ಶಶಾಂಕಣ
shashidhara.halady@gmail.com
ಸಹ್ಯಾದ್ರಿ ಪರ್ವತ ಶ್ರೇಣಿಯ ಮಡಿಲಲ್ಲಿರುವ ವಯನಾಡು ಪ್ರದೇಶದಲ್ಲಿ ಜುಲೈ ೩೦ರಂದು ನಡೆದ ಭೂಕುಸಿತದಿಂದಾಗಿ, ಮುಂಡಕೈ, ಚೂರಮಾಲ, ಮೇಪ್ಪಾಡಿ ಮೊದಲಾದ ಗ್ರಾಮಗಳೇ ಕೊಚ್ಚಿಹೋಗಿದ್ದು, ಮುನ್ನೂರಕ್ಕೂ ಹೆಚ್ಚು ಜನರು ಮೃತರಾಗಿದ್ದು ನಿಜಕ್ಕೂ ದುಃಖದ ಸಂಗತಿ. ರಾತ್ರಿ ಹೊತ್ತಿನಲ್ಲಿ ನುಗ್ಗಿಬಂದ ಪ್ರವಾಹದಿಂದಾಗಿ ಅಗಲಿದ ಜೀವಗಳಿಗೆ ನಮನಗಳು.
ಕೇರಳದ ಈ ಭೂಕುಸಿತವನ್ನು ಮತ್ತು ನಮ್ಮ ರಾಜ್ಯದ ಶಿರಾಡಿ ಘಾಟಿಯಲ್ಲಿ ಕಳೆದ ವಾರ ಮತ್ತು ಈ ವಾರ ನಡೆದಿರುವ ಭೂಕುಸಿತವನ್ನು, ‘ಪ್ರಕೃತಿಯ ಮುನಿಸು’ ಎಂದು ಸಾರಾಸಗಟಾಗಿ ವರ್ಗೀಕರಿಸುವಂತಿಲ್ಲ. ನಿಜ, ಒಂದೆರಡು ದಿನಗಳ ಅಂತರದಲ್ಲಿ ಭಾರೀ ಪ್ರಮಾಣದ ಮಳೆ ಸುರಿದದ್ದರಿಂದ, ಸಡಿಲ ಗೊಂಡಿದ್ದ ಮಣ್ಣು ಕುಸಿದಿದೆ; ಬೆಟ್ಟದ ಭಿತ್ತಿಯ ಬೃಹತ್ ಭಾಗಗಳೇ ಜಾರಿಕೊಂಡು ಬಂದಿವೆ, ನದಿಯ ನೀರಿನೊಂದಿಗೆ ಕೆಸರು, ಕಲ್ಲು, ಮರದ ದಿಮ್ಮಿಗಳು ಹರಿದು ಬಂದು, ಮನೆಯಲ್ಲಿ ನಿದ್ರಿಸುತ್ತಿರುವ ವರನ್ನು ಚಿರನಿದ್ರೆಗೆ ಕಳಿಸಿವೆ. ಈ ದುರಂತದಲ್ಲಿ ವಿಪರೀತ ಮಳೆ ಸುರಿದ ವಿದ್ಯಮಾನವು, (ಎರಡು ದಿನಗಳಲ್ಲಿ ಸುಮಾರು ೫೭೨ ಮಿ.ಮೀ. ಮಳೆ) ಪ್ರಕೃತಿಯ ಮುನಿಸನ್ನು ತೋರಿದರೂ, ಈ ಪ್ರಮಾಣದ ಭೂಕುಸಿತ ಉಂಟಾಗಲು, ಮನುಷ್ಯನ ವಿವೇಚ ನಾರಹಿತ ಕೆಲಸಗಳೂ ಕಾರಣ ಎಂಬುದನ್ನು ಗಮನಿಸಬೇಕಾಗಿದೆ. ಕೇರಳದಲ್ಲಿ ನೂರಾರು ಜನರು ಮೃತಪಟ್ಟಿರುವ ಈ ದುಃಖಕರ ಸನ್ನಿವೇಶ ದಲ್ಲಿ, ಭೂಕುಸಿತದ ಕಾರಣಗಳನ್ನು ವಿಶ್ಲೇಷಿಸುತ್ತಾ ಹೋಗುವುದು ಅಷ್ಟೇನೂ ಸಮಂಜಸವಲ್ಲದೇ ಇರಬಹುದು.
