ವಿಶ್ಲೇಷಣೆ
ರಮಾನಂದ ಶರ್ಮಾ
ನಮ್ಮಲ್ಲಿ ಸಮಾಜದಲ್ಲಿನ ಮೇಲ್ವರ್ಗದವರು ಎಂಬ ಹಣೆಪಟ್ಟಿ ಕಟ್ಟಿಸಿಕೊಂಡವರು, ಕೆಲವಷ್ಟು ಬುದ್ಧಿಜೀವಿಗಳು ಮತದಾನದ ದಿನದಂದು ಮನೆಯಿಂದ ಹೊರಗೆ ಕಾಲಿಡದೆ ಡ್ರಾಯಿಂಗ್ ರೂಮ್‌ನಲ್ಲೇ ಕುಳಿತು ಮತದಾನದ ಶೇಕಡಾವಾರು ಏರಿಳಿತ, ಬರಬಹುದಾದ ಫಲಿತಾಂಶದ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಸ್ತೃತ ಚರ್ಚೆಯನ್ನು ನಡೆಸುತ್ತಾರೆಯೇ ವಿನಾ, ಬಿಸಿಲು-ಚಳಿ-ಮಳೆಯನ್ನು ದಾಟಿ ಮತಗಟ್ಟೆಗೆ ಮುಖ ತೋರಿಸುವುದಿಲ್ಲ. ಇಂಥ ನಿರ್ಲಕ್ಷ್ಯವನ್ನು ಅವರು ಇನ್ನಾದರೂ ಕೈಬಿಡದಿದ್ದರೆ ಪ್ರಜಾಪ್ರಭುತ್ವಕ್ಕೆ ಭವಿಷ್ಯವೆಲ್ಲಿ?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆ ಆಗಿರುವ/ಆಗುತ್ತಿರುವ ಬಗ್ಗೆ ದೇಶಾದ್ಯಂತದ ಪ್ರಜ್ಞಾವಂತರು ವ್ಯಾಕುಲತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮೆಲ್ಲಾ ಪ್ರಯತ್ನಗಳ ಹೊರತಾಗಿಯೂ ಮತದಾರರು ಮತಗಟ್ಟೆಗಳಿಗೆ ಬರುತ್ತಿಲ್ಲ ಎಂದು ಸರಕಾರ ಮತ್ತು ಚುನಾವಣಾ ಆಯೋಗ ಚಿಂತಿತವಾಗಿವೆ. ಇದು ಸಹಜವೇ. ಮತದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ದೇಶದ ಉದ್ದಗಲಕ್ಕೂ ಸಾಕಷ್ಟು ಅಭಿಯಾನಗಳನ್ನು ಕೈಗೊಳ್ಳಲಾಗಿತ್ತು.
ಇಷ್ಟಾಗಿಯೂ ಹೇಳಿಕೊಳ್ಳುವಂಥ ಪ್ರಯೋಜನ ಕಾಣುತ್ತಿಲ್ಲ. ಕಾರಣ, ನಗರ ಮತ್ತು ಮಹಾನಗರಗಳಲ್ಲಿ ಪ್ರತಿ ಚುನಾವಣೆಯಲ್ಲೂ ಮತದಾನದ
ಪ್ರಮಾಣ ಕಡಿಮೆಯಾಗುತ್ತಿದೆ; ಗ್ರಾಮಾಂತರ ಪ್ರದೇಶಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಮಾತ್ರ ಮತದಾನದ ಪ್ರಮಾಣ ಬಹುತೇಕ ಸಮಾಧಾನಕರ
ವಾಗಿದೆ. ಅದರಲ್ಲೂ ಸುಶಿಕ್ಷಿತರೇ ತುಂಬಿರುವ ಬೆಂಗಳೂರಿನಲ್ಲಿ ಮತದಾನದ ಪ್ರಮಾಣವು ಶೇ.೫೦ರ ಆಸುಪಾಸಿನಲ್ಲಿ ಇದ್ದುದಕ್ಕೆ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ಮಾನವನ್ನು ಹರಾಜು ಹಾಕಲಾಗುತ್ತಿದೆ.
