸುತ್ತದೆ. ಕಾರಣ, ಅಯೋಧ್ಯೆ ಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯಾದ ೧೦೦ ದಿನಗಳ ಒಳಗೇ ಜನರ ಸ್ವರೂಪದಲ್ಲೊಂದು ಬದಲಾವಣೆ ಯಾಗಿದೆ.
ಅಂದರೆ, ‘ನಾವು ಭಾರತದ ಜನರು’ ಎಂದು ಹೇಳಿಕೊಳ್ಳುವುದನ್ನೇ ಕೊಂಚ ಬದಲಿಸಿ, ‘ನಾವು ಭಾರತದ ಮತದಾರರು’ ಎಂದು ಹೇಳಿಕೊಳ್ಳುವಂತಾಗಿದೆ. ಮತದಾನ ಕೇಂದ್ರವು ಒದಗಿಸಿಕೊಡುವ ಗೌಪ್ಯ ಸಜ್ಜಿಕೆಯಲ್ಲಿ ನಾವು ಏನು ಮಾಡಲಿದ್ದೇವೆ? ಯಾರ ಮತಬುಟ್ಟಿಗಳಿಗೆ ಎಷ್ಟು ಸಂಖ್ಯೆಗಳನ್ನು ಸೇರ್ಪಡೆ ಮಾಡಲಿದ್ದೇವೆ? ಎಂಬುದರ ಸುತ್ತಲೇ ನಮ್ಮ ಅಸ್ಮಿತೆ ಗಿರಕಿ ಹೊಡೆಯಲಿದೆ. ಇಂಥದೊಂದು ರಾಜಕೀಯ ಹುಯಿಲು ಮತ್ತು ಆವೇಶಗಳ ನಡುವೆಯೇ ನನಗೆ ನನ್ನ ಕುಟುಂಬಿಕರ ಮನದಾಳದ ಬಯಕೆ ಕೇಳಿಬಂತು.
ಅಂತೆಯೇ ಹೆತ್ತವರ ಜತೆಗೂಡಿ ಅಯೋಧ್ಯೆಗೆ ತೆರಳಿದೆ. ‘ದೈವತ್ವ’ ಎಂಬ ಪರಿಕಲ್ಪನೆಯನ್ನು, ಅದು ಕಟ್ಟಿಕೊಡುವ ಅನುಭೂತಿ ಯನ್ನು ಕೇವಲ ಪದಗಳಲ್ಲಿ ಕಟ್ಟಿಕೊಡುವುದು ನಿಜಕ್ಕೂ ಸವಾಲಿನ ಕೆಲಸವೇ. ಒಂದೊಮ್ಮೆ ಅದನ್ನು ಹಾಗೆ ಸಾದರಪಡಿಸಿದರೂ ಅದು ಶುಷ್ಕವಾಗಿ ಹೊಮ್ಮುತ್ತದೇನೋ. ಆದರೆ, ಅಂದು ಬಾಲರಾಮನ ಸನ್ನಿಧಿಯಲ್ಲಿ ನಾವು ಕೇಳಿಸಿಕೊಂಡ ಘಂಟಾನಿನಾದವು, ಚುನಾವಣಾ ಘೋಷಣೆಗಳು, ಧ್ವನಿವರ್ಧಕಗಳ ಅಬ್ಬರ ಅಥವಾ ಭಾಷಣಗಳ ಸದ್ದನ್ನೂ ಮೀರಿ ನಿಲ್ಲುವ ಅಲೌಕಿಕ ಸಂಗೀತ ವಾಗಿತ್ತು ಎಂದಷ್ಟೇ ಹೇಳಬಲ್ಲೆ.
