Thursday, 19th September 2024

Lebanon Pager Explosion: ಪೇಜರ್‌ ಸ್ಫೋಟ; ಯಾರು ಈ ಹೆಜ್ಬೊಲ್ಲಾಗಳು? ಇಸ್ರೇಲ್‌ಗೂ ಇವರಿಗೂ ಯಾಕಿಷ್ಟು ವೈರತ್ವ?

Lebanon Pager Explosion

| ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಹೆಜ್ಬೊಲ್ಲಾ ಸಂಘಟನೆಯ (Lebanon Pager Explosion) ಉಗ್ರರು, ವೈದ್ಯಕೀಯ ಸಿಬ್ಬಂದಿ ಸಂವಹನಕ್ಕಾಗಿ ಬಳಸುತ್ತಿದ್ದ ಪೇಜರ್ ಉಪಕರಣಗಳು ಲೆಬನಾನ್ ಆದ್ಯಂತ ಒಂದೇ ಸಮಯದಲ್ಲಿ ಸ್ಫೋಟಗೊಳ್ಳಲು ಆರಂಭಿಸಿದ ಪರಿಣಾಮವಾಗಿ, ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ 3,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದ ಬಳಿಕ ಒಬ್ಬ ಗಾಯಾಳುವನ್ನು ಅಮೆರಿಕನ್ ಯುನಿವರ್ಸಿಟಿ ಆಫ್ ಬೈರುತ್ ಮೆಡಿಕಲ್ ಸೆಂಟರ್ (ಎಯುಬಿಎಂಸಿ) ಹೊರಭಾಗದಲ್ಲಿ ಸ್ಟ್ರೆಚರ್ ಮೂಲಕ ಸಾಗಿಸಲಾಗುತ್ತಿತ್ತು. ಭದ್ರತಾ ಮೂಲಗಳ ಪ್ರಕಾರ, ಲೆಬನಾನಿನಾದ್ಯಂತ ನಡೆದ ಪೇಜರ್ ಸ್ಫೋಟಗಳಲ್ಲಿ ಹೆಜ್ಬೊಲ್ಲಾ ಉಗ್ರರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಗುರಿಯಾಗಿದ್ದರು.

ಈ ಸ್ಫೋಟಗಳು ಹೆಜ್ಬೊಲ್ಲಾ ಸಂಘಟನೆಯ ಭದ್ರ ನೆಲೆಗಳಾದ ಬೈರುತ್‌ನ ದಕ್ಷಿಣ ಉಪನಗರಗಳು (ದಹಿಯೆಹ್), ಮತ್ತು ಪೂರ್ವದ ಬೆಕಾ ಕಣಿವೆಗಳಲ್ಲಿ ಮಧ್ಯಾಹ್ನ 3:30ರ ಸುಮಾರಿಗೆ ಆರಂಭಗೊಂಡವು. ಈ ಸ್ಫೋಟಗಳು ನಿರಂತರವಾಗಿ ಒಂದು ಗಂಟೆಯ ಕಾಲ ಮುಂದುವರಿದವು. ದಹಿಯೆಹ್ ಪ್ರದೇಶದ ಜನರಿಗೆ ಸಂಜೆ 4:30ರ ಸುಮಾರಿಗೂ ಪೇಜರ್ ಸ್ಫೋಟದ ಸದ್ದು ಕೇಳಿಬರುತ್ತಿತ್ತು ಎನ್ನಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕನ್ ಮತ್ತು ಇತರ ಅಧಿಕಾರಿಗಳು ಪ್ರಸ್ತುತ ಕಾರ್ಯಾಚರಣೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತೈವಾನ್‌ನಲ್ಲಿ ನಿರ್ಮಾಣಗೊಂಡು, ಲೆಬನಾನ್‌ಗೆ ಆಮದಾದ ಪೇಜರ್ ಉಪಕರಣಗಳಲ್ಲಿ ಇಸ್ರೇಲ್ ಸ್ಫೋಟಕಗಳನ್ನು ಬಚ್ಚಿಟ್ಟು ಅಳವಡಿಸಿದೆ ಎಂದು ಆರೋಪಗಳು ಎದುರಾಗಿವೆ. ಹೆಜ್ಬೊಲ್ಲಾ ಸಂಘಟನೆ ತೈವಾನಿನ ಕಂಪೆನಿಯಾದ ಗೋಲ್ಡ್ ಅಪೋಲೋದಿಂದ ಪೇಜರ್‌ಗಳನ್ನು ಖರೀದಿಸಿತ್ತು.

