Saturday, 14th December 2024

ಅಗ್ರ ಕ್ರೀಡಾಕೂಟದಲ್ಲಿ ದಿಗ್ಗಜನಾಗಿ ಮೆರೆಯಲಿ ಭಾರತ

ಅಭಿಮತ

ಭಾರತಿ . ಕೊಪ್ಪ

bharathikoppa101@gmail.com

ಮನುಷ್ಯನು ಅಲ್ಪ ತೃಪ್ತನಾಗಿರಬಾರದು. ಗುರಿ ನಿತ್ಯ ನಿರಂತರವಾಗಿರಬೇಕು. ಟೊಕಿಯೋ ಒಲಿಂಪಿಕ್ಸ್’ನಲ್ಲಿ ನಡೆಸಿದ 7 ಪದಕಗಳ ಬೇಟೆಯನ್ನು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ದ್ವಿಗುಣವಾಗುವತ್ತ ಚಿತ್ತ ಬೆಳೆಸಬೇಕಿದೆ. ಈ ಹರ್ಷೋದ್ಗಾರವು ಇಲ್ಲಿಯೇ ಮುಕ್ತಾಯಗೊಳ್ಳದೆ, ನಮ್ಮ ಕ್ರೀಡಾಪಟುಗಳನ್ನು ಇಂದಿನಿಂದಲೇ ತರಬೇತುಗೊಳಿಸಿ, ಮುಂದಿನ ಒಲಿಂಪಿಕ್ಸ್ಗೆ ಆತ್ಮವಿಶ್ವಾಸದಿಂದ ಕ್ರೀಡಾಪಟುಗಳನ್ನು ತಯಾರುಗೊಳಿಸಬೇಕಿದೆ.

ಚ ಕ್ ದೇ… ಚಕ್ ದೇ ಇಂಡಿಯಾ’ ಎಂಬ ಭಾರತಾಂಬೆಯ ಸಮಸ್ತ ಕುಡಿಗಳ ಹೃದಯಾಂತರಾಳದ ಹಾರೈಕೆ, ಪ್ರಾರ್ಥನೆ ಈ ಬಾರಿ ಟೊಕಿಯೋ ಒಲಿಂಪಿಕ್ಸ್’ನತ್ತ ಪಯಣ ಬೆಳೆಸಿದ 119 ಸ್ಪರ್ಧಿಗಳ ಮೇಲಿತ್ತು. ಆ ಪ್ರಾರ್ಥನೆ ಏಳು ಪದಕಗಳಿಗೆ ಭಾರತೀಯ ಕ್ರೀಡಾಪಟುಗಳು ಕೊರಳೊಡ್ಡುವುದರಲ್ಲಿ ಕೃತಾರ್ಥತೆ ಕಾಣು ವಂತಾಯಿತು. ಕ್ರೀಡಾಪಟುಗಳ ಹತ್ತಾರು ವರ್ಷಗಳ ಸತತ ಪರಿಶ್ರಮ, ಕನಸು, ಛಲ, ಧ್ಯೇಯ ಇವೆಲ್ಲದರ ಅನಾವರಣಕ್ಕಿರುವ ಅದ್ಭುತ ವೇದಿಕೆಯೇ ಒಲಿಂಪಿಕ್ಸ್. ಹಾಗಾಗಿ ಕ್ರೀಡಾಪಟುಗಳಿಗೆ ಪದಕ ಗೆಲ್ಲುವ ತುಡಿತ ಮತ್ತು ಭಾರತೀಯರ ಮನದಂಗಳದಲ್ಲಿ ಸ್ಪರ್ಧಿಗಳು ಗೆದ್ದು, ದೇಶಕ್ಕೆ ಕೀರ್ತಿ ತರಬೇಕೆಂಬ ಮಿಡಿತ ಸದಾ ಹಸಿರಾಗಿದ್ದಿರುತ್ತದೆ.