ವಸಂತ ಋತುವಿನ ಆ ಗಾಳಿಯಲ್ಲಿ, ಬಾಲರಾಮನ ದಿವ್ಯಸನ್ನಿಧಿಯಲ್ಲಿ ನನ್ನ ಹೆತ್ತವರು ಪ್ರಾರ್ಥಿಸುತ್ತಿರುವುದನ್ನು ಕಂಡಾಗ, ಅಲ್ಲೊಂದು ಒಗ್ಗಟ್ಟಿನ ಭಾವನೆ, ಕುಟುಂಬಪ್ರಜ್ಞೆ ಸುಸ್ಪಷ್ಟವಾಗಿದ್ದುದರ ಅನುಭವವಾಯಿತು. ಮಾತ್ರವಲ್ಲ, ನಮ್ಮ ಜಾತಿ, ಸಮುದಾಯ, ಅಷ್ಟೇಕೆ ನಮ್ಮ ಧರ್ಮದ ಗುರುತುಗಳನ್ನೂ ಮೀರಿದ ಮಾನವೀಯತೆ ಅಲ್ಲಿ ಕೆನೆಗಟ್ಟಿದಂತಿತ್ತು. ಇದು ಕಳೆದ ವರ್ಷದ ಮಾತು. ಆಗಿನ್ನೂ ಮುಖ್ಯ ದೇಗುಲದ ಕುಸುರಿ ಕೆಲಸಗಳಿಗೆ ಅಂತಿಮ ಸ್ಪರ್ಶವನ್ನು ನೀಡಲಾಗುತ್ತಿತ್ತು. ಆ ಘಟ್ಟದಲ್ಲಿ, ಪ್ರಧಾನ ಮಂತ್ರಿ ಯವರ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಡಿಯಲ್ಲಿ
ರೂಪು ಗೊಂಡಿರುವ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರು ‘ದಿ ಇಂಡಿ ಯನ್ ಎಕ್ಸ್‌ಪ್ರೆಸ್’ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಅಯೋಧ್ಯೆಯಿಂದ ಬಂದ ಸಂದೇಶವನ್ನು ಹಂಚಿಕೊಂಡರು.
ಅದು ಹೀಗಿತ್ತು: “ಮೊದಲನೆಯದಾಗಿ, ‘ಮಂದಿರದ ನಿರ್ಮಾಣ/ಉದ್ಘಾಟನೆಯನ್ನು ಒಂದು ವಿಜಯ ಎಂಬಂತೆ ಬಿಂಬಿಸ ಬಾರದು’. ನಿಜ, ‘ಕೊನೆಗೂ ನಮ್ಮ ಸಮಯ ಬಂತು’ ಎಂದು ಭಾವಿಸಿದ್ದ ಭಾರತದ ಒಳಗಿನ ಮತ್ತು ಹೊರಗಿನ ದೊಡ್ಡ ಜನ ಸಮುದಾಯದಲ್ಲಿ ಇಂಥದೊಂದು ವಿಜಯದ ಭಾವನೆ ಇದ್ದಿದ್ದು ಹೌದು. ಅಷ್ಟೇ ಅಲ್ಲ, ಈ ವಿಷಯದಲ್ಲಿ ನನಗೆ ಮಾರ್ಗದರ್ಶನ ನೀಡಿದ್ದ ಅನೇಕರು ಹೀಗೆ ಹೇಳಿದ್ದರು- ‘ನೋಡು, ಮರ್ಯಾದಾ ಪುರುಷೋತ್ತಮ ಎಂಬ ಹಣೆಪಟ್ಟಿಯನ್ನು ರಾಮ ದಕ್ಕಿಸಿ ಕೊಂಡಿದ್ದು ಅವನು ಬಾಲಕನಾಗಿದ್ದಾಗಲಾಗಲೀ ಅಥವಾ ಅವನು ರಾಜನಾದ ಸಂದರ್ಭ ದಲ್ಲಾಗಲೀ ಅಲ್ಲ, ಬದಲಿಗೆ ೧೪ ವರ್ಷಗಳ ವನವಾಸದಲ್ಲಿದ್ದಾಗ.
