Sunday, 24th November 2024

ಭಾಷಣಕಾರರೆಲ್ಲರೂ ವೇದಿಕೆಯಲ್ಲಿದ್ದವರ ಹೆಸರುಗಳನ್ನು ಹೇಳುವ ಕಿರಿಕಿರಿ ಕುರಿತು

ಇದೇ ಅಂತರಂಗ ಸುದ್ದಿ

vbhat@me.com

ಇದನ್ನು ಒಂದು ಸಾರ್ವಜನಿಕ ದುರ್ನಡತೆ ಎಂದು ಭಾವಿಸಿದರೂ ತಪ್ಪಿಲ್ಲ. ಅದೇನೆಂದರೆ ಹತ್ತು ಜನರಿರುವ ವೇದಿಕೆ ಮೇಲೆ ಭಾಷಣ ಮಾಡುವವರು ಎಲ್ಲರ ಹೆಸರುಗಳನ್ನೂ ಹೇಳುವುದು. ಮೊದಲು ಅಥವಾ ಎರಡನೆಯವರು ಉಳಿದವರೆಲ್ಲರ ಹೆಸರುಗಳನ್ನೂ ಹೇಳಿದರೆ ಸಹಿಸಿಕೊಳ್ಳಬಹುದು, ಆದರೆ ಎಲ್ಲರೂ ತಮ್ಮ ಭಾಷಣವನ್ನು ಹೀಗೆಯೇ ಆರಂಭಿಸಿದರೆ, ಅದು ಕರ್ಣಕಠೋರ.

ಮೊನ್ನೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಆರಂಭದಲ್ಲಿ ಒಂದಿಬ್ಬರು ವೇದಿಕೆಯ ಮೇಲಿದ್ದ ಸುಮಾರು ಹದಿನೈದು ಜನರ ಹೆಸರುಗಳನ್ನು ಹೇಳಿದರು. ಎರಡನೇಯವರೂ ಹಾಗೆ ಆರಂಭಿಸಿದರು. ಆಗ ನಿರೂಪಕರು ‘ಎಲ್ಲರ ಹೆಸರುಗಳನ್ನೂ ಹೇಳಿ ಸಮಯ ವ್ಯರ್ಥ ಮಾಡಬೇಡಿ’ ಎಂದು ಹೇಳಿದಾಗ ಆ ಚಾಳಿ ನಿಂತಿತು. ಇತ್ತೀಚಿನ ದಿನಗಳಲ್ಲಂತೂ ಇದೊಂದು ವ್ಯಾಧಿ ಸ್ವರೂಪವನ್ನು ಪಡೆದಿದೆ. ಅದರಲ್ಲೂ ಅದು ರಾಜಕೀಯ ಸಭೆ, ಸಮಾರಂಭ ವಾದರೆ, ಎಲ್ಲರೂ ವೇದಿಕೆ ಮೇಲೆ ಮತ್ತು ಮುಂಭಾಗದಲ್ಲಿರುವವ ರೆಲ್ಲರ ಹೆಸರುಗಳನ್ನೂ ಹೇಳುವುದು ಕರ್ತವ್ಯ ಎಂದು ಭಾವಿಸುತ್ತಾರೆ.

ವೇದಿಕೆ ಮೇಲಿರುವವರೆಲ್ಲ ಹೀಗೆ ಹೆಸರುಗಳನ್ನೂ ಹೇಳಿದರೆ ಅದಕ್ಕೇ ಹದಿನೈದಿಪ್ಪತ್ತು ನಿಮಿಷಗಳು ಹಿಡಿಯುತ್ತವೆ. ಇದು ನಿಜಕ್ಕೂ ನಿರರ್ಥಕ ಮತ್ತು ವ್ಯರ್ಥ. ‘ವೇದಿಕೆ ಮೇಲಿರುವ ಎಲ್ಲ ಗಣ್ಯರೇ’ ಎಂದು ಭಾಷಣ ಆರಂಭಿಸಬಹುದಲ್ಲ? ಅವರೇ, ಅವರೇ, ಎಂದು ಹೇಳಿ ಯಾಕೆ ಭಾಗವಹಿಸಿದವರ ಸಮಯವನ್ನು ಹಾಳು ಮಾಡಬೇಕು? ಬೇರೆಯವರ ಸಮಯದ ಬಗ್ಗೆ ಗೌರವ ಇಲ್ಲದವರು ಮಾತ್ರ ಹೀಗೆ ಮಾಡಬಲ್ಲರು.