ಆದರೆ, ಗೋಲ್ಡ್ ಅಪೋಲೋ ಸಂಸ್ಥೆಯ ಸ್ಥಾಪಕ ಹು ಚಿಂಗ್ ಕುವಾಂಗ್ ಈ ಘಟನೆಯಲ್ಲಿ ತಮ್ಮ ಸಂಸ್ಥೆಯ ಯಾವುದೇ ಪಾತ್ರವಿಲ್ಲ ಎಂದಿದ್ದು, ಸ್ಫೋಟಗೊಂಡ ಪೇಜರ್‌ಗಳನ್ನು ತಾವು ಉತ್ಪಾದಿಸಿಲ್ಲ ಎಂದಿದ್ದಾರೆ.
ಹೆಜ್ಬೊಲ್ಲಾ ಸಂಘಟನೆ ಮಾತ್ರ ಇದು ಇಸ್ರೇಲ್‌ನದೇ ಕೃತ್ಯ ಎಂದು ದೂಷಿಸಿದ್ದು, ಇದಕ್ಕೆ ಸೂಕ್ತ ಪ್ರತೀಕಾರ ಕೈಗೊಳ್ಳುವುದಾಗಿ ಶಪಥ ಮಾಡಿದೆ.

ಹೆಜ್ಬೊಲ್ಲಾ ಸಂಘಟನೆ; ಒಂದು ವಿವರ

ಹೆಜ್ಬೊಲ್ಲಾ ಎನ್ನುವುದು ಒಂದು ಶಿಯಾ ಮುಸ್ಲಿಂ ಸಂಘಟನೆಯಾಗಿದ್ದು, ಲೆಬನಾನ್‌ನಲ್ಲಿ ಮಹತ್ವದ ರಾಜಕೀಯ ಪ್ರಭಾವ ಮತ್ತು ಮಿಲಿಟರಿ ಉಪಸ್ಥಿತಿಯನ್ನು ಹೊಂದಿದೆ. ಇಸ್ರೇಲನ್ನು ತಡೆಗಟ್ಟುವ ಉದ್ದೇಶದಿಂದ, ಪ್ರಮುಖ ಶಿಯಾ ಮುಸ್ಲಿಂ ರಾಷ್ಟ್ರವಾದ ಇರಾನ್ 1980ರ ದಶಕದ ಆರಂಭದಲ್ಲಿ ಬೆಂಬಲ ನೀಡಿ, ಹೆಜ್ಬೊಲ್ಲಾ ಸಂಘಟನೆಯ ಆರಂಭಕ್ಕೆ ಕಾರಣವಾಯಿತು. ಲೆಬನಾನ್‌ನಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದ ಅವಧಿಯಲ್ಲಿ, ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನನ್ನು ಆಕ್ರಮಿಸಿದ ಸಮಯದಲ್ಲಿ ಹೆಜ್ಬೊಲ್ಲಾ ಸಂಘಟನೆಯ ಸ್ಥಾಪನೆಯಾಯಿತು. 1992ರ ಬಳಿಕ, ಹೆಜ್ಬೊಲ್ಲಾ ಸಂಘಟನೆ ಲೆಬನಾನಿನ ರಾಷ್ಟ್ರೀಯ ಚುನಾವಣೆಯಲ್ಲೂ ಪಾಲ್ಗೊಳ್ಳುತ್ತಿದ್ದು, ಪ್ರಮುಖ ರಾಜಕೀಯ ಶಕ್ತಿಯಾಗಿಯೂ ಹೊರಹೊಮ್ಮಿದೆ.

ಈ ಸುದ್ದಿಯನ್ನೂ ಓದಿ | Lebanon Pager Explosions: ಲೆಬನಾನ್‌ನಲ್ಲಿ ಸ್ಫೋಟ; ಇಸ್ರೇಲ್ ಕೈವಾಡದ ಬಗ್ಗೆ ಪೇಜರ್‌ ತಯಾರಕ ಕಂಪನಿ ಹೇಳಿದ್ದೇನು?