ಆದರೆ ಸಹ್ಯಾದ್ರಿಯ ಕಾಡುಗಳು, ಬೆಟ್ಟ, ಇಳಿಜಾರು, ನದಿ ಎಲ್ಲವೂ ಪಾರಿಸರಿಕವಾಗಿ, ಬಹು ಸೂಕ್ಷ್ಮ ಪ್ರದೇಶಕ್ಕೆ ಸೇರಿದೆ ಎಂಬ ಅರಿವು, ಕಳೆದ ಮೂರು ನಾಲ್ಕು ದಶಕಗಳಿಂದಲೂ ಎಲ್ಲರಲ್ಲೂ ಇರುವಾಗ, ಅಂತಹ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸುವುದು ಜನರ ಮತ್ತು ಸರಕಾರದ ಕರ್ತವ್ಯ ಎನಿಸಿತ್ತು,
ಆಗಬೇಕಾಗಿತ್ತು. ಆದರೆ, ವಯನಾಡಿನಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ, ಇಂತಹ ಒಂದು ಅರಿವನ್ನು ನಿರ್ಲಕ್ಷಿಸಿ, ತಜ್ಞರು ನೀಡಿದ ಎಚ್ಚರಿಕೆಯನ್ನು ತಿರಸ್ಕರಿಸಿ, ವಿಜ್ಞಾನಿಗಳು ಈ ಕುರಿತು ನೀಡಿದ ವರದಿಗಳನ್ನು ಕುಳಿತುಕೊಳ್ಳುವ ಕುರ್ಚಿಯ ದಿಂಬಿನ ಅಡಿಗೆ ಹಾಕಿಕೊಂಡು, ಪರಿಸರನಾಶವನ್ನು
ಮುಂದುವರಿಸಿದ್ದರಿಂದಲೇ, ಇಷ್ಟೊಂದು ಭಾರೀ ಪ್ರಮಾಣದ ದುರಂತ ನಡೆದಿದೆ.
ಒಂದು ಸಣ್ಣ ಅಂಕಿಅಂಶವನ್ನು ಉದಾಹರಿಸುವುದಾದರೆ, ೧೯೫೦ ಮತ್ತು ೨೦೧೮ರ ನಡುವೆ ವಯನಾಡಿನ ಹಸಿರು ಪ್ರದೇಶವು (ಕಾಡು) ಶೇ.೬೨ರಷ್ಟು ಕುಸಿದಿದೆ; ಇದೇ ಅವಧಿಯಲ್ಲಿ ಟೀ ತೋಟದ ವ್ಯಾಪ್ತಿಯು ಶೇ.೧೮೦೦ರಷ್ಟು ಹೆಚ್ಚಿದೆ! ಇಂತಹ ಹಲವು ಅಂಕಿಅಂಶಗಳು, ಆ ಜಿಲ್ಲೆಯ ಪರಿಸರನಾಶವನ್ನು ಬಯಲು ಮಾಡುತ್ತಿವೆ; ಆ ಅಂಕಿಅಂಶಗಳನ್ನು ಬದಿಗಿಡೋಣ. ಎರಡು ದಶಕಗಳ ಹಿಂದೆಯೇ (೩೧.೮.೨೦೦೧) ಗಾಡ್ಗೀಳ್ ವರದಿಯು ಸರಕಾರದ
ಕೈ ಸೇರಿತ್ತು, ಪರಿಸರ ಸೂಕ್ಷ್ಮ ವಲಯಗಳಲ್ಲಿ ಯಾವುದೇ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯ ಮಾಡಬಾರದು ಮತ್ತು ಪ್ರಕೃತಿಯನ್ನು ಆಗ ಇರುವಂತೆಯೇ ಮುಂದುವರಿಸಿಕೊಂಡು ಹೋಗಬೇಕು ಮತ್ತು ಮುಖ್ಯವಾಗಿ ಕಾಡು, ಬೆಟ್ಟ, ಶೋಲಾ, ಹುಲ್ಲುಗಾವಲು, ಬಂಡೆ, ಪರಿಸರ ಸಂಪತ್ತು,
ನೆಲದಾಳದ ಖನಿಜ, ತೊರೆ, ನದಿ ಎಲ್ಲವನ್ನೂ ರಕ್ಷಿಸಿಕೊಳ್ಳಬೇಕು, ಇದು ಜನಸಾಮಾನ್ಯರ ಬದುಕು ಸುಗಮವಾಗಲು ಅತಿ ಅಗತ್ಯ ಎಂದು ಆ ವರದಿ
ಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು.