ಆದರೆ ಇದು ಸಾರ್ವಜನಿಕ ಅಸಭ್ಯತೆಯ ಪರಾಕಾಷ್ಠೆ ಎಂಬಷ್ಟರ ಮಟ್ಟಿಗೆ ವ್ಯಾಪಿಸಿದೆ. ಅಷ್ಟಕ್ಕೂ ವೇದಿಕೆ ಮೇಲೆ ಕುಳಿತವ ರೆಲ್ಲರ ಹೆಸರುಗಳನ್ನೇಕೆ ಹೇಳಬೇಕು? ಅದರಿಂದ ಯಾವ ಹೊಸ ವಿಚಾರಗಳನ್ನು ಹೇಳಿದಂತಾಯಿತು? ಇನ್ನು ಕೆಲವರಿಗೆ ವೇದಿಕೆ ಮೇಲೆ ಕುಳಿತವರೆಲ್ಲರ ಹೆಸರುಗಳು ಗೊತ್ತಿರುವುದಿಲ್ಲ. ಕೆಲವರ ಪರಿಚಯವೂ ಇರುವುದಿಲ್ಲ. ಆಮಂತ್ರಣ ಪತ್ರ ನೋಡಿ, ‘… ಅವರೇ.. ಅವರೇ.. ’ ಎಂದು ಹೇಳುತ್ತಾರೆ. ಕೆಲವು ಸಲ ಆಮಂತ್ರಿಸಿದವರೆಲ್ಲರೂ ಬಂದಿರುವುದ್ದಿಲ್ಲ. ಓದುವಾಗ ಅವರ ಹೆಸರುಗಳನ್ನೂ ಸೇರಿಸಿ ಹೇಳಿಬಿಡುತ್ತಾರೆ. ಇನ್ನು ಕೆಲವರು ವೇದಿಕೆ ಮುಂಭಾಗದಲ್ಲಿ ಕುಳಿತವರೆಲ್ಲರ ಹೆಸರುಗಳನ್ನೂ ಹೇಳಿ ಸಮಯ ಹಾಳು ಮಾಡುತ್ತಾರೆ.

ಬಿಜೆಪಿ ನಾಯಕರಾಗಿದ್ದ ದಿವಂಗತ ಅನಂತಕುಮಾರ ಅವರು ಆಮಂತ್ರಣ ಪತ್ರ ನೋಡದೇ, ವೇದಿಕೆ ಮೇಲಿದ್ದವರೆಲ್ಲರ
ಹೆಸರುಗಳನ್ನೂ, ಇಪ್ಪತ್ತು ಮಂದಿಯೇ ಕುಳಿತಿರಲಿ, ಹೇಳುತ್ತಿದ್ದರು. ಅದು ಸಭಿಕರಿಗೆ ಇಷ್ಟವಾಗುತ್ತಿತ್ತು. ವೇದಿಕೆ ಮುಂಭಾಗದಲ್ಲಿ ಕುಳಿತವರ ಕನಿಷ್ಠ ಹದಿನೈದು ಹೆಸರುಗಳನ್ನು ಹೇಳುತ್ತಿದ್ದರು. ಒಮ್ಮೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕ್ರಮ ವೊಂದರಲ್ಲಿ, ಅನಂತಕುಮಾರ ಅವರು ವೇದಿಕೆ ಮುಂದೆ ಉಪಸ್ಥಿತರಿದ್ದ ಸುಮಾರು ಅರವತ್ತಕ್ಕೂ ಅಧಿಕ ಮಂದಿಯ ಹೆಸರು ಗಳನ್ನು ಪಟಪಟನೆ ಹೇಳಿ ಇಡೀ ಸಭೆಯಿಂದ ದೀರ್ಘ ಕರತಾಡನ ಗಿಟ್ಟಿಸಿಕೊಂಡಿದ್ದರು!

ಹಾಗೆಯೇ ಅರಸೀಕೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಇಪ್ಪತ್ತಕ್ಕೂ ಅಧಿಕ ಗಣ್ಯರಿದ್ದರು. ಅವರೆಲ್ಲರ ಹೆಸರುಗಳನ್ನು ಮುಖಗಳನ್ನು ನೋಡುತ್ತಾ, ಆಮಂತ್ರಣ ಪತ್ರವನ್ನು ಸಹ ನೋಡದೇ ಹೇಳಿ, ಸಭಿಕರಲ್ಲಿ ಅಚ್ಚರಿ ಮೂಡಿಸಿದ್ದರು. ಇದಾದರೆ ಪರವಾಗಿಲ್ಲ, ಆದರೆ ಕೆಲವರು ಯಾಂತ್ರಿಕವಾಗಿ, ಕಾರ್ಯಕ್ರಮಕ್ಕೆ ಬಾರದವರ ಹೆಸರನ್ನೂ ಆಮಂತ್ರಣ ಪತ್ರ ನೋಡಿ ಉಸುರುವುದಿದೆಯಲ್ಲ, ಅದು ನಿಜಕ್ಕೂ ಯಾತನಾಮಯ.