ಅಷ್ಟಕ್ಕೂ ವನವಾಸದಲ್ಲಿದ್ದಾಗ ಅವನು ಮಾಡಿದ್ದೇನು? ತನ್ನ ಮಾತು ಮತ್ತು ಕೃತಿಗಳ ಮೂಲಕ ಈ ಸಮಾಜಕ್ಕೆ ಒಂದಷ್ಟು ಸಂದೇಶವನ್ನು ಉಳಿಸಿಹೋಗಲು ಅವನು ಯತ್ನಿಸಿದ. ಅವೆಂದರೆ, ಸಾಮರಸ್ಯದಿಂದ ಬಾಳಿ, ವಸುಧೈವ ಕುಟುಂಬಕಂ ಎಂಬಂತೆ ಎಲ್ಲರೂ ಒಂದೇ ಕುಟುಂಬದವರಂತೆ ಇರಿ ಅಂತ’. ಅಯೋಧ್ಯೆಯಿಂದ ಬಂದ ಮತ್ತೊಂದು ಸಂದೇಶವೆಂದರೆ, ‘ಎಲ್ಲರಿಗೂ ಅನ್ವಯವಾಗುವಂಥ, ಉಪಯೋಗವಾಗುವಂಥ ಕೆಲಸವನ್ನು ಮಾಡಲು ಯತ್ನಿಸಬೇಕು’ ಎಂಬುದು. ಓರ್ವ ಮರ್ಯಾದಾ
ಪುರುಷೋತ್ತಮನಾಗಿ ರಾಮ ಮಾಡಿದ ಸಾಧನೆಗಳನ್ನು ಸಮರ್ಥಿಸುವ ಘಟನೆಗಳನ್ನು ಅದು ಬಿಂಬಿಸುತ್ತದೆ.
ಅಂದರೆ, ಅವನು ಹೇಗೆ ಮಹಾಸತ್ಯವಂತನಾಗಿದ್ದ ಎಂಬುದು ಸೇರಿದಂತೆ, ಜನರನ್ನು ಪರಸ್ಪರ ಹತ್ತಿರವಾಗಿಸುವ ಸನಾತನ ಧರ್ಮದ ತತ್ವಗಳು ಅಲ್ಲಿ ಕೆನೆಗಟ್ಟಿವೆ. ಎಲ್ಲಕ್ಕಿಂತ ಮಿಗಿಲಾಗಿ, ೨೦೧೯ರ ನವೆಂಬರ್‌ನಲ್ಲಿ ನ್ಯಾಯಾಲಯವು ಸರ್ವಾನುಮತದ ತೀರ್ಪು ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬೇಕು. ದೇಶದ ಜನರಲ್ಲಿ ಕುದಿಯುತ್ತಿದ್ದ ಬಿಸಿ ಹಾಗೂ ಭಾವನೆಗಳನ್ನು ನ್ಯಾಯಾಂ ಗದ
ತೀರ್ಪು ಹೇಗೆ ಹೀರಿಕೊಂಡು ಶಾಂತ ಗೊಳಿಸಿಬಿಟ್ಟಿತು ಎಂಬುದಕ್ಕೆ ಈ ತೀರ್ಪು ಒಂದು ಉಜ್ವಲ ಉದಾಹರಣೆಯಾಗಿದೆ.
ಏಕೆಂದರೆ ಈ ತೀರ್ಪಿನ ಅನುಸಾರ ಇಲ್ಲಿ ಯಾರೂ ವಿಜೇತರಲ್ಲ, ಅಥವಾ ಸೋತವರಲ್ಲ”. ನಿಸ್ಸಂದೇಹವಾಗಿ ಕೆಲವರ ಪಾಲಿಗೆ ಇದು ಚರ್ಚಾಸ್ಪದ ವಿಷಯವೇ. ಏಕೆಂದರೆ, ಹಿಂದೂ ಧರ್ಮಕ್ಕೆ/ಧಾರ್ಮಿಕ ನಂಬಿಕೆಗಳಿಗೆ ಸೇರದ ಅನೇಕರು ನಮ್ಮ ನಡುವೆ ಯಿದ್ದು, ಅವರು ಇದನ್ನು ಪ್ರಶ್ನಿಸುತ್ತಾರೆ; ಸಾಕಷ್ಟು ಹಿಂಸೆಗೂ ಪ್ರಾಣಹಾನಿಗೂ ಸಾಕ್ಷಿಯಾದ ಜನವಿಭಜಕ ಆಂದೋ ಲನದ ಫಲವೆಂಬಂತೆ ಅವರು ಈ ದೇವಾಲಯವನ್ನು ಪರಿಭಾವಿಸುತ್ತಾರೆ. ಹೀಗಿರುವಾಗ ಈ ದೇವಾಲಯವನ್ನು ಅವರು ‘ಇದು ನಮಗೂ ಸೇರಿದ್ದು, ಈ ರಾಮ ನಮಗೂ ಸೇರಿದವನು’ ಎಂದು ಪರಿಗಣಿಸುವುದಾದರೂ ಹೇಗೆ? ನಾವು ಮಧ್ಯಾಹ್ನದ ಅವಧಿಯಲ್ಲಿ ದೇಗುಲ ದಲ್ಲಿ ಪ್ರಾರ್ಥನೆ ಸಲ್ಲಿಸುವಾಗ, ಮೇಲೆ ಉಲ್ಲೇಖಿಸಿರುವ ನೃಪೇಂದ್ರ ಮಿಶ್ರಾರ ಮಾತುಗಳು ನೆನಪಾದವು.