ಬೆಂಗಳೂರಿಗರ ಈ ನಿರ್ಲಕ್ಷ್ಯ, ನಿರ್ಲಿಪ್ತತೆ ಹಾಗೂ ಉದಾಸೀನ ಪ್ರವೃತ್ತಿಯನ್ನು ಮುಲಾಜಿಲ್ಲದೆ ಟೀಕಿಸಲಾಗುತ್ತಿದೆ ಮತ್ತು ತೀವ್ರವಾಗಿ ಖಂಡಿಸಲಾಗುತ್ತಿದೆ. ‘ನಮ್ಮ ಮತ, ನಮ್ಮ ಹಕ್ಕು’ ಎನ್ನುತ್ತಿದ್ದ ಬೆಂಗಳೂರಿಗರು ತಮ್ಮ ಕರ್ತವ್ಯವನ್ನು ಮರೆತರೇ ಅಥವಾ ಉದ್ದೇಶಪೂರ್ವಕವಾಗಿ ಹಿಂದೇಟು ಹಾಕಿದರೇ ಎಂಬ ಜಿಜ್ಞಾಸೆಯೂ ಕೆಲವರನ್ನು ಕಾಡುತ್ತಿದೆ. ಪ್ರತಿಬಾರಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾದಾಗ ಆ ಬಗೆಗೆ ಗಂಭೀರ
ಚರ್ಚೆಗಳಾಗುತ್ತವೆ ಮತ್ತು ಪರಿಹಾರೋಪಾಯ ಗಳನ್ನೂ ಸೂಚಿಸಲಾಗುತ್ತದೆ. ಮತದಾನದ ದಿನದಂದು ಸಾರ್ವಜನಿಕ ರಜೆ ಇರುವುದರಿಂದ,
ದುಡಿಯುವ ವರ್ಗವು ಅದನ್ನು ಮೋಜು- ಮಸ್ತಿಗಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಇನ್ನು ಮತದಾನವು ವಾರಾಂತ್ಯದಲ್ಲಿ ಬಂದುಬಿಟ್ಟರಂತೂ, ಆ ದಿನವನ್ನು ವಾರಾಂತ್ಯದ ದಿನಗಳೊಂದಿಗೆ ಸೇರಿಸಿ ಸುದೀರ್ಘ ರಜೆಯನ್ನು ಅನುಭವಿಸುವ ಟ್ರೆಂಡ್ ಅಥವಾ ಖಯಾಲಿ ಇತ್ತೀಚೆಗೆ ನೆಲೆ ಕಂಡುಕೊಂಡಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ, ಈ ಬಾರಿ ಬೆಂಗಳೂರಿನಲ್ಲಿ ಶುಕ್ರವಾರ ಮತದಾನ ನಡೆದಾಗ, ಮತಹಾಕುವ ತಮ್ಮ ಕರ್ತವ್ಯಕ್ಕೆ ತಿಲಾಂಜಲಿ ನೀಡಿ, ಮೂರು ದಿನಗಳ ರಜೆಯನ್ನು ಮೋಜು-ಮಸ್ತಿಗೆ, ವಿಹಾರಕ್ಕೆ ವಿನಿಯೋಗಿಸಿದವರು ಸಾಕಷ್ಟಿದ್ದಾರೆ.