ಇನ್ನು ಕೆಲವರು ವೇದಿಕೆ ಮೇಲೆ ಆಸೀನರಾದ ಗಣ್ಯರ ಪರಿಚಯವನ್ನು ಹೇಳುತ್ತಾ, ಅವಳ ಹೆಸರುಗಳನ್ನು ಹೇಳುತ್ತಾರೆ. ಅದು ತಲೆ ಮೇಲೆ ಮೊಳೆ ಹೊಡೆದಂತಾಗುತ್ತದೆ. ಭಾಷಣಕಾರರಿಗೆ ಸಭಿಕರ ಸಮಯದ ಬಗ್ಗೆ ಗೌರವ ಇರಬೇಕು. ಎಲ್ಲರ ಹೆಸರುಗಳನ್ನೂ ಹೇಳಬೇಕಾದ ಅಗತ್ಯವಿರುವುದಿಲ್ಲ. ಹಾಗೆ ಹೇಳುವುದನ್ನು ಸಭಿಕರು ಇಷ್ಟಪಡುವುದಿಲ್ಲ. ಮುಖ್ಯ ಭಾಷಣ ಕಾರರು ತಮ್ಮ ಹೆಸರುಗಳನ್ನೂ ಹೇಳುವಾಗ, ವೇದಿಕೆಯ ಮೇಲೆ ಕುಳಿತವರ ಮುಖ ಪ್ರಸನ್ನವಾಗುವುದು ಸಹಜ. ಅದನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ತಮ್ಮ ಹೆಸರು ಪ್ರಸ್ತಾಪಿಸುವ ಮುನ್ನ ಬಳಸುವ ಲವಣ-ವಿಶೇಷಣಗಳಿಗೆ ಪುಳಕಿತ ರಾಗುತ್ತಾರೆ.

ಆದರೆ ಭಾಷಣಕಾರರೆಲ್ಲ ಹೇಳಿದವರ ಹೆಸರುಗಳನ್ನೇ ಪದೇ ಪದೆ ಹೇಳಿದರೆ, ಎಂಥವರಿಗಾದರೂ ಬೋರಾಗುತ್ತದೆ. ಅದೊಂದು ಅನಪೇಕ್ಷಿತ ಕಸರತ್ತು, ಕಾಟಾಚಾರ ಎನಿಸುತ್ತದೆ. ಸಭೆಯ ಅಧ್ಯಕ್ಷತೆ ವಹಿಸಿದವರು ಅಥವಾ ಪ್ರಧಾನ ಭಾಷಣ ಕಾರರು ಸಭಾ ಮರ್ಯಾದೆಯ ದೃಷ್ಟಿಯಿಂದ ಹಾಗೆ ಹೇಳುವುದನ್ನು ಸಹಿಸಿಕೊಳ್ಳಬಹುದು. ಆದರೆ ಎಲ್ಲರೂ ಈ ರಾಗ ಹಾಡಿದರೆ ಸಹಿಸಲಸಾಧ್ಯ. ಇನ್ನು ಮುಂದೆ, ಆಮಂತ್ರಣ ಪತ್ರಿಕೆಯಲ್ಲಿ, ‘ಭಾಷಣಕಾರರು ವೇದಿಕೆಯಲ್ಲಿರುವವರೆಲ್ಲರ
ಹೆಸರುಗಳನ್ನು ಹೇಳಬೇಕಿಲ್ಲ’ ಎಂದು ಬರೆಯಿಸಬೇಕಾಗಿ ಬರಬಹುದೇನೋ? ಒಂದು ವೇಳೆ ಅದು ಜಾರಿಗೆ ಬಂದರೆ,
ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ.

ದಾರಿ ತಪ್ಪಿಸುವ ಅಡ್ಡ ಹೆಸರು
ಕೆಲವರ ಹೆಸರುಗಳು ನಮ್ಮನ್ನು ದಾರಿ ತಪ್ಪಿಸುತ್ತವೆ. ಅವರ ಹೆಸರು ಅಥವಾ ಅಡ್ಡಹೆಸರಿನಿಂದ ಅವರು ಯಾವ ಜಾತಿ,
ಧರ್ಮದವರು ಎಂಬುದು ಗೊತ್ತಾಗುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ನಾವು ಅವರನ್ನು ಇನ್ನ್ಯಾರೋ ಎಂದು ಭಾವಿಸುತ್ತೇವೆ. ಅವರ ಹೆಸರು, ಹಾಗೆ ಭಾವಿಸಲು ನಮ್ಮನ್ನು ಪ್ರೇರೇಪಿಸಿರುತ್ತದೆ.