ನಮ್ಮದು ಒಗ್ಗಟ್ಟಿನ ಮನೋಭಾವದಿಂದ ವ್ಯಾಖ್ಯಾನಿಸಲ್ಪಟ್ಟ ದೇಶವಾಗಿದ್ದರೆ, ರಾಮನು ಒಂದು ನಿರ್ದಿಷ್ಟ ಧಾರ್ಮಿಕ ನಂಬಿಕೆ ಯವರ ದೇವರಾಗಿರಬಹುದು; ಆದರೆ ‘ಸಬ್ ಕೆ ರಾಮ್’ ಅಥವಾ ‘ಎಲ್ಲರಿಗೂ ಸೇರಿದ ರಾಮ’ ಎಂದಾಕ್ಷಣ, ಆತ ಒಂದು ಸಮಾ ದಾಯಕ್ಕಾಗಲೀ ಅಥವಾ ಒಂದು ರಾಜಕೀಯ ಪಕ್ಷಕ್ಕಾಗಲೀ ಸೇರಿದವನಲ್ಲ ಎಂಬುದು ಸ್ಪಷ್ಟವಾಯಿತು. ‘ಎಲ್ಲರ ರಾಮ’ ಎಂದರೆ ರಾಮನಾಗಿರುವುದು, ಅಂದರೆ ಒಳ್ಳೆಯವನಾಗಿರುವುದು ಎಂದರ್ಥ. ‘ರಾಮ’ ಎಂಬ ಪರಿಕಲ್ಪನೆಯು, ಒಂದು ಧಾರ್ಮಿಕ
ಅಸ್ಮಿತೆಯನ್ನು ಸಂಕೇತಿಸುವುದರ ಬದಲಿಗೆ, ಓರ್ವ ಆದರ್ಶ ಮಾನವನ ಸಾಮಾಜಿಕ ಮತ್ತು ಭಾವನಾತ್ಮಕಉಪಸ್ಥಿತಿಯ ಪ್ರಬಲ ಹಾಗೂ ಐತಿಹಾಸಿಕ ಅಭಿವ್ಯಕ್ತಿ ಯಾಗುತ್ತದೆ ಎಂಬುದನ್ನು ನಾವು ಮನನ ಮಾಡಿಕೊಳ್ಳಬೇಕು.