ಇದೇನೂ ಹೊಸ ಬೆಳವಣಿಗೆಯಲ್ಲ, ಕಳೆದ ಕೆಲವು ವರ್ಷಗಳಿಂದ ನಡೆಯುತ್ತಲೇ ಇರುವಂಥದ್ದು. ಇದು ಸರಕಾರ ಮತ್ತು ಚುನಾವಣಾ ಆಯೋಗದ ಗಮನದಲ್ಲೂ ಇದೆ. ಆದರೆ, ಈ ನ್ಯೂನತೆಯನ್ನು ಸರಿಪಡಿಸುವ ಇಚ್ಛಾಶಕ್ತಿಯನ್ನು ತೋರಿಸದಿರುವುದೇ ಈ ಪರಿಸ್ಥಿತಿಯ ಮುಂದುವರಿಕೆಗೆ ಕಾರಣ ಎಂಬುದು ವಿಶ್ಲೇಷಕರ ವಾದ. ಇದರಲ್ಲಿ ಅರ್ಥವಿದೆ. ಇಂದು ಬಹುತೇಕ ಕಚೇರಿಗಳು ವಾರದಲ್ಲಿ ೫ ದಿನವಷ್ಟೇ ಕಾರ್ಯನಿರ್ವಹಿಸುತ್ತಿದ್ದು, ದುಡಿಯುವ
ವರ್ಗದವರು ವಾರಾಂತ್ಯದಲ್ಲಿ ಕುಟುಂಬದ ಸಂಗಡ ನಗರ/ಪಟ್ಟಣವನ್ನು ಬಿಡುತ್ತಾರೆ.
‘ವಾರಾಂತ್ಯ’ ಆರಂಭವಾಗುವ ಮೊದಲು ಅಥವಾ ಅಂತ್ಯದಲ್ಲಿ ಇನ್ನೊಂದು ಪುಗಸಟ್ಟೆ ರಜೆ ಸಿಕ್ಕಿದರೆ ಅದನ್ನೂ ಜತೆಗೆ ಹೊಂದಿಸಿಕೊಂಡು ವಾರಾಂತ್ಯವನ್ನು ಇನ್ನೂ ಹೆಚ್ಚು ಆನಂದಿಸುತ್ತಾರೆ. ಅಂದು ಮತದಾನವಿದ್ದರೂ ಆ ಕರ್ತವ್ಯದ ನಿಭಾವಣೆಯನ್ನು ಮರೆಯುತ್ತಾರೆ. ಇಂಥವರು ಮತದಾನದ ದಿನವನ್ನು ಇನ್ನೊಂದು ಸಾರ್ವಜನಿಕ ರಜೆ ಎಂದು ಪರಿಗಣಿಸುತ್ತಾರೆಯೇ ವಿನಾ, ಅದರ ಹಿಂದಿರುವ ಕಾರಣ ಮತ್ತು ಉದ್ದೇಶ ವನ್ನು ಗ್ರಹಿಸುವುದಿಲ್ಲ. ಹೀಗಾಗಿ, ಮತದಾನದ ದಿನ ವನ್ನು ವಾರಾಂತ್ಯದ ಬದಲಿಗೆ ಮಧ್ಯದಲ್ಲಿ ನಿಗದಿ ಪಡಿಸಿ ಹೆಚ್ಚು ಮತದಾರರು ಭಾಗವಹಿಸುವಂತೆ
ಮಾಡಬೇಕು ಎನ್ನುವ ಚರ್ಚೆ ಕಳೆದ ಒಂದೆರಡು ವರ್ಷಗಳಿಂದ ಮುನ್ನೆಲೆಗೆ ಬಂದಿತ್ತು. ಆದರೆ, ಸಂಬಂಧಪಟ್ಟವರ ಇಚ್ಛಾಶಕ್ತಿಯ ಕೊರತೆಯಿಂದಾಗಿ
ಅದು ತಾರ್ಕಿಕ ಅಂತ್ಯವನ್ನು ಕಾಣಲಿಲ್ಲ. ಮತ್ತೊಂದೆಡೆ, ಮತದಾನದ ಹೆಸರಿನಲ್ಲಿ ರಜೆ ಅನುಭವಿಸುವವರಿಗೆ, ಮತ ಹಾಕಿದಕ್ಕೆ ಕೈಬೆರಳ ಮೇಲೆ
ಹಾಕುವ ಗುರುತನ್ನು ಮರುದಿನ ಕಚೇರಿಯಲ್ಲಿ ತೋರಿಸಿದಾಗಲೇ ಅವರ ರಜೆಯನ್ನು ಅನುಮೋದಿಸಬೇಕು ಎನ್ನುವ ಸಲಹೆಯೂ ಕೇಳಿಬಂದಿತ್ತು.