ತನ್ನ ರಾಜ್ಯದ ಉದ್ದಕ್ಕೂ ಸಹ್ಯಾದ್ರಿಯ ಶ್ರೇಣಿಯನ್ನು ಹೊಂದಿದ್ದ ಕೇರಳ ರಾಜ್ಯವು, ಆ ವರದಿಯನ್ನು ಸಂತಸದಿಂದ ಸ್ವೀಕರಿಸಿ, ಕ್ರಿಯಾತ್ಮಕವಾಗಿ ಅಳವಡಿಸಿಕೊಳ್ಳಬೇಕಿತ್ತು – ತನ್ನ ರಾಜ್ಯದ ಸಂಪತ್ತನ್ನು ಕಾಪಾಡಲು ಆ ರಾಜ್ಯದ ಪ್ರಭುತ್ವಕ್ಕೆ ಗಾಡ್ಗಿಳ್ ವರದಿಯು ಒಂದು ಅಸ್ತ್ರವಾಗಬೇಕಿತ್ತು; ವರದಿಯ ಪ್ರಮುಖ ಅಂಶಗಳನ್ನು ಮುಂದಿಟ್ಟು ಜನರ ಮನವೊಲಿಸುವುದು ಸುಲಭವಾಗುತ್ತಿತ್ತು. ಆದರೆ, ತನ್ನ ರಾಜ್ಯದ ಅರಣ್ಯ ಪ್ರದೇಶದಲ್ಲಿ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಾಕಷ್ಟು ದಟ್ಟವಾದ ಜನವಸತಿ ಇದೆ ಎಂಬ ಕಾರಣವೊಡ್ಡಿ, ಕೇರಳ ಸರಕಾರವೇ ಗಾಡ್ಗಿಲ್ ವರದಿಯನ್ನು ವಿರೋಧಿಸಿತ್ತು.
ಕೊನೆಯ ಪಕ್ಷ ಅಲ್ಲಿನವರು ತಮ್ಮ ಪ್ರಾಕೃತಿಕ ಸಂಪತ್ತನ್ನು ಅಂದು ಇದ್ದ ಸ್ಥಿತಿಯಲ್ಲೇ ಕಾಪಾಡಿಕೊಂಡು, ಆ ಪ್ರಾಕೃತಿಕ ಸಂಪತ್ತಿನ ಸಹಜ ಶ್ರೀಮಂತಿಕೆ ಯನ್ನೇ ಪ್ರವಾಸೋದ್ಯಮಕ್ಕೆ ಬಳಸುವ ಮನಸ್ಸನ್ನಾದರೂ ಆಗ, ಅಂದರೆ ೨೦೦೧ರ ದಶಕದಲ್ಲಿ ಮಾಡಬಹುದಿತ್ತು – ಜನವಸತಿ ಅದರ ಪಾಡಿಗೆ ಇರಲಿ,
ಜತೆಯಲ್ಲೇ, ಸಹಜ ಕಾಡನ್ನು, ಕುರುಚಲು ಕಾಡನ್ನು ರಕ್ಷಿಸಿಕೊಂಡು, ಹಳೆಕಾಲದ ಮರಗಳನ್ನು ಕಾಪಾಡಿಕೊಂಡು, ಬೆಟ್ಟದ ಇಳಿಜಾರುಗಳನ್ನು ಜತನ
ಮಾಡಿಕೊಂಡು, ಮಳೆ ಸುರಿದಾಗ ಮಣ್ಣಿನ ಸವಕಳಿಯನ್ನು ದಕ್ಷವಾಗಿ ತಡೆಯುವ ಮರಗಳ ಬೇರಿನ ಜಾಲವನ್ನು ಕಾಪಾಡಿಕೊಂಡು ಬಂದಿದ್ದರೆ, ಪ್ರಾ
ಯಶಃ ಮೊನ್ನೆ ನಡೆದಂತಹ ಭೀಕರ ದುರಂತವನ್ನು ತಡೆಯಬಹುದಿತ್ತು; ಕೊನೆಯ ಪಕ್ಷ ದುರಂತದ ತೀವ್ರತೆಯನ್ನು ಬಹುವಾಗಿ ಕಡಿಮೆಮಾಡಬಹು
ದಿತ್ತು.