ನಾನು ಬೆಂಗಳೂರಿಗೆ ಬಂದಾಗ, ದಿಲ್ಲಿ ಪ್ರೆಸ್ ಪ್ರಕಟಿಸುತ್ತಿದ್ದ ಕನ್ನಡ ಪತ್ರಿಕೆಗಳ ನಿರ್ವಹಣೆಗೆಂದು ಎಂ.ಎಂ.ರಸಿಕ ಎಂಬು ವವರಿದ್ದರು. ನಾನು ಹಾಗೂ ಅವರು ಒಂದೇ ಬಸ್ಸಿನಲ್ಲಿ ಚಾಮರಾಜಪೇಟೆಯಿಂದ ‘ಇಂಡಿಯನ್ ಎಕ್ಸ್ ಪ್ರೆಸ್’ ಬಸ್ ಸ್ಟಾಪಿನ ತನಕ ಹೋಗುತ್ತಿದ್ದೆವು. ಪ್ರತಿ ದಿನ ಒಂದೇ ಸ್ಟಾಪಿನಲ್ಲಿ ಬಸ್ಸನ್ನೇರಿ, ಇಳಿಯುತ್ತಿದ್ದುದರಿಂದ ನನಗೆ ಅವರ ಪರಿಚಯವಾಯಿತು. ಒಂದು ದಿನ ಅವರು ಈದ್ ಸಂದರ್ಭದಲ್ಲಿ ತಮ್ಮ ಮನೆಗೆ ಆಮಂತ್ರಿಸಿದಾಗಲೇ, ಅವರು ಮುಸ್ಲಿಮರೆಂದು ನನಗೆ ಗೊತ್ತಾಗಿದ್ದು. ಅಲ್ಲಿಯ ತನಕ ನಮ್ಮ ಮಧ್ಯೆ ನಮ್ಮ-ನಮ್ಮ ಧರ್ಮಕ್ಕೆ ಸಂಬಂಧಿಸಿದ ಚರ್ಚೆಯೇ ಬಂದಿರಲಿಲ್ಲ.

ರಸಿಕ ಎಂದು ಹೆಸರಿಟ್ಟುಕೊಂಡ ಅವರು ಮುಸ್ಲಿಂ ಇದ್ದಿರಬಹುದೇ ಎಂಬ ಸಣ್ಣ ಸಂದೇಹವೂ ಬಂದಿರಲಿಲ್ಲ. ಅವರ ಮನೆಯಿಂದ ಮರಳಿದ ಮರುದಿನ ಬಸ್ಸಿನಲ್ಲಿ ಸಿಕ್ಕಾಗ, ಅದು ಹೇಗೆ ನೀವು ‘ರಸಿಕ’ ಎಂದು ಹೆಸರಿಟ್ಟುಕೊಂಡಿದ್ದೀರಿ ಎಂದು ಕೇಳಿದೆ.

ಅದಕ್ಕೆ ಅವರು, ‘ನಾನು ಚಿಕ್ಕವನಿದ್ದಾಗ ಮುಧೋಳದಲ್ಲಿ ನನ್ನನ್ನು ಶಾಲೆಗೆ ಸೇರಿಸುವಾಗ ಮೇಷ್ಟ್ರು ಮಾಡಿದ ಭಾನಗಡಿಯಿದು’ ಎಂದರು. ನಾನು ಅವರಿಗೆ, ‘ಸ್ವಲ್ಪ ವಿವರಿಸಿ’ ಎಂದೆ. ಆಗ ಅವರು, ‘ನನ್ನ ತಂದೆ ನನಗೆ ರಫೀಕ್ ಎಂದು ನಾಮಕರಣ ಮಾಡಿದ್ದರು. ಆದರೆ ಶಾಲಾ ಮೇಷ್ಟ್ರು ರಫೀಕ್ ಬದಲು ರಸೀಕ್ ಎಂದು ಬರೆದುಕೊಂಡು ಬಿಟ್ಟರು. ನಂತರ ಹಾಜರಿ ಪುಸ್ತಕದಲ್ಲಿ ಅದು ಹೇಗೋ ರಸಿಕ ಎಂದು ದಾಖಲಾಗಿಬಿಟ್ಟಿತು.