ಆದರೆ ಅದು ಕೂಡ ಚರ್ಚೆಯ ಪರಿಧಿಯನ್ನು ದಾಟಿ ಮುಂದೆ ಸಾಗಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ, ‘ನಮ್ಮೊಬ್ಬರ ಮತದಿಂದ ಏನು ಮಹಾ ವ್ಯತ್ಯಾಸ ಮತ್ತು ಬದಲಾವಣೆ ಸಾಧ್ಯ?’ ಎಂಬ ಕೆಲವು ಮತದಾರರ ಪ್ರಶ್ನೆ ಅಥವಾ ಚಿತ್ತ ಸ್ಥಿತಿಯು ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ ಎನ್ನಬೇಕು. ನಮ್ಮಲ್ಲಿ ಸಮಾಜದಲ್ಲಿನ ಮೇಲ್ವರ್ಗ ದವರು ಎಂಬ ಹಣೆಪಟ್ಟಿ ಕಟ್ಟಿಸಿಕೊಂಡವರು, ಕೆಲ ವಷ್ಟು ಬುದ್ಧಿಜೀವಿಗಳು ಮತದಾನದ ದಿನದಂದು ಮನೆಯಿಂದ ಹೊರಗೆ ಕಾಲಿಡದೆ ಡ್ರಾಯಿಂಗ್ ರೂಮ್‌ನಲ್ಲೇ ಕುಳಿತು ಮತದಾನದ ಶೇಕಡಾವಾರು ಏರಿಳಿತ, ಬರಬಹುದಾದ ಫಲಿತಾಂಶದ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಸ್ತೃತ ಚರ್ಚೆಯನ್ನು ನಡೆಸುತ್ತಾರೆಯೇ ವಿನಾ, ಬಿಸಿಲು-ಚಳಿ-ಮಳೆಯನ್ನು ದಾಟಿ ಮತಗಟ್ಟೆಗೆ ಮುಖ ತೋರಿಸುವುದಿಲ್ಲ.
ಇವರಲ್ಲಿ ಕೆಲವರು ಕಡಿಮೆ ಪ್ರಮಾಣದ ಮತ ಚಲಾವಣೆಯನ್ನು ಖಂಡಿಸಿ ಮಾಧ್ಯಮಗಳಿಗೆ ಸುದೀರ್ಘ ಹೇಳಿಕೆಯನ್ನು ನೀಡುವುದೂ ಉಂಟು. ಸಮಾಜದಲ್ಲಿ ಆರ್ಥಿಕವಾಗಿ ಕೆಳಸ್ತರದವರು ಎನಿಸಿಕೊಂಡವರು ಸಾಮಾನ್ಯವಾಗಿ, ‘ಯಾರು ಆಯ್ಕೆಯಾದರೇನು… ನಮಗೆ ರಾಗಿ ಬೀಸುವುದು ತಪ್ಪುತ್ತಾ?’ ಎನ್ನುತ್ತಲೇ ನಿಷ್ಠೆಯಿಂದ ಮತದಾನ ಮಾಡುತ್ತಾರೆ ಮತ್ತು ಹೆಚ್ಚಿನ ಒತ್ತಾಸೆಯಿಲ್ಲದೆ ಮತಗಟ್ಟೆಗೆ ತೆರಳುತ್ತಾರೆ. ಈ ಪ್ರಕ್ರಿಯೆಯಲ್ಲಿ ಎಷ್ಟೋ ಜನ ತಮ್ಮ ಜೀವನಾಧಾರವಾದ ದಿನಗೂಲಿಯನ್ನೂ ಕಳೆದುಕೊಳ್ಳುತ್ತಾರೆ. ಈ ನಷ್ಟದ ಬಗೆಗೆ ಅವರು ಎಂದೂ ಚಿಂತಿಸುವುದಿಲ್ಲ.