ನೂರ್ ಆಲಮ್ ಎಂಬ ವ್ಯಕ್ತಿಯ ಬಗ್ಗೆ ನೀವು ಕೇಳಿರಬಹುದು. ಅಯೋಧ್ಯೆಯಲ್ಲಿ ಸಾವಿರಾರು ಭಕ್ತಾದಿಗಳಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುವಲ್ಲಿ ವ್ಯಸ್ತರಾಗಿರುವ ಮಹಾನುಭಾವರಿವರು. ಮುಸ್ಲಿಂ ಕುಟುಂಬವೊಂದರಲ್ಲಿ, ಬಾಲರಾಮನ ಪ್ರಾಣಪ್ರತಿ ಷ್ಠಾಪನೆಯ ದಿನದಂದೇ ಹುಟ್ಟಿದ ಶಿಶುವೊಂದಕ್ಕೆ ‘ರಾಮ್-ರಹೀಮ್’ ಎಂದು ಹೆಸರಿಡಲಾಯಿತು. ಕೇಳುವುದಕ್ಕೆ-ನೋಡುವುದಕ್ಕೆ ಇವು ವೈಯಕ್ತಿಕ ನೆಲೆಗಟ್ಟಿನ ದಂತಕಥೆಗಳಂತೆ ತೋರಬಹುದು, ಆದರೆ ಇವು ಹೇಳುವ ಕಥೆ ಅಗಾಧವಾದದ್ದು, ಆಳವಾದದ್ದು. ಹಾಗೆ ನೋಡಿದರೆ ಇದು ಹೊಸದೇನಲ್ಲ; ರಾಮಾಯಣ ಮತ್ತು ಮಹಾಭಾರತದಂಥ ಉದ್ಗ್ರಂಥಗಳ ಪುಟಪುಟ ಗಳಲ್ಲಿ ಇಂಥ ಹಲವು ನಿದರ್ಶನಗಳು ಸಿಗುತ್ತವೆ. ಮಹರ್ಷಿ ವಾಲ್ಮೀಕಿ ಹಾಗೂ ತರುವಾಯದಲ್ಲಿ ಗೋಸ್ವಾಮಿ ತುಳಸೀ ದಾಸರು, ‘ಎಲ್ಲರಿಗೂ ಸೇರಿದ ರಾಮ’ನನ್ನು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದು ಗೊತ್ತೇ ಇದೆ.
ಸಾಮಾನ್ಯ ಮಾನವನಂತೆಯೇ ಕಾಣಿಸಿಕೊಂಡರೂ ಸದ್ಗುಣ ಶೀಲನಾಗಿದ್ದುದು ಹಾಗೂ ಎಂಥ ಸಂದರ್ಭ ಬಂದಾಗಲೂ ತನ್ನ ನೈತಿಕ ದೃಷ್ಟಿಕೋನವು ಮಸುಕಾಗದಂತೆ ನೋಡಿಕೊಂಡಿದ್ದು ರಾಮನ ಹೆಗ್ಗಳಿಕೆ. ವಾಸ್ತವವಾಗಿ, ರಾಮಾಯಣದಲ್ಲಿ ಕಾಣಬರುವ ರಾಮನ ಅನುಕರಣೀಯ/ಆದರ್ಶಪ್ರಾಯ ಗುಣಲಕ್ಷಣಗಳು ‘ಧಾರ್ಮಿಕ’ ಆಯಾಮವನ್ನು ಹೊಂದಿರುವುದಕ್ಕಿಂತ ಸಾಮಾಜಿಕ-ಆಧ್ಯಾತ್ಮಿಕ-ತಾತ್ವಿಕ ಪ್ರಭೆಗಳನ್ನು ಒಳಗೊಂಡಿರುವುದೇ ಹೆಚ್ಚು. ರಾಮನು ಯಾವತ್ತೂ ಬೋಧಿಸಲು ಹೋಗುವುದಿಲ್ಲ, ಆದರೆ ಮಾನವೀಯ ಮೌಲ್ಯಗಳ ಪ್ರಜ್ಞೆಗೆ ಸ್ವತಃ ಸಾಕಾರಮೂರ್ತಿಯಾಗಿರುವವನು ರಾಮ.
