Thursday, 12th December 2024

’ಹಿಂದೂ ಧರ್ಮ’ ನಿಂದನೆಯ ’ಓಟಿಟಿ’ ವೇದಿಕೆಗಳಿಗೆ ಕಾನೂನಿನ ಕಡಿವಾಣ ಹಾಕಬೇಕು

ವೀಕೆಂಡ್‌ ವಿಥ್‌ ಮೋಹನ್‌ 

ಮೋಹನ್‌ ವಿಶ್ವ

camohanbn@gmail.com

1980ರ ದಶಕದಲ್ಲಿ ಮುಂಬೈನ ಭೂಗತ ದೊರೆ ಹಾಜಿ ಮಸ್ತಾನ್ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಹಿಂದಿ ಸಿನಿಮಾಗಳಲ್ಲಿ ಹಿಂದೂ ಧರ್ಮದ ಮೇಲೆ ಗದಾಪ್ರಹಾರ ಗಳು ಶುರುವಾದವು. ವಾಸ್ತವದಲ್ಲಿ ಮುಂಬೈ ಭೂಗತ ಲೋಕವನ್ನು ಆಳಿದವರು ಮುಸ್ಲಿಂ ದೊರೆಗಳಾದರೂ ಸಹ ಹಿಂದಿ ಸಿನೆಮಾಗಳಲ್ಲಿ
ಮುಸಲ್ಮಾನರನ್ನು ಅಮಾಯಕರಂತೆ ತೋರಿಸಿ, ಹಿಂದೂಗಳನ್ನು ತೀರಾ ಕೆಟ್ಟವರಂತೆ ತೋರಿಸಲಾಯಿತು.

ಬಾಲಿವುಡ್ ಸಿನೆಮಾಗಳಲ್ಲಿ ಭೂಗತ ದೊರೆಯೊಬ್ಬನ ಹಣೆಯ ಮೇಲೆ ಕೆಂಪು ಕುಂಕುಮ, ಬಲಗೈನಲ್ಲಿ ಕೆಂಪು ದಾರ, ಬ್ರಾಹ್ಮಣನೊಬ್ಬ ಭೂಗತ ಲೋಕದ ಡಾನ್
ಆಗುವುದು, ವೈಶ್ಯರನ್ನು ಹಣದಾಸೆಗಾಗಿ ಜನರಿಗೆ ಮೋಸ ಮಾಡುವವರಾಗಿ ತೋರಿಸಲಾಯಿತು, ಸನ್ಯಾಸಿಗಳನ್ನು ಜನರಿಗೆ ಮಂಕುಬೂದಿ ಎರಚುವವರನ್ನಾಗಿ ತೋರಿಸಲಾಗುತ್ತಿತ್ತು. ಸಂಜಯ್ ದತ್ ಅಭಿನಯದ ‘ವಾಸ್ತವ್’ ಚಿತ್ರವನ್ನೊಮ್ಮೆ ನೋಡಿದರೆ ಇದೆಲ್ಲ ಅಂಶಗಳು ಕಣ್ಣಿಗೆ ಕಾಣಿಸುತ್ತದೆ.

ಕಾಶ್ಮೀರದಲ್ಲಿ ಮುಸಲ್ಮಾನರ ಹೊಡೆತಕ್ಕೆ ಸಿಕ್ಕು ತಮ್ಮ ಮನೆ ಮಠಗಳನ್ನು ಬಿಟ್ಟು ಬಂದವರು ‘ಪಂಡಿತರು’. ಆದರೆ ಅಭಿಷೇಕ್ ಬಚ್ಚನ್ ಅಭಿನಯದ ‘ಮಿಷನ್
ಕಾಶ್ಮೀರ್’ ಚಿತ್ರದಲ್ಲಿ ಕಾಶ್ಮೀರದಲ್ಲಿ ಮುಸಲ್ಮಾನ್ ಹುಡುಗನೊಬ್ಬ ಚಿತ್ರಹಿಂಸೆ ಅನುಭವಿಸಿ ಸಂಜಯ್ ದತ್ ಕೈಯಲ್ಲಿ ಬೆಳೆಯುವವನಾಗಿ ತೋರಿಸಲಾಯಿತು. 1990ರ ದಶಕದಲ್ಲಿ ದಾವೂದ್ ಇಬ್ರಾಹಿಂ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಾಗ ಬೆಳೆದದ್ದು ‘ಖಾನ್’ ಗಳು. ಅಮೀರ್ ಖಾನ್, ಶಾರುಖ್ ಖಾನ್ ಹಾಗೂ ಸಲ್ಮಾನ್
ಖಾನ್, ಹಿಂದೂ ನಾಯಕರನ್ನು ಬೆಳೆಯಲು ಬಿಡದೆ ಬಾಲಿವುಡ್ ಅಂಗಳದಲ್ಲಿ ಖಾನ್‌ಗಳ ಅಬ್ಬರ ಶುರುವಾಗಿ, ನಿನ್ನೆ ಮೊನ್ನೆಯವರೆಗೂ ನಡೆದಿತ್ತು. ಕಳೆದ ವರ್ಷ ‘ಸುಶಾಂತ್ ಸಿಂಗ್ ರಜಪೂತ್’ ಆತ್ಮಹತ್ಯೆ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾದವು, ಇದು ಆತ್ಮಹತೆಯಲ್ಲ ಕೊಲೆಯೆಂಬ ಹಲವು ವಾದಗಳು ಹುಟ್ಟಿಕೊಂಡವು. ಸುಶಾಂತ್ ಸಿಂಗ್ ಸಾವಿನ ಹಿಂದೆ ಮತ್ತದೇ ಬಾಲಿವುಡ್ ಆಳಿದ ದಿಗ್ಗಜರ ಹೆಸರುಗಳು ಕೇಳಿಬಂದವು, ಮತ್ತೊಬ್ಬ ಹಿಂದೂ ರಜಪೂತಿ ಪ್ರತಿಭೆ ಬಾಲಿವುಡ್ ಅಳುತ್ತಿರುವ ದೊರೆಗಳ ಮಾನಸಿಕ ಹಿಂಸೆಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದ!