ಗಾಡ್ಗಿಲ್ ವರದಿಯ ಪ್ರಮುಖ ಅಂಶಗಳನ್ನಾದರೂ ಗುರುತಿಸಿಕೊಂಡು, ಇದನ್ನು ಅನುಸರಿಸಿದರೆ ತಮ್ಮ ರಾಜ್ಯದ ಭವಿಷ್ಯಕ್ಕೆ, ಜನರ ಹಿತಕ್ಕ ಲಾಭವಿದೆ ಎಂಬ ಸೂತ್ರವನ್ನು ಅಳವಡಿಸಿಕೊಂಡು, ಸಹ್ಯಾದ್ರಿ ಶ್ರೇಣಿಯ ನಡುವೆ ವಾಸವಿದ್ದ ಜನರನ್ನು, ಹಳ್ಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪರಿಸರವನ್ನು ಕಾಪಾಡಿಕೊಂಡು ಬಂದಿದ್ದರೆ, ಈ ಮಟ್ಟದ ದುರಂತ ಸಂಭವಿಸುತ್ತಿರಲಿಲ್ಲ. ಅಂತಹದ್ದೊಂದು ಎಚ್ಚರಿಕೆ ತೆಗೆದುಕೊಂಡಿದ್ದರೆ, ಈ ವಾರ ಒಮ್ಮೆಗೇ ಸುರಿದ ಅಪಾರ ಪ್ರಮಾಣದ ಮಳೆಯಿಂದಾಗಿ ಪ್ರವಾಹ ಬರುತ್ತಿತ್ತು ನಿಜ, ಮತ್ತು ನದಿ ತೀರದ ಹಳ್ಳಿಗಳನ್ನು ಪ್ರವಾಹ ಕಾಡುತ್ತಿತ್ತು ನಿಜ; ಆದರೆ, ಈಗ ನಡೆದಂತಹ ಭೀಕರ ಎನಿಸುವ ದುರಂತ ಸಂಭವಿಸುತ್ತಿರಲಿಲ್ಲ; ಜುಲೈ ಮೂವತ್ತರಂದು ನಡೆದ ಈ ಭೀಕರ ದುರಂತವನ್ನು ದೃಶ್ಯ ಮಾಧ್ಯಮಗಳು ವರದಿ ಮಾಡುವಾಗ, ನದಿಯಲ್ಲಿ ತೇಲಿ ಬಂದು ಹಲವು ಕಡೆ ರಾಶಿಬಿದ್ದ ಸಾವಿರಾರು ಮರಗಳನ್ನು ತೋರಿಸಿದವು; ಪರಿಸರವನ್ನು ಸಹಜವಾಗಿ ರಕ್ಷಿಸಿಕೊಂಡಿದ್ದರೆ, ಅಷ್ಟೊಂದು ಪ್ರಮಾಣದ ಮರದ ದಿಮ್ಮಿಗಳು, ಬೇರುಗಳು ತೇಲಿಬರುತ್ತಿರಲಿಲ್ಲ, ಸಾವಿರಾರು ಬಂಡೆಗಳು ನೀರಿನ ಜತೆ ಬಂದು ಮನೆಗಳಿಗೆ ಬಡಿಯುತ್ತಿರಲಿಲ್ಲ – ಏಕೆಂ
ದರೆ, ಸಹಜ ಕಾಡಿನಲ್ಲಿ ಬೆಳೆದ ಮರಗಳು, ಗಿಡಗಳು, ಕುರುಚಲು ಪೊದೆಗಳು ಮಣ್ಣನ್ನು ಹಿಡಿದಿಡುತ್ತಿದ್ದವು, ದಟ್ಟವಾಗಿ ಬೆಳೆದಿರಬಹುದಾದ ಮರಗಿಡಗಳ ಬೇರಿನ ಜಾಲವು, ಮಳೆ ಸುರಿದಾಗ ಮಣ್ಣು ಕೊರೆಯದಂತೆ ದಕ್ಷವಾಗಿ ತಡೆಯುತ್ತಿದ್ದವು, ಬಂಡೆಗಳು ಜಾರಿ ತೇಲಿ ಹೋಗದಂತೆ ಹಿಡಿದಿಡುತ್ತಿದ್ದವು.
ಆದರೆ, ಆ ಪ್ರವಾಹದ ಜತೆ ತೇಲಿಬಂದ ಸಾವಿರಾರು ಮರದ ಕಾಂಡಗಳನ್ನು, ದಿಮ್ಮಿಗಳನ್ನು, ಬೇರುಗಳನ್ನು, ಮರದ ತುಂಡುಗಳನ್ನು ಕಂಡಾಗ
ಅನಿಸುವುದೆಂದರೆ, ಕೇರಳದ ಆ ಕಾಡುಪ್ರದೇಶದಲ್ಲಿ ಅವ್ಯಾಹತವಾಗಿ ಮರಗಳನ್ನು ಕಡಿದು ಹಾಕಲಾಗಿದೆ, ಕುರುಚಲು ಗಿಡಗಳನ್ನು ನಾಶಮಾಡಲಾಗಿದೆ, ಆದ್ದರಿಂದಲೇ ಬೇರುಗಳ ಜಾಲ ನಾಶವಾಗಿದೆ, ಮತ್ತು ಗುಡ್ಡ ಕುಸಿತದ ತೀವ್ರತೆ ಅಧಿಕಗೊಂಡು, ನೀರಿನ ಪ್ರವಾಹದ ಜತೆಯಲ್ಲೇ ಸಾವಿರಾರು ಮರಗಳು, ಬಂಡೆಗಳು ಕೊಚ್ಚಿಕೊಂಡು ಬಂದು, ಹಳ್ಳಿಯ ಮನೆಗಳಿಗೆ ನುಗ್ಗಿವೆ.
ಈಚಿನ ದಶಕಗಳಲ್ಲಿ ‘ಅರಣ್ಯ ಬೆಳೆಸುವುದು’ ಎಂಬ ‘ಕಾಮಗಾರಿ’ಯಲ್ಲಿ ಅಕೇಶಿಯಾ ಮೊದಲಾದ, ಬೇರಿನ ಜಾಲವಿಲ್ಲದ ಮರಗಳನ್ನು ಬೆಳೆಸುವ ಖಯಾಲಿಯೂ, ಈ ಗುಡ್ಡ ಕುಸಿತಕ್ಕೆ ತನ್ನ ಪಾಲಿನ ಕೊಡುಗೆಯನ್ನು ನೀಡಿರಬಹುದು. ಬೇರೊಂದು ಕಡೆ ಗುಡ್ಡ ಕುಸಿತವನ್ನು ಅಧ್ಯಯನ ಮಾಡಿದ
ತಜ್ಞರು ಇಂತಹ ವಿದ್ಯಮಾನವನ್ನು ದಾಖಲಿಸಿದ್ದಾರೆ – ಅಟೇಶಿಯಾ ಮೊದಲಾದ ‘ಆಧುನಿಕ’ (ಹಣ ತಂದುಕೊಡುವ) ಮರಗಳನ್ನು ಬೆಳೆಸಿದ್ದ ಜಾಗವು
ಪ್ರವಾಹಕ್ಕೆ ಕುಸಿದು ಕೊಚ್ಚಿಹೋಗಿತ್ತು, ಅವುಗಳ ನಡುವೆ ನಿಂತಿದ್ದ ಒಂದು ಆಲ ಮರದ ಬುಡದಲ್ಲಿ ಮಣ್ಣು ಭದ್ರವಾಗಿತ್ತು, ಕುಸಿತ ಉಂಟಾಗಿರಲಿಲ್ಲ.
ಏಕೆಂದರೆ, ಆಲದ ಮರದ ಬೇರುಗಳು ಮಣ್ಣನ್ನು ಗಟ್ಟಿಯಾಗಿ ತಡೆಹಿಡಿದಿದ್ದವು.