‘ಎಲ್ಲರ ರಾಮ’ ಕೇಳುತ್ತಾನೆ, ಪರಾನುಭೂತಿಯ ಶಕ್ತಿಯನ್ನು ನಮಗೆ ಕಲಿಸುತ್ತಾನೆ; ಎಲ್ಲರ ರಾಮನು, ‘ಎಲ್ಲರೊಳಗೊಂದಾಗುವ ರಾಮ’ನೂ ಆಗುತ್ತಾನೆ, ಏಕೆಂದರೆ ಇತರರ ಮಾತುಗಳನ್ನು ಅಭಿಪ್ರಾಯಗಳನ್ನು ಆಲಿಸುವುದು ನಾಯಕತ್ವದ ಲಕ್ಷಣವಾಗಿದೆ, ಪ್ರಮಾಣಕ ಮುದ್ರೆಯಾಗಿದೆ. ಅಷ್ಟಕ್ಕೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೀಗ ಅತಿಮುಖ್ಯವಾದ ನಿರೀಕ್ಷೆಯೆಂದರೆ ಶ್ರೀಸಾಮಾನ್ಯರ ಅಳಲಿಗೆ, ಕುಂದುಕೊರತೆಗಳಿಗೆ ಕಿವಿಗೊಡಬೇಕಿರುವುದು; ಮನೆಯಲ್ಲೇ ಇರಲಿ ಅಥವಾ ಸಂಸತ್ತಿನಲ್ಲೇ ಇರಲಿ, ಸಮಾಜದ ಕಟ್ಟಕಡೆಯ ವ್ಯಕ್ತಿ ಹೇಳುವುದನ್ನೂ ಸಹಾನುಭೂತಿಯಿಂದ ಕೇಳುವ ಸಾಮರ್ಥ್ಯವನ್ನು ಈಗ ಪೋಷಿಸಬೇಕಾಗಿದೆ.
ರಾಮನು ‘ಎಲ್ಲರಿಗೂ ಸೇರಿದ ರಾಮ’ ಏಕೆಂದರೆ, ಅವನು ಎಲ್ಲ ಜೀವಜಾತಿಗಳಿಗೂ ಮೀಸಲಾದವನು, ಬೇಕಾದವನು. ಕಪಿಗಳು, ಪಕ್ಷಿಗಳು ಹಾಗೂ ಮನುಷ್ಯರ ತಂಡವೊಂದನ್ನು ಮುನ್ನಡೆಸಿದ್ದು ರಾಮನೇ ಅಲ್ಲವೇ? ಎಲ್ಲ ಅಸ್ಮಿತೆಗಳನ್ನೂ ಮೀರಿದ ರಾಮನು,
ಒಂದು ಅಳಿಲಿನ ಹಾಗೂ ಜಟಾಯು ಪಕ್ಷಿಯ ಪ್ರಯತ್ನವನ್ನೂ ಗುರುತಿಸಬಲ್ಲವನಾಗಿದ್ದ. ಜಾತಿಯಾಗಲೀ ಲಿಂಗವಾಗಲೀ ಈ ಞಟ್ಟಿನಲ್ಲಿ ರಾಮನಿಗೆ ತಡೆಗೋಡೆಯೇ ಆಗಿರಲಿಲ್ಲ. ಶಬರಿ ಮತ್ತು ಅಂಬಿಗ ಇಬ್ಬರೂ ರಾಮನಿಗೆ ಆಪ್ತರಾಗಿದ್ದವರೇ. ಸಮುದ್ರ ವನ್ನೂ ಪರ್ವತಗಳನ್ನೂ ಸಮಾನವಾಗಿ ಗೌರವಿಸುತ್ತಿದ್ದ ವ್ಯಕ್ತಿತ್ವ ರಾಮನದು.
ಧರ್ಮಗ್ರಂಥಗಳ ಇತಿಹಾಸದಲ್ಲಿ, ರಾಮನಷ್ಟು ಪರಿಪೂರ್ಣವಾದ ಮತ್ತು ಗಮನ ಸೆಳೆಯುವಂಥ ಮತ್ತೊಂದು ಪಾತ್ರವನ್ನು ಕಾಣುವುದು ದುಸ್ತರವೇ. ಒಂದು ಘಟ್ಟದಲ್ಲಿ ಸೀತೆಯ ಪರಿಸ್ಥಿತಿಯ ನ್ನು ಕಲ್ಪಿಸಿಕೊಂಡು ಭಯಪಡುವ ರಾಮ, ಮತ್ತೊಂದು
ಕ್ಷಣದಲ್ಲಿ ಒಡಹುಟ್ಟಿದ ಲಕ್ಷ್ಮಣನಿಗಾಗಿ ಕಣ್ಣೀರು ಸುರಿಸುತ್ತಾನೆ. ಅಂದರೆ, ರಾಮ ಬೇರೆಯಲ್ಲ, ಹುಲುಮಾನವರಾದ ನಾವು ಬೇರೆಯಲ್ಲ. ಎಲ್ಲರೊಳಗೆ ಒಂದಾಗಿರುವ ವ್ಯಕ್ತಿತ್ವ ರಾಮನದು. ಅವನು ಎಲ್ಲ ವ್ಯಕ್ತಿಗಳಲ್ಲೂ ಇದ್ದಾನೆ, ಹೀಗಾಗಿಯೇ ಅವನು ‘ಎಲ್ಲರ ರಾಮ’.