ಆಗಲೇ ಎಲ್ಲರೂ ನನ್ನನ್ನು ರಸಿಕ.. ರಸಿಕ.. ಎಂದು ಕರೆಯಲಾರಂಭಿಸಿದ್ದರು. ನನಗೂ ಆ ಹೆಸರು ಇಷ್ಟವಾಯಿತು. ನನ್ನ ಹೆಸರನ್ನು ಕೇಳಿದವರೂ ಖುಷಿಯಿಂದ ಹಾಗೆ ಕರೆಯಲಾರಂಭಿಸಿದರು. ಹೀಗಾಗಿ ನಾನು ಖಾಯಂ “ರಸಿಕ”ನಾದೆ. ನಂತರ ಅದನ್ನು ಬದಲಿಸುವ ಗೋಜಿಗೆ ಹೋಗಲಿಲ್ಲ’ ಎಂದು ಹೇಳಿದರು. ನಂತರ ಸುಮಾರು ಆರೇಳು ವರ್ಷಗಳ ತನಕ ನಮ್ಮ ಒಡನಾಟ ಮುಂದುವರಿದಿತ್ತು. ನಂತರ ಅವರು ಅನಾರೋಗ್ಯದಿಂದ ನಿಧನರಾದರು.

ನಾನು ಧಾರವಾಡದಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುವಾಗ, ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ‘ನವನಾಡು’ ಪತ್ರಿಕೆಯ ಸಂಪಾದಕೀಯ ವಿಭಾಗದ ನೇತೃತ್ವವನ್ನು ಎಂ.ಎಂ.ಪಾಟೀಲ ಎಂಬುವವರು ವಹಿಸಿದ್ದರು. ಅವರು ಕರ್ನಾಟಕ ವಿಶ್ವವಿದ್ಯಾಲ ಯದ ಪತ್ರಿಕೋದ್ಯಮ ವಿಭಾಗದ ಪ್ರಥಮ ಬ್ಯಾಚಿನ ವಿದ್ಯಾರ್ಥಿಯೂ ಹೌದು. ಅದಾದ ಬಳಿಕ ಅವರು ಬೆಂಗಳೂರು ‘ಸಂಯುಕ್ತ ಕರ್ನಾಟಕ’ದಲ್ಲಿಯೂ ಕೆಲ ದಿನ ಕೆಲಸ ಮಾಡಿ, ನಂತರ ‘ಪ್ರಜಾವಾಣಿ’ ಸೇರಿದರು.

ಅಲ್ಲಿ ಅವರು ಸುಮಾರು ಇಪ್ಪತ್ತೆಂಟು ವರ್ಷ ಕೆಲಸ ಮಾಡಿ ಮುಖ್ಯ ಉಪಸಂಪಾದಕರಾಗಿ ನಿವೃತ್ತರಾದರು. ‘ನವನಾಡು’
ದಿನಗಳಿಂದಲೇ ಪಾಟೀಲರು ನನಗೆ ಪರಿಚಿತರು. ಅವರು ‘ಪ್ರಜಾವಾಣಿ’ ಸೇರಿದ ನಂತರ, ಅವರ ಸಹೋದ್ಯೋಗಿಯೊಬ್ಬರು, ‘ಎಂ.ಎಂ.ಪಾಟೀಲರು ಮುಸ್ಲಿಂ ಎಂಬುದು ಗೊತ್ತಿರಲಿಲ್ಲ’ ಎಂದು ಹೇಳಿದರು. ನನಗೂ ಆಶ್ಚರ್ಯವಾಯಿತು. ಅಷ್ಟು ವರ್ಷಗಳ ಕಾಲ ಅವರೊಂದಿಗೆ ಒಡನಾಡಿದರೂ, ನನಗೂ ಅದು ಗೊತ್ತಿರಲಿಲ್ಲ.

ನಿನ್ನೆ (06.08.2022) ಬಿಡುಗಡೆಯಾದ, ಹಿರಿಯ ಪತ್ರಕರ್ತ ಮತ್ತು ‘ಪ್ರಜಾವಾಣಿ’ ಸಂಪಾದಕೀಯ ಕಾರ್ಯ ನಿರ್ವಾಹಕ ರಾಗಿದ್ದ ಜಿ.ಎನ್.ರಂಗನಾಥ ರಾವ್ ಅವರ ‘ಆ ಪತ್ರಿಕೋದ್ಯಮ’ ಪುಸ್ತಕವನ್ನು ಓದುವಾಗ, ಇಂಥದೇ ಒಂದು ಪ್ರಸಂಗವನ್ನು ಅವರೂ ಪ್ರಸ್ತಾಪಿಸಿದ್ದು ಗಮನಕ್ಕೆ ಬಂದಿತು. ರಂಗನಾಥ ರಾವ್ ಅವರಿಗಿಂತ ಮುನ್ನ ಟ್ರೈನಿ ಆಗಿ ಐ.ಕೆ.ಜಹಗೀರದಾರ ‘ಪ್ರಜಾವಾಣಿ’ ಸೇರಿದ್ದರು. ಜಹಗೀರದಾರರು ಪಾಟೀಲ ಪುಟ್ಟಪ್ಪನವರ ಗರಡಿಯಲ್ಲಿ ಪಳಗಿದವರು.