ಆದರೆ, ಸುಶಿಕ್ಷಿತರು ಮತ್ತು ನೌಕರವರ್ಗದವರು ನಮ್ಮ ಕರ್ತವ್ಯ/ಹೊಣೆಗಾರಿಕೆಯಿಂದ ಉಪಾಯವಾಗಿ ನುಣುಚಿಕೊಳ್ಳುತ್ತಾರೆ ಮತ್ತು ಆ ಕರ್ತವ್ಯ
ಲೋಪಕ್ಕೆ ಆ ದಿನದ ಸಂಬಳವನ್ನೂ ಪಡೆಯುತ್ತಾರೆ! ವಿಚಿತ್ರವೆಂದರೆ ಇಂಥ ವರ್ತನೆ ಅವರ ಅಂತಃಪ್ರಜ್ಞೆಯನ್ನು ಚುಚ್ಚುವುದಿಲ್ಲ ಮತ್ತು ಅವರಿಗೆ
ಏನೂ ಅನಿಸುವುದಿಲ್ಲ. ಮತದಾನದ ಬಗ್ಗೆ ಹೀಗೆ ನಿರ್ಲಕ್ಷ್ಯ ತೋರುವವರು, ಈ ಪ್ರಕ್ರಿಯೆಯ ಬಗ್ಗೆ ಏಕೆ ಜುಗುಪ್ಸೆ ಹೊಂದಿದ್ದಾರೆ ಮತ್ತು ಮತದಾನದಿಂದ ಏಕೆ ವಿಮುಖ ರಾಗುತ್ತಿದ್ದಾರೆ ಎನ್ನುವುದಕ್ಕೆ ಮುಖ್ಯ ಕಾರಣ- ರಾಜಕೀಯ ಪಕ್ಷಗಳು ಅಥವಾ ಸರಕಾರ ಯಾವುದೇ ಇರಲಿ, ನೌಕರ ವರ್ಗದವರ ಬಗೆಗೆ ಹೊಂದಿರುವ ತೋರಿಕೆಯ ಸಹಾನುಭೂತಿ. ಸರಕಾರಗಳ ಮತ್ತು ರಾಜಕೀಯ ಪಕ್ಷಗಳ ಲಕ್ಷ್ಯ, ಅವು ನೀಡುವ ಸೌಲಭ್ಯಗಳು ಸಮಾಜದ ಕೆಲವೇ ವರ್ಗಕ್ಕೆ ಸೀಮಿತ ವಾಗಿರುತ್ತವೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನೌಕರ ವರ್ಗದವರು, ಹಲವು ರಾಜ್ಯ ಸರಕಾರಗಳು ನೀಡಿದ ಮತ್ತು ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿದ ಗ್ಯಾರಂಟಿ ಗಳ ಕಡೆಗೆ ಬೆರಳುಮಾಡುತ್ತಾರೆ. ಈ ಸೌಲಭ್ಯಗಳ ವ್ಯಾಪ್ತಿಯಲ್ಲಿ ಅದೆಷ್ಟು ಜನ ನೌಕರವರ್ಗ ದವರು ಬರುತ್ತಾರೆ? ಎಂದು ಪ್ರಶ್ನಿಸುತ್ತಾರೆ. ಹಣ ದುಬ್ಬರಕ್ಕೆ ತಮ್ಮ ಸಂಬಳ ಸ್ಪಂದಿಸಿದೆಯೇ? ಕಾಲ ಕಾಲಕ್ಕೆ ತಮ್ಮ ಸಂಬಳ-ಸಾರಿಗೆ-ಸವಲತ್ತುಗಳ ಪರಿಷ್ಕರಣೆಯಾಗಿದೆಯೇ? ಎಂದೆಲ್ಲಾ ಕೇಳುತ್ತಾರೆ. ಪ್ರತಿಬಾರಿಯ ಸುದೀರ್ಘ ಹೋರಾಟದ ನಂತರ ವಷ್ಟೇ ಈ ಬಾಬತ್ತುಗಳಲ್ಲಿ ಅಲ್ಪ ಸ್ವಲ್ಪ ಏರಿಕೆಯಾಗುತ್ತದೆ. ನೌಕರರಿಗೆ ಪಿಂಚಣಿ ಬೇಕಿದ್ದರೆ ಅದಕ್ಕೆ ಹಲವು ಕಟ್ಟು ಪಾಡುಗಳಿವೆ, ಕಾಲಕಾಲಕ್ಕೆ ಪಿಂಚಣಿಯ ಉನ್ನತೀಕರಣವಿಲ್ಲ, ಆರಂಭಿಕ ಪಿಂಚಣಿಯೇ ಚಟ್ಟ ಏರುವವರೆಗೆ (ಆಗೊಮ್ಮೆ ಈಗೊಮ್ಮೆ ಅಲ್ಪ ಸ್ವಲ್ಪ ತುಟ್ಟಿಭತ್ಯೆಯ ನೀಡಿಕೆ ಇರುತ್ತದೆ ಎನ್ನಿ!) ಎಂಬ ಸ್ಥಿತಿಯಿದೆ.
ಜನಪ್ರತಿನಿಧಿಗಳಿಗಾದರೆ ಕೇವಲ ಒಮ್ಮೆ ಆಯ್ಕೆಯಾದರೆ ಸಾಕು, ಸಾಯುವವರೆಗೆ ಪಿಂಚಣಿ ಮತ್ತು ಕಾಲಕಾಲಕ್ಕೆ ಅದರ ಉನ್ನತೀಕರಣ ಬೇರೆ. ಕೋಟಿ ಗಟ್ಟಲೆ ಆದಾಯ ವಿದ್ದರೂ ಈ ದೇಶದಲ್ಲಿ ರೈತನಿಗೆ ಆದಾಯ ತೆರಿಗೆಯಿಲ್ಲ; ಆದರೆ ನೌಕರವರ್ಗವು ದುಡಿಯುವ ಕೊನೆಯ ಪೈಸೆಯವರೆಗೂ ಗಣಕ ಯಂತ್ರದಲ್ಲಿ ಲೆಕ್ಕ ಹಾಕಿ ಆದಾಯಕರವನ್ನು ಕಡಿತ ಮಾಡಲಾಗುತ್ತದೆ. ನಿವೃತ್ತ ಜೀವನ ನಡೆಸಲು ನೀಡುವ ಪಿಂಚಣಿಗೂ ಆದಾಯಕರದ ಹೊರೆ!
ದೇಶದಲ್ಲಿ ರೈತರ ಸಾಲಮನ್ನಾ ಆಗುತ್ತದೆ, ಉದ್ಯಮಿಗಳ ಸಾಲ ‘ರೈಟ್ ಆಫ್’ ಆಗುತ್ತದೆ.
ಸಂಸತ್ತಿನಲ್ಲಿ ಹೊಮ್ಮಿದ ಒಂದು ಹೇಳಿಕೆಯ ಪ್ರಕಾರ, ಈವರೆಗೆ ಸುಮಾರು ೧೫ ಲಕ್ಷ ಕೋಟಿ ರು. ಸಾಲ ಮನ್ನಾ ಆಗಿದೆಯಂತೆ. ಆದರೆ ನೌಕರವರ್ಗಕ್ಕೆ ಈ
ಭಾಗ್ಯವಿಲ್ಲ. ಸರಕಾರದ ದೃಷ್ಟಿಯಲ್ಲಿ (ಯಾವುದೇ ಪಕ್ಷ ಅಧಿಕಾರದಲ್ಲಿರಲಿ) ನೌಕರವರ್ಗಕ್ಕೆ ಆರ್ಥಿಕ ಸಂಕಟವಿಲ್ಲ, ಅವರಿಗೆ ಯಾವುದೇ ಸಮಸ್ಯೆಗಳಿಲ್ಲ.