ಇಡೀ ಬಾಲಿವುಡ್ ಅಂಗಳವನ್ನೇ ದೊಡ್ಡ ಮಾಫಿಯಾ ರೀತಿಯಲ್ಲಿ ನಡೆಸುತ್ತಿರುವ ಖಾನ್‌ಗಳ ಹಾವಳಿಯಿಂದ ತಮ್ಮ ಸಿನಿಮಾ ಜೀವನವನ್ನು ಕೊನೆಯಾಗಿಸಿ ಕೊಂಡ ಹಲವು ಮಂದಿಯಿದ್ದಾರೆ. ಅಮೀರ್ ಖಾನ್ ತನ್ನ ಚಿತ್ರಗಳಲ್ಲಿ ಬುದ್ಧಿವಂತ ನಿರ್ದೇಶಕನಾಗಿ ಕಾಣಿಸಿಕೊಂಡರೂ, ಆತನ ಚಿತ್ರಕತೆಗಳನ್ನು ಸೂಕ್ಷ್ಮವಾಗಿ
ಗಮನಿಸಿದರೆ ಹಿಂದೂ ಧರ್ಮದ ಮೇಲಿನ ಪೂರ್ವನಿಯೋಜಿತ ದಾಳಿಗಳು ಕಣ್ಣ ಮುಂದೆ ರಾರಾಜಿಸುತ್ತವೆ. ಕಳೆದ ಏಳೆಂಟು ವರ್ಷಗಳಿಂದ ತುಸು ಜಾಗೃತ ರಾಗಿರುವ ಪ್ರೇಕ್ಷಕ ನಿಧಾನವಾಗಿ ಹಿಂದೂ ಧರ್ಮದ ಮೇಲಾಗುತ್ತಿರುವ ದಾಳಿಗಳನ್ನೊಳಗೊಂಡ ಸಿನಿಮಾಗಳನ್ನು ಬಹಿಷ್ಕರಿಸಲು ಶುರು ಮಾಡಿದ್ದಾನೆ, ದೇಶ ವಿರೋಧಿ ಪ್ರಸಂಗಗಳಿರುವ ಸಿನಿಮಾಗಳನ್ನು ಬಹಿಷ್ಕರಿಸಿ ತಮ್ಮನ್ನು ಲಘುವಾಗಿ ತೆಗೆದುಕೊಳ್ಳಬಾರದೆಂಬ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತಲೇ
ಇದ್ದಾರೆ. ‘ದೀಪಿಕಾ ಪಡುಕೋಣೆ’ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದಂಥ ಕಮ್ಯುನಿಸ್ಟ್ ಸಂಘಟನೆಯ ‘ಕಾಯ್ದೆ’ಯ ಸುಳ್ಳು ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಬೆಂಬಲ ನೀಡಿದ ಕಾರಣಕ್ಕೆ ಆಕೆ ಅಭಿನಯದ ‘ಚಪಕ್’ ಸಿನಿಮಾವನ್ನು ಸಂಪೂರ್ಣವಾಗಿ ಬಹಿಷ್ಕರಿಸಿದ ಘಟನೆ ಬಾಲಿವುಡ್
ಅಂಗಳಕ್ಕೆ ಒಂದು ಪಾಠವಾಗಿದೆ.

ಬಾಲಿವುಡ್ ಸಿನಿಮಾಗಳಲ್ಲಿನ ದೇಶವಿರೋಧಿ, ಹಿಂದೂ ಧರ್ಮವಿರೋಧಿ ನೀತಿಗಳ ವಿರುದ್ಧ ಪ್ರೇಕ್ಷಕರು ತಿರುಗಿಬಿದ್ದ ಘಟನೆಗಳು ಹೆಚ್ಚಾದಂತೆ ನಿರ್ಮಾಪಕರು ‘ಸೆನ್ಸಾರ್’ನಿಂದ ಹೊರಗಿದ್ದಂಥ ‘ಓಟಿಟಿ’ ವೇದಿಕೆಯನ್ನು ಬಳಸಿಕೊಳ್ಳಲು ಶುರುಮಾಡಿದರು. ಬಾಲಿವುಡ್ ಅಂಗಳದಲ್ಲಿ ತೆರೆಯ ಮೇಲೆ ಬರುತ್ತಿದ್ದಂಥ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಈ ವೇದಿಕೆಯಲ್ಲಿ ಕತ್ತರಿ ಹಾಕುವ ಕಠಿಣ ಕಾನೂನುಗಳಿರಲಿಲ್ಲ. ಹಾಗಾಗಿ ತಮ್ಮ ಹಳೆಯ ವರಸೆಯನ್ನು ಈ ವೇದಿಕೆಯಲ್ಲಿ ಶುರುಮಾಡಿದರು. ‘ಅಮೆಜಾನ್ ಪ್ರೈಮ’ನಲ್ಲಿ ‘ಮಿರ್ಜಾಪುರ್’ಎಂಬ ವೆಬ್ ಸೀರೀಸ್‌ನಲ್ಲಿ ಹಿಂಸಾತ್ಮಕ ದೃಶ್ಯಗಳನ್ನು ತೀರಾ ಭಯಾನಕವಾಗಿ ತೋರಿಸಲಾಗಿದೆ, ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ನಡೆಯುವ ಮಾಫಿಯಾ ಡಾನ್ ಕಥೆಯನ್ನೊಳಗೊಂಡಿರುವ ಈ ಸೀರಿಸ್‌ನಲ್ಲಿ ಹಿಂದೂ ಧರ್ಮದ ಬ್ರಾಹ್ಮಣ ಕುಟುಂಬದವನನ್ನು ಮಾಫಿಯಾ ಡಾನ್ ಆಗಿ ತೋರಿಸಲಾಗಿದೆ.