ಚುನಾವಣೆ ಎಂಬುದು ಎದುರಾಳಿಗಿಂತ ಮಾನಸಿಕವಾಗಿ ಮಾತ್ರವಲ್ಲದೆ ವಿವಿಧ ನೆಲೆಯಲ್ಲಿ ಮೇಲುಗೈ ಸಾಧಿಸುವ ಒಂದು ಕಸರತ್ತು; ಇಲ್ಲಿ ಪ್ರತಿಯೊಂದು ಗೆಲುವಿಗೂ ಒಂದು ವ್ಯಾಪಕಾರ್ಥ ಸಿಕ್ಕರೆ, ಸೋಲೆಂಬುದು ಸಂಬಂಧಪಟ್ಟವರನ್ನು ಮೂಲೆ ಗುಂಪಾಗಿಸಿ ಯಾರ ಗಮನಕ್ಕೂ ಬಾರದಂತೆ ಮಾಡಿಬಿಡುತ್ತದೆ. ಚುನಾವಣಾ ಸಂವಾದದಲ್ಲಿ ಕಡ್ಡಾಯವಾಗಿ ಇರಬೇಕಾದುದೆಂದರೆ ವಾದದಲ್ಲಿ ಗೆಲ್ಲುವುದು; ತದನಂತರದಲ್ಲಿ ಆಯಾಯಾ ದಿನವನ್ನು ಸಮರ್ಥವಾಗಿ ನಿಭಾಯಿಸುವುದು, ಸ್ಥಾನವನ್ನು
ಗೆಲ್ಲುವುದು, ಅಧಿಕಾರವನ್ನು ದಕ್ಕಿಸಿಕೊಳ್ಳುವುದು.
ಸ್ವಾರಸ್ಯವೆಂದರೆ ರಾಮನು ಈ ಎಲ್ಲವನ್ನೂ ಮೀರಿದವನಾಗಿದ್ದ. ನೈತಿಕವಾಗಿ ತನ್ನ ಎದುರಾಳಿಯಾಗಿದ್ದ ರಾವಣನ ಬಳಿಗೆ ತೆರಳಿ ಅವನಿಂದ ಏನನ್ನಾದರೂ ಕಲಿತು ಬರುವಂತೆ ಲಕ್ಷ್ಮಣನಿಗೆ ರಾಮ ಆದೇಶಿಸುತ್ತಾನೆ. ಇಂದಿನ ವಾತಾವರಣದಲ್ಲಿ ಇಂಥ ನಡೆಯನ್ನು ನಿರೀಕ್ಷಿಸಲಾದೀತೇ? ನಿರೀಕ್ಷಿಸುವುದಿರಲಿ, ಅಂಥದೊಂದು ಸಾಧ್ಯತೆಯ ಕುರಿತೂ ಯೋಚಿಸುವಂತಿಲ್ಲ! ಇಂದು ಸೋತವರನ್ನು ಮತ್ತಷ್ಟು ನೆಲೆಗಳಿಂದ ಪರಾಭವಗೊಳಿಸಲಾಗುತ್ತದೆ, ಹಣಿಯಲಾಗುತ್ತದೆ. ಅದನ್ನೇ ಚುನಾವಣಾ ಣಾಹಣಿಯಲ್ಲಿ
ವಿಜಯಶಾಲಿಯಾದವನ ಗೆಲುವು ಎನ್ನಲಾಗುತ್ತದೆ.