ಒಲಿಂಪಿಕ್ಸ್’ನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, 1896ರಲ್ಲಿ ಮೊತ್ತಮೊದಲ ಆಧುನಿಕ ಒಲಿಪಿಂಕ್ ಕ್ರೀಡಾಕೂಟವನ್ನು ಗ್ರೀಕ್‌ನ ಅಥೆ ನಗರದಲ್ಲಿ ಆಯೋಜಿಸಲಾಯಿತು. ಆದರೆ ಭಾರತವು 1900ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಯಿತು. ಆ ವರ್ಷದ ಒಲಿಂಪಿಕ್ಸ್’ನಲ್ಲಿ ನಮ್ಮ ಭಾರತದಿಂದ ಭಾಗವಹಿಸಿದ್ದ ಏಕಮಾತ್ರ ಕ್ರೀಡಾಪಟು ಎಂದರೆ ಅದು ನಾರ್ಮನ್ ಪ್ರಿಟ್ಟರ್ಡ್‌ರವರು.ಅವರು ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾಗವಹಿಸಿ, 200 ಮೀಟರ್ ಓಟ ಮತ್ತು ೨೦೦ ಮೀಟರ್ ಹರ್ಡಲ್ಸನಲ್ಲಿ ಸ್ಪರ್ಧಿಸುವ ಮೂಲಕ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು. ಅದಾದ ನಂತರ 1920ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತವು ಮೊದಲ ಬಾರಿಗೆ ಗುಂಪು ಸ್ಪರ್ಧೆಯೊಂದಕ್ಕೆ ತಂಡವನ್ನು ಕಳುಹಿಸಿತ್ತು.

ಅಂದಿನಿಂದ ಒಲಿಂಪಿಕ್ಸ್ ಎಂಬ ಕ್ರೀಡಾ ಸಾಮ್ರಾಜ್ಯದಲ್ಲಿ, ಪದಕಕ್ಕಾಗಿ ಪ್ರಾರಂಭವಾದ ಭಾರತೀಯ ಸ್ಪರ್ಧಿಗಳ ಕಸರತ್ತು, ಇಂದೂ ಕೂಡ ಪದಕಗಳ ಬೇಟೆಯಲ್ಲಿ ಆಮೆ ವೇಗದಂತೆ ಮುಂದುವರಿಯುತ್ತಿದೆ. ಒಲಿಂಪಿಕ್ ಈ ಸುದೀರ್ಘ ಪಯಣದಲ್ಲಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಸಾಧನೆ ಕಡಿಮೆ ಇದೆ. ಪ್ರಾರಂಭಿಕ ವರ್ಷಗಳಲ್ಲಿ ಭಾರತದ ಪುರುಷರ ಹಾಕಿ ತಂಡವು ಬಂಗಾರದ ಪದಕ್ಕೆ ಮುತ್ತಿಕ್ಕಿದ್ದರಾದರೂ, ಇತ್ತೀಚಿನ ವರ್ಷಗಳಲ್ಲಿ ಪುರುಷರ ಹಾಕಿ ತಂಡವು ಆ ಮಟ್ಟದ ಸಾಧನೆಯನ್ನು ತೋರುವಲ್ಲಿ ಹಿನ್ನಡೆ ಅನುಭವಿಸಿತು.ಈ ನಿಟ್ಟಿನಲ್ಲಿ ಪದಕಗಳ ಬರವನ್ನು ನೀಗಿಸಿ, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತೀಯ ಪುರುಷರ ಹಾಕಿ ತಂಡಕ್ಕೊಂದು ಸಲಾಂ ಸಲ್ಲಲೇಬೇಕು.

ವೈಯಕ್ತಿಕ ವಿಭಾಗದಲ್ಲಿ 1996 ರಲ್ಲಿ ಲಿಯಾಂಡರ್ ಪೇಸ್ ಕಂಚಿನ ಪದಕವನ್ನು ಗೆಲ್ಲುವವರೆಗೂ ವೈಯಕ್ತಿಕ ವಿಭಾಗದಲ್ಲಿ ಸುದೀರ್ಘ ಕಾಲ ಪದಕಗಳ ಖಾತೆ ತೆರೆದಿರಲಿಲ್ಲ. 2000ದ ಇಸವಿಯಲ್ಲಿ ನಡೆದ ಒಲಿಂಪಿಕ್ಸ್’ನಲ್ಲಿ ಕರ್ಣಂ ಮಶ್ವರಿಯವರು ವೇಟ್‌ಲಿಫ್ಟಿಂಗ್‌ನ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಮಹಿಳಾ ಕ್ರೀಡಾಶಕ್ತಿಯ ಸ್ಫೂರ್ತಿ ಎಂದೆನಿಸಿದರು. ಶೂಟರ್ ಅಭಿನವ್ ಬಿಂದ್ರಾ, 2008 ರಲ್ಲಿ ವೈಯಕ್ತಿಕ ವಿಭಾಗದಲ್ಲಿ ಸ್ವರ್ಣ ಗೆದ್ದ ಮೇಲೆ ಈ ಬಾರಿ ನೀರಜ್ ಚೋಪ್ರಾರವರು ಚಿನ್ನದ ಬೇಟೆಯಾಡುವವರೆಗೂ ಸ್ವರ್ಣದ ಕನಸು, ನನಸಾಗಿರಲಿಲ್ಲ. ಕರೋನಾದ ಕರಿನೆರಳಿನಲ್ಲಿ ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ ಭಾರತೀಯರ ಪಾಲಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವ ಅಂಗಳವಾಗಿ ರೂಪುಗೊಂಡಿತು. ಭಾರತವು ತನ್ನ 121 ವರ್ಷಗಳ ಒಲಿಂಪಿಕ್ಸ್ ಯಾನದಲ್ಲಿ ಅಥ್ಲೆಟಿಕ್ಸ್’ನಲ್ಲಿ ಮೊದಲ ಬಾರಿ ಚಿನ್ನದ ಪದಕವನ್ನು ಗೆದ್ದು,ಜನಗಣಮನವನ್ನು ಸಮಾರೋಪದ ವೇದಿಕೆಯಲ್ಲಿ ಮೊಳಗಿಸಲು ಕೇವಲ 23 ವರ್ಷ ಹರೆಯದ ಯುವ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಕಾರಣರಾದರು. ಅವರ ಸ್ವರ್ಣದ ಗೆಲವು ಕೇವಲ ಕ್ರೀಡಾಕೂಟದ ಗೆಲುವಾಗಿರಲಿಲ್ಲ.