ವಂಶಪಾರಂಪರಿಕವಾಗಿ ಆ ಕುಟುಂಬದಲ್ಲಿ ನಿರಂತರ ಮಾಫಿಯಾ ನಡೆದುಬಂದಿರುವಂತೆ ತೋರಿಸಿದ್ದಾರೆ. ತಾತ, ಅಪ್ಪ ಹಾಗೂ ಮಗ ಮೂವರೂ ಸಹ ವಿಕೃತ ಮಾಫಿಯಾ ಡಾನ್ ಗಳಾಗಿ ಇಡೀ ನಗರವನ್ನೇ ಆಳುತ್ತಿರುತ್ತಾರೆ. ಎಲ್ಲಿಯ ಉತ್ತರ ಪ್ರದೇಶ, ಎಲ್ಲಿಯ ಬ್ರಾಹ್ಮಣರ ಭೂಗತ ಮಾಫಿಯಾ. ಉತ್ತರ ಪ್ರದೇಶದಲ್ಲಿನ ಕ್ರಿಮಿನಲ್ ಹೆಸರುಗಳನ್ನ ಕೇಳಿದರೆ ಸಾಕು ಅವರೆಲ್ಲರೂ ಯಾವ ಧರ್ಮಕ್ಕೆ ಸೇರಿದವರೆಂಬ ವಿಷಯ ಒಂದು ಸಣ್ಣ ಮಗುವಿಗೂ ತಿಳಿಯುತ್ತದೆ. ಉತ್ತರ ಪ್ರದೇಶದಲ್ಲಿ ಹಿಂದೂ ಧರ್ಮದವರಲ್ಲದವರು ನಡೆಸುತ್ತಿರುವ ಭೂಗತ ಮಾಫಿಯಾದ ಕಥೆಗಳು ಅಷ್ಟೊಂದಿರುವಾಗ ಹಿಂದೂ ಧರ್ಮದ ಕಥೆಗಳನ್ನೇ ಆಯ್ಕೆ ಮಾಡಿಕೊಂಡಿರುವು ದರ ಹಿಂದೆ ಮತ್ತದೇ ಬಾಲಿವುಡ್‌ನ ಸಿನಿಮಾ ಮಾಫಿಯಾ.

ಕಮ್ಯುನಿಸ್ಟ್ ಮನಸ್ಥಿತಿಯ ಹಲವು ನಿರ್ದೇಶಕರು, ನಿರ್ಮಾಪಕರು ಈಗ ಓಟಿಟಿ ವೇದಿಕೆಯ ಮೂಲಕ ತಮ್ಮ ದೇಶವಿರೋಧಿ ಹಾಗೂ ಧರ್ಮವಿರೋಧಿ ಚಿತ್ರಗಳನ್ನು ಮನೆಮನೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದ ತಯಾರಿಕೆಯಲ್ಲಿ ನಿಸ್ಸೀಮರಾಗಿರುವ ಈ ನಿರ್ದೇಶಕರು, ಚಿತ್ರ ತಯಾರಿಕೆಯನ್ನು ನೋಡುತ್ತಲೇ ಪ್ರೇಕ್ಷಕನು ತನ್ನ ದೇಶ ಹಾಗೂ ಧರ್ಮದ ಮೇಲಾದಂಥ ದಾಳಿಗಳನ್ನು ಆ ಕ್ಷಣದಲ್ಲಿ ಮರೆಯುವಂತೆ ಮಾಡಿರುತ್ತಾರೆ.1990ರ ದಶಕದಲ್ಲಿ ಖಾನ್ ಸಿನಿಮಾಗಳಲ್ಲಿನ ಹಾಡುಗಳು ಹೇಗೆ ಸಿನಿಮಾದಲ್ಲಿನ ಹಲವು ಅಂಶಗಳನ್ನು ಮರೆಮಾಚುತ್ತಿದ್ದವೋ ಅದೇ ರೀತಿ ಈಗ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದ ತಯಾರಿಕೆಯು ಹಲವು ಅಂಶಗಳನ್ನು ಮರೆಮಾಚುತ್ತಿದೆ.