ಆದರೆ ‘ಎಲ್ಲರ ರಾಮ’, ‘ಎಲ್ಲರಿಗೂ ಸೇರಿದ ರಾಮ’ ಹಾಗಲ್ಲ. ಅವನ ಪಾಲಿಗೆ ಯಾವುದೇ ಗೆಲುವು ಮಾನವ ಘನತೆಗಿಂತ ದೊಡ್ಡ ದಲ್ಲ. ರಾಮ ಪ್ರತಿಯೊಬ್ಬರನ್ನೂ ಕಲಿಕೆಯ ಮೂಲವಾಗಿಯೇ ನೋಡಿದ. ವಿಜಯವೆಂಬುದು ದ್ವೇಷವನ್ನು ಹುಟ್ಟುಹಾಕಿದರೆ ಮತ್ತು ಅಹಂಕಾರಕ್ಕೆ ನೀರೆರೆದರೆ ಅದು ವಿಜಯವೇ ಅಲ್ಲ. ಅದು ನಮ್ರತೆಯ ವಿಜಯವಾಗಬೇಕು. ಅಯೋಧ್ಯೆಯಲ್ಲಿ ಪ್ರತಿ ಷ್ಠಾಪಿಸಲ್ಪಟ್ಟಿರುವ ಬಾಲರಾಮನ ಮೂರ್ತಿಯು ನಮಗೆ ಹೇಳುವುದೂ ಇದನ್ನೇ. ಅಂದರೆ, ನಿರಂತರ ಕಲಿಕಾರ್ಥಿ ಗಳಾಗಿರು ವಂತೆ, ವಿನಯಶೀಲರಾಗಿರುವಂತೆ ಹಾಗೂ ಯಾರನ್ನೂ ಶತ್ರುವಾಗಿ ಕಾಣದೆ ಸಹಜೀವಿಯಾಗಿ ಕಾಣುವಂತೆ ನಮಗೆ ಬೋಧಿಸುವ ಅಂಥ ರಾಮನನ್ನು ನಾವು ಪೂಜಿಸಬೇಕು ಎಂದು ಆ ಮೂರ್ತಿ ನಮಗೆ ಹೇಳುತ್ತದೆ.
ಈ ರಾಮನು ಕೇವಲ ನನ್ನವನು ಮಾತ್ರ ಅಲ್ಲ ಅಥವಾ ನಿಮ್ಮವನು ಮಾತ್ರ ಅಲ್ಲ, ಆತ ನಮ್ಮೆಲ್ಲರಿಗೂ ಸೇರಿದವನು. ಹೀಗಾಗಿ ಬಾಲರಾಮನ ದೇಗುಲದಿಂದ ಹೊರಬಂದಾಗ, ನನಗಾಗಲೀ ನನ್ನ ಕುಟುಂಬಿಕರಿಗಾಗಲೀ ‘ಜೈ ಶ್ರೀ ರಾಮ್’ ಎಂದು ಜೋರಾಗಿ ಕೂಗುವ ಪ್ರಮೇಯವೇ ಕಂಡುಬರಲಿಲ್ಲ. ಮೌನದ ಧ್ವನಿಯೇ ಅಲ್ಲಿ ಸಾಕಾಗಿತ್ತು. ಕುಟುಂಬಿಕರೊಂದಿಗೆ ಅಯೋಧ್ಯೆಯಿಂದ ನಿರ್ಗಮಿಸುವಾಗ, ಮತ್ತಷ್ಟು ಮಾನವೀಯತೆ ನನ್ನ ಹೃದಯದಾಳದಲ್ಲಿ ಕೆನೆಗಟ್ಟಿದ್ದಂತೂ ನಿಜ.
(ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್)
(ಲೇಖಕರು ರಾಜಕೀಯ ಮತ್ತು ಸಾಮಾಜಿಕ
ವಿಷಯಗಳ ವಿಶ್ಲೇಷಕರು ಮತ್ತು ಉದ್ಯಮಶೀಲರು)