ಹೆಜ್ಬೊಲ್ಲಾದ ಸಶಸ್ತ್ರ ಗುಂಪುಗಳು ಲೆಬನಾನ್‌ನಲ್ಲಿ ಇಸ್ರೇಲಿ ಮತ್ತು ಅಮೆರಿಕನ್‌ ಪಡೆಗಳ ಮೇಲೆ ಮಾರಣಾಂತಿಕ ದಾಳಿಗಳನ್ನು ಸಂಘಟಿಸಿದ್ದವು. 2000ನೇ ಇಸವಿಯ ವೇಳೆಗೆ ಇಸ್ರೇಲಿ ಪಡೆಗಳು ಲೆಬನಾನ್ ಬಿಟ್ಟು ತೆರಳಿದವು. ಆಗ ಹೆಜ್ಬೊಲ್ಲಾ ಸಂಘಟನೆ ತಾನೇ ಇಸ್ರೇಲನ್ನು ಹೊರಹಾಕಿರುವುದಾಗಿ ಹೇಳಿಕೊಂಡಿತ್ತು.

ಹೆಜ್ಬೊಲ್ಲಾ ಸಾವಿರಾರು ಸಂಖ್ಯೆಯಲ್ಲಿ ಯೋಧರನ್ನು ಹೊಂದಿದ್ದು, ದಕ್ಷಿಣ ಲೆಬನಾನ್‌ನಲ್ಲಿ ಅಪಾರ ಪ್ರಮಾಣದ ಕ್ಷಿಪಣಿಗಳನ್ನು ಕಲೆಹಾಕಿತ್ತು. ಇಂದಿಗೂ ವಿವಾದಾತ್ಮಕ ಗಡಿ ಪ್ರದೇಶಗಳಲ್ಲಿ ಲೆಬನಾನ್ ಇಸ್ರೇಲಿನ ಉಪಸ್ಥಿತಿಯನ್ನು ಪ್ರಶ್ನಿಸುತ್ತಿದೆ. ಹಲವಾರು ಪಾಶ್ಚಾತ್ಯ ದೇಶಗಳು, ಇಸ್ರೇಲ್, ಗಲ್ಫ್ ಅರಬ್ ರಾಷ್ಟ್ರಗಳು, ಮತ್ತು ಅರಬ್ ಲೀಗ್ ಹೆಜ್ಬೊಲ್ಲಾ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಗುರುತಿಸಿವೆ. 2006ರಲ್ಲಿ ಹೆಜ್ಬೊಲ್ಲಾ ಒಂದು ಬೃಹತ್ ಗಡಿಯಾಚೆಗಿನ ದಾಳಿ ಸಂಘಟಿಸಿದ ಬಳಿಕ, ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ಒಂದು ಪ್ರಮುಖ ಚಕಮಕಿ ಏರ್ಪಟ್ಟಿತು.

ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್‌ಗೆ ನುಗ್ಗಿ, ಹೆಜ್ಬೊಲ್ಲಾದ ಅಪಾಯವನ್ನು ನಿವಾರಿಸಲು ಪ್ರಯತ್ನಿಸಿತು. ಆದರೆ, ಈ ದಾಳಿಯಲ್ಲಿ ಹೆಜ್ಬೊಲ್ಲಾ ಪಾರಾಗಿ, ಆ ಬಳಿಕ ತನ್ನ ಯೋಧರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿ, ಇನ್ನೂ ಆಧುನಿಕ ಆಯುಧಗಳನ್ನು ಪಡೆದುಕೊಂಡಿತು.

ಹೆಜ್ಬೊಲ್ಲಾ ಮುಖಂಡ, ಹಸ್ಸನ್ ನಸ್ರಲ್ಲಾ ಯಾರು?