‘ಮಿರ್ಜಾಪುರ್’ ಸೀರಿಸ್‌ನಲ್ಲಿ ಒಂದು ಹೆಣ್ಣನ್ನು ತಾತ, ಅಪ್ಪ,ಮಗ ಮೂರೂ ಜನರು ಲೈಂಗಿಕವಾಗಿ ಬಳಸಿಕೊಳ್ಳುವ ದೃಶ್ಯ ಒಬ್ಬ ಬ್ರಾಹ್ಮಣ ಮಾಫಿಯಾ ಡಾನ್
ಕುಟುಂಬದ ಮೇಲೆ ಪ್ರೇಕ್ಷಕನು ಯಾವ ರೀತಿಯ ಅಭಿಪ್ರಾಯ ಬೆಳೆಸಿಕೊಳ್ಳಬಹುದೆಂದು ನೀವೇ ಯೋಚಿಸಿ ನೋಡಿ? ಇದೇ ಸೀರಿಸ್ ನಲ್ಲಿ ಡಾನ್ ಕುಟುಂಬದ ಭಂಟನನ್ನಾಗಿ ಒಬ್ಬ ಮುಸಲ್ಮಾನ್ ಹುಡುಗನನ್ನು ತೋರಿಸಲಾಗಿದೆ, ಈತನನ್ನು ಅತ್ಯಂತ ಅಮಾಯಕನನ್ನಾಗಿ ತೋರಿಸುವ ಮೂಲಕ ಮತ್ತದೇ ಹಳೆಯ ಬಾಲಿವುಡ್ ಶೈಲಿಯಲ್ಲಿ ಮುಸಲ್ಮಾನರು ಅಮಾಯಕರೆಂಬಂತೆ ಬಿಂಬಿಸಲಾಗಿದೆ.

‘FOUR MORE SHOTS’ ಎಂಬ ಮತ್ತೊಂದು ವೆಬ್ ಸೀರೀಸ್ ನೆನಪಿರಬಹುದು. ಸೀವಾದದ ಹೆಸರಿನಲ್ಲಿ ಮುಂಬೈ ನಗರದ ನಾಲ್ಕು ಸ್ನೇಹಿತರ ನಡುವೆ ನಡೆಯುವ ಹಲವು ವಿಚಾರಗಳನ್ನು ಇದರಲ್ಲಿ ತೋರಿಸಲಾಗಿದೆ. ಮಾತೆತ್ತಿದರೆ ಬಾರ್‌ಗೆ ಹೋಗುವುದು, ಪಬ್ ಗಳಿಗೆ ಹೋಗುವುದು ಬಿಟ್ಟರೆ ಈ ಸೀರೀಸ್‌ನಲ್ಲಿ ಮತ್ತೇನಿಲ್ಲ. ವೈದ್ಯೋ ನಾರಾಯಣಹರಿಯೆಂಬ ಮಾತಿದೆ, ಆದರೆ ಈ ಸೀರಿಸ್ ನಲ್ಲಿ ಸ್ತ್ರೀರೋಗ ತಜ್ಞನೊಬ್ಬನ ಬಳಿ ತನ್ನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹೋದಾಗ ಆತನೊಂದಿಗೆ ಆಕೆಯು ಹೊಂದುವ ಅಕ್ರಮ ಸಂಬಂಧವನ್ನು ಎಲ್ಲಿಯೂ ಸಹ ಎಗ್ಗಿಲ್ಲದೆ ತೋರಿಸಲಾಗಿದೆ.

ನೋಡಲು ಸುಂದರವಿಲ್ಲದ ಸ್ನೇಹಿತೆಯೊಬ್ಬಳು ತನ್ನ ಆಂತರಿಕ ಸೌಂದರ್ಯವನ್ನು ಬೆತ್ತಲೆಯಾಗಿ ಪೋರ್ನ್ ಸೈಟುಗಳಲ್ಲಿ ತೋರಿಸುವುದು ತಪ್ಪಿಲ್ಲದಂತೆ ತೋರಿಸಲಾಗಿದೆ. ತನ್ನನ್ನು ಮದುವೆಯಾಗಲು ಬಂದಂಥ ಹುಡುಗನ ತಂದೆಯು ಆಕೆಯನ್ನು ಅದೇ ಪೋರ್ನ್ ಸೈಟಿನಲ್ಲಿ ನೋಡಿ ಆಕೆಯನ್ನು ನೇರವಾಗಿ ತನ್ನ
ಜತೆಯೇ ಅಕ್ರಮ ಸಂಬಂಧವಿಟ್ಟುಕೊಳ್ಳಬಹುದೆಂಬ ಆಸೆಯನ್ನು ವ್ಯಕ್ತ ಪಡಿಸುತ್ತಾನೆ. ತನ್ನ ತಂದೆ ತಾಯಿಯರು ಆಕೆಯ ಒಳಿತಿಗಾಗಿ ಸೌಂದರ್ಯವನ್ನು ಹೆಚ್ಚಿಸಿ ಕೊಳ್ಳಲು ಸಣ್ಣಗಾಗು ಎಂದು ಹೇಳುವ ವಿಚಾರವೇ ತಪ್ಪಂತೆ? ಒಬ್ಬ ವಕೀಲೆ ತನ್ನ ಸಂಸಾರದಲ್ಲಿನ ಜಗಳದ ಸಲುವಾಗಿ ಗಂಡನಿಂದ ವಿಚ್ಚೇದನ ಪಡೆದ ನಂತರ ತನ್ನ ಜೀವನದಲ್ಲಿ ತನಗಿಷ್ಟಬಂದವರ ಜತೆ ಲೈಂಗಿಕ ಸಂಬಂಧವನ್ನು ಇರಿಸಿಕೊಳ್ಳುವ ವಿಷಯವನ್ನು ತುಂಬಾ ಸಲೀಸಾಗಿ ತೋರಿಸಲಾಗಿದೆ, ಜಿಮ್
ತರಬೇತುದಾರಳಾಗಿದ್ದ ಸ್ನೇಹಿತೆಯೊಬ್ಬಳು ಸಲಿಂಗಕಾಮಿಯಾಗಿದ್ದು ಬಾಲಿವುಡ್‌ನಲ್ಲಿ ನಟಿಸುವ ಖ್ಯಾತ ನಟಿಯೊಬ್ಬಳ ಜೊತೆ ಹೊಂದುವ ಲೈಂಗಿಕ ಸಂಬಂಧ ವನ್ನೇ ಪ್ರೀತಿಯೆಂಬಂತೆ ತೋರಿಸಲಾಗಿದೆ.