ಇಂತಹ ಪಾಠಗಳು ಕೇರಳದ ಸರಕಾರಕ್ಕೆ ಮತ್ತು ಅಲ್ಲಿನ ಅರಣ್ಯ ತಜ್ಞರಿಗೆ ಗೊತ್ತಿಲ್ಲವೆಂದೇನಲ್ಲ – ಹೆಚ್ಚು ಮಳೆಯಾಗುವ ಕೇರಳ, ಕರ್ನಾಟಕದಂತಹ ಪ್ರದೇಶಗಳಲ್ಲಿ ಪರಿಸರ ಎಷ್ಟು ಸೂಕ್ಷ್ಮ ಮತ್ತು ಯಾವ ರೀತಿ ಆ ಪರಿಸರವನ್ನು ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಸಿದ್ಧಸೂತ್ರಗಳೇ ಇವೆ, ಟೈಮ್ ಟೆಸ್ಟೆಡ್ ಉದಾಹರಣೆಗಳೂ ಇವೆ. ಅಂತಹ ಕ್ರಮಗಳನ್ನುಅಳವಡಿಸಿಕೊಂಡಿದ್ದರೆ, ಕೇರಳದ ಮುಂಡಕ್ಕೈ ಗ್ರಾಮ ಇಂದು ಮುಕ್ಕಾಲು ಭಾಗವಾದರೂ ಉಳಿದಿರುತ್ತಿತ್ತು. ಅಂತಹ ಸಿದ್ಧ ಸೂತ್ರಗಳನ್ನು ಮತ್ತು ಗಾಡ್ಗಿಲ್ ವರದಿಯನ್ನು ಸಾರಾ ಸಗಟಾಗಿ ಅನುಸರಿಸಲು ಅಸಾಧ್ಯ ಎನಿಸಿದ್ದರೆ, ಕೊನೆಯ ಪಕ್ಷ ಅದರ ಪ್ರಮುಖ ಅಂಶಗಳನ್ನಾದರೂ ಅಳವಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರೆ ಸಾಕಿತ್ತು, ಮೊನ್ನೆ ನಡೆದ ಗುಡ್ಡ ಕುಸಿತದ ತೀವ್ರತೆಯನ್ನು ಕಡಿಮೆ ಮಾಡಬಹುದಿತ್ತು, ದುರಂತದಿಂದಾದ ನಷ್ಟವನ್ನು ಕಡಿಮೆಮಾಡಬಹುದಿತ್ತು.
ನಿಜ, ಕೇರಳದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಜನರಿಗೆ ಅದರಿಂದ ಸಾಕಷ್ಟು ಉದ್ಯೋಗಾವಕಾಶಗಳೂ ದೊರಕಿವೆ. ಗಾಡ್ಗಿಲ್ ವರದಿಯ ಶಿ-ರಿಸಿನಂತೆ (ಅಥವಾ ಅದಕ್ಕಿಂತ ತುಸು ಕಡಿಮೆ ಬಿಗಿ ಎನಿಸಿದ ಕಸ್ತೂರಿ ರಂಗನ್ ವರದಿಯಲ್ಲಿನಂತೆ) ಕ್ರಮಗಳನ್ನು ಕೈಗೊಂಡಿದ್ದರೂ, ಮಿತ ಪ್ರಮಾಣದ ಕೃಷಿ ಮತ್ತು ಪ್ರವಾಸೋದ್ಯಮವನ್ನು ಸುಸಂಬದ್ಧವಾಗಿ, ದೀರ್ಘಕಾಲೀನ ಲಾಭದ ದೃಷ್ಟಿಯಲ್ಲಿ, ನಾಡಿನ ಹಿತದೃಷ್ಟಿಯಲ್ಲಿ ಮುಂದುವರಿಸಿಕೊಂಡು ಹೋಗುವ ಅವಕಾಶವಿದೆ.