ಶಿಯಾ ಮುಸ್ಲಿಂ ಧಾರ್ಮಿಕ ಮುಖಂಡನಾದ ಶೇಖ್ ಹಸ್ಸನ್ ನಸ್ರಲ್ಲಾ 1992ರಿಂದ ಹೆಜ್ಬೊಲ್ಲಾ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದಾನೆ. ಹೆಜ್ಬೊಲ್ಲಾ ಸಂಘಟನೆಯನ್ನು ರಾಜಕೀಯ ಮತ್ತು ಮಿಲಿಟರಿ ಎರಡೂ ವಿಭಾಗಗಳಲ್ಲೂ ಶಕ್ತಿಶಾಲಿ ಪಡೆಯಾಗಿಸುವಲ್ಲಿ ನಸ್ರಲ್ಲಾ ಮುಖ್ಯ ಪಾತ್ರ ವಹಿಸಿದ್ದ. ನಸ್ರಲ್ಲಾ ಇರಾನ್ ಮತ್ತು ಅದರ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ. ಇಸ್ರೇಲ್ ದಾಳಿಗೆ ಗುರಿಯಾಗುವ ಅಪಾಯ ಇರುವುದರಿಂದ ನಸ್ರಲ್ಲಾ ಹಲವಾರು ವರ್ಷಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದೆಲ್ಲದರ ಹೊರತಾಗಿಯೂ, ಆತನಿಗೆ ಹೆಜ್ಬೊಲ್ಲಾ ಸಂಘಟನೆಯಲ್ಲಿ ಅಪಾರ ಗೌರವವಿದ್ದು, ಆತ ವಾರಕ್ಕೊಮ್ಮೆ ಟಿವಿಯಲ್ಲಿ ಭಾಷಣ ನಡೆಸುತ್ತಾನೆ.

ಹೆಜ್ಬೊಲ್ಲಾ ಪಡೆಗಳು ಎಷ್ಟು ಶಕ್ತಿಶಾಲಿ?

ಹೆಜ್ಬೊಲ್ಲಾ ಸಂಘಟನೆ ಜಗತ್ತಿನ ಅತಿದೊಡ್ಡ, ಅತ್ಯಂತ ಪ್ರಬಲ ಸರ್ಕಾರೇತರ ಮಿಲಿಟರಿ ಸಂಘಟನೆಯಾಗಿದ್ದು, ಇದಕ್ಕೆ ಇರಾನಿನ ಭಾರೀ ಬೆಂಬಲವಿದೆ. ಹಸ್ಸನ್ ನಸ್ರಲ್ಲಾ ಹೆಜ್ಬೊಲ್ಲಾ ಸಂಘಟನೆ 1 ಲಕ್ಷ ಯೋಧರನ್ನು ಹೊಂದಿದೆ ಎಂದಿದ್ದು, ಸ್ವತಂತ್ರ ಸಮೀಕ್ಷೆಗಳ ಪ್ರಕಾರ, ಸಂಘಟನೆ ಅಂದಾಜು 20,000ದಿಂದ 50,000 ಯೋಧರನ್ನು ಹೊಂದಿರುವ ಸಾಧ್ಯತೆಗಳಿವೆ. ಇದರ ಹಲವಾರು ಸದಸ್ಯರು ಅನುಭವಿ ಯೋಧರಾಗಿದ್ದು, ಸಿರಿಯನ್ ಆಂತರಿಕ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್ ಸಂಸ್ಥೆಯ ಪ್ರಕಾರ, ಹೆಜ್ಬೊಲ್ಲಾ ಬಳಿ 1,20,000 ದಿಂದ 2 ಲಕ್ಷ ರಾಕೆಟ್‌ಗಳು ಮತ್ತು ಕ್ಷಿಪಣಿಗಳಿವೆ.

ಇವುಗಳಲ್ಲಿ ಬಹುತೇಕ ಸಣ್ಣದಾದ, ನಿರ್ದೇಶಿತವಲ್ಲದ ಭೂಮಿಯಿಂದ ಭೂಮಿಗೆ ಚಿಮ್ಮುವ ರಾಕೆಟ್‌ಗಳಾಗಿವೆ. ಅದರೊಡನೆ, ಹೆಜ್ಬೊಲ್ಲಾ ಬಳಿ ಇಸ್ರೇಲ್ ಒಳಗೆ ನುಗ್ಗಬಲ್ಲಂತಹ ಆ್ಯಂಟಿ ಏರ್‌ಕ್ರಾಫ್ಟ್, ಆ್ಯಂಟಿ ಶಿಪ್, ಮತ್ತು ನಿರ್ದೇಶಿತ ದಾಳಿ ಕ್ಷಿಪಣಿಗಳೂ ಇವೆ. ಹೆಜ್ಬೊಲ್ಲಾ ಸಂಘಟನೆಯ ಬಳಿ ಗಾಜಾದ ಹಮಾಸ್ ಸಂಘಟನೆಗಿಂತ ಸಾಕಷ್ಟು ಹೆಚ್ಚು ಆಧುನಿಕ ಆಯುಧಗಳಿವೆ.