ಅಕ್ರಮ, ಸಕ್ರಮ, ಕುಡಿತ ಇವೆಲ್ಲವೂ ಅವರವರ ವೈಯಕ್ತಿಕ ವಿಚಾರ ಅದರ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ, ಆದರೆ ಅದನ್ನೇ ವೈಭವೀಕರಿಸುವ ರೀತಿಯಲ್ಲಿ ತೋರಿಸುತ್ತಾ ಹೋದರೆ ಇಂದಿನ ಸಮಾಜದ ಬಹುದೊಡ್ಡ ಯುವ ಸಮುದಾಯಕ್ಕೆ ಯಾವ ಸಂದೇಶವನ್ನು ನೀಡಲಾಗುತ್ತಿದೆ? ಸ್ವಾತಂತ್ರ್ಯದ ಹೆಸರಿ ನಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಯುವ ಮೆರವಣಿಗೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ವೇಷ ಭೂಷಣಗಳ ಮೂಲವಾಗುತ್ತಿವೆ ಈ ರೀತಿಯ ವೆಬ್ ಸೀರೀಸ್‌ಗಳು, ಪ್ರತಿಭಟನೆಯ ಸ್ಥಳದಲ್ಲಿಯೇ ಸಾರ್ವಜನಿಕವಾಗಿ ‘ಗಾಂಜಾ’ ಹೊಡೆಯುವ ವಿದ್ಯಾರ್ಥಿಗಳನ್ನು ನೋಡಿದ್ದೇವೆ, ಇವರಿಗೆಲ್ಲ ಇಂಥ
ವೆಬ್ ಸೀರೀಸ್‌ಗಳು ಮತ್ತಷ್ಟು ಉತ್ತೇಜನ ನೀಡುವುದಲ್ಲದೆ ಮತ್ತೇನು ? ಅತಿಯಾದರೆ ಯಾವುದೂ ಸಹ ಒಳ್ಳೆಯದಲ್ಲ.

ತೋರಿಸುವುದೆಲ್ಲವೂ ತಪ್ಪಲ್ಲ. ಹಾಗಂತ ತೀರಾ ಅತಿಯಾಗಿ ಒಂದು ಕೆಟ್ಟ ಉದ್ದೇಶವನ್ನಿಟ್ಟುಕೊಂಡು ತೋರಿಸುವ ಸೀರೀಸ್‌ಗಳ ಮೇಲೆ ಕಾನೂನಿನ ನಿಯಂತ್ರಣ ಬೇಕಾಗಿದೆ. ದೇಶಭಕ್ತಿಯ ಸೂಚಕವಾಗಿಯೂ ಸಹ ಹಲವಾರು ವೆಬ್ ಸೀರೀಸ್‌ಗಳು ಬಂದಿವೆ, ‘”THE FORGOTTEN ARMY’ ಯೆಂಬ ಸುಭಾಷ್ ಚಂದ್ರ ಬೋಸರ ‘ಇಂಡಿಯನ್ ನ್ಯಾಷನಲ್ ಆರ್ಮಿ’ ಕುರಿತ ಸೀರೀಸ್ ಬಂದಿತ್ತು, ಸುಭಾಷರ ಅನುಮಾನಾಸ್ಪದ ಸಾವಿನ ಕುರಿತಂತೆ ‘BOSE DEAD OR ALIVE’ ಸೀರೀಸ್ ಬಂದಿತ್ತು. ಈ ಸೀರೀಸ್ ಶೋಭ ಕಪೂರ್ ಹಾಗೂ ಏಕ್ತಾ ಕಪೂರ್ ನಿರ್ಮಾಣದ ‘ALT BALAJI’ಯಲ್ಲಿ ಬಿಡುಗಡೆಯಾಗಿತ್ತು. ಮೊದಮೊದಲು ಗ್ರಾಹಕ ರನ್ನು ಆಕರ್ಷಿಸಲು ಸುಭಾಷರ ಹೆಸರನ್ನು ಬಳಸಿಕೊಂಡರು, ತದನಂತರ ‘ALT BALAJI’’ಯಲ್ಲಿ ಬಂದಿರುವ ಬಹುತೇಕ ಸೀರೀಸ್ ಗಳು ಅರೆನಗ್ನ ಅಥವಾ ಸಂಪೂರ್ಣ ನಗ್ನ ಚಿತ್ರಗಳೇ.