ಉದಾ: ರಕ್ಷಿತ ವಲಯದ ಹೊರಬಾಗದಲ್ಲಿ ಹೋಂಸ್ಟೇ, ಲಾಜ್, ರೆಸಾರ್ಟ್‌ಗಳಿಗೆ ಅವಕಾಶ ನೀಡಿ, ಅಲ್ಲಿ ತಂಗುವ ಪ್ರವಾಸಿಗರು ಸೂಕ್ತ ಗೈಡ್‌ಗಳ ಮಾರ್ಗದರ್ಶನದಲ್ಲಿ ನಿಗದಿತ ಜಾಗಗಳಿಗೆ ಭೇಟಿ ನೀಡಿ, ಪರಿಸರ ಸೌಂದರ್ಯವನ್ನು ಆಸ್ವಾದಿಸಲು, ಜಲಪಾತದ ನೀರಿಗೆ ಮೈಒಡ್ಡಲು ಅವಕಾಶ ನೀಡಬಹುದು ಮತ್ತು ಆ ಮೂಲಕ ಪರಿಸರಕ್ಕೆ ಹಾನಿಯಾಗದಂತೆ, ಪ್ರವಾಸೋದ್ಯವನ್ನು ಬೆಳೆಸಲು ಅವಕಾಶವಿದೆ. ಆದರೆ, ಕೇರಳದಂತಹ ರಾಜ್ಯದ ಜೀವಾಳ ಎನಿಸಿರುವ ‘ಪರಿಸರ’ವನ್ನು ರಕ್ಷಿಸಲೆಂದೇ ಸಿದ್ದವಾದ ಗಾಡ್ಗೀಳ್ ವರದಿಯ ಶಿಫಾರಸ್ಸುಗಳನ್ನು ತೀವ್ರವಾಗಿ ತಿರಸ್ಕರಿಸಿ, ತನ್ನ ರಾಜ್ಯದ ಅಮೂಲ್ಯ ಸಂಪತ್ತು ಎನಿಸಿರುವ ಕಾಡು, ಬೆಟ್ಟ, ಶೋಲಾ, ಹುಲ್ಲುಗಾವಲು, ಬಂಡೆಯ ಇಳಿಜಾರು, ಪರ್ವತ, ತೊರೆ, ನಡಿಗಳನ್ನು ‘ಮಿತಿ’ ಮೀರಿ ಎಕ್ಸ್‌ಪ್ಲಾಯಿಟ್ ಮಾಡಲು ಸರಕಾರವೇ ಅವಕಾಶ ನೀಡುವುದಿದೆಯಲ್ಲಾ, ಅದು ೨೧ನೆಯ ಶತಮಾನದ ಮತ್ತೊಂದು ದುರಂತ; ಮತ್ತು ರಾಜ್ಯವೊಂದು ತನ್ನ ಅಮೂಲ್ಯ
ಪರಿಸರವನ್ನು ಸೂಕ್ತವಾಗಿ ರಕ್ಷಿಸಲು ವಿಫಲಗೊಂಡಾಗ, ಮೊನ್ನೆ ನಡೆದಂತಹ ಭೂಕುಸಿತಗಳು ಘಟಿಸಿ, ಆ ಸುತ್ತಲಿನ ಜನರ ಬದುಕನ್ನು ನಾಶಪಡಿಸ ಬಲ್ಲವು.
ನಿಜ, ಒಂದೆರಡು ವಾರಗಳಲ್ಲಿ ಸುರಿಯಬಹುದಾದ ಮಳೆಯು ಎರಡೇ ದಿನದ ಅವಧಿಯಲ್ಲಿ (೨೭೨ ಮಿಮೀ) ಸುರಿದರೆ, ಆ ನೀರನ್ನು ಸರಾಗವಾಗಿ
ಸಾಗಿಸಲು ನದಿಗಳೂ ವಿಫಲಗೊಂಡು, ಪ್ರವಾಹ ಉಕ್ಕಿ ಬರುತ್ತದೆ, ಬೇರೆ ದಾರಿಯಿಲ್ಲ; ಆದರೆ, ಒಟ್ಟೂ ಪರಿಸರವನ್ನು ಆರೋಗ್ಯಕರವಾಗಿ ಕಾಯ್ದು ಕೊಂಡಿದ್ದ ಪಕ್ಷದಲ್ಲಿ, ಪ್ರವಾಹದ ತೀವ್ರತೆ ಕಡಿಮೆ ಇರುತ್ತದೆ, ಭೂ ಕುಸಿತದ ತೀವ್ರತೆಯೂ ಕಡಿಮೆಯಾಗಿರುತ್ತದೆ, ಅದರಿಂದಾಗುವ ನಷ್ಟವೂ ಕಡಿಮೆ ಯಾಗಿರುತ್ತದೆ.