ಅವರು ತೃಪ್ತರು ಮತ್ತು ನಿರ್ಲಕ್ಷಿತ ವಲಯಕ್ಕೆ ಸೇರದ ವರು. ಸರಕಾರದ ತೆರಿಗೆ ಆದಾಯದಲ್ಲಿ ಟೆಕ್ಕಿಗಳ ಮತ್ತು ಸಾಪ್ಟ್‌ವೇರ್ ಉದ್ಯಮದ ಪಾಲು
ಗಮನಾರ್ಹವಾಗಿದೆ. ಆದರೆ, ಈ ವರ್ಗಕ್ಕೆ ಸರಕಾರದಿಂದ ದೊರಕುವ ಸೌಲಭ್ಯಗಳು ಏನು? ನೌಕರ ವರ್ಗವು ಸಾಮಾನ್ಯವಾಗಿ ನಿರೀಕ್ಷಿಸುವುದು ಹಣ
ದುಬ್ಬರಕ್ಕೆ ಸ್ಪಂದಿಸಲು ಆದಾಯಕರದಲ್ಲಿ ಸ್ವಲ್ಪ ವಿನಾಯಿತಿ.
ಇದು ಅವರಿಗೆ ದೊರಕುತ್ತಿದೆಯೇ? ೨೦೧೪ರಿಂದ ಆದಾಯಕರ ವಿನಾಯಿತಿಯಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ. ‘ಅಳಿಯ ಅಲ್ಲ, ಮಗಳ ಗಂಡ’ ಎನ್ನುವಂತೆ ಆದಾಯಕರ ಲೆಕ್ಕಾಚಾರದಲ್ಲಿ ಇತ್ತೀಚೆಗೆ ಸ್ವಲ್ಪ ಬದಲಾವಣೆಯಾಗಿದ್ದು, ಅದು ತೆರಿಗೆದಾರರ ಉಳಿತಾಯ ಪ್ರವೃತ್ತಿಗೆ ಕಲ್ಲುಹಾಕಿದೆ. ಸ್ಥಿರ ಪಿಂಚಣಿ ನೀಡುವ ಹಳೆಯ ವ್ಯವಸ್ಥೆಗೆ ಕೊಕ್ ನೀಡಿ, ಷೇರು ಪೇಟೆಯ ಏರುಪೇರನ್ನು ಅವಲಂಬಿಸಿ ಆದಾಯ ನೀಡುವ ಹೊಸ ಪಿಂಚಣಿ ವ್ಯವಸ್ಥೆ ಯನ್ನು ಕಲ್ಪಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸೇವೆಗೆ ಸೇರಿದ ಉದ್ಯೋಗಿಗಳಿಗೆ ಸ್ಥಿರ ಮಾಸಿಕ ಪಿಂಚಣಿ ಕನಸಾಗಿದೆ. ಓಬಿರಾಯನ ಕಾಲದ ಬೋನಸ್ ಪ್ರಮಾಣ ಇನ್ನೂ
ಓಡುತ್ತಲೇ ಇದೆ. ನೌಕರವರ್ಗದ ‘ದುಡಿಯುವ ಅವಧಿ’ ಹೆಚ್ಚಿಸುವ ಭಯ ಕಾಡುತ್ತಿದೆ. ಹೀಗೆ ಒಂದೇ, ಎರಡೇ? ಈ ಕಾರಣಗಳಿಂದಾಗಿ ನೌಕರವರ್ಗದವರು,