ದೇಶಭಕ್ತಿಯ ಚಿತ್ರಗಳ ಬಗ್ಗೆ ಹೆಮ್ಮೆ ಪಡುವ ನಾವು, ಅದೇ ಸಮಯದಲ್ಲಿ ದೇಶವಿರೋಧಿ ಅಥವಾ ಧರ್ಮವಿರೋಧಿ ಅಥವಾ ಸಮಾಜಕ್ಕೆ ಆತಂಕ ತರುವ ಚಿತ್ರ ಗಳನ್ನು ಖಂಡಿಸಲೇಬೇಕು. ಚಿತ್ರ ನಿರ್ದೇಶಕ ನಾದವನು ಸಮಾಜದ ಆಗು – ಹೋಗುಗಳನ್ನು ಗಮನಿಸಿ ಯಾರೊಬ್ಬರಿಗೂ ನೋವಾಗದ ರೀತಿಯಲ್ಲಿ ಚಿತ್ರವನ್ನು ಮಾಡಬೇಕು, ನಿರ್ದೇಶಕನ ಜತೆಗೆ ನಾಯಕನಾದವನು ತನ್ನ ಕಥೆಯ ಆಯ್ಕೆಯನ್ನು ಮಾಡುವಾಗ ಅಥವಾ ಒಂದು ದೃಶ್ಯದಲ್ಲಿ ಅಭಿನಯಿಸುವ ಮುನ್ನ ತುಸು ಯೋಚಿಸಿ ನಟನೆ ಮಾಡಬೇಕು.

ಕನ್ನಡ ಕಲಾ ಕಂಠೀರವ ಡಾ.ರಾಜಕುಮಾರ್ ತಮ್ಮ ಚಿತ್ರಗಳಲ್ಲಿ ಎಂದೂ ಸಹ ಧೂಮಪಾನ ಅಥವಾ ಮದ್ಯಪಾನ ಮಾಡುವ ದೃಶ್ಯಗಳಲ್ಲಿ ಅಭಿನಯಿಸಲಿಲ್ಲ, ಅದಕ್ಕಾಗಿಯೇ ಅವರು ಇಂದಿಗೂ ದಕ್ಷಿಣ ಭಾರತದ ಮೇರುನಟರಾಗಿ ನಿಲ್ಲುತ್ತಾರೆ. ಎಲ್ಲಿಯೂ ಸಹ ಅವರು ಒಂದು ಧರ್ಮ ಅಥವಾ ಸಮಾಜಕ್ಕೆ ಅವಮಾನ ಮಾಡುವ ದೃಶ್ಯಗಳಲ್ಲಿ ಅಭಿನಯಿಸಲಿಲ್ಲ ಅಷ್ಟು ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇತ್ತೀಚಿಗೆ ದ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ಅರ್ಚಕರ ತಲೆಯ ಮೇಲೆ ಕಾಲಿಡುವ ಒಂದು ಸನ್ನಿವೇಶದ ಬಗ್ಗೆ ಬಹುದೊಡ್ಡ ಚರ್ಚೆಯಾಗಿತ್ತು.

ಆಂಜನೇಯನ ಹೆಸರಿನಲ್ಲಿ ಸದಾ ತಮ್ಮ ಅಭಿನಯದ ಮೂಲಕ ಜನರ ಮುಂದೆ ಬರುವ ದ್ರುವ ಸರ್ಜಾರಿಗೆ ಈ ರೀತಿಯ ದೃಶ್ಯವನ್ನು ಚಿತ್ರದಲ್ಲಿ ಅಳವಡಿಸ ಬಾರದೆಂಬ ವಿಷಯ ತಿಳಿಯದೇ ಹೋದದ್ದು ವಿಪರ್ಯಾಸ. ಸ್ಪಷ್ಟತೆಯಿಲ್ಲದೆ ರಾಜಕೀಯ ಪಕ್ಷ ಕಟ್ಟಿಕೊಂಡಿರುವ ‘ಪ್ರಜಾಕೀಯ’ದ ಸ್ಥಾಪಕರಾಗಿರುವ ಉಪೇಂದ್ರ ನಿರ್ದೇಶನದ ‘ಎ’ ಸಿನಿಮಾದಲ್ಲಿ ಗಣೇಶನ ಬಗೆಗಿನ ದೃಶ್ಯ ಅಂದು ನಮಗೆ ಖುಷಿ ನೀಡಿತ್ತು, ಆದರೆ ಈಗ ಹಿಂದೆ ತಿರುಗಿ ನೋಡಿದರೆ ಹಿಂದೂಗಳ ಆರಾಧ್ಯ ದೈವನ ಮೇಲಾದಂಥ ಅವಮಾನವಲ್ಲದೆ ಮತ್ತೇನು? ಈ ರೀತಿಯ ಧರ್ಮದ ಮೇಲಿನ ದಾಳಿಗಳು ಇಂದು ನಿನ್ನೆಯದಲ್ಲ, ಎಲ್ಲಾ ಕಾಲದಲ್ಲಿಯೂ ನಡೆದುಕೊಂಡು ಬಂದಿದೆ.

