Sunday, 15th December 2024

ಕರೋನಾ ವಿಚಾರದಲ್ಲಿ ತಪ್ಪುಗಳು ಮರುಕಳಿಸದಿರಲಿ

ಪ್ರಚಲಿತ

ಡಾ.ಕೆ.ಸುಧಾಕರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು

ಇತ್ತೀಚೆಗೆ ಯುಗಾದಿ ಹಬ್ಬದ ಮೂಲಕ ನಾವೆಲ್ಲರೂ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷದ ತಪ್ಪುಗಳು ಈ ವರ್ಷ ಮರುಕಳಿಸಬಾರದು ಎಂದು ಪ್ರತಿಜ್ಞೆ ತೊಡುವುದು ಹೊಸ ವರ್ಷದ ವಾಡಿಕೆ. ಆದರೆ ಅದೇ ತಪ್ಪುಗಳನ್ನು ಮತ್ತೆ ಎಸಗಿ, ‘ಅಯ್ಯೋ! ಹೀಗೆ ಮಾಡಬಾರದಿತ್ತು’ ಎಂದು ಹಳಿದುಕೊಳ್ಳುವುದೂ ವಾಡಿಕೆಯಾಗಿಬಿಟ್ಟಿದೆ.

ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ನಿರೀಕ್ಷೆಗೂ ಮೀರಿ ವೇಗವಾಗಿ ಎದ್ದು ಬಾಧಿಸುತ್ತಿರುವ ಸಮಯದಲ್ಲಿ, ಹಿಂದಿನ ತಪ್ಪುಗಳನ್ನೇ ಮತ್ತೆ ಮಾಡುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವ ಅನಿವಾರ್ಯವಿದೆ. ಕಳೆದ ವರ್ಷ ಕರೋನಾ ಎಂಬ ವಿಚಿತ್ರ ಹೆಸರಿನ ರೋಗ ಪತ್ತೆಯಾದಾಗ, ಯಾವ ಕ್ರಮ ವಹಿಸಬೇಕು, ಆರೋಗ್ಯ ಮೂಲಸೌಕರ್ಯವನ್ನು ಹೇಗೆ ಸಿದ್ಧಪಡಿಸಬೇಕು ಎಂಬ ಸ್ಪಷ್ಟ ಚಿತ್ರಣವಿರಲಿಲ್ಲ. ಆದರೆ ಈ ಬಾರಿ ಸೋಂಕನ್ನು ಹೇಗೆ ನಿರ್ವಹಿಸಬೇಕೆಂಬ ಪಾಠವನ್ನು ನಾವು ಕಲಿತಿದ್ದೇವೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ, ಶೇ.7ರಷ್ಟು ಪರೀಕ್ಷೆ ಆರ್‌ಟಿಪಿಸಿಆರ್ ಆಗಿರಬೇಕೆಂದು ಸೂಚಿಸಲಾಗಿತ್ತು. ಆದರೆ ನಮ್ಮ ಸರಕಾರ ಈವರೆಗೆ ನಡೆಸಿದ ಪರೀಕ್ಷೆಯಲ್ಲಿ, ಶೇ.95ರಷ್ಟು ಪರೀಕ್ಷೆ ಆರ್‌ಟಿಪಿಸಿಆರ್ ಆಗಿದೆ. ಅಲ್ಲದೆ, ಪ್ರತಿದಿನ ಸರಾಸರಿ ಒಂದು ಲಕ್ಷ ಕರೋನಾ ಪರೀಕ್ಷೆ ಮಾಡುತ್ತಿದ್ದು, ಈಗ ನಿತ್ಯದ ಗುರಿಯನ್ನು 3 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಚಿಕಿತ್ಸೆ ವ್ಯವಸ್ಥೆ: ಕಳೆದ ವರ್ಷ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಬಗ್ಗೆ ದೂರು ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಸುಪರ್ದಿಗೆ ಬರುವ ಆಸ್ಪತ್ರೆಗಳಲ್ಲಿ, ಕೋವಿಡ್‌ಗೆ ಮೀಸಲಿಡುವ ಹಾಸಿಗೆ ಸಂಖ್ಯೆ ಹೆಚ್ಚಿಸಲಾಗಿದೆ. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು 79,514 ಹಾಸಿಗೆಗಳಿದ್ದು, 42,725 ಜನರಲ್ ಹಾಸಿಗೆಗಳಾಗಿವೆ. ಈ ಪೈಕಿ 30,738 ಹಾಸಿಗೆಗಳಿಗೆ ಆಮ್ಲಜನಕ ಅಳವಡಿಸಲಾಗಿದೆ.