ಹೆಜ್ಬೊಲ್ಲಾ ಇಸ್ರೇಲ್ ಜೊತೆ ಯುದ್ಧ ಮಾಡಬಲ್ಲದೇ?

ಹೆಜ್ಬೊಲ್ಲಾ ಮತ್ತು ಇಸ್ರೇಲ್ ನಡುವೆ ಆಗಾಗ ಚಕಮಕಿಗಳು ನಡೆಯುತ್ತಿದ್ದರೂ, ಅಕ್ಟೋಬರ್ 8, 2023ರಂದು ಗಾಜಾದಿಂದ ಹಮಾಸ್ ಸಂಘಟನೆ ಇಸ್ರೇಲ್ ಒಳ ಪ್ರವೇಶಿಸಿ ದಾಳಿ ನಡೆಸಿದ ಬಳಿಕ ಅವು ತೀವ್ರ ಸ್ವರೂಪ ಪಡೆದುಕೊಂಡವು. ಪ್ಯಾಲೆಸ್ತೀನಿಯನ್ನರಿಗೆ ಬೆಂಬಲ ಸೂಚಿಸುವ ಸಲುವಾಗಿ, ಹೆಜ್ಬೊಲ್ಲಾ ಸಂಘಟನೆ ಇಸ್ರೇಲಿ ಸ್ಥಾನಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಅಂದಿನಿಂದ, ಹೆಜ್ಬೊಲ್ಲಾ ಸಂಘಟನೆ ಉತ್ತರ ಇಸ್ರೇಲ್ ಮತ್ತು ಗೋಲನ್ ಹೈಟ್ಸ್ ಪ್ರದೇಶಗಳನ್ನು ಗುರಿಯಾಗಿಸಿ 8,000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾಯಿಸಿದೆ. ಅದರೊಡನೆ, ಸಶಸ್ತ್ರ ವಾಹನಗಳಿಂದ ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳನ್ನು ಉಡಾವಣೆಗೊಳಿಸಿದೆ. ಇಸ್ರೇಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ, ಸ್ಫೋಟಕ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿದೆ.

ಲೆಬನಾನಿನ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಅಕ್ಟೋಬರ್ 2023ರಿಂದ ಕನಿಷ್ಠ 589 ಜನರು ಸಾವಿಗೀಡಾಗಿದ್ದು, ಅವರಲ್ಲಿ ಬಹುತೇಕರು ಹೆಜ್ಬೊಲ್ಲಾ ಯೋಧರಾಗಿದ್ದರೆ, 137 ಜನ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್‌ನಲ್ಲಿ ಹೆಜ್ಬೊಲ್ಲಾ ದಾಳಿಗೆ ಕನಿಷ್ಠ 25 ನಾಗರಿಕರು ಮತ್ತು 21 ಯೋಧರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ಚಕಮಕಿಗಳ ಪರಿಣಾಮವಾಗಿ, ಗಡಿಯ ಎರಡೂ ಬದಿಗಳಲ್ಲಿ ಬಹುತೇಕ 2 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ.

ಉಭಯ ಪಕ್ಷಗಳು ಕದನವನ್ನು ಸಣ್ಣ ಪ್ರಮಾಣದಲ್ಲಿಡಲು ಪ್ರಯತ್ನ ನಡೆಸಿವೆಯಾದರೂ, ಈ ಚಕಮಕಿಗಳು ಪೂರ್ಣ ಪ್ರಮಾಣದ ಯುದ್ಧದ ಸ್ವರೂಪ ಪಡೆದುಕೊಳ್ಳುವ ಅಪಾಯಗಳಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಜುಲೈ 27ರಂದು, ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ 12 ಮಕ್ಕಳು ಸಾವಿಗೀಡಾದರು. ಇದರ ಪರಿಣಾಮವಾಗಿ, ಯುದ್ಧ ತೀವ್ರಗೊಳ್ಳಬಹುದು ಎಂದು ಆತಂಕ ಸೃಷ್ಟಿಯಾಗಿತ್ತು. ಇಸ್ರೇಲ್ ಈ ದಾಳಿಯ ಹಿಂದೆ ಹೆಜ್ಬೊಲ್ಲಾ ಕೈವಾಡವಿದೆ ಎಂದು ಆರೋಪಿಸಿತ್ತು. ಆದರೆ ಹೆಜ್ಬೊಲ್ಲಾ ಈ ಆರೋಪವನ್ನು ತಳ್ಳಿಹಾಕಿತ್ತು.