ಅದು ಸಮಸ್ತ ಭಾರತೀಯ ಕ್ರೀಡಾಭಿಮಾನರ ಗೆಲುವಾಗಿತ್ತೆಂಬುದರಲ್ಲಿ ಎರಡು ಮಾತಿಲ್ಲ. ಕ್ರೀಡಾಕೂಟಗಳೆಂದರೆ ಏಳು ಬೀಳುಗಳ ಸಹಜ. ಈ ಏಳುಬೀಳುಗಳ ತೂಗುಯ್ಯಾಲೆಯಲ್ಲಿ ಈ ಬಾರಿ ಟೊಕಿಯೋದಲ್ಲಿ ಭಾರತವು 7 ಪದಕಗಳನ್ನು ಮುಡಿಗೇರಿಸಿಕೊಂಡಿರುವುದು ಕಡಿಮೆ ಸಾಧನೆಯೇನಲ್ಲ. ಭಾರತದ ಈವರೆಗಿನ ಒಲಿಂಪಿಕ್ಸ್ ಹಾದಿಯಲ್ಲಿ ಇದು ಹೆಚ್ಚು ಪದಕಗಳ ಬೇಟೆಯಾಗಿರುವುದು ಸಂತೋಷದ ಸಂಗತಿ. ಆದರೆ ಇತರ ರಾಷ್ಟ್ರಗಳ ಸಾಧನೆಗೆ ಹೋಲಿಸಿದರೆ, ನಾವೇ ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಅಧಿಕ ಮಾನವ ಸಂಪನ್ಮೂಲವನ್ನು ಹೊಂದಿರುವ ರಾಷ್ಟ್ರ ನಮ್ಮ ಭಾರತ. ಮಾನವ ಶಕ್ತಿಯನ್ನು ಸಾಧನೆಯ ಉತ್ಕೃಷ್ಟ ಮಟ್ಟಕ್ಕೆ ಸಿದ್ಧಪಡಿಸಬೇಕಾದ ದಾರಿಗಳನ್ನು ಕಂಡುಕೊಳ್ಳಬೇಕಿದೆ. ಕ್ರೀಡೆಯಂತಹ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸುದೀರ್ಘ ಪ್ರಯತ್ನ ಬೇಕಾಗುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ತರಬೇತಿ, ನೆರವು, ಮೂಲಸೌಕರ್ಯವನ್ನು ಒದಗಿಸಬೇಕಾಗುತ್ತದೆ. ಮೂಲ ಸೌಲಭ್ಯ ಎಂದರೆ ಕ್ರೀಡಾಂಗಣ, ಕ್ರೀಡಾಪಟುಗಳಿಗೆ ವಸತಿ ಗೃಹದ ವ್ಯವಸ್ಥೆ, ಶಾಲೆ, ತರಬೇತಿ ಕೇಂದ್ರ ಗಳ ಸ್ಥಾಪನೆಯಷ್ಟೇ ಅಲ್ಲದೇ ಅಗತ್ಯ ಪರಿಕರಗಳನ್ನು ಒದಗಿಸುವುದರೊಂದಿಗೆ ಕ್ರೀಡಾ ಚಟುವಟಿಕೆ ಗಳಿಗೆ ಗರಿಷ್ಠ ಆರ್ಥಿಕ ಸೌಲಭ್ಯವನ್ನೂ ನೀಡಿಬೇಕಿದೆ.