3144 ಐಸಿಯು ಹಾಸಿಗೆ ಹಾಗೂ 2907 ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳಿವೆ. ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಕರೋನಾ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಸೋಂಕಿತರಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 300 ಹಾಸಿಗೆ ಕೋವಿಡ್‌ಗೆ ಮೀಸಲಿದ್ದು, ಇದನ್ನು 500ಕ್ಕೆ ಏರಿಸಲು ಸೂಚಿಸಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 300, ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 150, ಘೋಷಾ ಆಸ್ಪತ್ರೆಯಲ್ಲಿ 100, ಕೆ.ಸಿ. ಜನರಲ್‌ನಲ್ಲಿ 100 ಹಾಸಿಗೆಗಳನ್ನು ಕರೋನಾ ಸೋಂಕಿತರಿಗೆ ಮೀಸಲಿಡಲು ನಿರ್ಧರಿಸಲಾಗಿದೆ.

ಅಲ್ಲದೆ, ಖಾಸಗಿ ಆಸ್ಪತ್ರೆಗಳಿಗೂ ಶೇ.50.ರಷ್ಟು ಹಾಸಿಗೆ ಮೀಸಲಿಡಲು ಸೂಚಿಸಲಾಗಿದೆ. ಈ ಎರಡನೇ ಅಲೆಯ ಸಮಯದಲ್ಲಿ, ಶೇ.95ರಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಕಾರ್ಪೊ ರೇಟ್ ಆಸ್ಪತ್ರೆ-ಹೋಟೆಲ್‌ಗಳ ಸಹಯೋಗದಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಸೂಚಿಸಲಾಗಿದೆ. ರಾಜ್ಯ ಸರಕಾರ ಈಗಾಗಲೇ ರೋಗಿಗಳಿಗೆ ಆಮ್ಲಜನಕದ ವ್ಯವಸ್ಥೆ ಕಲ್ಪಿಸುವ ಕಡೆಗೂ ಅಗತ್ಯ ಗಮನಹರಿಸಿದೆ.

ಲಸಿಕೆ ಸಂಜೀವಿನಿ ಜೀವಕೆ: ಸೋಂಕು ನಿಯಂತ್ರಣ ಹಾಗೂ ಸಾವು ತಪ್ಪಿಸುವ ಮತ್ತೊಂದು ಉತ್ತಮ ಕ್ರಮ ಲಸಿಕೆ ಅಭಿಯಾನ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸ್ವತಃ ಲಸಿಕೆ ಪಡೆದು ಜನರಿಗೆ ಸ್ಪೂರ್ತಿ ನೀಡಿzರೆ. ರಾಜ್ಯದಲ್ಲಿ ಲಸಿಕೆಯ ಕೊರತೆ ಇಲ್ಲ. ಕೇಂದ್ರ ಸರಕಾರ ಕಾಲಕಾಲಕ್ಕೆ ಅಗತ್ಯವಾದಷ್ಟು ಲಸಿಕೆಯನ್ನು ರಾಜ್ಯಕ್ಕೆ ಪೂರೈಸುತ್ತಿದೆ. ಈವರೆಗೆ ರಾಜ್ಯದಲ್ಲಿ 61 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಜನರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ
ಬಂದು ಲಸಿಕೆ ಪಡೆಯಬೇಕೆಂದು ನಮ್ಮ ಮನವಿ.

ಮೊದಲ ಅಲೆಯಲ್ಲಿ ಮರಣ ಪ್ರಮಾಣ ಶೇ.1.24 ರಷ್ಟಿದ್ದರೆ, ಈಗ 0.49ರಷ್ಟಿದೆ. ಇದನ್ನು ಇನ್ನಷ್ಟು ಇಳಿಸಲು ಸರಕಾರ ಕ್ರಮ ವಹಿಸಿದೆ. ಇದಕ್ಕೆ ತಕ್ಕಂತೆ ಸರಕಾರ ಕೂಡ ಜನರಿಂದ ಸಹಕಾರ ಬಯಸುತ್ತದೆ. ಮಾಸ್ಕ್‌ ಧರಿಸುವುದು, ಭೌತಿಕ ಅಂತರ, ಶುಚಿತ್ವ ಮೊದಲಾದ ಕೋವಿಡ್ ಸುರಕ್ಷತಾ ಕ್ರಮ ವಹಿಸುವುದೇ ಸಾರ್ವಜನಿಕರು ಸರಕಾರಕ್ಕೆ ನೀಡಬಹುದಾದ ಸಹಕಾರ. ಈ ಸಹಕಾರ ತತ್ವದಿಂದಲೇ ಈ ಶತಮಾನದ ದೊಡ್ಡ ಸಾಂಕ್ರಾಮಿಕವನ್ನು ನಿವಾರಿಸೋಣ.