ನೀರಿನ ಬಳಕೆ ಇನ್ನೂ ಅರ್ಥವಾಗಿಲ್ಲ ಕಳೆದ ಎರಡು ವಾರಗಳಿಂದ ಮಳೆ ‘ಧೋ’ ಎಂದು ಸುರಿಯುತ್ತಿದೆ. ಎಡೆಯೂ ನೀರೇ ನೀರು. ಒಂದೆಡೆ ಸಂತಸ. ಮತ್ತೊಂದೆಡೆ ದುಃಖ. ಒಂದೆಡೆ ಹಸುರು ನಳನಳಿಸುತ್ತಿದೆ. ಇನ್ನೊಂದೆಡೆ ಅತಿವೃಷ್ಟಿಯಿಂದಾಗಿ ಜನ ಮನೆ-ಮಠ ಕಳೆದುಕೊಂಡು ಅನಾಥರಾಗಿದ್ದಾರೆ. ಸಂತಸದ ಸೆಲೆಯಾಗಬೇಕಿದ್ದ ನೀರು, ಅನೇಕರ ಜೀವನವನ್ನು ಮುಳುಗಿಸಿದೆ. ಏಕಕಾಲದಲ್ಲಿ ನೀರು ಸಂತಸ ಮತ್ತು ದುಃಖಕ್ಕೆ ಕಾರಣವಾಗಿರುವುದು ವಿಪರ್ಯಾಸ.

ಪ್ರಸ್ತುತ ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆಯನ್ನು ಕಂಡು, ಮೇಲಿನ ಮಾತನ್ನು ಬರೆದವರು Let there be water  ಎಂಬ ಅಪರೂಪದ ಕೃತಿಯನ್ನು ಬರೆದ ಸೇತ್ ಎಂ.ಸೀಗೆಲ. (ಸೀಗೆಲ್ ಬರೆದ ಕೃತಿಯನ್ನು ಮಿತ್ರರಾದ ರಾಘವೇಂದ್ರ ಹೆಗಡೆ ಅವರು ‘ನಾಳೆಗೂ ಇರಲಿ ನೀರು’ ಎಂದು ಕನ್ನಡಕ್ಕೆ ಅನುವಾದಿಸಿದ್ದು, ಅಂಕಿತ ಪುಸ್ತಕ ಅದನ್ನು ಪ್ರಕಟಿಸಿದೆ) ನಮ್ಮಲ್ಲಿ ಈ ಪರಿ ಮಳೆ ಸುರಿಯುವುದನ್ನು, ರಸ್ತೆಗಳಲ್ಲಿ ನೀರು ಹರಿಯುವುದನ್ನು, ಬಡಾವಣೆಗಳು ಮುಳುಗುವುದನ್ನು ಇಸ್ರೇಲಿಗಳಿಗೆ ಊಹಿಸಿ ಕೊಳ್ಳಲೂ ಆಗುವುದಿಲ್ಲ.

ಬೆಂಗಳೂರಿನಲ್ಲಿ ಒಂದು ಗಂಟೆ ಸುರಿಯುವಷ್ಟು ಮಳೆ, ಇಸ್ರೇಲಿನಲ್ಲಿ ಒಂದು ವರ್ಷದ ಧಾರೆಗೆ ಸಮ. ಕೆಲವು ಸಲ ವರ್ಷವಿಡೀ ಮಳೆಯೇ ಆಗುವುದಿಲ್ಲ. ಇಸ್ರೇಲಿನ ಎಪ್ಪತ್ತರಷ್ಟು ಭೂಭಾಗ ಮರುಭೂಮಿಯಿಂದಲೇ ಆವೃತವಾಗಿದೆ. ಅಲ್ಲಿ ಕಾಡು, ನದಿ, ಝರಿ, ತೊರೆ, ಕೆರೆ, ಹಳ್ಳ- ಕೊಳ್ಳಗಳಿಲ್ಲ. ಆದರೂ ಇಸ್ರೇಲ್ ಜಲ ತಂತ್ರಜ್ಞಾನ, ನೀರಿನ ಸಮರ್ಪಕ ಮತ್ತು ಗರಿಷ್ಠ ಬಳಕೆ ಯಲ್ಲಿ ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿದೆ, ಮಾರ್ಗದರ್ಶಿಯಾಗಿದೆ. ಆಕಾಶ ಮತ್ತು ಭೂಮಿಯಲ್ಲಿ ನೀರಿನ ಪಸೆಯಿಲ್ಲ ದಿದ್ದರೂ ಜಲ ತಂತ್ರಜ್ಞಾನದಲ್ಲಿ ಅಗ್ರಪಂಕ್ತಿಯಲ್ಲಿರುವ ಇಸ್ರೇಲ್, ಚಿನ್ನಕ್ಕಿಂತ, ವಜ್ರಕ್ಕಿಂತ ನೀರು ಅಮೂಲ್ಯ, ನೀರು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿದ ಮೊದಲ ದೇಶ ಎಂಬುದು ಗಮನಾರ್ಹ.