ಕ್ರೀಡೆಯೂ ಕೌಶಲ್ಯವನ್ನು ಅನಾವರಣ ಮಾಡುವ ಕ್ಷೇತ್ರವಾದುದರಿಂದ ಯಾವುದೇ ಪ್ರತಿಭೆಯ ಆಯ್ಕೆಯಲ್ಲಿ ಯಾರದೂ ಹಸ್ತಕ್ಷೇಪ ಇರಬಾರದು. ಅಂತೆಯೇ ಯಾವೂದೇ ಪೂರ್ವಾಗ್ರಹ ಇರಬಾರದು ಎಂಬುದು ಕೂಡ ಅತಿ ಮುಖ್ಯ. ಯಾವುದೇ ಕ್ರೀಡಾಕೂಟಕ್ಕೆ ಸ್ಪಕ್ಸ್ಗಳನ್ನು ಆಯ್ಕೆ ಮಾಡುವಾಗ ಪದಕ ಬೇಟೆಯೇ ಗುರಿ ಯಾಗಬೇಕೇ ಹೊರತು, ಅನ್ಯ ಭ್ರಷ್ಟ ಯೋಚನೆಗಳು ಅವರತ್ತ ಸುಳಿಯಲೇಬಾರದು.

ಮನುಷ್ಯನು ಅಲ್ಪ ತೃಪ್ತನಾಗಿರಬಾರದು. ಗುರಿ ನಿತ್ಯ ನಿರಂತರವಾಗಿರಬೇಕು. ಟೊಕಿಯೋ ಒಲಿಂಪಿಕ್ಸ್’ನಲ್ಲಿ ನಡೆಸಿದ 7 ಪದಕಗಳ ಬೇಟೆಯನ್ನು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ದ್ವಿಗುಣವಾಗುವತ್ತ ಚಿತ್ತ ಬೆಳೆಸಬೇಕಿದೆ. ಈ ಹರ್ಷೋದ್ಗಾರವು ಇಲ್ಲಿಯೇ ಮುಕ್ತಾಯಗೊಳ್ಳದೆ, ನಮ್ಮ ಕ್ರೀಡಾಪಟುಗಳನ್ನು ಇಂದಿ ನಿಂದಲೇ ತರಬೇತುಗೊಳಿಸಿ, ಮುಂದಿನ ಒಲಿಂಪಿಕ್ಸ್’ಗೆ ಆತ್ಮವಿಶ್ವಾಸದಿಂದ ಕ್ರೀಡಾಪಟುಗಳನ್ನು ತಯಾರುಗೊಳಿಸಬೇಕಿದೆ.

ನೀರಜ್‌ರಂತಹ ಪ್ರತಿಭೆಗಳಿಗೆ ನೀರೆರೆದು ಪೋಷಿಸಲು ಎಳವೆಯಲ್ಲಿಯೇ ನಾವು ಮಕ್ಕಳಲ್ಲಿನ ಆಸಕ್ತಿಯನ್ನು ಗುರುತಿಸಬೇಕಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಕೇವಲ ಅಂಕಗಳಿಕೆಯ ಶಿಕ್ಷಣಕ್ಕೆ ಒತ್ತು ನೀಡದೇ, ಮಕ್ಕಳ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ, ಸೂಕ್ತ ವೇದಿಕೆಯನ್ನು ಕಲ್ಪಿಸಬೇಕಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ವಾರದಲ್ಲಿ ಎರಡೋ ನಾಲ್ಕೋ ಅವಧಿಗಳನ್ನು ಮಾತ್ರ ದೈಹಿಕ ಶಿಕ್ಷಣಕ್ಕೆ ಮೀಸಲಿಡುತ್ತಿದ್ದೇವೆ. ಈ ಪರಿಪಾಠ ಬದಲಾಗಿ, ಶಾಲಾ ಹಂತದಲ್ಲಿಯೇ ಉತ್ತಮ ಕ್ರೀಡಾಂಗಣ,ದೈಹಿಕ ಶಿಕ್ಷಣ,ಶಿಕ್ಷಕರ ನೇಮಕಾತಿ, ಸೂಕ್ತ ಪರಿಕರಗಳನ್ನು ಒದಗಿಸುವತ್ತ ಗಮನ ಹರಿಸಬೇಕಿದೆ.