ವಿದ್ಯಾವಂತರು ಮತ್ತು ಉನ್ನತ ವರ್ಗದವರು ವ್ಯವಸ್ಥೆಯ ಕುರಿತಾಗಿ ಭ್ರಮನಿರಸನಗೊಂಡು, ‘ಯಾರು ಬರಲಿ, ಯಾರು ಹೋಗಲಿ ನಮ್ಮ ಪಾಡು ನಮ್ಮದೇ’ ಎನ್ನುವ ಹತಾಶ ಸ್ಥಿತಿಯನ್ನು ತಲುಪಿದ್ದಾರೆ. ಈ ಕಾರಣದಿಂದಲೇ ಅವರು ಮತದಾನದಿಂದ ವಿಮುಖರಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಸಾಧನೆಗಳಿಗಿಂತ ಭಾವನೆಗಳು ಮೇಲುಗೈ ಸಾಧಿಸುತ್ತಿವೆ ಎಂದು ಇವರೆಲ್ಲ ಬೇಸರಿಸುತ್ತಾರೆ. ಇವರ ಆಕ್ರೋಶ ಯಾವುದೇ ಪಕ್ಷದ ವಿರುದ್ಧ ಇರದೇ, ಒಂದು ವರ್ಗವನ್ನು ನಿರ್ಲಕ್ಷಿಸಿ ಮತಬ್ಯಾಂಕ್ ಉಳಿಸಿಕೊಳ್ಳುವ ರಾಜಕೀಯ ಪಕ್ಷಗಳ ಧೋರಣೆಯ ವಿರುದ್ಧ ಎದ್ದು ಕಾಣುತ್ತದೆ. ಕೆಲವೊಂದು ಸಂದರ್ಭಗಳಲ್ಲಿ, ರಾಜಕೀಯ ಪಕ್ಷಗಳು ಕಣಕ್ಕಿಳಿಸಿರುವ ಅಭ್ಯರ್ಥಿಗಳ ಹಿನ್ನೆಲೆ ಮತ್ತು ಅರ್ಹತೆಗಳೂ ಜನರು ಮತದಾನದಿಂದ ವಿಮುಖರಾಗುವಂತೆ ಮಾಡಿವೆ ಎನ್ನಲಾಗು ತ್ತದೆ.
ಕಾರಣಗಳು ಏನೇ ಇರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯು ಯಶಸ್ಸು ಕಾಣಬೇಕಿದ್ದರೆ, ಚುನಾವಣೆಗಳು ಸಮಯಕ್ಕೆ ಸರಿಯಾಗಿ ಮತ್ತು ವಂಚನೆಗಳಿಗೆ
ಆಸ್ಪದವಿಲ್ಲದಂತೆ ನಡೆದರೆ ಮಾತ್ರವಷ್ಟೇ ಸಾಲದು; ಜನರು ದೊಡ್ಡ ಪ್ರಮಾಣದಲ್ಲಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದಾಗ ಮಾತ್ರವೇ ಅದು ತನ್ನ ನಿಜವಾದ ಅರ್ಥವನ್ನು ಕಂಡುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ವಿದ್ಯಾವಂತರ ಮತ್ತು ನೌಕರವರ್ಗದವರ ಹೊಣೆಗಾರಿಕೆ ಹೆಚ್ಚು ಇದ್ದು, ಅವರು ಮತಗಟ್ಟೆಗಳಿಗೆ ಧಾವಿಸುವಂತಾಗುವ ನಿಟ್ಟಿನಲ್ಲಿ ಸರಕಾರವು ಕಾರ್ಯತಂತ್ರವನ್ನು ರೂಪಿಸಬೇಕು. ರಾಜಕೀಯ ಪಕ್ಷಗಳೂ ತಮ್ಮ ಪ್ರಣಾಳಿಕೆಯಲ್ಲಿ ಈ ವರ್ಗಕ್ಕೂ ಸೂಕ್ತ ಮಹತ್ವ ನೀಡಬೇಕು.
(ಲೇಖಕರು ರಾಜಕೀಯ
ಮತ್ತು ಅರ್ಥಿಕ ವಿಶ್ಲೇಷಕರು)