ಈಗಿನ ಸಾಮಾಜಿಕ ಜಾಲತಾಣಗಳು ಹೆಚ್ಚು ಸಕ್ರಿಯವಾಗಿರುವುದರಿಂದ ಹೆಚ್ಚಿನ ವಿಷಯಗಳು ಕ್ಷಣಮಾತ್ರದಲ್ಲಿ ಸಾರ್ವಜನಿಕ ವಲಯದಲ್ಲಿ ಹೊರಬರುತ್ತವೆ. ಕರೋನಾ ಪೂರ್ವದಲ್ಲಿ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಹೆಚ್ಚಾಗಿ ಬರಬೇಕಿತ್ತು, ಆದರೆ ಕರೋನಾ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಕೆಲಸ ಮಾಡು ವವರ ಸಂಖ್ಯೆಯು ಹೆಚ್ಚಾಗಿ ‘ಓಟಿಟಿ’ ವೇದಿಕೆಗಳಿಗೆ ಎಲ್ಲಿಲ್ಲದ ಬೇಡಿಕೆಯಾಯಿತು. ನೋಡನೋಡುತ್ತಲೇ ಹತ್ತಾರು ‘ಓಟಿಟಿ’ ವೇದಿಕೆಗಳು ಹುಟ್ಟಿಕೊಂಡವು. ಇದರಿಂದ ಹಲವರಿಗೆ ಜನರನ್ನು ತಲುಪಲು ಸಹಾಯವಾಯಿತು, ಇದನ್ನೇ ಬಂಡವಾಳಮಾಡಿಕೊಂಡಂಥ ಕೆಲವು ಸಮಾಜ ವಿರೋಧಿ ಗುಂಪುಗಳು ಈ ವೇದಿಕೆ ಗಳ ಮೂಲಕ ಹೆಚ್ಚಿನ ಜನರನ್ನು ತಲುಪುವ ಸಲುವಾಗಿ ತಮ್ಮ ಸಿಂಡಿಕೇಟ್‌ಗಳ ಮೂಲಕ ಹೆಚ್ಚಿನ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳನ್ನು ಜನರ ಮನೆಗೆ ತಲುಪಿಸುವ ಕೆಲಸ ಮಾಡಿದವು.

ಸರಿಯಾದ ಸೆನ್ಸಾರ್ ಇಲ್ಲದ ‘ಓಟಿಟಿ’ ವೇದಿಕೆಗಳನ್ನು ಬಳಸಿಕೊಂಡು ಹಿಂದಿನ ಸಿನಿಮಾಗಳನ್ನೂ ಮೀರಿಸುವ ಚಿತ್ರಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿ ಯಾದವು. ಅವರ ಯಶಸ್ಸು ಹೆಚ್ಚು ದಿನ ನಡೆಯಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಣ್ಣ ಮತ್ತೆ ಬಯಲಾಯಿತು, ‘ಓಟಿಟಿ’ ವೇದಿಕೆಯನ್ನು ಬಳಸಿಕೊಂಡು
ಸಿಂಡಿಕೇಟ್‌ಗಳು ಮಾಡಿದ ಧರ್ಮದ ಮೇಲಿನ ದಾಳಿಗಳು ಒಂದೊಂದಾಗಿಯೇ ಬಯಲಾಗುತ್ತಾ ಹೋದವು. ಸಾಮಾಜಿಕ ಜಾಲತಾಣಗಳಲ್ಲಿ ಇವರುಗಳ ಬಂಡವಾಳ ಬಯಲಾದರೂ, ತಾವು ಮಾಡುವ ಕೆಲಸಗಳನ್ನು ಮಾತ್ರ ಇವರು ನಿಲ್ಲಿಸಿಲ್ಲ. ಇಂದಿಗೂ ಯಾವುದಾದರೊಂದು ಯೋಜನೆಯನ್ನಿಟ್ಟುಕೊಂಡು ಚಿತ್ರ ವನ್ನು ತಯಾರು ಮಾಡುವಲ್ಲಿಯೇ ನಿರತರಾಗಿರುತ್ತಾರೆ. ಇಡೀ ಬಾಲಿವುಡ್ ಚಿತ್ರರಂಗವನ್ನೇ ಅವರಿಸಿಕೊಂಡಂಥ ಕಮ್ಯುನಿಸ್ಟರು ಕಾಲಕ್ಕೆ ತಕ್ಕಂತೆ‘ಓಟಿಟಿ’ ವೇದಿಕೆಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ.

ಥಿಯೇಟರ್ ಸಿನಿಮಾಗಳ ಮೂಲಕ ಸಮಾಜದ ಮೇಲೆ ದಾಳಿ ಡೆಸುತ್ತಿದ್ದಂಥ ಕಮ್ಯುನಿಸ್ಟ್ ಸಿಂಡಿಕೇಟ್ ಅತೀ ಕಡಿಮೆ ದರದಲ್ಲಿ ಜನರಿಗೆ ಸಿಗುತ್ತಿರುವ ‘ಇಂಟರ್ನೆಟ್’ ಬಳಸಿಕೊಂಡು ‘ಓಟಿಟಿ’ ವೇದಿಕೆಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಇಂಥ ಸಿಂಡಿಕೇಟ್‌ಗಳಿಗೆ ಚಿತ್ರಗಳನ್ನು ಮಾಡಲು ಹಣ ಸಂದಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಇವರ ಕೈ ಮೇಲಾಗುತ್ತಿಲ್ಲ, ಕೈಗೊಂಡ ಸುಳ್ಳು ಅಭಿಯಾನ ಯೋಜನೆಗಳೆಲ್ಲವೂ ಹಳ್ಳ ಹಿಡಿದಿವೆ.