ಅಧಿಕ ಅಂಕಗಳನ್ನು ಗಳಿಸಿದವರಿಗೆ ಸಿಗುವ ಪ್ರಾಧಾನ್ಯತೆ ಶಾಲೆಗಳಲ್ಲಿ ಇಂದು ಆಟೋಟಗಳಲ್ಲಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲದಿರುವುದು ನಿಜಕ್ಕೂ ಖೇದಕರ ಸಂಗತಿ.ಪಾಲಕರ ಮತ್ತು ಶಿಕ್ಷಕರ ಈ ಮನಸ್ಥಿತಿ ಬದಲಾಗಬೇಕಿದೆ. ಒಬ್ಬೊಬ್ಬರಿಗೆ ಒಂದೊಂದು ಕ್ರೀಡೆ ಇಷ್ಟವಾಗುತ್ತದೆ. ಆದರೂ ಈ ವರೆಗಿನ ಒಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಬೇಟೆಯ ಕ್ರೀಡೆಗಳನ್ನು ಗಮನಿಸಿದರೆ, ಭಾರತಾಂಬೆಯ ಮಕ್ಕಳು ಪಾರಂಪರಿಕ ನಂಟು ಹೊಂದಿರುವ ಕ್ರೀಡೆಗಳಲ್ಲಿಯೇ ಹೆಚ್ಚಿನ ಸಾಧನೆಯನ್ನು ತೋರಿದ್ದಾರೆ.

ಜಾವಲಿನ್, ಶೂಟಿಂಗ್, ಕುಸ್ತಿ, ವೇಟ್ ಲಿಫ್ಟಿಂಗ್ ಇವೆಲ್ಲವೂ ಈ ಭಾರತೀಯ ಮಣ್ಣಿನಲ್ಲಿ ಒಂದ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದ್ದ ಬಿಲ್ಲುಗಾರಿಕೆ, ಈಟಿಯ ಮೂಲಕ ಬೇಟೆಯಾಡುವುದು, ಗರಡಿಮನೆಯ ಕುಸ್ತಿ, ಭಾರ ಎತ್ತುವುದು ಈ ಎಲ್ಲವುದರೊಂದಿಗೆ ತುಸು ಬೆಸೆದುಕೊಂಡಿದೆ ಎಂಬುದರಲ್ಲಿ ತಪ್ಪಿಲ್ಲ. ಅಂದರೆ ಈ ಮಣ್ಣಿನ ಗುಣ, ಪಾರಂಪರಿಕವಾಗಿ ಬಂದ ಕೆಲವು ಕ್ರೀಡೆಗಳಿಗೆ ಹೆಚ್ಚು ಉತ್ತೇಜನವನ್ನು ನೀಡಿದರೆ, ಹೆಚ್ಚಿನ ಸಾಧನೆಯತ್ತ ಮುಖಮಾಡಬಹುದಾಗಿದೆ. ದೇಶದ ರಾಷ್ಟ್ರೀಯ ಕ್ರೀಡೆಯಾದ ಹಾಕಿ ತಂಡವು ಈ ಬಾರಿಯ ಒಲಂಪಿಕ್ಸ್’ನಲ್ಲಿ ಮಾಡಿದ ಸಾಧನೆಯು ಅಭಿನಂದನಾರ್ಹ.

ಈ ನಿಟ್ಟಿನಲ್ಲಿ ಕ್ರಿಕೆಟ್ ನಂತಹ ಆಟಕ್ಕೆ ಭಾರತೀಯರು ನೈತಿಕ ಬೆಂಬಲವನ್ನು ನೀಡಿದಷ್ಟೇ ಹಾಕಿ ಆಟಕ್ಕೂ ಬೆಂಬಲ ನೀಡಿದರೆ, ಹಾಕಿ ಆಟಗಾರರಿಗೆ ಸ್ಫೂರ್ತಿ ಸಿಕ್ಕಂತಾಗುತ್ತದೆ. ‘ಆಡಿ ಬಾ ನನ್ನ ಕಂದ,ಅಂಗಾಲ ತೊಳೆದೇನ’ ಎಂಬ ಜನಪದ ತಾಯಿಯ ಪ್ರೋತ್ಸಾಹದ ಸೊಲ್ಲುಗಳಂತೆ,ಆಟದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಎಳೆಯರಿಗೆ ನಾವು ಇಂಬು ತುಂಬಿ, ಸೂಕ್ತ ಅವಕಾಶ ನೀಡಿದರೆ,ಭವಿಷ್ಯದಲ್ಲಿ ಭಾರತವು ಒಲಂಪಿಕ್ಸ್ ನಂತಹ ಅಗ್ರ ಕ್ರೀಡಾಕೂಟದಲ್ಲಿ ದಿಗ್ಗಜನಾಗಿ ಮೆರೆಯಬಹುದಾಗಿದೆ.