ಜುಲೈ 30ರಂದು ಐಡಿಎಫ್ ತಾನು ಹೆಜ್ಬೊಲ್ಲಾ ಸಂಘಟನೆಯ ಹಿರಿಯ ಮಿಲಿಟರಿ ಮುಖಂಡನಾದ ಫೌದ್ ಶುಕರ್ ನನ್ನು ಬೈರುತ್‌ನಲ್ಲಿ ವಾಯುದಾಳಿ ನಡೆಸಿ ಕೊಲೆ ಮಾಡಿರುವುದಾಗಿ ಘೋಷಿಸಿತು. ಅದರ ಮರುದಿನ, ಹಮಾಸ್ ಸಂಘಟನೆಯ ರಾಜಕೀಯ ಮುಖಂಡ ಇಸ್ಮಾಯಿಲ್ ಹನಿಯೆಹ್ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಕೊಲೆಯಾದ. ಆದರೆ ಇಸ್ರೇಲ್ ಇದರಲ್ಲಿ ತನ್ನ ಪಾತ್ರ ಇದೆ ಎಂದಾಗಲಿ, ಇಲ್ಲವೆಂದಾಗಲಿ ಹೇಳಲಿಲ್ಲ. ಈ ಘಟನೆಯ ಬಳಿಕ, ಈ ಪ್ರದೇಶ ಉದ್ವಿಗ್ನವಾಗಿದ್ದು, ಹೆಜ್ಬೊಲ್ಲಾ ಮತ್ತು ಇರಾನ್‌ಗಳು ಹೇಗೆ ಪ್ರತಿಕ್ರಿಯಿಸಬಹುದು ಎಂದು ಎದುರು ನೋಡುತ್ತಿದೆ. ಇರಾನ್ ಮತ್ತು ಹೆಜ್ಬೊಲ್ಲಾಗಳು ಈಗಾಗಲೇ ಇಸ್ರೇಲನ್ನು ನಾಶಗೊಳಿಸುವುದಾಗಿ ಪ್ರಮಾಣ ಮಾಡಿವೆ.

ಈ ಸುದ್ದಿಯನ್ನೂ ಓದಿ | Lebanon Pager Explosions: ಪೇಜರ್‌ ಬ್ಲಾಸ್ಟ್‌ ಬೆನ್ನಲ್ಲೇ ಲೆಬನಾನ್‌ನಲ್ಲಿ ವಾಕಿಟಾಕಿಗಳೂ ಸ್ಫೋಟ; ಇಲ್ಲಿದೆ ವಿಡಿಯೋ

ಅಮೆರಿಕಾ ಗಾಜಾದಲ್ಲಿ ಒತ್ತೆಯಾಳುಗಳಾಗಿರುವ ಇಸ್ರೇಲಿಗಳ ಬಿಡುಗಡೆಗೆ ಪ್ರಯತ್ನಿಸಿ, ಕದನ ವಿರಾಮ ಜಾರಿಗೊಳಿಸಿ, ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿದೆ. ಅಮೆರಿಕ ಇದಕ್ಕೆ ಒಪ್ಪಿಗೆ ಸೂಚಿಸುವಂತೆ ಇಸ್ರೇಲ್ ಮತ್ತು ಹಮಾಸ್‌ಗಳನ್ನು ಆಗ್ರಹಿಸುತ್ತಿದೆ. ಗಾಜಾದಲ್ಲಿನ ಕದನ ಮುಗಿದ ಬಳಿಕವಷ್ಟೇ ತಾನು ಆಕ್ರಮಣ ನಿಲ್ಲಿಸುವುದಾಗಿ ಹೆಜ್ಬೊಲ್ಲಾ ಹೇಳಿಕೆ ನೀಡಿದೆ.

Leave a Reply

Your email address will not be published. Required fields are marked *