ಇಷ್ಟಾಗಿಯೂ ಇಸ್ರೇಲಿನಲ್ಲಿ ನೀರಿಗೆ ಅಭಾವವಿಲ್ಲ. ಸೋಜಿಗವೆಂದರೆ ಇಸ್ರೇಲ್ ತನ್ನ ಅಕ್ಕ-ಪಕ್ಕದ ರಾಷ್ಟ್ರಗಳಿಗೆ ನೀರನ್ನು ರಫ್ತು ಮಾಡುತ್ತದೆ. ಜಗತ್ತಿನಲ್ಲಿ ‘ಜಲ ರಾಜತಾಂತ್ರಿಕತೆ’ ಎಂಬ ‘ಹೊಸ ಡಿಪ್ಲೊಮಸಿ’ ಬರೆದಿದ್ದರೆ ಅದು ಇಸ್ರೇಲ್. ತನ್ನ ವೈರಿ ದೇಶ ಗಳಿಗೂ ನೀರನ್ನು ಪೂರೈಸುವ ಮೂಲಕ ಇಸ್ರೇಲ್ ಮಾನವೀಯತೆ ಮೆರೆಯುತ್ತಿದೆ. ಅಲ್ಲಿನ ಯಾವ ಹೋಟೆಲಿನಲ್ಲಿ ‘ಕಡಿಮೆ ನೀರು ಬಳಸಿ’ ಎಂಬ ಫಲಕ ಕಾಣಿಸುವುದಿಲ್ಲ. ಆದರೆ ‘ನೀರನ್ನು ವ್ಯರ್ಥವಾಗಿ ಪೋಲು ಮಾಡಬೇಡಿ’ ಎಂದು ಎಚ್ಚರಿ ಸುತ್ತಾರೆ. ಹನಿ ಹನಿ ನೀರನ್ನೂ ಆಡಿಟ್ ಮಾಡುವ ದೇಶವಿದ್ದರೆ ಅದು ಇಸ್ರೇಲ್.

ಆರಂಭಿಕ ಶಿಕ್ಷಣದಲ್ಲಿ ಮಕ್ಕಳಿಗೆ ನೀರಿನ ಮಹತ್ವವನ್ನು ತಿಳಿಸಿಕೊಡಲಾಗುತ್ತದೆ. Rain, rain, go away/ Come
again another day/ Little Arthur wants to play ಎಂಬ ಶಿಶುಪದ್ಯವನ್ನು ಅಲ್ಲಿ ಹೇಳಿಕೊಡುವುದಿಲ್ಲ. ಇಲ್ಲಿ
ನರ್ಸರಿಯಿಂದಲೇ ನಮ್ಮ ಮಕ್ಕಳು ಆ ಹಾಡನ್ನು ಹೇಳುವುದನ್ನು ಕೇಳಿರಬಹುದು.

‘ಮಳೆಯೇ ಮಳೆಯೇ ಹೊರಟು ಹೋಗು’ ಎಂದು ನಾವು ಕಲಿಸಿದರೆ, ಅದರ ಬದಲು, ಅವರು Come, clouds / Bring rain to the gardens / Drip, drip, my little drops, / Rain, rain for my fields / For the grain and for the tree / and for the little flower / That’s in the garden ಎಂಬ ಸಾಲನ್ನು ಕಲಿಸುತ್ತಾರೆ.

ಇಸ್ರೇಲಿನ ಯಹೂದಿಯರ ಹೀಬ್ರೂ ಭಾಷೆಯ ಬೈಬಲಿನಲ್ಲಿ ನೀರು, ಮಳೆ ಬಗ್ಗೆ ಸುಮಾರು ಎಂಟು ನೂರು ಕಡೆಗಳಲ್ಲಿ
ಪ್ರಸ್ತಾಪವಿದೆ. ನೀರಿಗೆ ಹೀಬ್ರೂ ಭಾಷೆಯಲ್ಲಿ ಇಪ್ಪತ್ತೈದಕ್ಕೂ ಸರಿಸಮಾನ ಪದಗಳಿವೆ. ಅಂದರೆ ನೀರು ಮತ್ತು ಮಳೆ ಅವರ
ಜನಜೀವನದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ.