ನೂರಾರು ಜನರು ಗುಡ್ಡ ಕುಸಿತದಲ್ಲಿ ಮೃತಪಟ್ಟ ಈ ದುಃಖದ ಸನ್ನಿವೇಶದಲ್ಲಿ, ಆ ದುರಂತಕ್ಕೆ ಕಾರಣವೇನಿರಬಹುದು ಎಂದು ಚರ್ಚಿಸುತ್ತಾ ಕೂರು ವುದು ಸರಿಯಲ್ಲ, ಆದರೆ, ಜುಲೈ ೩೦ರಂದು ನಡೆದ ಆ ದುರಂತದ ಪ್ರಮಾಣ, ತೀವ್ರತೆ, ಅದು ತಂದ ಆಪತ್ತು, ನಷ್ಟ, ಜೀವಹಾನಿಯನ್ನು ಕಂಡು ಎನ್ನ ಮನ ಮರುಗಿದೆ; ಆ ದುರಂತದಲ್ಲಿ ಮಡಿದವರ ಕುರಿತು ತೀವ್ರ ಸಂತಾಪವಿದೆ, ಮನೆ ಕಳೆದುಕೊಂಡವರ ಸ್ಥಿತಿ ಕಂಡು ವ್ಯಥೆಯಿದೆ. ಕೇರಳದ ಈ ಭೀಕರ ಗುಡ್ಡ ಕುಸಿತದ ದುರಂತದ ಹಿನ್ನೆಲೆಯಲ್ಲಿ, ಕರ್ನಾಟಕದಂತಹ ರಾಜ್ಯಗಳಿಗೆ ಪಾಠವಿದೆ; ನಮ್ಮ ರಾಜ್ಯದಲ್ಲೂ ಸಹ್ಯಾದ್ರಿ ಶ್ರೇಣಿ ಉದ್ದಕ್ಕೆ ಸಾಗಿಹೋಗಿದೆ, ಇಲ್ಲೂ ಪಶ್ಚಿಮ ಘಟ್ಟಗಳ ಕಮರಿಗಳ ನಡುವೆ, ಬೆಟ್ಟದ ತುದಿಯಲ್ಲಿ, ಕಾಡಿನ ಕಿಬ್ಬದಿಯಲ್ಲಿ, ಕಾಡಿನ ಹಳ್ಳಗಳ ದಡದಲ್ಲಿ ಜನವಸತಿಯಿದೆ, ಹಳ್ಳಿಗಳಿವೆ, ಕೃಷಿಭೂಮಿ ಇದೆ, ಈಚಿನ ಒಂದೆರಡು ದಶಕಗಳಲ್ಲಿ ರೂಪುಗೊಂಡ ಸಾವಿರಾರು (ನಿಜ, ಸಾವಿರಾರು) ಹೋಂಸ್ಟೇಗಳಿವೆ, ಹಲವು ರೆಸಾರ್ಟ್‌ಗಳಿವೆ, ಇವು ಸಾವಿರಾರು ಜನರಿಗೆ ಆದಾಯದ ಮೂಲಗಳಾಗಿವೆ – ಇವೆಲ್ಲವೂ ಕೇರಳದ ವಯನಾಡಿನ ಸನ್ನಿವೇಶವನ್ನೇ ಬಹುವಾಗಿ ಹೋಲುತ್ತವೆ – ಈ ಸಂಕೀರ್ಣ ವ್ಯವಸ್ಥೆಯನ್ನು ಮತ್ತು ಜತೆ ಜತೆಗೇ ನಮ್ಮ ರಾಜ್ಯದ ಪರಿಸರವನ್ನು, ಅರಣ್ಯಗಳನ್ನು, ಶೋಲಾ ಪ್ರದೇಶವನ್ನು, ಬೆಟ್ಟಗಳ ಇಳಿಜಾರಿನ ಹುಲ್ಲುಗಾವಲನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ, ನಮ್ಮನ್ನಾಳುವ ಪ್ರಭುತ್ವದ ಮೇಲಿದೆ.
ಸಕಲೇಶಪುರ ಮತ್ತು ಶಿರಾಡಿ ಸರಹದ್ದಿನಲ್ಲಿ ದಟ್ಟ ಕಾಡಿನ ನಡುವೆ ನಡೆಯುತ್ತಿರುವ ಎತ್ತಿನ ಹೊಳೆ ಕಾಮಗಾರಿಯು (ಇದು ಒಂದು ನದಿ ತಿರುವು ಯೋಜನೆ), ನಮ್ಮ ನಾಡಿನ ಜನಸಾಮಾನ್ಯರ ಬದುಕಿನ ಮೇಲೆ ದುಷ್ಟರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕಾದ ಹೊಣೆಗಾರಿಕೆ, ಜವಾಬ್ದಾರಿಯೂ ನಮ್ಮ ಸರಕಾರದ ಮೇಲಿದೆ. ಕೇರಳದಲ್ಲಿ ನಡೆದ ಭೀಕರ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ, ಇಂದು ನಮ್ಮ ರಾಜ್ಯದ ಅರಣ್ಯ ಇಲಾಖೆ, ನೀರಾವರಿ ಇಲಾಖೆ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳು, ಕಚೇರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಂಡು, ರಾಜ್ಯದ ಹಿತ ಕಾಪಾಡಬೇಕಾದ ತುರ್ತು ಅವಶ್ಯಕತೆ ಯಿದೆ.