ಈಗ ‘ಓಟಿಟಿ’ ವೇದಿಕೆಯನ್ನೂ ಸಹ ಕಾನೂನಿನಡಿಯಲ್ಲಿ ಬಿಟ್ಟರೆ ಇವರ ಪುಂಗಿ ಬಂದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ‘NETFLIX’ನಲ್ಲಿ ‘”FAUDA’ ಎಂಬ ವೆಬ್ ಸೀರೀಸ್ ಇದೆ, ಇದುವರೆಗೂ ಮೂರು Season ನಲ್ಲಿ ಬಂದಿರುವ ಈ ಸೀರೀಸ್ ‘ಹೀಬ್ರೂ, ಭಾಷೆಯಲ್ಲಿದೆ. ರಾಷ್ಟ್ರೀಯತೆಯ ವಿಚಾರ ದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಈ ಸೀರೀಸ್ ನಿರ್ಮಾಣ ಮಾಡಲಾಗಿದೆ. ತನ್ನ ಪ್ರಜೆಗಳ ತಂಟೆಗೆ ಬರುವ ಪ್ಯಾಲಿಸ್ತೇನಿ ಉಗ್ರರನ್ನು ಹುಡುಕಿ ಕೊಲ್ಲುವ ಕಥಾಹಂದರವನ್ನು ಹೊಂದಿದೆ. ಇಸ್ರೇಲಿ ಬೇಹುಗಾರಿಕಾ ಸಂಸ್ಥೆ ‘ಮೊಸಾದ್’ ಹಾಗೂ ‘ಇಸ್ರೇಲಿ ಸೈನ್ಯ’ದ ರಾಷ್ಟ್ರಭಕ್ತಿಯನ್ನು ಇಡೀ ದೇಶಕ್ಕೆ ಸಾರುವ ಈ
ವೆಬ್ ಸೀರೀಸ್ ಅದ್ಭುತವಾಗಿ ಮೂಡಿಬಂದಿದೆ. ಅಪ್ಪಿ ತಪ್ಪಿ ಇಸ್ರೇಲಿನಲ್ಲಿ ಭಾರತದಲ್ಲಿನ ‘ಓಟಿಟಿ’ ವೇದಿಕೆಯ ಮೇಲೆ ತೆರೆಕಾಣುವ ಚಿತ್ರಗಳೇನಾದರೂ ತೆರೆ ಕಂಡರೆ ಮುಲಾಜಿಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಒದ್ದು ಒಳಗಡೆ ಹಾಕುತ್ತಾರೆ.

ಭಾರತದಲ್ಲಿರುವ ಕಮ್ಯುನಿಸ್ಟ್ ಮನಸ್ಥಿತಿಯ ಕೆಲವು ನಿರ್ದೇಶಕರುಗಳು, ನಟರು ‘ಓಟಿಟಿ’ ವೇದಿಕೆಯ ಮೂಲಕ ಧರ್ಮವಿರೋಧಿ ಚಿತ್ರಗಳನ್ನು ಜನರಿಗೆ ತೋರಿಸಿ, ‘”Brainwash’ ಮಾಡುವಲ್ಲಿ ನಿರತರಾಗಿzರೆ. ಆಗಲೇ ಹೇಳಿದ ಹಾಗೆ ಇವರ ಚಿತ್ರಗಳ ಹಿಂದಿನ ಮುಖವಾಡ ಸಾಮಾಜಿಕ ಜಾಲತಾಣಗಳಲ್ಲಿ ಬಯಲಾಗು ತ್ತಿರುವುದು ಇವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಅಂದು ಇಂದು ಮುಂದು, ಎಂದೆಂದೂ ಸಹ ಇಂಥ ಮನಸ್ಥಿತಿ ಯವರು ದೇಶದ ಪರವಾಗಿ ನಿಂತಿರಲಿಲ್ಲ, ನಿಲ್ಲುವುದೂ ಇಲ್ಲ. ರಾಜಕೀಯವಾಗಿ ಕಮ್ಯುನಿಸ್ಟರು ಸರ್ವನಾಶವಾಗಿದ್ದರೂ ಸಹ ಸಮಾಜದ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ತಾವು ಮಾಡಬೇಕಾದಂಥ ಕೆಲಸಗಳನೆಲ್ಲವನ್ನೂ ಮಾಡುತ್ತಲೇ ಬಂದಿದ್ದಾರೆ.

ಇವರಿಗೆ ಅಧಿಕಾರ ಸಿಗುವುದಿಲ್ಲ, ಜನರು ಇವರ ಸಿದ್ಧಾಂತವನ್ನು ಬಹಿಷ್ಕರಿಸಿ ಮನೆಗೆ ಕಳುಹಿಸಿಯಾಗಿದೆ. ಆದರೆ ಇವರು ಕುಳಿತಿರುವ ಆಯಕಟ್ಟಿನ ಸ್ಥಳಗಳಿಂದ ಮಾಡಬಾರದ ಹಾನಿಯನ್ನು ಮಾಡುತ್ತಲೇ ಬರುತ್ತಿದ್ದಾರೆ. ಓಟಿಟಿಯಂಥ ವೇದಿಕೆಯಲ್ಲಿ ಇವರ ಮನಸ್ಥಿತಿಯವರು ಮಾಡುತ್ತಿರುವ ಧರ್ಮದ ಮೇಲಿನ ಹಾನಿ ಹಾಗೂ ರಾಷ್ಟ್ರವಿರೋಧಿ ಚಿತ್ರಗಳ ವಿರುದ್ಧ ಕಠಿಣ ಕಾನೂನಿನ ಅವಶ್ಯಕತೆ ಶೀಘ್ರವಾಗಿ ಚಾಲ್ತಿಗೆ ಬರಬೇಕಿದೆ, ಇಂಥ ಧರ್ಮವಿರೋಧಿ ಹಾಗೂ ದೇಶವಿರೋಧಿ ಮನಸ್ಥಿತಿಯವರಿಗೆ ಸಿಗುವ ಪ್ರತಿಯೊಂದು ಅವಕಾಶವನ್ನೂ ಮೊಳಕೆಯಲ್ಲಿಯೇ ಹಾಕಬೇಕಾದೆ.