ನಮ್ಮಲ್ಲಿ ಹೆಚ್ಚು ಮಳೆಯಾಗುತ್ತದೆ. ಒಂದೆಡೆ ಅತಿವೃಷ್ಟಿ ಮತ್ತು ಇನ್ನೊಂದೆಡೆ ಅನಾವೃಷ್ಟಿ. ಅಂದರೆ ನೀರಿನ ಸಮ ಬಳಕೆ ನಮಗೆ ಗೊತ್ತಿಲ್ಲ. ಬೆಂಗಳೂರಿನಲ್ಲಿ ದಿನವಿಡೀ ಸುರಿದ ಮಳೆ ರಸ್ತೆಗಳಲ್ಲಿ, ಚರಂಡಿಗಳಲ್ಲಿ ಬಿದ್ದು, ಭೂಮಿಯನ್ನು ತಂಪಾಗಿಸದೇ
ಎಲ್ಲಾ ಹರಿದು ಮಾಯವಾಗಿಬಿಡುತ್ತದೆ. ಮಾರ್ಚ್ ಬಂದರೆ ನೀರಿಗೆ ಅಭಾವ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಟ್ಯಾಂಕರ್
ಗಳಿಗೆ ಮೊರೆ ಹೋಗಬೇಕಾದ ದೈನೇಸಿ ಸ್ಥಿತಿ. ಅಂದರೆ ನೀರನ್ನು ಜಾಣ್ಮೆಯಿಂದ ಬಳಸಿಕೊಳ್ಳುವ ವಿಧಾನ ನಮಗಿನ್ನೂ ಗೊತ್ತಾಗಿಲ್ಲ.

‘ನಿಮ್ಮ ರಾಜ್ಯದಲ್ಲಿ ಬೀಳುವ ಅರ್ಧದಷ್ಟು ಮಳೆ ಇಸ್ರೇಲಿನಲ್ಲಿ ಬಿದ್ದಿದ್ದರೆ, ನಾವು ದಕ್ಷಿಣ ಭಾರತಕ್ಕೆ ಆಹಾರ ಪೂರೈಸುತ್ತಿದ್ದೆವು’ ಎಂದು ಸೀಗೆಲ್ ಹೇಳಿದ್ದರು. ನೀರಿನಲ್ಲಿ ತೇಲಬೇಕಾದ ನಾವು ಮುಳುಗುತ್ತಿದ್ದೇವೆ. ನೀರಿನ ಬಳಕೆ ನಮಗಿನ್ನೂ ಅರ್ಥವಾಗಿಲ್ಲ. ಅತಿಯಾಗಿ ಏನೇ ಸಿಕ್ಕರೂ ಅದರ ಮಹತ್ವ ಗೊತ್ತಾಗುವುದಿಲ್ಲ.

ಟೀ-ಕಪ್ ಮೇಲಿನ ಸಾಲು
ಇತ್ತೀಚೆಗೆ ನಾನು ಬರೆದ ಮೂರು ಪುಸ್ತಕಗಳನ್ನು ಸೂರತ್ ನಲ್ಲಿರುವ ನನ್ನ ಸ್ನೇಹಿತರಾದ ಮಹೇಶ ಅಡಪಟ್ಟಿ ಅವರಿಗೆ ಕಳಿಸಿ ಕೊಟ್ಟಿದ್ದೆ. ಅವನ್ನು ಸೀಕರಿಸಿರುವುದನ್ನು ದೃಢಪಡಿಸಿದ ಮಹೇಶ್, ಜತೆಯಲ್ಲಿ ಉಡುಗೊರೆಯಾಗಿ ಒಂದು ಟೀ-ಕಪ್ ಕಳಿಸಿ ದ್ದರು. ಅದರ ಮೇಲೆ ಬರೆದ ಸಾಲುಗಳು ನನಗೆ ಇಷ್ಟವಾದವು – ‘ಬುದ್ಧಿವಂತರಾದವರು ಪ್ರತಿಯೊಂದರಿಂದ, ಪ್ರತಿಯೊಬ್ಬರಿಂದ ಕಲಿಯುತ್ತಾರೆ. ಸಾಮಾನ್ಯರಾದವರು ತಮ್ಮ ಅನುಭವದಿಂದ ಕಲಿಯುತ್ತಾರೆ. ಎಲ್ಲಾ ಉತ್ತರಗಳು ಗೊತ್ತಿರುವುದು ಮೂರ್ಖರಿಗೆ ಮಾತ್ರ.’